
ಆತ್ಮೀಯರೇ,
ವರ್ಷದ ಈ ಸಮಯವು ಪ್ರಪಂಚದಾದ್ಯಂತ ಭಕ್ತರೊಡಗೂಡಿ ಭಗವಾನ್ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುವ ಮೂಲಕ, ನಮ್ಮ ಮನಸ್ಸು ಮತ್ತು ಹೃದಯಗಳನ್ನು ಪ್ರೇಮದ ಸಾರ್ವಭೌಮ ಅವತಾರದೊಂದಿಗೆ ತಾದಾತ್ಮ್ಯ ಹೊಂದುವ ಸುಂದರ ಅವಕಾಶವನ್ನು ಒದಗಿಸುತ್ತದೆ. ಪವಿತ್ರವಾದ ಈ ಸಮಯದಲ್ಲಿ ಆತನೆಡೆಗಿನ ನಮ್ಮ ಗೌರವವು ನಮ್ಮ ಆಂತರಿಕ ಸಾಮ್ರಾಜ್ಯದ ಶಾಂತಿ ಮತ್ತು ಆನಂದದ ಹಂಬಲವನ್ನು ನವೀಕರಿಸಿ, ನಾವು ಆತನೆಡೆಗೆ ಮತ್ತೆ ಮರಳುವ ಸದವಕಾಶವನ್ನು ಪಡೆಯಬೇಕೆಂಬುದೇ ಭಗವಂತನ ಇಚ್ಛೆಯಾಗಿದೆ. ಕೃಷ್ಣನ ಮೂಲಕ ಪ್ರಕಟಗೊಂಡ ಆ ಅಸೀಮ ಭಗವಂತನು ತನ್ನ ಶಿಷ್ಯ ಅರ್ಜುನನ ಆಧ್ಯಾತ್ಮಿಕ ಮತ್ತು ಭೌತಿಕ ವಿಜಯಕ್ಕೆ ಮಾರ್ಗದರ್ಶನ ಮಾಡಿದಂತೆಯೇ, ನಮ್ಮ ಆತ್ಮದ ಆಳದಲ್ಲಿ ಅಡಗಿರುವ ದೈವಿಕ ಗುಣಗಳು ಮತ್ತು ಸಾಮರ್ಥ್ಯಗಳ ದೈವೀ ಪ್ರಜ್ಞೆಯ ಅಭಿವ್ಯಕ್ತಿಯನ್ನು ನಾವು ಸಾಧಿಸುವವರೆಗೂ, ಭಗವಂತನು ನಮ್ಮ ದೈನಂದಿನ ಕುರುಕ್ಷೇತ್ರ ಯುದ್ಧದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಾನೆ ಎಂದು ಭಗವದ್ಗೀತೆಯು ನಮಗೆ ಭರವಸೆ ನೀಡುತ್ತದೆ.
ಧರ್ಮದ ಮರುಸ್ಥಾಪಕನ ಪಾತ್ರದಲ್ಲಿ ಭಗವಾನ್ ಶ್ರೀ ಕೃಷ್ಣನು ಅರ್ಜುನನ ರಥವನ್ನು ಸಾರಥಿಯಾಗಿ ಮುನ್ನಡೆಸಿ ಮಾರ್ಗದರ್ಶಿಸಿದನು; ಅಲ್ಲದೇ ಮಾಯೆಯ ಅಡೆತಡೆಗಳನ್ನು ಶೌರ್ಯವಂತ ದೈವೀ ಯೋಧನಾಗಿ ಎದುರಿಸಿ ತನ್ನ ಪಾತ್ರವನ್ನು ಪೂರೈಸಲು ಅರ್ಜುನನ್ನು ಒತ್ತಾಯಿಸಿದನು. ದೇವರು ನಮ್ಮಿಂದ ಇದನ್ನೇ ಬಯಸುತ್ತಾನೆ. ನಮ್ಮ ಇಚ್ಛಾ ಶಕ್ತಿ, ಪ್ರಯತ್ನಶೀಲತೆ ಮತ್ತು ಆತ್ಮಪ್ರೇರಿತ ವಿವೇಚನೆಯ ಮೂಲಕ ನಮ್ಮ ಸಹಜ ದೈವತ್ವ ಮತ್ತು ಆನಂದಕ್ಕೆ ಗ್ರಹಣ ಹಿಡಿಸುವ ಸೀಮಿತ ಆಲೋಚನೆಗಳು, ಆಸೆಗಳು ಮತ್ತು ನಡವಳಿಕೆಗಳನ್ನು ನಮ್ಮ ಪ್ರಜ್ಞೆಯಿಂದ ಸಂಪೂರ್ಣವಾಗಿ ಬಹಿಷ್ಕರಿಸಲು ಸಾಧ್ಯ. ಗೀತೆಯಲ್ಲಿ ಶ್ರೀಕೃಷ್ಣನ ಅಪ್ರತಿಮ ಮತ್ತು ಪ್ರಾಯೋಗಿಕ ಬುದ್ಧಿವಂತಿಕೆಯು ನಮ್ಮ ಪ್ರತೀ ವಿಜಯದೊಂದಿಗೆ, ನಾವು ಹೇಗೆ ಬಲಶಾಲಿಯಾಗುತ್ತೇವೆ ಮತ್ತು ಹೆಚ್ಚಿನ ಆತ್ಮ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಪಡೆಯುತ್ತೇವೆ ಎಂಬುದನ್ನು ತೋರಿಸುತ್ತದೆ.
ಮಾಯೆ ಎಂಬುದು ನಿಷ್ಠುರವಾದ ಶತ್ರು, ಏಕೆಂದರೆ ನಮ್ಮ ಜೀವಿತಾವಧಿಯಲ್ಲಿ ನಮ್ಮನ್ನು ನಾವು ಮರ್ತ್ಯ ಶರೀರ ಹಾಗೂ ಮನಸ್ಸಿನೊಂದಿಗೆ ಗುರುತಿಸಿಕೊಳ್ಳುತ್ತೇವೆ. ಎಲ್ಲಿಯವರೆಗೆ ನಾವು ಕೊನೆಯಿಲ್ಲದ ದೈನಂದಿನ ಜಂಜಾಟಗಳಲ್ಲಿ ಮುಳುಗಿರುತ್ತೇವೆಯೋ, ಅಲ್ಲಿಯವರೆಗೂ ನಮ್ಮ ಶಕ್ತಿ ಮತ್ತು ಗಮನವು ಬಾಹ್ಯ ಒತ್ತಡಗಳಿಗೆ ಒತ್ತೆಯಾಳಾಗಿ, ನಿರಂತರ ಸಂವೇದನಾ ಪ್ರಚೋದನೆಯಿಂದ ಮತ್ತು ಶಾಂತಿಯನ್ನು ಭಂಗಗೊಳಿಸುವ ಮಿತಿಮೀರಿದ ಆಧುನಿಕ ಜಗತ್ತಿನ ಮಾಹಿತಿಗಳಿಂದ ನಮ್ಮ ಜೀವನ ಪ್ರಚಲಿತವಾಗಿರುತ್ತದೆ. ನಮಗೆ ಭಗವಾನ್ ಕೃಷ್ಣನ ಗೆಲುವಿನ ಹಾದಿ ಅಗತ್ಯವಾಗಿದೆ: ನಿಯಮಿತವಾದ ಮತ್ತು ಆಳವಾದ ವೈಜ್ಞಾನಿಕ ಯೋಗ ಧ್ಯಾನಾಭ್ಯಾಸವು, ನಮ್ಮ ಪ್ರಜ್ಞೆಯನ್ನು ಒಳಮುಖವಾಗಿಸಿ ನಮಗಾಗಿ ಕಾಯುತ್ತಿರುವ ಆ ದೈವಿಕ ಉಪಸ್ಥಿತಿಯೆಡೆಗೆ ನಿರ್ದೇಶಿಸುತ್ತದೆ. ನಮ್ಮ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರು ಹೇಳುತ್ತಾರೆ: “ಇಂದ್ರಿಯಗಳ ನಿರಂತರ ಬಡಬಡಿಕೆ ಮತ್ತು ಪ್ರಕ್ಷುಬ್ಧ ಆಲೋಚನೆಗಳಿಂದ ಮುಕ್ತನಾಗಿ ಯೋಗಿಯು, ಅನುಕ್ರಮವಾಗಿ ಅವನ ಇಡೀ ಶರೀರವನ್ನು ಪರಿಶುದ್ಧಗೊಳಿಸುವ ಆನಂದಮಯ ಆಂತರಿಕ ಶಾಂತಿಯ ಅದ್ಭೂತ ಪರಿಪೂರ್ಣ ಶಾಂತತೆಯಲ್ಲಿ ಆನಂದದಿಂದಿರುತ್ತಾನೆ.” ಆ ಭಗವಂತನ ಶಾಂತಿಯ ಸ್ಪರ್ಶವೂ ಸಹ ನಮ್ಮನ್ನು ಆಧ್ಯಾತ್ಮಿಕಗೊಳಿಸಬಹುದು ಮತ್ತು ನಮಗೆ ಎದುರಾಗುವ ಯಾವುದೇ ಸಂದರ್ಭದ ಸಾಧ್ಯತೆಗಳ ಅರಿವನ್ನು ಹೆಚ್ಚಿಸಬಲ್ಲದು. ನಾವು ನಮ್ಮ ದೈನಂದಿನ ಸನ್ನಿವೇಶಗಳನ್ನು ಹೆಚ್ಚು ಸಮಂಜಸವಾಗಿ ನಿರ್ಣಯಿಸಬಹುದು ಮತ್ತು ಅಹಂ ಹಾಗು ಭಾವಾತಿರೇಕಕ್ಕೆ ಒಳಗಾಗದೆ ಶಾಂತಿ ಮತ್ತು ಆತ್ಮದ ಅಂತಃಪ್ರಜ್ಞೆಯಿಂದ ಮಾರ್ಗದರ್ಶನ ಪಡೆಯಬಹುದು. ನಮ್ಮೆಡೆಗೆ ನಾವು ಭಾವಿಸುವ ಆಳವಾದ ಸಹಾನುಭೂತಿಯಂತೆಯೇ, ಇತರರೆಡೆಗೂ ನಾವು ನೈತಿಕ ಅಗತ್ಯಗಳ ಆಧಾರದ ಮೇಲೆ ಹೆಚ್ಚು ತಿಳುವಳಿಕೆ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಲು ಸಮರ್ಥರಾಗುತ್ತೇವೆ.
ಭಗವಾನ್ ಶ್ರೀ ಕೃಷ್ಣ ಮತ್ತು ನಮ್ಮ ಗುರುದೇವರ ಆಶೀರ್ವಾದ ಮತ್ತು ಧ್ಯಾನದ ಪರಿವರ್ತಕ ಶಕ್ತಿ, ಭಗವಂತನೆಡೆಗೆ ನಿರಂತರ ಭಕ್ತಿ ಮತ್ತು ಸರಿಯಾದ ಚಟುವಟಿಕೆಗಳ ಮೂಲಕ, ದೈವೀ ಪ್ರಜ್ಞೆಯ ತೇಜಸ್ಸು, ಶಕ್ತಿ ಮತ್ತು ಚೈತನ್ಯದ ಸ್ವಭಾವ ನಿಮ್ಮದಾಗಲಿ, ಹಾಗೂ ಎಲ್ಲರಿಗೂ ಒಳಿತನ್ನೇ ಬಯಸುವ ಕಾಂತಿಯ ಪ್ರಭೆ ಮತ್ತು ಅಂತರಂಗದ ಆನಂದ ನಿಮ್ಮಲ್ಲಿ ನೆಲೆಸಲಿ.
ಜೈ ಶ್ರೀ ಕೃಷ್ಣ! ಜೈ ಗುರು!
ಸ್ವಾಮಿ ಚಿದಾನಂದ ಗಿರಿ