ಪ್ರತಿಕೂಲ ಸಮಯದಲ್ಲಿ ಮನೋಸ್ಥೈರ್ಯ ಕುರಿತು ಪರಮಹಂಸ ಯೋಗಾನಂದರ ಮಾತುಗಳು

8 ಏಪ್ರಿಲ್‌, 2020

ಏಪ್ರಿಲ್‌ನ ವಾರ್ತಾಪತ್ರದಿಂದ ಸ್ಫೂರ್ತಿಯ ನುಡಿಗಳು

ಧೈರ್ಯದ ಶಕ್ತಿಯುತ ಆಲೋಚನೆಗಳಿಂದ ನಮ್ಮನ್ನು ಹೇಗೆ ತುಂಬಿಸಿಕೊಳ್ಳುವುದು ಮತ್ತು ಸವಾಲಿನ ಸಮಯಗಳಲ್ಲಿ ದಿವ್ಯ ರಕ್ಷಣೆಯ ಆಳವಾದ ಅರಿವನ್ನು ಹೇಗೆ ಬೆಳೆಸಿಕೊಳ್ಳುವುದು, ಇದನ್ನು ಕುರಿತ ಪರಮಹಂಸ ಯೋಗಾನಂದರ ಉದ್ಧರಣೆಗಳನ್ನು ಈ ತಿಂಗಳು ಕೊಡುತ್ತಿದ್ದೇವೆ.

[ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ಇತ್ತೀಚೆಗೆ, “ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ನಡೆಸಿಕೊಟ್ಟ ಒಂದು ಧ್ಯಾನ: ಆಧ್ಯಾತ್ಮಿಕ ಭರವಸೆಯ ಸಂದೇಶ” ಎಂಬ ವೀಡಿಯೊದಲ್ಲಿ ಈ ಕೆಳಗಿನ ಅನೇಕ ಸತ್ಯ ವಾಕ್ಯಗಳನ್ನು ಬಳಸಿಕೊಂಡಿದ್ದಾರೆ — ಈ ಸಮಯದಲ್ಲಿ ಸಮತೋಲನ ಮತ್ತು ಶಕ್ತಿಯನ್ನು ಅರಸುತ್ತಿರುವ ಎಲ್ಲರಿಗೂ ಇದು ಪರಮಹಂಸ ಯೋಗಾನಂದರ ಪ್ರಾಯೋಗಿಕ ಮತ್ತು ಉತ್ತೇಜಕ ಜ್ಞಾನದಿಂದ ತಮ್ಮನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.]

ಪ್ರಭುವು ಎಲ್ಲವನ್ನೂ ಸೃಷ್ಟಿಸಿದುದು ನಮ್ಮನ್ನು ಪರೀಕ್ಷಿಸುವುದಕ್ಕಾಗಿ, ನಮ್ಮಲ್ಲಿ ಹುಗಿದುಹೋಗಿರುವ ಆತ್ಮದ ಅಮರತ್ವವನ್ನು ಹೊರ ತರುವುದಕ್ಕಾಗಿ. ಅದೇ ಜೀವನದ ರೋಚಕ ಪಯಣ, ಜೀವನದ ಏಕೈಕ ಉದ್ದೇಶ. ಪ್ರತಿಯೊಬ್ಬರ ಸಾಹಸವೂ ವಿಭಿನ್ನ, ಅನನ್ಯ. ಬದುಕಿನಲ್ಲೂ, ಸಾವಿನಲ್ಲೂ ನಿಮ್ಮ ಆತ್ಮವು ಅಜೇಯ ಎಂಬ ಅರಿವಿನೊಂದಿಗೆ ಆರೋಗ್ಯ, ಮನಸ್ಸು ಮತ್ತು ಆತ್ಮದ ಎಲ್ಲಾ ಸಮಸ್ಯೆಗಳನ್ನು ವಿವೇಚನೆಯ ವಿಧಾನಗಳಿಂದ ಹಾಗೂ ಭಗವಂತನ ಮೇಲಿಟ್ಟ ಶ್ರದ್ಧೆಯಿಂದ ಪರಿಹರಿಸಿಕೊಳ್ಳಲು ನೀವು ಸಿದ್ಧರಾಗಿರಬೇಕು.

ಎಂದಿಗೂ ಜೀವನವು ನಿಮ್ಮನ್ನು ಸೋಲಿಸಲು ಬಿಡಬೇಡಿ. ಜೀವನವನ್ನು ಸೋಲಿಸಿ! ನಿಮ್ಮ ಇಚ್ಛಾಶಕ್ತಿಯು ಗಟ್ಟಿಯಾಗಿದ್ದರೆ ನೀವು ಎಲ್ಲಾ ತೊಂದರೆಗಳನ್ನು ಜಯಿಸಬಹುದು. ಕಷ್ಟಗಳ ನಡುವೆಯೂ ದೃಢವಾಗಿ ಹೇಳಿಕೊಳ್ಳಿ: “ಅಪಾಯ ಹಾಗೂ ನಾನೂ ಜೊತೆಯಲ್ಲೇ ಹುಟ್ಟಿದೆವು, ಹಾಗೂ ನಾನು ಅಪಾಯಕ್ಕಿಂತಲೂ ಹೆಚ್ಚು ಅಪಾಯಕಾರಿ!” ಈ ಸತ್ಯವನ್ನು ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು; ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಆಗ ಇದು ಕೆಲಸ ಮಾಡುವುದನ್ನು ನೀವೇ ಕಾಣುವಿರಿ. ದೀನ ಮರ್ತ್ಯನಂತೆ ವರ್ತಿಸಬೇಡಿ. ನೀವು ಭಗವಂತನ ಮಗು!

ಎಲ್ಲಕ್ಕಿಂತ ಹೆಚ್ಚಾಗಿ ನೀವು ಧ್ಯಾನದ ಮೂಲಕ ದೇವರನ್ನು ಹುಡುಕುವಲ್ಲಿ ನಿರತರಾಗಬೇಕೆಂದು ನಾನು ಒತ್ತಿಹೇಳುತ್ತೇನೆ .... ಈ ಜೀವನದ ವಿಷಾದದ ನೆರಳುಗಳ ಕೆಳಗೇ ಅವನ ಅದ್ಭುತ ಬೆಳಕಿದೆ. ಬ್ರಹ್ಮಾಂಡವು ಅವನ ಉಪಸ್ಥಿತಿಯ ವಿಶಾಲ ಮಂದಿರವಾಗಿದೆ. ನೀವು ಧ್ಯಾನ ಮಾಡುವಾಗ, ಎಲ್ಲ ಬಾಗಿಲುಗಳು ಅವನಲ್ಲಿಯೇ ತೆರೆಯುತ್ತವೆ. ನೀವು ಅವನೊಂದಿಗೆ ಸಂಸರ್ಗದಲ್ಲಿದ್ದಾಗ ಪ್ರಪಂಚದ ಎಲ್ಲ ವಿನಾಶಗಳೂ ಆ ಆನಂದ ಮತ್ತು ಶಾಂತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.

ಭಯವು ಹೃದಯದಿಂದ ಬರುತ್ತದೆ. ನಿಮಗೆ ಯಾವುದೋ ಒಂದು ರೋಗದ ಅಥವಾ ಅಪಘಾತದ ಭಯ ಆವರಿಸಿಕೊಂಡರೆ, ಆಳವಾಗಿ, ನಿಧಾನವಾಗಿ ಮತ್ತು ಲಯಬದ್ಧವಾಗಿ ಅನೇಕ ಬಾರಿ ಉಚ್ಛ್ವಾಸ, ನಿಶ್ವಾಸ ಮಾಡುತ್ತ, ಪ್ರತಿ ನಿಶ್ವಾಸದೊಂದಿಗೆ ದೇಹವನ್ನು ಸಡಿಲಿಸಿ. ಇದು ರಕ್ತಪರಿಚಲನೆಯು ಸಾಮಾನ್ಯ ಸ್ಥಿತಿಗೆ ಬರಲು ನೆರವಾಗುತ್ತದೆ. ನಿಮ್ಮ ಹೃದಯ ನಿಜವಾಗಿಯೂ ಶಾಂತವಾಗಿದ್ದರೆ ನಿಮಗೆ ಭಯದ ಅನುಭವವಾಗುವುದೇ ಇಲ್ಲ.

ದೃಢೀಕರಿಸಿ: “ನಿನ್ನ ಪ್ರೀತಿಯ ಆರೈಕೆಯ ಕೋಟೆಯಲ್ಲಿ ನಾನು ಎಂದೆಂದಿಗೂ ಸುರಕ್ಷಿತವಾಗಿರುತ್ತೇನೆ.”

ಸ್ವಾಮಿ ಚಿದಾನಂದಜಿ ಅವರ, ಮೇಲೆ ಹೇಳಿದ ವೀಡಿಯೊ ಜೊತೆಗೆ, ಭದ್ರತೆ ಮತ್ತು ಭರವಸೆಯ ಆಂತರಿಕ ಆಕರದೊಂದಿಗೆ ಸಂಪರ್ಕ ಸಾಧಿಸಲು, ವಿಶೇಷವಾಗಿ ಪ್ರಪಂಚದ ಪ್ರಸ್ತುತ ಕಷ್ಟಕರವಾದ ಪರಿಸ್ಥಿತಿಯಲ್ಲಿ ನಮಗೆ ನೆರವಾಗುವ ಅನೇಕ ಇತರ ಆನ್‌ಲೈನ್ ಸಂಪನ್ಮೂಲಗಳನ್ನು ವೈಎಸ್ಎಸ್ ನೀಡುತ್ತದೆ, ಇವುಗಳಲ್ಲಿ ನೇರ ಆನ್‌ಲೈನ್ ಸಮೂಹ ಧ್ಯಾನಗಳು, ವಾರಕ್ಕೊಮ್ಮೆ ಪ್ರಸಾರವಾಗುವ ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್ ಸನ್ಯಾಸಿಗಳು ನಡೆಸಿಕೊಡುವ ಸ್ಪೂರ್ತಿದಾಯಕ ಸತ್ಸಂಗಗಳು ಮತ್ತು ಇನ್ನೂ ಹೆಚ್ಚಿನವು ಇರುತ್ತವೆ. ಇವುಗಳನ್ನು ಮತ್ತು ಸ್ವಾಮಿ ಚಿದಾನಂದಜಿಯವರ ಪ್ರಸ್ತುತ ಸಂದೇಶಗಳನ್ನು ಸುಲಭವಾಗಿ ಪಡೆಯಲು, ದಯವಿಟ್ಟು ನಮ್ಮ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ ಒದಗಿಸಲಾದ ಲಿಂಕ್‌ಗಳನ್ನು ಬಳಸಿ “ಪ್ರಸ್ತುತ ಪ್ರಪಂಚದ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ನೆರವಾಗಲೆಂದಿರುವ ನಮ್ಮ ವೆಬ್‌ಸೈಟ್‌ನಲ್ಲಿನ ಸಂಪನ್ಮೂಲಗಳು”:

ಇದನ್ನು ಹಂಚಿಕೊಳ್ಳಿ