ಪರಮಹಂಸ ಯೋಗಾನಂದರಿಂದ ಸ್ವಾಭಿಮಾನವನ್ನು ಬೆಳೆಸಿಕೊಳ್ಳುವ ಬಗ್ಗೆ — ಒಳಗಿನಿಂದ ಹೊರಕ್ಕೆ

ಒಂದು ಪರಿಚಯ:

ನಮ್ಮ ದೈನಂದಿನ ಚಟುವಟಿಕೆಗಳ ನಡುವೆ, ನಾವೆಲ್ಲರೂ ನಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಲ್ಲಿ ಏಳುಬೀಳುಗಳನ್ನು ಎದುರಿಸಬೇಕಾಗಿ ಬರುತ್ತದೆ.

ನಮ್ಮ ಜೀವನದಲ್ಲಿ ನಾವು ಸುಧಾರಿಸಲು ಬಯಸುವ ವಿಷಯಗಳಿವೆ — ನಮ್ಮ ತನದ ಅತ್ಯುತ್ತಮವಾದುದನ್ನು ಚೆನ್ನಾಗಿ ವ್ಯಕ್ತಪಡಿಸಬಯಸುವ ಮಾರ್ಗಗಳು. ಆದರೆ ನಂತರ ನಾವು ಹೊರ ಜಗತ್ತಿನಿಂದ, ಭೌತಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಪರಿಪೂರ್ಣತೆ ಎಂದರೇನು ಅಥವಾ ಅದು ಹೇಗಿರಬೇಕು — ಅಥವಾ ಮೆಚ್ಚುಗೆ ಅಥವಾ ಅರ್ಥವನ್ನು ಕಂಡುಕೊಳ್ಳಲು ಎತ್ತ ನೋಡಬೇಕು ಎಂಬ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಎದುರಿಸಬಹುದು.

ನಾವು ಜೀವನದ ಸವಾಲುಗಳನ್ನು ಅಥವಾ ನಮ್ಮ ಆಧ್ಯಾತ್ಮಿಕ ಗುರಿಗಳನ್ನು ಎದುರಿಸುತ್ತಿರುವಾಗ, “ಸಾಮರ್ಥ್ಯವಿಲ್ಲ” ಎಂಬ ತಪ್ಪಾದ ಭಾವನೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಆದರೆ ಪರಮಹಂಸ ಯೋಗಾನಂದರು ನಮಗೆ ನೆನಪಿಸುತ್ತಾರೆ: “ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೂ, ನಿಮ್ಮ ಸದ್ಗುಣಗಳು ಮತ್ತು ಸ್ವಾಭಿಮಾನದ ಭರವಸೆಯಲ್ಲಿ ಏಕಾಂಗಿಯಾಗಿ ನಿಲ್ಲಲು ಕಲಿಯಿರಿ.”

ಇದನ್ನು ಮಾಡುವ ಸಾಮರ್ಥ್ಯವನ್ನು, ಮಹಾನ್ ವ್ಯಕ್ತಿಗಳು ನಮಗೆ ಸಹಸ್ರಾರು ವರ್ಷಗಳಿಂದ ಹೇಳುತ್ತ ಬಂದಿದ್ದಾರೆ, ನಿಜವಾಗಿಯೂ ಒಂದೇ ಸ್ಥಳದಿಂದ ಬರುತ್ತದೆ — ಒಳಗಿನಿಂದ, ನಮ್ಮ ಉನ್ನತ ಆತ್ಮದಿಂದ. ಅಂದರೆ, ಬೆಂಬಲ, ಮಾರ್ಗದರ್ಶನ ಮತ್ತು ಪ್ರೀತಿಗಾಗಿ, ನಮ್ಮ ಅಸ್ತಿತ್ವದ ಪರಮ ಪ್ರಕೃತಿಯೇ ಆಗಿರುವ ದೈವತ್ವದೆಡೆಗೆ ನೋಡಿ, ಅದು ನಮ್ಮಿಂದ ಬೇರೆಯಾದುದಲ್ಲ.

“ನೀವು ಶಾಶ್ವತ ಜ್ವಾಲೆಯ ಒಂದು ಕಿಡಿ,” ಎಂದು ಪರಮಹಂಸಜಿ ನಮಗೆ ತಿಳಿಸುತ್ತಾರೆ. “ನೀವು ಕಿಡಿಯನ್ನು ಮರೆಮಾಡಬಹುದು, ಆದರೆ ಅದನ್ನು ನೀವು ಎಂದಿಗೂ ನಾಶಮಾಡಲು ಸಾಧ್ಯವಿಲ್ಲ.”

ಅದನ್ನು ಕೇವಲ ಕೇಳಿಸಿಕೊಳ್ಳುವುದರಿಂದಲೇ ಅದು ನಿಮ್ಮನ್ನು ಮೇಲಕ್ಕೆತ್ತುವುದಿಲ್ಲವೇ? ನಿಜವಾದ ಆತ್ಮ ವಿಶ್ವಾಸದೊಂದಿಗೆ ಜೀವನದಲ್ಲಿ ದಾಪುಗಾಲು ಹಾಕಲು ನೀವು ಹೆಚ್ಚು ಪ್ರೋತ್ಸಾಹಕರ ಜ್ಞಾನವನ್ನು ಹೀರಿಕೊಳ್ಳಲು ಬಯಸುವಿರೇ?

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

ಪ್ರತಿ ಪುಟ್ಟ ಬಲ್ಬಿನ ಬೆಳಕಿನ ಹಿಂದೆ ಒಂದು ದೊಡ್ಡ ಡೈನಾಮಿಕ್ ವಿದ್ಯುತ್‌ಶಕ್ತಿ ಇದೆ; ಪ್ರತಿ ಪುಟ್ಟ ಅಲೆಯ ಕೆಳಗೆ ವಿಶಾಲವಾದ ಸಾಗರವಿದೆ, ಅದು ಅನೇಕ ಅಲೆಗಳಾಗಿ ಮಾರ್ಪಟ್ಟಿದೆ. ಅಂತೆಯೇ ಮನುಷ್ಯರ ವಿಷಯದಲ್ಲೂ.

ದೊಡ್ಡ ಅಲೆಗಳಿಂದ ಜರ್ಜರಿತವಾದ ಸಣ್ಣ ಅಲೆಯ ಶಕ್ತಿಯನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡಬೇಡಿ. ಅದಕ್ಕೆ ಯಾರಾದರೂ ಹೇಳಬೇಕು, “ಪುಟ್ಟ ಅಲೆ, ನಿನಗೇನಾಗಿದೆ? ಇಡೀ ಸಾಗರವೇ ನಿನ್ನ ಹಿಂದೆ ಇರುವುದು ನಿನಗೆ ಕಾಣುತ್ತಿಲ್ಲವೇ? ನೀನು ಮಹಾಸಾಗರದ ಒಂದು ಉಬ್ಬು.” ನಿಮ್ಮ ಪುಟ್ಟ ಶರೀರವನ್ನು ನೋಡಬೇಡಿ; ಒಳಗೆ ನೋಡಿ.

ನೀವು ಏನಾಗಿರುವಿರೋ ಅದು ಎಲ್ಲಕ್ಕಿಂತ ಹೆಚ್ಚು ದೊಡ್ಡದು ಅಥವಾ ನೀವು ಯಾರಾಗಬೇಕೆಂದು ಎಂದೂ ಹಂಬಲಿಸಿದ್ದಿರೋ ಅವರಿಗಿಂತ ಹೆಚ್ಚು ದೊಡ್ಡದು. ಭಗವಂತನು ಬೇರೆ ಯಾವ ಮಾನವರಲ್ಲಿಯೂ ಪ್ರಕಟವಾಗದ ರೀತಿಯಲ್ಲಿ ನಿಮ್ಮಲ್ಲಿ ಪ್ರಕಟವಾಗಿದ್ದಾನೆ. ನಿಮ್ಮ ಮುಖವು ಬೇರೆ ಎಲ್ಲರಿಗಿಂತ ಭಿನ್ನವಾಗಿದೆ, ನಿಮ್ಮ ಆತ್ಮವು ಬೇರೆ ಎಲ್ಲರಿಗಿಂತ ಭಿನ್ನವಾಗಿದೆ, ನಿಮಗೆ ನೀವು ಸ್ವಯಂಪರಿಪೂರ್ಣರು; ಏಕೆಂದರೆ ನಿಮ್ಮ ಆತ್ಮದಲ್ಲಿ ಎಲ್ಲಕ್ಕಿಂತ ದೊಡ್ಡದಾದ ಭಗವಂತನೆಂಬ ನಿಧಿ ಇದೆ.

ನಿಮ್ಮೊಳಗಿನ ಭಗವಂತನನ್ನು ಅರಿತುಕೊಳ್ಳುವ ಮೂಲಕ, ನಿಮ್ಮ ಮರ್ತ್ಯ ದೌರ್ಬಲ್ಯಗಳ ಮೇಲಿನ ವಿಜಯದ ಮೇಲೆ ಮತ್ತು ನಿಜವಾಗಿ ಹೆಚ್ಚುತ್ತಿರುವ ಸಾಧನೆಗಳ ಮೇಲೆ ಸ್ಥಾಪಿತವಾದ ದಿವ್ಯ, ವಿನಮ್ರ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ — ನಿಮ್ಮ ಎಲ್ಲ ಸಾಧನೆಗಳು ನೀವು ಭಗವಂತನಿಂದ ಎರವಲು ಪಡೆದ ಶಕ್ತಿಯಿಂದ ಬಂದಂಥವು ಎಂಬ ಪ್ರಜ್ಞೆಯನ್ನು ಇಟ್ಟುಕೊಳ್ಳಿ. ಹೀಗೆ ನೀವು ಎಲ್ಲ ಕೀಳರಿಮೆ ಮತ್ತು ಮೇಲರಿಮೆಯ ಸಂಕೀರ್ಣತೆಗಳಿಂದ ಮುಕ್ತರಾಗುವಿರಿ.

[ಅಭ್ಯಾಸಕ್ಕಾಗಿ ಒಂದು ದೃಢೀಕರಣ]: “ಸತ್ತ ನಿರಾಶೆಗಳನ್ನು ನಿನ್ನೆಯ ಸ್ಮಶಾನಗಳಲ್ಲಿ ನಾನು ಹೂತಿದ್ದೇನೆ. ಇಂದು ನಾನು ನನ್ನ ಹೊಸ ಸೃಜನಶೀಲ ಪ್ರಯತ್ನಗಳಿಂದ ಜೀವನದ ತೋಟವನ್ನು ಉಳುಮೆ ಮಾಡುತ್ತೇನೆ. ಅದರಲ್ಲಿ ನಾನು ವಿವೇಕ, ಆರೋಗ್ಯ, ಸಮೃದ್ಧಿ ಮತ್ತು ಸಂತೋಷದ ಬೀಜಗಳನ್ನು ಬಿತ್ತುತ್ತೇನೆ. ಅವುಗಳಿಗೆ ನಾನು ಆತ್ಮವಿಶ್ವಾಸ ಮತ್ತು ವಿಶ್ವಾಸದಿಂದ ನೀರುಣಿಸುತ್ತೇನೆ ಮತ್ತು ಭಗವಂತನು ನನಗೆ ಯುಕ್ತವಾದ ಫಸಲನ್ನು ನೀಡುವವರೆಗೆ ಕಾಯುತ್ತೇನೆ.”

ಮುಂದಿನದನ್ನು ವೈಎಸ್‌ಎಸ್‌ ಬ್ಲಾಗ್‌ನಲ್ಲಿ ಓದಿ, ಅಲ್ಲಿ ನೀವು “ಹೌ ಯೋಗೀಸ್‌ ಕಾಂಟ್ಯಾಕ್ಟ್‌ ದ ಸೋರ್ಸ್‌ ಆಫ್‌ ಸೆಲ್ಫ್-ಎಸ್ಟೀಮ್” ಅನ್ನು ಓದಬಹುದು — ಇದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರ “ಮೇಂಟೇನಿಂಗ್‌ ಅವರ್‌ ಡಿವೈನ್‌ ಕನೆಕ್ಷನ್‌ ವೈಲ್‌ ಲಿವಿಂಗ್‌ ಇನ್‌ ದ ಮಟೀರಿಯಲ್‌ ವರ್ಲ್ಡ್” ಎಂಬ ಲೇಖನದ ಆಯ್ದ ಭಾಗ, ಇದು 2023 ರ ಮುಂಬರುವ ಯೋಗದಾ ಸತ್ಸಂಗ ಪತ್ರಿಕೆಯಲ್ಲಿ ಪ್ರಕಟವಾಗಲಿದೆ.

 

ಇದನ್ನು ಹಂಚಿಕೊಳ್ಳಿ