ಸ್ವಾಮಿ ಚಿದಾನಂದ ಗಿರಿ ಅವರಿಂದ “ಯೋಗಿಗಳು ಸ್ವಾಭಿಮಾನದ ಮೂಲವನ್ನು ಹೇಗೆ ಸಂಪರ್ಕಿಸುತ್ತಾರೆ”

9 ಜೂನ್‌, 2023

ಈ ಬ್ಲಾಗ್ ಪೋಸ್ಟ್ ಅನ್ನು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರ “ಭೌತ ಜಗತ್ತಿನಲ್ಲಿ ಬದುಕುತ್ತಿರುವಾಗ ನಮ್ಮ ದಿವ್ಯ ಸಂಪರ್ಕವನ್ನು ಕಾಪಾಡಿಕೊಳ್ಳುವುದು” ಲೇಖನದಿಂದ ತೆಗೆದುಕೊಳ್ಳಲಾಗಿದೆ, ಈ ಲೇಖನವನ್ನು ಮುಂಬರುವ 2023 ರ ಯೋಗದಾ ಸತ್ಸಂಗ ನಿಯತಕಾಲಿಕದಲ್ಲಿ ಪ್ರಕಟಿಸಲಾಗುತ್ತದೆ.

ನಾವು ಮಾಹಿತಿಯನ್ನು ಪಡೆಯುವ ಪ್ರಾಥಮಿಕ ವಿಧಾನವೆಂದರೆ ಇಂದ್ರಿಯಗಳ ಮೂಲಕ: ನಾವು ವಿಷಯಗಳನ್ನು ನೋಡುತ್ತೇವೆ, ವಿಷಯಗಳನ್ನು ಕೇಳುತ್ತೇವೆ, ರುಚಿ ನೋಡುತ್ತೇವೆ, ಸ್ಪರ್ಶಿಸುತ್ತೇವೆ, ಅನುಭವಿಸುತ್ತೇವೆ — ಅದು ನಮ್ಮ ಆಂತರಿಕ ಪ್ರಜ್ಞೆ ಮತ್ತು ಹೊರಗಿನ ಪ್ರಪಂಚದ ನಡುವಿನ ಪರಸ್ಪರ ವಿನಿಮಯ.

ಇದು ನಿಷ್ಕ್ರಿಯ ಅಥವಾ ಪ್ರಜ್ಞಾಪೂರ್ವಕ ಪ್ರಕ್ರಿಯೆಯಾಗಿರಬಹುದು. ಯೋಗಿಯು ಅದನ್ನು ಪ್ರಜ್ಞಾಪೂರ್ವಕವಾಗಿರಿಸಲು ಬಯಸುತ್ತಾನೆ, ಏಕೆಂದರೆ ನಿಯಂತ್ರಣವನ್ನು ತೆಗೆದುಕೊಳ್ಳದಿರುವುದರಿಂದ ಹಾಗೂ ಜಗತ್ತಿಗೆ ನಮ್ಮ ಪ್ರಜ್ಞೆಯನ್ನು ಆಳಲು ಬಿಡುವುದರಿಂದಾಗುವ ಬಹಳ ವಿಷಾದಕರ ಮತ್ತು ದುಃಖಕರ ಪರಿಣಾಮಗಳು ಯೋಗಿಗೆ ಅಂದರೆ ಭಕ್ತನಿಗೆ ತಿಳಿದಿರುತ್ತದೆ.

ಎಷ್ಟೋ ಜನರಲ್ಲಿ ಒಂಟಿತನದ, ತಾನು ಅನರ್ಹನೆಂಬ ಅಥವಾ ಪ್ರೀತಿಗೆ ಪಾತ್ರನಲ್ಲ ಎಂಬ ಭಾವನೆ ಇರುತ್ತದೆ. ಅಂತಹ ದೊಡ್ಡ ಒಂಟಿತನಕ್ಕೆ ಕಾರಣವೇನು? ಈ ಎಲ್ಲ ಜನರಲ್ಲಿ ಅಂತಹ ದೊಡ್ಡ ಶೂನ್ಯದ “ನಿರ್ವಾತ” ಏಕಿದೆ?

ಉತ್ತರ ಬಹಳ ಸರಳ. ಜನರು ಏಕೆ ಒಂಟಿಯಾಗಿರುತ್ತಾರೆ ಎಂದರೆ, ಅವರು ಎಂದಿಗೂ ತಮ್ಮೊಂದಿಗೆ ತಾವು ಸ್ನೇಹಿತರಾಗಲು ಸಮಯ ಮಾಡಿಕೊಂಡಿರುವುದಿಲ್ಲ.

ನಿಸ್ಸಂದೇಹವಾಗಿ, ನಾನು ಉನ್ನತ ಆತ್ಮದ ಬಗ್ಗೆ ಹೇಳುತ್ತಿದ್ದೇನೆ — ಎಲ್ಲ ವೈಲಕ್ಷಣ್ಯಗಳು, ಅಭ್ಯಾಸಗಳು ಮತ್ತು ಮಿತಿಗಳಿರುವ ಸಣ್ಣ ಅಹಂನ ಕುರಿತಲ್ಲ, ಆದರೆ ನಿಜವಾದ ಆತ್ಮದ ಬಗ್ಗೆ.

ನಮ್ಮ ಶಕ್ತಿ ಮತ್ತು ಸ್ವಾಭಿಮಾನದ ಮೂಲ

ನಮ್ಮ ನಿಜವಾದ ಆತ್ಮದೊಂದಿಗೆ ಯಾವುದೇ ಸಂಬಂಧವನ್ನು ಬೆಳೆಸದಿದ್ದಾಗ ಉಂಟಾಗುವ ಫಲಿತಾಂಶವೇನು? ಆತ್ಮವು ನಿಜವಾದ ಪ್ರೀತಿಯ ಮೂಲವಾಗಿದೆ, ನಮ್ಮ ಶಕ್ತಿ ಮತ್ತು ನಮ್ಮ ಸ್ವಾಭಿಮಾನದ ಮೂಲವಾಗಿದೆ. ನಾವು ಅದರಿಂದ ಬೇರ್ಪಡಿಸಲ್ಪಟ್ಟಿದ್ದರೆ ಮತ್ತು ಆ ಉನ್ನತ ಆತ್ಮದೊಂದಿಗೆ ಸಂಬಂಧ ಅಥವಾ ಸಂಪರ್ಕವನ್ನು ಹೊಂದಲು ಯಾವುದೇ ಪ್ರಯತ್ನವನ್ನು ಮಾಡದಿದ್ದರೆ, ಆ ಎಲ್ಲಾ ಮೂಲಭೂತ ಮಾನುಷ ಅಗತ್ಯಗಳು ಮತ್ತು ಬಯಕೆಗಳು — ಪ್ರೀತಿಗಾಗಿ, ಮೌಲ್ಯೀಕರಣಕ್ಕಾಗಿ, ನಮಗೆ ಏನೋ ಒಂದು ಯೋಗ್ಯತೆ ಇದೆ ಎಂದು ಯಾರಾದರೂ ಹೇಳುವುದಕ್ಕಾಗಿ ಇರುವ ಬಯಕೆಗಳು — ಪೂರೈಸದೆ ಹಾಗೇ ಉಳಿದು ಬಿಡುತ್ತವೆ. ಇದು ಒಂದು ದುರಂತ.

ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಆ ಸುಂದರ ದಿವ್ಯ ಗುಣಗಳ ಅರಿವಿಲ್ಲದಿರುವಾಗ, ಬಯಕೆಗಳ ಈಡೇರಿಸುವಿಕೆಗಾಗಿ ಜನರು ಲಕ್ಷಾಂತರ ವಿಭಿನ್ನ ಬಾಹ್ಯ ಮಾರ್ಗಗಳಲ್ಲಿ ಶ್ರಮಿಸುತ್ತಾರೆ.

ನಿಜವಾಗಿಯೂ, ಇದು ಕೆಲವು ಅತ್ಯಂತ ಮೂಲಭೂತ, ಭಾವನಾತ್ಮಕ ಅಳಲುಗಳಿಗೆ ಸಮನಾಗಿರುತ್ತದೆ: “ಯಾರಾದರೂ ನನ್ನನ್ನು ಪ್ರೀತಿಸುವುದಿಲ್ಲವೇ? ನಾನು ಯೋಗ್ಯನು ಎಂದು ಯಾರಾದರೂ ನನಗೆ ಅನಿಸುವಂತೆ ಮಾಡುವುದಿಲ್ಲವೆ? ನನ್ನನ್ನು ಪ್ರೀತಿಸುತ್ತಾರೆ, ನನ್ನನ್ನು ಇಷ್ಟಪಡುತ್ತಾರೆ, ನನಗೆ ಕಿಮ್ಮತ್ತಿದೆ ಎಂಬ ಭಾವನೆ ನನಗೆ ಬರುವಂತೆ ಯಾರಾದರೂ ಮಾಡುವುದಿಲ್ಲವೇ?” ಜನಗಳು ಆ ಮೌಲ್ಯೀಕರಣವನ್ನು ಹೊರಗಿನ ಮೂಲಗಳಿಂದ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರೆಗೂ ಅದು ಸದಾ ನುಣುಚಿಕೊಳ್ಳುತ್ತಿರುತ್ತದೆ; ಅಂತರಂಗದಲ್ಲಿ ಸದಾ ಆ ಒಂಟಿತನ ಮತ್ತು ಖಾಲಿತನ ಇದ್ದೇ ಇರುತ್ತದೆ.

ಧ್ಯಾನದಿಂದ ಬರುವ ದೊಡ್ಡ ಬದಲಾವಣೆ (ಮತ್ತು ಭರವಸೆ!)

ಆದರೆ ಒಳ್ಳೆಯ ಸುದ್ದಿ ಏನೆಂದರೆ, ಒಬ್ಬರು ಧ್ಯಾನದ ಗಂಭೀರ, ಶಿಸ್ತುಬದ್ಧ, ಕ್ರಮಬದ್ಧ ಮತ್ತು ವೈಜ್ಞಾನಿಕ ಅಭ್ಯಾಸವನ್ನು ಪ್ರಾರಂಭಿಸಿದ ಸಮಯದಿಂದ ಇದು ಬದಲಾಗಲು ಸಾಧ್ಯವಿದೆ — ಹಾಗೂ ಆ ಮೂಲಕ ಅವನು ನಿಜವಾದ ಆತ್ಮವನ್ನು ಅರಿತುಕೊಳ್ಳಲಾರಂಭಿಸುತ್ತಾನೆ. ಅಲ್ಲಿಂದಲೇ ನಿಜವಾದ ಸ್ವಾಭಿಮಾನ ಬರುತ್ತದೆ.

ನಾವು ಮಾಧ್ಯಮಗಳಲ್ಲಿ ಮತ್ತು ನಮ್ಮ ಶಿಕ್ಷಣ ತಜ್ಞರಿಂದ ಮತ್ತು ಸಮಾಜದಲ್ಲಿನ ನಾಯಕರಿಂದ ಸ್ವಾಭಿಮಾನದ ಸಮಸ್ಯೆಯ ಬಗ್ಗೆ ಕೇಳುತ್ತಿರುತ್ತೇವೆ, ವಿಶೇಷವಾಗಿ, ಇನ್ನೂ ಜೀವನದಲ್ಲಿ ತಮ್ಮ ನೆಲೆಯನ್ನು ಅಥವಾ ದಿಕ್ಕನ್ನು ಕಂಡುಕೊಂಡಿರದ ಯುವ ಜನರಲ್ಲಿ. ಪ್ರೀತಿ ಮತ್ತು ದೈವತ್ವದ ಮೂಲವು ತಮ್ಮೊಳಗೆ ಇದೆ ಎಂಬ ಅರಿವು ಅವರಿಗಿಲ್ಲದಿದ್ದರೆ, ಅಲ್ಲಿ ಶೂನ್ಯತೆ ಇರುತ್ತದೆ ಮತ್ತು ಆ ಶೂನ್ಯತೆಯು ಅಂತ್ಯವಿಲ್ಲದ ಹುಡುಕಾಟವನ್ನು ಪ್ರಚೋದಿಸುತ್ತದೆ — ಸಾಮಾಜಿಕ ಮಾಧ್ಯಮದೊಂದಿಗೆ, ಮನರಂಜನೆಯೊಂದಿಗೆ, ಈ ವಿನೋದ ಅಥವಾ ಆ ಬಾಹ್ಯ ಹವ್ಯಾಸದಲ್ಲಿ ಅಂತ್ಯವಿಲ್ಲದೆ ನಿರತವಾಗಿರುವುದು.

ಆ ಚಟುವಟಿಕೆಗಳು ತಮ್ಮೊಳಗೆ ತಾವು ತಪ್ಪೆಂದಲ್ಲ; ಅದರರ್ಥ ಅವು ನಿಷ್ಪ್ರಯೋಜಕ ಎಂದಷ್ಟೇ — ಆಂತರಿಕ ಶೂನ್ಯತೆಯ ಆ ನಿರ್ವಾತವನ್ನು ತುಂಬಲು ಅವು ನಿಷ್ಪ್ರಯೋಜಕ.

ನನ್ನ ಪಾಲಿಗೆ, ಧ್ಯಾನದ ಅಭ್ಯಾಸವನ್ನು ಕೈಗೊಳ್ಳುತ್ತಿರುವವರು ಜಗತ್ತಿಗೆ ಭರವಸೆಯ ಮೂಲವಾಗಿದ್ದಾರೆ, ಏಕೆಂದರೆ ಆತ್ಮದೊಂದಿಗೆ, ಅಂತರಂಗದಲ್ಲಿರುವ ಆ ದಿವ್ಯ ಉಪಸ್ಥಿತಿಯೊಂದಿಗೆ ಸಂಪರ್ಕವನ್ನು ಪಡೆಯುವುದಕ್ಕಾಗಿ, ಆ ಧ್ಯಾನದ ತಂತ್ರಗಳನ್ನು ನಿಯತವಾಗಿ ಬಳಸಲು ಸಮಯ ಮಾಡಿಕೊಳ್ಳುವ ಪ್ರತಿಯೊಬ್ಬರೂ, ಇಂದು ಜಗತ್ತಿನಲ್ಲಿ ಸಾಂಕ್ರಾಮಿಕವಾಗಿರುವ ಶೂನ್ಯತೆ, ನಕಾರಾತ್ಮಕತೆ, ಒಂಟಿತನ ಮತ್ತು ತನ್ನವರೆಂದು ಯಾರೂ ಇಲ್ಲ ಎಂಬ ಭಾವನೆಗಳಿಗೆ ಪರ್ಯಾಯವಾದ ಪ್ರಬಲ ಉದಾಹರಣೆಯಾಗುತ್ತಾರೆ.

ಆಧ್ಯಾತ್ಮಿಕ ಪ್ರಜ್ಞೆಯೇ ಪರಿಹಾರ; ಧ್ಯಾನವೇ ಪರಿಹಾರ.

ಇದನ್ನು ಹಂಚಿಕೊಳ್ಳಿ