
ಹೊಸ ವರ್ಷವು ಹೊಸ ಭರವಸೆಗಳೊಂದಿಗೆ ಬರುತ್ತದೆ. ಆದರೆ ಕೆಲವೊಮ್ಮೆ ಸಂದೇಹವು ಮೂಡುತ್ತದೆ: ಹೊಸ ವರ್ಷದ ಆಗಮನದೊಂದಿಗೆ ನಮ್ಮ ಜೀವನದಲ್ಲಿ ಶಾಶ್ವತ ಬದಲಾವಣೆಗಳನ್ನು ಮಾಡಲು ನಿಜವಾಗಿಯೂ ಸಾಧ್ಯವೇ? ಎಂದು.
ಪರಮಹಂಸ ಯೋಗಾನಂದರು ಹೇಳುವಂತೆ, ನೀವು ಅಭ್ಯಾಸಗಳನ್ನು – ನಮ್ಮಲ್ಲಿ ಅದಾಗಲೇ ಅಚ್ಚೊತ್ತಿರುವ ಅಭ್ಯಾಸಗಳನ್ನೂ ಸಹ ಬದಲಾಯಿಸಬಹುದೆಂದು ಅರ್ಥಮಾಡಿಕೊಂಡಾಗ ಇದು ಖಂಡಿತವಾಗಿಯೂ ಸಾಧ್ಯ; ಮತ್ತು ನಿಮ್ಮ ಪ್ರಜ್ಞೆಯನ್ನು ಬದಲಾಯಿಸಲು ನಿಮ್ಮ ಇಚ್ಛಾಶಕ್ತಿಯನ್ನು ಬಳಸಿ, ಇದು ನಿಮ್ಮ ಜೀವನದ ಇತರ ಎಲ್ಲಾ ಅಂಶಗಳನ್ನು ಬದಲಾಯಿಸಬಹುದು ಎಂಬುದರ ಪೂರ್ವಸೂಚಕವಾಗಿದೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಪ್ರಸ್ತುತ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿಯವರು, ಪರಮಹಂಸಜಿ ಅವರು “ಆತ್ಮಾವಲೋಕನ ಮತ್ತು ಧ್ಯಾನದ ಮೂಲಕ ನಮ್ಮ ಪ್ರಜ್ಞೆಯನ್ನು ದೇವರ ವಿಶಾಲವಾದ ಪೋಷಕ ಪ್ರಜ್ಞೆಯೊಂದಿಗೆ ಹೊಂದಿಸಲು ಮತ್ತು ನಂತರ ಅವರ ದೈವಿಕ ಕೊಡುಗೆಗಳನ್ನು ನಮ್ಮ ಜೀವನದ ಮೇಲ್ವಿಚಾರಣೆ ವಹಿಸುವಂತೆ ಬಳಸಲು ಪ್ರೋತ್ಸಾಹಿಸಿದರು” ಎಂದು ಹೇಳಿದರು.
ಮತ್ತು ವೈ ಎಸ್ ಎಸ್/ಎಸ್ ಆರ್ ಎಫ್ ನ ಮೂರನೇ ಅಧ್ಯಕ್ಷೆ ಶ್ರೀ ದಯಾ ಮಾತಾ ನಮಗೆ ಭರವಸೆ ನೀಡಿದರು: “ಹೆಚ್ಚು ಶಾಶ್ವತ ಮೌಲ್ಯವುಳ್ಳ ಗುರಿಯನ್ನು ಸಾಧಿಸುವುದಕ್ಕಾಗಿ ತಕ್ಷಣದ ಸಂತೋಷವನ್ನು ಬದಿಗಿಡುವುದು ತುಂಬಾ ಅವಶ್ಯಕವಾಗಿದೆ. ಹಾಗೆ ಮಾಡುವುದು ಆತ್ಮದ ಸರ್ವಶಕ್ತ ದೃಢತೆಯನ್ನು ಹೆಚ್ಚು ಹೆಚ್ಚು ವ್ಯಕ್ತಪಡಿಸುತ್ತದೆ.”
ನಂತರ ಅವರು ಈ ಪ್ರಮುಖ ಅಂಶವನ್ನು ಸೇರಿಸಿದರು: “ಸಹನಶೀಲರಾಗಿ ದೃಢ ನಿಷ್ಠೆಯಿಂದಿದ್ದರೆ ಗೆಲುವು ಸಾಧ್ಯ ಮಾತ್ರವಲ್ಲ, ಖಂಡಿತ ಎಂಬ ನಂಬಿಕೆಯೊಂದಿಗೆ ಪ್ರತಿದಿನ ಸಣ್ಣ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಉತ್ತಮ.”
ಪರಮಹಂಸಜೀ ಹೇಳಿದಂತೆ, “ನಿಮ್ಮ ಜೀವದ ಕಿಡಿಯ ಹಿಂದೆ ಅನಂತತೆಯ ಜ್ವಾಲೆಯೇ ಇದೆ… ನಿಮ್ಮ ಜೀವದ ಹಿಂದೆ ಇರುವ ಆ ಮಹಾನ್ ಶಕ್ತಿಯನ್ನು ನೀವು ಅನುಭವಿಸದಂತೆ ತಡೆಯುವಂತದ್ದು ಯಾವುದೂ ಇಲ್ಲ” ಎಂದು ಯಾವಾಗಲೂ ನೆನಪಿಡಿ.
ಆದ್ದರಿಂದ, ನಿಮ್ಮ ಆತ್ಮವು ಹೆಚ್ಚಿನ ಸಾರ್ಥಕತೆಯ ಆಲೋಚನೆಯೊಂದಿಗೆ ಪ್ರಚೋದಿಸುತ್ತದೆಯೇ – ಹೊಸ ವರ್ಷದ ದ್ವಾರಗಳ ಮೂಲಕ ಯಶಸ್ವಿಯಾಗಿ ಹೆಜ್ಜೆ ಹಾಕುವುದು ಹೇಗೆ ಎಂದು ತಿಳಿಯಲು ನೀವು ಬಯಸುವಿರಾ?
ಪರಮಹಂಸ ಯೋಗಾನಂದರ ಪ್ರವಚನಗಳು ಮತ್ತು ಬರಹಗಳಿಂದ:
ಹೊಸ ವರ್ಷವನ್ನು ನೀವು ನೆಟ್ಟು ಬೆಳೆಸಬೇಕಾದ ಕೈತೋಟ ಎಂದುಕೊಳ್ಳಿ. ಈ ಮಣ್ಣಿನಲ್ಲಿ ಒಳ್ಳೆಯ ಹವ್ಯಾಸಗಳೆಂಬ ಬೀಜವ ಬಿತ್ತಿ ಮತ್ತು ಹಿಂದಿನ ಚಿಂತೆಗಳು ಮತ್ತು ಗತಿಸಿದ ತಪ್ಪು ಕಾರ್ಯಗಳೆಂಬ ಕಳೆಯನ್ನು ಕಿತ್ತು ಎಸೆಯಿರಿ.
ಈ ಹೊಸವರ್ಷದಲ್ಲಿ ನಿಮ್ಮ ಪ್ರಜ್ಞೆಯನ್ನು ಬದಲಾಯಿಸಿಕೊಳ್ಳಿ. ನಿಜವಾದ ಸ್ವಾತಂತ್ರ್ಯದೆಡೆಗೆ ನಿಮ್ಮನ್ನು ಒಯ್ಯುವ ಸರಿಯಾದ ನಡವಳಿಕೆ ಮತ್ತು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ನಿಮಗೆ ನೀವು ಈ ರೀತಿ ಹೇಳಿಕೊಳ್ಳಬಹುದು, “ನಾನು ಕೆಟ್ಟ ಅಭ್ಯಾಸಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಅವು ನನ್ನ ಹಿತಾಸಕ್ತಿಗೆ ವಿರುದ್ಧವಾಗಿವೆ; ನಾನು ನನ್ನ ಸ್ವಂತ ಇಚ್ಛೆಯಿಂದ ಒಳ್ಳೆಯತನವನ್ನು ಆಯ್ದುಕೊಳ್ಳುತ್ತೇನೆ.” ಅದುವೇ ಸ್ವಾತಂತ್ರ್ಯ; ಮತ್ತು ಅದನ್ನೇ ನಾನು ನಿಮಗೆ ಬಯಸುತ್ತೇನೆ.
ಅಭ್ಯಾಸಗಳು ಕೇವಲ ಮೆದುಳಿನಲ್ಲಿ ಆಳವಾಗಿ ಬೇರೂರಿರುವ ಆಲೋಚನೆಗಳಾಗಿವೆ. ಮನಸ್ಸಿನ ಸೂಜಿಯು ಅಭ್ಯಾಸಗಳ ಧ್ವನಿಮುದ್ರಿಕೆಯನ್ನು ಮತ್ತೆ ಮತ್ತೆ ನುಡಿಸುತ್ತದೆ…. ಮನಸ್ಸು ಮತ್ತು ಇಚ್ಛಾಶಕ್ತಿಯನ್ನು ಅನ್ವಯಿಸುವುದರಿಂದ ಆ ಮಾದರಿಗಳನ್ನು ಬದಲಾಯಿಸಬಹುದು.
ತಕ್ಷಣವೇ ನಾಟಕೀಯ ಬದಲಾವಣೆಗಳಿಗಾಗಿ ಹಂಬಲಿಸಬೇಡಿ. ನಿಮ್ಮಲ್ಲಿ ಅಂತರ್ಗತವಾಗಿರುವ ಆಜ್ಞಾ ಶಕ್ತಿಯನ್ನು ತರಬೇತುಗೊಳಿಸಲು ಮೊದಲು ಸಣ್ಣ ವಿಷಯಗಳಲ್ಲಿ ಪ್ರಯೋಗ ಮಾಡಿ.
ನೀವು ಏನಾಗಲು ಬಯಸುತ್ತೀರೋ, ಈಗ ಅದರ ಮಾದರಿಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿ. ನೀವು ನಿಮ್ಮ ಮನಸ್ಸಿನಲ್ಲಿ ಬಲವಾದ ಆಲೋಚನೆಯನ್ನು ದೃಢವಾಗಿ ಸ್ಥಾಪಿಸಿದರೆ, ನೀವು ತಕ್ಷಣ ನಿಮ್ಮ ಪ್ರಜ್ಞೆಯಲ್ಲಿ ಯಾವುದೇ ಪ್ರವೃತ್ತಿಯನ್ನು ಹುಟ್ಟುಹಾಕಬಹುದು; ಆಗ ನಿಮ್ಮ ಕ್ರಿಯೆಗಳು ಮತ್ತು ಸಮಗ್ರ ಇರುವಿಕೆಯೇ ಆ ಆಲೋಚನೆಯನ್ನು ಪಾಲಿಸುತ್ತವೆ. ಏಕಮುಖ ಮನಸ್ಥಿತಿಗೆ ಹೊಂದಿಕೊಳ್ಳಬೇಡಿ. ನೀವು ಯಾವುದೇ ವೃತ್ತಿಯಲ್ಲಿ ಯಶಸ್ವಿಯಾಗಲು ಅಥವಾ ನಿಮ್ಮ ಮನಸ್ಸನ್ನು ಒಂದು ಕೆಲಸದಲ್ಲಿ ನೆಟ್ಟರೆ ಅದು ಯಾವುದೇ ಕೆಲಸವಾಗಲಿ ನಿಮಗೆ ಮಾಡಲು ಸಾಧ್ಯವಾಗಬೇಕು. ನಾನು ಏನನ್ನಾದರೂ ಮಾಡಲು ಸಾಧ್ಯವಿಲ್ಲ ಎಂದು ಇತರರು ಹೇಳಿದಾಗಲೆಲ್ಲಾ, ನಾನು ಅದನ್ನು ಮಾಡಬಲ್ಲೆ ಎಂದು ನನ್ನ ಮನಸ್ಸನ್ನು ತಯಾರುಗೊಳಿಸಿದೆ, ಮತ್ತು ನಾನು ಮಾಡಿದೆ!
ಕಳೆದ ವರ್ಷದ ಸುಂದರ ಘಟನೆಗಳ ಬಗ್ಗೆ ಯೋಚಿಸಿ. ಕರಾಳ ಅನುಭವಗಳನ್ನು ಮರೆತುಬಿಡಿ. ಹೊಸ ವರ್ಷವೆಂಬ ತಾಜಾ ಮಣ್ಣಿನಲ್ಲಿ ನೀವು ಹಿಂದೆ ಮಾಡಿದ ಉತ್ತಮ ಕಾರ್ಯವನ್ನು ಬಿತ್ತನೆ ಮಾಡಿ, ಆ ಪ್ರಮುಖ ಬೀಜಗಳು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಯಬಹುದು.