ಒಂದು ಪರಿಚಯ:
ನೀವು ಸುತ್ತಲೂ ಮತ್ತು ಆನ್‌ಲೈನ್‌ನಲ್ಲಿ ನೋಡಿದಾಗ, ನಾವು ಒಂದು ಪ್ರಪಂಚವಾಗಿ ಶಾಂತಿಯನ್ನು ಹೊಂದಲು ಸಾಧ್ಯವೆ ಎಂದು ನೀವು ಅಚ್ಚರಿ ಪಡುವಿರಾ? ನಾವು ಕೇಳುತ್ತಿರುವ ಜೀವನದ ಕಥೆಗಳು ಹೆಚ್ಚಾಗಿ ತಳಮಳ ಮತ್ತು ಕೋಪದ ಪರಿಭಾಷೆಯ ಚೌಕಟ್ಟಿನಲ್ಲಿರುವಾಗ ಕೆಲವೊಮ್ಮೆ ನಾವು ಕೆರಳುವುದು ಸಹಜ. ಆದರೆ ಇದನ್ನು ತಿಳಿದುಕೊಳ್ಳಿ: ಬೇರೆ ದಿಕ್ಕಿನಲ್ಲಿ ನೋಡುವುದರಿಂದ, ಅಂದರೆ, ಸ್ವಲ್ಪ ಸಮಯದವರೆಗಾದರೂ, ಒಳಗೆ ನೋಡುವುದರಿಂದ, ಅದು ಪ್ರಚಂಡ ಭರವಸೆಯನ್ನು ಕೊಡುತ್ತದೆ.
ಪರಮಹಂಸ ಯೋಗಾನಂದರು ಹೇಳಿದ ಈ ಕಥೆಯನ್ನು – ಈ ಗುಪ್ತ ಸತ್ಯವನ್ನು ಒಂದು ಕ್ಷಣ ಪರ್ಯಾಯವಾಗಿ ನೋಡಿ: “ಶಾಂತಿ ಎಲ್ಲೆಡೆ ಇದೆ. ನೀವು ಶಾಂತಿಯ ಸಾಗರದಲ್ಲಿ ಈಜುತ್ತಿರುವಿರಿ. ಪ್ರತಿ ಅಂಗಾಂಶದಲ್ಲಿ ರಕ್ತ ಪರಿಚಲನೆಯಾಗುವಂತೆಯೇ, ಶರೀರದ ಪ್ರತಿಯೊಂದು ಜೀವಕೋಶದ ಮೂಲಕ ಶಾಂತಿಯು ಹರಿಯುತ್ತದೆ.”
ನೀವು ಶಾಂತಿಯಲ್ಲಿ ಈಜುತ್ತಿರುವಿರಿ, ಆದರೆ ನೀವು ಅದನ್ನು ಸಾಧಿಸಿಕೊಳ್ಳುವ ಮೊದಲು ಪರಮಹಂಸಜಿ ಕಲಿಸಿದಂತಹ, ಆಧ್ಯಾತ್ಮಿಕವಾಗಿ ವೈಜ್ಞಾನಿಕವಾದ ವಿಧಾನಗಳಿಂದ “ನಿಮ್ಮ ಹೃದಯದಲ್ಲಿ ಅದನ್ನು ಭಟ್ಟಿ ಇಳಿಸಿಕೊಂಡು ” ಶಾಂತಿಯನ್ನು ಅಭ್ಯಾಸ ಮಾಡಲು ಕಲಿಯಬೇಕು.
ಮಾನವೀಯತೆಗೆ ಶಾಂತಿಯ ಆದರ್ಶವನ್ನು ಎತ್ತಿ ಹಿಡಿಯುತ್ತ, ಪ್ರತಿ ಸೆಪ್ಟೆಂಬರ್‌ನಲ್ಲಿ, ಯುಎನ್ ಅಂತರರಾಷ್ಟ್ರೀಯ ಶಾಂತಿ ದಿನವನ್ನು ವಿಶ್ವದಾದ್ಯಂತ ಗೌರವಿಸಲಾಗುತ್ತದೆ. ಆದರೆ ಆ ಗುರಿಯನ್ನು ತಲುಪಲು ನಾವು ನಮ್ಮಿಂದಲೇ ಪ್ರಾರಂಭಿಸಬೇಕು ಎಂದು ಪರಮಹಂಸಜಿ ಮತ್ತು ಎಲ್ಲ ಮಹಾನ್ ಆತ್ಮಗಳು ಕಲಿಸಿದ್ದಾರೆ.
ಮತ್ತು ಅಂತಿಮವಾಗಿ ನಮಗೆ ಬೇಕಾಗಿರುವುದು ಹಾಗೂ ಆತ್ಮವಾಗಿ ನಾವು ಹಂಬಲಿಸುತ್ತಿರುವುದು, ಯಾವಾಗಲೋ ಒಮ್ಮೆ ಸಿಗುವ ಅಲ್ಪ ಶಾಂತಿಯ ಅನುಭವಕ್ಕಿಂತ ಹೆಚ್ಚಿನದು, ಯಾವಾಗಲೋ ಒಮ್ಮೆ ಸಿಗುವ ಅಲ್ಪ ಪೌಷ್ಟಿಕ ಆಹಾರಕ್ಕಿಂತ ಹೆಚ್ಚಿನದು ನಮಗೆ ಬೇಕಾಗುವಂತೆಯೇ. ನಮಗೆ ಹೆಚ್ಚು ಶಾಂತಿ ಬೇಕು — ಸಮೃದ್ಧವಾದ, ಉಪಶಮನಕಾರಕ, ಆಳವಾಗಿ ಭರವಸೆ ನೀಡುವಂತಹ, ಶಕ್ತಿ ನೀಡುವ ಮತ್ತು ತೃಪ್ತಿ ಪಡಿಸುವ ಶಾಂತಿ — ಕೇವಲ ಒಂದು ದಿನ ಅಥವಾ ಒಂದು ತಿಂಗಳಿಗಷ್ಟೇ ಅಲ್ಲ, ಆದರೆ ಪ್ರತಿ ದಿನ, ನಾವು ಹಿಡಿದಿಟ್ಟುಕೊಳ್ಳಲು ಸಾಧ್ಯವಾದಷ್ಟು ಶಾಂತಿಯು ಈ ಜಗತ್ತಿನಲ್ಲಿ ನಮ್ಮ ಅಸ್ತಿತ್ವದ ಜೀವನಕ್ರಮವಾಗುವವರೆಗೆ.
ಕೆಳಗಿನ ಉಲ್ಲೇಖಗಳಲ್ಲಿರುವ ಪರಮಹಂಸಜಿಯವರ ಜ್ಞಾನವನ್ನು ಹೀರಿಕೊಳ್ಳುವ ಮೂಲಕ ಮತ್ತು ನಿಮ್ಮ ಆತ್ಮದಲ್ಲಿ ನೆಲೆಸಿರುವ ಸಮೃದ್ಧ ಶಾಂತಿಯಿಂದ ಹೊಸ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಮೂಲಕ ಪ್ರಜ್ಞಾಪೂರ್ವಕವಾಗಿ ಚಿಂತೆಗಳನ್ನು ಬದಿಗಿಟ್ಟು ಇಂದು ಅಥವಾ ಯಾವುದೇ ದಿನ ದಿವ್ಯ ಶಾಂತಿಯನ್ನು ಅನುಭವಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ಜಗತ್ತಿನಲ್ಲಿ ಶಾಂತಿಯು ವ್ಯಕ್ತಿಗತ ಹೃದಯದಲ್ಲಿ ಹುಟ್ಟುವ ಶಾಂತಿಯಿಂದ ಪ್ರಾರಂಭವಾಗುತ್ತದೆ.
ನಿಮ್ಮ ಹೃದಯದಲ್ಲಿ ಶಾಂತಿಯನ್ನು ಭಟ್ಟಿ ಇಳಿಸುವ ಮೂಲಕ ನೀವು ಅದನ್ನು ಕಂಡುಕೊಳ್ಳಬೇಕು. ಧ್ಯಾನವು ಒಂದು ಪ್ರಕ್ರಿಯೆಯಾಗಿದೆ. ನೀವು ಶಾಂತಿಯನ್ನು ಕಂಡುಕೊಳ್ಳಲು ಎಲ್ಲವನ್ನೂ ಪ್ರಯತ್ನಿಸಬಹುದು ಆದರೂ ನೀವು ಅದನ್ನು ಅನುಭವಿಸುವುದಿಲ್ಲ; ಆದರೆ ಧ್ಯಾನ ಮಾಡಿ, ಆಗ ತಕ್ಷಣವೇ ನಿಮಗೆ ದಿವ್ಯಾನಂದದ ಅರಿವಾಗುತ್ತದೆ. ಧ್ಯಾನವು ನಿಮ್ಮ ಆತ್ಮಕ್ಕೆ ಭಗವಂತನ ಶಾಂತಿಯನ್ನು ಹರಿಸುವ ಚಿಲುಮೆಯಾಗಿದೆ.
ಪ್ರತಿ ರಾತ್ರಿ ನಿದ್ರೆಯಲ್ಲಿ ನೀವು ಶಾಂತಿ ಮತ್ತು ಆನಂದದ ಸ್ವಾದವನ್ನು ಸವಿದಿರುತ್ತೀರಿ. ನೀವು ಗಾಢ ನಿದ್ರೆಯಲ್ಲಿರುವಾಗ, ಭಗವಂತನು ಈ ಅಸ್ತಿತ್ವದ ಎಲ್ಲಾ ಭಯಗಳು ಮತ್ತು ಚಿಂತೆಗಳನ್ನು ಮರೆತುಬಿಡುವಂತಹ ಪ್ರಶಾಂತವಾದ ಅತೀತಪ್ರಜ್ಞೆಯಲ್ಲಿ ನೀವು ಜೀವಿಸುವಂತೆ ಮಾಡುತ್ತಾನೆ. ನೀವು ಎಚ್ಚರವಾಗಿರುವಾಗ ಧ್ಯಾನದ ಮೂಲಕ ಆ ಪವಿತ್ರ ಮನಸ್ಥಿತಿಯನ್ನು ಅನುಭವಿಸಬಹುದು ಮತ್ತು ಉಪಶಮನಕಾರಕ ಶಾಂತಿಯಲ್ಲಿ ನಿರಂತರವಾಗಿ ಮುಳುಗಿರಬಹುದು.
ಒಮ್ಮೆ ನೀವು ಆ ಶಾಂತಿಯನ್ನು ಕಂಡುಕೊಂಡರೆ, ಅದು ನಿಮ್ಮ ಪರಿಸರ ಮತ್ತು ಜಗತ್ತಿಗೆ ಆಶೀರ್ವಾದವಾಗಿ ಹರಿಯುತ್ತದೆ. ಒಳಗೆ ಸಾಮರಸ್ಯ, ಹೊರಗೆ ಸಾಮರಸ್ಯ, ಎಲ್ಲೆಡೆ ಸಾಮರಸ್ಯ!
ನಿಮ್ಮ ಮನಸ್ಸನ್ನು ಹುಬ್ಬುಗಳ ನಡುವೆ (ಧ್ಯಾನದಲ್ಲಿ ಮಾಡುವಂತೆ) ಎಲ್ಲೆಯಿಲ್ಲದ ಶಾಂತಿ ಸರೋವರದ ಮೇಲೆ ನೆಲೆಗೊಳಿಸಿ. ನಿಮ್ಮನ್ನು ಸುತ್ತುವರೆದ ಕಿರುದೆರೆಗಳೊಂದಿಗೆ ಕೂಡಿದ ಶಾಂತಿಯ ಚಿರಂತನ ವೃತ್ತವನ್ನು ಗಮನಿಸಿ. ನೀವು ಹೆಚ್ಚು ತೀವ್ರವಾಗಿ ಗಮನಿಸಿದಷ್ಟೂ, ಶಾಂತಿಯ ಕಿರು ಅಲೆಗಳು ಹುಬ್ಬಿನಿಂದ ಹಣೆಗೆ, ಹಣೆಯಿಂದ ಹೃದಯಕ್ಕೆ ಮತ್ತು ಹಾಗೇ ನಿಮ್ಮ ಶರೀರದ ಪ್ರತಿ ಜೀವಕೋಶಕ್ಕೆ ಹರಡುವುದನ್ನು ಹೆಚ್ಚಾಗಿ ಅನುಭವಿಸುತ್ತೀರಿ. ಈಗ ಶಾಂತಿಯ ಜಲರಾಶಿಯು ನಿಮ್ಮ ಶರೀರದ ದಡವನ್ನು ದಾಟಿ ಹರಿದು ನಿಮ್ಮ ಮನದ ಅಗಾಧ ಕ್ಷೇತ್ರವನ್ನು ಮುಳುಗಿಸುತ್ತಿದೆ. ಶಾಂತಿಯ ಪ್ರವಾಹವು ನಿಮ್ಮ ಮನದ ಸೀಮೆಗಳನ್ನು ಮೀರಿ ಅನಂತ ದಿಕ್ಕುಗಳಲ್ಲಿ ಚಲಿಸುತ್ತಿದೆ.
ನೀವು ನಿಮ್ಮ ಶಾಂತಿಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದರೆ ಮತ್ತು ನೀವು ಮಾಡುವ ಎಲ್ಲದರಲ್ಲೂ ಶಾಂತವಾಗಿ ಸಕ್ರಿಯರೂ ಮತ್ತು ಸಕ್ರಿಯವಾಗಿ ಶಾಂತರೂ ಆಗಿರಲು ಸಾಧ್ಯವಾದರೆ, ಸದಾ ಶಾಂತಿಯ ಆಂತರಿಕ ಕೋಣೆಯಲ್ಲಿ ನೆಲೆಸಿರುವ ನಿಮ್ಮ ನೈಜ ಆತ್ಮದೊಂದಿಗೆ ನಿಮ್ಮನ್ನು ನೀವು ಗುರುತಿಸಿಕೊಂಡಿರುವಿರಿ ಎಂದರ್ಥ.
ನೀವು ಮಾಡುವ ಎಲ್ಲವನ್ನೂ ಶಾಂತಿಯಿಂದ ಮಾಡಬೇಕು. ಅದು ನಿಮ್ಮ ಶರೀರ, ಮನಸ್ಸು ಮತ್ತು ಆತ್ಮಕ್ಕೆ ಅತ್ಯುತ್ತಮ ಔಷಧವಾಗಿದೆ. ಇದೇ ಬದುಕುವ ಅತ್ಯಂತ ಅದ್ಭುತ ಮಾರ್ಗ.
ವೈಎಸ್‌ಎಸ್ ಬ್ಲಾಗ್‌ಗಾಗಿ ನಮ್ಮ ಒಂದು ಗುರಿಯೆಂದರೆ, ಪರಮಹಂಸ ಯೋಗಾನಂದರ ದೂರದೃಷ್ಟಿಯ ಮತ್ತು ಸರ್ವಾಲಿಂಗನದ ವಿವೇಕವನ್ನು ಕೂಡಲೇ ಅನುಷ್ಠಾನಕ್ಕೆ ತರುವಂತಹ ಸಾಧನಗಳು ನಿಮಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಭಾರತದ ಅತ್ಯಂತ ವ್ಯಾವಹಾರಿಕವಾದ ಆಧ್ಯಾತ್ಮಿಕತೆಯ ವಿಜ್ಞಾನವನ್ನು ಜಗತ್ತಿಗೆ ತರುವಾಗ ಪರಮಹಂಸಜೀಯವರ ಉದ್ದೇಶ ಏನಾಗಿತ್ತೆಂದರೆ, ಸರಳವಾದರೂ ಶಕ್ತಿಯುತವಾದ ಪರಿಣಾಮಕಾರಿ ಯೋಗದ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಆತ್ಮದ ಶಾಂತಿ, ಪ್ರೀತಿ ಮತ್ತು ಆನಂದವನ್ನು ತಿಳಿದುಕೊಳ್ಳಲು ಸಾಧ್ಯವಾಗಬೇಕು.
ಈ ಕೆಳಗೆ ನೀವು “ಇಂದು ಶಾಂತಿಯನ್ನು ಅನುಭವಿಸಲು ಟೂಲ್‌ಕಿಟ್”ಗೆ ಲಿಂಕ್ ಅನ್ನು ನೋಡುತ್ತೀರಿ, ಇದು ನಿಮಗೆ ಶರೀರವನ್ನು ಸಡಿಲಿಸುವ ಸೂಚನೆಗಳನ್ನು ಮತ್ತು ಮಾರ್ಗದರ್ಶಿತ ಅನುಭವಗಳ ಹಲವಾರು ವೀಡಿಯೊಗಳನ್ನು ಕೊಡುತ್ತದೆ, ಆದರಿಂದ ನಿಮ್ಮ ಅನುಕೂಲಕರ ಸಮಯದಲ್ಲಿ, ನಿಮ್ಮೊಳಗಿರುವ ಅಂತ್ಯವಿಲ್ಲದ ಶಾಂತಿಯನ್ನು ಅರಿತುಕೊಳ್ಳುವುದನ್ನು ನೀವು ಅಭ್ಯಾಸ ಮಾಡಬಹುದು.