ಶ್ರೀ ದಯಾ ಮಾತಾ ಅವರಿಂದ “ಶಾಂತಿ ಒಂದು ಜೀವನ ವಿಧಾನ – ಯೋಗ ಮತ್ತು ದೈವಿಕ ಉದಾಹರಣೆಯನ್ನು ಅನುಸರಿಸುವುದು”

8 ಸೆಪ್ಟೆಂಬರ್, 2023

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನ ಮೂರನೇ ಅಧ್ಯಕ್ಷರಾದ ಪ್ರೀತಿಯ ಶ್ರೀ ಶ್ರೀ ದಯಾ ಮಾತಾ ಅವರ ಈ ಕೆಳಗಿನ ಪ್ರಕಟಣೆಯು ಅವರು ಪರಮಹಂಸ ಯೋಗಾನಂದರ ಇನ್ನರ್‌ ಪೀಸ್:‌ ಹೌ ಟು ಬಿ ಕಾಮ್ಲಿ ಆಕ್ಟಿವ್‌ ಅಂಡ್‌ ಆಕ್ಟಿವ್ಲಿ ಕಾಮ್ ಕೃತಿಗೆ ನೀಡಿದ ಪರಿಚಯದಿಂದ ಆಯ್ದ ಭಾಗಗಳನ್ನು ಒಳಗೊಂಡಿದೆ.

ಶಾಂತಿ, ಪ್ರಶಾಂತತೆ, ಆಂತರಿಕ ಸಮತೋಲನಗಳು ನಾವು ಭೇಟಿಯಾಗುವ ಯಾರಲ್ಲಾದರೂ ಅದರ ಅಭಿವ್ಯಕ್ತಿಯನ್ನು ನಿಜವಾಗಿಯೂ ನೋಡುವವರೆಗೆ – ಅಥವಾ ನಮ್ಮಲ್ಲಿ ಅವುಗಳ ಅಭಿವ್ಯಕ್ತಿಯನ್ನು ಅನುಭವಿಸುವವರೆಗೆ ಕೇವಲ ಪದಗಳಷ್ಟೆ.

ಪರಮಹಂಸ ಯೋಗಾನಂದರೊಂದಿಗಿದ್ದ ನನ್ನ ಸರಿ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ, ಅವರಿಂದ ಹೊರಹೊಮ್ಮಿದ ಅವರ್ಣನೀಯ ಶಾಂತಿಯ ದಿವ್ಯ ತೇಜಸ್ಸನ್ನು ಪ್ರತಿದಿನ ಅನುಭವಿಸಲು ನಾನು ಪುಣ್ಯಶಾಲಿಯಾಗಿದ್ದೆ; ಅವರ ಬಳಿಗೆ ಬಂದ ಎಲ್ಲರನ್ನೂ ಅವರವರ ಆತ್ಮಗಳಲ್ಲಿರುವ ಶಾಂತಿಯ ಆಳವಾದ ಚಿಲುಮೆಯೊಂದಿಗೆ ಸಂಪರ್ಕ ಕಲ್ಪಿಸಿಕೊಡುವ ಗಮನಾರ್ಹ ಸಾಮರ್ಥ್ಯವನ್ನು ಅದು ಅವರಿಗೆ ನೀಡಿತು.

ನಮ್ಮ ಕಾಲದ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಗಳು ಅಪ್ರತಿಮವಾಗಿವೆ, ಆದರೆ ಅವುಗಳು ಹೆಚ್ಚಾಗಿ ಕೇವಲ ಹೊರಗಿನ ಪರಿಸ್ಥಿತಿಗಳನ್ನು ಸುಧಾರಿಸಿದಂತೆ ಕಂಡರೂ, ಅವು ನಮ್ಮ ವೈಯಕ್ತಿಕ ಜೀವನದಲ್ಲಿ ಒತ್ತಡ ಮತ್ತು ಸಂಕೀರ್ಣತೆಯನ್ನು ಹೆಚ್ಚುಮಾಡಿವೆ. ಸಮತೋಲನದ ಅನ್ವೇಷಣೆಯ ಆದ್ಯತೆ ಹೆಚ್ಚಾಗುತ್ತಿದ್ದಂತೆ, ಪ್ರಪಂಚದಾದ್ಯಂತದ ಜನರು ಬಹುಶಃ ಅತ್ಯಂತ ಅಗತ್ಯವಾದ “ಹೊಸ” ವಿಜ್ಞಾನವೆಂದರೆ ಅದು ಪ್ರಾಚೀನವಾದದ್ದೇ ಎಂದು ಅರಿತುಕೊಳ್ಳುತ್ತಿದ್ದಾರೆ: ಅದೇ ಯೋಗ, ದೇಹ, ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸುವ ಇದರ ಕಾಲಾತೀತ ವಿಧಾನಗಳು ಆಂತರಿಕ ಶಾಂತಿಯನ್ನು ಸಾಧಿಸಲು ನಿಜವಾದ ಪರಿಣಾಮಕಾರಿ ವ್ಯವಸ್ಥೆಯನ್ನು ನೀಡುತ್ತವೆ.

ಪರಮಹಂಸ ಯೋಗಾನಂದರ ಜ್ಞಾನಭಂಡಾರದಿಂದ, ನಮಗೆ ಅತ್ಯಂತ ಮೌಲ್ಯಯುತವಾದ ಯೋಗ “ಭಂಗಿಗಳನ್ನು” ಕಲಿಸಲಾಗುತ್ತದೆ: ಅವರು ಆಗಾಗ್ಗೆ ಹೇಳಿದಂತೆ, “ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಅಚಲವಾಗಿ ನಿಲ್ಲುವುದು.” ಆಂತರಿಕ ಭದ್ರತೆಯಲ್ಲಿ, “ಎಲ್ಲಾ ತಿಳುವಳಿಕೆಗೂ ಮೀರಿದ ಶಾಂತಿ”ಯಲ್ಲಿ ಅಚಲವಾಗಿ ನೆಲೆಗೊಳ್ಳುವುದು – ಇದು ನಿಜವಾದ ಆಧ್ಯಾತ್ಮಿಕತೆಯು ಪೂರೈಸಬಹುದಾದ ವಾಗ್ದಾನವಾಗಿದೆ.

ಶಾಂತವಾದ ಆಂತರಿಕ ಪ್ರಶಾಂತತೆ ಪಡೆಯಲು ಶಕ್ತಿಯುತ ಸಕ್ರಿಯ ಕೆಲಸ-ಕಾರ್ಯಗಳಿಂದ ಹಿಂಜರಿಯುವ ಅಗತ್ಯವಿಲ್ಲ ಎಂದು ಪರಮಹಂಸ ಯೋಗಾನಂದರು ಬೋಧಿಸಿದರು. ವಾಸ್ತವವಾಗಿ, ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತದ ಧ್ಯಾನದ ಬೋಧನೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಿದ ಅವರ ಅಸಾಧಾರಣ ಬಾಹ್ಯ ಸಾಧನೆಗಳಿಗೆ ಅತ್ಯಂತ ಕ್ರಿಯಾತ್ಮಕ, ಸೃಜನಶೀಲ ವ್ಯಕ್ತಿತ್ವದ ಅಗತ್ಯವಿತ್ತು.

ಅವರು ತಮ್ಮ ಕೆಲಸವನ್ನು ಮುಖ್ಯವಾಗಿ ಯಾವುದೋ ಏಕಾಂತ ಅಡಗುತಾಣದಲ್ಲಿ ನಡೆಸಲಿಲ್ಲ, ಆದರೆ ನ್ಯೂಯಾರ್ಕ್, ಚಿಕಾಗೋ, ಲಾಸ್ ಏಂಜಲೀಸ್ ನಂತಹ ನಗರಗಳ ಕೋಲಾಹಲದಲ್ಲಿ – ಈ ಗ್ರಹದ ಅತ್ಯಂತ ಗದ್ದಲದ ಮತ್ತು ಅತ್ಯಂತ ಪ್ರಕ್ಷುಬ್ಧ ಸ್ಥಳಗಳಲ್ಲಿ ಮುಂದುವರಿಸಿದರು! ಆದರೂ ಅವರು ಯಾವಾಗಲೂ ಆತ್ಮದ ಆಂತರಿಕ ಅನುದ್ವಿಗ್ನ ಶಾಂತತೆಯಲ್ಲಿ ಸಂತೋಷದಿಂದ ಕೇಂದ್ರೀಕೃತರಾಗಿದ್ದರು.

ಪರಮಹಂಸರ ಬಗ್ಗೆ ಅವರ ಅನುಯಾಯಿಗಳ ನೆಚ್ಚಿನ ಕಥೆಗಳಲ್ಲಿ ಒಂದೆಂದರೆ ಆ ಶಾಂತಿಗೆ ಎಷ್ಟು ಶಕ್ತಿ ಇದೆ ಎಂಬುದರ ಸ್ವಾಭಾವಿಕವಾದ ಪ್ರದರ್ಶನ (ಅದೃಷ್ಟವಶಾತ್ ಎಂದಿಗೂ ಪುನರಾವರ್ತಿಸಲಿಲ್ಲ).

ನ್ಯೂಯಾರ್ಕ್ ನಗರದಲ್ಲಿ, ಬಂದೂಕುಗಳನ್ನು ಹೊಂದಿದ್ದ ಮೂವರು ದರೋಡೆಕೋರರು ಬೀದಿಯಲ್ಲಿ ಅವರನ್ನು ತಡೆದರು. ಅವರು ಸುಮ್ಮನೆ ಅವರತ್ತ ನೋಡುತ್ತಾ ಹೇಳಿದರು: “ನಿಮಗೆ ಹಣ ಬೇಕೇ? ತೆಗೆದುಕೊಳ್ಳಿ.” ಅವರು ತನ್ನ ಪರ್ಸನ್ನು ಚಾಚಿದರು.

ವಿಚಿತ್ರವೇನೆಂದರೆ, ಆ ಬಂದೂಕುಧಾರಿಗಳು ಮುಂದುವರಿಯಲೇ ಇಲ್ಲ. ಅವರ ಉಪಸ್ಥಿತಿಯಲ್ಲಿ ಅವರು ಹೊರಸೂಸುತ್ತಿದ್ದ ಆಧ್ಯಾತ್ಮಿಕ ಕಂಪನಗಳಿಂದ ಸ್ಥಂಭೀಭೂತರಾಗಿದ್ದರು.

ಕೊನೆಗೆ ಅವರಲ್ಲಿ ಒಬ್ಬನು ಹಿಂದು-ಮುಂದು ಯೋಚಿಸದೆ: “ನಿಮ್ಮಲ್ಲಿ ಕ್ಷಮೆಯನ್ನು ಕೋರುತ್ತೇವೆ. ನಾವಿದನ್ನು ಮಾಡಲು ಸಾಧ್ಯವಿಲ್ಲ,” ಎಂದು ಹೇಳಿದ. ಅವರು ತಿರುಗಿ ಓಡಿಹೋದರು.

ಅವರು ಸಾರ್ವಜನಿಕ ಸ್ಥಳಗಳಲ್ಲಿದ್ದಾಗಲೆಲ್ಲಾ, ಹಾದುಹೋಗುವ ಜನರು ಅಲ್ಲೇ ನಿಂತು ಅವರನ್ನು ದಿಟ್ಟಿಸಿ ನೋಡುತ್ತಿದ್ದರು ಮತ್ತು ಅವರೊಂದಿಗಿದ್ದ ನಮ್ಮನ್ನು ಕೇಳುತ್ತಿದ್ದರು, “ಅವರು ಯಾರು? ಆ ಮನುಷ್ಯ ಯಾರು?”

ಅವರ ಸುತ್ತಲೂ ಯಾವಾಗಲೂ ಶಾಂತವಾದ, ಗ್ರಹಿಸಬಹುದಾದ ಕಂಪನವಿರುತ್ತಿತ್ತು, ಅದು ಜನರನ್ನು ಅವರ ಕಡೆಗೆ ಸೆಳೆಯುತ್ತಿತ್ತು.

ಆತ್ಮಶಾಂತಿಯು ಛಿದ್ರಗೊಂಡಿರುವ ವೈಯುಕ್ತಿಕ ಮತ್ತು ಕುಟುಂಬ ಸಾಮರಸ್ಯವನ್ನು ಮತ್ತು ನಮ್ಮ ಸಮುದಾಯಗಳ ಛಿದ್ರಗೊಳ್ಳುತ್ತಿರುವ ರಚನೆಯನ್ನೂ ಸರಿಪಡಿಸುತ್ತದೆ.

ಇದನ್ನು ಜೀವನ ವಿಧಾನವಾಗಿ ತೆಗೆದುಕೊಂಡರೆ, ನಿಮ್ಮ ಅಸ್ತಿತ್ವಕ್ಕೆ ಸಮತೋಲನ ಮತ್ತು ಉಪಶಮನಕಾರಿತ್ವವನ್ನು ತರುವ ಶಕ್ತಿಯನ್ನು ಇದು ಹೊಂದಿದೆ; ನಿಮ್ಮ ಶಾಂತಿಯ ಕಂಪನವು ನಿಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಸ್ಪರ್ಶಿಸುತ್ತದೆ ಮತ್ತು ನಮ್ಮ ಪ್ರಾಪಂಚಿಕ ಕುಟುಂಬದಲ್ಲಿ ಶಾಶ್ವತ ಶಾಂತಿಯನ್ನು ನೆಲೆಸುವಂತೆ ಮಾಡಲು ಅಗಾಧವಾದ ಕೊಡುಗೆಯನ್ನು ನೀಡುತ್ತದೆ.

ಇದನ್ನು ಹಂಚಿಕೊಳ್ಳಿ