ಭಗವದ್ಗೀತೆಯನ್ನು ತಮ್ಮ ವಿದ್ಯಾರ್ಥಿಗಳಿಗೆ ಭೋದಿಸಿದ ಮೇಲೆ ಋಷಿಗಳು ಅವರು ಬೆಳಗಿನ ಕೆಲಸಗಳನ್ನು ಮಾಡುವುದನ್ನು ವೀಕ್ಷಿಸಿದರು.
ಆಶ್ರಮಕ್ಕೆ ಹೊಸದಾಗಿ ಬಂದಿದ್ದ ಒಬ್ಬ ಯುವಕನನ್ನು “ಪ್ರೇಮಲ್, ಏಕಿಷ್ಟು ದುಃಖಿತನಾಗಿದ್ದೇಯೆ?” ಕೇಳಿದರು.
“ಗುರುಗಳೇ, ನೀವು ಗೀತೆಯ ಬಗ್ಗೆ ಹೇಳುವುದನ್ನು ಕೇಳಿಸಿಕೊಳ್ಳಲು ನನಗೆ ಇಷ್ಟವಾಗುತ್ತದೆ, ಆದರೆ ನಂತರ ಬಹಳಷ್ಟು ನನ್ನ ನೆನಪಿನಲ್ಲಿ ಉಳಿಯುವುದಿಲ್ಲ. ಬೇರೆ ಹುಡುಗರು ಬಲು ಸುಲಭವಾಗಿ ಪವಿತ್ರ ಬೋಧನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನನಗೆ ಏನೂ ಗೊತ್ತಿಲ್ಲ.” ಪ್ರೇಮಲ್ ಬಹಳ ನಿರಾಶೆಯಿಂದ ನೆಲದತ್ತ ನೋಡಿದ. “ನಾನು ಇಲ್ಲಿಗೆ ಸೇರಿದವನಲ್ಲ ಎಂದೆನಿಸುತ್ತದೆ,” ಎಂದು ತನ್ನ ಮಾತನ್ನು ಮುಗಿಸಿದ.
ಋಷಿಗಳು ಒಂದು ಕ್ಷಣ ಯೋಚಿಸಿದರು, ನಂತರ ಅವರು ಹೇಳಿದರು, “ಪ್ರೇಮಲ್, ಇದ್ದಿಲ ಬುಟ್ಟಿಯನ್ನು ನನ್ನ ಬಳಿ ತೆಗೆದುಕೊಂಡು ಬಾ.” ಹುಡುಗನಿಗೆ ಸೇವೆ ಮಾಡುವುದು ತುಂಬಾ ಪ್ರಿಯವಾಗಿತ್ತು. ಹುಡುಗರು ಅಗ್ಗಿಷ್ಟಿಕೆಯ ಬಳಿಗೆ ಇದ್ದಿಲನ್ನು ತೆಗೆದುಕೊಂಡು ಹೋಗುವ ಬುಟ್ಟಿಯನ್ನು ಹಿಡಿದು ಅವನು ಬಹಳ ಉತ್ಸಾಹದಿಂದ ಹಿಂದಿರುಗಿ ಬಂದ. ಇಡೀ ದಿನ ಸೇರುತ್ತಿದ್ದ ಧೂಳಿನ ಭಾರದಿಂದಾಗಿ ಅದರೊಳಗೆಲ್ಲಾ ಕಪ್ಪು ತುಂಬಿತ್ತು.
“ಬುಟ್ಟಿಯನ್ನು ನದಿಯ ನೀರನಿಂದ ತುಂಬಿಸಿಕೊಂಡು ಅದನ್ನು ಮತ್ತೆ ನನ್ನ ಬಳಿಗೆ ತೆಗೆದುಕೊಂಡು ಬಾ.” ಹುಡುಗನ ಮುಖದಲ್ಲಿದ್ದ ಅನುಮಾನವನ್ನು ಕಂಡು ಅವರು “ಸುಮ್ಮನೆ ನಾನು ಹೇಳಿದಷ್ಟು ಮಾಡು” ಎಂದರು.
ಹುಡುಗ ಬುಟ್ಟಿಯನ್ನು ನೀರೊಳಗೆ ಅದ್ದಿದ, ಅದರೆ ಅವನು ಹಿಂತಿರುಗಿ ಬರುವ ವೇಳೆಗೆ ಅದರಲ್ಲಿದ್ದ ನೀರೆಲ್ಲ ಬರಿದಾಗಿತ್ತು. “ಅದನ್ನು ಮತ್ತೆ ಮಾಡು” ಎಂದು ಋಷಿಗಳು ಆದೇಶಿಸಿದರು. ಹುಡುಗ ಐದು ಬಾರಿ ಬುಟ್ಟಿಯಲ್ಲಿ ನೀರು ತುಂಬಿಸಿದ, ಮತ್ತು ಪ್ರತಿ ಬಾರಿ ಅವನು ಎಷ್ಟೇ ಜೋರಾಗಿ ಓಡಿ ಬಂದರೂ, ಅವನು ಋಷಿಗಳ ಹತ್ತಿರ ಬರುವ ವೇಳೆಗೆ ಅದು ಬರಿದಾಗುತ್ತಿತ್ತು.
ಕೊನೆಗೆ ಹುಡುಗ ಹೇಳಿದ, “ಗುರುಗಳೇ ನೀವು ನನಗೆ ಅಸಾಧ್ಯವಾದ ಕೆಲಸವನ್ನು ಕೊಟ್ಟಿದ್ದೀರಿ. ಈ ಬುಟ್ಟಿಯೊಳಗೆ ನಿಮಗೆ ನೀರು ತಂದುಕೊಡುವ ಪ್ರಯತ್ನ ವ್ಯರ್ಥವಾದುದು.”
“ನೀನು ಅದನ್ನು ಕೆಲಸಕ್ಕೆ ಬಾರದ್ದು ಎಂದು ಹೇಳುತ್ತಿದ್ದೀಯೆ?” ಎಂದು ಗುರುಗಳು ಪ್ರಶ್ನಾರ್ಥಕವಾಗಿ ನೋಡಿ, “ಬುಟ್ಟಿಯ ಒಳಗೆ ನೋಡು” ಎಂದರು.
ಹುಡುಗ ಬುಟ್ಟಿಯನ್ನು ನೋಡಿದ. ಅದು ಈಗ ಸಂಪೂರ್ಣವಾಗಿ ಬೇರೆಯೇ ಆಗಿತ್ತು. ಅದು ಸ್ವಚ್ಛವಾಗಿತ್ತು; ನೀರು ಅದರೊಳಗಿದ್ದ ಎಲ್ಲ ಕಪ್ಪು ಧೂಳಿನ ಛಾಯೆಗಳನ್ನು ಸಂಪೂರ್ಣವಾಗಿ ತೊಳೆದು ಹಾಕಿತ್ತು.
ಋಷಿಗಳು ವಿವರಿಸಿದರು, “ನಾವು ಭಗವದ್ಗೀತೆಯನ್ನು ಅಧ್ಯಯನ ಮಾಡುವಾಗ ನೀನು ಎಲ್ಲವನ್ನೂ ನೆನಪಿಟ್ಟುಕೊಳ್ಳುವುದಕ್ಕೆ ಅಥವಾ ತಿಳಿದುಕೊಳ್ಳುವುದಕ್ಕಾಗುವುದಿಲ್ಲ. ಆದರೆ ಸಹನೆಯಿಂದ ಮತ್ತು ಗೌರವಾದರಗಳಿಂದ ಸುಮ್ಮನೆ ಕೇಳಿಸಿಕೊಂಡರೂ ಕೂಡ, ನಿಮ್ಮ ಹೃದಯವನ್ನು ಮರ್ತ್ಯ ಭ್ರಮೆ ಮತ್ತು ಭಯಗಳಿಂದ ಸ್ವಚ್ಛವಾಗಿಸುವವರೆಗೂ ಕ್ರಮೇಣವಾಗಿ ನಿಮ್ಮ ಪ್ರಜ್ಞೆಯನ್ನು ಅದು ಬದಲಾಯಿಸುತ್ತದೆ.”
ಋಷಿಗಳು ಪ್ರೀತಿಯಿಂದ ಹುಡುಗನನ್ನು ತೋಳಿನಿಂದ ಬಳಸಿದರು. “ಭಗವಂತ ಒಬ್ಬ ವಿದ್ವಾಂಸನಲ್ಲ, ಒಬ್ಬ ಪ್ರೇಮಿಯಾಗಿದ್ದಾನೆ. ನೀನು ಅವನನ್ನು ನಿಷ್ಠೆಯಿಂದ ಅರಸಿದರೆ, ಅವನು ನಿನ್ನನ್ನು ಸಂಪೂರ್ಣವಾಗಿ ಹೇಗೆ ಬದಲಾಯಿಸಿದ ಎಂಬುದನ್ನು ಒಂದು ದಿನ ನೀನೇ ಮನಗಾಣುತ್ತೀಯೆ.”
