ಪರಮಹಂಸ ಯೋಗಾನಂದರ “ಪ್ರವರ್ತನ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು” ರಿಂದ ಆಯ್ದ ಭಾಗ. ಇದನ್ನು ವೈಎಸ್‌ಎಸ್‌ನಿಂದ ಪ್ರಕಾಶಿತ ಪರಮಹಂಸಜಿಯವರ ಉಪನ್ಯಾಸಗಳು ಮತ್ತು ಬರಹಗಳ ಸಂಕಲನದ ಮೊದಲ ಸಂಪುಟ “ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್” ನಲ್ಲಿ ಸಂಪೂರ್ಣವಾಗಿ ಓದಬಹುದಾಗಿದೆ.
ಮೊದಮೊದಲು ನನಗೆ ಗುರುವಾಗುವ ಮನಸ್ಸಿರಲಿಲ್ಲ—ಅದರ ಪರಿಣಾಮಗಳು ನನ್ನಲ್ಲಿ ಭಯ ಹುಟ್ಟಿಸುತ್ತಿದ್ದವು. ಒಬ್ಬ ಗುರುವಿಗೆ ಪೆಟ್ಟುಗಳನ್ನು ತಡೆದುಕೊಳ್ಳುವ ಶಕ್ತಿ ಇರಬೇಕಾಗುತ್ತದೆ; ಅವನು ಅಶಾಂತನಾದರೆ, ತನ್ನ ಸಹಾಯ ಬಯಸಿ ಬರುವವರಿಗೆ ನೆರವು ನೀಡಲು ಸಾಧ್ಯವಾಗುವುದಿಲ್ಲ. ಒಬ್ಬ ನಿಜವಾದ ಗುರು ಎಲ್ಲರನ್ನೂ ಪ್ರೇಮಿಸಬೇಕಾಗುತ್ತದೆ; ಭಗವಂತನನ್ನು ಅರಿಯಲು ಅವನು ಮನುಕುಲವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಆದರೆ ಶ್ರೀ ಯುಕ್ತೇಶ್ವರರು ಈ ಜೀವನದಲ್ಲಿ ನನ್ನ ಪಾತ್ರ ಗುರುವಿನದು ಎಂದು ಹೇಳಿದಾಗ, ನನ್ನ ಸಹಾಯಕ್ಕಾಗಿ ನಾನು ಪ್ರಭುವಿನ ಅನಂತ ಶಕ್ತಿಯನ್ನು ಕೇಳಿಕೊಂಡೆ. ನಾನು ಉಪನ್ಯಾಸಗಳನ್ನು ಕೊಡಲಾರಂಭಿಸಿದ ಮೇಲೆ, ಪುಸ್ತಕ ಜ್ಞಾನವನ್ನು ಬಿಟ್ಟು, ನನ್ನ ಭಾಷಣದ ಹಿಂದೆ ಅಕ್ಷಯವಾದ ರಚನಾತ್ಮಕ ಶಕ್ತಿಯಿದೆ (ಭಗವಂತ) ಎಂಬ ಆಲೋಚನೆಯನ್ನಿಟ್ಟುಕೊಂಡು, ಅಂತಃಸ್ಫೂರ್ತಿಯಿಂದ ಮಾತನಾಡುತ್ತೇನೆ ಎಂದು ನಿರ್ಧರಿಸಿದೆ. ನಾನು ಆ ಶಕ್ತಿಯನ್ನು ಜನರಿಗೆ ವ್ಯಾಪಾರದಲ್ಲಿ ನೆರವಾಗಲು ಹಾಗೂ ಇನ್ನೂ ಅನೇಕ ವಿಧಗಳಲ್ಲಿ ಬೇರೆ ಕ್ಷೇತ್ರಗಳಲ್ಲೂ ಉಪಯೋಗಿಸಿದ್ದೇನೆ.
ಅಮರತ್ವವನ್ನು ಪ್ರತಿಫಲಿಸಲು ನಾನು ಮರ್ತ್ಯ ಮನಸ್ಸನ್ನು ಬಳಸಿಕೊಂಡಿದ್ದೇನೆ. ನಾನು, “ತಂದೆಯೇ, ನೀನು ಮಾಡು,” ಎಂದು ಹೇಳಲಿಲ್ಲ, ಬದಲಿಗೆ, “ತಂದೆಯೇ, ನಾನು ಮಾಡಲಿಚ್ಛಿಸುತ್ತೇನೆ, ನೀನು ನನಗೆ ಮಾರ್ಗದರ್ಶನ ಮಾಡಬೇಕು; ನೀನು ನನಗೆ ಸ್ಫೂರ್ತಿ ನೀಡಬೇಕು; ನೀನು ನನಗೆ ದಾರಿ ತೋರಬೇಕು,” ಎಂದು ಹೇಳಿದೆ.
ಸಣ್ಣ ಕೆಲಸಗಳನ್ನು ಅಸಾಧಾರಣ ರೀತಿಯಲ್ಲಿ ಮಾಡಿ; ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಸರ್ವಶ್ರೇಷ್ಠರಾಗಿರಿ. ನಿಮ್ಮ ಜೀವನ ಸಾಧಾರಣ ರೀತಿಯಲ್ಲಿ ನಡೆಯಲು ನೀವು ಬಿಡಬಾರದು; ಯಾರೂ ಮಾಡಿರದ ಏನಾದರೂ ಒಂದನ್ನು ಮಾಡಿ; ಜಗತ್ತು ಕೋರೈಸುವಂಥದ್ದನ್ನು ಮಾಡಿ. ನಿಮ್ಮೊಳಗೆ ಭಗವಂತನ ರಚನಾತ್ಮಕ ಶಕ್ತಿ ಕೆಲಸ ಮಾಡುತ್ತದೆ ಎಂದು ತೋರಿಸಿ.
ಹಿಂದಿನದನ್ನು ಮರೆತುಬಿಡಿ. ನಿಮ್ಮ ಪಾಪಗಳು ಸಾಗರದಷ್ಟು ಆಳವಿದ್ದರೂ, ನಿಮ್ಮ ಆತ್ಮವನ್ನೇ ನುಂಗಲು ಅವಕ್ಕೆ ಸಾಧ್ಯವಿಲ್ಲ. ಸೀಮಿತಗೊಳಿಸುವ ಹಿಂದಿನ ತಪ್ಪುಗಳ ಆಲೋಚನೆಗಳಿಂದ ಬಾಧಿತರಾಗದೆ ಅವಿಚಲಿತವಾದ ದೃಢನಿಶ್ಚಯದಿಂದ ನಿಮ್ಮ ಮಾರ್ಗದಲ್ಲಿ ಮುಂದೆ ಸಾಗಿರಿ.
ಬಾಳಿನಲ್ಲಿ ಕತ್ತಲಾವರಿಸಿರಬಹುದು, ಕಷ್ಟಗಳು ಬರಬಹುದು, ಬಳಸಿಕೊಳ್ಳದ ಅವಕಾಶಗಳು ಕೈತಪ್ಪಿಹೋಗಬಹುದು, ಆದರೂ ನಿಮಗೆ ನೀವು, “ನನ್ನ ಕಥೆ ಮುಗಿಯಿತು. ಭಗವಂತ ನನ್ನ ಕೈ ಬಿಟ್ಟಿದ್ದಾನೆ,” ಎಂದು ಎಂದಿಗೂ ಹೇಳಿಕೊಳ್ಳಬೇಡಿ. ಅಂತಹ ವ್ಯಕ್ತಿಗೆ ಯಾರೇ ಆದರೂ ಏನು ಮಾಡಲು ಸಾಧ್ಯ? ನಿಮ್ಮ ಕುಟುಂಬ ನಿಮ್ಮ ಕೈ ಬಿಡಬಹುದು; ಅದೃಷ್ಟ ನಿಮ್ಮನ್ನು ತ್ಯಜಿಸಿದಂತೆ ಕಾಣಬಹುದು; ಮಾನವನ ಮತ್ತು ಪ್ರಕೃತಿಯ ಎಲ್ಲ ಶಕ್ತಿಗಳು ನಿಮ್ಮ ವಿರುದ್ದ ವ್ಯೂಹ ರಚಿಸಬಹುದು; ಆದರೆ ನಿಮ್ಮೊಳಗಿರುವ ದಿವ್ಯ ಉಪಕ್ರಮಶಕ್ತಿಯ ಗುಣದಿಂದ, ಗತಕಾಲದ ನಿಮ್ಮ ದೋಷಪೂರಿತ ಕರ್ಮಗಳಿಂದ ಸೃಷ್ಟಿಯಾದ ವಿಧಿಯ ಪ್ರತಿಯೊಂದು ದಾಳಿಯನ್ನೂ ಹಿಮ್ಮೆಟ್ಟಿಸಲು ಹಾಗೂ ಜಯಶಾಲಿಯಾಗಿ ಆನಂದದ ಸಾಮ್ರಾಜ್ಯದೊಳಕ್ಕೆ ಅಡಿಯಿಡಲು ನಿಮಗೆ ಸಾಧ್ಯವಾಗುತ್ತದೆ.
ನೀವು ನೂರು ಬಾರಿ ಸೋತಿದ್ದರೂ, ಯಶಸ್ವಿಯಾಗುವಿರಿ ಎಂದು ದೃಢಸಂಕಲ್ಪ ಮಾಡಿಕೊಳ್ಳಿ. ಸೋಲು ಅನಂತಕಾಲದವರೆಗೆ ಇರುವಂಥದ್ದಲ್ಲ. ಸೋಲು ನಿಮಗೊಂದು ತಾತ್ಕಾಲಿಕ ಪರೀಕ್ಷೆಯಷ್ಟೆ. ಸಹಜವಾಗಿ ಭಗವಂತ ನಿಮ್ಮನ್ನು ಅಜೇಯರನ್ನಾಗಿಸಲು, ಹಾಗೂ ನಿಮ್ಮೊಳಗಿರುವ ಸರ್ವಶಕ್ತ ಬಲವನ್ನು ನೀವು ಹೊರತರುವಂತಾಗಲು ಇಚ್ಛಿಸುತ್ತಾನೆ, ಅದರಿಂದ ಜೀವನರಂಗದಲ್ಲಿ ನೀವು ಉನ್ನತವಾದ ಪೂರ್ವನಿರ್ಧಾರಿತ ಪಾತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಹೊಸ ವರ್ಷದಲ್ಲಿ ನೀವು ಏನನ್ನು ಸಾಧಿಸಲು ನಿರ್ಧರಿಸಿದ್ದೀರಿ?
ವೈಎಸ್‌ಎಸ್ ಆನ್‌ಲೈನ್ ಪುಸ್ತಕ ಮಳಿಗೆಯಲ್ಲಿ ನೀವು ಪರಮಹಂಸ ಯೋಗಾನಂದರ ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್ ಮತ್ತು ಸಂಗ್ರಹಿತ ಉಪನ್ಯಾಸಗಳು ಮತ್ತು ಬರಹಗಳ ಇತರ ಎರಡು ಸಂಪುಟಗಳನ್ನು ಕಾಣಬಹುದು.
ಧ್ಯಾನದ ವಿಜ್ಞಾನ ಮತ್ತು ಸಮತೋಲಿತ ಜೀವನ ಕಲೆಯ ಕುರಿತ ಪರಮಹಂಸಜಿಯವರ ಸಮಗ್ರ ಗೃಹಾಧ್ಯಯನ ವ್ಯಾಸಂಗ ಶ್ರೇಣಿಯಾದ ಯೋಗದಾ ಸತ್ಸಂಗ ಪಾಠಗಳು, ಒಬ್ಬ ವ್ಯಕ್ತಿಯು ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಲು ತನ್ನದೇ ಸೃಜನಶೀಲ ಉಪಕ್ರಮ ಶಕ್ತಿಯ ಅನಂತ ಸಾಮರ್ಥ್ಯವನ್ನು ಪಡೆದುಕೊಳ್ಳಲು ಅವರ ಸಂಪೂರ್ಣ ಬೋಧನೆಗಳು ಮತ್ತು ತಂತ್ರಗಳನ್ನು ಪ್ರಸ್ತುತಪಡಿಸುತ್ತವೆ.


















