ಪರಮಹಂಸಜಿಯವರು ತಮ್ಮ ಪುಸ್ತಕಗಳು ಮತ್ತು ಪಾಠಗಳಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ಪ್ರಚಂಡ ಚೈತನ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ತೋರಿಸುತ್ತಾರೆ — ಬಾಹ್ಯ ಭೌತಿಕ ಶಕ್ತಿಯ ಮೂಲಗಳ (ಸೂಕ್ತ ಆಹಾರ, ಸರಿಯಾದ ಉಸಿರಾಟ, ಸಾಕಷ್ಟು ಬಿಸಿಲು) ಮತ್ತು ಆಂತರಿಕ ಮೂಲಗಳ ವಿವೇಚನಾಯುಕ್ತ ಬಳಕೆಯ ಮೂಲಕ (ಆತ್ಮ ಮತ್ತು ಪರಮಾತ್ಮನಿಂದ ಹರಿಯುವ ದಿವ್ಯ ಪ್ರಾಣ ಶಕ್ತಿಗಳು ಮತ್ತು ಪ್ರಜ್ಞೆ).
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಪ್ರಬಂಧಗಳ ಸಂಗ್ರಹದ ಎರಡನೆಯ ಸಂಪುಟ, ದಿ ಡಿವೈನ್ ರೊಮ್ಯಾನ್ಸ್‌ನ “ಹೌ ಟು ವರ್ಕ್ ವಿತೌಟ್ ಫ್ಯಾಟಿಗ್ — ದಣಿವಾಗದಂತೆ ಕೆಲಸ ಮಾಡುವುದು ಹೇಗೆ” ಎಂಬ ಉಪನ್ಯಾಸದ ಈ ಕೆಳಗಿನ ಆಯ್ದ ಭಾಗಗಳಲ್ಲಿ ಅವರು ಈ ತತ್ವಗಳ ಬಗ್ಗೆ ಮಾತನಾಡುತ್ತಾರೆ.
ಆಹಾರವು ಶಕ್ತಿಯ ಪೂರೈಕೆಯ ಮುಖ್ಯ ಮೂಲವಲ್ಲ. ದೇಹಕ್ಕೆ ಶಕ್ತಿಯ ದೊಡ್ಡ ಹರಿವು ಬರುವುದು ದೇಹದ ಸುತ್ತಲೂ ಮತ್ತು ವಿಶ್ವದಲ್ಲಿ ಸರ್ವವ್ಯಾಪಿಯಾಗಿರುವ ಅರಿವುಳ್ಳ ಬ್ರಹ್ಮಾಂಡ ಶಕ್ತಿಯಿಂದ….
ದೇಹವು [ಘನ] ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಹಲವಾರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ನಿಮ್ಮ ಇಚ್ಛೆಯನ್ನು ಪ್ರಚೋದಿಸುವ ಯಾವುದೇ ಆದರೂ ಅದು ತಕ್ಷಣವೇ ಶಕ್ತಿಯನ್ನು ಉತ್ಪಾದಿಸುತ್ತದೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಕಲಿಸುವ ಚೈತನ್ಯದಾಯಕ ವ್ಯಾಯಾಮಗಳು ಬ್ರಹ್ಮಾಂಡ ಮೂಲದಿಂದ ಶಕ್ತಿಯನ್ನು ಸೆಳೆಯಲು ಇಚ್ಛಾಶಕ್ತಿಯನ್ನು ಬಳಸುವ ಮತ್ತು ಆ ಶಕ್ತಿಯನ್ನು ದೇಹದಲ್ಲಿನ ಲಕ್ಷಗಟ್ಟಲೆ ಜೀವಕೋಶಗಳಿಗೆ ಇಚ್ಛಾಶಕ್ತಿಯ ಮೂಲಕ ವಿತರಿಸುವ ತತ್ವವನ್ನು ಆಧರಿಸಿದೆ.

ಅನುಪಯುಕ್ತ ಚಟುವಟಿಕೆಗಳು, ಅನಿಯಂತ್ರಿತ ಭಾವನೆಗಳು ಮತ್ತು ಅನುಚಿತ ಜೀವನ ಪದ್ಧತಿಗಳಲ್ಲಿ ಶಕ್ತಿಯು ನಿರಂತರವಾಗಿ ವ್ಯರ್ಥವಾಗುತ್ತದೆ. ನೀವು ಶಾಂತಿಯಿಂದಿರುವಾಗ ಸ್ವಲ್ಪವೇ ಶಕ್ತಿಯನ್ನು ಬಳಸುತ್ತೀರಿ, ಆದರೆ ನೀವು ಕೋಪಗೊಂಡಾಗ ಅಥವಾ ದ್ವೇಷಪೂರಿತರಾಗಿದ್ದಾಗ ಅಥವಾ ಅನ್ಯಥಾ ಭಾವನಾತ್ಮಕರಾಗಿದ್ದಾಗ, ಬಹಳ ಹೆಚ್ಚಿನ ಶಕ್ತಿಯನ್ನು ಬಳಸುತ್ತೀರಿ. ಸೂಕ್ಷ್ಮವಾದ ಯಂತ್ರವನ್ನು ಉಪಯೋಗಿಸುವಾಗ ಸರಿಯಾದ ಕಾಳಜಿ ಅಗತ್ಯ; ದೇಹ-ಯಂತ್ರವನ್ನು ಬಳಸುವಲ್ಲಿ ಅದೇ ಚಿಂತನೆಯನ್ನು ಅನ್ವಯಿಸಬೇಕಾಗುತ್ತದೆ….
ಆದ್ದರಿಂದ, ಚೈತನ್ಯದ ರಹಸ್ಯವೆಂದರೆ, ನಿಮ್ಮಲ್ಲಿರುವ ಶಕ್ತಿಯನ್ನು ಸಂರಕ್ಷಿಸುವುದು ಮತ್ತು ಇಚ್ಛಾಶಕ್ತಿಯಿಂದ ದೇಹಕ್ಕೆ ಹೊಸ ಶಕ್ತಿಯನ್ನು ತರುವುದು. ಹೇಗೆ?
ಮೊದಲನೆಯದಾಗಿ, ನೀವು ಸ್ವಸಂತೋಷದಿಂದ ವರ್ತಿಸಬೇಕು. ಒಂದು ಕೆಲಸವು, ಮಾಡಲು ಯೋಗ್ಯವಾಗಿದ್ದರೆ, ಅದನ್ನು ಸ್ವಸಂತೋಷದಿಂದ ಮಾಡುವುದು ಯೋಗ್ಯವಾಗಿದೆ. ನೀವು ಸ್ವಸಂತೋಷದಿಂದ ಕೆಲಸ ಮಾಡಿದಾಗ, ನಿಮ್ಮಲ್ಲಿ ಹೆಚ್ಚು ಶಕ್ತಿ ಇರುತ್ತದೆ, ಏಕೆಂದರೆ ನೀವು ಮಿದುಳಿನಲ್ಲಿ ಸಂಚಯವಾಗಿರುವುದನ್ನು ಸೆಳೆಯುವುದು ಮಾತ್ರವಲ್ಲದೆ, ದೇಹದೊಳಕ್ಕೆ ಹೆಚ್ಚಿನ ಪ್ರಮಾಣದ ವಿಶ್ವ ಶಕ್ತಿಯ ಹರಿವನ್ನೂ ಆಕರ್ಷಿಸುವಿರಿ….
ಶರೀರ ಬ್ಯಾಟರಿಯ ಭೌತಿಕ ಪೂರೈಕೆಯಿಂದ — ಅಂದರೆ ಆಹಾರ, ಆಮ್ಲಜನಕ ಮತ್ತು ಸೂರ್ಯನಿಂದ ಭಟ್ಟಿ ಇಳಿಸಿದ ಶಕ್ತಿಯಿಂದ ನಮ್ಮ ಕ್ರಿಯೆಗಳಿಗೆ ಹೆಚ್ಚಿನ ಶಕ್ತಿಯನ್ನು ನಾವು ಸೆಳೆದುಕೊಳ್ಳುತ್ತೇವೆ. ಇಚ್ಛೆಯ ಪ್ರಜ್ಞಾಪೂರ್ವಕ ಬಳಕೆಯ ಮೂಲಕ ನಾವು ಅದೃಶ್ಯ ಬ್ರಹ್ಮಾಂಡೀಯ ಮೂಲದಿಂದ ಸಾಕಷ್ಟು ಶಕ್ತಿಯನ್ನು ಸೆಳೆದುಕೊಳ್ಳುವುದಿಲ್ಲ.
ಇಚ್ಛೆ ಮತ್ತು ಶಕ್ತಿ ಜೊತೆಜೊತೆಗೇ ಹೋಗುತ್ತವೆ
ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುವ ಇಚ್ಛೆ ಮತ್ತು ಕಲ್ಪನೆಯ ನಡುವೆ ವ್ಯತ್ಯಾಸವಿದೆ. ಕಲ್ಪನೆ ಎನ್ನುವುದು ಒಬ್ಬ ವ್ಯಕ್ತಿಯು ಅಭಿವ್ಯಕ್ತಿಸಲು ಬಯಸುವ ಒಂದು ಪರಿಕಲ್ಪನೆಯಾಗಿದೆ.
ಹಗಲೂ ರಾತ್ರಿ ನಿಮ್ಮಲ್ಲಿ ಹೆಚ್ಚು ಚೈತನ್ಯವಿದೆ ಎಂಬ ಭಾವವನ್ನು ಊಹಿಸಿಕೊಳ್ಳುವುದರಿಂದ, ನೀವು ಸ್ವಲ್ಪ ಶಕ್ತಿಯನ್ನು ಪಡೆಯುತ್ತೀರಿ, ಏಕೆಂದರೆ ಊಹೆಗೆ ಅಲ್ಪಸ್ವಲ್ಪ ಇಚ್ಛೆಯ ಅಗತ್ಯವಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಒಬ್ಬ ವ್ಯಕ್ತಿಯು ಚೈತನ್ಯವನ್ನು ಇಚ್ಛಿಸಿದಾಗ, ಶಕ್ತಿಯು ವಾಸ್ತವದಲ್ಲಿ ತತ್‌ಕ್ಷಣವೇ ಬರುತ್ತದೆ.
ನೀವು ಕೋಪಗೊಂಡಿದ್ದೀರಿ ಮತ್ತು ಯಾರೋ ಒಬ್ಬರನ್ನು ಜೋರಾಗಿ ಹೊಡೆಯುತ್ತೀರಿ ಎಂದು ಭಾವಿಸೋಣ; ಭಾವನೆಯಿಂದ ಪ್ರಚೋದಿಸಲ್ಪಟ್ಟ ಇಚ್ಛೆಯು ಆ ಕ್ರಿಯೆಗೆ ಶಕ್ತಿಯನ್ನು ಸೆಳೆಯುತ್ತದೆ; ಆದರೆ ಅದಾದ ತಕ್ಷಣವೇ ಶಕ್ತಿಯ ಪೂರೈಕೆ ನಿಂತುಹೋಗುತ್ತದೆ ಮತ್ತು ನಿಮ್ಮ ಚೈತನ್ಯವು ಕ್ಷೀಣಿಸುತ್ತದೆ.
ಆದರೆ ನಿರಂತರವಾಗಿ ಸಕಾರಾತ್ಮಕವಾಗಿ ನೀವು ನಿಮ್ಮ ದೇಹಕ್ಕೆ ಶಕ್ತಿಯನ್ನು ಇಚ್ಛಿಸಿದರೆ ಮತ್ತು ಯೋಗದಾ ಸತ್ಸಂಗ ವ್ಯಾಯಾಮಗಳ ತತ್ವವನ್ನು ಅಂದರೆ ಪ್ರಜ್ಞಾಪೂರ್ವಕ ಪ್ರಾಣಶಕ್ತಿ ನಿಯಂತ್ರಣವನ್ನು ಬಳಸಿಕೊಂಡರೆ, ನೀವು ಇಚ್ಛಾಶಕ್ತಿಯ ಬಳಕೆಯಿಂದ, ಬ್ರಹ್ಮಾಂಡ ಮೂಲದಿಂದ ಅನಿಯಮಿತ ಶಕ್ತಿಯನ್ನು ಸೆಳೆಯಬಹುದು.
ಶರೀರವು ಕೇವಲ ಜೀವಕೋಶಗಳ ಸಮೂಹವಾಗಿರುವುದರಿಂದ, ಅದಕ್ಕೆ ಶಕ್ತಿಯ ಕೊರತೆಯಿದ್ದಾಗ, ನೀವು ಇಡೀ ದೇಹವನ್ನು ಇಚ್ಛಾಶಕ್ತಿಯಿಂದ ಚೈತನ್ಯಗೊಳಿಸಿದರೆ, ಆ ಜೀವಕೋಶಗಳು ತಕ್ಷಣವೇ ಮತ್ತು ನಿರಂತರವಾಗಿ ರೀಚಾರ್ಜ್ ಆಗುತ್ತವೆ. ಇಚ್ಛೆ ಎಂಬುದು ದಿವ್ಯ ಮೂಲದಿಂದ ಶರೀರಕ್ಕೆ ಹೆಚ್ಚಿನ ಶಕ್ತಿಗೆ ಆಸ್ಪದ ಕೊಡುವ ಸ್ವಿಚ್ ಆಗಿದೆ.
ಆದ್ದರಿಂದ ಯೌವನ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳಲು ಇಚ್ಛೆಯು ಪ್ರಬಲ ಅಂಶವಾಗಿದೆ. ನಿಮಗೆ ವಯಸ್ಸಾಯಿತು ಎಂದು ನಿಮಗೆ ನೀವೇ ಮನವರಿಕೆ ಮಾಡಿಕೊಂಡರೆ, ಇಚ್ಛೆಯು ನಿಷ್ಕ್ರಿಯವಾಗುತ್ತದೆ ಮತ್ತು ನೀವು ವೃದ್ಧರಾಗುತ್ತೀರಿ.
ನೀವು ದಣಿದಿದ್ದೀರಿ ಎಂದು ಎಂದಿಗೂ ಹೇಳಬೇಡಿ; ಅದು ಇಚ್ಛೆಯನ್ನು ನಿಷ್ಕ್ರಿಯಗೊಳಿಸುತ್ತದೆ; ಆಗ ನೀವು ದಣಿದವರಾಗುತ್ತೀರಿ. “ನನ್ನ ಶರೀರಕ್ಕೆ ವಿಶ್ರಾಂತಿ ಬೇಕು,” ಎಂದಷ್ಟೇ ಹೇಳಿ. ಶರೀರದ ಮಿತಿಗಳನ್ನು ಆತ್ಮದ ಮೇಲೆ ಹೇರಲು ಅವಕಾಶ ಕೊಡಬಾರದು. ಆತ್ಮವು ದೇಹವನ್ನು ಆಳಬೇಕು, ಏಕೆಂದರೆ ಆತ್ಮವು ದೇಹದಿಂದ ಉದ್ಭವಿಸುವುದೂ ಇಲ್ಲ ಅಥವಾ ಅದನ್ನು ಅವಲಂಬಿಸಿಯೂ ಇಲ್ಲ. ಆತ್ಮದ ಇಚ್ಛೆಯಲ್ಲಿ ಎಲ್ಲಾ ಶಕ್ತಿಯೂ ಅಡಗಿದೆ.
ಭಗವಂತ ಇಚ್ಛಿಸಿದ, ಮತ್ತು ಅಲ್ಲಿ ಬೆಳಕಿತ್ತು — ಸ್ವರ್ಗಗಳಾಗಿ, ನಮ್ಮ ಶರೀರಗಳಾಗಿ ಮತ್ತು ಇತರ ಎಲ್ಲ ರೂಪಗಳಾಗಿ ಸಾಂದ್ರೀಕೃತವಾದ ಬ್ರಹ್ಮಾಂಡೀಯ ಸೃಜನಶೀಲ ಶಕ್ತಿಯೇ ಬೆಳಕು. ಇಚ್ಛೆಯೇ ಬೆಳಕು, ಏಕೆಂದರೆ ಬೆಳಕು ಭಗವದಿಚ್ಛೆಯ ಪ್ರಥಮ ಅಭಿವ್ಯಕ್ತಿ. ಮತ್ತು ಈ ಬೆಳಕು ಅಥವಾ ವಿದ್ಯುಚ್ಛಕ್ತಿಯು ಜೀವಿಗಳನ್ನು ಸೃಷ್ಟಿಸಲು ಬೇಕಾದ ತೃಪ್ತಿದಾಯಕ ಘಟಕ ಎಂದು ಅವನು ಕಂಡುಕೊಂಡ.
ವಸ್ತುವು ಬೆಳಕೇ ಅಥವಾ ಬೆಳಕೇ ವಸ್ತುವೇ ಎಂದು ವಿಜ್ಞಾನಿಗಳು ವಿಚಾರ ಮಾಡುತ್ತಾರೆ. ಬೆಳಕು ಮೊದಲು ಬಂದಿತು ಮತ್ತು ಅದು ಭೌತವಸ್ತುವಿನ ಮೂಲ ರಚನೆಯ ಅಂಗಭೂತವಾಗಿದೆ.
ಆದ್ದರಿಂದ, ಶಕ್ತಿ ಮತ್ತು ಇಚ್ಛೆಗಳು ಜೊತೆಜೊತೆಗೇ ಇರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದು ತುಂಬಾ ಸರಳವಾದ ಸೂತ್ರ. ಶಕ್ತಿಯು ಭೌತಿಕ ಮೂಲಗಳಿಂದ ಮಾತ್ರ ಬರುತ್ತದೆ ಎಂಬ ಕಲ್ಪನೆಗೆ ನಾವು ಎಷ್ಟು ಒಗ್ಗಿಕೊಂಡಿರುವೆವೆಂದರೆ, ಇಚ್ಛೆಗೆ ತಕ್ಷಣವೇ ಪ್ರತಿಕ್ರಿಯಿಸುವಂತಹ ಬ್ರಹ್ಮಾಂಡೀಯ ಮೂಲವನ್ನು ನಂಬಲು ಮತ್ತು ಅದನ್ನು ಅವಲಂಬಿಸಲು ನಾವು ವಿಫಲರಾಗುತ್ತೇವೆ.
ಎಲ್ಲೆಯಿಲ್ಲದ ಬ್ರಹ್ಮಾಂಡೀಯ ಮೂಲದಿಂದ ನೇರವಾಗಿ ಶಕ್ತಿಯನ್ನು ಸೆಳೆಯುವ ಸಲುವಾಗಿ ನಿಮ್ಮ ಇಚ್ಛೆಯನ್ನು ಬಳಸಲು ಸಾಧ್ಯವಾಗುವಂತಹ ಯೋಗದಾ ಸತ್ಸಂಗ ವಿಧಾನವನ್ನು ನೀವು ಕಲಿತರೆ, ನೀವು ಮುಂದೆಂದೂ ಆಯಾಸದಿಂದ ಬಳಲುವುದಿಲ್ಲ.

ಪರಮಹಂಸ ಯೋಗಾನಂದರ ವೈಎಸ್ಎಸ್ ಚೈತನ್ಯದಾಯಕ ವ್ಯಾಯಾಮಗಳು ಮತ್ತು ಕ್ರಿಯಾ ಯೋಗ ಮಾರ್ಗದ ಭಾಗವಾಗಿ ಕಲಿಸಲಾಗುವ ಧ್ಯಾನದ ಸಂಪೂರ್ಣ ವಿಜ್ಞಾನವನ್ನು ಕಲಿಯುವ ಸಲುವಾಗಿ, ಯೋಗದಾ ಸತ್ಸಂಗ ಪಾಠಗಳ ಬಗ್ಗೆ ಓದಲು ಮತ್ತು ಅರ್ಜಿ ಸಲ್ಲಿಸುವುದನ್ನು ಪರಿಗಣಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ — ಇದು ಪರಮಹಂಸಜಿಯವರ ಸಮಗ್ರ ಗೃಹ-ಅಧ್ಯಯನ ಸರಣಿ, ಇದರಲ್ಲಿ ಅವರು ಶರೀರ, ಮನಸ್ಸು ಮತ್ತು ಆತ್ಮದಲ್ಲಿ ಚೈತನ್ಯ ಉಂಟುಮಾಡಲು ಮತ್ತು ಗರಿಷ್ಠ ಯೋಗಕ್ಷೇಮಕ್ಕಾಗಿ ಆಳವಾದ “ಬದುಕುವುದು-ಹೇಗೆ” ಬೋಧನೆಗಳನ್ನು ಹಂಚಿಕೊಳ್ಳುತ್ತಾರೆ.
“ಕ್ರಿಯಾಯೋಗದ ಸರಳವಾದ ಹಾಗೂ ಅಸ್ಖಲಿತವಾದ ಪದ್ಧತಿಗಳಿಂದ ಅನುಕ್ರಮವಾಗಿಯೂ ನಿರಂತರವಾಗಿಯೂ ಅಭ್ಯಾಸವನ್ನು ಹೆಚ್ಚಿಸುತ್ತಾ ಹೋಗುವುದರಿಂದ ಮಾನವನ ಶರೀರ ದಿನದಿಂದ ದಿನಕ್ಕೆ ಅಲೌಕಿಕವಾಗಿ ಮಾರ್ಪಟ್ಟು, ಕೊನೆಗೆ ಪರಮಾತ್ಮನ ವಿಶ್ವಾತ್ಮಕ ಶಕ್ತಿಯ ಅನಂತ ಸಾಧ್ಯತೆಗಳನ್ನು ವ್ಯಕ್ತಪಡಿಸಲು ಸಮರ್ಥವಾಗುತ್ತದೆ,” ಎಂದು ಅವರು ಯೋಗಿಯ ಆತ್ಮಕಥೆಯಲ್ಲಿ ಬರೆದಿದ್ದಾರೆ.