ಶ್ರೀ ದಯಾ ಮಾತಾ, 1955 ರಿಂದ 2010ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಸಂಘಮಾತಾ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಅವರ ಪುಸ್ತಕ “ಫೈಂಡಿಂಗ್ ದಿ ಜಾಯ್ ವಿದಿನ್ ಯು”ದಿಂದ ಆಯ್ದ ಭಾಗಗಳನ್ನು ಕೆಳಗೆ ನೀಡಲಾಗಿದೆ.
ಹೇಗೆ ಒಂದು ಗುಲಾಬಿಯು ಅದನ್ನು ಹೊಸಕಿದಾಗ ಪರಿಮಳವನ್ನು ನೀಡುತ್ತದೆಯೋ ಹಾಗೇ ಭಗವಂತನ ಒಬ್ಬ ಭಕ್ತನು ನಿರ್ದಯೆಯಿಂದ ತುಳಿಯಲ್ಪಟ್ಟರೂ ಪ್ರೇಮದ ಮಧುರ ಕಂಪನ್ನು ಹೊರಸೂಸುತ್ತಾನೆ ಎಂದು ಪರಮಹಂಸ ಯೋಗಾನಂದರು ಹೇಳುತ್ತಿದ್ದರು.
ಕ್ಷಮಾಪಣೆ ಅದರ ದಿವ್ಯ ಪ್ರೇಮದ ಅಪ್ಯಾಯಮಾನವಾದ ಕಂಪನದಿಂದ ಕೋಪ, ತಪ್ಪಿತಸ್ಥ ಮನೋಭಾವ ಮತ್ತು ದ್ವೇಷದ ಕೊರೆದು ಹಾಕುವ ತಳಮಳವನ್ನು ನಿಷ್ಪರಿಣಾಮಗೊಳಿಸುತ್ತದೆ. ದೋಷಯುಕ್ತ ಪ್ರಪಂಚದಲ್ಲಿ ಒಳ್ಳೆಯದು ಅನಿವಾರ್ಯವಾಗಿ ವಿರೋಧವನ್ನು ಸಂಧಿಸುವಂತಿರುವಾಗ, ಕ್ಷಮಾಪಣೆಯೇ ಭಗವದ್-ಪ್ರಜ್ಞೆಯ ಒಂದು ಅಭಿವ್ಯಕ್ತಿ.
ನಮ್ಮನ್ನು ತಪ್ಪಾಗಿ ನಡೆಸಿಕೊಂಡಾಗ, ನಮ್ಮನ್ನು ನೋಯಿಸಿದವನನ್ನು ನಿಂದಿಸುವ ಬದಲು ನಾವು ಮುಕ್ತವಾಗಿ ಅವನನ್ನು ಕ್ಷಮಿಸುತ್ತೇವೆ ಮತ್ತು ನಮ್ಮ ಪ್ರಜ್ಞೆಯ ಸ್ಲೇಟನ್ನು ಸ್ವಚ್ಛವಾಗಿ ಒರೆಸಿಬಿಡುತ್ತೇವೆ. ಇದರ ಪರಿಣಾಮವಾಗಿ ನಾವು ನಮಗೆ ಒಂದು ಅನುಗ್ರಹಿತ ಮನಃಶಾಂತಿಯನ್ನು ಗಳಿಸುತ್ತೇವೆ.
ಏಕೆ ಕೆಲವು ವೇಳೆ ಕ್ಷಮಿಸಿ ಮರೆತುಬಿಡುವುದು ಬಹಳ ಕಷ್ಟಸಾಧ್ಯ — ಸಂಪೂರ್ಣವಾಗಿ ಬಿಟ್ಟುಹಾಕುವುದು? ಮನುಷ್ಯನ ಅಹಂ ನ್ಯಾಯವನ್ನು ಬಯಸುತ್ತದೆ ಮತ್ತು ಅದನ್ನು ಸೇಡು ಅಥವಾ ಪ್ರತೀಕಾರದ ಮೂಲಕ ಅರಸುತ್ತದೆ; ನಿಂದಿಸುವುದರಿಂದ ಅದು ತಾನೇ ದೊಡ್ಡದು ಎಂದು ಭಾವಿಸುತ್ತದೆ. ಆದರೆ ಇದು ನಮಗೆ ಶಾಂತಿಯನ್ನು ತರುವುದಿಲ್ಲ.
ನಾವು ನೈಜ ಆತ್ಮದ ಮಾತನ್ನು ಕೇಳಿದರೆ — ಅಷ್ಟೇ ಸಾಕಾಗುತ್ತದೆ — “ಭಗವಂತನೇ, ಅವನನ್ನು ಆಶೀರ್ವದಿಸು,” ಎಂದು ಪ್ರಾರ್ಥಿಸಿ, ತಪ್ಪು ಮಾಡಿದವನ ಋಣವನ್ನು ತೀರಿಸಿದಾಗ ನಾವು ಎಷ್ಟೋ ಹೆಚ್ಚು ಸಂತೋಷವಾಗಿರುತ್ತೇವೆ. ಭಗವಂತ ಮತ್ತು ಇತರರು ಕೂಡ ನಮ್ಮ ತಪ್ಪುಗಳನ್ನು ಕ್ಷಮಿಸಬೇಕೆಂದು ನಾವು ಬಯಸುವುದಿಲ್ಲವೇ? “ಕ್ಷಮಿಸು ಆಗ ನಿನ್ನನ್ನು ಕ್ಷಮಿಸಲಾಗುತ್ತದೆ” ಎಂಬುದು ಭಗವಂತನ ನಿಯಮ.
ಹಿಂದು ಸದ್ಗ್ರಂಥಗಳಲ್ಲಿ ಬರೆಯಲಾಗಿದೆ: “ಯಾವುದೇ ನೋವಿನಲ್ಲೂ ಒಬ್ಬರು ಕ್ಷಮಿಸಬೇಕು…ಕ್ಷಮಾಪಣೆಯಿಂದ ಇಡೀ ವಿಶ್ವವೇ ಒಂದಾಗುತ್ತದೆ. ಕ್ಷಮಾಪಣೆ ಬಲಿಷ್ಠರ ಬಲ; ಕ್ಷಮಾಪಣೆ ತ್ಯಾಗ; ಕ್ಷಮಾಪಣೆ ಮನಸ್ಸಿನ ಪ್ರಶಾಂತತೆ. ಕ್ಷಮಾಪಣೆ ಮತ್ತು ಸೌಮ್ಯತೆ ಸ್ವಸ್ಥಚಿತ್ತನ ಗುಣಗಳು. ಅವು ನಿತ್ಯ ಸದ್ಗುಣಗಳನ್ನು ಪ್ರತಿಬಿಂಬಿಸುತ್ತವೆ.”
ಎಲ್ಲರಿಗೂ ಸಹಾನುಭೂತಿ ಮತ್ತು ಆರೋಗ್ಯಕರ ಪ್ರೇಮವನ್ನು ನೀಡುತ್ತಾ, ಈ ಆದರ್ಶದಿಂದ ಬದುಕಲು ಪ್ರಯತ್ನಿಸಿ. ಆಗ ನೀವು ನಿಮ್ಮ ಹೃದಯದೊಳಗೆ ಭಗವಂತನ ಸಕಲವನ್ನೂ ಅಪ್ಪಿಕೊಳ್ಳುವ ಪ್ರೇಮವನ್ನು ಮನಗಾಣುತ್ತೀರಿ.