“ನೈಜ ಧ್ಯಾನ ಮತ್ತು ಮಾನವಕೋಟಿಗೆ ಭರವಸೆ” ಸ್ವಾಮಿ ಚಿದಾನಂದ ಗಿರಿಯವರಿಂದ

10 ಜನವರಿ, 2023

ಇದು “ಭೌತ ಜಗತ್ತಿನಲ್ಲಿ ಜೀವಿಸುತ್ತ ದಿವ್ಯತೆಯೊಡನೆಯ ನಮ್ಮ ಸಂಬಂಧವನ್ನು ಉಳಿಸಿಕೊಂಡುಬರುವುದು” ಎಂಬ ವಿಷಯದ ಬಗ್ಗೆ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಶಿಪ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರೂ ಆದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ನೀಡಿದ ಉಪನ್ಯಾಸದ ಒಂದು ಆಯ್ದ ಭಾಗ. ಮುಂಬೈನಲ್ಲಿವೈಎಸ್‌ಎಸ್ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮದ ಕಡೆಯ ದಿನವಾದ ನವೆಂಬರ್‌ 10, 2019ರಂದು ಅವರು ನೀಡಿದ ಈ ಉಪನ್ಯಾಸದ ಸಂಪೂರ್ಣ ಭಾಗವನ್ನು ನಮ್ಮ ಯುಟ್ಯೂಬ್‌ ಚಾನೆಲ್‌ ನಲ್ಲಿ ನೋಡಬಹುದು.

ಈ ಆಯ್ದ ಭಾಗದ ಅರಂಭದಲ್ಲಿ, ಸ್ವಾಮಿ ಚಿದಾನಂದ ಗಿರಿಯವರು ಮುಂಬಯಿಯ ಕಾರ್ಯಕ್ರಮದಂತಹ ಕಾರ್ಯಕ್ರಮಗಳಲ್ಲಿಅನ್ವೇಷಕರು ಒಟ್ಟು ಸೇರಿದಾಗ, ಮತ್ತು ವಿಶೇಷವಾಗಿ ಈ ಉಪನ್ಯಾಸದ ಮುನ್ನಾ ದಿನದಿಂದ ಮಾಡಿದ ಹಾಗೆ ಒಟ್ಟುಗೂಡಿ ಆಳವಾಗಿ ಧ್ಯಾನ ಮಾಡಿದಾಗ ಸಂಭವಿಸುವ ನೈಜ ದಿವ್ಯ ಮಿತ್ರತ್ವದ ಬಗೆ ಉಲ್ಲೇಖಿಸಿದರು.

ಇಂತಹ ಕಿರು ಅವಧಿಯ ಕಾರ್ಯಕ್ರಮಗಳ ಕೊನೆಯಲ್ಲಿ ನಾವೆಲ್ಲಾ ಎಷ್ಟು ಹತ್ತಿರವಾಗಿದ್ದೇವೆ ಎಂದು ನಾನು ಸದಾ ಆಶ್ಚರ್ಯಚಕಿತನಾಗುತ್ತೇನೆ. ಇದು ಮುಂಬೈಗೆ ನನ್ನ ಮೊದಲ ಭೇಟಿ. ಇಲ್ಲಿಗೆ ಬರುವ ಮುನ್ನ ನಿಮ್ಮಲ್ಲಿ ಬಹಳಷ್ಟು ಜನರನ್ನು ನಾನೆಂದೂ ಹೊರಗಡೆ ಸಂಧಿಸಿರಲಿಲ್ಲ ಆದರೂ, ಈ ಮೂರು ದಿನಗಳಲ್ಲಿ, ದಿವ್ಯ ಸ್ನೇಹದ ಎಂತಹ ಮಧುರ ಬಂಧವು ರೂಪುಗೊಂಡಿದೆ ಎಂದು ಭಾವಿಸದಿರಲು ಸಾಧ್ಯವಿಲ್ಲ.

ನಾನು ಆ ರೀತಿ ಭಾವಿಸುತ್ತಿದ್ದೇನೆ; ಮತ್ತು ಬಹಳ ಪ್ರಬಲವಾಗಿ ಅಂತಹ ಬಾಂಧವ್ಯವು ರೂಪುಗೊಂಡಿದ್ದು ಮೂರು ಘಂಟೆಗಳ ಕಾಲ ನಾವೆಲ್ಲರೂ ಒಟ್ಟಿಗೆ ಧ್ಯಾನದಲ್ಲಿ ಕಳೆದಾಗ — ಆಧ್ಯಾತ್ಮಿಕ ಪ್ರಜ್ಞೆಯ ಆಧ್ಯಾತ್ಮಿಕ ಅನುಭವದ ಅದ್ಭುತವಾದ ಪುನಶ್ಚೈತನ್ಯಕಾರಿ ಒರತೆಯೊಳಗೆ ಆಳದಿಂದ ಆಳಕ್ಕೆ ಧುಮುಕಿದಾಗ.

ನಾವು ಒಟ್ಟಾಗಿ ಧ್ಯಾನ ಮಾಡಿದಾಗ ನಮ್ಮ ಬೌದ್ಧಿಕ ಅಥವಾ ನಮ್ಮ ಭಾವನೆಗಳಿಗಿಂತ ಹೆಚ್ಚು ಆಳವಾದ ಸ್ತರದಲ್ಲಿ ಒಂದು ಆಧ್ಯಾತ್ಮಿಕ ಬಾಂಧವ್ಯವನ್ನು ರೂಪಿಸಿಕೊಳ್ಳುತ್ತೇವೆ; ಆದ್ದರಿಂದಲೇ ನಾನು ಹೇಳುವುದು, ತುಲನಾತ್ಮಕವಾಗಿ ಹೇಳುತ್ತಾ, ಬಾಹ್ಯದೃಷ್ಟಿಯಲ್ಲಿ ನಾವು ಒಟ್ಟಿಗೆ ಸ್ವಲ್ಪ ಸಮಯವನ್ನೇ ಕಳೆದಿದ್ದರೂ, ಆಂತರಿಕವಾಗಿ ಆ ಸಂಪರ್ಕದ ಗುಣಮಟ್ಟ, ಆಳ ಮತ್ತು ತೀವ್ರತೆ ನಮ್ಮೆಲ್ಲರನ್ನು ದಿವ್ಯ ಮಿತ್ರತ್ವದ ಒಂದು ಸ್ಪಷ್ಟ ಮತ್ತು ಬಹಳ ನೈಜ ಬಾಂಧವ್ಯದಲ್ಲಿ ಒಂದುಗೂಡಿಸಿದೆ. ನಿಮ್ಮ ಜೊತೆಯಲ್ಲಿ ನಾನು ಕಳೆದ ಈ ದಿನಗಳನ್ನು ನಾನೆಂದೂ ಮರೆಯಲಾರೆ.

ಧ್ಯಾನವು ಹೇಗೆ ವೈಯಕ್ತಿಕ ಆತ್ಮಗಳ ನಡುವೆ ಒಂದು ಆಧ್ಯಾತ್ಮಿಕ ಬಾಂಧವ್ಯವನ್ನು ಬೆಸೆಯುತ್ತದೆ ಎಂಬ ಒಂದು ಕುತೂಹಲಕಾರಿಯಾದ ಸಂಗತಿಯನ್ನು ಇಲ್ಲಿ ಹೇಳಬೇಕಾಗುತ್ತದೆ. ಏಕೆಂದರೆ, ನಾವು ಆಂತರ್ಯದೊಳಗೆ ಹೋಗಿ ನಮ್ಮ ಆತ್ಮದ ಅರಿವನ್ನು ಸಂಪರ್ಕಿಸಿದಾಗ, ಮತ್ತು ನಾವು ಅದನ್ನು ಇತರ ಆತ್ಮಗಳ ಜೊತೆಯಲ್ಲಿ ಮಾಡುತ್ತೇವೆ — ಕನಿಷ್ಠ ಪಕ್ಷ ಅಲ್ಪ ಸಮಯದವರೆಗಾದರೂ, ಆತ್ಮದ ಉಚ್ಚ ಸ್ತರದ ಪ್ರಜ್ಞೆಯಲ್ಲಿ ನಾವೆಲ್ಲರೂ ಒಟ್ಟುಗೂಡಿ ಸಾಧನೆ ಮಾಡಿದಾಗ — ತಾನೇ ತಾನಾಗಿ ನಾವು ನಮ್ಮಲ್ಲಿ ಪ್ರೇಮವನ್ನು ಬೆಳೆಸಿಕೊಳ್ಳುತೇವೆ; ಹಾಗೆಯೇ ನಾವು ಗೌರವ ಮತ್ತು ಕೃತಜ್ಞತೆಯನ್ನೂ, ಬೆಳೆಸಿಕೊಳ್ಳುತ್ತೇವೆ. ಅದು ಅತ್ಯಂತ ಆಳವಾದ ಮಧುರ ಮಿತ್ರತ್ವವಾಗುತ್ತದೆ. ಯಾಕೆ ಇದು ಈಗ ಈ ಸಮಯಗಳಲ್ಲಿ ವಿಶೇಷವಾಗಿ ಬಹಳ ಮಹತ್ವವುಳ್ಳದ್ದಾಗುತ್ತದೆ?

“ಮಾನವ ಕೋಟಿಯ ನಿರೀಕ್ಷೆ”

ಇಂದಿನ ಜಗತ್ತಿನ ಸುತ್ತಮುತ್ತ ನೋಡಿ. ಎಂತಹ ಸಂಘರ್ಷಗಳು ನಮ್ಮಲ್ಲಿವೆ; ಎಂತಹ ಭಿನ್ನಭಿನ್ನವಾದ ಅಭಿರುಚಿಗಳು ಮತ್ತು ಅಭಿಪ್ರಾಯಗಳು ಮತ್ತು ಉದ್ದೇಶಗಳು ನಮ್ಮಲ್ಲಿವೆ. ಪ್ರಪಂಚವು ಜನರೊಡನೆ ಹೊಂದಿಕೊಂಡು ಹೋಗುವಂತಹ ಒಂದು ಸರಳವಾದ ಜಾಗವಲ್ಲ. ಆಧ್ಯಾತ್ಮಿಕ ಪ್ರಗತಿಯಿಂದ ಅಥವಾ ಮಾನವ ಜನಾಂಗದ ಹಂತ ಹಂತವಾದ ವಿಕಾಸದಿಂದ, ಒಂದು ಹಂತದಲ್ಲಿ ನಾವೆಲ್ಲರೂ ಸೋದರ-ಸೋದರಿಯರಾಗಿ ಒಟ್ಟಿಗೆ ಬದುಕಲು ಸಾಧ್ಯವಾಗುತ್ತದೆ ಎಂಬ ಪರಿಕಲ್ಪನೆಯನ್ನು ನಾವು ಹೊಂದಿದ್ದೇವೆ. ಇದು ವೇದದ ಸದ್ಗ್ರಂಥಗಳ ಒಂದು ಪುರಾತನ ಆದರ್ಶ, ಅಂದರೆ ಜಗತ್ತು ಒಂದೇ ಕುಟುಂಬದಂತೆ – ವಸುಧೈವ ಕುಟುಂಬಕಂ.

ನಾವೆಲ್ಲರೂ ಭಗವಂತನ ಮಕ್ಕಳು. ನಾವೆಲ್ಲರೂ ಅದೇ ಸಾಮರಸ್ಯದಲ್ಲಿ, ಅದೇ ಪ್ರಶಾಂತತೆಯಲ್ಲಿ ಜೀವಿಸಬೇಕು. ಆದರೆ ನನಗೆ ಮನವರಿಕೆಯಾಗಿದೆ — ಮತ್ತು ನಮ್ಮ ಗುರುಗಳೂ ಇದನ್ನು ಮತ್ತೆ ಮತ್ತೆ ಹೇಳಿದಂತೆ — ಆಳವಾದ, ದಿನನಿತ್ಯದ ಧ್ಯಾನವು ಸಮಾಜವನ್ನು ಒಳವ್ಯಾಪಿಸುವವರೆಗೂ ಈ ಆದರ್ಶವು ಸದಾ ಸಾಧಿಸಲಾಗದದ್ದೇ ಅಗಿರುತ್ತದೆ.

ಯಾವಾಗ ಹೆಚ್ಚು ಹೆಚ್ಚು ಜನರು ಧ್ಯಾನದ ಮೂಲಕ ಭಗವಂತನನ್ನು ಆಂತರ್ಯದಲ್ಲಿ ಮನಗಾಣಲು ಪ್ರಯತ್ನಿಸುತ್ತಾರೋ ಆಗ ಮಾತ್ರ, ನಾವು ಅ ದೈವೀ ಕಿಡಿಯನ್ನು, ದಿವ್ಯ ಸತ್ವವನ್ನು, ಭಗವಂತನ ಉಪಸ್ಥಿತಿಯನ್ನು ಇತರ ಎಲ್ಲ ಆತ್ಮಗಳಲ್ಲಿ ಗ್ರಹಿಸುವ ಸಾಮರ್ಥ್ಯವನ್ನು ಹೊಂದುತ್ತೇವೆ. “ಅದೇ ವಸುಧೈವ ಕುಟುಂಬಕಂ”ನ ಅಸ್ತಿತ್ವ, ಮನುಷ್ಯನ ಭ್ರಾತೃತ್ವದ ಅಸ್ತಿತ್ವ. ಅದೊಂದೇ ಜಾಗತಿಕ ಶಾಂತಿಗೆ ಶಾಶ್ವತ ಭರವಸೆಯ ವಾಸ್ತವಿಕ ಆಧಾರವಾಗಿದೆ.

ನಿಮ್ಮಲ್ಲಿ ಪ್ರತಿಯೊಬ್ಬರೂ ಧ್ಯಾನದ ಅಭ್ಯಾಸವನ್ನು ರೂಪಿಸಿಕೊಳ್ಳಲು ಬದ್ಧರಾಗಿರುವಿರಿ, ನಿಜವಾಗಿಯೂ ಧ್ಯಾನ ಮಾಡುವ ದಿನಚರಿಗೆ — ಕೇವಲ ನೀವು ಮೌನವಾಗಿ ಕುಳಿತು ಮನಸ್ಸು ಅತ್ತಿತ್ತ ಹೋಗುವಂತೆ ಮಾಡುವುದಲ್ಲ, ಬದಲಾಗಿ ಯೋಗ ಧ್ಯಾನದ ಈ ಉಚ್ಚ ತಂತ್ರಗಳನ್ನು ಉಪಯೋಗಿಸುತ್ತ ಆಳವಾದ, ಶಿಸ್ತುಬದ್ಧವಾದ ಮತ್ತು ಕೇಂದ್ರಿತ ರೀತಿಯಲ್ಲಿ.

ಈ ಮಾರ್ಗದಲ್ಲಿರುವ ನೀವು ಮತ್ತು ದಿವ್ಯ ಪ್ರಜ್ಞೆಯಲ್ಲಿ ಧುಮುಕುವ ಆಂತರಿಕ ಶ್ರಮವನ್ನು ಹಾಕುವಂತಹ ಅಭ್ಯಾಸ ಮಾಡುವ ಇತರ ಮಾರ್ಗಗಳಲ್ಲಿರುವವರು — ನೀವೇ ಮಾನವಕೋಟಿಯ ಭರವಸೆ.

ಈಗ, ಒಟ್ಟಿಗೆ ಇದ್ದ ಈ ದಿನಗಳ ನಂತರ, ನಾವು ಆತ್ಮಗಳಾಗಿ ಅದ್ಭುತ ಬಾಂಧವ್ಯವನ್ನು ಹೊಂದಿದ್ದೇವೆ; ನಾವು, ಪ್ರಾಯಶಃ, ನಮ್ಮ ಪ್ರತಿಯೊಬ್ಬರ ಒಳಗೂ ಇರುವ ಆಧ್ಯಾತ್ಮಿಕ ಸತ್ವವು ಏನನ್ನು ಹೊಂದಿದೆ ಎಂಬುದರ ಬಗ್ಗೆ ಒಂದು ನವೀಕರಿಸಿದ ನಿಶ್ಚಿತಾಭಿಪ್ರಾಯ ಮತ್ತು ಗ್ರಹಿಕೆಯನ್ನು ಹೊಂದಿದ್ದೇವೆ. ನಮ್ಮ ಆತ್ಮಗಳ ಸ್ತರದಲ್ಲಿ ನಾವು ನಿತ್ಯರು, ಅಮರರು, ಸದಾ ಪರಿಪೂರ್ಣರು ಮತ್ತು ದಿವ್ಯರು ಆಗಿದ್ದರೂ, ನಾವು ಈ ಭೌತ ಶರೀರಗಳಲ್ಲಿ ಬದುಕುತ್ತಿದ್ದೇವೆ ಮತ್ತು ಈ ಭೌತ ಶರೀರಗಳು ಒಂದು ಭೌತ ಪ್ರಪಂಚದಲ್ಲಿ ಬದುಕುತ್ತಿವೆ.

ಅದೇ ನಮ್ಮ ಸವಾಲು: ಧ್ಯಾನ ಮತ್ತು ಆಧ್ಯಾತ್ಮಿಕ ಅನಾವರಣದಲ್ಲಿ ಸಿಧ್ದಿಸುವ ನಮ್ಮ ದಿವ್ಯ ಸತ್ವದ ಗ್ರಹಿಕೆಯನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಮತ್ತು ಅದಕ್ಕೇ ಹೇಗೆ ಪಟ್ಟಾಗಿ ಆತುಕೊಳ್ಳುವುದು; ಭೌತ ಪ್ರಪಂಚದಲ್ಲಿ ಬದುಕುತ್ತಿದರೂ ಸಹ ಆ ಸಂಪರ್ಕವನ್ನು ಹೇಗೆ ಕಾಪಾಡಿಕೊಂಡು ಬರುವುದು.

ಈ ಉಪನ್ಯಾಸದ ವೀಡಿಯೋ ನಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಕೂಡ ಲಭ್ಯವಿದೆ

ಇದನ್ನು ಹಂಚಿಕೊಳ್ಳಿ