ಪರಮಹಂಸ ಯೋಗಾನಂದರಿಂದ “ಯೋಗವು ಮೊದಲು ಭಗವಂತನನ್ನು ಅರಸಲು ಕಲಿಸುತ್ತದೆ — ಮತ್ತು ಎಲ್ಲದರಲ್ಲೂ ಸಮತೋಲನವನ್ನು ಕಂಡುಕೊಳ್ಳಲು ಕಲಿಸುತ್ತದೆ”

ಜುಲೈ 11, 1940 ರಲ್ಲಿ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್ ಅಂತರರಾಷ್ಟ್ರೀಯ ಕೇಂದ್ರ ಕಾರ್ಯಾಲಯದಲ್ಲಿ ನೀಡಲಾದ “ಯಶಸ್ಸಿಗೆ ಗಮನ ಶಕ್ತಿಯ ಕೇಂದ್ರೀಕರಣ” ಎಂಬ ಉಪನ್ಯಾಸದಿಂದ ಆಯ್ದ ಭಾಗಗಳು. ಪೂರ್ಣ ಉಪನ್ಯಾಸವನ್ನು ವೈಎಸ್ಎಸ್‌ನಿಂದ ಪ್ರಕಟಿತವಾದ ಪರಮಹಂಸಜಿಯವರ ಉಪನ್ಯಾಸಗಳು ಮತ್ತು ಪ್ರಬಂಧಗಳು ಇದರ ಮೂರನೇ ಸಂಪುಟವಾದ ಜರ್ನಿ ಟು ಸೆಲ್ಫ್-ರಿಯಲೈಝೇಷನ್ ನಲ್ಲಿ ಕಾಣಬಹುದು.

ಯೋಗದ ಬೋಧನೆಯು ಪ್ರಪಂಚದಲ್ಲಿನ ನಿಮ್ಮ ಕರ್ತವ್ಯಗಳಿಂದ ನೀವು ಪಲಾಯನ ಮಾಡಬೇಕೆಂದು ಹೇಳುವುದಿಲ್ಲ. ಈ ಪ್ರಪಂಚದಲ್ಲಿ ಭಗವಂತನು ನಿಮ್ಮನ್ನು ಯಾವ ಸ್ಥಾನದಲ್ಲಿಟ್ಟಿರುವನೋ ಅದರಲ್ಲಿ ನಿಮ್ಮ ಪಾಲಿನದನ್ನು ನೀವು ಮಾಡುವಾಗ ಭಗವಂತನ ಚಿಂತನೆಯನ್ನೇ ತುಂಬಿಕೊಂಡಿರಿ ಎಂದು ಅದು ಹೇಳುತ್ತದೆ.

ಕರ್ತವ್ಯಗಳಿಂದ ಬಿಡುಗಡೆ ಹೊಂದಿದ ಸ್ವಾತಂತ್ರ್ಯದಲ್ಲಿ ಭಗವಂತನನ್ನು ಕಾಣುತ್ತೇವೆಂದು ಯೋಚಿಸಿ, ನೀವು ಕಾಡಿನಲ್ಲಿಯೋ ಅಥವಾ ಪರ್ವತದಲ್ಲಿಯೋ ಏಕಾಂತ ಜೀವನವನ್ನು ಆಶಿಸಿದರೆ, ನೀವು ಪ್ರತಿದಿನ, ಇಡೀ ದಿನವೂ ಕುಳಿತು ಧ್ಯಾನ ಮಾಡುವ ಸದೃಢ ಇಚ್ಛಾಶಕ್ತಿಯನ್ನು ಹೊಂದಿರಬೇಕಾಗುತ್ತದೆ.

ನಿಜವಾಗಿಯೂ ಆ ಸಾಧನೆಯು ಶ್ಲಾಘನೀಯವಾದುದೇ. ಆದರೂ ಈ ಪ್ರಪಂಚದಲ್ಲಿದ್ದು ಅದಕ್ಕಂಟಿಕೊಳ್ಳದೆ, ಭಗವಂತನಲ್ಲಿ ಚಿತ್ತವಿರಿಸಿ, ಇತರರ ಒಳಿತಿಗಾಗಿ ನಿಮ್ಮ ನೈಜ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವುದು ಬಹಳ ಶ್ರೇಷ್ಠವಾದುದು. “ಕರ್ತವ್ಯಗಳನ್ನು ಸುಮ್ಮನೆ ಬಿಟ್ಟುಬಿಡುವುದರಿಂದ, ಯಾರೂ ಪೂರ್ಣತ್ವದ ಗುರಿ ಮುಟ್ಟಲು ಸಾಧ್ಯವಿಲ್ಲ….ಹೇ ಅರ್ಜುನಾ, ಯೋಗದಲ್ಲಿಯೇ ಮಗ್ನನಾಗಿ, ಮೋಹವನ್ನು ತ್ಯಜಿಸಿ ಎಲ್ಲ ಕಾರ್ಯಗಳನ್ನೂ ನಿರ್ವಹಿಸು (ಅವುಗಳ ಫಲದ)” (ಭಗವದ್ಗೀತೆ III:4 ಮತ್ತು II:48).

ಹೆಚ್ಚು ಮಹತ್ವದ ಮತ್ತು ಕಡಿಮೆ ಪ್ರಾಧಾನ್ಯತೆಯ ಕರ್ತವ್ಯಗಳಾವವು ಎಂದು ವಿವೇಚನೆಯಿಂದ ಪರ್ಯಾಲೋಚಿಸಬೇಕು. ಹಾಗೂ ಒಂದು ಕರ್ತವ್ಯವು ಇನ್ನೊಂದನ್ನು ವಿರೋಧಿಸುವಂತಾಗಲು ಬಿಡಬೇಡಿ. ಸಂಸ್ಕೃತದ ಸದ್ಗ್ರಂಥಗಳಲ್ಲಿ ಒಂದು ದೈವೀ ನಿಯಮವಿದೆ, ಇದು ಜಗತ್ತಿಗೆ ನೀಡಲಾದ ಬಹು ಸೊಗಸಾದ ನಿಯಮಗಳಲ್ಲೊಂದು: “ಒಂದು ಕರ್ತವ್ಯವು ಇನ್ನೊಂದು ಕರ್ತವ್ಯವನ್ನು ವಿರೋಧಿಸಿದರೆ, ಅದು ನಿಜವಾದ ಕರ್ತವ್ಯವಾಗುವುದಿಲ್ಲ.”

ನೀವು ನಿಮ್ಮ ಆರೋಗ್ಯವನ್ನು ಲೆಕ್ಕಿಸದೆ ಹಣಕಾಸಿನ ಸಂಬಂಧದ ಯಶಸ್ಸನ್ನು ಪಡೆಯಲು ಪ್ರಯತ್ನಿಸಿದರೆ, ನೀವು ನಿಮ್ಮ ದೇಹದ ಬಗೆಗಿನ ಕರ್ತವ್ಯವನ್ನು ನೆರವೇರಿಸುತ್ತಿಲ್ಲವೆಂದಾಗುತ್ತದೆ. ನೀವು ನಿಮ್ಮ ಪ್ರಾಪಂಚಿಕ ಜವಾಬ್ದಾರಿಗಳನ್ನು ಉಪೇಕ್ಷಿಸುವಷ್ಟು ಮತಶ್ರದ್ಧೆಯ ವಿಷಯದಲ್ಲಿ ಅತೀ ಉತ್ಸಾಹಿತರಾದರೆ, ನೀವು ಸಮತೋಲನ ಉಳ್ಳವರಾಗಿ ಇರುವುದಿಲ್ಲ; ಆಗ ನೀವು ಒಂದು ಕರ್ತವ್ಯಕ್ಕೆ, ನಿಮ್ಮ ದೇಹ ಮತ್ತು ಕುಟುಂಬದ ಅವಶ್ಯಕತೆಗಳಿಗೆ ಸಂಬಂಧಿಸಿದ ಕರ್ತವ್ಯವನ್ನು ವಿರೋಧಿಸಲು ಆಸ್ಪದ ಕೊಟ್ಟಂತಾಗುತ್ತದೆ. ನೀವು ನಿಮ್ಮ ಕುಟುಂಬ ಹಿತದ ಸಂಭ್ರಮಗಳಿಗೆ ನಿಮ್ಮೆಲ್ಲ ಗಮನವನ್ನೂ ಹರಿಸಿದ್ದರಿಂದಾಗಿ ಭಗವಂತನ ಬಗೆಗಿನ ನಿಮ್ಮ ಕರ್ತವ್ಯ ದೃಷ್ಟಿಯನ್ನು ಕಳೆದುಕೊಂಡರೆ ಅದು ಕರ್ತವ್ಯಚ್ಯುತಿಯಾಗುತ್ತದೆ.

ಅನೇಕರು ಕೇಳುತ್ತಾರೆ, “ನಮ್ಮ ಪ್ರಾಪಂಚಿಕ ಅವಶ್ಯಕತೆಗಳನ್ನು ಪೂರೈಸುವುದಕ್ಕೋಸ್ಕರ ನಾವು ಮೊದಲು ಐಹಿಕ ಯಶಸ್ಸನ್ನು ಸಂಪಾದಿಸಿಕೊಂಡು, ನಂತರ ಭಗವಂತನನ್ನು ಅನ್ವೇಷಿಸಬೇಕೇ? ಅಥವಾ ನಾವು ಮೊದಲು ಭಗವಂತನನ್ನು ಹೊಂದಿ ನಂತರ ಯಶಸ್ಸಿಗೆ ಪ್ರಯತ್ನಿಸಬೇಕೇ” ನಿಶ್ಚಯವಾಗಿಯೂ, ಭಗವಂತನನ್ನು ಹೊಂದುವುದೇ ಮೊದಲು ಆಗಬೇಕು. ನೀವು ಗಾಢವಾಗಿ ಧ್ಯಾನದಲ್ಲಿ ಭಗವಂತನನ್ನು ಸಂಪರ್ಕಿಸದೆ ಎಂದಿಗೂ ನಿಮ್ಮ ದಿನಚರಿಯನ್ನು ಆರಂಭಿಸಬೇಡಿ ಅದಿಲ್ಲದೆ ಕೊನೆಗೊಳಿಸಲೂ ಬೇಡಿ.

ಭಗವಂತನ ಶಕ್ತಿಯನ್ನು ಎರವಲು ತಾರದೆ ನಾವು ಯಾವ ಕರ್ತವ್ಯವನ್ನೂ ನಿರ್ವಹಿಸಲಾರೆವು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಆದ್ದರಿಂದ ನಮ್ಮ ಮೊದಲ ನಿಷ್ಠೆಯು ಅವನಿಗೇ ಸಲ್ಲಬೇಕಾಗಿದೆ….

ಭಗವಂತನ ಅನ್ವೇಷಣೆ ಮತ್ತು ಪ್ರಾಪಂಚಿಕ ಆಸೆಗಳ ಕೈಗೂಡಿಕೆ ಇವೆರಡರ ಬಗ್ಗೆ ಏಕಕಾಲದಲ್ಲಿ ಮಾತನಾಡುವುದು ಸರಿ ಎಂಬಂತೆ ತೋರುತ್ತದೆ; ಆದರೆ ಮೊದಲು ಭಗವಂತನಲ್ಲಿ ನಿಮ್ಮ ಪ್ರಜ್ಞೆಯನ್ನು ಪೂರ್ಣ ಶ್ರದ್ಧೆಯಿಂದ ಇಡಲು ನೀವು ಗಾಢವಾಗಿ ಮತ್ತು ನಿಯಮಬದ್ಧವಾಗಿ ಧ್ಯಾನಿಸದ ಹೊರತು ಪ್ರಪಂಚವು ನಿಮ್ಮೆಲ್ಲ ಗಮನವನ್ನೂ ತನ್ನ ಹಕ್ಕು ಸಾಧಿಸಿ ಸೆಳೆದುಕೊಂಡುಬಿಡುತ್ತದೆ ಹಾಗೂ ಭಗವಂತನಿಗೋಸ್ಕರ ನಿಮಗೆ ಸಮಯವೇ ಇಲ್ಲದಂತಾಗುತ್ತದೆ.

ಭಗವಂತನು ನಿಮ್ಮೊಡನಿದ್ದಾನೆಂಬ ಪ್ರಜ್ಞೆ ಇಲ್ಲದೇ ಇದ್ದರೆ, ನಿಮ್ಮ ಐಹಿಕ ಕರ್ತವ್ಯಗಳು ಸಾಮಾನ್ಯವಾಗಿ ಚಿತ್ರಹಿಂಸಾತ್ಮಕ ವಿಧಾನಗಳಾಗಿ ಪರಿಣಮಿಸುತ್ತವೆ. ಆದರೆ ಎಲ್ಲ ಕಾಲದಲ್ಲಿಯೂ ನಿಮ್ಮೊಂದಿಗೆ ಭಗವಂತನನ್ನು ಹೊಂದಿದ್ದರೆ, ನಿಮ್ಮ ಕರ್ತವ್ಯಗಳನ್ನು ಭಗವಂತನ ಪ್ರಜ್ಞೆಯಿಂದ ಮಾಡಿದಾಗ, ನೀವು ಅತ್ಯಂತ ಸುಖಿಯಾದ ವ್ಯಕ್ತಿಯಾಗಬಲ್ಲಿರಿ. “ಅವರ ಯೋಚನೆಗಳು ಪೂರ್ಣವಾಗಿ ನನ್ನ ಮೇಲೇ ಇದ್ದು, ಅವರ ಅಸ್ತಿತ್ವಗಳು ನನಗೇ ಸಮರ್ಪಿಸಲ್ಪಟ್ಟು, ಒಬ್ಬರು ಇನ್ನೊಬ್ಬರಿಗೆ ತಿಳುವಳಿಕೆ ಕೊಡುತ್ತ, ಸತತವೂ ನನ್ನ ವಿಷಯವನ್ನೇ ಹೇಳಿಕೊಳ್ಳುತ್ತ, ನನ್ನ ಭಕ್ತರು ತೃಪ್ತರು ಮತ್ತು ಸುಖಿಗಳಾಗಿರುತ್ತಾರೆ.” (ಭಗವದ್ಗೀತೆ X:9)

ನನಗೆ ಆ ದಿವ್ಯ ಪ್ರಜ್ಞೆಯನ್ನು ಕೊಟ್ಟಿದ್ದ ನನ್ನ ಗುರು ಸ್ವಾಮಿ ಶ್ರೀ ಯುಕ್ತೇಶ್ವರರ ತರಬೇತಿಯನ್ನು ನಾನು ಹೊಂದದೇ ಇದ್ದಿದ್ದರೆ, ಜನರಿಗೆ ಸಹಾಯ ಮಾಡಲು ಮತ್ತು ಈ ಕಾರ್ಯವನ್ನು ವರ್ಧಿಸಲು ಪ್ರಯತ್ನಪಡುವಾಗ, ಕೆಲವು ವೇಳೆ ಸಹಕಾರದ ಬದಲು ಪೆಟ್ಟನ್ನೇ ಪಡೆಯುತ್ತ, ಬಹಳ ಹಿಂದೆಯೇ ನಾನು ಧೈರ್ಯವನ್ನು ಕಳೆದುಕೊಂಡಿರುತ್ತಿದ್ದೆ….

ಸಕಲ ಶಾಸ್ತ್ರಗಳೂ ಬೋಧಿಸುವುದೇನೆಂದರೆ: “ನೀನು ಮೊದಲು ಭಗವಂತನ ಸಾಮ್ರಾಜ್ಯವನ್ನು ಅನ್ವೇಷಿಸು” (ಮ್ಯಾಥ್ಯೂ 6:33, ಬೈಬಲ್). ಆದರೆ ಜನರು ತಾವು ಅಧ್ಯಯನ ಮಾಡಿದ ಆಧ್ಯಾತ್ಮಿಕ ತತ್ತ್ವಗಳನ್ನೂ ಅಥವಾ ಮಂದಿರಗಳಲ್ಲಿ ಅದರ ಬಗ್ಗೆ ಕಿವಿಯಾರೆ ಕೇಳಿದ್ದನ್ನೂ ತಮ್ಮ ನಿತ್ಯ ಜೀವನದಿಂದ, ಅದೇ ಬೇರೆ, ಇದೇ ಬೇರೆ ಎಂದು ಹೇಗೆ ಪ್ರತ್ಯೇಕಿಸುತ್ತಾರೆ ನೋಡಿ. ನೀವು ಸತ್ಯದ ತತ್ತ್ವಗಳನ್ನು ಅನುಷ್ಠಾನ ಮಾಡುತ್ತ ಅವನ್ನು ಅಳವಡಿಸಿಕೊಂಡಾಗ, ನೀವು ಎಲ್ಲ ಆಧ್ಯಾತ್ಮಿಕ, ಮಾನಸಿಕ ಮತ್ತು ಭೌತಿಕ ನಿಯಮಗಳ ಔಚಿತ್ಯವನ್ನು ಅರಿಯುವಿರಿ.

ಶಾಸ್ತ್ರ ಗ್ರಂಥಗಳನ್ನು ಮೇಲೆ ಮಾತ್ರ ಅಧ್ಯಯನ ಮಾಡಿದರೆ, ನೀವು ಅವುಗಳಿಂದ ಯಾವ ಫಲವನ್ನೂ ಪಡೆಯುವುದಿಲ್ಲ. ಆದರೆ ಸತ್ಯದ ಬಗ್ಗೆ ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ, ಹಾಗೂ ಅಧ್ಯಯನ ಮಾಡಿದುದನ್ನು ನಿಜವಾಗಿಯೂ ನಂಬಿದರೆ, ಆ ಸತ್ಯಗಳು ನಿಮಗಾಗಿ ಸಾರ್ಥಕವಾಗಿ ಕೆಲಸ ಮಾಡುತ್ತವೆ. ನೀವು ನಂಬಲು ಆಶಿಸಬಹುದು; ಆದರೆ ನೀವು ನಿಜವಾಗಿಯೂ ನಂಬಿದರೆ, ಅದರ ಫಲ ಕೂಡಲೆ ಪ್ರಾಪ್ತವಾಗಿಯೇ ಆಗುವುದು.

ನಂಬಿಕೆಯಲ್ಲಿ ವಿವಿಧ ಶ್ರೇಣಿಗಳಿವೆ. ಕೆಲವರು ನಂಬುವುದೇ ಇಲ್ಲ. ಕೆಲವರು ನಂಬಲು ಇಚ್ಛಿಸುವರು, ಇನ್ನು ಕೆಲವರು ಅಲ್ಪ ಸ್ವಲ್ಪ ನಂಬುತ್ತಾರೆ ಹಾಗೂ ಮತ್ತೆ ಕೆಲವರು ಅವರ ನಂಬಿಕೆಯು ಪರೀಕ್ಷೆಗೆ ಒಳಪಡುವವರೆಗೂ ನಂಬುತ್ತಾರೆ. ನಮ್ಮ ನಿಶ್ಚಿತಾಭಿಪ್ರಾಯದ ಬಗ್ಗೆ ನಾವು ಎಷ್ಟರ ಮಟ್ಟಿಗೆ ಖಂಡಿತವಾಗಿರುವುವೆಂದರೆ, ಅದು ವಿರೋಧಿಸಲ್ಪಡುವವರೆಗಷ್ಟೆ; ನಂತರ ನಾವು ನಿರಾಶರಾಗಿ ಅಭದ್ರರಾಗುತ್ತೇವೆ. ವಿಶ್ವಾಸವೆಂಬುದು ಅಂತರ್ಬೋಧೆಯ ನಿಶ್ಚಿತಾಭಿಪ್ರಾಯ, ಅದು ಆತ್ಮದ ಅರಿವು, ವಿರೋಧಾಭಿಪ್ರಾಯಗಳಿಂದಲೂ ಅದನ್ನು ಕದಲಿಸಲು ಸಾಧ್ಯವಿಲ್ಲ.

ಮೊದಲು ಭಗವಂತನನ್ನು ಅನ್ವೇಷಿಸಬೇಕೆಂಬ ಶಾಸ್ತ್ರದ ಕಟ್ಟಳೆಯ ಪ್ರಾಯೋಗಿಕ ಉದ್ದೇಶವೆಂದರೆ, ನೀವು ಒಮ್ಮೆ ಭಗವಂತನನ್ನು ಕಂಡುಕೊಂಡಿರಾದರೆ, ನಿಮ್ಮ ಸಾಮಾನ್ಯ ಜ್ಞಾನಕ್ಕೆ ಸರಿಯೆನಿಸಿದ ನಿಮಗೆ ಯೋಗ್ಯವೆನಿಸಿದ ವಸ್ತುಗಳನ್ನು ಹೊಂದಲು ನೀವು ಭಗವಂತನ ಶಕ್ತಿಯನ್ನು ಬಳಸಬಹುದು. ಈ ನಿಯಮದ ಮೇಲೆ ನಿಮ್ಮ ವಿಶ್ವಾಸವನ್ನಿಡಿ.

ಭಗವಂತನೊಂದಿಗಿನ ತಾದಾತ್ಮ್ಯದೊಂದಿಗೆ ನೀವು ನಿಜವಾದ ಯಶಸ್ಸಿಗೆ ಹಾದಿಯನ್ನು ಕಂಡುಕೊಳ್ಳುವಿರಿ, ಅದು ನಿಮ್ಮ ಆಧ್ಯಾತ್ಮಿಕ, ಮಾನಸಿಕ, ನೈತಿಕ ಮತ್ತು ಐಹಿಕ ಫಲಪ್ರಾಪ್ತಿಯ ಒಂದು ಸಮತೋಲನವೇ ಆಗಿರುತ್ತದೆ.

ಇದನ್ನು ಹಂಚಿಕೊಳ್ಳಿ