ಯೋಗ, ಧ್ಯಾನವೆಂದರೇನು?
ನಮ್ಮಲ್ಲಿ ಹೆಚ್ಚಿನವರು ಯಾವುದೇ ಕಾರ್ಯಸಾಧನೆಗಾಗಿ ನಮ್ಮಿಂದ ಹೊರಗೆ ನೋಡುವುದಕ್ಕೆ ಒಗ್ಗಿಕೊಂಡಿರುತ್ತೇವೆ. ಬಾಹ್ಯ ಸಾಧನೆಗಳು ನಮಗೆ ಬೇಕಾದುದನ್ನು ನೀಡಬಲ್ಲವು ಎಂದು ನಮ್ಮನ್ನು ನಂಬುವಂತೆ ಮಾಡುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೂ “ಇನ್ನೂ ಹೆಚ್ಚಿನದಕ್ಕಾಗಿ ಇರುವ” ಆಂತರ್ಯದ ಆಳವಾದ ಹಂಬಲವನ್ನು ಬಾಹ್ಯದ ಯಾವುದೂ ಸಂಪೂರ್ಣವಾಗಿ ಪೂರೈಸಲಾರದು ಎಂದು ನಮ್ಮ ಅನುಭವಗಳು ನಮಗೆ ಮತ್ತೆ ಮತ್ತೆ ತೋರಿಸುತ್ತವೆ.
ಯೋಗವು, ಸಾಮಾನ್ಯವಾಗಿ ಹೊರ ಹರಿಯುವ ಶಕ್ತಿ ಮತ್ತು ಪ್ರಜ್ಞೆಯನ್ನು ಹಿಮ್ಮೊಗವಾಗಿ ತಿರುಗಿಸುವ ಒಂದು ಸರಳ ಪ್ರಕ್ರಿಯೆಯಾಗಿದೆ, ಇದರಿಂದಾಗಿ ಮನಸ್ಸು ನೇರ ಗ್ರಹಿಕೆಯ ಕ್ರಿಯಾತ್ಮಕ ಕೇಂದ್ರವಾಗುತ್ತದೆ ಹಾಗೂ ತಪ್ಪು ಮಾಡಬಹುದಾದ ಇಂದ್ರಿಯಗಳ ಮೇಲೆ ಅವಲಂಬಿತವಾಗುವುದಿಲ್ಲ, ಬದಲಿಗೆ ವಾಸ್ತವವಾಗಿ ಸತ್ಯವನ್ನು ಅನುಭವಿಸುವ ಸಾಮರ್ಥ್ಯವನ್ನು ಹೊಂದುತ್ತದೆ.
ಯಾವುದಕ್ಕೂ ಪ್ರಮಾಣ ಬೇಕಿಲ್ಲವೆಂದು ಭಾವನಾತ್ಮಕ ಆಧಾರದ ಮೇಲೆ ಅಥವಾ ಕುರುಡು ನಂಬಿಕೆಯಿಂದ ಅಂದುಕೊಳ್ಳದೆ, ಯೋಗದ ಹಂತ-ಹಂತದ ವಿಧಾನಗಳನ್ನು ಅಭ್ಯಾಸ ಮಾಡುವ ಮೂಲಕ, ನಾವು ಅನಂತ ಪ್ರಜ್ಞಾನ, ಶಕ್ತಿ ಮತ್ತು ಆನಂದದೊಂದಿಗೆ (ಭಗವಂತ) ನಮ್ಮ ಏಕತೆಯನ್ನು ಅರಿತುಕೊಳ್ಳುತ್ತೇವೆ ಮತ್ತು ಅದು ಎಲ್ಲರಿಗೂ ಚೈತನ್ಯವನ್ನು ನೀಡುತ್ತದೆ ಮತ್ತು ಅದು ನಮ್ಮದೇ ಆತ್ಮದ ಸಾರವಾಗಿದೆ.
ಮಾರ್ಗದರ್ಶಿತ ಧ್ಯಾನಗಳು:
ಹಂತ 1: ಪರಿಚಯ
ನಿಮ್ಮ ಬಿಡುವಿಲ್ಲದ ದಿನಚರಿಯಿಂದ ಬಿಡುವಾಗಿಸಿಕೊಳ್ಳಿ ಮತ್ತು ನಿಮಗೆ ನೀವು ಮೌನವನ್ನು ಉಡುಗೊರೆಯಾಗಿ ನೀಡಿ. ಶಾಂತಿ, ಪ್ರೀತಿ ಮತ್ತು ಬೆಳಕಿನ ಓಯಸಿಸ್‌ನಲ್ಲಿ ನಿಮ್ಮನ್ನು ಮುಳುಗಿಸಿಕೊಳ್ಳಿ.
ಹಂತ 2: ಧ್ಯಾನವೊಂದನ್ನು ಆಯ್ಕೆಮಾಡಿಕೊಳ್ಳಿ
ನೀವು ಸಿದ್ಧರಾದಾಗ, ಈ ಕೆಳಗಿನ ಧ್ಯಾನವೊಂದನ್ನು ಆಯ್ಕೆಮಾಡಿಕೊಳ್ಳಿ. ಪ್ರತಿಯೊಂದು ಧ್ಯಾನವೂ ಸುಮಾರು 15 ನಿಮಿಷಗಳ ಕಾಲ ಇರುತ್ತದೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಕುರಿತು

ಕಳೆದ 100 ವರ್ಷಗಳಿಂದ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) ತನ್ನ ಸಂಸ್ಥಾಪಕರಾದ ಹಾಗೂ ಪಶ್ಚಿಮದಲ್ಲಿ ಯೋಗ ಪಿತಾಮಹರೆಂದು ವ್ಯಾಪಕವಾಗಿ ಗೌರವಿಸಲ್ಪಡುವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಮತ್ತು ಲೋಕೋಪಯೋಗಿ ಕಾರ್ಯವನ್ನು ಕೈಗೊಳ್ಳುವುದರಲ್ಲಿ ಸಮರ್ಪಿತವಾಗಿದೆ.
ಪರಮಹಂಸ ಯೋಗಾನಂದರು ರೂಪಿಸಿದ ಧ್ಯೇಯಗಳು ಮತ್ತು ಆದರ್ಶಗಳಲ್ಲಿ ವ್ಯಕ್ತಪಡಿಸಿದಂತೆ, ಈ ಸಂಸ್ಥೆಯು ನಮ್ಮ ಜಾಗತಿಕ ಕುಟುಂಬದ ವೈವಿಧ್ಯಮಯ ಜನಗಳು ಮತ್ತು ಧರ್ಮಗಳ ನಡುವೆ ಹೆಚ್ಚಿನ ತಿಳುವಳಿಕೆ ಮತ್ತು ಸದ್ಭಾವನೆಯ ಮನೋಭಾವವನ್ನು ಬೆಳೆಸಲು ಪ್ರಯತ್ನಿಸುತ್ತದೆ ಮತ್ತು ಎಲ್ಲಾ ಸಂಸ್ಕೃತಿಗಳು ಮತ್ತು ರಾಷ್ಟ್ರೀಯತೆಗಳ ಜನರು ತಮ್ಮ ಜೀವನದಲ್ಲಿ ಮಾನವ ಚೇತನದ ಸೌಂದರ್ಯ, ಔದಾರ್ಯ ಮತ್ತು ದೈವತ್ವವನ್ನು ಹೆಚ್ಚು ಸಮಗ್ರವಾಗಿ ಅರಿತುಕೊಳ್ಳಲು ಮತ್ತು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.
ಪರಮಹಂಸ ಯೋಗಾನಂದರು, ಭಾರತದಲ್ಲಿ ಸಹಸ್ರಾರು ವರ್ಷಗಳ ಹಿಂದೆ ಹುಟ್ಟಿಕೊಂಡ ಪವಿತ್ರ ಆಧ್ಯಾತ್ಮಿಕ ವಿಜ್ಞಾನವಾದ ಕ್ರಿಯಾ ಯೋಗದ ಸಾರ್ವತ್ರಿಕ ಬೋಧನೆಗಳನ್ನು ಲಭ್ಯವಾಗುವಂತೆ ಮಾಡಲು, 1917 ರಲ್ಲಿ ಯೋಗದಾ ಸತ್ಸಂಗ ಸೊಸೈಟಿಯನ್ನು ಸ್ಥಾಪಿಸಿದರು. ಯಾವುದೇ ಪಂಥಕ್ಕೆ ಸೇರದ ಈ ಬೋಧನೆಗಳು ಸರ್ವತೋಮುಖ ಯಶಸ್ಸು ಮತ್ತು ಯೋಗಕ್ಷೇಮವನ್ನು ಸಾಧಿಸಲು ಸಂಪೂರ್ಣ ತತ್ವಶಾಸ್ತ್ರ ಮತ್ತು ಜೀವನ ವಿಧಾನವನ್ನು ಸಾಧಿಸಲು, ಅಂತೆಯೇ ಜೀವನದ ಅಂತಿಮ ಗುರಿಯಾದ, ಪರಮಾತ್ಮನೊಡನೆ ಆತ್ಮದ ಸಂಯೋಗವನ್ನು ಸಾಧಿಸಲು ಧ್ಯಾನದ ವಿಧಾನಗಳನ್ನು ಒಳಗೊಂಡಿರುತ್ತವೆ.
ಗೃಹಾಧ್ಯಯನಕ್ಕಾಗಿ ವೈಎಸ್‌ಎಸ್ ಪಾಠಮಾಲಿಕೆ
ಪರಮಹಂಸ ಯೋಗಾನಂದರ ಪ್ರಕಟಿತ ಕೃತಿಗಳಲ್ಲಿ ಪಾಠಮಾಲಿಕೆಗಳು ಅನನ್ಯವಾಗಿವೆ, ಅಂದರೆ ಅವು, ಕ್ರಿಯಾ ಯೋಗವೂ ಸೇರಿದಂತೆ ಅವರು ಕಲಿಸಿದ ಧ್ಯಾನ, ಏಕಾಗ್ರತೆ ಮತ್ತು ಚೈತನ್ಯದಾಯಕ ಯೋಗ ತಂತ್ರಗಳಲ್ಲಿ ಅವರ ಹಂತ-ಹಂತದ ಸೂಚನೆಗಳನ್ನು ನೀಡುತ್ತವೆ.
ಸರಳವಾದರೂ ಹೆಚ್ಚು ಪರಿಣಾಮಕಾರಿಯಾದ ಈ ಯೋಗ ತಂತ್ರಗಳು ನೇರವಾಗಿ ಪ್ರಾಣಶಕ್ತಿ ಮತ್ತು ಪ್ರಜ್ಞೆಯೊಂದಿಗೆ ಕೆಲಸ ಮಾಡುತ್ತವೆ, ಇವು, ಶರೀರವನ್ನು ಜೀವಚೈತನ್ಯದಿಂದ ಪುನಶ್ಚೇತನಗೊಳಿಸಲು, ಮನಸ್ಸಿನ ಅಸೀಮ ಶಕ್ತಿಯನ್ನು ಜಾಗೃತಗೊಳಿಸಲು ಮತ್ತು ನಿಮ್ಮ ಜೀವನದಲ್ಲಿ ದಿವ್ಯತೆಯ ನಿರಂತರವಾಗಿ ಆಳವಾಗುತ್ತಿರುವ ಅರಿವನ್ನು ಅನುಭವಿಸಲು ನಿಮಗೆ ಸಾಧ್ಯವಾಗಿಸುತ್ತವೆ—ಇದು ಅತ್ಯುನ್ನತ ಆಧ್ಯಾತ್ಮಿಕ ಪ್ರಜ್ಞೆಯ ಸ್ಥಿತಿಗಳಲ್ಲಿ ಮತ್ತು ಭಗವಂತನೊಂದಿಗಿನ ಸಂಯೋಗದಲ್ಲಿ ಕೊನೆಗೊಳ್ಳುತ್ತದೆ.
ಯೋಗವು ನಿರ್ದಿಷ್ಟ ನಂಬಿಕೆಗಳ ಅನುಸರಣೆಗಿಂತ, ಅಭ್ಯಾಸ ಮತ್ತು ಅನುಭವವನ್ನು ಆಧರಿಸಿರುವುದರಿಂದ, ಎಲ್ಲಾ ಧರ್ಮಗಳ ಅನುಯಾಯಿಗಳು— ಅಂತೆಯೇ ಯಾವುದೇ ಧಾರ್ಮಿಕ ಮಾರ್ಗಕ್ಕೆ ಸೇರಿಕೊಂಡಿರದವರೂ— ಪಾಠಮಾಲಿಕೆಯ ಮೂಲ ಸರಣಿಯಲ್ಲಿನ ಆಧ್ಯಾತ್ಮಿಕ ಬೋಧನೆಗಳಿಂದ ಮತ್ತು ಅದರಲ್ಲಿ ಕಲಿಸಿರುವ ತಂತ್ರಗಳಿಂದ ಪ್ರಯೋಜನ ಪಡೆಯಬಹುದು. ನಿಯತವಾಗಿ ಅಭ್ಯಾಸ ಮಾಡಿದರೆ, ಈ ವಿಧಾನಗಳು ಆಧ್ಯಾತ್ಮಿಕ ಅರಿವು ಮತ್ತು ಅನುಭೂತಿಯ ಆಳವಾದ ಹಂತಗಳಿಗೆ ತಪ್ಪದೆ ಕರೆದೊಯ್ಯುತ್ತವೆ.
ಪರಮಹಂಸ ಯೋಗಾನಂದರ ಪರಿಚಯಾತ್ಮಕ ಪಾಠವನ್ನು ಓದಿ

ಆತ್ಮ-ಸಾಕ್ಷಾತ್ಕಾರದ ಮೂಲಕ ಅತ್ಯುನ್ನತ ಸಾಧನೆಗಳು
ಪರಮಹಂಸ ಯೋಗಾನಂದರ ಪಾಠಗಳ ಸರಣಿಯ ಕೈಪಿಡಿ “ಆತ್ಮ-ಸಾಕ್ಷಾತ್ಕಾರದ ಮೂಲಕ ಅತ್ಯುನ್ನತ ಸಾಧನೆಗಳು” ಇದರಲ್ಲಿ ಪಾಠಗಳಲ್ಲಿನ ಬೋಧನೆಗಳ ಸ್ಫೂರ್ತಿದಾಯಕ ಮತ್ತು ಆಳವಾದ ಅವಲೋಕನವನ್ನು ಕೊಡಲಾಗಿದೆ.
ಮೊದಲ ಹಂತವಾಗಿ, ಈ ಪರಿಚಯಾತ್ಮಕ ಪಾಠದಲ್ಲಿನ ಚಿಂತನೆಗಳನ್ನು ಓದಲು ಮತ್ತು ಅರಗಿಸಿಕೊಳ್ಳಲು ನಾವು ನಿಮಗೆ ಸಲಹೆ ನೀಡುತ್ತೇವೆ. ಕ್ರಿಯಾ ಯೋಗ ದೀಕ್ಷೆಗಾಗಿ ಒಬ್ಬರನ್ನು ಸಿದ್ಧಪಡಿಸುವ ಧ್ಯಾನ ತಂತ್ರಗಳನ್ನು ಕಲಿಸುವ ಹದಿನೆಂಟು ಪಾಠಗಳ ಕೋರ್ಸ್‌ಗೆ ಸೇರಿಕೊಂಡು ಆತ್ಮ-ಸಾಕ್ಷಾತ್ಕಾರದ ಪಯಣದಲ್ಲಿ ನೀವು ಮುಂದೆ ಹೋಗಲು ಬಯಸುವಿರೇ ಎಂದು ನಿರ್ಧರಿಸಲು ಇದು ಸಾಧ್ಯವಾಗಿಸುತ್ತದೆ.
“ಪಾಠಗಳಿಗೆ ನೋಂದಾಯಿಸಿ” ಟ್ಯಾಬ್ ಅಡಿಯಲ್ಲಿ ಈ ಪುಟದಲ್ಲಿನ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಈಗಲೇ ನೋಂದಾಯಿಸಿಕೊಳ್ಳಬಹುದು.
ಧ್ಯಾನ ಮಾಡಲು ಕಲಿಯಿರಿ:
ಕ್ರಿಯಾ ಯೋಗ ಧ್ಯಾನದ ವಿಜ್ಞಾನವನ್ನು ಹೇಗೆ ಅಭ್ಯಾಸ ಮಾಡುವುದು ಎಂಬುದರ ಕುರಿತು ಶ್ರೀ ಶ್ರೀ ಪರಮಹಂಸ ಯೋಗಾನಂದರು, ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನೀಡಿದ ತರಗತಿಗಳಿಂದ ತೆಗೆದುಕೊಳ್ಳಲಾದ, ವೈಯಕ್ತಿಕ ಸೂಚನೆಗಳನ್ನು ಯೋಗದ ಸತ್ಸಂಗ ಪಾಠಗಳಲ್ಲಿ ವಿವರವಾಗಿ ಪ್ರಸ್ತುತಪಡಿಸಲಾಗಿದೆ.
ಅಷ್ಟೇ ಅಲ್ಲದೆ, ಸಮತೋಲಿತ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಸಾಧಿಸಲು ಪಾಠಗಳು, ಅವರ ಪ್ರಾಯೋಗಿಕ ಮಾರ್ಗದರ್ಶನ ಮತ್ತು ತಂತ್ರಗಳನ್ನು ಒದಗಿಸುತ್ತವೆ — ಜೀವನದ ಪ್ರತಿಯೊಂದು ವಿಭಾಗದಲ್ಲಿಯೂ ಯೋಗವು ನೀಡುವ ಆರೋಗ್ಯ, ಉಪಶಮನ, ಯಶಸ್ಸು ಮತ್ತು ಸಾಮರಸ್ಯ. ಈ “ಬದುಕುವುದು-ಹೇಗೆ” ತತ್ವಗಳು ಯಾವುದೇ ನಿಜವಾದ ಯಶಸ್ವೀ ಧ್ಯಾನಾಭ್ಯಾಸದ ಸಂಪೂರ್ಣ ಅವಶ್ಯಕ ಅಂಶವಾಗಿವೆ.
ಪರಮಹಂಸ ಯೋಗಾನಂದರು ಮತ್ತು ವೈಎಸ್‌ಎಸ್ ಬಗ್ಗೆ
ಪರಮಹಂಸ ಯೋಗಾನಂದರ ಜನನದ ಒಂದು ಶತಮಾನದ ನಂತರ, ಅವರು ನಮ್ಮ ಕಾಲದ ಪ್ರಮುಖ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ; ಮತ್ತು ಅವರ ಜೀವನ ಮತ್ತು ಕಾರ್ಯದ ಪ್ರಭಾವವು ಬೆಳೆಯುತ್ತಲೇ ಇದೆ. ದಶಕಗಳ ಹಿಂದೆ ಅವರು ಪರಿಚಯಿಸಿದ ಅನೇಕ ಧಾರ್ಮಿಕ ಮತ್ತು ತಾತ್ವಿಕ ಪರಿಕಲ್ಪನೆಗಳು ಮತ್ತು ವಿಧಾನಗಳು ಈಗ ಶಿಕ್ಷಣ, ಮನೋವಿಜ್ಞಾನ, ವ್ಯಾಪಾರ, ವೈದ್ಯಕೀಯ ಮತ್ತು ಇತರ ಉದ್ಯಮ ವಲಯಗಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿವೆ—ಇವು ಮಾನವ ಜೀವನದ ಹೆಚ್ಚು ಸಮಗ್ರ, ಮಾನವೀಯ ಮತ್ತು ಆಧ್ಯಾತ್ಮಿಕ ದೃಷ್ಟಿಗೆ ಬಹಳ ಪರಿಣಾಮಕಾರಿಯಾದ ರೀತಿಯಲ್ಲಿ ಕೊಡುಗೆ ನೀಡುತ್ತಿವೆ.
ಪರಮಹಂಸ ಯೋಗಾನಂದರ ಬೋಧನೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ ಮತ್ತು ಸೃಜನಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ, ಜೊತೆಗೇ, ವೈವಿಧ್ಯಮಯ ತಾತ್ವಿಕ ಮತ್ತು ಆಧ್ಯಾತ್ಮಿಕ ಆಂದೋಲನಗಳ ಪ್ರತಿಪಾದಕರೂ ಬಳಸಿಕೊಳ್ಳುತ್ತಿದ್ದಾರೆ ಎಂಬ ಸಂಗತಿಯು, ಅವರು ಕಲಿಸಿದುದರಲ್ಲಿರುವ ವಿಶೇಷ ಪ್ರಾಯೋಗಿಕ ಉಪಯುಕ್ತತೆಯನ್ನು ಮಾತ್ರ ಸೂಚಿಸುವುದಿಲ್ಲ. ಅವರು ಬಿಟ್ಟುಹೋದ ಆಧ್ಯಾತ್ಮಿಕ ಪರಂಪರೆಯು ಸಮಯ ಕಳೆದಂತೆ ಸತ್ವಗುಂದುವುದಿಲ್ಲ, ಛಿನ್ನಭಿನ್ನವಾಗುವುದಿಲ್ಲ ಅಥವಾ ವಿರೂಪಗೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೆಲವು ವಿಧಾನಗಳ ಅಗತ್ಯವನ್ನು ಇದು ಸ್ಪಷ್ಟಪಡಿಸುತ್ತದೆ.
ವಿವೇಚನೆ, ಸೃಜನಶೀಲತೆ, ಸುರಕ್ಷತೆ, ಸಂತೋಷ, ಅನಿರ್ಬಂಧಿತ ಪ್ರೀತಿ — ನಮಗೆ ನಿಜವಾದ ಮತ್ತು ಶಾಶ್ವತವಾದ ಸಂತೋಷವನ್ನು ತರುವಂತಹುದನ್ನು ಕಂಡುಹಿಡಿಯಲು ನಿಜವಾಗಿಯೂ ಸಾಧ್ಯವೇ?
ನಮ್ಮ ಆತ್ಮದೊಳಗಿನ ದೈವತ್ವವನ್ನು ಅನುಭವಿಸುವುದು, ದಿವ್ಯಾನಂದವನ್ನು ನಮ್ಮ ಆನಂದವೆಂದು ಹೇಳಿಕೊಳ್ಳುವುದು— ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳು ಇದನ್ನೇ ನಮ್ಮಲ್ಲಿ ಪ್ರತಿಯೊಬ್ಬರಿಗೂ ನೀಡುತ್ತವೆ.
ಕ್ರಿಯಾ ಯೋಗದ ಪವಿತ್ರ ವಿಜ್ಞಾನವು ಧ್ಯಾನದ ಉನ್ನತ ತಂತ್ರಗಳನ್ನು ಒಳಗೊಂಡಿದೆ, ಅದರ ಶ್ರದ್ಧಾಪೂರ್ವಕ ಅನುಷ್ಠಾನವು ಭಗವತ್ಸಾಕ್ಷಾತ್ಕಾರಕ್ಕೆ ಮತ್ತು ಎಲ್ಲಾ ರೀತಿಯ ಬಂಧನದಿಂದ ಆತ್ಮದ ವಿಮೋಚನೆಗೆ ಕಾರಣವಾಗುತ್ತದೆ. ಇದು ಯೋಗದ, ದಿವ್ಯ ಸಂಯೋಗದ ರಾಜಯೋಗ್ಯ ಅಥವಾ ಸರ್ವೋಚ್ಚ ತಂತ್ರವಾಗಿದೆ. (ಓದಿ “ಯೋಗ ಎಂದರೇನು, ನಿಜವಾಗಿಯೂ?”)
ಕ್ರಿಯಾ ಯೋಗ ಮಾರ್ಗದ ಧ್ಯಾನ ತಂತ್ರಗಳು
‘ಭಗವಂತನು ಸಮೃದ್ಧ ಕೊಡುಗೆಗಳನ್ನು ನೀಡುವುದಕ್ಕಾಗಿ, ಸ್ವಸಂತೋಷದಿಂದ-ಸಿದ್ಧವಾಗಿರುವ ಹೃದಯಗಳನ್ನು ಹುಡುಕುತ್ತಾನೆ…’ “ಅದು ಅತ್ಯಂತ ಸುಂದರವಾದುದು ಮತ್ತು ನಾನು ಅದನ್ನೇ ನಂಬುತ್ತೇನೆ. ಭಗವಂತ ತನ್ನ ಉಡುಗೊರೆಗಳನ್ನು ನೀಡಲು ಸಿದ್ಧ ಹೃದಯಗಳನ್ನು ಹುಡುಕುತ್ತಾನೆ. ಅವನು ನಮಗೆ ಎಲ್ಲವನ್ನೂ ನೀಡಲು ಸಿದ್ಧನಿದ್ದಾನೆ, ಆದರೆ ನಾವು ಸ್ವೀಕರಿಸುವ ಪ್ರಯತ್ನವನ್ನು ಮಾಡಲು ಸಿದ್ಧರಿಲ್ಲ.”
ಪರಮಹಂಸ ಯೋಗಾನಂದರು ಕ್ರಿಯಾ ಯೋಗದ ವಿವರಣೆಯನ್ನು ತಮ್ಮ ಯೋಗಿಯ ಆತ್ಮಕಥೆಯಲ್ಲಿ ನೀಡುತ್ತಾರೆ. ಪರಮಹಂಸ ಯೋಗಾನಂದರು ಕಲಿಸಿದ ಮೂರು ಪೂರ್ವಸಿದ್ಧತಾ ತಂತ್ರಗಳ ಪ್ರಾಥಮಿಕ ಅಧ್ಯಯನ ಮತ್ತು ಅಭ್ಯಾಸದ ನಂತರ ಯೋಗದಾ ಸತ್ಸಂಗ ಪಾಠಗಳ ವಿದ್ಯಾರ್ಥಿಗಳಿಗೆ ನಿಜವಾದ ತಂತ್ರವನ್ನು ನೀಡಲಾಗುತ್ತದೆ.
ಎಲ್ಲವೂ ಸೇರಿ ಒಂದು ಸಮಗ್ರ ವಿಧಾನವಾದ ಈ ಧ್ಯಾನ ತಂತ್ರಗಳು, ಪ್ರಾಚೀನ ಯೋಗ ವಿಜ್ಞಾನದ ಅತ್ಯುನ್ನತ ಪ್ರಯೋಜನಗಳನ್ನು ಮತ್ತು ದಿವ್ಯ ಧ್ಯೇಯವನ್ನು ಸಾಧಿಸಲು ಸಾಧಕರಿಗೆ ಸಾಧ್ಯವಾಗಿಸುತ್ತದೆ.
1. ಚೈತನ್ಯದಾಯಕ ವ್ಯಾಯಾಮಗಳು
ಧ್ಯಾನಕ್ಕಾಗಿ ಶರೀರವನ್ನು ಸಿದ್ಧಪಡಿಸಲು 1916 ರಲ್ಲಿ ಪರಮಹಂಸ ಯೋಗಾನಂದರು ಅಭಿವೃದ್ಧಿಪಡಿಸಿದ ಮನೋಭೌತಿಕ ವ್ಯಾಯಾಮಗಳ ಸರಣಿ. ನಿಯತ ಅಭ್ಯಾಸವು ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಕ್ರಿಯಾತ್ಮಕ ಇಚ್ಛಾ ಶಕ್ತಿಯನ್ನು ಬೆಳೆಸುತ್ತದೆ. ಉಸಿರು, ಪ್ರಾಣಶಕ್ತಿ ಮತ್ತು ಕೇಂದ್ರೀಕೃತ ಗಮನವನ್ನು ಬಳಸಿಕೊಳ್ಳುವ ತಂತ್ರವು, ಶರೀರಕ್ಕೆ ಪ್ರಜ್ಞಾಪೂರ್ವಕವಾಗಿ ಹೇರಳವಾದ ಶಕ್ತಿಯನ್ನು ಸೆಳೆದುಕೊಳ್ಳಲು ಸಾಧ್ಯವಾಗಿಸುತ್ತದೆ, ಇದು ಶರೀರದ ಎಲ್ಲಾ ಭಾಗಗಳನ್ನು ವ್ಯವಸ್ಥಿತವಾಗಿ ಶುದ್ಧೀಕರಿಸುತ್ತದೆ ಮತ್ತು ಬಲಪಡಿಸುತ್ತದೆ. ಚೈತನ್ಯದಾಯಕ ವ್ಯಾಯಾಮಗಳನ್ನು ಮಾಡಲು, ಸುಮಾರು 15 ನಿಮಿಷಗಳು ಬೇಕಾಗುತ್ತದೆ, ಇವು ಒತ್ತಡ ಮತ್ತು ನರೋದ್ರೇಕಗಳನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿವೆ. ಧ್ಯಾನಕ್ಕೂ ಮುನ್ನ ಅವುಗಳನ್ನು ಅಭ್ಯಾಸ ಮಾಡುವುದರಿಂದ ಶಾಂತವಾದ ಆಂತರಿಕ ಅರಿವಿನ ಸ್ಥಿತಿಯನ್ನು ಪ್ರವೇಶಿಸಲು ಇದು ನೆರವಾಗುತ್ತದೆ.
2. ಏಕಾಗ್ರತೆಯ ಹಾಂಗ್-ಸಾ ತಂತ್ರ
ಹಾಂಗ್-ಸಾ ಏಕಾಗ್ರತೆಯ ತಂತ್ರವು ಒಬ್ಬರಲ್ಲಿರುವ ಏಕಾಗ್ರತೆಯ ಸುಪ್ತ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ತಂತ್ರದ ಅಭ್ಯಾಸದಿಂದ ಒಬ್ಬನು ಆಲೋಚನೆ ಮತ್ತು ಶಕ್ತಿಯನ್ನು ಬಾಹ್ಯ ಕ್ಷೋಭೆಗಳಿಂದ ಹಿಂತೆಗೆದುಕೊಳ್ಳಲು ಕಲಿಯುತ್ತಾನೆ, ಇದರಿಂದ ಅವನು ಸಾಧಿಸಬೇಕಾದ ಯಾವುದೇ ಗುರಿ ಅಥವಾ ಪರಿಹರಿಸಬೇಕಾದ ಸಮಸ್ಯೆಯ ಮೇಲೆ ಅವುಗಳನ್ನು ಕೇಂದ್ರೀಕರಿಸಬಹುದು. ಅಥವಾ ಆಂತರ್ಯದ ದಿವ್ಯ ಪ್ರಜ್ಞೆಯನ್ನು ಅರಿತುಕೊಳ್ಳುವ ಕಡೆಗೆ ಕೇಂದ್ರೀಕೃತ ಗಮನವನ್ನು ತಿರುಗಿಸಬಹುದು.
3. ಓಂ ತಂತ್ರ
ಧ್ಯಾನದ ಓಂ ತಂತ್ರವು, ಒಬ್ಬನು ತನ್ನ ಆತ್ಮದ ದಿವ್ಯ ಗುಣಗಳನ್ನು ಕಂಡುಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಏಕಾಗ್ರತೆಯ ಶಕ್ತಿಯನ್ನು ಹೇಗೆ ಉನ್ನತ ರೀತಿಯಲ್ಲಿ ಬಳಸಬೇಕೆಂಬುದನ್ನು ತೋರಿಸುತ್ತದೆ. ಈ ಪುರಾತನ ವಿಧಾನವು, ಇಡೀ ಸೃಷ್ಟಿಯ ಆಧಾರಭೂತವಾಗಿರುವ ಮತ್ತು ಅದನ್ನು ಪೋಷಿಸುವ ಸರ್ವವ್ಯಾಪಿ ಓಂ, ಶಬ್ದ ಅಥವಾ ಪವಿತ್ರಾತ್ಮದ ದಿವ್ಯ ಉಪಸ್ಥಿತಿಯನ್ನು ಹೇಗೆ ಅನುಭವಿಸುವುದು ಎಂಬುದನ್ನು ಕಲಿಸುತ್ತದೆ. ಈ ತಂತ್ರವು ಶರೀರ ಮತ್ತು ಮನಸ್ಸಿನ ಮಿತಿಗಳನ್ನು ಮೀರಿ ಒಬ್ಬರ ಅನಂತ ಸಾಮರ್ಥ್ಯದ ಆನಂದದಾಯಕ ಸಾಕ್ಷಾತ್ಕಾರದತ್ತ ಅರಿವನ್ನು ವಿಸ್ತರಿಸುತ್ತದೆ.
4. ಕ್ರಿಯಾ ಯೋಗ ತಂತ್ರ
ಕ್ರಿಯಾ ಯೋಗವು ಪ್ರಾಣಾಯಾಮದ ಉನ್ನತ ರಾಜಯೋಗ ತಂತ್ರ. ಕ್ರಿಯಾ ಯೋಗವು ಬೆನ್ನುಹುರಿ ಮತ್ತು ಮಿದುಳಿನಲ್ಲಿರುವ ಪ್ರಾಣ ಶಕ್ತಿಯ ಸೂಕ್ಷ್ಮ ಪ್ರವಾಹಗಳನ್ನು ಬಲಪಡಿಸುತ್ತದೆ ಮತ್ತು ಪುನರುಜ್ಜೀವನಗೊಳಿಸುತ್ತದೆ. ಭಾರತದ ಪ್ರಾಚೀನ ದಾರ್ಶನಿಕರು (ಋಷಿಗಳು) ಮಿದುಳು ಮತ್ತು ಬೆನ್ನುಹುರಿಯನ್ನು ಜೀವನದ ವೃಕ್ಷವೆಂದು ಗ್ರಹಿಸಿದರು. ಚೇತನ ಮತ್ತು ಪ್ರಜ್ಞೆಯ ಸೂಕ್ಷ್ಮ ಮಿದುಳು-ಮೇರುದಂಡ ಕೇಂದ್ರಗಳಿಂದ (ಚಕ್ರಗಳು) ಎಲ್ಲಾ ನರಗಳು ಮತ್ತು ದೇಹದ ಪ್ರತಿಯೊಂದು ಅಂಗ ಮತ್ತು ಅಂಗಾಂಶಗಳನ್ನು ಸಚೇತನಗೊಳಿಸುವ ಶಕ್ತಿಗಳು ಹರಿಯುತ್ತವೆ. ಕ್ರಿಯಾ ಯೋಗದ ವಿಶೇಷ ತಂತ್ರದಿಂದ ಬೆನ್ನುಹುರಿಯಲ್ಲಿ ಪ್ರಾಣಪ್ರವಾಹವನ್ನು ಮೇಲಕ್ಕೂ ಕೆಳಕ್ಕೂ ನಿರಂತರವಾಗಿ ಸುತ್ತಿಸುವ ಮೂಲಕ, ಒಬ್ಬರ ಆಧ್ಯಾತ್ಮಿಕ ವಿಕಾಸ ಮತ್ತು ಪರಿಜ್ಞಾನವನ್ನು ಹೆಚ್ಚು ತ್ವರಿತಗೊಳಿಸಲು ಸಾಧ್ಯವಿದೆ ಎಂದು ಯೋಗಿಗಳು ಕಂಡುಹಿಡಿದಿದ್ದಾರೆ.
ಕ್ರಿಯಾ ಯೋಗದ ಸರಿಯಾದ ಅಭ್ಯಾಸವು ಹೃದಯ ಮತ್ತು ಶ್ವಾಸಕೋಶಗಳು ಮತ್ತು ನರಮಂಡಲದ ಸಾಮಾನ್ಯ ಚಟುವಟಿಕೆಗಳನ್ನು ಸ್ವಾಭಾವಿಕವಾಗಿ ನಿಧಾನಗೊಳಿಸುತ್ತದೆ, ಇದು, ಶರೀರ ಮತ್ತು ಮನಸ್ಸಿನಲ್ಲಿ ಆಳವಾದ ಆಂತರಿಕ ನಿಶ್ಚಲತೆಯನ್ನು ಉಂಟುಮಾಡುತ್ತದೆ ಮತ್ತು ಆಲೋಚನೆಗಳು, ಭಾವಾವೇಶಗಳು ಮತ್ತು ಸಂವೇದನಾ ಗ್ರಹಿಕೆಗಳ ಸಾಮಾನ್ಯ ಪ್ರಕ್ಷುಬ್ಧತೆಯಿಂದ ಗಮನವನ್ನು ಮುಕ್ತಗೊಳಿಸುತ್ತದೆ. ಆ ಆಂತರಿಕ ನಿಶ್ಚಲತೆಯ ಸ್ಪಷ್ಟತೆಯಲ್ಲಿ, ಒಬ್ಬನು ತನ್ನ ಆತ್ಮದೊಂದಿಗೆ ಮತ್ತು ಭಗವಂತನೊಂದಿಗೆ ಆಳವಾದ ಆಂತರಿಕ ಶಾಂತಿ ಮತ್ತು ಶ್ರುತಿಗೂಡುವಿಕೆಯನ್ನು ಅನುಭವಿಸುತ್ತಾನೆ.