
ಸ್ವಾಮಿ ಚಿದಾನಂದ ಗಿರಿಯವರಿಂದ ಒಂದು ಸಂದೇಶ
[2018 ರಲ್ಲಿ ಸ್ವಾಮಿ ಚಿದಾನಂದಜಿಯವರು ಪ್ರಕಟಿಸಿದ ಪತ್ರದಿಂದ ತೆಗೆದುಕೊಳ್ಳಲಾಗಿದೆ. ಇದನ್ನು ನಾಲ್ಕು ವರ್ಷಗಳ ಹಿಂದೆ ಬರೆಯಲಾಗಿದ್ದರೂ, ಮೂಲಭೂತ ಸಂದೇಶವು ಈಗ ಇನ್ನೂ ಹೆಚ್ಚು ಮಹತ್ವದ್ದಾಗಿದೆ — ಅದು ಭೇದ ಕಲ್ಪಿಸುವ ಪ್ರವೃತ್ತಿ ಮತ್ತು ಪ್ರಕ್ಷುಬ್ಧತೆಯನ್ನು ಮೀರಲು ನಾವು ಹೊಂದಬಹುದಾದ ಮನೋಭಾವಗಳು ಮತ್ತು ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ.]
ಆತ್ಮೀಯರೇ,
ನನ್ನ ದೈನಂದಿನ ಧ್ಯಾನಗಳಲ್ಲಿ ನಾನು ನಮ್ಮ ಗುರುದೇವ ಪರಮಹಂಸ ಯೋಗಾನಂದರ ಜಗದಾದ್ಯಂತದ ಸುಂದರ ಆಧ್ಯಾತ್ಮಿಕ ಕುಟುಂಬದ ಬಗ್ಗೆ ಯೋಚಿಸುತ್ತೇನೆ ಹಾಗೂ ಭಗವಂತ ಮತ್ತು ಗುರುಗಳು ನಿಮ್ಮ ಜೀವನ ಮತ್ತು ಆಧ್ಯಾತ್ಮಿಕ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಲಿ ಮತ್ತು ಅವರ ಪ್ರೀತಿ ಹಾಗೂ ಜ್ಞಾನದಲ್ಲಿ ಆಳವಾದ ಮತ್ತು ಅಚಲವಾದ ಭದ್ರತೆಯನ್ನು ನೀವು ಅನುಭವಿಸಲು ನಿಮಗೆ ನೆರವಾಗಲಿ ಎಂದು ಪ್ರಾರ್ಥಿಸುತ್ತೇನೆ. ಭಗವಂತನು ತನ್ನ ಶಾಶ್ವತ ಸಂತೋಷದ ನೈತಿಕ ನಿಯಮಗಳೊಂದಿಗೆ ಜಾಗತಿಕ ಕುಟುಂಬವು ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರದಿಂದ ಬದುಕಲು ಉದ್ದೇಶಿಸಿದ್ದ, ಆದರೆ ಧ್ರುವೀಕರಣವು ಹೆಚ್ಚಾಗುತ್ತಿರುವ ಜಾಗತಿಕ ಕುಟುಂಬದ ಬಣಗಳ ನಡುವೆ ಸಮಾಜದಲ್ಲಿ ಇಂದು ಹರಡಲಾಗುತ್ತಿರುವ ಭೇದ ಕಲ್ಪಿಸುವ ಪ್ರವೃತ್ತಿ ಮತ್ತು ಕುತ್ಸಿತತನದ ಬಗ್ಗೆ ಪ್ರಪಂಚದಾದ್ಯಂತದ ಅನೇಕ ಭಕ್ತರು ತುಂಬಾ ಆತಂಕಗೊಂಡಿದ್ದಾರೆ ಎಂದು ನನಗೆ ತಿಳಿದಿದೆ. ದ್ವಂದ್ವತೆಯ ಈ ಪ್ರಪಂಚವು ಯಾವಾಗಲೂ ಬೆಳಕು ಮತ್ತು ಕತ್ತಲೆಗಳ ನಡುವಿನ ರಣರಂಗವಾಗಿತ್ತು ಮತ್ತು ಯಾವಾಗಲೂ ಹಾಗೇ ಇರುತ್ತದೆ; ಆದರೆ ನಮ್ಮ ಯುಗವು, ಅಂತರ್ಜಾಲ ಮತ್ತು ಇತರ ಸಮೂಹ ಸಂವಹನ ಮಾಧ್ಯಮಗಳ ಮೂಲಕ ನಮ್ಮ ಆಂತರಿಕ ಮತ್ತು ಬಾಹ್ಯ ಪರಿಸರದಲ್ಲಿ ನುಸುಳುವ ಅಧರ್ಮ ಮತ್ತು ನಕಾರಾತ್ಮಕತೆಯ ದಾಳಿಗೆ ಹೆಚ್ಚೂ ಕಡಿಮೆ ನಿರಂತರವಾಗಿ ಈಡಾಗುತ್ತಿರುವುದರಿಂದ, ಭಗವಂತನ ಶಾಶ್ವತ ಸತ್ಯಗಳಾದ ಸದ್ಗುಣ ಮತ್ತು ನೈತಿಕ ಮೌಲ್ಯಗಳ ಮೇಲಿನ ಆಕ್ರಮಣವು ಗ್ರಹಿಸಬಹುದಾದ ರೀತಿಯಲ್ಲಿ ಹೆಚ್ಚಾದಂತೆ ಕಾಣಲು ಸಾಧ್ಯವಿದೆ.
ಆದರೆ ಭವಿಷ್ಯದ ಬಗ್ಗೆ ನಾವು ಧೈರ್ಯಗೆಡುವ ಅಗತ್ಯವಿಲ್ಲ. ಸಾಮಾಜಿಕ ಮಾಧ್ಯಮಗಳು ಒಬ್ಬ ವ್ಯಕ್ತಿಯ ವೈಷಮ್ಯದ ಅಭಿಪ್ರಾಯಗಳನ್ನು ದೊಡ್ಡದು ಮಾಡಬಹುದು, ಮತ್ತು ಅದರಿಂದಾಗಿ ಆ ವ್ಯಕ್ತಿಯ ಪರಿಸರದಿಂದ ಬಹು ದೂರದವರೆಗೂ ಅಸಂಖ್ಯಾತ ಜನರ ಮೇಲೆ ಅದು ಪರಿಣಾಮ ಬೀರಬಹುದು, ಅಂತೆಯೇ ಪ್ರತಿಯೊಬ್ಬ ಮನುಷ್ಯನಲ್ಲಿರುವ ಭಗವಂತನ ಆತ್ಮ-ಸ್ವರೂಪದ ದಿವ್ಯ ಗುಣಗಳಾದ ಸತ್ಯ, ಸೌಂದರ್ಯ, ಸದ್ಗುಣ, ವಿವೇಕ ಮತ್ತು ಸಹಾನುಭೂತಿ — ಇವುಗಳ ಪ್ರಭಾವವನ್ನು ವರ್ಧಿಸಲೂ ಅದರಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವಿರುತ್ತದೆ ಎಂಬುದನ್ನು ನೆನಪಿಡಿ. ಅದು ಹೇಗೆ ಸಾಧ್ಯ? ಏಕೆಂದರೆ ಯಾವುದೇ ಡಿಜಿಟಲ್ ಸಂವಹನ ತಂತ್ರಜ್ಞಾನಕ್ಕಿಂತ ಹೆಚ್ಚು ಪರಿಣಾಮಕಾರಿಯಾದುದೆಂದರೆ ಕ್ರಿಯಾ ಯೋಗ ಧ್ಯಾನದಿಂದಾಗಿ ಮತ್ತು ಸದ್ಗುಣದ ಅನಂತ ಆಕರವಾದ ಭಗವಂತನೊಂದಿಗೆ ಶ್ರುತಿಗೂಡುವಿಕೆಯಿಂದಾಗಿ, ಶಕ್ತಿಯುತವಾಗಿ ಕೇಂದ್ರೀಕೃತವಾಗಿರುವ ಪ್ರತಿಯೊಂದು ಹೃದಯ ಮತ್ತು ಮನಸ್ಸಿನ ಪ್ರಸಾರ ಕೇಂದ್ರದಿಂದ ಪ್ರಪಂಚ-ಪರಿಸರದ ಅಣು ಅಣುಗಳಿಗೂ ಮತ್ತು ಎಲ್ಲ ಸಂವೇದಕ ಜೀವಿಗಳ ಪ್ರಜ್ಞೆ ಅಥವಾ ಸುಪ್ತಪ್ರಜ್ಞೆಗೂ ಪ್ರಸರಿಸುವಂತಹ ಸ್ಪಂದನ ಶಕ್ತಿ. ದೈನಂದಿನ ಧ್ಯಾನ ಮತ್ತು ನಮ್ಮ ಜಾಗತಿಕ ಪ್ರಾರ್ಥನಾ ವೃಂದದಲ್ಲಿ ಭಾಗವಹಿಸುವ ಬದ್ಧತೆಯಿಂದ ನೀವು ಎಷ್ಟು ಒಳ್ಳೆಯದನ್ನು ಮಾಡಲು ಸಾಧ್ಯ ಎಂಬುದನ್ನು ಎಂದಿಗೂ ಮರೆಯಬೇಡಿ.
ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್/ ಯೋಗದಾ ಸತ್ಸಂಗ ಸೊಸೈಟಿ ಮತ್ತು ಕ್ರಿಯಾ ಯೋಗದಂತಹ ಮಾರ್ಗಕ್ಕೆ ಸೆಳೆಯಲ್ಪಟ್ಟ, ಬೆಳಕು ಮತ್ತು ಸತ್ಯಗಳ ದಿವ್ಯ ಯೋಧನು ಭೂಮಿಯ ಮೇಲೆ ಆಧ್ಯಾತ್ಮಿಕ ಸಾಮರಸ್ಯವನ್ನು (ಧರ್ಮ) ಉತ್ತೇಜಿಸಲು ಬಾಹ್ಯ ಮತ್ತು ಆಂತರಿಕ ವಿಧಾನಗಳನ್ನು ಬಳಸಬಹುದು. ನಿಮ್ಮನ್ನು ಮತ್ತು ನಿಮ್ಮ ಪ್ರಜ್ಞೆಯಲ್ಲಿ ನೆಲೆಗೊಂಡಿರುವ ಯಾವುದೇ ಅಹಿತಕರ ಅಹಂ-ಪ್ರವೃತ್ತಿಗಳನ್ನು ಬದಲಿಸಲು ನೀವು ಪ್ರಥಮ ಆದ್ಯತೆಯನ್ನು ನೀಡುತ್ತಿರುವಂತೆಯೇ, ಅನಾಚಾರಕ್ಕೆ ಅಸಹಕಾರ ಒಡ್ಡುವ ಉದ್ದೇಶಕ್ಕೆ ಬಾಹ್ಯವಾಗಿ ಸಾಕ್ಷಿಯಾಗುವಂತಹ ಕರ್ತವ್ಯವನ್ನು ಪರಿಸ್ಥಿತಿಗಳು ನಿಮ್ಮ ಮುಂದೆ ಇರಿಸಿದಾಗ ಅದಕ್ಕಾಗಿ ಎಂದಿಗೂ ಭಯಪಡಬೇಡಿ. ಆದರೂ, ನಮ್ರತೆಯ ಕೊರತೆ ಮತ್ತು ಹಗೆತನಗಳು ನೀವು ಉದ್ದೇಶಪೂರ್ವಕವಾಗಿ ವಿರೋಧಿಸುತ್ತಿರುವ ಪಕ್ಷವನ್ನೇ ವಹಿಸುವಂತೆ ನಿಮ್ಮ ತಲೆಕೆಡಿಸಬಹುದು ಎಂಬುದನ್ನು; ಹಾಗೂ ಆಧ್ಯಾತ್ಮಿಕತೆ ಮತ್ತು ಸತ್ಯಗಳನ್ನು ರಾಜಕೀಯ ಸಂಬಂಧದಿಂದ ನಿಷ್ಕರ್ಷಿಸಲಾಗುವುದಿಲ್ಲ ಎಂಬುದನ್ನು ನೆನಪಿಡಿ.
ನಮ್ಮ ಪ್ರಸ್ತುತ ಯುಗದಲ್ಲಿ ಇತರ ಯುಗಗಳಲ್ಲಿರುವಂತೆಯೇ, ತೆರೆದುಕೊಳ್ಳುವ ಪ್ರಪಂಚದ ಘಟನೆಗಳ ನಾಟಕದ ಮೇಲೆ ಪ್ರಭಾವ ಬೀರುವ ಸಾಮೂಹಿಕ ಕರ್ಮವು ಯಾವಾಗಲೂ ಸೀಮಿತ ಮಾನವ ಬುದ್ಧಿಶಕ್ತಿಗೆ ಅರ್ಥವಾಗುವುದಿಲ್ಲ. ಅಂತಿಮವಾಗಿ, ಒಂದು ರಾಷ್ಟ್ರದ ಆರೋಗ್ಯ ಮತ್ತು ಸಾಮರಸ್ಯಗಳು ಆ ಸಮಾಜದಲ್ಲಿ ಚಾಲ್ತಿಯಲ್ಲಿರುವ ಒಳ್ಳೆಯದು ಮತ್ತು ಕೆಟ್ಟದ್ದರ ಮಿಶ್ರಣದಿಂದ ಮತ್ತು ಅದರ ಸಾಮೂಹಿಕ ಕರ್ಮದಿಂದ ಉಂಟಾಗುತ್ತವೆ. ನಮ್ಮ ಕಾಲದ ಮತ್ತು ಇತರ ಯಾವುದೇ ಕಾಲದ ಅವಶ್ಯಕತೆಯೆಂದರೆ ಜನಸಮೂಹಗಳು ತಮ್ಮ ಹೃದಯದಿಂದ ಅಧರ್ಮ, ಅನೈತಿಕತೆ ಮತ್ತು ಅಧಾರ್ಮಿಕ ಜೀವನದ ಅನಿಷ್ಟಗಳನ್ನು ದೂರಮಾಡುವುದು. ಈ ಕರಾಳ ಸಮಯಗಳಿಗೆ ನೀವು ಬೆಳಕನ್ನು ಒದಗಿಸಬಹುದಾದ ಅತ್ಯಂತ ಪ್ರಬಲವಾದ ಮಾರ್ಗವೆಂದರೆ ಎಲ್ಲ ಧರ್ಮಗಳಿಗೆ ಸಾಮಾನ್ಯವಾದ ದಿವ್ಯ ಸತ್ಯಗಳ ಕೆಲವು ತತ್ವಗಳನ್ನು ಪ್ರತಿದಿನ ಅಭ್ಯಾಸ ಮಾಡುವುದು, ಎಸ್‌ಆರ್‌ಎಫ್/ ವೈಎಸ್‌ಎಸ್ ಬೋಧನೆಗಳಲ್ಲಿ ಇವುಗಳ ಸಾರಸತ್ವವನ್ನು ಸಂಗ್ರಹಿಸಲಾಗಿದೆ. ಇದು ನಿಮ್ಮ ಪ್ರಜ್ಞೆಯನ್ನು ಉನ್ನತೀಕರಿಸಲು ಹಾಗೂ ನಿಮ್ಮ ಆಲೋಚನೆಗಳು ಮತ್ತು ಕಾರ್ಯಗಳನ್ನು ಭಗವಂತನ ಸದ್ಗುಣದ ಅಜೇಯ ಶಕ್ತಿಯಿಂದ ಪುಷ್ಟಿಗೊಳಿಸಲು ನೀವು ತೆಗೆದುಕೊಳ್ಳಬಹುದಾದ ಸಕ್ರಿಯ ಉಪಕ್ರಮವಾಗಿದೆ. ಉದಾಹರಣೆಗೆ ಪ್ರತಿದಿನ ಬೆಳಿಗ್ಗೆ, ಪಾಠಗಳಿಂದ ಸ್ವಲ್ಪ, ಅಥವಾ ಆಧ್ಯಾತ್ಮಿಕ ದಿನಚರಿಯಿಂದ — ಅಥವಾ ಭಗವದ್ಗೀತೆ ಅಥವಾ ಬೈಬಲ್‌ನಿಂದ ನಿಮ್ಮ ನೆಚ್ಚಿನ ಉಲ್ಲೇಖವನ್ನು ತೆಗೆದುಕೊಂಡು ಓದಿ — ಮತ್ತು ಅದನ್ನು ನಿಮ್ಮ ಆ ದಿನದ ವಿಷಯವನ್ನಾಗಿ ಮಾಡಿಕೊಳ್ಳಿ. ವಾರ್ತೆಗಳಲ್ಲಿ ನೀವು ಕೇಳುವ ವಿಷಯವು ನಿಮ್ಮ ಆಂತರಿಕ ಶಾಂತಿ ಮತ್ತು ಸಮತೋಲನವನ್ನು ಕದಡಿದಾಗ, ಬೆಳಗ್ಗೆ ಓದಿದ ಆ ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿ ಹಾಗೂ ಅದನ್ನು ದೃಢೀಕರಿಸಲು ಮತ್ತು ವ್ಯಕ್ತಪಡಿಸಲು ನೀವು ಬಳಸುವ ಇಚ್ಛಾಶಕ್ತಿಯ ಮೂಲಕ ನೀವು ಆ ನಕಾರಾತ್ಮಕತೆಯನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತಿದ್ದೀರಿ ಎಂದು ತಿಳಿಯಿರಿ. ನೀವು ಗುರೂಜಿಯವರ ಅದಮ್ಯ ಹಾಗೂ ಸಕಾರಾತ್ಮಕ ಮನೋಭಾವದ ಉದಾಹರಣೆಯನ್ನು ಅನುಸರಿಸುತ್ತ, ವಿಶಿಷ್ಟವಾಗಿ ನಾವು ಅನುಭವಿಸುತ್ತಿರುವ ಸಮಯಗಳಿಗಾಗಿ ಈ ಜಗತ್ತಿಗೆ ಅವರು ತಂದಂತಹ ವಿಶೇಷಾನುಗ್ರಹವಾದ ಭಗವತ್-ಸಂಸರ್ಗದ ಪವಿತ್ರ ಕ್ರಿಯಾ ಯೋಗ ವಿಜ್ಞಾನವನ್ನು ಅಭ್ಯಾಸ ಮಾಡಿದಾಗ, ಭಗವಂತ ಮತ್ತು ಈ ಜಗತ್ತನ್ನು ಕಾಯುವ ಮಹಾನ್ ಗುರುಗಳ ನೆರವಿನಿಂದ ಮನುಕುಲವನ್ನು, ಅಜ್ಞಾನದಿಂದುದಿಸಿದ ಭಯ ಮತ್ತು ದ್ವೇಷಗಳ ಶೃಂಖಲೆಗಳಿಂದ ಬಿಡಿಸಿ, ಭಗವಂತನ ಸಮನ್ವಯಗೊಳಿಸುವ ಮತ್ತು ಸಮತೋಲನವನ್ನು ತರುವ ಪ್ರೀತಿ ಮತ್ತು ಪರಮಾನಂದದ ಪ್ರಜ್ಞೆಯೊಂದಿಗೆ ಹೆಚ್ಚು ಶ್ರುತಿಗೂಡಿರುವಂತಹ ಜಗತ್ತಿಗೆ ಬರುವಂತೆ ಸಹಾಯ ಮಾಡಲು ಸಾಧ್ಯವೆಂದು ನಿಮಗೆ ನೀವೇ ಸಾಬೀತು ಪಡಿಸುವಿರಿ.
ನೀವು ಭೇಟಿಯಾಗುವ ಎಲ್ಲ ವ್ಯಕ್ತಿಗಳಲ್ಲಿ ಸದ್ಗುಣ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಅಭಿವ್ಯಕ್ತಿಗಳಿಗಾಗಿ ಹುಡುಕಿ ಮತ್ತು ಅವುಗಳ ಮೇಲೆ ಕೇಂದ್ರೀಕರಿಸಿ — ಅವರ ಅಭಿಪ್ರಾಯಗಳು ನಿಮ್ಮ ಸ್ವಂತದ ಅಭಿಪ್ರಾಯಗಳಿಗೆ ಹೊಂದಿಕೆಯಾಗದಿದ್ದರೂ ಸಹ — ಮತ್ತು ಕೇವಲ ಈ ರೀತಿಯಲ್ಲಿ ಗಮನ ಹರಿಸುವ ಕ್ರಿಯೆಯೇ ಜಗತ್ತಿನಲ್ಲಿ ಭಗವಂತನ ಉಪಸ್ಥಿತಿಯ ಅಭಿವ್ಯಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಭಗವಂತನು ಭಗವದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ: “ನಾನು ಸಕಲ ಜೀವಿಗಳ ಹೃದಯದಲ್ಲಿ ನೆಲೆಸಿದ್ದೇನೆ.” ಇತರರನ್ನು ಆತ್ಮಗಳಂತೆ ನೋಡಿ, ಹಾಗೂ ಆ ಗೌರವ ಮತ್ತು ಮೆಚ್ಚುಗೆಯ ಮನೋಭಾವದಿಂದಾಗಿ, ನೀವು ಸೂಕ್ಷ್ಮವಾಗಿ ಅವರಿಂದ ಹಾಗೂ ನಿಮ್ಮಿಂದ, ಆತ್ಮದ ಗುಣಗಳ ಹೆಚ್ಚಿನ ಅಭಿವ್ಯಕ್ತಿಯನ್ನು ಪಡೆದುಕೊಳ್ಳುವಿರಿ.
ಜಗತ್ತಿನಲ್ಲಿ ಅಥವಾ ನಿಮ್ಮ ಸ್ವಂತ ಜೀವನದಲ್ಲಿ ಏನು ದೋಷವಿದೆ ಎಂಬುದರ ಕುರಿತೇ ನೀವು ಹೆಚ್ಚಾಗಿ ಯೋಚಿಸುವುದು, ಓದುವುದು ಮತ್ತು ಮಾತನಾಡುವುದನ್ನು ನೀವು ಕಂಡುಕೊಂಡರೆ, ನಿಮ್ಮ ಗಮನವನ್ನು ಬದಲಾಯಿಸಲು ಪ್ರಯತ್ನಿಸಿ. ಆ ಸಮಯ ಮತ್ತು ಶಕ್ತಿಗಳನ್ನು ಒಳ್ಳೆಯ ಚಿಂತನೆಗಳನ್ನು ಯೋಚಿಸಲು, ಪ್ರಾರ್ಥನೆ ಮಾಡಲು, ಸೇವೆ ಮತ್ತು ಔದಾರ್ಯದಂತಹ ಸತ್ಕಾರ್ಯಗಳನ್ನು ಮಾಡಲು ಹಾಗೂ ದಯೆ, ತಿಳುವಳಿಕೆ ಮತ್ತು ಉಲ್ಲಾಸಗಳನ್ನು ಹೊರಹೊಮ್ಮಿಸುವಂತಹ ವ್ಯಕ್ತಿಯಾಗಲು ಬಳಸಿ. ಹಾಗೆ ಮಾಡುವುದರಿಂದ, ನಿಮ್ಮ ಹಾಗೂ ಇತರರ ಪ್ರಜ್ಞೆಯನ್ನು ನೀವು ಉನ್ನತೀಕರಿಸಿದಂತಾಗುತ್ತದೆ. ಮತ್ತು ನೀವು ನಿಷ್ಠೆಯಿಂದ ಧ್ಯಾನ ಮಾಡಿ, ಎಲ್ಲ ಆಲೋಚನೆಗಳು ಸ್ತಬ್ಧವಾಗಿರುವಂತಹ ನಿಮ್ಮ ಅಸ್ತಿತ್ವದ ಅಂತರಾಳದಲ್ಲಿರುವ ಪವಿತ್ರ ಧಾಮವನ್ನು ಪ್ರವೇಶಿಸಿದಾಗ, ಅಲ್ಲಿ, ಭಗವಂತನು ಪ್ರತಿ ಆತ್ಮವನ್ನು ಪ್ರೀತಿಸುವ ಪ್ರೀತಿಯನ್ನೇ ನೀವು ಹೆಚ್ಚು ಹೆಚ್ಚು ಅನುಭವಿಸುವಿರಿ ಮತ್ತು ನಿಮಗೆ ಆ ಪ್ರೀತಿಯನ್ನು ಇತರರಿಗೆ ಹಂಚಲು ಸಾಧ್ಯವಾಗುತ್ತದೆ. ನಿಮ್ಮ ಯೋಗಕ್ಷೇಮದ ಮೇಲೆ, ನಿಮ್ಮ ಸುತ್ತಮುತ್ತಲಿನವರ ಮೇಲೆ ಮತ್ತು ಮಾನವಕುಲದ ಮೇಲೆ ನಿಮ್ಮ ಆಧ್ಯಾತ್ಮಿಕ ಪ್ರಯತ್ನಗಳ ಧನಾತ್ಮಕ ಪರಿಣಾಮವು ಎಂದಿಗೂ ಕಡಿಮೆ ಬೆಲೆಯುಳ್ಳದ್ದು ಎಂದು ಎಣಿಸದಿರಿ. ಗುರೂಜಿ ಹೇಳಿದ್ದಾರೆ, “ದೇಹ, ಮನಸ್ಸು ಮತ್ತು ಆತ್ಮಗಳನ್ನು ಪರಮಾತ್ಮನೊಂದಿಗೆ ಸಮನ್ವಯಗೊಳಿಸಿಕೊಂಡು, ತನ್ನನ್ನು ತಾನು ಎಲ್ಲ ವಿಧವಾಗಿ ಉನ್ನತೀಕರಿಸಿಕೊಳ್ಳಲು ಪ್ರಯತ್ನಿಸುವವನು, ತನ್ನ ಸ್ವಂತ ಜೀವನದಲ್ಲಿ ಮಾತ್ರವಲ್ಲದೆ ತನ್ನ ಕುಟುಂಬ, ನೆರೆಹೊರೆ, ದೇಶ ಮತ್ತು ಪ್ರಪಂಚದಲ್ಲಿ ಸಕಾರಾತ್ಮಕ ಕರ್ಮವನ್ನು ಸೃಷ್ಟಿಸುತ್ತಾನೆ.”
ನಿಮ್ಮ ಜೀವನದಲ್ಲಿ ಭಗವಂತನ ಬೆಳಕು ಮತ್ತು ಪ್ರೀತಿಯನ್ನು ಹರಡಲು ನೀವು ಶ್ರಮಿಸುತ್ತಿರುವಂತೆ ಅವನು ನಿಮ್ಮನ್ನು ಸದಾ ಆಶೀರ್ವದಿಸಲಿ,
ಸ್ವಾಮಿ ಚಿದಾನಂದ ಗಿರಿ