ಶ್ರೀ ದಯಾ ಮಾತಾರವರಿಂದ ಹೊಸ ವರ್ಷದ ಸಂದೇಶ: 2011

ನಲ್ಮೆಯ ಸದಸ್ಯರೇ ಮತ್ತು ಸ್ನೇಹಿತರೇ,

ನಮ್ಮ ಪ್ರೀತಿಯ ಅಧ್ಯಕ್ಷರು ಹಾಗೂ ಸಂಘಮಾತಾ ಶ್ರೀ ದಯಾ ಮಾತಾಜಿಯವರು ಅವರು, ಮರಣಿಸುವ ಮುನ್ನ, ಎಂದಿನಂತೆ ಪ್ರತಿ ಹೊಸ ವರ್ಷದ ಆರಂಭದಲ್ಲಿ ನಮ್ಮ ಆಧ್ಯಾತ್ಮಿಕ ಪರಿವಾರ ಮತ್ತು ಸ್ನೇಹಿತರಿಗೆ ಕಳಿಸುವ ಸಂದೇಶವನ್ನು ಸಿದ್ಧಪಡಿಸಿದ್ದರು. ಈಗಲೂ ಆಕೆಯ ಸಹಾಯ ಮತ್ತು ಆಶೀರ್ವಾದಗಳು ನಮ್ಮೊಡನಿವೆ, ಮತ್ತು ಭಗವಂತನೊಡನೆ ಒಂದು ಗಾಢವಾದ ಸಂಬಂಧವನ್ನು ಹೊಂದಬೇಕೆಂದು ಶ್ರದ್ಧಾಸಕ್ತಿಯಿಂದ ಅರಸುತ್ತಿರುವ ನಿಮಗೆ ಮತ್ತು ಎಲ್ಲ ಆತ್ಮಗಳಿಗೆ ಈ ಪತ್ರವು ಒಂದು ನೆನಪಾಗಿರುತ್ತದೆ ಎಂದು ನೀವು ಬಯಸುತ್ತಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಕೆಯ ನುಡಿಗಳ ಮೂಲಕ ನೀವು ಆಕೆಯ ಉಪಸ್ಥಿತಿಯನ್ನು ಮತ್ತು ಉತ್ತೇಜನವನ್ನು ಅನುಭವಿಸಲಿ ಮತ್ತು ಆಕೆಯ ದಿವ್ಯ ಪ್ರೇಮದಿಂದ ಉನ್ನತ ಮಟ್ಟಕ್ಕೇರಲಿ.

ಮೃಣಾಲಿನಿ ಮಾತಾ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ / ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ನಿರ್ದೇಶಕ ಮಂಡಳಿಯ ಪರವಾಗಿ

ಹೊಸ ವರ್ಷ 2011

ನಾವೆಲ್ಲರೂ ಜೊತೆಗೂಡಿ ಈ ಹೊಸ ವರ್ಷವನ್ನು ಪ್ರವೇಶಿಸುತ್ತಿರುವಾಗ, ಗುರುದೇವ ಪರಮಹಂಸ ಯೋಗಾನಂದರ ಆಶ್ರಮದಲ್ಲಿರುವ ನಾವೆಲ್ಲ ನಿಮಗಾಗಿ ಪ್ರಾರ್ಥಿಸುತ್ತೇವೆ ಮತ್ತು ನಿಮಗೆ ನಮ್ಮ ಆತ್ಮದ ಸ್ನೇಹವನ್ನು ಕಳಿಸುತ್ತೇವೆ. ಕ್ರಿಸ್ಮಸ್‌ ಸಮಯದಲ್ಲಿನ ನಿಮ್ಮ ಪ್ರೀತಿಯ ಸಂದೇಶಗಳಿಗೆ ಮತ್ತು ನೆನಪುಗಳಿಗೆ ಮತ್ತು ಕಳೆದ ತಿಂಗಳುಗಳಲ್ಲಿ ನೀವು ಸೂಸಿದ ಕಾಳಜಿಯ ಮನೋಭಾವನೆಗಳಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ಏಕೀಕೃತ ಪ್ರಾರ್ಥನೆಗಳು ಮತ್ತು ನಮ್ಮೆಲ್ಲರಲ್ಲಿಯೂ ಇರುವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಎತ್ತಿಹಿಡಿಯುವ ಪ್ರಯತ್ನಗಳಿಂದ, ನಾವು ಒಬ್ಬರನ್ನೊಬ್ಬರು ಬಲಪಡಿಸುತ್ತೇವೆ. ಭರವಸೆಯ ಮನೋಭಾವವನ್ನು ಮತ್ತು ಭಗವಂತನ ಔದಾರ್ಯದಲ್ಲಿ ಹಾಗೂ ಪ್ರತಿಯೊಂದು ಆತ್ಮದ ದಿವ್ಯ ಸಾಮರ್ಥ್ಯದಲ್ಲಿ ವಿಶ್ವಾಸದ ಮನೋಭಾವವನ್ನು ಹರಡಲು ಸಹಾಯ ಮಾಡುತ್ತೇವೆ. ಸದಾ ಬದಲಾಗುತ್ತಿರುವ ಜಗತ್ತಿನ ನಿತ್ಯ ನಿಜಸ್ಥಿತಿಗಳನ್ನು ಭಯವಿಲ್ಲದೇ ಎದುರಿಸುತ್ತ, ನಾವು ಭಗವಂತನ ಉಪಸ್ಥಿತಿಯನ್ನು ಕಾಣುವಂತಾಗಲು ಮತ್ತು ಪ್ರತಿಬಿಂಬಿಸುವಂತಾಗಲು ನಮ್ಮ ಪ್ರಜ್ಞೆಯನ್ನು ಭಗವಂತನ ಬದಲಾಗದ ಪ್ರೀತಿಯಲ್ಲಿ ನೆಲೆಗೊಳಿಸೋಣ. ನಮ್ಮ ಸಂತೋಷಕ್ಕಾಗಿ ಅಥವಾ ನಮ್ಮ ಗುರಿಗಳನ್ನು ತಲುಪುವ ನಮ್ಮ ಸಾಮರ್ಥ್ಯಕ್ಕಾಗಿ ನಾವು ಹಾಕಿಕೊಂಡಿರುವ ಸೀಮಿತ ಕಟ್ಟುಪಾಡುಗಳನ್ನು ಕಿತ್ತೊಗೆದು ಒಂದು ಹೊಸ ಆರಂಭವನ್ನು ಮಾಡೋಣ ಎಂದು ನಾವು ಚಿಂತಿಸಿದಾಗ ಬಹಳ ಮುಕ್ತತೆಯ ಭಾವನೆಯು ಬರುತ್ತದೆ. ನಮ್ಮ ಹಿಂದಿನ ಅನುಭವಗಳು ಏನೇ ಇರಲಿ ಅಥವಾ ಸದ್ಯದ ಪರಿಸ್ಥಿತಿ ಏನೇ ಇರಲಿ, ಈ ಕ್ಷಣದಿಂದ ನಾವು ಒಂದು ಸಾರ್ಥಕ ಹಾಗೂ ಸೇವಾಪೂರ್ಣ ಜೀವನವನ್ನು ನಡೆಸಬಹುದು; ನಾವು ಭಗವಂತನೊಡನೆ ಶ್ರುತಿಗೂಡುವ ಚಾರಿತ್ರ್ಯದ ಗುಣಗಳನ್ನು ಬೆಳೆಸಿಕೊಳ್ಳಬಹುದು ಮತ್ತು ಪ್ರಶಂಸಾರ್ಹ ಸಾಧನೆಗಳನ್ನು ಸಾಧ್ಯವಾಗಿಸಿಕೊಳ್ಳಬಹುದು. ಮುಂಬರುವ ವರ್ಷದಲ್ಲಿರುವ ಹೊಸ ಅವಕಾಶಗಳ ಮೂಲಕ, ಭಗವಂತನು ನಮ್ಮ ಆತ್ಮದ ಸುಪ್ತ ಸ್ಥೈರ್ಯ ಮತ್ತು ಅಜೇಯತೆಯನ್ನು ಪುನರ್ಜಾಗೃತಿಗೊಳಿಸಲು ಕರೆ ನೀಡುತ್ತಾನೆ–ನಮ್ಮ ಜೀವನದ ಜವಾಬ್ದಾರಿಯನ್ನು ವಹಿಸಿಕೊಂಡು ನಾವೇನಾಗಬೇಕೆಂದು ಬಯಸಿದ್ದೀವೋ ಅದಾಗುವುದಕ್ಕೆ. ಮಹತ್ವದ ಮೊದಲ ಹೆಜ್ಜೆ ಎಂದರೆ ನಮ್ಮ ಪ್ರಜ್ಞೆಯ ಗಮನವನ್ನು ನಕಾರಾತ್ಮದಿಂದ ಸಕಾರಾತ್ಮದೆಡೆಗೆ ಬದಲಿಸುವುದು—ಅಡೆತಡೆಗಳಿಂದ ಗುರಿಯೆಡೆಗೆ, ಸನ್ನಿವೇಶಗಳನ್ನು ಎದುರಿಸುವಾಗ ಜಡತ್ವವನ್ನು ತೋರಿಸುವ ಬದಲು ನಾವು ನಮ್ಮ ವಿಧಿಯನ್ನು ನಾವೇ ರೂಪಿಸಿಕೊಳ್ಳಲು ಸಾಧ್ಯ ಎನ್ನುವುದನ್ನು ಅರಿಯುವುದರೆಡೆಗೆ. ನೀವು ಏನೆಲ್ಲ ಆಗಬೇಕೆಂದು ಬಯಸುತ್ತೀರೋ ಅದು ನಿಮ್ಮೊಳಗೇ ಇದೆ ಮತ್ತು ಆ ವಿಶಿಷ್ಟ ಗುಣಗಳನ್ನು ಸಕಾರಾತ್ಮಕ ಚಿಂತನೆಯಿಂದ ಮತ್ತು ಸದೃಢ ಕ್ರಿಯೆಗಳಿಂದ ನೀವು ಹೊರ ತರಬಹುದು. ವಿಶೇಷವಾಗಿ ನೀವು ಅಭಿವ್ಯಕ್ತಿಗೊಳಿಸಲು ಬಯಸುವ ಹೆಚ್ಚಿನ ಸಂಕಲ್ಪ ಶಕ್ತಿ, ವಿಶ್ವಾಸ ಅಥವಾ ಸಹನೆಯಂತಹ ಗುಣಗಳನ್ನು ನಿರಂತರವಾಗಿ ದೃಢೀಕರಿಸಿ ಮತ್ತು ಅಭ್ಯಾಸ ಮಾಡಿ. ಹೀಗೆ ನಿಮ್ಮ ಪ್ರಜ್ಞೆಯ ಅತ್ಯಂತ ಆಳವಾದ ಸ್ತರದಲ್ಲಿ ಯಶಸ್ಸಿನ ಬೀಜಗಳನ್ನು ನೀವು ನೆಡುತ್ತೀರಿ. ಹಳೆಯ ಚಿತ್ರಗಳು ಮರುಕಳಿಸಿದರೆ, ಬಿಟ್ಟುಕೊಡಲು ಒಪ್ಪಿಕೊಳ್ಳಬೇಡಿ. ನೀವು ನವಚೈತನ್ಯ ತುಂಬಿದ ನಿರ್ಧಾರವನ್ನು ತಳೆದ ಪ್ರತಿ ದಿನ ಮತ್ತು ಪ್ರತಿ ಕ್ಷಣವೂ ನೀವು ಹೊಸ ಆರಂಭವನ್ನು ಮಾಡಬಲ್ಲಿರಿ ಎಂಬುದನ್ನು ನೆನಪಿನಲ್ಲಿಡಿ.

ಈ ಪ್ರಪಂಚದಲ್ಲಿ ನಾವು ಅರಸುವ ಎಲ್ಲದರ ಹಿಂದಿರುವ ನಮ್ಮ ಅತ್ಯುನ್ನತ ಅವಶ್ಯಕತೆಯೆಂದರೆ — ನಮ್ಮ ಅಸ್ತಿತ್ವದ ಮೂಲವಾದ ಭಗವಂತನೊಡನೆ ನಮ್ಮ ಸಂಬಂಧವನ್ನು ಪುನರ್‌ಸ್ಥಾಪಿಸಿಕೊಳ್ಳುವುದು. ನಿಮ್ಮ ಮತ್ತು ಈ ಪ್ರಪಂಚದ ಎಲ್ಲ ವಿಚಾರಗಳನ್ನು ಬಿಟ್ಟು ಹಾಕಿ, ನೀವು ಭಗವಂತನೊಡನೆ ಸಂಸರ್ಗವನ್ನು ಏರ್ಪಡಿಸಿಕೊಂಡಾಗ, ಎಂತಹ ಆಹ್ಲಾದಕರ ಶಾಂತಿಯು ನಿಮ್ಮ ಅಂತರಾಳವನ್ನು ಆವರಿಸುತ್ತದೆ–ಬೇರೆ ಯಾವುದೂ ಕೊಡಲಾರದ ಒಂದು ಮಾಧುರ್ಯ ಮತ್ತು ನೆಮ್ಮದಿಯ ಭಾವ. ನೀವು ಅವನ ಪ್ರೇಮದಲ್ಲಿ ಸುರಕ್ಷಿತರಾಗಿದ್ದೀರಿ ಮತ್ತು ಅವನ ಸಹಾಯದಿಂದ ನೀವು ಏನು ಬೇಕಾದರೂ ಮಾಡಬಹುದು ಎಂಬುದನ್ನು ಅರಿಯಿರಿ. ಗುರೂಜಿ ಹೇಳಿದ ಹಾಗೆ, “ಇತಿಮಿತಿಯನ್ನನುಭವಿಸಿದ ಪ್ರತಿ ಭಾರಿಯೂ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಿಮಗೇ ಹೇಳಿಕೊಳ್ಳಿ, ʼನಾನು ಅನಂತ,ʼ ಆಗ ನಿಮ್ಮಲ್ಲಿರುವ ಆ ಶಕ್ತಿಯನ್ನು ಮನಗಾಣುತ್ತೀರಿ.” ನಿಮ್ಮನ್ನು ನೀವು ನಿರಂತರವಾಗಿ ಉತ್ತಮಗೊಳಿಸಿಕೊಳ್ಳಲು ಆ ಶಕ್ತಿಯನ್ನು ಉಪಯೋಗಿಸುವುದರಿಂದ, ನಿಮ್ಮನ್ನು ಹಾದು ಹೋಗುವ ಪ್ರತಿಯೊಬ್ಬರ ಮೇಲೂ ನೀವು ಒಂದು ಸಕಾರಾತ್ಮಕ, ಉದ್ಧರಿಸುವ ಪ್ರಭಾವವನ್ನು ಬೀರಬಲ್ಲಿರಿ. ಭಗವಂತನ ಅಡಿಯಲ್ಲಿ ನಿಮ್ಮ ಮಹಾನ್‌ ಆಕಾಂಕ್ಷೆಗಳು ಮತ್ತು ನಿರ್ಧಾರಗಳನ್ನು ಸಮರ್ಪಿಸುವಾಗ, ಅವನ ಉತ್ತೇಜನಪೂರ್ಣ ಉಪಸ್ಥಿತಿಯನ್ನು ಮತ್ತು ಮೃದು ಆರೈಕೆಯಿಂದ ಅವನು ನಿಮ್ಮ ಆತ್ಮದ ವಿಕಸನವನ್ನು ಮಾರ್ಗದರ್ಶಿಸುತ್ತ ನಿಮ್ಮನ್ನು ಅವನ ಬಳಿಗೆ ಸೆಳೆದುಕೊಳ್ಳುತ್ತಿರುವುದನ್ನು ನೀವು ಮನಗಾಣುವಂತಾಗಲಿ.

ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಒಂದು ಆಶೀರ್ವಾದಪೂರ್ಣ ಕ್ರಿಸ್ಮಸ್‌

ಶ್ರೀ ದಯಾ ಮಾತಾ

ಇದನ್ನು ಹಂಚಿಕೊಳ್ಳಿ