ದುರ್ಗಾ ಮಾತಾರವರ ಸ್ಮರಣೆಗಳು

ದುರ್ಗಾ ಮಾತಾ (1903-1993), ಪರಮಹಂಸ ಯೋಗಾನಂದರ ಬಹಳ ಮುಂಚಿನ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದರು, ಮತ್ತು ಅವರ ಜಾಗತಿಕ ಕಾರ್ಯದ ಅನುಷ್ಠಾನದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಿದರು. ಮಹಾನ್ ಗುರುಗಳ “ಮೊದಲ ತಲೆಮಾರಿನ” ಇತರ ಶಿಷ್ಯರುಗಳ ಜೊತೆ, ದುರ್ಗಾ ಮಾತಾ ಹಲವಾರು ವರ್ಷಗಳ ಕಾಲ ಗುರುಗಳನ್ನು ವ್ಯಕ್ತಿಗತವಾಗಿ ಸೇವೆ ಮಾಡುವ ಮತ್ತು ಗುರುಗಳ ಆಧ್ಯಾತ್ಮಿಕ ದಿವ್ಯ ಗೀತೆಗಳ ಗಾಯನದ ಚೈತನ್ಯವನ್ನು ಪ್ರತ್ಯಕ್ಷವಾಗಿ ತುಂಬಿಕೊಳ್ಳುವ ಭಾಗ್ಯವನ್ನು ಹೊಂದಿದ್ದರು.
ದುರ್ಗಾ ಮಾತಾ ಮತ್ತು ಇತರ ಶಿಷ್ಯರು, ದಿನನಿತ್ಯದ ದಿನಚರಿಯಿಂದ ಬಿಡುವನ್ನು ಪಡೆಯಲು ಕೆಲವು ವಿಶೇಷ ಸಂದರ್ಭಗಳಲ್ಲಿ ಕೆಲವು ಅರಣ್ಯ ಪ್ರದೇಶಗಳಿಗೆ ಗುರುಗಳೊಡನೆ ಹೋಗುವ ಭಾಗ್ಯವನ್ನು ಹೊಂದಿದ್ದರು. ಭಕ್ತಾದಿಗಳೊಡನೆ ದಿವ್ಯ ಗೀತೆಗಳ ಗಾಯನ ಮತ್ತು ಧ್ಯಾನಕ್ಕಾಗಿ ಆದ ಬಹಳಷ್ಟು ಭೇಟಿಗಳಲ್ಲಿ ಒಂದು ಸಲ ಆಕೆ ಹೀಗೆ ಹೇಳಿದರು:
“ಪಾಮ್ ಸ್ಪ್ರಿಂಗ್ಸ್‌ನ ಪಾಮ್ ಕ್ಯಾನಿಯನ್‌ಗೆ ಭಕ್ತಾದಿಗಳ ಗುಂಪಿನೊಂದಿಗೆ ನಾನು ಗುರುಗಳ ಜೊತೆ ಹೋಗಿದ್ದು ನನಗೆ ನೆನಪಿದೆ. ನಾವು ಆ ಕ್ಯಾನಿಯನ್ (ದೊಡ್ಡ ಕಂದರ)ನ ಒಳಗೆ ಹೋಗಿ ಧ್ಯಾನ ಮಾಡಿದೆವು; ಮತ್ತು ಗುರುಗಳು ಬಹಳ ಆಳವಾದ ಸಮಾಧಿಯನ್ನು ಹೊಕ್ಕರು. ಆಗ ನಾನು ಅವರ ಬಳಿ ಇರಲಿಲ್ಲ; ಒಂದು ಬಂಡೆಯ ಮೇಲೆ ಕೂತು ನಾನೊಬ್ಬಳೇ ಧ್ಯಾನ ಮಾಡುತ್ತಿದ್ದೆ. ಸ್ವಲ್ಪ ಸಮಯದ ನಂತರ, ಅವರು ನಮ್ಮೆಲ್ಲರನ್ನೂ ಕರೆದು ಹೌಸ್‌ಕಾರ್‌ಗೆ ಹಿಂದಿರುಗುವಂತೆ ಹೇಳಿದರು. ಅವರು ಕ್ಯಾನಿಯನ್ ಉದ್ದಕ್ಕೂ ನಮ್ಮ ಜೊತೆ ನಡೆಯುವಾಗ, ನಾನು ಅತ್ಯಂತ ಸಮೀಪದಲ್ಲಿ ಅವರ ಹಿಂದುಗಡೆಯೇ ಇದ್ದೆ. ಇದ್ದಕ್ಕಿದ್ದ ಹಾಗೆ ಒಂದು ಅತ್ಯಮೋಘ ಪ್ರಶಾಂತತೆ ಅವರಿಂದ ಹೊರಹೊಮ್ಮುವುದನ್ನು ಗಮನಿಸಿದೆ. ಅದು ನನ್ನೊಳಗಿನಿಂದ ಬಂದದ್ದಲ್ಲ, ಅದು ಅವರೊಳಗಿನಿಂದ ಬರುತ್ತಿತ್ತು. ಅವರ ಸ್ಪಂದನಗಳ ಪ್ರಭಾಮಂಡಲದ ಅತ್ಯಂತ ಸಮೀಪದಲ್ಲಿ ನಾನಿದ್ದೆ. ತತ್‌ಕ್ಷಣ ಅದು ನನ್ನನ್ನು ಒಂದು ಆಳವಾದ, ಅಲೌಕಿಕ ಪ್ರಶಾಂತತೆಯ ಸ್ಥಿತಿಗೆ ಮೇಲಕ್ಕೆತ್ತಿತು. ನಾನು ನಡೆಯುತ್ತಾ ಹೋದೆ, ಮತ್ತು ನನ್ನ ಸುತ್ತಲಿರುವ ಎಲ್ಲದರ ಬಗ್ಗೆಯೂ ಅರಿವುಳ್ಳವಳಾಗಿದ್ದೆ – ನಾನು ಮುಂದಕ್ಕೆ ಹೆಜ್ಜೆಯಿಡುವ ಮಾರ್ಗದಲ್ಲಿ ಕಾಲೆತ್ತಿಡಬೇಕಾದ ಕಲ್ಲುಗಳನ್ನು ನೋಡುತ್ತಾ. ಆದರೂ ನನಗೆ ನನ್ನ ಶರೀರದ ಪ್ರಜ್ಞೆಯಿರಲಿಲ್ಲ. ಕೇವಲ ಈ ಸರ್ವವ್ಯಾಪಿ ಪ್ರಶಾಂತತೆಯ ಅನುಭವ ಮಾತ್ರ ಇತ್ತು; ನಾನು ಈ ಶರೀರದಲ್ಲಿದ್ದೇನೆ ಎಂಬ ಅರಿವೇ ನನಗಿರಲಿಲ್ಲ.
“ನಂತರ ಗುರುಗಳು ನನ್ನೆಡೆಗೆ ತಿರುಗಿ ಹೇಳಿದರು: ‘ಸ್ವಲ್ಪ ಕಟ್ಟಿಗೆಯನ್ನು ಎತ್ತಿಕೋ.ʼ ನಾವು ಬೆಂಕಿಯನ್ನು ಹೊತ್ತಿಸಬೇಕಾಗಿತ್ತು. ನಾನು ನನ್ನ ಕಟ್ಟಿಗೆಯನ್ನು ಎತ್ತಿಕೊಂಡು, ಕಟ್ಟಿಗೆಯ ಹೊರೆಯನ್ನೆತ್ತಿಕೊಂಡು ಮುಂದೆ ಸಾಗಿದೆ – ಆದರೆ ಆ ಆನಂದ-ತುಂಬಿದ ಪ್ರಶಾಂತತೆಯ ಒಂದು ಕ್ಷಣವನ್ನೂ ಕಳೆದುಕೊಳ್ಳಲಿಲ್ಲ. ನನ್ನ ಮನಸ್ಸು ಶಾಂತ ಮತ್ತು ನಿಶ್ಚಲವಾಗಿತ್ತು – ಚಡಪಡಿಕೆ ಅಥವಾ ಯೋಚನೆಯ ಒಂದು ಸಣ್ಣ ಅಲೆಯೂ ಇರಲಿಲ್ಲ. ಆದರೂ ನಾನು ಎಲ್ಲವನ್ನೂ ನೋಡಬಲ್ಲವಳಾಗಿದ್ದೆ ಮತ್ತು ಅನುಭವಿಸಬಲ್ಲವಳಾಗಿದ್ದೆ. ನಾವು ಹೌಸ್‌ಕಾರ್ ಅನ್ನು ತಲುಪಿದಾಗ, ನಾನು ಹೊತ್ತು ತಂದಿದ್ದ ಕಟ್ಟಿಗೆಯ ಕಟ್ಟನ್ನು ಕೆಳಗೆ ಹಾಕಿದೆ, ಆಗ ಗುರುಗಳು ನನ್ನೆಡೆಗೆ ತಿರುಗಿ: ‘ನಿಶ್ಚಲತೆಯೇ ಭಗವಂತ.ʼ ಎಂದರು.
“ಅದೊಂದು ದೊಡ್ಡ ಪಾಠವಾಗಿತ್ತು. ನಾವು ಭಗವಂತನ ಪ್ರತಿಬಿಂಬದಲ್ಲಿ ಮಾಡಲ್ಪಟ್ಟಿದ್ದೇವೆ; ಮತ್ತು ಗುರುಗಳು ಹೇಳುತ್ತಿದ್ದ ಹಾಗೆ: ‘ಭಗವಂತ ಇಲ್ಲೇ ಇದ್ದಾನೆ, ಇಲ್ಲೇ ನಮ್ಮೊಳಗೆ. ನೀವು ಯಾಕೆ ಅವನನ್ನು ನೋಡುತ್ತಿಲ್ಲ? ಏಕೆಂದರೆ, ನೀವು ಬೇರೆಲ್ಲೆಡೆಯೂ ನೋಡುತ್ತಿದ್ದೀರಿ.ʼ ನೀವು ನಿಮ್ಮ ಪ್ರಜ್ಞೆಯನ್ನು ಆಂತರ್ಯದೊಳಗೆ ತಿರುಗಿಸಿ, ಅದನ್ನು ಒಳಗೇ ಇಟ್ಟುಕೊಂಡಾಗ ಮತ್ತು ನಿರಂತರವಾಗಿ ಅದನ್ನು ಹೊರಗೆ ಎಸೆಯದೇ ಇದ್ದಲ್ಲಿ, ನೀವು ಅವನನ್ನು ಇಂದು, ನಾಳೆ, ಎಂದೆಂದೂ ನೋಡಬಹುದು.”
ಆಧ್ಯಾತ್ಮಿಕ ದಿವ್ಯ ಗೀತೆಗಳ ಗಾಯನದ ಕಲೆಯ ಬಗ್ಗೆ ಪರಮಹಂಸ ಯೋಗಾನಂದರಿಂದ ಆಕೆ ಪಡೆದ ವ್ಯಕ್ತಿಗತ ತರಬೇತಿಯನ್ನು ಹಂಚಿಕೊಳ್ಳಲು ದುರ್ಗಾ ಮಾತಾ ಆಗಾಗ್ಗೆ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಆಶ್ರಮಗಳಲ್ಲಿ ಭಕ್ತಾದಿಗಳ ಗುಂಪುಗಳನ್ನು ಸಂಧಿಸುತ್ತಿದ್ದರು. ಈ ಸಭೆಗಳು ಶಿಷ್ಯರಿಗೆ ಗುರುಗಳ ದಿವ್ಯ ಗೀತೆಗಳ ನುಡಿಗಳು ಮತ್ತು ಇಂಪಾದ ಗಾಯನವನ್ನು ಕಲಿಯುವ ಅವಕಾಶವನ್ನು ಮಾತ್ರವಲ್ಲದೇ, ಏಕಾಗ್ರತೆಯಿಂದ, ಅರಿವಿನಿಂದ ಮತ್ತು ಭಕ್ತಿಯಿಂದ ಹಾಡುವ ಕಲೆಯನ್ನೂ ಕಲಿಸುತ್ತಿದ್ದವು. ಕೆಳಗಿನದು ಈ ಸಂದರ್ಭಗಳಲ್ಲಿ ಆಕೆ ಹೇಳಿದ ವಿವರಣೆಗಳ ಒಂದು ಸಂಗ್ರಹ:
“ದಿವ್ಯ ಗೀತೆಗಳ ಗಾಯನವು ನಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಅಂತರ್ಮುಖಿಯಾಗಿಸಲು ಸಹಾಯ ಮಾಡುವ ಒಂದು ಅದ್ಭುತ ವಿಧಾನ… ನಾವು ಸ್ಪಷ್ಟವಾಗಿ ಸತ್ಯ, ಅಥವಾ ಭಗವಂತನನ್ನು ಗ್ರಹಿಸಲು, ಚಂಚಲತೆ ಮತ್ತು ಮಾನಸಿಕ ಕಸಕಡ್ಡಿಯ ಕೆಸರಿನ ರಾಡಿಯನ್ನು ತಿಳಿಯಾಗಿಸಲು ನಮಗೆ ಸಹಾಯ ಮಾಡುವ ಒಂದು ವಿಧಾನ.”
“ಗುರುಗಳು ನಮಗೆ ಹೇಳುತ್ತಿದ್ದರು, ದಿವ್ಯ ಗೀತೆಯ ಗಾಯನ ಭಗವಂತನನ್ನು ಸಾಕ್ಷಾತ್ಕರಿಸುವ ಮಾರ್ಗಗಳಲ್ಲಿ ಒಂದು…. ನಾವು ದಿವ್ಯ ಗೀತೆಗಳನ್ನು ಹಾಡುವಾಗ, ಗೀತೆಯಲ್ಲಿನ ನುಡಿಗಳಲ್ಲಿ ವ್ಯಕ್ತಪಡಿಸಿದ ಚಿಂತನೆಯ ಮೇಲೆ ಮನಸ್ಸನ್ನು ನಿಯಂತ್ರಿಸಿ ಒಂದೇ ವಿಷಯದ ಮೇಲೆ ಏಕಾಗ್ರಗೊಳ್ಳುವಂತೆ ಮಾಡಲು ಪ್ರಯತ್ನಿಸುತ್ತೇವೆ. ಗಾಯನವು ಮುಗಿದ ಮೇಲೆ, ಆಲೋಚನೆ, ಗಾಯನ, ಧ್ವನಿಗಳು ಅಥವಾ ಯಾವುದೇ ಅಭಿವ್ಯಕ್ತಿಗಳ ಆಚೆಗೆ ಹೋಗಿ ಬಹಳ ಸುಲಭವಾಗಿ ಮೌನ ಧ್ಯಾನದೊಳಗೆ ಹೋಗಲು ಸಾಧ್ಯವಾಗುತ್ತದೆ. ಆ ಒಂದೇ ಸಮಯದಲ್ಲಿ ಮಾತ್ರ ಭಗವಂತ ಬರಬಲ್ಲ: ಮನಸ್ಸಿನ ಪ್ರಶಾಂತತೆ ಮತ್ತು ಆಂತರಿಕ ನಿಶ್ಚಲತೆಯಲ್ಲಿ.”
“ಗುರುಗಳು ಈ ದಿವ್ಯ ಗೀತೆಗಳನ್ನು ರಚಿಸುವಾಗ, ಅವರು ಹೇಳುತ್ತಿದ್ದ ಹಾಗೆ, ಅವು “ಆಧ್ಯಾತ್ಮಿಕ” ವಾಗುವವರೆಗೂ ಅವರು ಅದನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತಿದ್ದರು. ಅವರ ಮಾತಿನ ಅರ್ಥವೇನೆಂದರೆ, ಅವರು ಈ ದಿವ್ಯ ಗೀತೆಗಳಲ್ಲಿ ಹಾಕಿದ ಪ್ರತಿ ಪದದ ಹಿಂದಿರುವ ಆಧ್ಯಾತ್ಮಿಕ ಅರಿವನ್ನು ಅವರು ಪ್ರತ್ಯಕ್ಷ ಅನುಭವದಿಂದ ಅರಿಯುವವರೆಗೂ ಅವರು ಅವನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತಿದ್ದರು. ಅವರು ಅವನ್ನು ಕೇವಲ ತಮ್ಮ ಕಂಠದಿಂದ ಮಾತ್ರ ಹಾಡುತ್ತಿರಲಿಲ್ಲ, ಅವರ ಹೃದಯ ಮತ್ತು ಮನಸ್ಸು ಮತ್ತು ವಿಶೇಷವಾಗಿ ಅವರ ಆತ್ಮದಿಂದಲೂ. ಅವರೊಡನೆ ನಾವು ಹಾಡಿದಾಗಲೆಲ್ಲ, ನಾವು ಗಾಯನದಲ್ಲಿ ನಮ್ಮನ್ನು ನಾವು ನಿಜವಾಗಿ ತೊಡಗಿಸಿಕೊಂಡಾಗ, ಅವರ ಆಧ್ಯಾತ್ಮಗೊಂಡ ಅರಿವುಗಳು ಅವರ ಪ್ರಜ್ಞೆಯಿಂದ, ಅವರು ಅನುಭವಿಸುತ್ತಿರುವ ಅದ್ಭುತ ಆನಂದಮಯ ಸಂಸರ್ಗದ ಮಿನುಗುನೋಟವನ್ನು ನಮಗೆ ನೀಡುತ್ತಾ ನಮ್ಮೊಳಗೇ ಉಕ್ಕಿಹರಿಯುತ್ತಿದ್ದವು.”