ಮೂಲತಃ ಯೋಗದಾ ಸತ್ಸಂಗ ನಿಯತಕಾಲಿಕೆಯಲ್ಲಿ ಪ್ರಕಟವಾದದ್ದು
“ಪ್ರಾರ್ಥನೆಯ ಶಕ್ತಿ”
ಮಾನವ ಕೋಟಿಯು ಕ್ರಮೇಣವಾಗಿ ಹೆಚ್ಚಿನ ಪ್ರಬುದ್ಧತೆಯ ಕಾಲಕ್ಕೆ ಎಚ್ಚೆತ್ತುಕೊಂಡಾಗ, ನಾವು ಹಿಂದಿಕ್ಕಿ ಹೋಗುವ ಕೆಳಗಿನ ಸ್ತರದ ಇತಿಮಿತಿಯ ಮನಸ್ಥಿತಿಯನ್ನು ದೂರಮಾಡುವ ಹೊಯ್ದಾಟದಲ್ಲಿ ಈ ಜಗತ್ತು ಪ್ರಕ್ಷುಬ್ಧತೆಯ ಅವಧಿಗಳನ್ನು ಹಾದುಹೋಗುತ್ತದೆ ಎಂದು ಪರಮಹಂಸ ಯೋಗಾನಂದರು ಮೊದಲೇ ಕಂಡುಕೊಂಡಿದ್ದರು. ಈ ಕಾಲವು ಅಂಧಕಾರವನ್ನು ದೂರಮಾಡುವ ವರ್ಧಿಸುತ್ತಿರುವ ಆಧ್ಯಾತ್ಮಿಕ ಪ್ರಕಾಶಗಳಲ್ಲೊಂದಾಗಿದೆ ಎಂದು ಅವರು ನಮಗೆ ಭರವಸೆ ನೀಡಿದ್ದರು. ಆದರೂ, ಈ ಐಹಿಕ ಜಗತ್ತಿನಲ್ಲಿ ನಾವು ಜೀವನದ ಅಪರಿಹಾರ್ಯ ಏರಿಳಿತಗಳನ್ನು ಅನುಭವಿಸಿದಾಗ, ಮತ್ತು ಸಾಂಘಿಕ ಕರ್ಮದ ಪ್ರವಾಹದೆದುರಿನಲ್ಲಿ ಸಿಲುಕಿದ ಅಮಾಯಕ ಆತ್ಮಗಳ ತೊಳಲನ್ನು ನೋಡಿದಾಗ, ನಾವು ಎಷ್ಟು ದುರ್ಬಲರು ಎಂದೆನಿಸುತ್ತದೆ. ಅಂತಹ ಸಮಯಗಳಲ್ಲಿ, ಅಂತರಾಳವು “ಏಕೆ?” ಎಂದು ತನ್ನ ಅಳಲನ್ನು ತೋಡಿಕೊಂಡಾಗ, ಮತ್ತು ನಮ್ಮ ಮಾನುಷ ತಿಳಿವು ಪರಿಪೂರ್ಣ ಅರ್ಥವನ್ನು ಕಂಡುಕೊಳ್ಳದಾದಾಗ, ನಾವು ಈ ಸೀಮಿತ ವ್ಯಾಪ್ತಿಯಿಂದಾಚೆಗಿರುವ, ಮಾಯೆಯ ಎಲ್ಲ ಭೋರ್ಗರೆತದ ನಡುವೆ ನಮ್ಮನ್ನು ಸಂರಕ್ಷಿಸುವ ಆಶ್ರಯಧಾಮವಾದ ದಿವ್ಯಾತ್ಮದ ಕಡೆಗೆ ನೋಡಬೇಕಾಗುತ್ತದೆ.
ಭಗವಂತನ ಆಲೋಚನಾ ಶಕ್ತಿಯಿಂದ ವಿಶ್ವದಲ್ಲಿರುವ ಎಲ್ಲವೂ ಅಸ್ತಿತ್ವಕ್ಕೆ ಬಂದಿವೆ. ನಾವು ಅವನ ಮಕ್ಕಳು. ಅವನ ಸರ್ವಸಂಪನ್ನ ಇಚ್ಛೆಯೊಂದಿಗೆ ನಮ್ಮ ಆಲೋಚನೆಗಳನ್ನು ಹಾಗೂ ಕ್ರಿಯೆಗಳನ್ನು ಶ್ರುತಿಗೂಡಿಸಿಕೊಂಡಾಗ ನಾವು ಮರ್ತ್ಯ ಅಸಹಾಯಕತೆಯ ಭ್ರಮೆಯಿಂದ ಮುಕ್ತರಾಗುತ್ತೇವೆ ಮತ್ತು ಈ ಜಗತ್ತಿನಲ್ಲಿ ಒಳ್ಳೆಯದಕ್ಕಾಗಿ ಒಂದು ಚಾಲಕಶಕ್ತಿಯಾಗುವ ನಮ್ಮಲ್ಲಿರುವ ಸಾಮರ್ಥ್ಯವನ್ನು ವಾಸ್ತವೀಕರಿಸುತ್ತೇವೆ. ಆತ್ಮದ ಅಂತಸ್ಥ ವಿಶ್ವಾಸ, ಭರವಸೆ ಮತ್ತು ನಿರುಪಾಧಿಕವಾಗಿ ಪ್ರೇಮಿಸಲ್ಪಡುವ ಅರಿವಿನಿಂದ ಹೊರಹೊಮ್ಮುವ ಪ್ರಾರ್ಥನೆಯು ಭಗವಂತನ ಉಪಶಮನಕಾರಿ ಶಕ್ತಿಯ ಅಸೀಮ ಭಂಡಾರದಿಂದ ಶಕ್ತಿಯನ್ನು ಸೆಳೆಯುತ್ತದೆ. ನಮ್ಮ ಹೃದಯಾಂತರಾಳದ ನೈಜ ಭಕ್ತಿ ಹಾಗೂ ನಿಷ್ಕಪಟದ ತುರ್ತಿನಿಂದ ನಾವು ಭಗವಂತನೊಡನೆ ಅಂತರಂಗದಲ್ಲಿ ಮಾತನಾಡಿದಾಗ, ನಮ್ಮ ಪ್ರಾರ್ಥನೆಯನ್ನು ಏಕನಿಷ್ಠೆಯ ಚಿಂತನಾ ಶಕ್ತಿಯಿಂದ ಸಂಪೂರಣಗೊಳಿಸಿದಾಗ, ಸೃಜನಾತ್ಮಕ ದಿವ್ಯಪ್ರಜ್ಞೆಯಲ್ಲಿ ಅದು ವಾಸ್ತವಗೊಳ್ಳುತ್ತದೆ. ನಾವು ದೃಶ್ಯೀಕರಿಸುತ್ತಿರುವ ಸಹಾಯವು ಭಗವಂತನ ಸರ್ವಶಕ್ತಿಯಿಂದ ಶಕ್ತಿಯುತವಾಗುತ್ತದೆ ಮತ್ತು ನಮ್ಮ ಹಾಗೂ ಇತರರ ಜೀವನಗಳಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಲು ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ. “ಬಹಳಷ್ಟು ಜನರು ಘಟನೆಗಳ ಗತಿಯನ್ನು ಸಹಜ ಹಾಗೂ ಅನಿವಾರ್ಯ ಎಂದು ಪರಿಗಣಿಸುತ್ತಾರೆ” ಎಂದು ಗುರುದೇವರು ನಮಗೆ ಹೇಳಿದ್ದಾರೆ. “ಪ್ರಾರ್ಥನೆಯಿಂದ ಎಂತಹ ಆಮೂಲಾಗ್ರ ಬದಲಾವಣೆ ಸಾಧ್ಯ ಎಂಬುದು ಅವರಿಗೆ ತಿಳಿದೇ ಇಲ್ಲ.” ಪ್ರಾರ್ಥನೆಯು ನಮ್ಮ ವಿಶ್ವ ಕುಟುಂಬವನ್ನು ಅಗತ್ಯವಿರುವ ಸಮಯದಲ್ಲಿ ತಲುಪಲು ಬೇಕಾದ ಬಹಳ ಪರಿಣಾಮಕಾರಿ ಹಾಗೂ ತತ್‌ಕ್ಷಣದ ಮಾರ್ಗಗಳಲ್ಲಿ ಒಂದಾಗಿದೆ. ಆ ಪ್ರಜ್ಞೆಯಲ್ಲಿ, ಯಾತನೆಯುನ್ನುಂಟುಮಾಡುವ ಪರಿಸ್ಥಿತಿಯ ಬಗ್ಗೆ ನಾವು ಅರಿತಾಗ, ಪ್ರಾರ್ಥಿಸುವುದೇ ನಮ್ಮ ಮೊದಲ ಪ್ರತಿಕ್ರಿಯೆಯಾಗಿರಲಿ–ತೊಂದರೆಗೊಳಗಾದವರನ್ನು ಭಗವಂತನ ಪ್ರೀತಿಯ ಭದ್ರಕೋಟೆಯಲ್ಲಿ ಸುರಕ್ಷಿತವಾಗಿಡಲು. ಹಾಗೆ ಮಾಡುವುದರಿಂದ, ನಾವು ಅವನ ಆಶೀರ್ವಾದದ ಪ್ರಭಾವವನ್ನು ಅತ್ಯಧಿಕಗೊಳಿಸುತ್ತೇವೆ, ಅದರಿಂದ ಮಾನವೀಯ ಸಹಾಯದಲ್ಲಿ ಅದ್ಭುತ ಶಕ್ತಿಯ ಸಂಚಾರವಾಗುತ್ತದೆ ಮತ್ತು ನಮ್ಮ ಹೃದಯವನ್ನು ಪರಮಾತ್ಮನ ಶಾಂತಿ ಹಾಗೂ ಭರವಸೆಗೆ ತೆರೆದಿಡುತ್ತೇವೆ.
ಭಗವಂತನೊಡನೆಯ ಆಳವಾದ ಆಂತರಿಕ ಸಂಸರ್ಗವು ಸಂದೇಹ ಹಾಗೂ ಅವಿಶ್ರಾಂತತೆಯ ಸ್ಥಾಯಿಯನ್ನು ನಿಲ್ಲಿಸುತ್ತದೆ ಮತ್ತು ಇತರರಿಗಾಗಿ ನಾವು ಮಾಡುವ ಪ್ರಾರ್ಥನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ, ಅವನ ಪ್ರೇಮ ಹಾಗೂ ಸತ್ಯದ ನಿಯಮಗಳಿಗನುಗುಣವಾಗಿ ನಾವು ಬದುಕಲು ಪ್ರಯತ್ನಿಸುವ ನಿಷ್ಠೆಯೂ ಅಂತೆಯೇ. ಗುರುಗಳು ನಮಗೆ ನೆನಪಿಸಿರುವ ಹಾಗೆ: “ಒಂದು ಆತ್ಮದ ಒಳ್ಳೆಯತನ ಪರಿಣಾಮಕಾರಿಯಾಗಿ ಲಕ್ಷಾಂತರ ಜನರ ಸಾಂಘಿಕ ಕರ್ಮವನ್ನು ತಟಸ್ಥಗೊಳಿಸುವ ಹಾಗೆ.” ನಮ್ಮ ವೈಯಕ್ತಿಕ ಪ್ರಾರ್ಥನೆಗಳು ಇತರ ಸಮಾನ-ಮನಸ್ಕರೊಡನೆ ಒಂದುಗೂಡಿಸಿದಾಗ ಅದು ಎಷ್ಟು ಪ್ರಭಾವ ಬೀರುತ್ತದೆ ಎಂದೂ ಅವರಿಗೆ ತಿಳಿದಿದ್ದುದರಿಂದ ಗುರುದೇವರು, ಜಾಗತಿಕ ಪ್ರಾರ್ಥನಾ ಸಮೂಹವನ್ನು ತಮ್ಮ ಜಗದಾದ್ಯಂತದ ಸಂಸ್ಥೆಯ ಒಂದು ಭಾಗವನ್ನಾಗಿ ಸ್ಥಾಪಿಸಿದರು. ನೀವು ಕೂಡ, ನಾವೆಲ್ಲರೂ ನಮ್ಮ ಆಶ್ರಮಗಳಲ್ಲಿ ಪ್ರತಿದಿನ ಮಾಡುವ ಹಾಗೆ, ವಿಶೇಷ ಅವಶ್ಯಕತೆಯಿರುವ ಭಗವಂತನ ಎಲ್ಲ ಮಕ್ಕಳಿಗಾಗಿ ಅವನ ಅನುಗ್ರಹವನ್ನು ಕೋರಲು ಈ ಸಂಯೋಜಿತ ಕಾರ್ಯದಲ್ಲಿ ನಿಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ ಎಂದು ಪ್ರೇರೇಪಿಸುತ್ತೇವೆ. ಅಂತಹ ಪ್ರಾರ್ಥನೆಯಿಂದ, ಪ್ರತಿಯೊಂದು ಧನಾತ್ಮಕ ಚಿಂತನೆ ಹಾಗೂ ಕಾರ್ಯದಿಂದ, ಭಗವಂತನ ಅಂದರೆ ಎಲ್ಲರ ಸರ್ವೋತ್ಕೃಷ್ಟ ಗುಣಪಡಿಸುವವನ ಮತ್ತು ಸಹಾಯ ಹಸ್ತವನ್ನು ನೀಡುವವನ, ಬೆಳಕು ಮತ್ತು ಪ್ರೇಮವನ್ನು ಜಗತ್ತಿನಲ್ಲಿ ತೀವ್ರಗೊಳಿಸಲು ನೀವು ಸಹಾಯ ಮಾಡುತ್ತಿದ್ದೀರೆಂದು ತಿಳಿಯಿರಿ.
“ದಿನನಿತ್ಯದ ಬದುಕಿಗೆ ಕ್ರಿಯಾ ಯೋಗದ ಅನುಗ್ರಹಗಳು”
[ಯೋಗದಾ ಸತ್ಸಂಗ ನಿಯತಕಾಲಿಕೆಯಿಂದ ಆಯ್ದ ಭಾಗ]
ಸಾಕಷ್ಟು ನೋವು, ದುಃಖ, ಯಾತನೆ ಹಾಗೂ ಸಂಕ್ಷೋಭೆ ತುಂಬಿರುವ ಈ ದ್ವೈತ ಹಾಗೂ ಸಾಪೇಕ್ಷತೆಗಳ ಪ್ರಪಂಚದಲ್ಲಿ, ಹೇಗೆ ಬಾಳಬೇಕು ಎಂಬ ಒಂದು ವೈಜ್ಞಾನಿಕ ಅರಿವಿನ ನಿಶ್ಚಿತ ಅವಶ್ಯಕತೆಯಿದೆ. ಕೇವಲ ಹೆಚ್ಚು ಲೌಕಿಕ ಸಂಪತ್ತು ಮತ್ತು ಹೆಚ್ಚು ಲೌಕಿಕ “ಯಂತ್ರೋಪಕರಣ” ಗಳನ್ನು ನಮ್ಮ ಜೀವನದೊಳಗೆ ಬರುವಂತೆ ಮಾಡುವ ವಿಜ್ಞಾನ ಮಾತ್ರವಲ್ಲ, ಆದರೆ ಜೀವನಕಲೆಯ ವಿಜ್ಞಾನ. ಅದನ್ನೇ ಮಾನವಕೋಟಿಯು ಕಳೆದುಕೊಂಡಿದೆ–ಅದೇ ಇಂದು ನಮ್ಮ ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಉಂಟುಮಾಡುತ್ತಿರುವುದು. ಅದನ್ನೇ ನಮ್ಮ ಗುರುಗಳಾದ ಪರಮಹಂಸ ಯೋಗಾನಂದರು ತಮ್ಮ ಕ್ರಿಯಾ ಯೋಗದ ಬೋಧನೆಗಳಿಂದ ಪಶ್ಚಿಮಕ್ಕೆ ತಂದರು.
ಶತಶತಮಾನಗಳಿಂದ ಪದೇ ಪದೇ ಜೀವನಕಲೆಯ ವಿಜ್ಞಾನವನ್ನು ಮಾನವಕೋಟಿಗೆ ನೀಡಲಾಗಿದೆ. ಭಗವಂತನ ಸ್ವಭಾವ ಅತ್ಯಂತ ಸಹನೆಯುಳ್ಳದ್ದಾಗಿರಬೇಕು, ಏಕೆಂದರೆ, ಸಹನೆಯಿಂದ ನಮಗೆ: “ಇದು ನನ್ನ ಜಗತ್ತು; ಇದನ್ನು ನಾನು ಸೃಷ್ಟಿಸಿದ್ದೇನೆ. ಇದನ್ನು ನಾನು ತೃಪ್ತಿಕರವಾಗಿ ಮಾಡಿದ್ದೇನೆ, ಇದನ್ನು ನಾನು ಸೌಂದರ್ಯಮಯವಾಗಿ ಮಾಡಿದ್ದೇನೆ, ನಿಮ್ಮೆಲ್ಲರನ್ನೂ ನಾನು ಹುಟ್ಟಿಸಿದ್ದೇನೆ. ನಾನು ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದ್ದೇನೆ, ನಾನು ನಿಮ್ಮನ್ನು ಸುಂದರವಾಗಿರುವಂತೆ ಮಾಡಿದ್ದೇನೆ. ನನ್ನ ಸೌಂದರ್ಯ ಹಾಗೂ ಆನಂದ ಹಾಗೂ ಶಾಂತಿ ಹಾಗೂ ಅಭ್ಯುದಯಗಳನ್ನು ಈ ಭೂಮಿಯ ಮೇಲೆ ಅಭಿವ್ಯಕ್ತಿಸಲು, ಇದನ್ನು ಸುಂದರವಾಗಿಡಲು, ನನ್ನೊಂದಿಗೆ ನಿಮ್ಮ ಬದುಕನ್ನು ಸಮರಸದಿಂದಿಡಲು, ಈ ಜಗತ್ತಿನಲ್ಲಿ ನೀವು ಏನು ಮಾಡಬೇಕು ಎಂದು ಪದೇ ಪದೇ ನಾನು ನಿಮಗೆ ಸದ್ಗ್ರಂಥಗಳಲ್ಲಿ ಹೇಳಿದ್ದೇನೆ, ಅವತಾರಗಳು ಹಾಗೂ ಸಂತರ ದನಿ ಹಾಗು ಉದಾಹರಣೆಗಳಿಂದ ಹೇಳಿದ್ದೇನೆ–ಇದನ್ನು ನಾನು ಸೃಷ್ಟಿಸಿದ್ದೇನೆ ಮತ್ತು ಇದನ್ನು ನಾನೊಬ್ಬನೇ ಸಂರಕ್ಷಿಸುತ್ತಿದೇನೆ. ಆದರೂ, ಈ ಪ್ರಪಂಚವನ್ನು ನೀವು ಏನು ಮಾಡಿಟ್ಟಿದ್ದೀರಿ?” ಎಂದು ನೆನಪಿಸುತ್ತ ಭಗವಂತನು (ಯಾರನ್ನು ನಾವು ದಿವ್ಯಮಾತೆ ಎಂದು ಸಂಬೋಧಿಸುತ್ತೇವೋ) ಇನ್ನೆಷ್ಟು ಅವನ ಮಕ್ಕಳನ್ನು ಮಿತಿಯಿಲ್ಲದೆ ಪ್ರೇಮಿಸಬೇಕು ಮತ್ತು ಸಹನೆಯಿಂದಿರಬೇಕು?
ಆಧುನಿಕ ಸಂಸ್ಕೃತಿಯು, ಅತಿಯಾದ ಮಾಯಾ ಶಕ್ತಿಯಿಂದ, ಭಗವಂತನನ್ನು ಬ್ರಹ್ಮಾಂಡದ “ವೈಜ್ಞಾನಿಕ” ದೃಷ್ಟಿಯಿಂದ ಮತ್ತು ನಮ್ಮ ದಿನನಿತ್ಯದ ಜೀವನದಿಂದ, ದೂರಮಾಡಲು, ತೆಗೆದುಹಾಕಲು ಎಷ್ಟೊಂದು ರೀತಿಯಲ್ಲಿ ಪ್ರಯತ್ನಿಸಿದೆ. ಆದರೂ, ಕೇವಲ ಅವನ ಅನಂತ ಆಲೋಚನೆಯಿಂದ ಸೃಷ್ಟಿಸಲ್ಪಟ್ಟ ಮತ್ತು ಪೋಷಿಸಲ್ಪಡುತ್ತಿರುವ ಈ ಸೃಷ್ಟಿಯಲ್ಲಿ ಮಾನವನು, ಭಗವಂತನೇ ಅತ್ಯುನ್ನತ ವಾಸ್ತವವೆಂಬುದನ್ನು ನಿರಾಕರಿಸುತ್ತಿರುವವರೆಗೆ ಜಗತ್ತು, ಶಾಶ್ವತ ಸಂತೋಷ ಅಥವಾ ಶಾಂತಿ ಅಥವಾ ದುಃಖಮುಕ್ತ ಜೀವನವನ್ನು ಎಂದಿಗೂ ಅರಿಯುವುದಿಲ್ಲ.
ನಮ್ಮ ಯಾತನೆಯ ಮೂಲಕಾರಣ
ನಾವು ಯೋಚಿಸಿದಾಗ, ಕಷ್ಟ ಅನುಭವಿಸುತ್ತಿರುವ ಎಲ್ಲರ ಮನಸ್ಸಿನಲ್ಲೂ ಪ್ರಶ್ನಿಸುವ ಮತ್ತು ಸಂದೇಹಿಸುವ ಸಮಯ ಬರುತ್ತದೆ: “ದೇವರಿದ್ದಲ್ಲಿ, ಅವನು ಏಕೆ ಈ ಕಷ್ಟಗಳಿಗೆ ಆಸ್ಪದ ಕೊಡುತ್ತಿದ್ದಾನೆ? ಏಕೆ ಈ ನೋವು ನನ್ನ ಜೀವನದಲ್ಲಿ ಬಂತು? ಭಗವಂತನು ನನ್ನ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಿದ್ದಾನೆಯೇ?” ಮತ್ತು ಭಯಾನಕ ವಿಪ್ಲವಗಳು, ಯುದ್ಧಗಳು ಮತ್ತು ವಿಪತ್ತುಗಳಿಂದ ಲಕ್ಷಾಂತರ ಜನರು ಕಷ್ಟ ಪಡುತ್ತಿರುವುದನ್ನು ನಾವು ನೋಡಿದಾಗ, “ಭಗವಂತ ಎಲ್ಲಿದ್ದಾನೆ? ನಮ್ಮನ್ನು ಮಾನವಕೋಟಿಯ ಒಂದು ದೊಡ್ಡ ರಾಶಿಯಂತೆ ಈ ಕಷ್ಟಕೋಟಲೆಗಳ ಜಗತ್ತಿನಲ್ಲಿ ಎಸೆದು ಹೋಗಿದ್ದಾನೆಯೇ?” ಎಂದು ನಾವು ಯೋಚಿಸದಿರಲು ಸಾಧ್ಯವಿಲ್ಲ.
ದೇವರಿದ್ದಾನೆ. ಅವನು ಖಂಡಿತವಾಗಿಯೂ ಕೇಳಿಸಿಕೊಳ್ಳುತ್ತಾನೆ ಮತ್ತು ಪ್ರತಿಸ್ಪಂದಿಸುತ್ತಾನೆ. ಅದನ್ನು ಸಂತರು ಹಾಗೂ ದಿವ್ಯ ಗುರುಗಳ ಜೀವನಗಳಲ್ಲಿ ನಿರೂಪಿಸಿರುವುದನ್ನು ನಾವು ಕಾಣುತ್ತೇವೆ. ಸಾಮಾನ್ಯ ಜೀವನ ನಡೆಸುತ್ತಿರುವ ವ್ಯಕ್ತಿಯಲ್ಲೂ, ಅವನು ಒಂದು ಕ್ಷಣ ಆ ನಿತ್ಯ ಪ್ರಜ್ಞೆಯನ್ನು ಸೋಕಿದ ಮೇಲೆ, ಪ್ರಾಯಶಃ ಒಂದು ಸಣ್ಣ ಪ್ರಾರ್ಥನೆ ಫಲಿಸಿದಾಗ, ಭಗವಂತನ ಒಂದು ಇಣುಕು ನೋಟವನ್ನು ಕಂಡು: “ಆಹ್, ನಿಜವಾಗಿಯೂ ದೇವರಿದ್ದಾನೆ; ಅವನು ನಿಜವಾಗಿಯೂ ಪ್ರತಿಸ್ಪಂದಿಸುತ್ತಾನೆ!” ಎಂದು ಭಾವಿಸುತ್ತಾನೆ. ಇಂದಿನ ಕ್ಷುಲ್ಲಕ ಯೋಚನೆ, ಇದು “ಅವೈಜ್ಞಾನಿಕ” ಎಂದು ನಮಗೆ ಹೇಳುತ್ತದೆ. ಆದರೆ, ನಮ್ಮ ಗುರುದೇವ, ಪರಮಹಂಸ ಯೋಗಾನಂದರಂಥ, ಮಹಾನ್ ಪುರುಷರು, ಬದುಕಿನ ಬಗ್ಗೆ ಇರುವ ನಮ್ಮ ಎಲ್ಲ ಪ್ರಶ್ನೆಗಳಿಗೂ ಯುಕ್ತವಾಗಿ ಉತ್ತರ ನೀಡುವ ಒಂದು ಆಳವಾದ ವಿಜ್ಞಾನವಿದೆ ಎಂದು ದೃಢೀಕರಿಸುತ್ತಾರೆ. ಅದೇ ಯೋಗದ ವಿಜ್ಞಾನ.
ಭಗವಂತನು ಹಿಂದೆ ಸರಿದಿಲ್ಲ. ಅವನು ನಮ್ಮನ್ನು ತನ್ನ ಪ್ರತಿರೂಪದಲ್ಲಿ ಸೃಷ್ಟಿಸಿದ್ದಾನೆ; ಅವನ ನಿತ್ಯ ಪ್ರಜ್ಞೆಯ ಒಂದು ಸ್ವಲ್ಪ ಭಾಗವನ್ನು ನಮ್ಮ ವ್ಯಕ್ತಿತ್ವದಲ್ಲಿ ಇಟ್ಟಿದ್ದಾನೆ ಮತ್ತು, “ಈಗ ನೀನು ಒಂದು ಆತ್ಮ, ನನ್ನ ನಿತ್ಯ ಪ್ರಕೃತಿಯ ಒಂದು ಪಾತ್ರವನ್ನು ಅಭಿವ್ಯಕ್ತಿಸಲು ನಾನು ನಿನ್ನನ್ನು ನನ್ನ ಮಾಯಾ ಪ್ರಪಂಚಕ್ಕೆ ಕಳುಹಿಸುತ್ತಿದ್ದೇನೆ” ಎಂದು ಹೇಳಿದ್ದಾನೆ—ಕೇವಲ ಶುದ್ಧ ಪ್ರಜ್ಞೆಯನ್ನು ಆತ್ಮಗಳಾಗಿ ಪ್ರತ್ಯೇಕಿಸಿ ಜೀವಿಗಳನ್ನಾಗಿಯಲ್ಲ, ಬದಲಾಗಿ ಸೂಕ್ಷ್ಮ ಪ್ರಾಣ ಶಕ್ತಿ ಮತ್ತು ನಂತರ ಭೌತ ದ್ರವ್ಯದ ಸೀಮಿತ ಶರೀರಗಳ ಆವರಣದಲ್ಲಿರಿಸಿ, ಭೌತ ವಸ್ತುಗಳು ಮತ್ತು ಶಕ್ತಿಗಳಿರುವ ವಿಶಾಲ ಬ್ರಹ್ಮಾಂಡದ ನಡುವೆ ಇರಿಸಲ್ಪಟ್ಟ ಜೀವಿಗಳನ್ನಾಗಿ.
ಆದರೆ ಏನಾಗುತ್ತದೆ? ಮನುಷ್ಯ ಆ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಮಾಯೆಯು ಒಂದು ಬ್ರಹ್ಮಾಂಡ ಸಂಮೋಹನ ಎಂದು ಪರಮಹಂಸಜಿ ಹೇಳುತ್ತಿದ್ದರು. ಸೃಷ್ಟಿಯ ನಾಟಕವನ್ನಾಡಲು, ಭಗವಂತನ ಈ ಪ್ರಪಂಚವು ನಿಜವಾದದ್ದು ಮತ್ತು ನಾವು ಅವನಿಂದ ಬೇರ್ಪಟ್ಟಿದ್ದೇವೆ ಎಂದು ಅವನು ನಮ್ಮ ಪ್ರಜ್ಞೆಗೆ ಪ್ರಬಲವಾಗಿ ಸೂಚಿಸುತ್ತಿದ್ದಾನೆ. ಆ ಸಂಮೋಹನದ ಸೂಚನೆ ಬಹಳ ಪ್ರಬಲವಾಗಿರುವುದರಿಂದ, ನಾವು ಅದನ್ನು ನಂಬುತ್ತೇವೆ–ನಾವು ಬ್ರಹ್ಮಾಂಡ ಸೃಷ್ಟಿಯ ಪ್ರಕ್ರಿಯೆಯ ಅಂತಿಮ ಪರಿಣಾಮವನ್ನು ಮಾತ್ರ ಅವಲೋಕಿಸುತ್ತೇವೆ: ಭೌತ ಪ್ರಪಂಚ ಮತ್ತು ನಮ್ಮ ನಶ್ವರವಾದ ಶರೀರಗಳನ್ನು. ಭಗವಂತನಲ್ಲಿಯ ನಮ್ಮ ಮೂಲವನ್ನು, ಮತ್ತು ನಮ್ಮ ಆನಂದಮಯ, ಅಮರ ದಿವ್ಯ ಪ್ರಕೃತಿ, ಪ್ರತ್ಯೇಕಗೊಳಿಸಲಾರದಂತೆ ಅವನೊಡನೆ ಸಂಬಂಧ ಹೊಂದಿರುವುದನ್ನು ಮರೆತುಬಿಡುತ್ತೇವೆ; ಆದ್ದರಿಂದಲೇ ನಾವು ಕಷ್ಟಪಡಲಾರಂಭಿಸುತ್ತೇವೆ.
ಆದರೆ ಒಂದು ದಾರಿಯಿದೆ. ಭಗವಂತನು ತನ್ನನ್ನು ತಾನು ಇಂತಹ ಜನಸ್ತೋಮವನ್ನಾಗಿ ಸೃಷ್ಟಿಸಿದಾಗ ಜಾರಿಗೆ ತಂದ ವಿಶ್ವ ನಿಯಮಗಳು—ಈ ಅನಂತ ವೈಯಕ್ತಿಕ ಜೀವಿಗಳನ್ನು ಮತ್ತು ಪ್ರಕೃತಿಯನ್ನು ಅವನು ತನ್ನಿಂದ ಹೊರದೂಡಿದಾಗ ಹಾಗೂ ಅವು ಅವನಿಂದ ದೂರವಾದಂತೆ ಕಂಡಾಗ—ಅವೇ ದಿವ್ಯ ನಿಯಮಗಳು ವ್ಯತಿರಿಕ್ತವಾಗಿ ಕೆಲಸ ಮಾಡುತ್ತವೆ. ಮತ್ತು ಆ ಜ್ಞಾನದ ಅನುಷ್ಠಾನವೇ ಯೋಗ ವಿಜ್ಞಾನದ ಸಮಷ್ಟಿ ಮತ್ತು ವಿಚಾರಧಾರೆ.
















