
ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪ್ರಪಂಚದಾದ್ಯಂತದ ಜನರು, ತಮಗೆ ಮತ್ತು ತಮ್ಮ ಕುಟುಂಬಗಳಿಗೆ ಮುಂದಿನ ಉತ್ತಮ ಮಾರ್ಗವನ್ನು ಕಂಡುಕೊಳ್ಳುವಲ್ಲಿ ತಿಳುವಳಿಕೆ ಮತ್ತು ಮಾರ್ಗದರ್ಶನವನ್ನು ಬಯಸುತ್ತಿದ್ದಾರೆ.
ಅರ್ಧ ಶತಮಾನಕ್ಕೂ ಹಿಂದೆಯೇ, ಪರಮಹಂಸ ಯೋಗಾನಂದರು ಜಗತ್ತು, ಅದರ ಉನ್ನತ ಅಂದರೆ ಹೆಚ್ಚಿನ ಆಧ್ಯಾತ್ಮಿಕತೆಯ ಯುಗದ ಪರಿವರ್ತನೆಯ ಭಾಗವಾಗಿ ಅನುಭವಿಸಲಿರುವ ಬದಲಾವಣೆಗಳ ಬಗ್ಗೆ ವಿವರಿಸಿದರು. ಅವರು ಖಚಿತ ವೇಳಾಪಟ್ಟಿಯನ್ನು ನೀಡದೇ ಇದ್ದರೂ, ಈ ಸವಾಲಿನ ಸಮಯಗಳನ್ನು ಎದುರಿಸಲು ಬೇಕಾದಂತಹ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಸಲಹೆಗಳನ್ನು ವಿಪುಲವಾಗಿ ನೀಡಿದ್ದಾರೆ.
ಪರಮಹಂಸರ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರು ತಮ್ಮ ಪುಸ್ತಕ ಹೋಲಿ ಸೈನ್ಸ್ ನಲ್ಲಿ ಪರಮಾಣು ಯುಗವು (ದ್ವಾಪರ ಯುಗ) ನಮ್ಮ ಭೂಮಿಯ ಅವಧಿಯಲ್ಲಿ ಒಂದು ಹೊಸ ಆರೋಹಣದ ಹಂತವಾಗಿದೆ ಎಂದು ತಿಳಿಸಿದ್ದಾರೆ. ಆದರೂ, ಪರಮಹಂಸರು, ಈಗ ತಾನೇ ಹಿಂದೆ ಸರಿದಿರುವ ಅಂಧಕಾರದ ಯುಗವು (ಕಲಿ ಯುಗ) ನಮ್ಮ ಸಮಕಾಲೀನ ನಾಗರಿಕತೆಯ ಮೇಲೆ ಈಗಲೂ ಹೆಚ್ಚು ಪ್ರಭಾವವನ್ನು ಬೀರುತ್ತಿದೆ ಎಂದು ಹೇಳಿದ್ದಾರೆ. ಸಾವಿರಾರು ವರ್ಷಗಳಿಂದ ಸೃಷ್ಟಿಯಾಗಿರುವ ಲೌಕಿಕ ಆಸಕ್ತಿಗಳ ಚಿಂತನಾ ಲಹರಿಗಳು, ಮನುಷ್ಯನನ್ನು ಮನುಷ್ಯನಿಂದ, ದೇಶವನ್ನು ದೇಶದಿಂದ ಬೇರ್ಪಡಿಸುವಂತಹ ಅಸಂಖ್ಯಾತ ಆಚಾರಗಳು, ಸಂಪ್ರದಾಯಗಳು ಹಾಗೂ ಮೂಢ ನಂಬಿಕೆಗಳಲ್ಲಿ ಬಿಂಬಿತವಾಗುತ್ತಿವೆ. ಪ್ರಾಚೀನ ಕಾಲದಿಂದ ಬಂದ ಈ ಭ್ರಮೆಗಳು ಹಾಗೂ ಅಸಾಮರಸ್ಯಗಳನ್ನು ಮಾನವಕುಲವು ಕಿತ್ತೆಸೆದಾಗ, ಸಮಾಜಗಳಲ್ಲಿ ಹಾಗೂ ದೇಶಗಳಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ ಮತ್ತು ನಂತರ ಜಗತ್ತಿನಾದ್ಯಂತ ಒಂದು ಅಸಾಮಾನ್ಯ ಪ್ರಗತಿಯ ಅವಧಿ ಇರುತ್ತದೆ ಎಂದು ಪರಮಹಂಸರು ಭವಿಷ್ಯ ನುಡಿದಿದ್ದರು.
ಈ ನಿಟ್ಟಿನಲ್ಲಿ ಮೂರನೇ ಅಧ್ಯಕ್ಷರಾದ ನಮ್ಮ ಗೌರವಾನ್ವಿತ ಶ್ರೀ ದಯಾ ಮಾತಾ — ಗುರುಗಳ ಅತಿ ಮುಂಚಿನ ಹಾಗೂ ಆಪ್ತ ಶಿಷ್ಯಗಣದಲ್ಲೊಬ್ಬರು — ಈ ವಿಷಯದ ಬಗ್ಗೆ ಪರಮಹಂಸ ಯೋಗಾನಂದರು ನೀಡಿರುವ ಸಲಹೆಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ ಹೇಳಿದರು:
“ಯಾವಾಗ ಜಗತ್ತಿನ ಪರಿಸ್ಥಿತಿಗಳು ಅಥವಾ ನಾಗರಿಕತೆಗಳು ಅತಿಶಯವಾದ ಬದಲಾವಣೆಗೆ ಒಳಗಾಗುತ್ತವೆಯೋ, ಆಗೆಲ್ಲ ಅದರ ಹಿಂದೆ ಸದಾ ಒಂದು ಸೂಕ್ಷ್ಮ ಕಾರಣವಿರುತ್ತದೆ — ವ್ಯಕ್ತಿಗಳ ಜೀವನಗಳಲ್ಲಿ ಹಾಗೂ ಬಹು ಸಂಖ್ಯಾತ ಅಂತರರಾಷ್ಟ್ರೀಯ ಸಂಗತಿಗಳಲ್ಲಿ ಕರ್ಮದ ನಿಯಮದ ಸುಪ್ತ ಕಾರ್ಯವಿಧಾನ — ಎಂಬ ತಿಳಿವನ್ನು ಶ್ರೀ ಶ್ರೀ ಪರಮಹಂಸ ಯೋಗಾನಂದರು ನಮ್ಮಲ್ಲಿ ಮೂಡಿಸಿದರು. ನಮ್ಮ ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸುವಾಗ ಇರುವ ಹಾಗೆಯೇ, ಇದಕ್ಕೆ ಬೇಕಾದ ಯುಕ್ತ ಮನೋಭಾವವೆಂದರೆ, ‘ಇದರಿಂದ ನಾನು ಏನು ಕಲಿಯಬೇಕು?.’ ಆದ್ದರಿಂದ ಇಡೀ ಜಗತ್ತು, ನಮ್ಮ ವಿಕಾಸದ ಈ ಹಂತದಲ್ಲಿ ಭಗವಂತ ನಾವು ರಕ್ತಗತ ಮಾಡಿಕೊಳ್ಳಬೇಕೆಂದು ಇಚ್ಛಿಸುತ್ತಿರುವ ಪಾಠಗಳನ್ನು ತಿಳಿದುಕೊಳ್ಳಬೇಕಾಗಿದೆ.
“ಮನುಕುಲವು ಸಮತೋಲಿತ ಆಧ್ಯಾತ್ಮಿಕ ಜೀವನದ ಕಲೆಯನ್ನು ಅಳವಡಿಸಿಕೊಳ್ಳಬೇಕು, ಮತ್ತು ಅದು ಒಂದೇ ಜಾಗತಿಕ ಕುಟುಂಬದಂತೆ ಮುನ್ನಡೆಯಬೇಕು. ಸ್ಫೋಟಗೊಳ್ಳುತ್ತಿರುವ ತಂತ್ರಜ್ಞಾನದ ಮುನ್ನಡೆಗಳ ಈ ಯುಗದಲ್ಲಿ ನಮ್ಮನ್ನು ಬಾಧಿಸುತ್ತಿರುವ ಒತ್ತಡಗಳು ಹಾಗೂ ಆತಂಕಗಳು, ಇಂದೋ ಮುಂದೋ ಈ ಪಾಠಗಳನ್ನು ಕಲಿಯಲು ಒತ್ತಡ ಹೇರುತ್ತವೆ.
“ಹಲವಾರು ವರ್ಷಗಳ ಮುನ್ನವೇ ಪರಮಹಂಸಜಿ ಇದನ್ನು ಮನಗಂಡಿದ್ದರು ಮತ್ತು ನಮಗೆ ಬಹಳಷ್ಟು ಸಲ ಹೇಳಿದ್ದರು: ‘ಜಗತ್ತು ಸರಳ ಜೀವನಕ್ಕೆ ಮರಳಲೇಬೇಕಾದ ದಿನವು ಬರಲಿದೆ. ಭಗವಂತನಿಗಾಗಿ ಸಮಯವನ್ನು ಮೀಸಲಿಡಲು ನಾವು ನಮ್ಮ ಜೀವನವನ್ನು ಸರಳಗೊಳಿಸಿಕೊಳ್ಳಲೇಬೇಕು. ನಾವು ಹೆಚ್ಚಾಗಿ ಭ್ರಾತೃಭಾವದ ಪ್ರಜ್ಞೆಯಲ್ಲಿ ಬದುಕಬೇಕು, ಏಕೆಂದರೆ ನಾಗರಿಕತೆಯು ಉನ್ನತ ಯುಗಕ್ಕೆ ವಿಕಾಸಗೊಳ್ಳುತ್ತಿದ್ದಂತೆಯೇ, ಜಗತ್ತು ಸಣ್ಣದಾಗುವುದನ್ನು ನಾವು ಕಾಣುತ್ತೇವೆ. ಪೂರ್ವಾಗ್ರಹ, ಅಸಹಿಷ್ಣುತೆ ಅಳಿಯಲೇ ಬೇಕು.’
“‘ಒಡೆದಿರುವ ಕುಟುಂಬವು ಉಳಿಯಲಾರದು’ ಎಂದು ಏಸುವು ಹೇಳಿದ್ದಾನೆ. ವಿಜ್ಞಾನವು ದೇಶಗಳನ್ನು ಎಷ್ಟು ಹತ್ತಿರಕ್ಕೆ ತಂದಿದೆ ಎಂದರೆ, ಒಮ್ಮೆ ವಿಶಾಲವಾಗಿದ್ದ ಜಗತ್ತು ಇಂದು ಒಂದು ಕುಟುಂಬದಂತಾಗಿದೆ, ಅದರಲ್ಲಿ ಪ್ರತಿಯೊಬ್ಬ ಸದಸ್ಯನೂ ಪರಸ್ಪರ ಸಂಬಂಧದಲ್ಲಿರುತ್ತಾನೆ ಹಾಗೂ ಇತರರ ಮೇಲೆ ನಿರ್ಭರಿತನಾಗಿರುತ್ತಾನೆ. ನಮ್ಮ ಈ ಕಾಲದಲ್ಲಿ ಬೇರೆಬೇರೆಯಾಗಿ ಬದುಕಬೇಕೆನ್ನುವ ಪ್ರವೃತ್ತಿಗಳ ನಡುವೆ ಒಂದು ಚಿಕ್ಕ ಕುಟುಂಬವೂ ಒಟ್ಟಾಗಿರುವುದು ಕಷ್ಟಸಾಧ್ಯವಾಗಿರುವಾಗ ಜಗತ್ತಿನ ಏಕತೆಯ ಭರವಸೆ ಇದೆಯೇ? ಭರವಸೆ ಇದೆ, ನಿಜವಾದ ಶಾಂತಿ ಮತ್ತು ಆಧ್ಯಾತ್ಮಿಕ ಅರಿವಿಗೆ ಅನುಕೂಲಕರವಾದ ಗುರಿಗಳು ಮತ್ತು ಮೌಲ್ಯಗಳನ್ನು ಪೋಷಿಸಲು ನಾವು ಸಮಯವನ್ನು ನೀಡಿದ್ದೇ ಆದರೆ ಪ್ರತ್ಯೇಕ ಕುಟುಂಬಗಳಿಗೆ ಹಾಗೂ ರಾಷ್ಟ್ರಗಳ ಜಾಗತಿಕ ಕುಟುಂಬದ ನಡುವಿನ ಸಂಬಂಧಗಳಿಗೆ ಭರವಸೆ ಇದೆ.”