ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹದಿಂದ ಆಯ್ದ ಭಾಗಗಳು

ಅಂತರ್ಬೋಧೆಯು ಮಾನವನ ಮನಸ್ಸು ಶಾಂತವಾಗಿರುವ ಕ್ಷಣಗಳಲ್ಲಿ ಅವನಲ್ಲಿ ಸಹಜವಾಗಿ ಪ್ರಕಟವಾಗುವ ಆತ್ಮದ ಮಾರ್ಗದರ್ಶನ….ಯಾವುದೇ ವಿರೂಪವಿಲ್ಲದೆ ಅಂತರ್ವಾಣಿಯ ದೋಷಾತೀತ ಸಲಹೆಯನ್ನು ಮನಸ್ಸು ಕೇಳಲೆಂದು ಅದನ್ನು ಶಾಂತಗೊಳಿಸುವುದೇ ಯೋಗ ವಿಜ್ಞಾನದ ಧ್ಯೇಯ.

“ನಿಮ್ಮ ಎಲ್ಲ ಸಮಸ್ಯೆಗಳನ್ನೂ ಧ್ಯಾನದ ಮೂಲಕ ಪರಿಹರಿಸಿಕೊಳ್ಳಿ” [ಲಾಹಿರಿ ಮಹಾಶಯರು ಹೇಳಿದರು]. “ನಿಮ್ಮನ್ನು ನೀವು ಕ್ರಿಯಾತ್ಮಕ ಆಂತರಿಕ ಮಾರ್ಗದರ್ಶನದೊಂದಿಗೆ ಶ್ರುತಿಪಡಿಸಿಕೊಳ್ಳಿ; ದಿವ್ಯವಾಣಿಯು ಜೀವನದ ಎಲ್ಲ ಸಂದಿಗ್ಧತೆಗಳಿಗೆ ಪರಿಹಾರವನ್ನು ಹೊಂದಿದೆ. ಕಷ್ಟಕ್ಕೆ ಸಿಲುಕಿಕೊಳ್ಳುವುದರಲ್ಲಿ ಮಾನವನ ಜಾಣ್ಮೆಗೆ ಎಣೆಯಿಲ್ಲವಾದರೂ, ಎಣೆಯಿಲ್ಲದ ಆ ನೆರವು ಕೂಡಾ ಕಡಿಮೆ ಜಾಣ್ಮೆಯದಲ್ಲ.”

Buddha meditating.ತನ್ನನ್ನು ಮಾತ್ರ ಅವಲಂಬಿಸಬೇಕೆಂದು ಭಗವಂತ ನಮ್ಮಿಂದ ಅಪೇಕ್ಷಿಸುವಾಗ, ನೀವು ನಿಮ್ಮ ಬಗ್ಗೆ ಯೋಚನೆಯನ್ನೇ ಮಾಡಬಾರದೆಂದು ಅವನು ಹೇಳುತ್ತಿಲ್ಲ; ನೀವು ನಿಮ್ಮ ಕರ್ತೃತ್ವ ಶಕ್ತಿಯನ್ನು ಬಳಸಬೇಕೆಂಬುದು ಅವನ ಇಚ್ಛೆ. ಉದ್ದೇಶವಿಷ್ಟೆ, ನೀವು ಮೊದಲು ಭಗವಂತನಲ್ಲಿ ಪ್ರಜ್ಞಾಪೂರ್ವಕ ಸಾಂಗತ್ಯ ಹೊಂದಲು ವಿಫಲರಾದರೆ, ನೀವು ಮೂಲ ಆಕರದಿಂದ ಬೇರ್ಪಟ್ಟಂತಾಗುತ್ತದೆ, ಆಗ ನಿಮಗೆ ಅವನ ನೆರವು ದೊರಕುವುದು ಅಸಾಧ್ಯ. ಎಲ್ಲ ವಿಷಯಗಳಿಗೂ ನೀವು ಮೊದಲು ಅವನತ್ತ ನೋಡಿದರೆ, ಅವನು ನಿಮಗೆ ದಾರಿ ತೋರುತ್ತಾನೆ; ನಿಮ್ಮ ತಪ್ಪುಗಳೇನೆಂದು ಅವನು ನಿಮಗೆ ತೋರಿಸಿಕೊಡುತ್ತಾನೆ, ಆಗ ನೀವು ನಿಮ್ಮನ್ನು ಬದಲಿಸಿಕೊಳ್ಳಬಹುದು ಹಾಗೂ ನಿಮ್ಮ ಬಾಳಿನ ದಿಕ್ಕನ್ನು ಬದಲಿಸಿಕೊಳ್ಳಬಹುದು.

ನೆನಪಿರಲಿ, ಮನಸ್ಸಿನ ಕೋಟಿ ತರ್ಕಗಳಿಗಿಂತ ದೊಡ್ಡದೆಂದರೆ ನಿಮ್ಮೊಳಗೆ ಶಾಂತತೆಯ ಅನುಭವವಾಗುವವರೆಗೆ ಕುಳಿತು ಧ್ಯಾನ ಮಾಡುವುದು. ನಂತರ ಪ್ರಭುವಿಗೆ ಹೇಳಿ, “ನಾನು ಲಕ್ಷೋಪಲಕ್ಷ ವಿಧವಾಗಿ ಯೋಚಿಸಿದರೂ, ನಾನೊಬ್ಬನೇ ನನ್ನ ಸಮಸ್ಯೆಯನ್ನು ಬಗೆಹರಿಸಲಾರೆ, ಆದರೆ ಅದನ್ನು ನಿನ್ನ ಕೈಗಳಲ್ಲಿಟ್ಟು, ಮೊದಲು ನಿನ್ನ ಮಾರ್ಗದರ್ಶನವನ್ನು ಕೋರಿ, ನಂತರ ಸಂಭಾವ್ಯ ಪರಿಹಾರಕ್ಕಾಗಿ ಹಲವಾರು ದೃಷ್ಟಿಕೋನಗಳಿಂದ ಯೋಚಿಸುವ ಮೂಲಕ ಬಗೆಹರಿಸಿಕೊಳ್ಳಬಲ್ಲೆ.” ತಮಗೆ ತಾವು ಸಹಾಯ ಮಾಡಿಕೊಳ್ಳುವವರಿಗೆ ಭಗವಂತ ಸಹಾಯ ಮಾಡುತ್ತಾನೆ. ಧ್ಯಾನದಲ್ಲಿ ಭಗವಂತನ ಪ್ರಾರ್ಥನೆ ಮಾಡುವ ಮೂಲಕ ನಿಮ್ಮ ಮನಸ್ಸು ಶ್ರದ್ಧೆಯಿಂದ ತುಂಬಿ ಶಾಂತವಾಗಿದ್ದರೆ, ನಿಮಗೆ ನಿಮ್ಮ ಸಮಸ್ಯೆಗಳಿಗೆ ಹಲವಾರು ಉತ್ತರಗಳು ಕಾಣಿಸಿಕೊಳ್ಳುತ್ತವೆ; ನಿಮ್ಮ ಮನಸ್ಸು ಶಾಂತವಾಗಿರುವುದರಿಂದ ಅವುಗಳಲ್ಲಿ ನಿಮಗೆ ಅತ್ಯುತ್ತಮವಾದ ಪರಿಹಾರವನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಆ ಪರಿಹಾರಕ್ಕೆ ತಕ್ಕಂತೆ ನಡೆದುಕೊಳ್ಳಿ. ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಧರ್ಮದ ವಿಜ್ಞಾನವನ್ನು ಬಳಸಿಕೊಳ್ಳುವುದೆಂದರೆ ಇದೇ.

ಅಂತರ್ಬೋಧೆಯುಳ್ಳ ಶಾಂತಸ್ಥಿತಿಯ ಬೆಳವಣಿಗೆಗೆ ಆಂತರಿಕ ಜೀವನದ ವಿಕಸನದ ಅಗತ್ಯವಿದೆ. ಅದು ಸಾಕಷ್ಟು ವಿಕಸನವಾದಾಗ, ಅಂತರ್ಬೋಧೆಯು ತತ್‌ಕ್ಷಣವೇ ಸತ್ಯದ ಗ್ರಹಿಕೆಯನ್ನು ಮನವರಿಕೆ ಮಾಡುತ್ತದೆ. ನೀವು ಕೂಡ ಈ ಅದ್ಭುತ ಶಕ್ತಿಯನ್ನು ಸಿದ್ಧಿಸಿಕೊಳ್ಳಬಹುದು. ಅದಕ್ಕೆ ಧ್ಯಾನವೇ ಮಾರ್ಗ.

“ದೈವೇಚ್ಛೆಗೆ ಶ್ರುತಿಗೊಳ್ಳುವುದು ಹೇಗೆಂದು ಅರಿವಾಗುವವರೆಗೆ ಮಾನವನ ಜೀವನವು ದುಃಖದಿಂದ ತುಂಬಿರುತ್ತದೆ, ದೈವೇಚ್ಛೆ ತೋರುವ ‘ಸರಿಯಾದ ದಿಕ್ಕು’ ಅಹಂಭಾವದ ಬುದ್ಧಿಮತ್ತೆಯನ್ನು ಅನೇಕವೇಳೆ ದಿಗ್ಭ್ರಮೆಗೊಳಿಸುತ್ತದೆ,” [ಶ್ರೀ ಯುಕ್ತೇಶ್ವರರು ಹೇಳಿದರು]. “ಭಗವಂತನೊಬ್ಬನೇ ದೋಷಾತೀತ ಸಲಹೆಯನ್ನು ನೀಡಬಲ್ಲ; ಅವನಲ್ಲದೆ ಬೇರಿನ್ನಾರು ಬ್ರಹ್ಮಾಂಡದ ಭಾರವನ್ನು ಹೊತ್ತಿಹರು?”

ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಮೌನದ ಮೊರೆ ಹೋಗಿ ಅಥವಾ ಆಳವಾದ ಧ್ಯಾನ ಮಾಡಿ, ಏಕೆಂದರೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗುವುದು ಧ್ಯಾನದ ಮೂಲಕ ಮಾತ್ರ.

ನಿಮ್ಮೊಳಗಿರುವ ದಿವ್ಯ ವಿವೇಚನಾಶಕ್ತಿಯಾದ ಮನಸ್ಸಾಕ್ಷಿಯಿಂದ ಮಾರ್ಗದರ್ಶನ ಪಡೆಯಲು ಕಲಿಯಿರಿ.

ಭಗವಂತನು ನಿಮ್ಮ ಮನಸ್ಸಾಕ್ಷಿಯ ಮಂದಿರದಲ್ಲಿನ ಪಿಸುಮಾತು, ಅವನು ನಿಮ್ಮ ಅಂತರ್ಬೋಧೆಯ ಬೆಳಕು. ನೀವು ತಪ್ಪು ಮಾಡುತ್ತಿರುವಾಗ ನಿಮಗೆ ಅದರ ಅರಿವಿರುತ್ತದೆ; ನಿಮ್ಮ ಇಡೀ ಅಸ್ತಿತ್ವವೇ ನಿಮಗೆ ಅದನ್ನು ಹೇಳುತ್ತದೆ, ಆ ಅನಿಸಿಕೆಯೇ ಭಗವಂತನ ವಾಣಿ. ನೀವು ಅವನಿಗೆ ಕಿವಿಗೊಡದಿದ್ದರೆ, ಆಗ ಅವನು ಸುಮ್ಮನಾಗುತ್ತಾನೆ. ಆದರೆ ನೀವು ನಿಮ್ಮ ಭ್ರಮೆಯಿಂದ ಎಚ್ಚೆತ್ತು, ಯುಕ್ತವಾದುದನ್ನು ಮಾಡಲೆಳಸಿದಾಗ ಅವನು ನಿಮಗೆ ಮಾರ್ಗದರ್ಶನ ಮಾಡುತ್ತಾನೆ.

ದೈವವಾಣಿಯಾಗಿರುವ ನಿಮ್ಮ ಮನಸ್ಸಾಕ್ಷಿಯ ದನಿಯನ್ನು ನಿರಂತರವಾಗಿ ಅನುಸರಿಸಿದರೆ, ನೀವು ನಿಜವಾಗಿ ನೀತಿವಂತರೂ ಉನ್ನತ ಆಧ್ಯಾತ್ಮ ವ್ಯಕ್ತಿಯೂ ಶಾಂತ ವ್ಯಕ್ತಿಯೂ ಆಗುವಿರಿ.

ಭಗವಂತನನ್ನು ಅರಿತ ಮೇಲೆ, ನಮ್ಮ ಸಮಸ್ಯೆಗಳಿಗೆ ಮಾತ್ರವಲ್ಲದೆ, ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಿಗೂ ನಮಗೆ ಉತ್ತರ ದೊರೆಯುತ್ತದೆ. ನಾವೇಕೆ ಬದುಕುತ್ತೇವೆ, ಏಕೆ ಸಾಯುತ್ತೇವೆ? ಈಗಾಗುತ್ತಿರುವ ಘಟನೆಗಳು ಏಕಾಗುತ್ತಿವೆ? ಹಿಂದೆ ನಡೆದ ಘಟನೆಗಳು ಏಕಾದವು? ಎಲ್ಲ ಜನರ ಪ್ರಶ್ನೆಗಳನ್ನು ಉತ್ತರಿಸಬಲ್ಲ ಸಂತನೊಬ್ಬ ಎಂದಾದರೂ ಈ ಭೂಮಿಯ ಮೇಲೆ ಬರುವನೆಂದು ನನಗನಿಸದು. ಆದರೆ ಧ್ಯಾನದ ಮಂದಿರದಲ್ಲಿ ನಮ್ಮ ಹೃದಯಗಳನ್ನು ಕಾಡುವ ಜೀವನದ ಪ್ರತಿಯೊಂದು ಒಗಟೂ ಪರಿಹರಿಸಲ್ಪಡುತ್ತದೆ. ನಾವು ಭಗವಂತನ ಸಂಪರ್ಕಕ್ಕೆ ಬಂದಾಗ, ಜೀವನದ ಸಮಸ್ಯೆಗಳಿಗೆ ಉತ್ತರಗಳನ್ನು ಕಲಿತುಕೊಳ್ಳುತ್ತೇವೆ ಹಾಗೂ ನಮ್ಮೆಲ್ಲ ಕಷ್ಟಗಳಿಗೂ ಪರಿಹಾರವನ್ನು ಕಂಡುಕೊಳ್ಳುತ್ತೇವೆ..

ಪ್ರಾರ್ಥನೆಗಳು ಹಾಗೂ ದೃಢೀಕರಣಗಳು.

ಭಗವಂತನೇ, ನಿನ್ನ ಬ್ರಹ್ಮಾಂಡ ಚೇತನ ಹಾಗೂ ನಾನು ಒಂದೇ. ನೀನು ಸಾಗರ, ನಾನು ಅಲೆ; ನಾವು ಒಂದೇ. ನನ್ನ ಆತ್ಮದಲ್ಲಿ ಎಲ್ಲ ಜ್ಞಾನ ಹಾಗೂ ಶಕ್ತಿ ಈಗಾಗಲೇ ಇವೆ ಎಂದು ಪ್ರತ್ಯಕ್ಷಜ್ಞಾನದಿಂದ ಅರಿಯುತ್ತ ನಾನು ನನ್ನ ದಿವ್ಯ ಜನ್ಮಸಿದ್ಧ ಹಕ್ಕನ್ನು ಕೇಳುತ್ತಿದ್ದೇನೆ. ಭಗವಂತ ನನ್ನ ವಿವೇಚನೆಯ ಹಿಂಬದಿಯಲ್ಲೇ ಇದ್ದಾನೆ, ಇಂದು ಮತ್ತು ಮುಂದೆಂದೂ, ಮತ್ತು ನನ್ನನ್ನು ಸದಾ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶಿಸುತ್ತಿದ್ದಾನೆ.

ಹೇ ಭಗವಂತನೇ, ಮಾತೆಯೇ, ಮಿತ್ರನೇ, ಪ್ರಿಯ ದೇವನೇ! ನಾನು ವಿವೇಚಿಸುತ್ತೇನೆ, ನಾನು ಸಂಕಲ್ಪಿಸುತ್ತೇನೆ, ನಾನು ಕ್ರಿಯಾಶೀಲನಾಗುತ್ತೇನೆ; ಆದರೆ ನಾನು ಮಾಡಬೇಕಾದ ಸರಿಯಾದುದರೆಡೆಗೆ ನನ್ನ ವಿವೇಚನೆ, ಸಂಕಲ್ಪ ಹಾಗೂ ಕಾರ್ಯಶೀಲತೆಯನ್ನು ಮಾರ್ಗದರ್ಶನ ಮಾಡು.

ಹೆಚ್ಚಿನ ವೀಕ್ಷಣೆಗಾಗಿ

ಇದನ್ನು ಹಂಚಿಕೊಳ್ಳಿ