ಜಗತ್‌ ಶಾಂತಿಗಾಗಿ ಪ್ರಾರ್ಥನೆ

ಹಲವಾರು ವರ್ಷಗಳ ಹಿಂದೆ, ಪರಮಹಂಸ ಯೋಗಾನಂದರು ಈ ಕೆಳಗಿನ “ಜಗತ್‌ ಶಾಂತಿಗಾಗಿ ಪ್ರಾರ್ಥನೆ”ಯನ್ನು ಉಪದೇಶಿಸಿದರು, ವಿಶ್ವದೆಲ್ಲೆಡೆ ಶಾಂತಿಯನ್ನು ಹರಡುವುದಕ್ಕೆ ಎಲ್ಲರೂ ಉಪಯೋಗಿಸಬಹುದಾದ ಒಂದು ಮಾರ್ಗದರ್ಶಿತ ಧ್ಯಾನ. 60 ವರ್ಷಗಳಿಗೂ ಹಿಂದೆ ಪರಮಹಂಸಜಿ ಉಪದೇಶಿಸಿದ ಭಗವಂತನ ಅನುಗ್ರಹದ ಈ ಶಕ್ತಿಯುತ ಪ್ರಾರ್ಥನೆಯನ್ನು ಪರಿಚಯಿಸುತ್ತಾ ಶ್ರೀ ದಯಾ ಮಾತಾ: “ಎಲ್ಲ ಜನರು ಮತ್ತು ಎಲ್ಲ ದೇಶಗಳ ನಡುವಿನ ಜಗತ್‌ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಪ್ರತಿದಿನ ಪರಮಹಂಸಜಿಯವರ ಸಮಯೋಚಿತ ನುಡಿಗಳ ಚೈತನ್ಯದೊಂದಿಗೆ ಪಾಲ್ಗೊಳ್ಳಿ ಎಂದು ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಫ್‌ನ ಜಾಗತಿಕ ಪ್ರಾರ್ಥನಾ ಸಮೂಹದಲ್ಲಿ ಭಾಗವಹಿಸುವ ಸಾವಿರಾರು ಭಕ್ತಾದಿಗಳನ್ನು ನಾನಿಂದು ಕೇಳಿಕೊಳ್ಳುತ್ತಿದ್ದೇನೆ” ಎಂದು ಬರೆದಿದ್ದಾರೆ.

“ಭಗವಂತನೇ, ಜಗನ್ಮಾತೆ, ಸಖ, ಪ್ರಿಯ ದೇವ! ನಿನ್ನ ಪ್ರೇಮವು ನಮ್ಮ ಭಕ್ತಿಯ ದೇಗುಲವನ್ನು ಸದಾ ಬೆಳಗುತ್ತಿರಲಿ ಹಾಗೂ ಆ ನಿನ್ನ ಪ್ರೇಮವನ್ನು ಎಲ್ಲರ ಹೃದಯದಲ್ಲಿ ಜಾಗೃತಗೊಳಿಸಲು ನಾವು ಸಮರ್ಥರಾಗಲಿ.”

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಹುಬ್ಬುಗಳ ನಡುವಿರುವ ದಿವ್ಯ ಪ್ರಜ್ಞೆಯ ಕೇಂದ್ರದಲ್ಲಿ ಆಳವಾಗಿ ಏಕಾಗ್ರಗೊಳ್ಳಿ. ನಿಮ್ಮ ಆಂತರ್ಯದೊಳಗೆ ಭಗವಂತನ ನಿತ್ಯ ಪ್ರೇಮವನ್ನು ಅನುಭವಿಸಿ. ಆ ಪ್ರೇಮವನ್ನು ನಿಮ್ಮ ಹೃದಯವು ಜಗತ್ತಿನೆಲ್ಲೆಡೆ ಪಸರಿಸಲಿ. ಯುದ್ಧದ ಮೋಡಗಳು ಕರಗಿ ಹೋಗಲಿ ಎಂದು ಗಾಢವಾಗಿ ಪ್ರಾರ್ಥಿಸಿ. ಆಕಾಶದಲ್ಲಿ ಸದಾ ಸೂಕ್ಷ್ಮವಾಗಿ ಅನುರಣಿಸುತ್ತಿರುವ ಭಗವಂತನ ದಯೆ ಮತ್ತು ಪ್ರೇಮದ ದಿವ್ಯ ಶಕ್ತಿಗಳು, ಸೈತಾನನ ವೈಷಮ್ಯ ಮತ್ತು ಶತ್ರುತ್ವದ ಸೂಚನೆಗಳ ತೀವ್ರ ಪ್ರಭಾವಗಳಿಂದ ಮಾನವರ ಹೃದಯ ಮತ್ತು ಮನಸ್ಸಿನಲ್ಲಿ ನಿಷ್ಫಲವಾಗದಂತಿರಲಿ ಎಂದು ನಮ್ಮೆಲ್ಲರ ತುಂಬು ಹೃದಯದಿಂದ ಅವನನ್ನು ಪ್ರಾರ್ಥಿಸೋಣ. ಏಕೆಂದರೆ, ದುಷ್ಟ ಶಕ್ತಿಗಳು ಆಕ್ರಮಣಶೀಲವಾಗಿರುತ್ತವೆ, ಅದೇ ಒಳ್ಳೆಯತನದ ಶಕ್ತಿಗಳು ವಿನೀತ ಮತ್ತು ಅಹಂಕಾರವಿಲ್ಲದ್ದಾಗಿರುತ್ತವೆ.

“ಪರಮಾತ್ಮನೇ, ಯುದ್ಧದ ಕಪ್ಪು ಮೋಡಗಳ ಕೆಳಗೆ ಜೀವಿಸುತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರು ಸೈತಾನನ ಅಜ್ಞಾನ ಮತ್ತು ದ್ವೇಷದ ಗೀಳಿನಿಂದ ಬಿಡುಗಡೆ ಹೊಂದಲಿ; ಮತ್ತು ನಿನ್ನ ಜೊತೆಗೂಡಿಸುವ ಪ್ರೇಮ ಮತ್ತು ಶಾಂತಿಯ ನಿಗರ್ವ ಶಕ್ತಿಯಿಂದ ದುಷ್ಟರ ಆಕ್ರಮಣಕಾರಿ ಶಕ್ತಿಯನ್ನು ಜಯಿಸುವಂತಾಗಲಿ. ಎಲ್ಲರೂ ಒಬ್ಬರನ್ನೊಬ್ಬರು ನಾಶ ಮಾಡುತ್ತ, ಜಗತ್ತಿನೆಲ್ಲೆಡೆ ಖಿನ್ನತೆ, ವಿಪ್ಲವ ಮತ್ತು ವಿನಾಶದ ಸಾಮೂಹಿಕ ಕರ್ಮವನ್ನುಂಟುಮಾಡುವ ದುಷ್ಟ ಶಕ್ತಿಯ ಕಂಪನಗಳನ್ನು ಸೃಷ್ಟಿಸದಿರುವಂತೆ ಮಾರ್ಗದರ್ಶಿಸಲ್ಪಡಲು ಅವರು ನಿನ್ನ ಭ್ರಾತೃತ್ವ ಹಾಗೂ ಅರಿವಿನ ಬೆಳಕನ್ನು ಪಡೆಯಲಿ ಎಂದು ನಾವು ನಮ್ಮ ಆಳವಾದ ಪ್ರೀತಿಯನ್ನು ಎಲ್ಲರಿಗೂ ಕಳಿಸುತ್ತೇವೆ.”

ನಿಮ್ಮ ಪ್ರೇಮವು ಕಣ್ಣಿಗೆ ಕಾಣದ ಒಂದು ಕ್ಷ-ಕಿರಣದಂತೆ ಸರ್ವಾಧಿಕಾರಿಗಳು ಮತ್ತು ಎಲ್ಲ ದೇಶಗಳ ಪ್ರಧಾನ ಮಂತ್ರಿಗಳು ಮತ್ತು ಮುಖಂಡರ ಹೃದಯದೊಳಗೆ ಹಾದು ಹೋಗುತ್ತಾ, ವಿನಾಶದ ಬದಲು ಭೂಮಿಯ ಮೇಲೆ ಶಾಂತಿ ಮತ್ತು ಅಂತರರಾಷ್ಟ್ರೀಯ ಅಭ್ಯುದಯವನ್ನು ತರುತ್ತಿದೆ ಎಂದು ಭಾವಿಸಿಕೊಳ್ಳಿ. ನಿಮ್ಮ ಪ್ರೇಮದ ಶಕ್ತಿಯುತ ವಿಕಿರಣದೊಳಗೆ ಜಗತ್ತಿನ ಎಲ್ಲ ಜನರನ್ನೂ ಸೇರಿಸಿಕೊಳ್ಳಿ. ಪ್ರೇಮದ ನಮ್ಮ ಸಂಘಟಿತ ಉಪಶಮನಕಾರಿ ಕಿರಣಗಳು ನಮ್ಮ ಪಿತನ ನಿತ್ಯ ಪ್ರೇಮದಿಂದ ತುಂಬಿಕೊಳ್ಳಲಿ ಮತ್ತು ಪ್ರಪಂಚದ ಎಲ್ಲ ನಾಯಕರು ಮತ್ತು ನಾಗರಿಕರ ಹೃದಯಗಳನ್ನು ತುಂಬಿಕೊಳ್ಳುತ್ತಾ ಇಡೀ ಭೂಮಿಯನ್ನು ಮೀಯಿಸಲಿ ಮತ್ತು ಅವರೆಲ್ಲರೂ ಚೈತನ್ಯದ ಸಾರ್ವತ್ರಿಕ ಬಾಂಧವ್ಯ ಮತ್ತು ಸಾಮರಸ್ಯದಿಂದ ತುಂಬಿಕೊಳ್ಳಲಿ–ಭಗವಂತನ ಪಿತೃತ್ವದಡಿಯಲ್ಲಿ ಭೂಮಿಯ ಮೇಲೆ ಶಾಂತಿ, ಎಲ್ಲರೆಡೆ ಸದ್ಭಾವನೆಯನ್ನು ತರುತ್ತಾ.

“ಪರಮಾತ್ಮನೇ, ನಿನ್ನ ಮಕ್ಕಳಾಗಿ ಅವರೆಲ್ಲರೂ ಅವರ ನಿತ್ಯ ಸಂಬಂಧವನ್ನು ಅರಿಯುವಂತಾಗಲಿ ಎಂದು ಭೂಮಿಯ ಮೇಲಿರುವ ಎಲ್ಲ ದೇಶಗಳವರನ್ನು, ನಮ್ಮ ದೊಡ್ಡ ಪರಿವಾರವನ್ನು ಆಶೀರ್ವದಿಸು. ನೀನೇ ನಮ್ಮೆಲ್ಲರ ಪಾರಮಾರ್ಥಿಕ ಪಿತ, ವಿಶ್ವದ ಪ್ರೀತಿಪಾತ್ರನಾದವನು ಮತ್ತು ನಮ್ಮೆಲ್ಲರ ಅಂತರಾಳದ ಪ್ರಿಯತಮನು. ಇಂದು ನಾವು ಪ್ರಸಾರ ಮಾಡುತ್ತಿರುವ ಪ್ರೀತಿಯ ಶಕ್ತಿಯುತ ಆಲೋಚನೆಗಳು, ಸರ್ವಾಧಿಕಾರಿಗಳು ಮತ್ತು ದಳಪತಿಗಳ ಸಂವೇದನೆಗಳ ಮೇಲೆ ಪ್ರಭಾವ ಸ್ಥಾಪಿಸಲಿ ಮತ್ತು ಅವರೆಲ್ಲರೂ ನಿನ್ನ ಪರಿಜ್ಞಾನದಿಂದ ಪೂರಿತವಾಗಿ ಮಾನವಕುಲದ ಸರ್ವನಾಶವನ್ನು ಮಾಡುವತ್ತ ಕಾರ್ಯೋನ್ಮುಖವಾಗುವುದನ್ನು ತಡೆಹಿಡಿಯಲಿ, ಅವರೆಲ್ಲರನ್ನೂ ಆಶೀರ್ವದಿಸು. ಭೂಮಿಯ ಮೇಲಿನ ನಾಗರಿಕರೆಲ್ಲರೂ ಎಲ್ಲ ಆತ್ಮಗಳ ನಡುವೆ ಒಂದು ಸಹಕಾರಿ ಏಕತೆಯನ್ನು ಸ್ಥಾಪಿಸಿಕೊಂಡು, ನಿನ್ನ ಶಕ್ತಿ ಮತ್ತು ನಿನ್ನ ಸಾಮ್ರಾಜ್ಯಕ್ಕೆ ಮಾರ್ಗದರ್ಶಿಸುವ ಬೆಳಕಿನ ಪ್ರಕಾಶದಿಂದ ಒಂದು ಸಂಯುಕ್ತ ವಿಶ್ವದಲ್ಲಿ ಬದುಕುವಂತಾಗಲಿ.

ಓಂ. ಶಾಂತಿ. ಅಮೆನ್‌.

ಈ ಹೆಚ್ಚುವರಿ ಪೂರಕ ಸಾಮಗ್ರಿಗಳನ್ನು ನಾವು ನಿಮಗೆ ಸಲಹೆ ಮಾಡಬಹುದೆ:

ಇದನ್ನು ಹಂಚಿಕೊಳ್ಳಿ