ಶ್ರೀ ಶ್ರೀ ಪರಮಹಂಸ ಯೋಗಾನಂದರ ಮೆಟಾಫಿಸಿಕಲ್ ಮೆಡಿಟೇಷನ್ಸ್‌ನಿಂದ ಆಯ್ದ ಪ್ರಾರ್ಥನೆಗಳು
ಹೇ ಪರಮಾತ್ಮನೇ, ನನ್ನ ಆತ್ಮವನ್ನು ನಿನ್ನ ಮಂದಿರವನ್ನಾಗಿ ಮಾಡು, ಆದರೆ ನನ್ನ ಹೃದಯವನ್ನು ನಿನ್ನ ಪ್ರೀತಿಯ ಮನೆಯನ್ನಾಗಿ ಮಾಡು, ಅಲ್ಲಿ ನೀನು ನನ್ನೊಂದಿಗೆ ನಿರಾತಂಕವಾಗಿ ಮತ್ತು ಶಾಶ್ವತವಾದ ತಿಳುವಳಿಕೆಯಲ್ಲಿ ನೆಲೆಸುವಂತಾಗಲಿ.

ದಿವ್ಯ ಮಾತೆ, ನನ್ನ ಆತ್ಮದ ಭಾಷೆಯಲ್ಲಿ ನಾನು ನಿನ್ನ ಉಪಸ್ಥಿತಿಯ ಸಾಕ್ಷಾತ್ಕಾರವನ್ನು ಕೇಳುತ್ತೇನೆ. ನೀನೇ ಎಲ್ಲದರ ಜೀವಾಳ. ನನ್ನ ಅಸ್ತಿತ್ವದ ಎಳೆ ಎಳೆಯಲ್ಲೂ, ಆಲೋಚನೆಯ ಪ್ರತಿ ಸುರುಳಿಯಲ್ಲೂ ನಾನು ನಿನ್ನನ್ನು ಕಾಣುವಂತೆ ಮಾಡು. ನನ್ನ ಹೃದಯವನ್ನು ಜಾಗೃತಗೊಳಿಸು!

ಹೇ ಅವಿರತ ಆನಂದವನ್ನು ಕೊಡುವವನೇ! ನೀನು ನನಗೆ ನೀಡಿದ ದಿವ್ಯಾನಂದಕ್ಕಾಗಿ ನಾನು ಕೃತಜ್ಞತೆಯಿಂದ ಇತರರನ್ನು ನಿಜವಾಗಿಯೂ ಸಂತೋಷಪಡಿಸಲು ಪ್ರಯತ್ನಿಸುತ್ತೇನೆ. ನನ್ನ ಆಧ್ಯಾತ್ಮಿಕ ಸಂತೋಷದ ಮೂಲಕ ನಾನು ಎಲ್ಲರಿಗೂ ಸೇವೆ ಸಲ್ಲಿಸುತ್ತೇನೆ.

ಪರಮಾತ್ಮನೇ, ಬಡತನ ಅಥವಾ ಸಿರಿತನ, ಅನಾರೋಗ್ಯ ಅಥವಾ ಆರೋಗ್ಯ, ಅಜ್ಞಾನ ಅಥವಾ ಜ್ಞಾನದಲ್ಲಿ ನಿನ್ನನ್ನು ಸ್ಮರಿಸಲು ನನಗೆ ಕಲಿಸು. ಮುಚ್ಚಿದ ನನ್ನ ಅವಿಶ್ವಾಸದ ಕಣ್ಣುಗಳನ್ನು ತೆರೆಯಲು ಮತ್ತು ತತ್‌ಕ್ಷಣದಲ್ಲಿ ಉಪಶಮನಗೊಳಿಸುವ ನಿನ್ನ ಬೆಳಕನ್ನು ಕಾಣಲು ನನಗೆ ಕಲಿಸು.

ಹೇ ಪ್ರಜ್ವಲಿಸುವ ಬೆಳಕೇ! ನನ್ನ ಹೃದಯವನ್ನು ಜಾಗೃತಗೊಳಿಸು, ನನ್ನ ಆತ್ಮವನ್ನು ಜಾಗೃತಗೊಳಿಸು, ನನ್ನ ಕತ್ತಲೆಗೆ ಕಿಚ್ಚಿಡು, ಮೌನದ ತೆರೆಯನ್ನು ಕಿತ್ತು ಹಾಕು, ಮತ್ತು ನಿನ್ನ ಮಹಿಮೆಯಿಂದ ನನ್ನ ಮಂದಿರವನ್ನು ತುಂಬು.

ಪರಮಾತ್ಮನೇ, ನನ್ನ ದೇಹವನ್ನು ನಿನ್ನ ಚೈತನ್ಯದಿಂದ ತುಂಬು, ನನ್ನ ಮನಸ್ಸನ್ನು ನಿನ್ನ ಆಧ್ಯಾತ್ಮಿಕ ಶಕ್ತಿಯಿಂದ ತುಂಬು, ನನ್ನ ಆತ್ಮವನ್ನು ನಿನ್ನ ಆನಂದದಿಂದ, ನಿನ್ನ ಅಮರತ್ವದಿಂದ ತುಂಬು.

ಹೇ ಭಗವಂತನೇ, ನಿನ್ನ ಅಸೀಮ ಮತ್ತು ಸರ್ವ-ಗುಣಕಾರಕ ಶಕ್ತಿ ನನ್ನಲ್ಲಿದೆ. ನನ್ನ ಅಜ್ಞಾನದ ಕತ್ತಲೆಯ ಮೂಲಕ ನಿನ್ನ ಬೆಳಕನ್ನು ಪ್ರದರ್ಶಿಸು.

ಹೇ ಚಿರಂತನ ಚೈತನ್ಯವೇ, ನನ್ನಲ್ಲಿ ಪ್ರಜ್ಞಾಪೂರ್ವಕ ಇಚ್ಛೆ, ಪ್ರಜ್ಞಾಪೂರ್ವಕ ಚೈತನ್ಯ, ಪ್ರಜ್ಞಾಪೂರ್ವಕ ಆರೋಗ್ಯ, ಮತ್ತು ಪ್ರಜ್ಞಾಪೂರ್ವಕ ಸಾಕ್ಷಾತ್ಕಾರವನ್ನು ಜಾಗೃತಗೊಳಿಸು.

ದಿವ್ಯ ಚೇತನವೇ, ಪ್ರತಿ ಪರೀಕ್ಷೆ ಮತ್ತು ಕಷ್ಟದಲ್ಲಿ ಚಿಂತಿಸುವ ಬದಲು ನಾನು ಸುಲಭವಾಗಿ ಸಂತೋಷವನ್ನು ಕಂಡುಕೊಳ್ಳುವಂತೆ ನನ್ನನ್ನು ಆಶೀರ್ವದಿಸು.

ತಂದೆಯೇ, ನನ್ನ ಸ್ವಂತ ಅಭ್ಯುದಯದ ಅನ್ವೇಷಣೆಯಲ್ಲಿ ಇತರರ ಅಭ್ಯುದಯವನ್ನೂ ಸೇರಿಸಲು ನನಗೆ ಕಲಿಸು.

ನೀನು ಎಲ್ಲ ಸಂಪತ್ತಿನ ಹಿಂದಿನ ಶಕ್ತಿ ಮತ್ತು ಎಲ್ಲದರೊಳಗಿನ ಮೌಲ್ಯ ಎಂದು ಭಾವಿಸಲು ನನಗೆ ಕಲಿಸು. ಮೊದಲು ನಿನ್ನನ್ನು ಕಂಡುಕೊಂಡ ಮೇಲೆ, ಉಳಿದೆಲ್ಲವನ್ನೂ ನಾನು ನಿನ್ನಲ್ಲಿ ಕಂಡುಕೊಳ್ಳುತ್ತೇನೆ.

ಅಜೇಯ ಪ್ರಭುವೇ, ನನ್ನ ಇಚ್ಛೆಯ ಸಣ್ಣ ಬೆಳಕು ನಿನ್ನ ಸರ್ವಶಕ್ತ ಇಚ್ಛೆಯ ಬ್ರಹ್ಮಾಂಡ ಜ್ವಾಲೆಯಾಗಿ ಬೆಳಗುವವರೆಗೆ, ಸತ್ಕಾರ್ಯಗಳನ್ನು ಮಾಡಲು ನನ್ನಿಚ್ಛೆಯನ್ನು ಸತತವಾಗಿ ಬಳಸಲು ನನಗೆ ಕಲಿಸು.

300 ಕ್ಕೂ ಹೆಚ್ಚು ಸಾರ್ವತ್ರಿಕ ಪ್ರಾರ್ಥನೆಗಳು, ದೃಢೀಕರಣಗಳು ಮತ್ತು ದೃಶ್ಯೀಕರಣಗಳ ಸಂಗ್ರಹವಾದ ಈ ಪುಸ್ತಕವು ಆರಂಭಿಗರಿಗೂ, ಅನುಭವಿ ಧ್ಯಾನಿಗಳಿಗೂ — ಅಸೀಮ ಆನಂದ, ಶಾಂತಿ ಮತ್ತು ಆತ್ಮದ ಆಂತರಿಕ ಸ್ವಾತಂತ್ರ್ಯವನ್ನು ಜಾಗೃತಗೊಳಿಸುವ ಅತ್ಯಗತ್ಯ ಮಾರ್ಗದರ್ಶಿಯಾಗಿದೆ. ಇದರಲ್ಲಿ ಧ್ಯಾನ ಮಾಡುವುದು ಹೇಗೆ ಎಂಬ ಬಗ್ಗೆ ಪರಿಚಯಾತ್ಮಕ ಸೂಚನೆಗಳಿವೆ. ಮೆಟಾಫಿಸಿಕಲ್ ಮೆಡಿಟೇಷನ್ಸ್ ಬಗ್ಗೆ ಇನ್ನಷ್ಟು ಓದಿ.

ವಿಸ್ಪರ್ಸ್ ಫ್ರಮ್ ಇಟರ್ನಿಟಿ
ಮಿಸ್ಟಿಕಲ್ ಪ್ರೇಯರ್ಸ್ ಆಫ್ ಪೊಯೆಟಿಕ್ ಬ್ಯೂಟಿ
ಎಲ್ಲ ಧರ್ಮಗಳ ಶ್ರೇಷ್ಠ ಸಾಹಿತ್ಯಗಳ ಕವಿ-ದ್ರಷ್ಟಾರರ ಸಂಪ್ರದಾಯದಲ್ಲಿ, ಪರಮಹಂಸ ಯೋಗಾನಂದರ ವಿಸ್ಪರ್ಸ್ ಫ್ರಮ್ ಇಟರ್ನಿಟಿ ಪುಸ್ತಕವು ಭಾವಪರವಶತೆಯ ಭಕ್ತಿಪೂರ್ಣ ಅನುಭವದ ಬಗ್ಗೆ ಒಂದು ಅತೀಂದ್ರಿಯ ಕಿಟಕಿಯನ್ನು ತೆರೆಯುತ್ತದೆ.
ನೇರವಾಗಿ ತಮ್ಮ ಉನ್ನತ ವೈಯಕ್ತಿಕ ಭಗವತ್-ಸಂಸರ್ಗದಿಂದ ಹುಟ್ಟಿದ ಆತ್ಮ-ಜಾಗೃತಗೊಳಿಸುವ ಪ್ರಾರ್ಥನೆಗಳು ಮತ್ತು ದೃಢೀಕರಣಗಳನ್ನು ಹಂಚಿಕೊಳ್ಳುತ್ತ, ಗುರುಗಳು ಆಧುನಿಕ ಅನ್ವೇಷಕರಿಗೆ ಭಗವಂತನ ಬಗ್ಗೆ ಅವರದೇ ಆದ ಭಾವಪರವಶ ಗ್ರಹಿಕೆಯನ್ನು ಸಾಧಿಸುವುದು ಹೇಗೆ ಎಂದು ತೋರಿಸುತ್ತಾರೆ.