ಸರಳತೆಯನ್ನು ಮನಸ್ಸಿಗೆ ತೆಗೆದುಕೊಳ್ಳುವುದು

ಪರಮಹಂಸ ಯೋಗಾನಂದರ ಜ್ಞಾನ ಪರಂಪರೆಯಿಂದ ಆಯ್ದ ಭಾಗಗಳು

ಸರಳ ಜೀವನ ಸುಖೀ ಜೀವನ

Meditation near a lake — Silhouette

ಸಂತೋಷವು ಬಾಹ್ಯ ಸನ್ನಿವೇಶಗಳ ಮೇಲೆ ನಿರ್ಭರವಾಗಿರುವುದಿಲ್ಲ; ಬದಲಿಗೆ, ಅದು ಜೀವನದ ಸರಳ ಸಂತೋಷಗಳಲ್ಲಿರುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಳವಾದ ಧ್ಯಾನದ ನಿತ್ಯ ನೂತನ ಆನಂದದಲ್ಲಿ….

ಸರಳವಾದ, ಸತ್ಯವಾದ ಮತ್ತು ಶಾಶ್ವತವಾದ ಆತ್ಮಾನಂದಗಳಿಗೆ ಅಂಟಿಕೊಳ್ಳುವ ಮೂಲಕ ಸಂತೋಷವಾಗಿರಿ. ಅವು ಆಳವಾದ ಚಿಂತನೆ, ಆತ್ಮಾವಲೋಕನ, ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಧ್ಯಾನದಿಂದ ಬರುತ್ತವೆ.

ಆಧುನಿಕ ಜೀವನವು ಬಹಳ ಅತೃಪ್ತಿಕರವಾಗುತ್ತಿದೆ. ಅದು ನಿಮಗೆ ಸಂತೋಷವನ್ನು ನೀಡುವುದಿಲ್ಲ. ಅತೀ ಹೆಚ್ಚು ವಿಷಯಗಳಿವೆ, ಅತೀ ಹೆಚ್ಚು ಆಸೆಗಳಿವೆ. ಹೆಚ್ಚು ಒಳ್ಳೆಯ ಕಾರುಗಳು ಮತ್ತು ಉಡುಪುಗಳು ಮತ್ತು ಮನರಂಜನೆಗಳು — ಮತ್ತು ಹೆಚ್ಚು ಚಿಂತೆಗಳು! “ಅವಶ್ಯಕತೆಗಳು” ಎಂದು ಕರೆಯಲಾಗುವ ಇವುಗಳಿಂದ ನಿಮ್ಮನ್ನು ಮುಕ್ತಗೊಳಿಸಿ ಮತ್ತು ದೇವರೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ನಿಮ್ಮ ಜೀವನವನ್ನು ಸರಳಗೊಳಿಸಿ. ನಿಮ್ಮ ಆತ್ಮದಲ್ಲಿ ಮತ್ತು ನಿಮ್ಮ ಆತ್ಮದೊಂದಿಗೆ ಸಂತೋಷವಾಗಿರಿ.

ಆಧುನಿಕ ಮನುಷ್ಯನ ಸಂತೋಷವಿರುವುದು ಹೆಚ್ಚು ಹೆಚ್ಚು ಹೊಂದುವುದರಲ್ಲಿ, ಹೊರತು ಬೇರೆಯವರಿಗೆ ಏನಾಗುತ್ತದೆ ಎಂಬುದರ ಬಗ್ಗೆ ಚಿಂತೆಯಿಲ್ಲ. ಆದರೆ ಸರಳವಾಗಿ ಬದುಕುವುದು ಒಳ್ಳೆಯದಲ್ಲವೆ — ಅಷ್ಟೊಂದು ಐಷಾರಾಮಿಗಳಿಲ್ಲದೆ ಮತ್ತು ಕಡಿಮೆ ಚಿಂತೆಗಳೊಂದಿಗೆ? ನಿಮ್ಮಲ್ಲಿರುವುದನ್ನು ನೀವು ಆನಂದಿಸಲು ಸಾಧ್ಯವಾಗದಷ್ಟು ನಿಮ್ಮನ್ನು ದಣಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮನುಕುಲವು ಅಷ್ಟೊಂದು ಲೌಕಿಕ ವಸ್ತುಗಳ ಅಗತ್ಯತೆಯ ಪ್ರಜ್ಞೆಯಿಂದ ದೂರವಿರಲು ಪ್ರಾರಂಭಿಸುವಂತಹ ಸಮಯ ಬರುತ್ತದೆ. ಆಗ ಸರಳ ಜೀವನದಲ್ಲಿ ಹೆಚ್ಚಿನ ಭದ್ರತೆ ಮತ್ತು ಶಾಂತಿ ಕಂಡುಬರುತ್ತದೆ.

ಒತ್ತಡ ಮತ್ತು ಆರ್ಥಿಕ ಚಿಂತೆಗಳನ್ನು ಕಡಿಮೆ ಮಾಡಲು ಜೀವನವನ್ನು ಸರಳಗೊಳಿಸಿ

ಸಂಕೀರ್ಣವಾದ ಲೌಕಿಕ ಜೀವನವು ಕಣ್ಣುಗಳಿಗೆ ಮತ್ತು ಅಹಂ ನ ಸ್ಥಾನಮಾನ ಪ್ರಜ್ಞೆಗೆ ಮಾತ್ರ ಸಂತೋಷವನ್ನು ನೀಡುತ್ತದೆ, ಆದರೆ ಕೆಲವರಿಗೆ ಮಾತ್ರ “ಐಹಿಕ ಸೌಕರ್ಯಗಳ ಬೆಲೆ ಏನು” ಎಂದು ತಿಳಿದಿರುತ್ತದೆ. ಲೌಕಿಕವಾಗಿ ತೊಡಗಿಕೊಂಡಿರುವ ಬದುಕಿನ ಪರಿಣಾಮವೆಂದರೆ, ಆರ್ಥಿಕ ಗುಲಾಮಗಿರಿ, ನರೋದ್ರೇಕ, ಉದ್ಯಮದ ಚಿಂತೆಗಳು, ಅನ್ಯಾಯದಿಂದ ಕೂಡಿದ ಸ್ಪರ್ಧೆ, ಭಿನ್ನಾಭಿಪ್ರಾಯಗಳು, ಸ್ವಾತಂತ್ರ್ಯದ ಕೊರತೆ, ರೋಗ, ಕ್ಲೇಶ, ವೃದ್ಧಾಪ್ಯ ಮತ್ತು ಸಾವು. ಜೀವನದಲ್ಲಿ ಸೌಂದರ್ಯ, ಪ್ರಕೃತಿ ಮತ್ತು ದೇವರ ಅನೇಕ ಅಭಿವ್ಯಕ್ತಿಗಳನ್ನು ಆಸ್ವಾದಿಸಲು ಸಮಯವಿಲ್ಲದಿದ್ದರೆ ಬಹಳಷ್ಟನ್ನು ಕಳೆದುಕೊಂಡಂತಾಗುತ್ತದೆ.

ಸೂಕ್ತವಾದ ವಾಸಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ, ಆದರೆ ನಿಮಗೆ ನಿಜವಾಗಿಯೂ ಬೇಕಾದುದಕ್ಕಿಂತ ದೊಡ್ಡದನ್ನಲ್ಲ ಮತ್ತು ಸಾಧ್ಯವಾದರೆ ತೆರಿಗೆಗಳು ಮತ್ತು ಬದುಕುವ ಇತರ ವೆಚ್ಚಗಳು ಹೆಚ್ಚಿರದ ಪ್ರದೇಶದಲ್ಲಿ…. ಹುಸಿ ಮತ್ತು ದುಬಾರಿ ಸಂತೋಷಗಳನ್ನು ಅರಸದೆ ಜೀವನವನ್ನು ಸರಳವಾಗಿ ಇರಿಸಿಕೊಳ್ಳಿ ಮತ್ತು ಭಗವಂತ ಕೊಟ್ಟುದುದನ್ನು ಆನಂದಿಸಿ. ಮನುಷ್ಯನ ಮನಸ್ಸನ್ನು ಆಕರ್ಷಿಸಲು ದೇವರ ಗುಪ್ತ ಪ್ರಕೃತಿಯಲ್ಲಿ ಬಹಳಷ್ಟಿದೆ. ಉಪಯುಕ್ತ ಪುಸ್ತಕಗಳನ್ನು ಓದಲು, ಧ್ಯಾನ ಮಾಡಲು ಮತ್ತು ಜಟಿಲವಲ್ಲದ ಜೀವನವನ್ನು ಆನಂದಿಸಲು ನಿಮ್ಮ ಉಚಿತ ಸಮಯವನ್ನು ಬಳಸಿಕೊಳ್ಳಿ. ದೊಡ್ಡ ಮನೆ, ಎರಡು ಕಾರುಗಳು ಮತ್ತು ನೀವು ಪೂರೈಸಲು ಸಾಧ್ಯವಾಗದಂಥ ನಿಯತಕಾಲದ ಹಣ ಸಂದಾಯಗಳು ಮತ್ತು ಅಡಮಾನಕ್ಕಿಂತ — ಸರಳ ಜೀವನ, ಕಡಿಮೆ ಚಿಂತೆಗಳು ಮತ್ತು ಭಗವಂತನನ್ನು ಅರಸಲು ಸಮಯ — ಇವುಗಳನ್ನು ಹೊಂದಿರುವುದು ಉತ್ತಮವಲ್ಲವೆ?

ಭಗವಂತ ತನ್ನ ಅನಂತ ಕೃಪೆಯಲ್ಲಿ ನಮ್ಮ ಜೀವನಗಳ ವಿವಿಧ ಅನುಭವಗಳ ಮೂಲಕ ತನ್ನ ಆನಂದ, ಸ್ಫೂರ್ತಿ, ನಿಜ ಜೀವನ, ನಿಜ ಜ್ಞಾನ, ನಿಜ ಸುಖ ಮತ್ತು ನಿಜವಾದ ತಿಳುವಳಿಕೆಗಳನ್ನು ಕೊಡುತ್ತಾನೆ. ಆದರೆ ಭಗವಂತನ ಮಹಿಮೆಯು, ಅವನೊಂದಿಗೆ ಸಂಸರ್ಗವನ್ನು ಹೊಂದುವ ಮನಸ್ಸಿನ ಆಂತರಿಕ ಪ್ರಯತ್ನದ ತೀವ್ರತೆಯಲ್ಲಿ, ಆತ್ಮದ ಪ್ರಶಾಂತಿಯಲ್ಲಿ ಮಾತ್ರ ಪ್ರಕಟವಾಗುತ್ತದೆ. ಅಲ್ಲಿ ನಾವು ಸತ್ಯವನ್ನು ಕಾಣುತ್ತೇವೆ. ಬಾಹ್ಯದಲ್ಲಿ ಮಾಯೆ ಬಹಳ ಬಲಿಷ್ಠವಾಗಿದೆ; ಕೆಲವೇ ಕೆಲವು ಜನರು ಮಾತ್ರ ಬಾಹ್ಯ ಪರಿಸರದ ಪ್ರಭಾವಗಳಿಂದ ತಪ್ಪಿಸಿಕೊಳ್ಳಬಲ್ಲರು. ಜಗತ್ತು ತನ್ನ ಅನಂತ ಸಂಕೀರ್ಣತೆಗಳಿಂದ ಮತ್ತು ವೈವಿಧ್ಯಮಯ ಅನುಭವಗಳಿಂದ ಮುಂದೆ ಸಾಗುತ್ತಲೇ ಇರುತ್ತದೆ. ಪ್ರತಿಯೊಂದು ಜೀವನವೂ ನವನವೀನ ಹಾಗೂ ಪ್ರತಿಯೊಂದೂ ಜೀವ ವಿಭಿನ್ನವಾಗಿಯೇ ಬದುಕಬೇಕು. ಆದರೂ ಎಲ್ಲ ಜೀವನಗಳಿಗೆ ಅಂತರ್ನಿಹಿತವಾಗಿರುವುದು ಭಗವಂತನ ಮೌನ ವಾಣಿ, ಅದು ನಮ್ಮನ್ನು ಪುಷ್ಪಗಳು, ಸದ್ಗ್ರಂಥಗಳು ಹಾಗೂ ನಮ್ಮ ಅಂತಃಸಾಕ್ಷಿಯ ಮೂಲಕ ಅಂದರೆ ಸುಂದರವಾದ ಹಾಗೂ ಜೀವನವನ್ನು ಬದುಕಲು ಯೋಗ್ಯವನ್ನಾಗಿಸುವ ಎಲ್ಲ ವಸ್ತುವಿಷಯಗಳ ಮೂಲಕ ನಮ್ಮನ್ನು ನಿರಂತರವಾಗಿ ಕರೆಯುತ್ತಿರುತ್ತದೆ.

ಯಾವುದು ಮುಖ್ಯವೋ ಅದಕ್ಕೆ ಸಮಯ ಮಾಡಿಕೊಳ್ಳಿ


ಮೂರ್ಖರ ಲೌಕಿಕ ಹೊಳಪಿರುವ ಚಿನ್ನದ ಮೇಲೆ ಸುವರ್ಣ ಆಧ್ಯಾತ್ಮಿಕ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ನಾನು “ಅನವಶ್ಯಕ ಅವಶ್ಯಕತೆಗಳು” ಎಂದು ಹೆಸರಿಸಿರುವ ಶರೀರದ ಅವಶ್ಯಕತೆಗಳನ್ನು ಪೂರೈಸಲು ಸದಾ ಚಡಪಡಿಸುತ್ತಿದ್ದರೆ ಭಗವಂತನಿಗಾಗಿ ಸಮಯವೆಲ್ಲಿ? ಅದರ ಬದಲು ಜೀವನವನ್ನು ಸರಳ ಮಾಡಿಕೊಳ್ಳಿ ಮತ್ತು ಆ ಉಳಿಸಿದ ಸಮಯವನ್ನು ಧ್ಯಾನದಲ್ಲಿ ಭಗವಂತನ ಸಂಸರ್ಗಕ್ಕಾಗಿ ಬಳಸಿ ಹಾಗೂ ಜೀವನದ ಅವಶ್ಯ ಅವಶ್ಯಕತೆಗಳಾದ ಶಾಂತಿ ಮತ್ತು ಸಂತೋಷವನ್ನು ಹೊಂದುವಲ್ಲಿ ನಿಜವಾದ ಪ್ರಗತಿಯನ್ನು ಸಾಧಿಸಿ.

ದೇವರು ಎಂಬುದು ಸರಳ. ಬೇರೆಲ್ಲವೂ ತೊಡಕು.

ಭಗವಂತನ ಅಮೂರ್ತ ಚೇತನದಲ್ಲಿ, ಸಮಸ್ತ ಸೃಷ್ಟಿಯ ಮೂಲಕ ಸಾಗರದಂತೆ ಹರಿಯುವ ಅನಂತ ಅಸ್ತಿತ್ವದ ಅರಿವಿನಲ್ಲಿ ಭದ್ರವಾಗಿರಿ. ಈ ಅಲ್ಪಾವಧಿಯ ಜೀವನದಲ್ಲಿ ಭಗವತ್‌-ಸಾಕ್ಷಾತ್ಕಾರವನ್ನು ಹೊಂದುವ ಪ್ರಯತ್ನವನ್ನು ಮಾಡುವುದು ಸಾರ್ಥಕ. ಆಗ ಆನಂದ ನಿರಂತರವಾಗಿ ಹರಿಯುತ್ತದೆ.

ಇದನ್ನು ಹಂಚಿಕೊಳ್ಳಿ