ಜಗನ್ಮಾತೆಯ ಸನ್ನಿಧಿಯಲ್ಲಿ ಬದುಕುವುದು

ಪರಮಹಂಸ ಯೋಗಾನಂದರ ಜ್ಞಾನ-ಪರಂಪರೆಯಿಂದ ಆಯ್ದ ಭಾಗಗಳು

ದೈವಿಕ ತಾಯಿಯ ಚಿತ್ರಣ

ಈ ಬ್ರಹ್ಮಾಂಡವನ್ನು ಸೃಷ್ಟಿಸಿದಾಗ ಭಗವಂತನು ಎರಡು ಅಂಶಗಳನ್ನು ಪ್ರಕಟಪಡಿಸಿದ್ದಾನೆ: ಪುರುಷ ಅಥವಾ ಪಿತೃತ್ವ ಮತ್ತು ಸ್ತ್ರೀ ಅಥವಾ ಮಾತೃತ್ವ. ನೀವು ನಿಮ್ಮ ನೇತ್ರಗಳನ್ನು ಮುಚ್ಚಿಕೊಂಡು ಒಂದು ವಿಶಾಲವಾದ, ಕೊನೆಯೇ ಇಲ್ಲದ ಅನಂತ ಆಕಾಶವನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಂಡಾಗ, ನೀವು ಅದರ ಅಗಾಧತೆಗೆ ಬೆರಗಾಗಿ, ಭಾವಪರವಶರಾಗುವಿರಿ. ನಿಮಗೆ ಶುದ್ಧ ಪ್ರಜ್ಞಾನದ ಹೊರತು ಬೇರೇನೂ ಅನುಭವಕ್ಕೆ ಬರುವುದಿಲ್ಲ. ಯಾವುದೇ ಸೃಷ್ಟಿಯಿರದ, ಗ್ರಹ-ತಾರೆಗಳಿಲ್ಲದ ಆ ಅನಂತ ಗೋಳದ ಹಿಂದೆ ಅಡಗಿರುವ ಆ ಶುದ್ಧ ಪ್ರಜ್ಞಾನವೇ ತಂದೆ (ಭಗವಂತ). ಮತ್ತು ವಜ್ರದಂತೆ ಹೊಳೆಯುತ್ತಿರುವ ನಕ್ಷತ್ರಗಳು, ಆಕಾಶಗಂಗೆ, ಪುಷ್ಪಗಳು, ಪಕ್ಷಿಗಳು, ಮೋಡಗಳು, ಪರ್ವತಗಳು, ನೀಲಾಕಾಶ — ಸೃಷ್ಟಿಯ ಅಸಂಖ್ಯಾತ ಅದ್ಭುತಗಳಿರುವ ಪ್ರಕೃತಿಯೇ ಆ ದಿವ್ಯಮಾತೆ. ಈ ಪ್ರಕೃತಿಯಲ್ಲಿ ನೀವು ಆ ಭಗವಂತನ ಅಪರಿಮಿತ ಸೌಂದರ್ಯ, ಸೌಮ್ಯತೆ, ಮೃದುತ್ವ ಹಾಗೂ ದಯೆ ಇವುಗಳಿಂದ ತುಂಬಿದ ಮಾತೃತ್ವದ ಅಂಶವನ್ನು ಕಾಣುವಿರಿ. ಈ ಜಗತ್ತಿನಲ್ಲಿ ತುಂಬಿರುವ ಸೌಂದರ್ಯವು ಭಗವಂತನ ಸೃಜನಾತ್ಮಕವಾದ ಮಾತೃತ್ವದ ಗುಣವನ್ನು ಬಿಂಬಿಸುತ್ತದೆ. ನಾವು ಈ ಪ್ರಕೃತಿಯಲ್ಲಿ ತುಂಬಿರುವ ಉತ್ತಮವಾದುದೆಲ್ಲವನ್ನೂ ಗಮನಿಸಿದಾಗ, ನಮ್ಮಲ್ಲಿ ಸುಕೋಮಲ ಭಾವನೆಗಳು ಅರಳುವುದನ್ನು ಅನುಭವಿಸುತ್ತೇವೆ — ಪ್ರಕೃತಿಯಲ್ಲಿ ನಾವು ಭಗವಂತನ ಮಾತೃಭಾವವನ್ನು ಕಾಣಬಹುದು ಮತ್ತು ಅನುಭವಿಸಬಹುದು.

ನೀವು ಒಂದು ಹಟಮಾರಿ ಮಗುವಿನಂತೆ, ಆ ದಿವ್ಯಮಾತೆ ನಿಮ್ಮ ಕರೆಗೆ ಓಗೊಟ್ಟು “ಸರಿ, ನಿನಗೇನು ಬೇಕು?” ಎಂದು ಕೇಳುವವರೆಗೂ ನಿರಂತರವಾಗಿ ಕರೆಯುತ್ತಿರಿ. ಅವಳು ಸೃಷ್ಟಿಯ ಕಾರ್ಯದಲ್ಲಿ ಎಷ್ಟು ನಿರತಳಾಗಿದ್ದಾಳೆಂದರೆ, ಕರೆದ ಕೂಡಲೇ ಆಕೆ ಉತ್ತರಿಸುವುದಿಲ್ಲ. ಆದರೆ, ತಾಯಿಗಾಗಿ ರಚ್ಚೆ ಹಿಡಿದು ಅಳುವ ಮಗುವಿನಂತೆ, ಆಕೆಯೇ ಬೇಕೆಂದು ನೀವು ಹಟ ಹಿಡಿದರೆ, ಅವಳು ಬಂದೇ ಬರುತ್ತಾಳೆ.

ಆ ಜಗನ್ಮಾತೆಯು ನಿಮ್ಮನ್ನು ಅವಳ ಬಳಿಗೆ ಕರೆಸಿಕೊಳ್ಳಲು ಕಾತುರಳಾಗಿದ್ದಾಳೆ. ಆದರೆ, ಮೊದಲು ನೀವು, ಕೇವಲ ಆ ಮಾತೆಯನ್ನು ಮಾತ್ರ ಬಯಸುತ್ತಿದ್ದೀರೆಂದು ಅವಳಿಗೆ ಮನವರಿಕೆ ಮಾಡಕೊಡಬೇಕು. ನೀವು ಅವಳಿಗಾಗಿ ಪಟ್ಟು ಹಿಡಿದು ಸತತವಾಗಿ ಹಂಬಲಿಸುತ್ತಿದ್ದರೆ; ಅವಳು ಸಂತೋಷದಿಂದ ನಿಮ್ಮ ಬಳಿಗೆ ತಕ್ಷಣವೇ ಬರುವಳು. ಆ ದಿವ್ಯ ಚೇತನಕ್ಕೆ ಯಾವುದೇ ಭೇದಭಾವವಿಲ್ಲ; ಮಾತೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾಳೆ. ಆದರೆ ಆಕೆಯ ಭಕ್ತರಾದವರು ಮಾತ್ರ ಆ ಪ್ರೀತಿಯನ್ನು ಗೌರವಿಸುತ್ತಾರೆ ಮತ್ತು ಆಕೆಯ ಪ್ರೀತಿಗೆ ಸ್ಪಂದಿಸುತ್ತಾರೆ. ಕೆಲವರಿಗೆ ಸ್ವಲ್ಪ ಐಶ್ವರ್ಯ ಹಾಗೂ ಸ್ವಲ್ಪ ಮಾನುಷ ಪ್ರೀತಿ ಸಿಕ್ಕಿದಾಗ ಅದರ ಪರಿಣಾಮವನ್ನು ನಾನು ಗಮನಿಸಿದ್ದೇನೆ — ಎಷ್ಟು ಸಂತೋಷಪಡುತ್ತಾರೆ ಅವರು! ಆದರೆ, ಆ ಜಗನ್ಮಾತೆಯಲ್ಲಿ ಎಂತಹ ಶಕ್ತಿ, ಎಂತಹ ಆನಂದ ಮತ್ತು ಎಂತಹ ಪ್ರೀತಿ ಇದೆ ಎಂಬುದನ್ನು ಕಂಡಾಗ, ಅವರು ಎಲ್ಲವನ್ನೂ ತೊರೆದು ಆ ಜಗನ್ಮಾತೆಯ ಸನ್ನಿಧಿಗೆ ಹಾತೊರೆಯುತ್ತಾರೆ.

ಜಗನ್ಮಾತೆಯೇ, ನಾನು ಗುಲಾಬಿಯ ಸುಗಂಧದಲ್ಲಿ ನಿನ್ನ ವಾಣಿಯನ್ನು ಕೇಳಿದೆ. ನನ್ನ ಭಕ್ತಿಯ ತೊದಲು ಪಿಸುಮಾತುಗಳಲ್ಲಿ ನಿನ್ನ ವಾಣಿಯನ್ನು ಕೇಳಿದೆ. ನನ್ನ ಅತ್ಯಂತ ಕೋಲಾಹಲದ ಆಲೋಚನೆಗಳಡಿಯಲ್ಲಿ ನಿನ್ನ ವಾಣಿಯನ್ನು ಕೇಳಿದೆ. ನಿನ್ನ ಪ್ರೀತಿಯೇ ಸ್ನೇಹದ ದನಿಯಲ್ಲಿ ಮಾತನಾಡಿದ್ದು. ಆ ತಾವರೆಯ ಮೃದುತ್ವದಲ್ಲಿ ನಿನ್ನ ಕೋಮಲತೆಯನ್ನು ಸ್ಪರ್ಶಿಸಿದೆ.

ಓ ಜಗನ್ಮಾತೆಯೇ, ಬೆಳಗನ್ನು ಸರಿಸಿ ನಿನ್ನ ದಿವ್ಯಕಾಂತಿಯ ಮೊಗವನ್ನು ತೋರು! ಸೂರ್ಯನ ಕಿರಣಗಳಾಚೆ ಇರುವ ನಿನ್ನ ಶಕ್ತಿಯ ಮೊಗವನ್ನು ತೋರು! ಇರುಳನ್ನು ಸರಿಸಿ ನಿನ್ನ ಚಂದ್ರಮೊಗವನ್ನು ತೋರು! ನನ್ನ ಅಲೋಚನೆಗಳನ್ನು ತುಂಡರಿಸಿ, ನಿನ್ನ ಜ್ಞಾನದ ಮೊಗವನ್ನು ತೋರು! ನನ್ನ ಭಾವನೆಗಳನ್ನು ಮೀರಿ ನಿನ್ನ ಪ್ರೀತಿಯ ಮೊಗವನ್ನು ತೋರು. ನನ್ನ ಅಹಂಕಾರವನ್ನು ಮುರಿದು ನಿನ್ನ ವಿನೀತ ಮೊಗವನ್ನು ತೋರು! ನನ್ನ ಜ್ಞಾನವನ್ನು ಅಳಿಸಿ ನಿನ್ನ ಪರಿಪೂರ್ಣತೆಯ ಮೊಗವನ್ನು ತೋರು!

ನನ್ನ ಏಕಾಂಗಿತನದ ಮರುಭೂಮಿಯಲ್ಲಿ ನಿನ್ನನ್ನು ಕರೆದಾಗ, ನನ್ನನ್ನು ಸಂತೋಷದಿಂದ ಹರಸಲು ನೀನು ನಸುಕನ್ನು ಸೀಳಿ ಬಂದೆ. ನೀನು, ನನ್ನ ಜೀವನದ ಸೂಕ್ಷ್ಮರಂಧ್ರಗಳಲ್ಲಿ ನಿನ್ನ ಶಕ್ತಿಯನ್ನು ಸುರಿಸಲು ಸೂರ್ಯನ ಕರಗಿದ ದ್ವಾರದಿಂದ ಹೊರಬಂದೆ. ಮಾತನಾಡುವ ಮೌನದ ನಿನ್ನ ಬೆಳ್ಳಿಯ ಕಿರಣಗಳನ್ನು ತೋರಿಸಲು ನೀನು ನನ್ನ ಅಜ್ಞಾನದ ರಾತ್ರಿಯನ್ನು ಹರಿದು ಹಾಕಿದೆ! 

ಬೇರೆಲ್ಲರೂ ತಮ್ಮ ಸಮಯವನ್ನು ಹಾಳುಮಾಡುತ್ತಿರುವಾಗ, ನೀವು ಧ್ಯಾನವನ್ನು ಮಾಡಿ. ಆ ಧ್ಯಾನದಲ್ಲಿ ಮೌನವು (ಭಗವಂತನು) ನಿಮ್ಮೊಂದಿಗೆ ಮಾತನಾಡುವುದನ್ನು ಕಾಣುವಿರಿ….ಎಲ್ಲೆಡೆಯೂ ನಾನು ಆ ದಿವ್ಯ ಚೇತನವು ಮಾತೃರೂಪದಲ್ಲಿ ಸಾಕಾರಗೊಂಡಿರುವುದನ್ನು ಕಾಣುತ್ತೇನೆ. ನೀರು ಮಂಜುಗಡ್ಡೆಯಾಗಿ ಘನೀಕರಿಸುವಂತೆ, ಭಕ್ತಿಯ ಶೀತಲತೆಯಿಂದ ಆ ಅಗೋಚರ ಚೈತನ್ಯವನ್ನು ಘನೀಕರಿಸಿ ಸಾಕಾರಗೊಳ್ಳುವಂತೆ ಮಾಡಬಹುದು. ನಾನು ಹಿಂದಿನ ಇರುಳು ಕಂಡ ಆ ಮಾತೆಯ ಸುಂದರವಾದ ಕಂಗಳನ್ನು ನೀವು ಕಾಣಬಲ್ಲಿರಾದರೆ. ನನ್ನ ಹೃದಯವು ಎಣೆಯಿಲ್ಲದ ಆನಂದದಿಂದ ತುಂಬಿ ತುಳುಕುತ್ತಿದೆ. ನನ್ನತ್ತ ನೋಡುತ್ತ, ಕೆಲವೊಮ್ಮೆ ಮುಗುಳ್ನಗುತ್ತಿರುವ ಆ ಕಂಗಳಲ್ಲಿ ನಾನು ಕಂಡ ಆನಂದ ಮತ್ತು ಪ್ರೀತಿಯನ್ನು ನನ್ನ ಹೃದಯದ ಪುಟ್ಟ ಬಟ್ಟಲು ಹಿಡಿದಿಡಲಾರದು. ನಾನು ಆಕೆಗೆ ಹೇಳಿದೆ, “ಓಹ್‌! ನೀನು ಕಾಲ್ಪನಿಕವೆಂದು ಜನರು ಹೇಳುತ್ತಾರೆ!” ಆ ದಿವ್ಯಮಾತೆ ಮುಗುಳ್ನಕ್ಕಳು. ನಾನು ಹೇಳಿದೆ “ನೀನು ಮಾತ್ರ ವಾಸ್ತವ, ಬೇರೆಲ್ಲವೂ ಕಾಲ್ಪನಿಕ,” ಮಾತೆ ಮತ್ತೊಮ್ಮೆ ಮುಗುಳ್ನಕ್ಕಳು. “ಓ ಮಾತೆ! ಎಲ್ಲರಿಗೂ ನೀನು ದಿಟವಾಗು.” ಎಂದು ನಾನು ಪ್ರಾರ್ಥಿಸಿದೆ.  

ಎರಡು ಬಗೆಯ ಅನ್ವೇಷಕರಿದ್ದಾರೆ: ಕೆಲವರು ಮಂಗನ ಮರಿಯ ಹಾಗೆ ಮತ್ತೆ ಕೆಲವರು ಬೆಕ್ಕಿನ ಮರಿಯ ಹಾಗೆ. ಮಂಗನ ಮರಿಯು ತನ್ನ ತಾಯಿಯನ್ನು ಗಟ್ಟಿಯಾಗಿ ತಬ್ಬಿ ಹಿಡಿದಿರುತ್ತದೆ. ಆದರೆ ತಾಯಿಯು ನೆಗೆಯುವಾಗ ಮರಿಯು ಹಿಡಿತ ತಪ್ಪಿ ನೆಲಕ್ಕೆ ಬೀಳಬಹುದು. ಆದರೆ, ಬೆಕ್ಕಿನ ಮರಿಯನ್ನು ತಾಯಿಯೇ ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಕರೆದೊಯ್ಯುತ್ತದೆ, ತಾಯಿ ತನ್ನನ್ನೆಲ್ಲಿಟ್ಟರೂ ಅದು ತೃಪ್ತ. ಆ ಮರಿ ತನ್ನ ತಾಯಿಯನ್ನು ಸಂಪೂರ್ಣವಾಗಿ ನಂಬಿರುತ್ತದೆ. ನಾನು ಆ ಬೆಕ್ಕಿನ ಮರಿಯಂತೆ. ನಾನು ನನ್ನೆಲ್ಲ ಜವಾಬ್ದಾರಿಯನ್ನು ಜಗನ್ಮಾತೆಗೆ ವಹಿಸಿದ್ದೇನೆ. ಆದರೆ, ಈ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಬಹಳ ಪ್ರಬಲವಾದ ಇಚ್ಛಾಶಕ್ತಿಯಿರಬೇಕು. ಎಲ್ಲಾ ಪರಿಸ್ಥಿತಿಗಳಲ್ಲಿಯೂ — ಆರೋಗ್ಯ ಅಥವಾ ಅನಾರೋಗ್ಯ, ಸಿರಿತನ ಅಥವಾ ಬಡತನ, ಬಿಸಿಲು ಅಥವಾ ಮೋಡದ ವಾತಾವರಣ — ಏನೇ ಇರಲಿ, ನಿಮ್ಮ ಭಾವನೆಗಳು ಸ್ಥಿರವಾಗಿರಬೇಕು. ನೀವು ಸಂಕಷ್ಟದ ಬೇಗೆಯಲ್ಲಿ ಬೇಯುತ್ತಿದ್ದರೂ, ನೀವು ಆ ಮಾತೆ ನಿಮ್ಮನ್ನು ಅಲ್ಲೇಕೆ ಇರಿಸಿದ್ದಾಳೆಂದು ಅಚ್ಚರಿಪಡುವುದಿಲ್ಲ. ಆಕೆಗೆ ಚೆನ್ನಾಗಿ ತಿಳಿದಿದೆ ಎಂಬ ವಿಶ್ವಾಸ ನಿಮಗಿರುತ್ತದೆ. ಕೆಲವೊಮ್ಮೆ, ವಿಪತ್ತಿನಂತೆ ಕಂಡುಬರುವುದೂ ನಿಮಗೆ ಆಶೀರ್ವಾದವಾಗಿ ಬದಲಾಗುತ್ತದೆ….

ವಿಷಾದ ಎಂದರೆ ಜಗನ್ಮಾತೆಯು ನೇವರಿಸಲೆಂದು ಚಾಚಿದ ಕೈನ ನೆರಳಷ್ಟೆ. ಅದನ್ನು ಮರೆಯಬೇಡಿ. ಮಾತೆಯು ನಿಮ್ಮನ್ನು ನೇವರಿಸಲುಪಕ್ರಮಿಸಿದಾಗ, ಆಕೆ ಸ್ಪರ್ಶಿಸುವ ಮುನ್ನ ಕೆಲವೊಮ್ಮೆ ಆಕೆಯ ಕೈನ ನೆರಳು ಬೀಳುತ್ತದೆ. ಆದ್ದರಿಂದ ಕಷ್ಟಗಳು ಬಂದಾಗ ಆಕೆಯು ಶಿಕ್ಷಿಸುತ್ತಿದ್ದಾಳೆಂದುಕೊಳ್ಳಬೇಡಿ; ನಿಮ್ಮ ಮೇಲೆ ನೆರಳನ್ನುಂಟುಮಾಡಿದ ಆಕೆಯ ಕರವು ನಿಮ್ಮನ್ನು ಆಕೆಯ ಹತ್ತಿರ ಬರಸೆಳೆಯುತ್ತ ಏನೋ ಒಂದು ಅನುಗ್ರಹವನ್ನೀಯುತ್ತದೆ.

ನಿಮ್ಮನ್ನು ಈ ಭೂಮಿಗೆ ಕಳಿಸಿರುವ ಉದ್ದೇಶ, ನೀವು ದೇವರ ಬ್ರಹ್ಮಾಂಡದ ಲೀಲೆಯನ್ನು ಅನುಭವಿಸಿ ನಂತರ ಆತನ ಬಳಿಗೆ, ನಿಮ್ಮ ನಿವಾಸಕ್ಕೆ ಹಿಂತಿರುಗಬೇಕೆಂಬುದೇ ಆಗಿದೆ….ನಾನು ಹೇಳುತ್ತೇನೆ, “ಹೇ, ಪ್ರಭು, ಇದು ನಿನ್ನ ಲೀಲೆ. ಅದು ಹಾಗೆಯೇ ಇರಲಿ. ನಿನ್ನ ಇಚ್ಛೆಯಂತೆ ಮಾಡುವುದನ್ನು ಬಿಟ್ಟು, ನಾನು ಅದರ ಭಾಗವಾಗಿರಲು ಇಚ್ಚಿಸುವುದಿಲ್ಲ. ನಾನು ಎಷ್ಟು ಸಾಧ್ಯವೋ ಅಷ್ಟು ಬೇಗ ನಿನ್ನ ಕಾರ್ಯಗಳನ್ನು ಸಮಾಪ್ತಿಗೊಳಿಸಿ, ಈ ನಿನ್ನ ಲೀಲೆಯಿಂದ ಹೊರಬರುತ್ತೇನೆ; ಆದರೆ, ನಾನು ಬೇರೆಯವರನ್ನೂ ಈ ಮಾಯೆಯ ವಿನೋದಗಳು ಮತ್ತು ದುಃಸ್ವಪ್ನಗಳ ನಾಟಕದಿಂದ ಹೊರತರಲು ಬಯಸುತ್ತೇನೆ.”…

ಆದರೆ, ನಿಮಗೆ ಅದು ಇರುವವರೆಗೂ, ದೇವನೊಬ್ಬನನ್ನು ಬಿಟ್ಟು ಬೇರೇನೂ ಯೋಚಿಸದಿರಿ….ನಿಮ್ಮ ಕಣ್ಣುಗಳನ್ನು ಮುಚ್ಚಿ ದೇವರನ್ನು ಧ್ಯಾನಿಸಿ ಮತ್ತು ಜಗನ್ಮಾತೆಗೆ ನಿಮ್ಮ ಆತ್ಮದ ಕರೆಯನ್ನು ನೀಡಿ. ಇದನ್ನು ನೀವು ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ನೀವು ಬೇರೇನನ್ನು ಮಾಡುತ್ತಿದ್ದರೂ, ಮನದಲ್ಲಿಯೇ ದೇವರೊಂದಿಗೆ ಸಂಭಾಷಿಸಬಹುದು: “ನನ್ನ ದೇವರೇ, ನಾನು ನಿನಗಾಗಿ ಅರಸುತ್ತಿದ್ದೇನೆ. ನನಗೆ ನೀನಲ್ಲದೆ ಬೇರೇನೂ ಬೇಡ. ನಾನು ಯಾವಾಗಲೂ ನಿನ್ನ ಬಳಿಯೇ ಇರಲು ಹಂಬಲಿಸುತ್ತೇನೆ. ನನ್ನನ್ನು ನಿನ್ನ ಪ್ರತಿರೂಪವಾಗಿ ಸೃಷ್ಟಿಸಿರುವೆ; ಮತ್ತು ನೀನೇ ನನ್ನ ಅಂತಿಮ ಧಾಮವಾಗಿರುವೆ. ನನ್ನನ್ನು ನಿನ್ನಿಂದ ದೂರವಿರಿಸಲು ನಿನಗೆ ಯಾವುದೇ ಹಕ್ಕಿಲ್ಲ. ನಿನ್ನ ಬ್ರಹ್ಮಾಂಡ ನಾಟಕದ ಮಾಯೆಯ ಪ್ರಲೋಭನೆಗೊಳಗಾಗಿ ನಾನು ತಪ್ಪುಗಳನ್ನು ಮಾಡಿರಬಹುದು; ಆದರೆ ನೀನೇ ನನ್ನ ತಾಯಿ, ತಂದೆ, ಸ್ನೇಹಿತ ಎಲ್ಲವೂ ಆಗಿರುವುದರಿಂದ ನೀನು ನನ್ನನ್ನು ಕ್ಷಮಿಸುವೆ ಮತ್ತು ನಿನ್ನ ಬಳಿಗೆ ಕರೆಸಿಕೊಳ್ಳುವೆ ಎಂದು ನನಗೆ ತಿಳಿದಿದೆ. ನಾನು ನನ್ನ ನಿವಾಸಕ್ಕೆ ಹೋಗಲು ಬಯಸುತ್ತೇನೆ. ನಾನು ನಿನ್ನಲ್ಲಿಗೆ ಬರಲು ಬಯಸುತ್ತೇನೆ.” 

ಇದನ್ನು ಹಂಚಿಕೊಳ್ಳಿ