
ಪರಮಹಂಸ ಯೋಗಾನಂದರ ಜ್ಞಾನ ಪರಂಪರೆಯಿಂದ
ನಿಜವಾದ ಭಕ್ತರೂ ಕೂಡ ಕೆಲವೊಮ್ಮೆ ಭಗವಂತನು ತಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಿಲ್ಲವೆಂದು ಯೋಚಿಸುತ್ತಾರೆ. ಅವನು ಮೌನವಾಗಿ ತನ್ನ ನಿಯಮಗಳ ಮೂಲಕ ಉತ್ತರಿಸುತ್ತಾನೆ; ಆದರೆ ತನ್ನ ಭಕ್ತನ ಬಗ್ಗೆ ಖಚಿತವಾಗುವವರೆಗೂ, ಅವನು ಮುಕ್ತವಾಗಿ ಉತ್ತರಿಸುವುದಿಲ್ಲ, ಅವನು ತನ್ನ ಭಕ್ತರೊಂದಿಗೆ ಮಾತನಾಡುವುದಿಲ್ಲ. ವಿಶ್ವದ ಅಧಿಪತಿಯು ಎಷ್ಟು ವಿನೀತನೆಂದರೆ, ಅವನು ಮಾತನಾಡುವುದಿಲ್ಲ, ಏಕೆಂದರೆ, ತಾನು ಹಾಗೆ ಮಾಡಿದರೆ, ಭಕ್ತನು ತನ್ನನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಅವನ ಇಚ್ಛಾ ಸ್ವಾತಂತ್ರ್ಯದ ಬಳಕೆಯಲ್ಲಿ ತಾನು ಪ್ರಭಾವವನ್ನು ಬೀರಿದಂತಾಗುತ್ತದೆ ಎಂಬ ಕಾರಣಕ್ಕೆ.

ಸರ್ವವ್ಯಾಪಿ ಭಗವಂತನು ತನ್ನ ನಿಜವಾದ ಭಕ್ತರನ್ನು ಅರಿತಿರುತ್ತಾನೆ, ಅವರು ಅವನನ್ನು ಯಾವುದೇ ಸ್ವರೂಪದಲ್ಲಿ ಪ್ರೀತಿಸುತ್ತಿರಲಿ….[ಮತ್ತು] ಅವರ ಪ್ರಾರ್ಥನೆಗಳಿಗೆ ಅನೇಕ ರೀತಿಯಲ್ಲಿ ಉತ್ತರಿಸುತ್ತಾನೆ. ದೇವರಲ್ಲಿಯ ಭಕ್ತಿಯು ಯಾವಾಗಲೂ ಯಾವುದಾದರೊಂದು ಸರಳ ಅಥವಾ ನಿಗೂಢ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಪ್ರಕಟ ಪಡಿಸುತ್ತದೆ. ನಿಜವಾದ ಭಕ್ತರನ್ನು ದೇವರು ಎಂದಿಗೂ ಅಲಕ್ಷಿಸುವುದಿಲ್ಲ.
ದೇವರು ಆಸೆಗಳನ್ನು ಪೂರೈಸುವುದರ ಮೂಲಕ ಪ್ರತಿಕ್ರಿಯಿಸುತ್ತಾನೆ
ಯಾವ ಪ್ರಾರ್ಥನೆಯು ಗಾಢವಾಗಿ ಮತ್ತು ಆಳವಾಗಿರುವುದೋ ಅದು ಖಚಿತವಾಗಿ ದೇವರಿಂದ ಉತ್ತರವನ್ನು ಪಡೆದುಕೊಳ್ಳುತ್ತದೆ….ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಾರಿ ತಮ್ಮ ಆಸೆಗಳು ಪ್ರಾರ್ಥನೆಗಳ ಮೂಲಕ ಈಡೇರಿರುವುದನ್ನು ಕಂಡುಕೊಂಡಿರುತ್ತಾರೆ. ನಿಮ್ಮ ಇಚ್ಚಾಶಕ್ತಿಯು ಬಹಳ ಶಕ್ತಿಯುತವಾಗಿದ್ದಾಗ, ಅದು ಆ ತಂದೆಯನ್ನು ಮುಟ್ಟುತ್ತದೆ ಮತ್ತು ಆ ತಂದೆಯು ನಿಮ್ಮ ಆಸೆಗಳು ಫಲಿಸಲೆಂದು ಇಚ್ಛಿಸುತ್ತಾನೆ.

ಕೆಲವು ಬಾರಿ, ನಿಮ್ಮ ಆಸೆಗಳನ್ನು ಅಥವಾ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವಿರುವ ವ್ಯಕ್ತಿಯ ಮನಸ್ಸಿನಲ್ಲಿ ಆಲೋಚನೆಯೊಂದನ್ನು ಬಿತ್ತುವ ಮೂಲಕ ಆತ ಉತ್ತರಿಸುತ್ತಾನೆ; ಆಗ ಆ ವ್ಯಕ್ತಿಯು ಆಶಿಸಿದ ಫಲಿತಾಂಶವನ್ನು ನೀಡಲು ದೇವರು ಕಳಿಸಿರುವ ಉಪಕರಣದಂತೆ ಕೆಲಸ ಮಾಡುತ್ತಾನೆ.
ಕೆಲವು ಬಾರಿ ಅವನ ಉತ್ತರವು “ಇಲ್ಲ” ಎಂದಾಗಿರುತ್ತದೆ
ಕೆಲವರು ತಮ್ಮ ಪ್ರಾರ್ಥನೆಗಳಿಗೆ ದೇವರು ಉತ್ತರಿಸುತ್ತಿಲ್ಲವೆಂದು ಯೋಚಿಸುತ್ತಾರೆ. ಏಕೆಂದರೆ, ಕೆಲವು ಬಾರಿ ದೇವರ ಉತ್ತರವು ಅವರು ನಿರೀಕ್ಷಿಸಿರುವುದಕ್ಕಿಂತ ಅಥವಾ ಅವರು ಕೇಳಿದುದಕ್ಕಿಂತ ಭಿನ್ನವಾಗಿರುವುದರಿಂದ ಅದು ಅವರಿಗೆ ಅರ್ಥವಾಗುವುದಿಲ್ಲ. ಅವನು ಯಾವಾಗಲೂ ಅವರ ಆಶಯಗಳಿಗೆ ಅನುಸಾರವಾಗಿ ಉತ್ತರಿಸುವುದಿಲ್ಲ. ಎಲ್ಲಿಯವರೆಗೆ ಭಕ್ತರು ಆತನ ಆಶಯದಂತೆ ತಮ್ಮ ಪರಿಪೂರ್ಣತೆಯನ್ನು ತೋರಿಸಿಕೊಡುವುದಿಲ್ಲವೋ ಅಲ್ಲಿಯವರೆಗೆ ಆತ ಅವರಾಸೆಗನುಸಾರವಾಗಿ ಉತ್ತರಿಸುವುದಿಲ್ಲ.

ಕೆಲವು ಬಾರಿ ನಮಗೆ ಏನು ಬೇಕೆಂದು ಯೋಚಿಸಿರುತ್ತೇವೆಯೋ ಅದು ನಮಗೆ ಸಿಗದೇ ಇರುವುದೂ ಕೂಡ ಒಳ್ಳೆಯದೆ. ಮಗು ಬೆಂಕಿಯನ್ನು ಮುಟ್ಟಲು ಆಶಿಸಬಹುದು, ಆದರೆ ತಾಯಿಯು ಅದಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಆ ಮಗುವಿನ ಆಸೆಯನ್ನು ಈಡೇರಿಸುವುದಿಲ್ಲ.
ಶಾಂತಿ ಮತ್ತು ಆನಂದದ ಅನುಭವವೇ ದೇವರ ಪ್ರತಿಕ್ರಿಯೆಯಾಗಿದೆ
ನೀವು ಆಳವಾದ ಏಕಾಗ್ರತೆಯಿಂದ ನಿರಂತರವಾಗಿ ಆತನನ್ನು ಕರೆಯುತ್ತಿದ್ದರೆ, ಆತ ನಿಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ. ಒಂದು ರೀತಿಯ ಶಾಂತಿ ಮತ್ತು ಆನಂದ ನಿಮ್ಮ ಹೃದಯವನ್ನು ತಟ್ಟುತ್ತದೆ. ಅದು ನಿಮ್ಮನ್ನು ಆವರಿಸಿದಾಗ, ನೀವು ಭಗವಂತನೊಂದಿಗೆ ಸಂಸರ್ಗದಲ್ಲಿರುವಿರೆಂದು ನಿಮಗೆ ಅರಿವಾಗುವುದು.

ನೀವು “ಭಗವಂತ” ಎಂದು ಭಕ್ತಿಯಿಂದ ಉಚ್ಚರಿಸಿದಾಗ ಮತ್ತು ಪ್ರತಿ ಬಾರಿಯೂ ಆತನ ಹೆಸರನ್ನು ಉಚ್ಚರಿಸುವಾಗ ಭಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿದಲ್ಲಿ, ನಿಮ್ಮ ಮನವು ಆತನ ಇರುವಿಕೆಯ ಸಾಗರದಲ್ಲಿ ಆಳವಾಗಿ, ಇನ್ನೂ ಆಳವಾಗಿ ಧುಮುಕಿ, ತಳವೇ ಕಾಣದ ಸಾಗರದ ದಿವ್ಯಶಾಂತಿ ಮತ್ತು ಆನಂದ ಪರವಶತೆಯಲ್ಲಿ ಮುಳುಗಿದಾಗ, ಅದು ನಿಮ್ಮ ಪ್ರಾರ್ಥನೆಯು ಆ ದೇವರನ್ನು ಮುಟ್ಟಿದುದರ ಸಾಕ್ಷಿಯಾಗಿರುತ್ತದೆ.

ಯಾವುದೇ ಹೊರಗಿನ ಪ್ರಭಾವದ ಷರತ್ತುಗಳಿಗೆ ಒಳಪಡದೇ ಇರುವ ಆಂತರಿಕ ಸಂತೋಷದ ಅಸ್ತಿತ್ವವು ದೇವರ ಉಪಸ್ಥಿತಿಯ ಪ್ರತಿಕ್ರಿಯೆಯ ಪ್ರತ್ಯಕ್ಷ ಸಾಕ್ಷಿಯಾಗಿದೆ.
ದೇವರ ಪ್ರತಿಕ್ರಿಯೆಯು, ಯಾವುದೋ ಸಮಸ್ಯೆಗೆ ನಮ್ಮ ಅಂತರ್ಬೋಧೆಗೆ ಹೊಳೆಯುವ ಪರಿಹಾರದ ರೂಪದಲ್ಲಿರಬಹುದು
ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಎರಡು ಹಾದಿಗಳಿವೆ. ಮೊದಲನೆಯದು ಲೌಕಿಕ. ಉದಾಹರಣೆಗೆ, ನಮಗೆ ಅನಾರೋಗ್ಯ ಉಂಟಾದಾಗ, ನಾವು ಚಿಕಿತ್ಸೆಗಾಗಿ ವೈದ್ಯರಲ್ಲಿ ಹೋಗಬಹುದು. ಆದರೆ ಯಾವ ಮಾನವ ಸಹಾಯವೂ ಕೆಲಸಕ್ಕೆ ಬಾರದಂತಹ ಕಾಲವೂ ಬರುತ್ತದೆ. ಆಗ ನಾವು ಇನ್ನೊಂದು ದಿಕ್ಕಿನತ್ತ, ನಮ್ಮ ದೇಹ, ಮನಸ್ಸು ಮತ್ತು ಬುದ್ಧಿಯ ಕರ್ತೃವಾದ ದೈವಶಕ್ತಿಯೆಡೆಗೆ ನೋಡುತ್ತೇವೆ. ಲೌಕಿಕ ಶಕ್ತಿ ಸೀಮಿತವಾದುದು. ಅದು ವಿಫಲವಾದಾಗ ನಾವು ಅಪರಿಮಿತ ಶಕ್ತಿಯತ್ತ ಮುಖ ಮಾಡುತ್ತೇವೆ. ಅಂತೆಯೇ ನಮ್ಮ ಆರ್ಥಿಕ ಅವಶ್ಯಕತೆಗಳಲ್ಲೂ, ನಮ್ಮ ಕೈಲಾದಷ್ಟನ್ನು ಮಾಡಿದ ಮೇಲೂ ಅದು ಸಾಕಾಗದಿದ್ದಾಗ, ನಾವು ಆ ಶಕ್ತಿಯ ಮೊರೆಹೋಗುತ್ತೇವೆ…. ನಮಗೆ ಕಷ್ಟಗಳು ಬಂದೊದಗಿದಾಗ ನಾವು ಮೊದಲು ಪರಿಸರಕ್ಕೆ ಪ್ರತಿಕ್ರಿಯಿಸುತ್ತೇವೆ, ನಮಗೆ ನೆರವಾಗಬಹುದೆನ್ನಿಸಿದ ಯಾವುದೇ ಭೌತಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತೇವೆ. ಆದರೆ, “ನಾನು ಇಷ್ಟರವರೆಗೆ ಮಾಡಿದ್ದೆಲ್ಲವೂ ವಿಫಲವಾಯಿತು; ಮುಂದೇನು ಗತಿ?” ಎನ್ನುವ ಪರಿಸ್ಥಿತಿ ಬಂದಾಗ ಪರಿಹಾರವನ್ನು ಕಂಡುಕೊಳ್ಳಲು ನಾವು ತೀಕ್ಷ್ಣವಾಗಿ ಯೋಚಿಸಲಾರಂಭಿಸುತ್ತೇವೆ. ನಾವು ಸಾಕಷ್ಟು ಆಳವಾಗಿ ಯೋಚಿಸಿದಾಗ, ಒಳಗಿನಿಂದ ಉತ್ತರವೊಂದು ಹೊಳೆಯುತ್ತದೆ. ಇದು ಫಲಿಸಿದ ಪ್ರಾರ್ಥನೆಯ ಒಂದು ರೂಪ.

ನಿಮ್ಮ ಮನಸ್ಸು ಅಸಂಖ್ಯಾತ ಕಾರಣಗಳನ್ನು ಕೊಟ್ಟ ನಂತರವೂ, ನಿಮ್ಮೊಳಗೆ ಶಾಂತಿಯ ಅನುಭವವಾಗುವವರೆಗೂ ನೀವು ಕುಳಿತು ಭಗವಂತನ ಧ್ಯಾನವನ್ನು, ಮಾಡಬೇಕೆಂದು ನೆನಪಿಡಿ. ನಂತರ ಭಗವಂತನಿಗೆ ಹೇಳಿ, “ನಾನು ಕೋಟ್ಯಾಂತರ ರೀತಿಯಲ್ಲಿ ಯೋಚಿಸಿದರೂ, ನನ್ನ ಸಮಸ್ಯೆಯನ್ನು ನಾನೊಬ್ಬನೇ ಪರಿಹರಿಸಿಕೊಳ್ಳಲಾರೆ. ಆದರೆ ಅದನ್ನು ನಿನ್ನ ಕೈಗಳಲ್ಲಿ ಇರಿಸಿದಾಗಲೇ ನಾನು ಪರಿಹರಿಸಿಕೊಳ್ಳಲು ಸಾಧ್ಯ, ಮೊದಲು ನಿನ್ನ ಮಾರ್ಗದರ್ಶನವನ್ನು ಕೋರಿ, ನಂತರ, ಸಾಧ್ಯವಿರಬಹುದಾದ ಪರಿಹಾರಕ್ಕಾಗಿ ಎಲ್ಲ ದೃಷ್ಟಿಕೋನಗಳಿಂದ ಯೋಚಿಸುವುದರ ಮೂಲಕ.” ಸ್ವಸಹಾಯ ಮಾಡಿಕೊಳ್ಳುವವರಿಗೆ ದೇವರು ಸಹಾಯ ಮಾಡೇ ಮಾಡುತ್ತಾನೆ. ಧ್ಯಾನದಲ್ಲಿ ನೀವು ದೇವರನ್ನು ಪ್ರಾರ್ಥಿಸಿದ ನಂತರ ನಿಮ್ಮ ಮನವು ಶಾಂತಿ ಮತ್ತು ವಿಶ್ವಾಸದಿಂದ ತುಂಬಿದಾಗ, ನೀವು ನಿಮ್ಮ ಸಮಸ್ಯೆಗಳಿಗೆ ವಿವಿಧ ಪರಿಹಾರಗಳನ್ನು ಕಾಣುತ್ತೀರಿ; ನಿಮ್ಮ ಮನಸ್ಸು ಶಾಂತವಾಗಿರುವುದರಿಂದ ನೀವು ಅದರಲ್ಲಿ ಉತ್ತಮವಾದುದನ್ನು ಆಯ್ಕೆಮಾಡಿಕೊಳ್ಳಲು ಸಮರ್ಥರಾಗುತ್ತೀರಿ. ಈ ಪರಿಹಾರ ಮಾರ್ಗವನ್ನು ಅನುಸರಿಸಿ, ಆಗ ನೀವು ಯಶಸ್ಸನ್ನು ಕಂಡುಕೊಳ್ಳುವಿರಿ. ಇದು ನಿಮ್ಮ ದೈನಂದಿನ ಜೀವನದಲ್ಲಿ ಧರ್ಮದ ವಿಜ್ಞಾನವನ್ನು ಅನ್ವಯಿಸುವ ಬಗೆಯಾಗಿದೆ.
ಯಶಸ್ಸಿಗಾಗಿ ನಿಮ್ಮ ಸ್ವಂತ ಇಚ್ಛಾಶಕ್ತಿಯನ್ನು ಹೆಚ್ಚಿಸುವ ಮೂಲಕ ದೇವರು ಪ್ರತಿಕ್ರಿಯಿಸುತ್ತಾನೆ
ರಚನಾತ್ಮಕ ಕಾರ್ಯಗಳ ಮೂಲಕ ನಿಮ್ಮ ಇಚ್ಛಾಶಕ್ತಿಯನ್ನು ನಿರಂತರವಾಗಿ ಹರಿಸಿ. ನೀವು ವಿಫಲತೆಯನ್ನು ಅಂಗೀಕರಿಸಲು ನಿರಾಕರಿಸಿದಾಗ, ಪಟ್ಟುಬಿಡದೆ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ, ನಿಮ್ಮ ಇಚ್ಛೆಯು ನೆರವೇರುವುದು. ನೀವು ಆ ನಿಮ್ಮ ಇಚ್ಛೆಯನ್ನು, ನಿಮ್ಮ ಆಲೋಚನೆಗಳು ಮತ್ತು ಚಟುವಟಿಕೆಗಳ ಮೂಲಕ ನಿರಂತರವಾಗಿ ಚಲಾಯಿಸಿದರೆ, ನೀವು ಬಯಸಿದ್ದು ಆಗೇ ಆಗುತ್ತದೆ. ಈ ಪ್ರಪಂಚದಲ್ಲಿ ನಿಮ್ಮ ಆಶಯವು ಪೂರ್ಣಗೊಳ್ಳುವ ಯಾವುದೇ ಸಾಧ್ಯತೆಗಳು ಇರದಿದ್ದರೂ, ನಿಮ್ಮ ಇಚ್ಛೆಯು ದೃಢವಾಗಿದ್ದಾಗ, ಬಯಸಿದ ಫಲಿತಾಂಶವು ಹೇಗಾದರೂ ದೊರಕುವುದು. ಈ ರೀತಿಯ ಇಚ್ಛಾಶಕ್ತಿಯಲ್ಲಿ ಭಗವಂತನ ಉತ್ತರವಿದೆ; ಏಕೆಂದರೆ, ಇಚ್ಛಾಶಕ್ತಿಯು ಲಭಿಸುವುದೇ ಭಗವಂತನಿಂದ ಮತ್ತು ನಿರಂತರ ಇಚ್ಛಾಶಕ್ತಿಯೇ ದೈವಿಕ ಇಚ್ಛಾಶಕ್ತಿಯಾಗಿದೆ.