ಶ್ರೀ ಶ್ರೀ ದಯಾ ಮಾತಾರವರ ಬರಹಗಳಿಂದ ಆಯ್ದ ಭಾಗಗಳು

ಭಗವಂತನನ್ನು ಅರಸುವುದರ ಪ್ರಾಮುಖ್ಯತೆ

ಇಡೀ ಪ್ರಪಂಚವು ನಮ್ಮನ್ನು ನಿರಾಶೆಗೊಳಿಸಬಹುದು ಅಥವಾ ನಮ್ಮನ್ನು ತೊರೆಯಬಹುದು, ಆದರೆ ನಾವು ಭಗವಂತನೊಂದಿಗೆ ಮೃದು ಮಧುರವಾದ ಆಂತರಿಕ ಸಂಬಂಧವನ್ನು ಸ್ಥಾಪಿಸಿಕೊಂಡರೆ, ನಮಗೆ ಎಂದಿಗೂ ಒಂಟಿಯಾದಂತೆನಿಸುವುದಿಲ್ಲ ಅಥವಾ ಪರಿತ್ಯಕ್ತರೆನಿಸುವುದಿಲ್ಲ. ನಮ್ಮ ಪಕ್ಕದಲ್ಲಿ ಯಾವಾಗಲೂ ಆ ಯಾರೋ ಒಬ್ಬನು (ಭಗವಂತ) ಇದ್ದೇ ಇರುತ್ತಾನೆ – ನಿಜವಾದ ಸ್ನೇಹಿತ, ನಿಜವಾದ ಪ್ರೇಮಿ, ನಿಜವಾದ ತಾಯಿ ಅಥವಾ ತಂದೆ. ನೀವು ಯಾವ ಅಂಶದಲ್ಲಿ ದಿವ್ಯತೆಯನ್ನು ಗ್ರಹಿಸುವಿರೋ, ಅದೇ ನಿಮಗೆ ಭಗವಂತ.

para-ornament

ಪ್ರತಿಯೊಂದು ಮಾನುಷ ಹೃದಯದಲ್ಲಿಯೂ ಶೂನ್ಯತೆಯಿದೆ, ಅದನ್ನು ಭಗವಂತ ಮಾತ್ರ ತುಂಬಬಲ್ಲ. ಭಗವಂತನನ್ನು ಅರಸುವುದು ನಿಮ್ಮ ಆದ್ಯತೆಯನ್ನಾಗಿಸಿಕೊಳ್ಳಿ.

para-ornament

ಭಗವಂತ ನಮ್ಮಲ್ಲಿ ಪ್ರತಿಯೊಬ್ಬರೊಳಗೂ ಒಂದು ಮೌನ ಮಂದಿರವನ್ನು ಕೊಟ್ಟಿದ್ದಾನೆ, ಅಲ್ಲಿ ಬೇರಾರೂ ಪ್ರವೇಶಿಸಲು ಸಾಧ್ಯವಿಲ್ಲ. ಅಲ್ಲಿ ನಾವು ಭಗವಂತನೊಂದಿಗೆ ಇರಬಹುದು. ನಾವು ಅದರ ಬಗ್ಗೆ ಹೆಚ್ಚು ಮಾತನಾಡಬೇಕಿಲ್ಲ. ಮತ್ತು ಅದು ನಮ್ಮ ಪ್ರೀತಿಪಾತ್ರರಿಂದ ನಮ್ಮನ್ನು ದೂರವಿಡುವುದಿಲ್ಲ, ಬದಲಿಗೆ ನಮ್ಮ ಎಲ್ಲಾ ಸಂಬಂಧಗಳನ್ನು ಮಧುರವಾಗಿಸುತ್ತದೆ, ಬಲಪಡಿಸುತ್ತದೆ ಮತ್ತು ಹೆಚ್ಚು ಶಾಶ್ವತಗೊಳಿಸುತ್ತದೆ.

ನಾವು ನೇರವಾಗಿ, ಎಲ್ಲಾ ಪ್ರೀತಿಗಳು—ಮಗುವಿಗೆ ಪೋಷಕರ ಪ್ರೀತಿ, ಪೋಷಕರಿಗೆ ಮಗುವಿನ ಪ್ರೀತಿ, ಪತ್ನಿಗೆ ಪತಿಯ ಪ್ರೀತಿ, ಪತಿಗೆ ಪತ್ನಿಯ ಪ್ರೀತಿ ಮತ್ತು ಸ್ನೇಹಿತನಿಗೆ ಸ್ನೇಹಿತನ ಪ್ರೀತಿ—ಎಲ್ಲಿಂದ ಬರುತ್ತವೋ ಆ ಮೂಲಕ್ಕೆ (ಭಗವಂತನಲ್ಲಿಗೆ) ನೇರವಾಗಿ ಹೋದಾಗ, ಎಲ್ಲಾ ಊಹೆಗೂ ಮೀರಿದ ತೃಪ್ತಿಯನ್ನು ಕೊಡುವಂತಹ ಕಾರಂಜಿಯಿಂದ ಕುಡಿಯುತ್ತೇವೆ.

para-ornament

ಮಾನವನಿಗೆ ಒಂದು ಮನಸ್ಸನ್ನು ಮತ್ತು ಪಂಚೇಂದ್ರಿಯಗಳಿರುವ ಒಂದು ಶರೀರವನ್ನು ಕೊಡಲಾಗಿದೆ, ಅವುಗಳ ಮೂಲಕ ಅವನು ತನ್ನ ಸೀಮಿತ ಜಗತ್ತನ್ನು ಗ್ರಹಿಸುತ್ತಾನೆ ಮತ್ತು ಅದರೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಆದರೆ ಮಾನವನು ಶರೀರವೂ ಅಲ್ಲ, ಮನಸ್ಸೂ ಅಲ್ಲ; ಅವನು ಚೈತನ್ಯ ಸ್ವರೂಪ, ಅಮರ ಆತ್ಮ. ಅವನು ತನ್ನ ಇಂದ್ರಿಯ ಗ್ರಹಿಕೆಗಳ ಮೂಲಕ ಶಾಶ್ವತ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸಿದಾಗಲೆಲ್ಲ, ಅವನ ಭರವಸೆಗಳು, ಉತ್ಸಾಹ ಮತ್ತು ಆಸೆಗಳು, ಆಳವಾದ ಹತಾಶೆ ಮತ್ತು ನಿರಾಶೆಯ ಬಂಡೆಗಳ ಮೇಲೆ ನುಚ್ಚುನೂರಾಗುತ್ತವೆ. ಭೌತ ಬ್ರಹ್ಮಾಂಡದಲ್ಲಿರುವ ಎಲ್ಲವೂ ಮೂಲಭೂತವಾಗಿ ಅಲ್ಪಕಾಲಿಕ ಮತ್ತು ನಿರಂತರವಾಗಿ ಬದಲಾಗುತ್ತಿರುತ್ತವೆ. ಯಾವುದು ಬದಲಾವಣೆಗೆ ಒಳಪಟ್ಟಿರುವುದೋ ಅದು ನಿರಾಶೆಯ ಬೀಜಗಳನ್ನು ಹೊತ್ತಿರುತ್ತದೆ. ಆದ್ದರಿಂದಲೇ ನಮ್ಮ ಪ್ರಾಪಂಚಿಕ ನಿರೀಕ್ಷೆಗಳ ಹಡಗು ಎಂದೋ ಒಂದು ದಿನ ಭ್ರಮನಿರಸನದ ಮರಳು ದಿಬ್ಬದ ಮೇಲೆ ನೆಲ ಕಚ್ಚುತ್ತದೆ. ಆದ್ದರಿಂದ ನಾವು ಭಗವಂತನನ್ನು ಅರಸಬೇಕು, ಏಕೆಂದರೆ ಅವನು ಎಲ್ಲಾ ಜ್ಞಾನ, ಎಲ್ಲಾ ಪ್ರೀತಿ, ಎಲ್ಲಾ ಆನಂದ ಮತ್ತು ಎಲ್ಲಾ ತೃಪ್ತಿಯ ಮೂಲವಾಗಿದ್ದಾನೆ. ಭಗವಂತನೇ ನಮ್ಮ ಅಸ್ತಿತ್ವದ ಮೂಲ, ಎಲ್ಲಾ ಜೀವರಾಶಿಗಳ ಮೂಲ. ಹಾಗೂ ನಾವು ಅವನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇವೆ. ನಾವು ಅವನನ್ನು ಕಂಡುಕೊಂಡಾಗ, ಈ ಸತ್ಯವನ್ನು ಅರಿತುಕೊಳ್ಳುತ್ತೇವೆ.

ಭಗವಂತನೊಂದಿಗೆ ಪ್ರೀತಿಯ ಸಂಬಂಧವನ್ನು ಬೆಳೆಸಿಕೊಳ್ಳುವುದು

ಭಗವಂತನನ್ನು ಒಂದು ಶಬ್ದವೆಂದೋ ಅಥವಾ ಒಬ್ಬ ಅಪರಿಚಿತನೆಂದೋ ಅಥವಾ ನಿಮ್ಮ ಬಗ್ಗೆ ತೀರ್ಪು ನೀಡಿ ಶಿಕ್ಷಿಸಲು ಕಾಯುತ್ತಿರುವ, ಉನ್ನತ ಸ್ಥಾನದಲ್ಲಿರುವ ಯಾರೋ ಒಬ್ಬರೆಂದೋ ಯೋಚಿಸಬೇಡಿ.

para-ornament

ನಮ್ಮ ಒಂದು ದೊಡ್ಡ ದೌರ್ಬಲ್ಯವೆಂದರೆ ನಾವು ಭಗವಂತನಿಗೆ ಹೆದರುವುದು. ನಮ್ಮ ಆತ್ಮಗಳಲ್ಲಿ, ನಮ್ಮ ಹೃದಯದಲ್ಲಿ ಮತ್ತು ನಮ್ಮ ಮನಸ್ಸಾಕ್ಷಿಯಲ್ಲಿ ನಮಗೆ ಬಹಳ ತೊಂದರೆ ಕೊಡುವ ವಿಷಯಗಳನ್ನು ಅವನ ಮುಂದೆ ಒಪ್ಪಿಕೊಳ್ಳಲು ನಾವು ಭಯಪಡುತ್ತೇವೆ. ಆದರೆ ಅದು ತಪ್ಪು. ನಿಮ್ಮಲ್ಲಿರುವ ಪ್ರತಿಯೊಂದು ಸಮಸ್ಯೆಯನ್ನು ತೆಗೆದುಕೊಂಡು ನೀವು ಮೊದಲು ಹೋಗಬೇಕಾದದ್ದು ಭಗವಂತನೆಡೆಗೇ…. ಏಕೆ? ಏಕೆಂದರೆ ನಿಮ್ಮ ದೌರ್ಬಲ್ಯಗಳನ್ನು ನೀವು ಗುರುತಿಸುವ ಎಷ್ಟೋ ಮೊದಲೇ, ಭಗವಂತನಿಗೆ ಅವುಗಳ ಅರಿವಿರುತ್ತದೆ. ನೀವು ಅವನಿಗೆ ಹೊಸದೇನನ್ನೋ ಹೇಳುತ್ತಿಲ್ಲ. ನೀವು ಭಗವಂತನಲ್ಲಿ ನಿಮ್ಮ ಹೃದಯದ ಭಾರ ಇಳಿಸಿಕೊಳ್ಳಲು ಸಾಧ್ಯವಾದಾಗ ಮಾತ್ರ ನಿಮ್ಮ ಆತ್ಮಕ್ಕೆ ಅದ್ಭುತವಾದ ಬಿಡುಗಡೆ ಇರುತ್ತದೆ.

para-ornament

ಭಗವಂತನೊಂದಿಗಿನ ನನ್ನ ಸಂಬಂಧದಲ್ಲಿ ನಾನು ಆ ದೈವತ್ವವನ್ನು ಜಗನ್ಮಾತೆಯಂತೆ ಯೋಚಿಸಲು ಇಚ್ಛಿಸುತ್ತೇನೆ. ತಂದೆಯ ಪ್ರೀತಿಯು ಹೆಚ್ಚಾಗಿ ತಾರ್ಕಿಕತೆಯಿಂದ ಕೂಡಿರುತ್ತದೆ ಮತ್ತು ಮಗುವಿನ ಅರ್ಹತೆಗೆ ತಕ್ಕಂತಿರುತ್ತದೆ. ಆದರೆ ತಾಯಿಯ ಪ್ರೀತಿಯು ಅನಿರ್ಬಂಧಿತವಾಗಿರುತ್ತದೆ; ಆಕೆಯ ಮಗುವಿನ ವಿಷಯಕ್ಕೆ ಬಂದಾಗ, ಅಲ್ಲಿ ಅವಳು ಸಂಪೂರ್ಣವಾಗಿ ಪ್ರೀತಿ, ಸಹಾನುಭೂತಿ ಮತ್ತು ಕ್ಷಮೆಯೇ ಆಗಿರುತ್ತಾಳೆ…“ನಾವು ಜಗನ್ಮಾತೆಯ ಅಂಶವನ್ನು ಮಗುವಾಗಿ ಸಮೀಪಿಸಬಹುದು ಮತ್ತು ನಮ್ಮ ಅರ್ಹತೆ ಏನೇ ಇದ್ದರೂ ಅವಳ ಪ್ರೀತಿಯನ್ನು ನಮ್ಮದೇ ಎಂದು ಹೇಳಿಕೊಳ್ಳಬಹುದು.”

para-ornament

ಭಗವಂತನನ್ನು ಅರಿತುಕೊಳ್ಳಲು ಮತ್ತು ಅವನ ಪ್ರೀತಿಯನ್ನು ಅನುಭವಿಸಲು, ಸರಳ, ಪ್ರಾಮಾಣಿಕ ಹಂಬಲದಿಂದ, ನಮ್ಮ ಹೃದಯದ ಶಾಂತ ಕೇಂದ್ರದಿಂದ ಕರೆದಾಗ ನಾವು ಅವನ ಪ್ರತಿಕ್ರಿಯೆಯನ್ನು ತಪ್ಪದೇ ಆಕರ್ಷಿಸುತ್ತೇವೆ. ದಿವ್ಯ ಪ್ರಿಯತಮನ ಆ ಮಧುರ ಉಪಸ್ಥಿತಿಯು ನಮ್ಮ ಪರಮೋಚ್ಚ ವಾಸ್ತವವಾಗುತ್ತದೆ. ಅದು ಸಂಪೂರ್ಣ ಸಾಫಲ್ಯವನ್ನು ತರುತ್ತದೆ. ಅದು ನಮ್ಮ ಜೀವನವನ್ನು ಪರಿವರ್ತಿಸುತ್ತದೆ.

para-ornament

ಅವನ ಹೃದಯವನ್ನು ಸ್ಪರ್ಶಿಸಲು ದೀರ್ಘ ಪ್ರಾರ್ಥನೆಗಳೇ ಬೇಕೆಂದಿಲ್ಲ. ಆತ್ಮದ ಆಳದಿಂದ ಮತ್ತೆ ಮತ್ತೆ ವ್ಯಕ್ತಪಡಿಸಿದ ಒಂದು ಆಲೋಚನೆಯು ಭಗವಂತನಿಂದ ಅದ್ಭುತ ಪ್ರತಿಕ್ರಿಯೆಯನ್ನು ತರುತ್ತದೆ. ನನಗೆ ಪ್ರಾರ್ಥನೆ ಎಂಬ ಪದವನ್ನು ಬಳಸಲೂ ಇಷ್ಟವಿಲ್ಲ, ಅದು ಭಗವಂತನಿಗೆ ನಮ್ಮ ಔಪಚಾರಿಕ, ಏಕಮುಖ ಮನವಿಯಂತೆ ಕಾಣುತ್ತದೆ. ನನ್ನ ಮಟ್ಟಿಗೆ, ಭಗವಂತನೊಂದಿಗಿನ ಸಂಭಾಷಣೆಯು, ಹತ್ತಿರದ ಮತ್ತು ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡಿದಂತಿದ್ದರೆ, ಹೆಚ್ಚು ಸಹಜ, ವೈಯಕ್ತಿಕ ಮತ್ತು ಪರಿಣಾಮಕಾರಿ ಪ್ರಾರ್ಥನೆಯಾಗಿರುತ್ತದೆ.

para-ornament

ಭಗವಂತನೊಂದಿಗೆ ಹೆಚ್ಚು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಿ, ಅದಕ್ಕಾಗಿ ನಿಮ್ಮನ್ನು ಆತನ ಮಗುವಿನಂತೆ ಅಥವಾ ಆತನ ಸ್ನೇಹಿತನಂತೆ ಅಥವಾ ಆತನ ಭಕ್ತನೆಂದು ಭಾವಿಸಿಕೊಳ್ಳಿ. ನಾವು ಆ ಯಾರೋ ಒಬ್ಬನೊಂದಿಗೆ (ಭಗವಂತನೊಂದಿಗೆ), ಯಾರು ಪರಮ ದಯಾಳುವೂ, ತಿಳುವಳಿಕೆ ಉಳ್ಳವನೂ ಮತ್ತು ಪ್ರೀತಿ ಉಳ್ಳವನೂ ಆಗಿರುವನೋ ಅವನೊಂದಿಗೆ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂಬ ಪ್ರಜ್ಞೆಯೊಂದಿಗೆ ಜೀವನವನ್ನು ಅನುಭವಿಸಬೇಕು.

para-ornament

ಅವನು ಪ್ರತಿ ಕ್ಷಣವೂ ನಮಗೆ ಎಷ್ಟು ಹತ್ತಿರವಾಗಿದ್ದಾನೆ ಎಂಬುದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದಾಗ ಭಗವಂತನೊಂದಿಗಿನ ನಮ್ಮ ಸಂಬಂಧವು ತುಂಬಾ ಸರಳ ಮತ್ತು ಮಧುರವಾಗುತ್ತದೆ. ನಾವು ಭಗವಂತನ ಅನ್ವೇಷಣೆಯಲ್ಲಿ ಪವಾಡಸದೃಶ ಪ್ರದರ್ಶನಗಳನ್ನು ಅಥವಾ ಅಸಾಧಾರಣ ಫಲಿತಾಂಶಗಳನ್ನು ಅರಸತೊಡಗಿದರೆ, ಅವನು ಅನೇಕ ವಿಧಗಳಲ್ಲಿ ಎಲ್ಲಾ ಸಮಯದಲ್ಲೂ ನಮ್ಮ ಬಳಿಗೆ ಬರುವುದನ್ನು ನಾವು ಗಮನಿಸದಿರಬಹುದು.

para-ornament

ಎಂದಾದರೂ, ಯಾರಾದರೂ ನಿಮಗಾಗಿ ಏನನ್ನಾದರೂ ಸಹಾಯ ಮಾಡಿದಾಗ, ಆ ಕೊಡುಗೆಯಲ್ಲಿ ಭಗವಂತನ ಕೈಯನ್ನು ಕಾಣಿರಿ. ಯಾರಾದರೂ ನಿಮ್ಮ ಬಗ್ಗೆ ಏನಾದರೂ ಒಳ್ಳೆಯದನ್ನು ಹೇಳಿದಾಗ, ಆ ನುಡಿಗಳ ಹಿಂದೆ ಭಗವಂತನ ವಾಣಿಯನ್ನು ಕೇಳಿ. ನಿಮ್ಮ ಜೀವನವದಲ್ಲಿ ಏನೋ ಒಂದು ಒಳ್ಳೆಯದು ಅಥವಾ ಹಿತಕರವಾದದ್ದು ಸಂಭವಿಸಿದಾಗ, ಅದು ಭಗವಂತನಿಂದ ಬಂದಿದೆ ಎಂದು ಭಾವಿಸಿ. ನಿಮ್ಮ ಜೀವನದಲ್ಲಿ ಸಂಭವಿಸುವ ಎಲ್ಲದಕ್ಕೂ ಭಗವಂತನೊಂದಿಗೆ ಸಂಬಂಧ ಕಲ್ಪಿಸಿ.

ಧ್ಯಾನದ ಪ್ರಾಮುಖ್ಯತೆ

ಇಲ್ಲಿ ಮತ್ತು ವಿದೇಶಗಳಲ್ಲಿ ಜನರು ನನ್ನ ಬಳಿಗೆ ಬಂದು ಹೇಳುತ್ತಾರೆ, “ಇಷ್ಟು ಗಂಟೆಗಳ ಕಾಲ ಕದಲದೆ ಧ್ಯಾನ ಮಾಡುತ್ತಾ ಕುಳಿತುಕೊಳ್ಳಲು ನಿಮಗೆ ಹೇಗೆ ಸಾಧ್ಯ? ಆ ನಿಶ್ಚಲತೆಯ ಅವಧಿಯಲ್ಲಿ ನೀವು ಏನು ಮಾಡುತ್ತೀರಿ?” ಪ್ರಾಚೀನ ಭಾರತದ ಯೋಗಿಗಳು ಧರ್ಮದ ವಿಜ್ಞಾನವನ್ನು ಅಭಿವೃದ್ಧಿಪಡಿಸಿದರು. ಕೆಲವು ವೈಜ್ಞಾನಿಕ ತಂತ್ರಗಳಿಂದ ಮನಸ್ಸನ್ನು ಎಷ್ಟು ನಿಶ್ಚಲಗೊಳಿಸಲು ಸಾಧ್ಯ ಎಂದರೆ ಪ್ರಕ್ಷುಬ್ಧ ಆಲೋಚನೆಯ ಒಂದು ಕಿರುದೆರೆಯೂ ಅದನ್ನು ಕ್ಷೋಭೆಗೊಳಿಸುವುದಿಲ್ಲ ಅಥವಾ ವಿಚಲಿತಗೊಳಿಸುವುದಿಲ್ಲ ಎಂಬುದನ್ನು ಅವರು ಕಂಡುಹಿಡಿದರು. ಆ ಪ್ರಜ್ಞೆಯ ತಿಳಿಗೊಳದಲ್ಲಿ, ನಾವು ನಮ್ಮೊಳಗೆ ಪರಮಾತ್ಮನ ಪ್ರತಿಬಿಂಬವನ್ನು ಕಾಣುತ್ತೇವೆ.

para-ornament

ನಾವು ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇವೆ ಎಂದು ಪ್ರಪಂಚದ ಧರ್ಮಗ್ರಂಥಗಳು ಹೇಳುತ್ತವೆ. ಹಾಗಿದ್ದಲ್ಲಿ, ಅವನಂತೆ ನಾವೂ ನಿಷ್ಕಳಂಕರು ಮತ್ತು ಅಮರರು ಎಂದು ನಮಗೇಕೆ ತಿಳಿದಿಲ್ಲ? ನಾವು ಅವನ ಅಮೂರ್ತ ಚೇತನದ ಸಾಕಾರರೂಪಗಳೆಂದು ನಮಗೇಕೆ ತಿಳಿದಿಲ್ಲ?… ಧರ್ಮಗ್ರಂಥಗಳು ಏನು ಹೇಳುತ್ತವೆ? “ನಿಶ್ಚಲವಾಗಿರು, ಮತ್ತು ನಾನೇ ಭಗವಂತನೆಂದು ತಿಳಿ.” “ಎಡೆಬಿಡದೆ ಪ್ರಾರ್ಥಿಸು.”…

ಯೋಗ ಧ್ಯಾನವನ್ನು ಸ್ಥಿರ ಗಮನದಿಂದ ನಿಯತವಾಗಿ ಅಭ್ಯಾಸ ಮಾಡುವ ಮೂಲಕ, ನೀವು ಒಂದು ದಿನ ಇದ್ದಕ್ಕಿದ್ದಂತೆ, “ಓಹ್! ನಾನು ಈ ದೇಹವನ್ನು ಈ ಪ್ರಪಂಚದೊಂದಿಗೆ ಸಂವಹನ ಮಾಡಲು ಬಳಸುತ್ತೇನಾದರೂ ನಾನು ಈ ದೇಹವಲ್ಲ; ಕೋಪ, ಅಸೂಯೆ, ದ್ವೇಷ, ದುರಾಸೆ ಮತ್ತು ಚಂಚಲ ಭಾವನೆಗಳುಳ್ಳ ಈ ಮನಸ್ಸು ನಾನಲ್ಲ. ನಾನು ಅಂತರಂಗದ ಆ ಅದ್ಭುತ ಪ್ರಜ್ಞಾಸ್ಥಿತಿ. ನಾನು ಭಗವಂತನ ಆನಂದ ಮತ್ತು ಪ್ರೀತಿಯ ದಿವ್ಯ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇನೆ,” ಎಂದು ಹೇಳಿಕೊಳ್ಳುವ ಸಮಯ ಬರುತ್ತದೆ.

para-ornament

ನಾವು ಅತ್ಯಂತ ಸಕ್ರಿಯವಾಗಿದ್ದೂ ನಮ್ಮ ಆಂತರಿಕ ಶಾಂತಿ ಅಥವಾ ಸಮತೋಲನವನ್ನು ಕಳೆದುಕೊಳ್ಳದಿರಲು ಸಾಧ್ಯವಾಗಿಸುವ ಅನೇಕ ಅಂಶಗಳಿವೆ. ಅವುಗಳಲ್ಲಿ ಮೊದಲನೆಯದೆಂದರೆ ಪ್ರತಿ ದಿನವನ್ನು ಧ್ಯಾನದೊಂದಿಗೆ ಆರಂಭಿಸುವುದು. ಧ್ಯಾನ ಮಾಡದಿರುವವರಿಗೆ, ಮನಸ್ಸು ಅಂತರಂಗದಾಳಕ್ಕೆ ಹೋದಾಗ ಎಂತಹ ಮಹತ್ತರ ಶಾಂತಿಯು ಪ್ರಜ್ಞೆಯನ್ನು ತುಂಬುತ್ತದೆ ಎಂಬುದು ಎಂದಿಗೂ ತಿಳಿಯುವುದಿಲ್ಲ. ಸುಮ್ಮನೆ ಆ ಶಾಂತ ಸ್ಥಿತಿಯ ಬಗ್ಗೆ ಯೋಚಿಸುವುದರಿಂದ ಅದು ಬರಲು ಸಾಧ್ಯವಿಲ್ಲ; ಅದು, ಜಾಗೃತ ಮನಸ್ಸು ಮತ್ತು ಆಲೋಚನಾ ಪ್ರಕ್ರಿಯೆಗಳಾಚೆ ಇರುವಂಥದ್ದು. ಆದ್ದರಿಂದಲೇ ಪರಮಹಂಸ ಯೋಗಾನಂದರು ನಮಗೆ ಕಲಿಸಿರುವ ಯೋಗ ಧ್ಯಾನ ತಂತ್ರಗಳು ಅಷ್ಟು ಅದ್ಭುತವಾಗಿರುವುದು; ಇಡೀ ಜಗತ್ತು ಅವುಗಳನ್ನು ಬಳಸಲು ಕಲಿಯಬೇಕು. ನೀವು ಅವುಗಳನ್ನು ಸರಿಯಾಗಿ ಅಭ್ಯಾಸ ಮಾಡಿದಾಗ, ನೀವು ನಿಜವಾಗಿಯೂ ಶಾಂತಿಯ ಸಾಗರದಲ್ಲಿ ಈಜುತ್ತಿರುವಿರಿ ಎಂದು ನಿಮಗೆ ಭಾಸವಾಗುತ್ತದೆ. ಆ ಆಂತರಿಕ ಪ್ರಶಾಂತತೆಯಲ್ಲಿ ಮನಸ್ಸನ್ನು ಸ್ಥಿರೀಕರಿಸುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ.

para-ornament

ಭಗವಂತನೊಂದಿಗಿನ ಸಂಬಂಧದ ಬಗ್ಗೆ ಮತ್ತು ಇತರರಲ್ಲಿ ನೆಲೆಸಿರುವ ಭಗವಂತನ ಸೇವೆ ಮಾಡುವ ಬಗ್ಗೆ ಹೆಚ್ಚು ಯೋಚಿಸುತ್ತ ಒಬ್ಬನು ಧ್ಯಾನದಲ್ಲಿ ತನ್ನನ್ನು ತಾನೇ ಮರೆಯುತ್ತಾನೆ. ಭಕ್ತನು, ತಾನು ಅಮರನಾದ, ನಿತ್ಯ-ಪ್ರಜ್ಞ ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿರುವುದನ್ನು ನೆನಪಿಸಿಕೊಳ್ಳಬೇಕಾದರೆ ತನ್ನ ಅಹಂ ಅನ್ನು ಮರೆಯಬೇಕು. “ನಿಶ್ಚಲವಾಗಿರು, ಮತ್ತು ನಾನೇ ಭಗವಂತನೆಂದು ತಿಳಿ,” ಎಂದು ಬೈಬಲ್ ಹೇಳುತ್ತದೆ. ಇದೇ ಯೋಗ… ಒಬ್ಬನು ತನ್ನ ಪ್ರಜ್ಞೆಯನ್ನು ಗ್ರಹಿಕೆಯ ಉನ್ನತ ಕೇಂದ್ರಗಳಿಗೆ ಏರಿಸಿದಾಗ ಮಾತ್ರ ತಾನು ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇನೆ ಎಂಬುದು ಅವನ ಅರಿವಿಗೆ ಬರುತ್ತದೆ.

para-ornament

ಎಲ್ಲರಿಗೂ ಒಡನೆಯೇ ಬೇಕಾಗಿರುವ ಶಾಂತಿ ಮತ್ತು ಸಾಮರಸ್ಯವನ್ನು ಭೌತಿಕ ವಸ್ತುಗಳಿಂದ ಅಥವಾ ಯಾವುದೇ ಬಾಹ್ಯ ಅನುಭವಗಳಿಂದ ಪಡೆಯಲು ಸಾಧ್ಯವಿಲ್ಲ…. ನಿಮ್ಮ ಜೀವನದ ಬಾಹ್ಯ ಪರಿಸ್ಥಿತಿಗಳಲ್ಲಿ ಸಾಮರಸ್ಯವನ್ನು ತರುವ ರಹಸ್ಯವೆಂದರೆ ನಿಮ್ಮ ಆತ್ಮದೊಂದಿಗೆ ಮತ್ತು ಭಗವಂತನೊಂದಿಗೆ ಆಂತರಿಕ ಸಾಮರಸ್ಯವನ್ನು ಬೆಳೆಸಿಕೊಳ್ಳುವುದು. ಪ್ರಪಂಚದಿಂದ ಹಿಂದೆ ಸರಿಯಲು ಪ್ರತಿದಿನ ಸ್ವಲ್ಪ ಸಮಯ ತೆಗೆದುಕೊಳ್ಳಿ, ನಿಮ್ಮ ಮನಸ್ಸನ್ನು ಆಂತರೀಕರಿಸಿ ಮತ್ತು ಭಗವತ್‌ಸಾನ್ನಿಧ್ಯವನ್ನು ಅನುಭವಿಸಲು ಪ್ರಯತ್ನಿಸಿ. ಅದೇ ಧ್ಯಾನದ ಉದ್ದೇಶ. ನೀವು ಆಳವಾಗಿ ಧ್ಯಾನ ಮಾಡಿ, ನಿಮ್ಮ ಪ್ರಜ್ಞೆಯನ್ನು ಆಂತರ್ಯದಲ್ಲಿರುವ ಭಗವಂತನ ಶಾಂತಿಯೊಂದಿಗೆ ಸಮನ್ವಯಗೊಳಿಸಿದ ನಂತರ, ಹೊರಗಿನ ತೊಂದರೆಗಳು ನಿಮಗೆ ಹೆಚ್ಚು ಕಷ್ಟ ಕೊಡುವುದಿಲ್ಲ ಎಂದು ನೀವು ಕಂಡುಕೊಳ್ಳುವಿರಿ. ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳದೆ ಮತ್ತು ಅತಿಯಾಗಿ ಪ್ರತಿಕ್ರಿಯಿಸದೆ ನೀವು ಅವುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ…. “ಸರಿ, ನಾನು ಈ ಸಂಕಷ್ಟವನ್ನು ಎದುರಿಸಿ, ಜಯಿಸುತ್ತೇನೆ,” ಎಂದು ಹೇಳಲು ಸಾಧ್ಯವಾಗಿಸುವಂತಹ ಆಂತರಿಕ ಶಕ್ತಿ ನಿಮಗಿರುತ್ತದೆ.

ಸಮತೋಲಿತ ಜೀವನವನ್ನು ನಡೆಸುವುದು

ನಮ್ಮಲ್ಲಿ ಪ್ರತಿಯೊಬ್ಬರೊಳಗೂ ಪ್ರಪಂಚದ ತುಮುಲವನ್ನು ಒಳನುಗ್ಗಲು ಬಿಡದಂತಹ ನಿಶ್ಚಲತೆಯ ಮಂದಿರವಿದೆ. ನಮ್ಮ ಸುತ್ತಲೂ ಏನೇ ನಡೆಯುತ್ತಿರಲಿ, ನಮ್ಮ ಆತ್ಮದಲ್ಲಿನ ಮೌನದ ಧಾಮವನ್ನು ಪ್ರವೇಶಿಸಿದಾಗ, ನಾವು ಭಗವಂತನ ಪವಿತ್ರ ಸಾನ್ನಿಧ್ಯವನ್ನು ಅನುಭವಿಸುತ್ತೇವೆ ಮತ್ತು ಅವನ ಶಾಂತಿ ಹಾಗೂ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ.

para-ornament

ಹತಾಶೆ, ಅತೃಪ್ತಿ, ನಿರಾಶೆ ಮುಂತಾದ ಅನೇಕ ಸಮಸ್ಯೆಗಳಿಂದ ಮನಸ್ಸು ನೊಂದಿರುವ ಜನರನ್ನು ನೋಡಿದಾಗ ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಮನುಷ್ಯರು ಅಂತಹ ಅನುಭವಗಳಿಂದ ಏಕೆ ಪೀಡಿತರಾಗಿದ್ದಾರೆ? ಒಂದು ಕಾರಣವೆಂದರೆ: ಅವರು ಎಲ್ಲಿಂದ ಬಂದಿರುವರೋ ಆ ದೈವತ್ವದ ಮರೆವು. ನಿಮ್ಮ ಜೀವನದಲ್ಲಿರುವ ಒಂದೇ ಒಂದು ಕೊರತೆಯೆಂದರೆ, ಭಗವಂತ, ಎಂದು ಒಮ್ಮೆ ನೀವು ಅರಿತುಕೊಂಡರೆ ಮತ್ತು ದೈನಂದಿನ ಧ್ಯಾನದಲ್ಲಿ ನಿಮ್ಮೊಳಗೆ ಭಗವತ್‌ಪ್ರಜ್ಞೆಯನ್ನು ತುಂಬಿಕೊಳ್ಳಲು ಶ್ರಮಿಸುತ್ತ ಆ ಕೊರತೆಯನ್ನು ನಿವಾರಿಸಲು ಮುಂದಾದರೆ, ನೀವು ಎಂತಹ ಪರಿಪೂರ್ಣರಾಗುವ ಮತ್ತು ಸಾಫಲ್ಯತೆ ಹೊಂದುವ ಸಮಯ ಬರುತ್ತದೆ ಎಂದರೆ, ಯಾವುದೂ ನಿಮ್ಮನ್ನು ಕದಲಿಸಲು ಅಥವಾ ತೊಂದರೆ ಪಡಿಸಲು ಸಾಧ್ಯವಾಗುವುದಿಲ್ಲ.

para-ornament

ಸಂಕಷ್ಟವು ನಮ್ಮನ್ನು ನಾಶಮಾಡಲು ಅಥವಾ ಶಿಕ್ಷಿಸಲು ಬರುವುದಿಲ್ಲ, ಆದರೆ ನಮ್ಮ ಆತ್ಮದೊಳಗಿನ ಅಜೇಯತೆಯನ್ನು ಎಚ್ಚರಗೊಳಿಸುವಲ್ಲಿ ನೆರವಾಗಲು ಬರುತ್ತದೆ…. ನಾವು ಅನುಭವಿಸುವ ಯಾತನಾಮಯ ಅಗ್ನಿಪರೀಕ್ಷೆಗಳು, ಆಶೀರ್ವದಿಸಲು ಚಾಚಿಕೊಂಡಿರುವ ಭಗವಂತನ ಕೈಯ ನೆರಳಷ್ಟೆ. ಈ ಮಾಯೆಯಿಂದ, ದ್ವೈತ ಭಾವದ ಈ ತ್ರಾಸದಾಯಕ ಪ್ರಪಂಚದಿಂದ, ನಮ್ಮನ್ನು ಹೊರತರಲು ಭಗವಂತ ಬಹಳ ಉತ್ಸುಕನಾಗಿದ್ದಾನೆ. ಅವನು ನಮಗೆ ಅನುಭವಿಸಲು ಅನುಮತಿಸುವ ಯಾವುದೇ ಕಷ್ಟಗಳು, ಅವನ ಬಳಿಗೆ ನಾವು ಹಿಂತಿರುಗುವುದನ್ನು ತ್ವರೆಗೊಳಿಸುವುದಕ್ಕೆ ಅವಶ್ಯಕ.

para-ornament

ಆಧ್ಯಾತ್ಮಿಕವಾಗಿ ಸಮತೋಲಿತನಾದ ವ್ಯಕ್ತಿಯೇ ನಿಜವಾಗಿಯೂ ಯಶಸ್ವಿ. ನಾನು ಆರ್ಥಿಕ ಯಶಸ್ಸಿನ ಬಗ್ಗೆ ಹೇಳುತ್ತಿಲ್ಲ; ಅದಕ್ಕೆ ಅರ್ಥವಿಲ್ಲ. ಅದು, ಪರಮಹಂಸಜಿಯವರಂತೆಯೇ ನನ್ನ ಅನುಭವವೂ ಆಗಿದೆ: ಲೌಕಿಕವಾಗಿ ಯಶಸ್ವಿಯಾದ ಎಷ್ಟೋ ಜನರನ್ನು ನಾನು ಭೇಟಿಯಾಗಿದ್ದೇನೆ, ಒತ್ತಡದಿಂದ ತುಂಬಿದ ಅವರು ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸೋತಿದ್ದಾರೆ; ತಮ್ಮ ಕುಟುಂಬಗಳೊಂದಿಗೆ ಅಥವಾ ಇತರ ಜನರೊಂದಿಗೆ ಅಥವಾ ಭಗವಂತನೊಂದಿಗೆ ಸಾಮರಸ್ಯದಿಂದಿರಲು ಸಾಧ್ಯವಾಗದ ಅವರಿಗೆ ಆಂತರಿಕ ಶಾಂತಿಯ ಹಾಗೂ ಪ್ರೀತಿಯನ್ನು ಕೊಡುವ ಮತ್ತು ಪಡೆಯುವ ಸಾಮರ್ಥ್ಯದ ಕೊರತೆಯಿದೆ. ಒಬ್ಬ ವ್ಯಕ್ತಿಯು ಏನನ್ನು ಹೊಂದಿದ್ದಾನೆ ಎಂಬುದರ ಮೂಲಕ ಅವನ ಯಶಸ್ಸನ್ನು ಅಳೆಯಲಾಗುವುದಿಲ್ಲ; ಅವನು ಏನಾಗಿದ್ದಾನೆ ಮತ್ತು ಅವನು ಇತರರಿಗೆ ಏನನ್ನು ಕೊಡಬಲ್ಲ ಎಂಬುದರಿಂದ ಮಾತ್ರ ಅಳೆಯಲಾಗುತ್ತದೆ.

para-ornament

ಧ್ಯಾನವು ನಮ್ಮ ಬಾಹ್ಯ ಜೀವನವನ್ನು ಆತ್ಮದ ಆಂತರಿಕ ಮೌಲ್ಯಗಳೊಂದಿಗೆ ಜೋಡಿಸಲು, ಈ ಜಗತ್ತಿನಲ್ಲಿ ಬೇರಾವುದರಿಂದಲೂ ಸಾಧ್ಯವಿಲ್ಲದಷ್ಟು ಸಹಾಯ ಮಾಡುತ್ತದೆ. ಅದು ಕೌಟುಂಬಿಕ ಜೀವನದಿಂದ ಅಥವಾ ಇತರರೊಂದಿಗಿನ ಸಂಬಂಧಗಳಿಂದ ದೂರಮಾಡುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಅದು ನಮ್ಮನ್ನು ಹೆಚ್ಚು ಪ್ರೀತಿಯುಳ್ಳವರನ್ನಾಗಿಯೂ ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿಯೂ ಮಾಡುತ್ತದೆ—ಅದು, ನಾವು, ನಮ್ಮ ಪತಿ, ಪತ್ನಿ, ಮಕ್ಕಳು ಮತ್ತು ನಮ್ಮ ನೆರೆಹೊರೆಯವರ ಸೇವೆ ಮಾಡಲು ಬಯಸುವಂತೆ ಮಾಡುತ್ತದೆ. “ನಾನು ಮತ್ತು ನನ್ನದು,” ಎಂಬುದನ್ನು ಮೀರಿ ನಮ್ಮ ಆಲೋಚನೆಗಳನ್ನು ವಿಸ್ತರಿಸಿದಾಗ, ನಾವು ನಮ್ಮ ಯೋಗಕ್ಷೇಮದೊಂದಿಗೆ ಇತರರನ್ನೂ ಸೇರಿಸಿದಾಗ ನಿಜವಾದ ಆಧ್ಯಾತ್ಮಿಕತೆ ಪ್ರಾರಂಭವಾಗುತ್ತದೆ.

para-ornament

ಪರಮಹಂಸ ಯೋಗಾನಂದರು ನಮಗೆ ತೋರಿಸಿಕೊಟ್ಟ, ಭಗವಂತನಲ್ಲಿ ಬದುಕುವ ಸಮತೋಲಿತ ಜೀವನವು ಎಷ್ಟು ಅದ್ಭುತವಾಗಿ ವಿಭಿನ್ನ ಮತ್ತು ತೃಪ್ತಿಕರವಾಗಿದೆ….ನೀವು ಭಗವಂತನನ್ನು ಅರಸುತ್ತಿರುವಾಗ, ನೀವು ತುಂಬಾ ಗಂಭೀರವಾಗಿರಬೇಕು ಎಂದು ಜನರು ಅಂದುಕೊಳ್ಳುತ್ತಾರೆ! ಆದರೆ ಅಂತಹ ಹುಸಿ ಭಕ್ತಿ ಆತ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಪರಮಹಂಸಜಿಯವರೂ ಸೇರಿದಂತೆ ನಾನು ಭೇಟಿಯಾದ ಮತ್ತು ಒಡನಾಡಿದ ಹಲವಾರು ಸಂತರು ಸಂತೋಷಭರಿತರಾಗಿ, ಸ್ವಾಭಾವಿಕವಾಗಿ, ಮಕ್ಕಳಂತೆ ಇದ್ದಾರೆ. ಮಕ್ಕಳಂತೆ ಅಂದರೆ, ಬಾಲಿಶ—ಅಪಕ್ವ, ಬೇಜವಾಬ್ದಾರಿಯುತ ಎಂದು ಅರ್ಥವಲ್ಲ; ನಾನು ಹೇಳುತ್ತಿರುವುದು ಮಗುವಿನಂತೆ ಅತ್ಯಂತ ಸಣ್ಣ ಸುಖಗಳನ್ನು ಆನಂದಿಸಬಲ್ಲವರು, ಸಂತೋಷದಿಂದ ಬದುಕುವವರು. ಇಂದು ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಜನರಿಗೆ ಸರಳವಾದ ವಿಷಯಗಳನ್ನು ಹೇಗೆ ಆನಂದಿಸಬೇಕೆಂಬುದೇ ತಿಳಿದಿಲ್ಲ. ಅವರಿಗೆ ತಮ್ಮ ಅಭಿರುಚಿಗಳಲ್ಲಿ ಎಷ್ಟು ಚಿಟ್ಟು ಹಿಡಿದಿದೆಯೆಂದರೆ ಯಾವುದೂ ತೃಪ್ತಿಕೊಡುವುದಿಲ್ಲ: ಬಾಹ್ಯದಲ್ಲಿ ಅತಿಯಾದ ಉದ್ದೀಪನೆ, ಆಂತರಿಕವಾಗಿ ಅಭಾವ ಮತ್ತು ಶೂನ್ಯತೆಯಿರುವ ಅವರು ಅವುಗಳಿಂದ ಪಾರಾಗಲು ಕುಡಿತಕ್ಕೆ ಅಥವಾ ಮಾದಕವಸ್ತುಗಳಿಗೆ ಶರಣಾಗುತ್ತಾರೆ. ಸಮಕಾಲೀನ ಸಂಸ್ಕೃತಿಯ ಮೌಲ್ಯಗಳು ಅನಾರೋಗ್ಯಕರ, ಅಸಹಜ; ಆದ್ದರಿಂದಲೇ ಅವು, ಛಿದ್ರವಾಗದಿರುವ ನಿಜವಾದ ಸಮತೋಲಿತ ಜನರನ್ನು ಮತ್ತು ಕುಟುಂಬಗಳನ್ನು ಕೊಡಲು ವಿಫಲವಾಗಿವೆ…. ನಾವು ಜೀವನದ ಸರಳ ಸುಖಗಳಿಗೆ ಹಿಂತಿರುಗೋಣ.

ಶಾಂತಿ ಮತ್ತು ವಿಶ್ವ ಸಾಮರಸ್ಯದೆಡೆಗಿನ ಮಾರ್ಗ

ಎಲ್ಲರಿಗೂ ಒಡನೆಯೇ ಬೇಕಾಗಿರುವ ಶಾಂತಿ ಮತ್ತು ಸಾಮರಸ್ಯವನ್ನು ಭೌತಿಕ ವಸ್ತುಗಳಿಂದ ಅಥವಾ ಯಾವುದೇ ಬಾಹ್ಯ ಅನುಭವಗಳಿಂದ ಪಡೆಯಲು ಸಾಧ್ಯವಿಲ್ಲ; ಅದು ಸಾಧ್ಯವೇ ಇಲ್ಲ. ಬಹುಶಃ ಸುಂದರವಾದ ಸೂರ್ಯಾಸ್ತವನ್ನು ವೀಕ್ಷಿಸುವುದರಿಂದ ಅಥವಾ ಪರ್ವತಗಳಿಗೆ ಅಥವಾ ಕಡಲತೀರಕ್ಕೆ ಹೋಗುವುದರಿಂದ ನಿಮಗೆ ತಾತ್ಕಾಲಿಕ ಪ್ರಶಾಂತತೆಯ ಅನುಭವವಾಗಬಹುದು. ಆದರೆ ನಿಮ್ಮೊಂದಿಗೇ ನೀವು ಅಸಾಮರಸ್ಯದಿಂದಿದ್ದರೆ, ಅತ್ಯಂತ ಸ್ಫೂರ್ತಿದಾಯಕ ಪರಿಸರವೂ ನಿಮಗೆ ಶಾಂತಿಯನ್ನು ನೀಡುವುದಿಲ್ಲ.

ನಿಮ್ಮ ಜೀವನದ ಬಾಹ್ಯ ಪರಿಸ್ಥಿತಿಗಳಲ್ಲಿ ಸಾಮರಸ್ಯವನ್ನು ತರುವ ರಹಸ್ಯವೆಂದರೆ ನಿಮ್ಮ ಆತ್ಮದೊಂದಿಗೆ ಮತ್ತು ಭಗವಂತನೊಂದಿಗೆ ಆಂತರಿಕ ಸಾಮರಸ್ಯವನ್ನು ಸ್ಥಾಪಿಸುವುದು.

ದೇಶಗಳಲ್ಲಿರುವ ಜನರು ಶಾಂತಿಯಿಂದಿರದಿದ್ದರೆ ದೇಶಗಳ ನಡುವೆ ಶಾಂತಿಯ ಬಗ್ಗೆ ಮಾತನಾಡುವುದು ಅವಾಸ್ತವಿಕವಾಗಿದೆ. ಮತ್ತು ತಮ್ಮೊಂದಿಗೇ ತಾವು ಶಾಂತಿಯಿಂದಿರದಿದ್ದರೆ ಅವರು ತಮ್ಮ ನೆರೆಹೊರೆಯವರೊಂದಿಗೆ ಅಥವಾ ತಮ್ಮ ಮನೆಯ ಜನರೊಂದಿಗೂ ಶಾಂತಿಯಿಂದಿರಲು ಸಾಧ್ಯವಿಲ್ಲ. ಅದು ವ್ಯಕ್ತಿ ಮಟ್ಟದಲ್ಲಿ ಪ್ರಾರಂಭವಾಗಬೇಕು. ಪ್ರಪಂಚದಾದ್ಯಂತದ ನನ್ನ ಪ್ರಯಾಣದಲ್ಲಿ ಪ್ರತಿ ದೇಶದ ಜನರು ನನ್ನನ್ನು ಕೇಳುವ ಮೊದಲ ಪ್ರಶ್ನೆಯೆಂದರೆ, “ನಾನು ಹೇಗೆ ಶಾಂತಿಯನ್ನು ಕಂಡುಕೊಳ್ಳುವುದು?” ನಾನು ಅವರಿಗೆ ಹೇಳುತ್ತೇನೆ: “ಆಂತರ್ಯದಲ್ಲಿರುವ ಭಗವತ್‌ಸಾನ್ನಿಧ್ಯಕ್ಕೆ ಹೋಗುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ.” ಪರಮಹಂಸ ಯೋಗಾನಂದರು ತಂದಂತಹ ಈ ಬೋಧನೆಯ ತಳಹದಿಯಾದ ದೈನಂದಿನ ಧ್ಯಾನವು, ಒತ್ತಡಕ್ಕೊಳಗಾದ ವ್ಯಕ್ತಿಗಳು ಮತ್ತು ಮುರಿದ ಕುಟುಂಬಗಳ ಜೀವನದಲ್ಲಿ ಆಧ್ಯಾತ್ಮಿಕ ಸಮತೋಲನವನ್ನು ಪುನಃಸ್ಥಾಪಿಸುವ ಹಾಗೂ ನಮ್ಮ ವಿಶ್ವ ಕುಟುಂಬದ ದೊಡ್ಡ ಪರಿವಾರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಪೋಷಿಸುವ ಮೌಲ್ಯಗಳನ್ನು ಪುನರುತ್ಥಾನಗೊಳಿಸುವ ಮಾರ್ಗವಾಗಿದೆ.

ನಾವು ವಿವೇಚನೆಯ ಕಣ್ಣುಗಳಿಂದ ನಮ್ಮ ಸುತ್ತ ನೋಡಿದರೆ, ಪ್ರಪಂಚದ ಪರಿಸ್ಥಿತಿಗಳು ಮಾನವಕುಲವನ್ನು ಭಗವಂತನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಬಲವಂತ ಪಡಿಸಲಿವೆ ಎಂಬುದು ಸ್ಪಷ್ಟವಾಗುತ್ತದೆ. ಕಳೆದ ಶತಮಾನಗಳಲ್ಲಿ ತುಂಬಾ ದೊಡ್ಡದಾಗಿ ತೋರುತ್ತಿದ್ದ ಭೂಮಿಯ ಈ ಗೋಳವು ತುಲನಾತ್ಮಕವಾಗಿ ಹೇಳುವುದಾದರೆ ಕಿತ್ತಳೆ ಹಣ್ಣಿನ ಗಾತ್ರದಷ್ಟಾಗಿದೆ. ಇನ್ನು ಮುಂದೆ ನಾವು ಪ್ರಪಂಚದ ಇತರ ಜನರು ಮತ್ತು ಸಂಸ್ಕೃತಿಗಳಿಂದ ಪ್ರತ್ಯೇಕವಾಗಿ ಯೋಚಿಸಲು ಸಾಧ್ಯವಿಲ್ಲ; ಆಧುನಿಕ ಸಂವಹನಗಳು ಮತ್ತು ಪ್ರಯಾಣದ ವಿಧಾನಗಳು ನಿಜವಾಗಿಯೂ ನಮ್ಮೆಲ್ಲರನ್ನೂ ಮುಖಾಮುಖಿಯಾಗಿ ತಂದಿವೆ, ಅದರಿಂದಾಗಿ, ಒಂದೇ ಮನೆಯ ಸದಸ್ಯರು ಪರಸ್ಪರ ಹೊಂದಿಕೊಂಡು ಹೋಗುವಂತೆಯೇ ನಾವೂ ಕೂಡ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಬೆರೆಯಲು ಆಧ್ಯಾತ್ಮಿಕ ಪರಿಪಕ್ವತೆಯನ್ನು ಬೆಳೆಸಿಕೊಳ್ಳಲೇಬೇಕಾಗಿದೆ. ಮಾನುಷ ಸ್ವಭಾವದ ಎರಡು ದೊಡ್ಡ ದೌರ್ಬಲ್ಯಗಳಾದ ಪೂರ್ವಾಗ್ರಹಗಳು ಮತ್ತು ಸಂಕುಚಿತ-ಮನಸ್ಸುಗಳು ಹೋಗಬೇಕಾಗಿದೆ…

ಹಿಂದೆಂದಿಗಿಂತಲೂ ಈಗ ನಾವು ಸತ್ಯವನ್ನು ಒಪ್ಪಿಕೊಳ್ಳಬೇಕು: ಇದು ಒಂದು ಅವಿಭಕ್ತ ಜಗತ್ತು. ಇದು ಬಹುವಿಧದ ಬಾಹ್ಯ ರೂಪಗಳು, ಮನಸ್ಥಿತಿಗಳು, ಆಸಕ್ತಿಗಳು ಮತ್ತು ಪ್ರೇರಣೆಗಳಿರುವ ಎಲ್ಲಾ ವಿಭಿನ್ನ ರೀತಿಯ ಜನರಿಂದ ಕೂಡಿದೆ. ಆದರೆ ಮಾನುಷ ಪ್ರತ್ಯೇಕತೆಯ ಈ ಅಂತ್ಯವಿಲ್ಲದ ವೈವಿಧ್ಯಮಯ ಪುಷ್ಪಗಳನ್ನು ಒಂದುಗೂಡಿಸುವ ಒಂದು ಮೂಲಭೂತ ತತ್ವವಿದೆ, ಅದು ನಮ್ಮೆಲ್ಲರನ್ನು ಹಾರದಂತೆ ಪೋಣಿಸುತ್ತದೆ – ಅದೇ ಭಗವಂತ. ಅವನ ದೃಷ್ಟಿಯಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ; ನಾವೆಲ್ಲರೂ ಅವನ ಮಕ್ಕಳು. ನಾವು ಎಲ್ಲಿ ಜನಿಸಿದೆವು, ಯಾವ ಧರ್ಮವನ್ನು ಅನುಸರಿಸುತ್ತೇವೆ ಅಥವಾ ನಮ್ಮ ಚರ್ಮದ ಬಣ್ಣ ಯಾವುದು ಎಂಬುದರ ಬಗ್ಗೆ ಭಗವಂತನಿಗೆ ಒಂದಿನಿತೂ ಆಸಕ್ತಿಯಿಲ್ಲ – ನಮ್ಮ ಆತ್ಮಗಳು ಕೆಂಪು, ಕಪ್ಪು, ಹಳದಿ ಅಥವಾ ಬಿಳಿ ಉಡುಗೆಯನ್ನು ಧರಿಸಿದರೇನಂತೆ? ಅವನಿಗೆ ಅದರ ಬಗ್ಗೆ ಚಿಂತೆಯಿಲ್ಲ. ಆದರೆ ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಬಗ್ಗೆ ಅವನಿಗೆ ಕಾಳಜಿಯಿದೆ. ಅದೇ, ಅವನು ತನ್ನ ಮಕ್ಕಳ ಗುಣ ಪರೀಕ್ಷೆ ಮಾಡುವ ಏಕೈಕ ಮಾನದಂಡವಾಗಿದೆ. ನಾವು ಪೂರ್ವಾಗ್ರಹಗಳಿಂದ ತುಂಬಿದ್ದರೆ, ಪೂರ್ವಾಗ್ರಹಗಳನ್ನೇ ಅನುಭವಿಸುತ್ತೇವೆ. ನಾವು ದ್ವೇಷದಿಂದ ತುಂಬಿಕೊಂಡಿದ್ದರೆ, ದ್ವೇಷವನ್ನೇ ಅನುಭವಿಸುತ್ತೇವೆ. ನಾವು ಯಾವುದೇ ಸಮುದಾಯದ ಜನರ ಬಗ್ಗೆ ಅಸಮಾಧಾನದಿಂದ ತುಂಬಿಕೊಂಡಿದ್ದರೆ, ನಾವು ವೈರತ್ವದ ಬೀಜಗಳನ್ನು ಬಿತ್ತುತ್ತಿರುತ್ತೇವೆ ಎಂಬುದು ಖಚಿತ, ಅದನ್ನು ಒಂದಲ್ಲ ಒಂದು ದಿನ ನಾವೇ ಅನುಭವಿಸಬೇಕು…

ವಿವಿಧ ನಂಬಿಕೆಗಳು ಮತ್ತು ಆಚರಣೆಗಳ ಹಿಂದೆ, ಎಲ್ಲಾ ಧರ್ಮಗಳಿಗೆ ಸಾಮಾನ್ಯವಾದ ಆಧ್ಯಾತ್ಮಿಕ ಪರಿಕಲ್ಪನೆಗಳಿವೆ… ಪರಮಹಂಸಜಿಯವರು ಸದಾ ಈ ಸಾರ್ವತ್ರಿಕ, ಮೂಲಭೂತ ಸತ್ಯಗಳತ್ತ ಭಕ್ತರ ಗಮನವನ್ನು ಸೆಳೆಯಲು ಪ್ರಯತ್ನಿಸಿದರು – ಕೇವಲ ನಂಬಿಕೆ ಮತ್ತು ಉಪನ್ಯಾಸಕ್ಕಾಗಿ ಮಾತ್ರವಲ್ಲ, ಆದರೆ ಭಕ್ತರ ದೈನಂದಿನ ಜೀವನದಲ್ಲಿ ಅನುಷ್ಠಾನ ಮಾಡುವಂತಹ ಪ್ರಾಯೋಗಿಕ ಅಗತ್ಯತೆಗಾಗಿ. ಇವುಗಳಲ್ಲಿ ಅತ್ಯಂತ ಪ್ರಮುಖವಾದವುಗಳೆಂದರೆ —ಯುಗಯುಗಗಳಿಂದ ಮನುಕುಲದ ರಕ್ಷಕರಿಂದ ಬೋಧಿಸಲ್ಪಟ್ಟುದು —ಅದುವೇ ಪ್ರತಿಯೊಬ್ಬ ವ್ಯಕ್ತಿಯೂ ಭಗವಂತನೊಂದಿಗೆ ನೇರವಾದ, ವೈಯಕ್ತಿಕ ಸಂಸರ್ಗವನ್ನು ಹೊಂದುವುದು—…

ಆ ಪ್ರಜ್ಞೆಯಲ್ಲಿ ನೆಲೆಸಲು ಮತ್ತು ನಮ್ಮ ನೈಜ ಸ್ವರೂಪವನ್ನು ಮರೆಯದಿರಲು ನಾವು ದೈನಂದಿನ ಧ್ಯಾನದಿಂದ ಹೆಚ್ಚು ಹೆಚ್ಚು ಶ್ರಮಿಸಿದಷ್ಟೂ, ಕ್ರಿಸ್ತನಲ್ಲಿರುವ ಮತ್ತು ನಮ್ಮ ಪ್ರತಿಯೊಬ್ಬರಲ್ಲಿರುವ ಆ ದೈವತ್ವವನ್ನು ನಾವು ಹೆಚ್ಚು ಹೆಚ್ಚು ವ್ಯಕ್ತಪಡಿಸುತ್ತೇವೆ. ಇದು ಆತ್ಮ-ಸಾಕ್ಷಾತ್ಕಾರದ ಸಂದೇಶವಾಗಿದೆ. ಇದು ಭಾರತವು ಒಪ್ಪಿಕೊಳ್ಳಬಹುದಾದ, ಕ್ರಿಶ್ಚಿಯನ್ನರು ಸ್ವೀಕರಿಸಬಹುದಾದ, ಎಲ್ಲಾ ಧರ್ಮದವರೂ ಸ್ವೀಕರಿಸಬಹುದಾದ ಸಂದೇಶವಾಗಿದೆ. ಇದು ಯಾವುದೇ ಧರ್ಮದ ಬೋಧನೆಗೆ ವಿರುದ್ಧವಾಗಿ ಹೋಗುವುದಿಲ್ಲ.

ಆಲೋಚನೆಗೆ ಅಗಾಧವಾದ ಶಕ್ತಿಯಿದೆ. ಆಲೋಚನೆಯಿಂದ ಎಲ್ಲಾ ಕ್ರಿಯೆಗಳು ಹುಟ್ಟಿಕೊಳ್ಳುತ್ತವೆ. ಈ ಸೀಮಿತ ಪ್ರಪಂಚದಲ್ಲಿ ಎಲ್ಲವೂ ಆಲೋಚನೆಯ ಫಲವೇ ಆಗಿವೆ. ಜೀವಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವಿರುವ ಇದು ವಿಶ್ವದಲ್ಲಿಯೇ ಅತ್ಯಂತ ಪ್ರಬಲ ಶಕ್ತಿಯಾಗಿದೆ. ಆದ್ದರಿಂದಲೇ, ನಮ್ಮ ಆಲೋಚನೆಗಳು ನಕಾರಾತ್ಮಕವಾಗಿರುವುದಕ್ಕಿಂತ ಸಕಾರಾತ್ಮಕವಾಗಿರುವುದು ಅಷ್ಟು ಮುಖ್ಯ. ಇಂದು ನಕಾರಾತ್ಮಕವಾಗಿ ಯೋಚಿಸುವ ಮತ್ತು ವರ್ತಿಸುವ ಲಕ್ಷಾಂತರ ಜನರಿದ್ದಾರೆ. ಆದ್ದರಿಂದ ನಾವೆಲ್ಲರೂ ನಮ್ಮ ಸಹ ಜೀವಿಗಳಿಗಾಗಿ ಪ್ರಾರ್ಥಿಸುವ ಸಲುವಾಗಿ ಸಕ್ರಿಯವಾಗಿ ಪಾಲ್ಗೊಳ್ಳುವುದರಲ್ಲಿ ನಮ್ಮ ಮತ್ತು ಇಡೀ ಜಗತ್ತಿನ ಹಿತಾಸಕ್ತಿಯಡಗಿದೆ. ಸಾಕಷ್ಟು ಆತ್ಮಗಳು ಭಾಗವಹಿಸಿದಾಗ, ಒಳ್ಳೆಯತನ, ಪ್ರೀತಿ, ಸಹಾನುಭೂತಿ ಮತ್ತು ಸಕಾರಾತ್ಮಕ ನಡವಳಿಕೆಯ ಅವರೆಲ್ಲರ ಸಂಯೋಜಿತ ಚಿಂತನಾ-ಸ್ಪಂದನಗಳು ಪ್ರಬಲವಾದ ಶಕ್ತಿಯನ್ನು ಉಂಟುಮಾಡುತ್ತವೆ, ಅದು ಪ್ರಪಂಚದಾದ್ಯಂತ ಜನರ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ.

ಗುರು: ಪರಮಹಂಸ ಯೋಗಾನಂದರ ಸ್ಮರಣೆಗಳು

ನಾನು ಆಗ ಹದಿನೇಳರ ಹರೆಯದವಳು, ಹಾಗೂ ಜೀವನವು ಎಲ್ಲಿಗೂ ಒಯ್ಯದ ಒಂದು ನೀಳ ಖಾಲಿ ಕಾರಿಡಾರ್ ಎಂದು ನನಗೆ ತೋರುತ್ತಿತ್ತು. ಭಗವಂತನನ್ನು ಅರಸುವ ಮತ್ತು ಅವನ ಸೇವೆಗೈಯುವ ಒಂದು ಉದ್ದೇಶಪೂರ್ವಕ ಅಸ್ತಿತ್ವಕ್ಕೆ ನನ್ನ ಹೆಜ್ಜೆಗಳನ್ನು ಮಾರ್ಗದರ್ಶನ ಮಾಡುವಂತೆ ಅವನೆಡೆಗಿನ ನಿರಂತರವಾದ ಪ್ರಾರ್ಥನೆಯು ನನ್ನ ಪ್ರಜ್ಞೆಯಲ್ಲಿ ಸುತ್ತುತ್ತಿತ್ತು.
1931 ರಲ್ಲಿ ನಾನು ಸಾಲ್ಟ್ ಲೇಕ್ ಸಿಟಿಯ ಕಿಕ್ಕಿರಿದ ದೊಡ್ಡ, ಸಭಾಂಗಣವನ್ನು ಪ್ರವೇಶಿಸಿದಾಗ, ಪರಮಹಂಸಜಿಯವರು ವೇದಿಕೆಯ ಮೇಲೆ ನಿಂತಿರುವುದನ್ನು ನೋಡಿದಾಗ, ನಾನು ಹಿಂದೆಂದೂ ಕಂಡಿರದ ಅಧಿಕಾರದಿಂದ ಭಗವಂತನ ಬಗ್ಗೆ ಅವರು ಮಾತನಾಡುವುದನ್ನು ನೋಡಿದಾಗ ನನ್ನ ಆ ಹಂಬಲಕ್ಕೆ ಉತ್ತರವು ಒಂದೇ ಕ್ಷಣದಲ್ಲಿ ಸಿಕ್ಕಂತಾಯಿತು. ನಾನು ಸಂಪೂರ್ಣವಾಗಿ ಸ್ತಂಭೀಭೂತಳಾದೆ — ನನ್ನ ಉಸಿರು, ಆಲೋಚನೆಗಳು, ಮತ್ತು ಸಮಯ ಸ್ಥಗಿತಗೊಂಡಂತ್ತಿತ್ತು. ನನ್ನ ಮೇಲೆ ವರ್ಷಿಸಲಾಗುತ್ತಿರುವ ಅನುಗ್ರಹದ ಬಗೆಗೆ ನನಗಾದ ಪ್ರೀತಿಪೂರ್ವಕ ಮತ್ತು ಕೃತಜ್ಞತಾಪೂರ್ವಕ ಅರಿವು, ನನ್ನೊಳಗೆ ಆಳವಾದ ನಿಶ್ಚಿತಾಭಿಪ್ರಾಯದ ಪರಿಜ್ಞಾನವನ್ನು ತಂದಿತು: “ನಾನು ಯಾವಾಗಲೂ ಭಗವಂತನನ್ನು ಪ್ರೀತಿಸಲು ಬಯಸಿದಂತೆಯೇ ಈ ವ್ಯಕ್ತಿಯು ಅವನನ್ನು ಪ್ರೀತಿಸುತ್ತಾರೆ. ಅವರು ಭಗವಂತನನ್ನು ಅರಿತಿದ್ದಾರೆ. ಅವರನ್ನು ನಾನು ಅನುಸರಿಸುತ್ತೇನೆ.”
ಪರಮಹಂಸ ಯೋಗಾನಂದರೊಡನೆ ಇರಲು ನನಗೆ ಅದೃಷ್ಟವಿದ್ದ ಅನೇಕ ವರ್ಷಗಳುದ್ದಕ್ಕೂ, ನಾನು ಅವರನ್ನು ಕೇವಲ ಮನುಷ್ಯನಂತೆ ನೋಡಲಿಲ್ಲ. ಅವರು ಎಂತಹ ದೈವತ್ವವನ್ನು ವ್ಯಕ್ತಪಡಿಸುತ್ತಿದ್ದರೆಂದರೆ; ನಾನು ಅವರನ್ನು ಹಾಗೆ ಮಾತ್ರ ವಿವರಿಸಲು ಸಾಧ್ಯ… ಅವರು ನನಗೆ ನೇರವಾಗಿ ಧರ್ಮಗ್ರಂಥದ ಪುಟಗಳಿಂದ ಹೊರಬಂದವರಂತೆ ಕಾಣುತ್ತಿದ್ದರು. ಅದೆಂತಹ ದೈವೋನ್ಮತ್ತಗೊಂಡ, ಪ್ರೀತಿ ತುಂಬಿದ ಸಾರ್ವಲೌಕಿಕ ಸ್ವಭಾವ! ಅವರಿಗೆ ಕೊಡಲಾಗಿದ್ದ ಧ್ಯೇಯೋದ್ದೇಶವನ್ನು ನಿರ್ವಹಿಸಲು, ಅಂದರೆ ಪಶ್ಚಿಮಕ್ಕೆ ಮತ್ತು ಪ್ರಪಂಚದಾದ್ಯಂತ, ನಾವು ಕ್ರಿಯಾಯೋಗ ಎಂದು ಕರೆಯುವ, ಭಗವಂತನೊಂದಿಗೆ ಸಂವಹನ ಮಾಡುವ ವಿಜ್ಞಾನವನ್ನು ತರಲು ಅಂತಹ ದಿವ್ಯವಾದ ಒಬ್ಬ ವ್ಯಕ್ತಿಯೇ ಬೇಕಾಗಿತ್ತು. ಮೇಲಿನ ಆಯ್ದ ಭಾಗಗಳು ಯೋಗದಾ ಸತ್ಸಂಗ ಪತ್ರಿಕೆ ಮತ್ತು ನಮ್ಮ ಆನ್‌ಲೈನ್ ಬುಕ್‌ಸ್ಟೋರ್‌ನಲ್ಲಿ ಲಭ್ಯವಿರುವ ಈ ಕೆಳಗಿನ ಪುಸ್ತಕಗಳಿಂದ ಆಯ್ದುಕೊಳ್ಳಲಾಗಿದೆ.

ಇದನ್ನು ಹಂಚಿಕೊಳ್ಳಿ