ವೈಎಸ್‌ಎಸ್/ಎಸ್‌ಆರ್‌ಎಫ್‌ನ ಸಂಘಮಾತಾ ಹಾಗೂ ಅಧ್ಯಕ್ಷರಾಗಿದ್ದ ಶ್ರೀ ಶ್ರೀ ದಯಾ ಮಾತಾರವರು ನವೆಂಬರ್ 30, 2010ರಂದು ನಿಧನರಾದ ಸಮಾಚಾರವು ಪ್ರಪಂಚದ ಅಗ್ರಮಾನ್ಯ ಸಮಾಚಾರ ಸಂಸ್ಥೆಗಳ ವ್ಯಾಪಕ ಪತ್ರಿಕಾ ವರದಿಯ ಕಾರಣದಿಂದಾಗಿ ವಿಶ್ವದ ಲಕ್ಷಾಂತರ ಜನರಿಗೆ ತಲುಪಿತು. ಈ ಮೂಲಕ ಸುದ್ದಿ ಸಂಸ್ಥೆಗಳು ಶ್ರೀ ಶ್ರೀ ದಯಾ ಮಾತಾರ ಆದರ್ಶಪ್ರಾಯ ಜೀವನಕ್ಕೆ ಗೌರವಾರ್ಪಣೆ ಸಲ್ಲಿಸಿದವು. ಅವರ ವರದಿಗಳು ಶ್ರೀ ಶ್ರೀ ದಯಾ ಮಾತಾರ ವಿನಮ್ರತೆ, ಇತರರ ಸೇವೆಗಾಗಿ ಮುಡಿಪಾಗಿಟ್ಟ ಜೀವನ ಮತ್ತು ಅವರ ದೈವೀ ಅನುಕಂಪ ಮತ್ತು ಇತರ ಸಾಮಾನ್ಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದವು.
“ದಾರಿದೀಪ…” —ದಿ ನ್ಯೂ ಯಾರ್ಕ್ ಟೈಮ್ಸ್
“ಯೋಗಾನಂದರ ಬೋಧನೆಗಳ ನಿಷ್ಠಾವಂತ ಭಾಷ್ಯಕಾರರು…” —ಲಾಸ್ ಏಂಜಲೀಸ್ ಟೈಮ್ಸ್
ದಿ ನ್ಯೂ ಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, ಫೋರ್ಬ್ಸ್, ಎಎಆರ್‌ಪಿ, ದಿ ಓರಗೋನಿಯನ್, ಮಿನ್ನಿಯಾಪೋಲಿಸ್ ಸ್ಟಾರ್ ಟ್ರಿಬ್ಯೂನ್, ಫಿಲಡೆಲ್ಫಿಯಾ ಇನ್‌ಕ್ವೈರರ್, ಕಾನ್ಸಾಸ್ ಸಿಟಿ ಸ್ಟಾರ್, ಸಾಲ್ಟ್ ಲೇಕ್ ಟ್ರಿಬ್ಯೂನ್, ಸ್ಯಾನ್ ಡೀಗೋ ಯೂನಿಯನ್-ಟ್ರಿಬ್ಯೂನ್, ಸೇಂಟ್ ಪೀಟರ್ಸ್‌ಬರ್ಗ್ ಟೈಮ್ಸ್, ಮತ್ತು ಅಸೋಸಿಯೇಟಡ್ ಪ್ರೆಸ್-ಇವು ಶ್ರೀ ದಯಾ ಮಾತಾರವರ ನಿಧನದ ವರದಿ ಮಾಡಿದ ಅನೇಕ ಆನ್‌ಲೈನ್ ಮತ್ತು ಸಮಾಚಾರ ಸಂಸ್ಠೆಗಳು ಮತ್ತು ದಿನತಂತಿಗಳು.
ದಯಾ ಮಾತಾರವರ ವೃತ್ತಾಂತವನ್ನು ದೇಶದಾದ್ಯಂತ ಹಲವಾರು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸುವ ಸಮಿತಿಯಲ್ಲಿದ್ದ ದಿ ಲಾಸ್ ಏಂಜಲೀಸ್ ಟೈಮ್ಸ್‌ನ ಹೇಳಿಕೆಗಳಲ್ಲಿ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಾದ ಹಾಗೂ ಡೈರಕ್ಟರ್ ಆಫ್ ದಿ ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಅಮೆರಿಕನ್ ರಿಲಿಜನ್ ಹಾಗೂ ಎನ್‌ಸೈಕ್ಲೋಪೀಡಿಯಾ ಆಫ್ ಅಮೆರಿಕನ್ ರೆಲಿಜಿನ್ಸ್‌ನ ಲೇಖಕರಾದ ಜೆ. ಗಾರ್ಡನ್ ಮೆಲ್ಟನ್‌ರವರ ಹೇಳಿಕೆಯೂ ಸೇರಿತ್ತು. ಅವರು, “[ಶ್ರೀ ದಯಾ ಮಾತಾ] ತಮಗಿಂತ ಹೆಚ್ಚಾಗಿ ತಮ್ಮ ಗುರುಗಳನ್ನು ಮುನ್ನೆಲೆಗೆ ತರುವುದಕ್ಕೆ ತಮ್ಮ ಸಮಯವನ್ನು ವ್ಯಯಿಸಿದರು” ಎಂದು ಹೇಳಿದ್ದಾರೆ — ಮಾನವಕೋಟಿಗಾಗಿ ಮೀಸಲಿಟ್ಟ ಅವರ ನಮ್ರ ಹಾಗೂ ನಿಷ್ಠಾವಂತ ಸೇವೆಯ ಬಗ್ಗೆ ಹೇಳಿರುವ ಒಂದು ಭಾವಪೂರ್ಣ ಅಭಿವ್ಯಕ್ತಿ.
“ಅಸಂಖ್ಯಾತ ಜೀವಗಳ ಮನಸ್ಸನ್ನು ತಟ್ಟಿದ…ಒಂದು ಪ್ರೇರಕ ಶಕ್ತಿ…” —ಹಿಂದು ಸ್ಟೇಟ್ಸ್‌ಮನ್ ರಾಜನ್ ಜೇಡ್
ಟೈಮ್ಸ್ ಆಫ್ ಇಂಡಿಯಾದಿಂದ ಹಿಡಿದು ಇಂಡಿಯಾ ವೆಸ್ಟ್‌ನಿಂದ ಡೈಲೀಇಂಡಿಯಾ.ಕಾಮ್ ವರೆಗೂ ಭಾರತದ ಮುದ್ರಿತ ಹಾಗೂ ಆನ್‌ಲೈನ್ ಸಮಾಚಾರ ಮಾಧ್ಯಮಗಳು ಅಮೆರಿಕ ಹಾಗೂ ಹೊರ ದೇಶಗಳೆರಡರಲ್ಲೂ ಶ್ರೀ ದಯಾ ಮಾತಾರವರ ಕಥನಗಳನ್ನು ಪ್ರಕಟಿಸಿದವು. ಪ್ರಖ್ಯಾತ ಭಾರತೀಯ ಮುತ್ಸದ್ದಿ ರಾಜನ್ ಜೇಡ್‌ರವರು ಶ್ರೀ ದಯಾ ಮಾತಾರವರ ಬಗ್ಗೆ ಉಲ್ಲೇಖಿಸಿದ ಹೇಳಿಕೆಗಳನ್ನು ನಂತರದ ಪತ್ರಿಕೆಗಳು ಹೀಗೆ ಉಲ್ಲೇಖಿಸಿದವು: “ಆಧ್ಯಾತ್ಮಿಕ ಪಥದಲ್ಲಿ ಅಸಂಖ್ಯಾತ ಜೀವಗಳ ಮನ ತಟ್ಟಿದ ಒಂದು ಪ್ರಚೋದಕ ಶಕ್ತಿ ಹಾಗೂ ಸಂಪೂರ್ಣ ಭಗವತ್‌ಪ್ರೇಮದಿಂದ ತುಂಬಿದಾಕೆ.”
ಎಲ್‌ಎ ಯೋಗ, ಹೊರೈಜಾ಼ನ್ಸ್ ಮ್ಯಾಗಜಿನ್, ಪ್ರಾಣ ಜರ್ನಲ್, ಇಂಟೆಗ್ರಲ್ ಯೋಗ ಮ್ಯಾಗಜಿನ್, ಲೈಟ್ ಆಫ್ ಕಾನ್ಷಿಯಸ್‌ನೆಸ್ ಮ್ಯಾಗಜಿನ್ ಹಾಗೂ ವಿಸ್ಡಂ ಕ್ವಾರ್ಟರ್ಲಿ: ಅಮೆರಿಕನ್ ಬುದ್ಧಿಸ್ಟ್ ಜರ್ನಲ್ – ವೈಎಸ್‌ಎಸ್/ಎಸ್‌ಆರ್‌ಎಫ್‌ನ ದೀರ್ಘಕಾಲೀನ ಮುಖ್ಯಸ್ಥರನ್ನು ಕೃತಜ್ಞತೆಯಿಂದ ಸ್ಮರಿಸಿದ ಆಧ್ಯಾತ್ಮಿಕ ಪ್ರಕಟಣೆಗಳಲ್ಲಿ ಕೆಲವು. ಆಧ್ಯಾತ್ಮ ಹಾಗೂ ಯೋಗದ ಸುದ್ದಿಗಳನ್ನು ವರದಿ ಮಾಡುವ ಹಲವಾರು ಮ್ಯಾಗಜಿನ್‌ಗಳು ತಮ್ಮ ಮುಂದಿನ ಪ್ರಕಟಣೆಗಳಲ್ಲಿ ಶ್ರೀ ದಯಾ ಮಾತಾರವರಿಗೆ ಇನ್ನೂ ಹೆಚ್ಚಿನ ಗೌರವ ಸಮರ್ಪಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿವೆ.
ನ್ಯಾಷನಲ್ ಪಬ್ಲಿಕ್ ರೇಡಿಯೋದ ಕೆಪಿಸಿಸಿ-ಎಫ್‌ಎಮ್ (ಲಾಸ್ ಏಂಜಲೀಸ್) ಬ್ರದರ್ ಚಿದಾನಂದರವರನ್ನು, ಶ್ರೀ ದಯಾ ಮಾತಾರವರ ಬದುಕು ಹಾಗೂ ಸಾಧನೆಗಳ ಬಗ್ಗೆ ಸಂದರ್ಶನವನ್ನು ನಡೆಸಿ, ಬಿಲೀಫ್‌ನೆಟ್. ಕಾಮ್‌ನಲ್ಲಿ ಸಂದರ್ಶನದ ಆಡಿಯೋ ಧ್ವನಿಮುದ್ರಣ ಹಾಗೂ ಮುದ್ರಿತ ಸಮಾಚಾರದ ಸಾರಾಂಶ ಹಾಗೂ ಪ್ರತ್ಯೇಕ ವೀಡಿಯೋ ಸಂದರ್ಶನವನ್ನು ಬಿತ್ತರಿಸಿದರು. ಕೆಪಿಸಿಸಿಯ ವರದಿಗಾರ ಶಿರ್ಲೆ ಜಹಾದ್‌ರವರು ದಯಾ ಮಾತಾರವರು “ಅನೇಕ ಆಧ್ಯಾತ್ಮಿಕ ನೇತಾರರು ಅರಸುವ ಪ್ರಶಂಸೆಯಿಂದ ತಪ್ಪಿಸಿಕೊಳ್ಳುವುದರಲ್ಲಿ ನಿಷ್ಣಾತರಾಗಿದ್ದರು” ಎಂದು ಹೇಳಿದರು. ರೇಡಿಯೋ ಪ್ರಸಾರದಲ್ಲಿ ಲಯೋಲ ಮೇರಿಮೌಂಟ್ ವಿಶ್ವವಿದ್ಯಾಲಯದ ಭಾರತೀಯ ಹಾಗೂ ತೌಲನಿಕ ತಾತ್ತ್ವಿಕ ಸಿದ್ಧಾಂತದ ಪ್ರಾಧ್ಯಾಪಕರಾದ ಕ್ರಿಸ್ಟೋಫರ್ ಚಾಪೆಲ್ ಅವರ ಸಂದರ್ಶನವೂ ಸೇರಿತ್ತು. ಅವರು “ಯಾರು ತಮ್ಮ ಜೀವನದಲ್ಲಿ ಇತರರಿಗಾಗಿ ಸೇವೆ ಸಲ್ಲಿಸಲು ಬಯಸುತ್ತಾರೋ ಅವರು, ದಯಾ ಮಾತಾರವರನ್ನು ಒಂದು ಪ್ರಚೋದನಾ ಶಕ್ತಿ ಎಂದು ನೆನಪಿನಲ್ಲಿಟ್ಟುಕೊಳ್ಳುತ್ತಾರೆ” ಎಂದು ಹೇಳಿದರು.
“ಇತರರ ಸೇವೆಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ಒಬ್ಬ ಅಸಾಧಾರಣ ಮಹಿಳೆ…” —ಟ್ವಿಟರ್ ಪೋಸ್ಟ್.
ಟ್ರಯಂಫ್ ಆಫ್ ದಿ ಸ್ಪಿರಿಟ್, ಓಪನ್ ಟು ಹೀಲಿಂಗ್, ಬೆಲ್ಲಾಆನ್‌ಲೈನ್ ಹಾಗೂ ಬಿಲೀಫ್‌ನೆಟ್. ಕಾಮ್‌ನಂತಹ ಅನೇಕ ಜಾಲತಾಣಗಳು ಹೃದಯಾಂತರಾಳದ ಗೌರವ ಸಮರ್ಪಣೆ ಯೊಂದಿಗೆ ಈ ಚಾರಿತ್ರಿಕ ಸಂದರ್ಭದ ವೃತ್ತಾಂತವನ್ನು ತಮ್ಮ ಜಾಲತಾಣಗಳಲ್ಲಿ, ಮಿಂಬರಹಗಳಲ್ಲಿ (ಬ್ಲಾಗ್‌ಗಳಲ್ಲಿ), ಆನ್‌ಲೈನ್ ವೇದಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮದ ನೆಟ್‌ವರ್ಕ್‌ಗಳಲ್ಲಿ ವ್ಯಾಪಕವಾಗಿ ವರದಿ ಮಾಡಿದವು.
ಬಹಳ ಕುತೂಹಲದ ಒಂದು ಮಿಂಬರಹವೆಂದರೆ ವೇದಿಕ್ ಮ್ಯಾಥ್ಸ್ ಫೋರಮ್‌ನದು. ಅದು ಪುರಿಯ ಪರಮಪೂಜ್ಯ ಶಂಕರಾಚಾರ್ಯರವರು (ಅವರ ಅನೇಕ ವಿಶಿಷ್ಟ ಸಾಧನೆಗಳಲ್ಲಿ ಪುರಾತನ ಭಾರತೀಯ ಸದ್ಗ್ರಂಥಗಳಲ್ಲಿರುವ ಪ್ರೌಢ ಗಣಿತದ ವಿವರಣೆಯ ಒಂದು ಸಂಪುಟವೂ ಸೇರಿತ್ತು) ಅಮೆರಿಕಕ್ಕೆ ನೀಡಿದ ಚಾರಿತ್ರಿಕ ಭೇಟಿಯಲ್ಲಿ ದಯಾ ಮಾತಾಜಿಯವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿತ್ತು.
ಟ್ವಿಟರ್‌ನಲ್ಲಿ ಮಾಧ್ಯಮದ ವರದಿ ಹಾಗೂ ಸ್ಮರಣಾರ್ಥ ಸೇವೆಗಳ ವಿವರಗಳ ರಿಟ್ವೀಟ್‌ಗಳೂ ಸೇರಿದಂತೆ ನೂರಾರು ಟ್ವೀಟ್‌ಗಳು ಪ್ರಕಟವಾದವು. ಆನ್‌ಲೈನ್ ಸಮಾಚಾರ ಸಮೂಹಗಳು ಈ ಸಂದರ್ಭದ ಬಗ್ಗೆ ಅನೇಕ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ ವರದಿಯನ್ನು ಹಂಚಿಕೊಂಡವು ಹಾಗೂ ಸದಸ್ಯರು, ಸ್ನೇಹಿತರು ಸೇರಿದ ಫೇಸ್‌ಬುಕ್ ತಂಡಗಳು ಮತ್ತು ಜಗದಾದ್ಯಂತದ ವೈಎಸ್‌ಎಸ್/ಎಸ್‌ಆರ್‌ಎಫ್ ಕೇಂದ್ರಗಳು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಚ್ಚುಮೆಚ್ಚಿನ ಸಂಘಮಾತಾರವರನ್ನು “ಮಹಾನ್ ಆಧ್ಯಾತ್ಮಿಕ ಮಾತೆ” ಎಂದು ಕೃತಜ್ಞತೆಯನ್ನು ಸಮರ್ಪಿಸುತ್ತ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಅತ್ಯಂತ ಹೃದಯಸ್ಪರ್ಶಿಯಾದ ಅಭಿನಂದನೆಯು ಎಸ್‌ಆರ್‌ಎಫ್‌ನ ಒಬ್ಬ ನೆರೆಹೊರೆಯವರಿಂದ ಬಂದಿತು — ಮೌಂಟ್ ವಾಷಿಂಗ್ಟನ್‌ನ ನಿವಾಸಿ — ಶ್ರೀ ದಯಾ ಮಾತಾರವರನ್ನು ಎಂದೂ ಭೇಟಿಯಾಗಿರದ, ಎಸ್‌ಆರ್‌ಎಫ್‌ನ ಸದಸ್ಯರೂ ಆಗಿರದ, ಆದರೆ ನಿಶ್ಚಿತವಾಗಿ ಅವರ ಚೈತನ್ಯವನ್ನು ಅರ್ಥೈಸಿಕೊಂಡಿದ್ದ ಆಥರ್ ಬಿಜೆ ಗಾಲಗರ್ ಅವರು, ದಿ ಹಫ್ಫಿಂಗ್ಟನ್ ಪೋಸ್ಟ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು:
“ನಿಮ್ಮ ಕೆಲಸವೇ ನಿಮ್ಮ ಬಗ್ಗೆ ಮಾತನಾಡುವಾಗ, ಮಧ್ಯದಲ್ಲಿ ತಡೆಹಿಡಿಯಬೇಡಿ,” ಎಂದು ಒಬ್ಬ ಜ್ಞಾನಿ ಹೇಳಿದ್ದಾರೆ. ಕಳೆದ ಐವತ್ತೈದು ವರ್ಷಗಳಿಂದಲೂ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ್ನು ಮುನ್ನಡೆಸಿದ ಶ್ರೀ ದಯಾ ಮಾತಾ ಅವರ ಬದುಕಿಗೆ ಇದು ಸರಿಯಾದ ವ್ಯಾಖ್ಯಾನ….
ಅವರು ಇತ್ತೀಚೆಗೆ ನಿಧನರಾಗಿದ್ದನ್ನು ನಾನು ಎಲ್‌ಏ ಟೈಮ್ಸ್‌ನಲ್ಲಿ ಓದುವವರೆಗೂ [ಶ್ರೀ ದಯಾ ಮಾತಾರವರ] ಬದುಕಿನ ವಾಸ್ತವಗಳು ನನಗೆ ತಿಳಿದಿರಲಿಲ್ಲ. ಆದರೆ ಅವರು ಯಾರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನನಗೆ ಅವರ ಬದುಕಿನ ವಿವರಗಳನ್ನೇನೂ ತಿಳಿಯಬೇಕಾಗಿರಲಿಲ್ಲ. ಅವರ ಕಾರ್ಯಗಳಿಂದಾಗಿ ನನಗಾಗಲೇ ಅವರ ಬಗ್ಗೆ ತಿಳಿದಿತ್ತು.
ಅವರ ಅಂತಃಕರಣವು ನನಗೆ ನನ್ನ ಬೆಳಗಿನ ನಡಿಗೆಯ ಸಮಯದಲ್ಲಿ ನನಗೆ ವಂದಿಸುತ್ತಿದ್ದ ಸನ್ಯಾಸಿಗಳ ಹಾಗೂ ಸನ್ಯಾಸಿನಿಯರ ಆನಂದಮಯ, ಸ್ನೇಹಭರಿತ ಮುಖಚಹರೆಯ ಮೂಲಕ ಅರಿವಿಗೆ ಬರುತ್ತಿತ್ತು. ಎಸ್‌ಆರ್‌ಎಫ್ ಪ್ರಕಟಿಸುವ ಸುಂದರ ಪುಸ್ತಕಗಳ ಹಾಗೂ ಕ್ಯಾಲೆಂಡರ್‌ಗಳಲ್ಲಿ ಅವರ ಅರಿವನ್ನು ತಿಳಿಯಬಹುದಿತ್ತು. ನಾನು ಎಸ್‌ಆರ್‌ಎಫ್‌ನ ಆವರಣವನ್ನು ನೋಡುತ್ತಾ ಸುತ್ತಾಡುವಾಗ ಹಾಗೂ ನನ್ನ ನಾಯಿಯೊಂದಿಗೆ ಅವರ ಸುಂದರ ಹುಲ್ಲುಹಾಸಿನ ಮೇಲೆ ಆಟವಾಡುವಾಗ ನನಗೆ ಅವರ ಅರಿವು ಆಗುತ್ತಿತ್ತು. ಅವರು ಅಲ್ಲಿ ಕಾಣದೇ ಇದ್ದರೂ, ಎಸ್‌ಆರ್‌ಎಫ್ ತೋಟದಲ್ಲಿ ಧ್ಯಾನ ಮಾಡುವಾಗ ಮೌನದ ಕ್ಷಣಗಳಲ್ಲಿ, ನಾನು ಅವರಿಗೆ ಒಂದು ಸರಳ ಪ್ರಾರ್ಥನೆಯ ಮೂಲಕ ಧನ್ಯವಾದವನ್ನು ಅರ್ಪಿಸುವ ಕ್ಷಣಗಳಲ್ಲಿ ಅವರ ಅರಿವು ನನಗಾಗುತ್ತಿತ್ತು.
ಶ್ರೀ ದಯಾ ಮಾತಾ, ಮೌಂಟ್ ವಾಷಿಂಗ್ಟನ್‌ನ ನೆರೆಹೊರೆಯವರಿಗೆ ನಿಮ್ಮ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ — ಆದರೂ ನಮಗೆ ತಿಳಿದಿತ್ತು. ನಿಮ್ಮ ಸಮೂಹದ ಶಾಂತಿಪೂರ್ಣ ಹಾಗೂ ಪ್ರಶಾಂತ ವಾತಾವರಣದ ಮೂಲಕ ನಿಮ್ಮ ಬಗ್ಗೆ ನಮಗೆ ತಿಳಿದಿತ್ತು ಮತ್ತು ನಾವು ನಿಮ್ಮ ಅನುಯಾಯಿಗಳ ಸುತ್ತಮುತ್ತ ಹಾಗೂ ನಿಮ್ಮ ತೋಟದಲ್ಲಿರುವಾಗ ವಿಶೇಷ ಚೈತನ್ಯವನ್ನು ಅನುಭವಿಸುತ್ತೇವೆ. ನಮ್ಮ ನೆರೆಯವರಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು; ಮೌಂಟ್ ವಾಷಿಂಗ್ಟನ್ ಅನ್ನು ನಿಮ್ಮ ನೆಲೆಯಾಗಿ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು; ಜಗತ್ತಿಗೆ ನೀವು ನೀಡಿದ ಕೊಡುಗೆಗಳಿಗೆ ಧನ್ಯವಾದಗಳು. ನಿಮ್ಮ ಕೆಲಸವೇ ನಿಮ್ಮ ಬಗ್ಗೆ ಮಾತನಾಡುತ್ತದೆ.
				
								















