(31 ಜನವರಿ, 1914 – 30 ನವೆಂಬರ್, 2010)

ಶ್ರದ್ಧಾಂಜಲಿ

ಶ್ರೀ ದಯಾ ಮಾತಾಜಿಯವರ ನಿಧನದ ನಂತರ, ಪ್ರಪಂಚದಾದ್ಯಂತದ ಹಿತೈಷಿಗಳು ಮತ್ತು ಸ್ನೇಹಿತರಿಂದ ಸಾವಿರಾರು ಸಂದೇಶಗಳು — ಇ-ಮೇಲ್‌ಗಳು, ಪತ್ರಗಳು ಮತ್ತು ದೂರವಾಣಿ ಕರೆಗಳು ಮದರ್ ಸೆಂಟರ್ ಗೆ ಹರಿದುಬಂದವು. ಕೆಲವು ಭಕ್ತರು ಮಾ ಅವರೊಂದಿಗಿನ ಹಲವು ವರ್ಷಗಳ ಭೇಟಿಗಳಿಂದ ಪಡೆದ ಸ್ಫೂರ್ತಿಯನ್ನು ನೆನಪಿಸಿಕೊಂಡರು, ಆದರೆ ಅನೇಕರು ಅವರನ್ನು ವೈಯಕ್ತಿಕವಾಗಿ ಭೇಟಿಯಾಗದಿದ್ದರೂ ಆಂತರಿಕ ಸಂಸರ್ಗದ ಮೂಲಕ ಅವರೊಂದಿಗೆ ನಿಕಟ ಸಂಪರ್ಕವನ್ನು ಅನುಭವಿಸಿದ್ದರು.

ಇಲ್ಲಿ ಪ್ರಸ್ತುತಪಡಿಸಿದ ಆಯ್ದ ಭಾಗಗಳು ಪ್ರೀತಿಯ ಈ ಆಧ್ಯಾತ್ಮಿಕ ಮುಖ್ಯಸ್ಥೆಯೊಂದಿಗಿನ, ಜನರ ವೈಯಕ್ತಿಕ ಅನುಭವಗಳ ದೊಡ್ಡ ವ್ಯಾಪ್ತಿಯ ಒಂದು ನೋಟವನ್ನು ಒದಗಿಸುತ್ತವೆ, ಆದರೂ ಇವೆಲ್ಲವೂ ಶ್ರೀ ಶ್ರೀ ದಯಾ ಮಾತಾ ಅವರ ಜೀವನದ ಸತ್ತ್ವವಾಗಿದ್ದ ಅನಿರ್ಬಂಧಿತ ಪ್ರೀತಿ ಮತ್ತು ದಯೆಯ ಸಮನ್ವಯವನ್ನು ಪ್ರತಿಬಿಂಬಿಸುತ್ತವೆ.

“ಎಸ್ಆರ್‌ಎಫ್ ಗೆ ಮತ್ತು ದೇವರಿಗೆ ನೀನು ಸಲ್ಲಿಸಿದ ಆನಂದಮಯ, ಜಾಣ್ಮೆಯಿಂದ ಕೂಡಿದ ಪ್ರಾಮಾಣಿಕ ಸೇವೆ ನನಗೆ ಅತ್ಯಂತ ಸಂತೋಷವನ್ನು ತಂದಿದೆ. ನೀನು ಜಗನ್ಮಾತೆಯಲ್ಲಿ ಜನಿಸಿ, ನಿನ್ನ ಆಧ್ಯಾತ್ಮಿಕ ಮಾತೃತ್ವದಿಂದಲೇ ಎಲ್ಲರನ್ನೂ ಪ್ರೇರಿಸುವಂತಾಗಲಿ — ನಿನ್ನ ಜೀವನದ ಉದಾಹರಣೆಯಿಂದ ಇತರರನ್ನು ದೇವರತ್ತ ಕರೆತರುವುದಕ್ಕಾಗಿ ಮಾತ್ರ. ನಿರಂತರ ಆಶೀರ್ವಾದಗಳು.”

— ಪರಮಹಂಸ ಯೋಗಾನಂದ

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಯಾಗಿದ್ದ ಶ್ರೀ ಎಂ. ಹಮೀದ್ ಅನ್ಸಾರಿ: “ಯೋಗದಾ ಸತ್ಸಂಗ ಸೊಸೈಟಿ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷೆ ಮತ್ತು ಸಂಘಮಾತೆಯಾಗಿದ್ದ ಶ್ರೀ ದಯಾ ಮಾತೆಯವರ ನಿಧನಕ್ಕೆ ದಯವಿಟ್ಟು ನನ್ನ ಪ್ರಾಮಾಣಿಕ ಸಂತಾಪವನ್ನು ಸ್ವೀಕರಿಸಿ.

“ಶ್ರೀ ದಯಾ ಮಾತರವರು, ಸಂಸ್ಥಾಪಕರಾದ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿ, 55 ವರ್ಷಗಳ ಕಾಲ ಅವರ ಉದ್ದೇಶಗಳು ಮತ್ತು ಆದರ್ಶಗಳನ್ನು ಮುಂದುವರಿಸಿದರು. ವಿಶ್ವದ ಧರ್ಮಗಳ ಸಾರಭೂತ ಏಕತೆ ಹಾಗೂ ಸೌಹಾರ್ದತೆಯನ್ನು ಪ್ರಚಾರ ಮಾಡುವಲ್ಲಿ, ಎಲ್ಲ ಜನರಲ್ಲಿ ಭ್ರಾತೃತ್ವಭಾವವನ್ನು ಹರಡುವಲ್ಲಿ, ಮತ್ತು ಸಮಸ್ತ ಮಾನವರನ್ನು ತನ್ನ ಬೃಹದಾತ್ಮವೇ ಎಂಬಂತೆ ಸೇವೆ ಸಲ್ಲಿಸುವಲ್ಲಿ ಆಕೆ ಪ್ರಮುಖ ಪಾತ್ರವಹಿಸಿದರು.

“ಇಂದಿನ ಸಂಘರ್ಷಭರಿತ ಜಗತ್ತಿನಲ್ಲಿ, ಈ ಆದರ್ಶಗಳು ಇನ್ನೂ ಪ್ರಸ್ತುತವಾಗಿವೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಈ ಆದರ್ಶಗಳನ್ನು ವಾಸ್ತವೀಕರಿಸಲು ಮತ್ತು ಮಾನವಕುಲವನ್ನು ಒಳ್ಳೆಯವರಾಗುವಂತೆ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ನನಗಿದೆ.”

ಜಾರ್ಖಂಡ್ ನ ಗೌರವಾನ್ವಿತ ರಾಜ್ಯಪಾಲ ಶ್ರೀ ಎಂ.ಒ.ಎಚ್. ಫಾರೂಕ್: “ಪರಮಹಂಸ ಯೋಗಾನಂದಜಿಯವರ ಅಗ್ರಗಣ್ಯ ಶಿಷ್ಯೆಯಾದ ಶ್ರೀ ದಯಾ ಮಾತಾರವರ ನಿಧನಕ್ಕೆ ನಾನು ಶೋಕಿಸುತ್ತೇನೆ….ಶ್ರೀ ದಯಾ ಮಾತಾರವರು ಪ್ರೀತಿ, ಸಹಾನುಭೂತಿ ಮತ್ತು ಭಾರತೀಯ ಸಂಸ್ಕೃತಿಯ ಇತರ ಕಾಲಾತೀತ ಮೌಲ್ಯಗಳೇ ಮೈದಳೆದಂತಿದ್ದರು….ನಾನು ನನ್ನ ಹೃತ್ಪೂರ್ವಕ ಸಂತಾಪವನ್ನು ಕಳಿಸುತ್ತಿದ್ದೇನೆ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸದಸ್ಯರಿಗೆ ಈ ಭರಿಸಲಾಗದ ನಷ್ಟವನ್ನು ಸಹಿಸಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.”

ಜಾರ್ಖಂಡ್ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ, ಶ್ರೀ ಅರ್ಜುನ್ ಮುಂಡಾ: “ಶ್ರೀ ಶ್ರೀ ದಯಾ ಮಾತಾ ನಮ್ಮ ಮಧ್ಯದಲ್ಲಿಲ್ಲ ಎಂಬುದು ತುಂಬಾ ದುಃಖದ ವಿಷಯವಾಗಿದೆ. ಇದು ಭಾರತೀಯ ಆಧ್ಯಾತ್ಮಿಕ ಸಮುದಾಯಕ್ಕೆ ಭರಿಸಲಾಗದ ನಷ್ಟವಾಗಿದೆ. ಸಂತರು ಸಾಯುವುದಿಲ್ಲ, ಬದಲಾಗಿ ಅವರು ಪರಮಾತ್ಮನಲ್ಲಿ ಲೀನವಾಗಲು ತಮ್ಮ ಮರ್ತ್ಯ ಶರೀರವನ್ನು ಸ್ವಇಚ್ಛೆಯಿಂದ ತ್ಯಜಿಸುತ್ತಾರೆ ಎಂದು ಹೇಳಲಾಗುತ್ತದೆ. ಇಂತಹ ಆತ್ಮಗಳು ಮಾನವ ದೇಹದ ಸೀಮಿತ ಗಡಿಗಳನ್ನು ದಾಟಿ ಇಡೀ ಬ್ರಹ್ಮಾಂಡದಲ್ಲಿ ವಿಸ್ತರಿಸುತ್ತವೆ.

“ಪ್ರಾಚೀನ ಭಾರತೀಯ ಆಧ್ಯಾತ್ಮಿಕ ಆದರ್ಶಗಳನ್ನು ಸಂಪೂರ್ಣವಾಗಿ ರಕ್ತಗತ ಮಾಡಿಕೊಂಡು ಮತ್ತು ಅವುಗಳನ್ನು ವ್ಯಕ್ತಪಡಿಸುತ್ತಿದ್ದ ಶ್ರೀ ಶ್ರೀ ದಯಾ ಮಾತಾರವರ ಜೀವನವು ಇಡೀ ವಿಶ್ವದೆದುರು ಪೂರ್ವ ಮತ್ತು ಪಾಶ್ಚಾತ್ಯ ಚಿಂತನೆಗಳ ಅಪೂರ್ವ ಸಮ್ಮಿಲನವನ್ನು ಪ್ರದರ್ಶಿಸುತ್ತದೆ. ಅವರ ಜೀವನವು ಇಡೀ ಬ್ರಹ್ಮಾಂಡವು ಒಬ್ಬನೇ ದೇವರ ಸೃಷ್ಟಿ ಮತ್ತು ಇಡೀ ಮಾನವಕುಲವು ಆ ಒಬ್ಬನೇ ದೇವರ ಸಂತಾನವೆಂದು ತೋರಿಸುತ್ತದೆ.

“ಸ್ವರ್ಗೀಯ ಸಾಮ್ರಾಜ್ಯಗಳಿಗೆ ಏರಿದ ಆ ಆತ್ಮಕ್ಕೆ ನಾನು ನನ್ನ ಹೃದಯಪೂರ್ವಕ ಗೌರವವನ್ನು ಅರ್ಪಿಸುತ್ತೇನೆ ಮತ್ತು ಅವರ ಪಾರಮಾರ್ಥಿಕ ಪ್ರೀತಿ ಮತ್ತು ಆಶೀರ್ವಾದಗಳು ಎಂದೆಂದಿಗೂ ನಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ.”

ಸ್ವಾಮಿ ಸತ್ಯಸಂಗಾನಂದ, ರಿಖಿಯಾಪೀಠ: “ದಯವಿಟ್ಟು ನನ್ನ ವಿನಮ್ರ ಸಂತಾಪವನ್ನು ಸ್ವೀಕರಿಸಿ; ಶ್ರೀ ದಯಾ ಮಾತಾಜಿಯವರು ತಮ್ಮ ಗುರುದೇವರ ಧ್ಯೇಯಕ್ಕೆ ಸ್ಫೂರ್ತಿದಾಯಕ ಮತ್ತು ಶ್ರದ್ಧಾನ್ವಿತ ಶಿಷ್ಯರಾಗಿದ್ದರು. ಈಗ ಅವರು ಸ್ಥೂಲ ಶರೀರದ ಸಂಕೋಲೆಗಳಿಂದ ಮುಕ್ತರಾಗಿರುವುದರಿಂದ, ಅವರ ದಿವ್ಯ ಉಪಸ್ಥಿತಿಯು ಇಡೀ ಸೃಷ್ಟಿಯನ್ನು ವ್ಯಾಪಿಸಿ ನಮ್ಮ ಹೃದಯಗಳಲ್ಲಿ ಸದಾ ಜೀವಂತವಾಗಿರುತ್ತದೆ ಮತ್ತು ಅವರ ಬೇಷರತ್ತಾದ ಪ್ರೀತಿಯು ಅನೇಕರ ಜೀವನವನ್ನು ಆಶೀರ್ವದಿಸುವುದನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಓಂ-ತತ್-ಸತ್.”

ಸ್ವಾಮಿ ವಿಮಲಾನಂದ, ಅಧ್ಯಕ್ಷರು, ದಿ ಡಿವೈನ್ ಲೈಫ್ ಸೊಸೈಟಿ, ಹೃಷಿಕೇಶ: “ನಮ್ಮ ಅಲ್ಪ ಮನಸ್ಸು ಪ್ರೀತಿಯ ಮತ್ತು ಪೂಜ್ಯ ದಯಾ ಮಾತಾರವರ ನಿಧನದ ಸುದ್ದಿ ತಿಳಿದಾಗ ಅಗಲಿಕೆಯ ದುಃಖವನ್ನು ಮಾತ್ರವೇ ದಾಖಲಿಸುತ್ತದೆ. ಆದರೆ ವಾಸ್ತವದಲ್ಲಿ, ಆಕೆ ಪರಮಾತ್ಮನಲ್ಲಿ ಲೀನವಾಗಿದ್ದಾರೆ. ಮಹಾನ್ ವ್ಯಕ್ತಿಗಳು ಸಾಯುವುದಿಲ್ಲ. ಅವರು ನಮ್ಮ ಮಧ್ಯದಲ್ಲೇ ಶಾಶ್ವತವಾಗಿ ಜೀವಿಸಿರುತ್ತ ನಮ್ಮೊಳಗಿನಿಂದ ನಮಗೆ ಮಾರ್ಗದರ್ಶನ ನೀಡುತ್ತಾರೆ. ತಮ್ಮ ಮರ್ತ್ಯಶರೀರವನ್ನು ತ್ಯಜಿಸುವ ಮೂಲಕ, ಮಾತೆಯು ದೇಹದ ಸೀಮಿತತೆಯನ್ನು ಮೀರಿ ಸರ್ವವ್ಯಾಪಿಯಾಗಿದ್ದಾರೆ….

“ಮಾ ಅವರ ಉಪಸ್ಥಿತಿಯು ಹಲವಾರು ಅನ್ವೇಷಕರಿಗೆ ಸ್ಫೂರ್ತಿಯ ದೊಡ್ಡ ಮೂಲವಾಗಿತ್ತು. ಅವರ ಪ್ರೀತಿ ಮತ್ತು ಕರುಣೆ ದುಃಖದಿಂದ ಬಂದ ಅನೇಕರಿಗೆ ಸಾಂತ್ವನದಂತಿತ್ತು. ಅವರ ಅನುಗ್ರಹವು ಸಂಪೂರ್ಣ ಹತಾಶೆಯಿಂದ ಬಂದವರಿಗೆ ಭರವಸೆಯನ್ನು ಮೂಡಿಸುತ್ತಿತ್ತು. ತಾಯಿ ತಮ್ಮ ದೇಹವನ್ನು ತೊರೆದಿದ್ದಾರೆ ಮತ್ತು ಅವರು ಹೇಗೆ ಭಕ್ತರಿಗೆ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಾರೆ? ಚಿಂತಿಸಬೇಕಾಗಿಲ್ಲ! ಈಗ ತಾಯಿ ತಮ್ಮ ದೈಹಿಕ ಮಿತಿಗಳನ್ನು ಮೀರಿರುವುದರಿಂದ, ಅವರ ಉಪಸ್ಥಿತಿಯನ್ನು ಪ್ರಪಂಚದಾದ್ಯಂತ ಮತ್ತು ಎಲ್ಲಾ ಸಮಯದಲ್ಲೂ ಅನುಭವಿಸಬಹುದು. ಪ್ರಾಮಾಣಿಕವಾಗಿ ಅರಸುವ ಎಲ್ಲರಿಗೂ ಅವರು ಸ್ಫೂರ್ತಿ, ಸಾಂತ್ವನ ಮತ್ತು ಭರವಸೆಯನ್ನು ನೀಡುವುದನ್ನು ಮುಂದುವರಿಸುತ್ತಾರೆ.

“ನಮ್ಮ ಅತ್ಯುನ್ನತ ಸಾಕ್ಷಾತ್ಕಾರವನ್ನು ಹೊಂದಲು ಮಾಡುವ ನಮ್ಮ ಪ್ರಯತ್ನದಲ್ಲಿ ಮಾತೆಯ ಆಶೀರ್ವಾದವು ನಮ್ಮ ಮೇಲೆ ಸದಾ ಇದ್ದು ನಮಗೆ ಮಾರ್ಗದರ್ಶನ ನೀಡಲಿ.”

ಸ್ವಾಮಿ ವೆಂಕಟೇಶಾನಂದ (ಡಿವೈನ್ ಲೈಫ್ ಸೊಸೈಟಿಯ ಸಂನ್ಯಾಸಿ): “[ಪರಮಹಂಸ ಯೋಗಾನಂದರು] ಈ ಭೂಮಿಯನ್ನು ತೊರೆಯುವ ಮೊದಲು, ‘ನನ್ನ ಮರಣದ ನಂತರ, ಪ್ರೀತಿ ಮಾತ್ರ ನನ್ನ ಸ್ಥಾನವನ್ನು ತುಂಬಬಲ್ಲುದು.’ ಎಂದು ಹೇಳಿದರು. ಅವರು ತೀರಿಕೊಂಡ ನಂತರ, ಸಾಕಾರಗೊಂಡ ಪ್ರೀತಿಯು ದಯಾ ಮಾತೆಯವರ ರೂಪದಲ್ಲಿ ಅವರ ಸ್ಥಾನವನ್ನು ತುಂಬಿತ್ತು….ನಿಷ್ಠಾವಂತ ಶಿಷ್ಯನು ಗುರುಗಳು ಕಲಿಸಿದ್ದನ್ನು ಇನ್ನೊಬ್ಬರಿಗೆ ಬೋಧಿಸುವ ಮೂಲಕ ಮಾತ್ರವಲ್ಲದೆ ಅವರು ಏನಾಗಿದ್ದರೋ ಅದೇ ರೀತಿ ಇರುವ ಮೂಲಕ ಅವರ ಧ್ಯೇಯವನ್ನು ನಿಷ್ಠೆಯಿಂದ ಮುನ್ನಡೆಸುತ್ತಾನೆ.” 

ಶ್ರೀ ಕೆ. ಕೃಷ್ಣನ್ ನಾಯರ್, ಮಹಾತ್ಮ ಗಾಂಧಿಯವರ ನೇರ ಶಿಷ್ಯರು: “[ಶ್ರೀ ದಯಾ ಮಾತಾರೊಂದಿಗಿನ] ಆ ಭೇಟಿಯ ಸಂತೋಷವು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಅವರು ಅದ್ಭುತವಾದ ಪ್ರೀತಿಯನ್ನು ಹೊರಸೂಸುತ್ತಾರೆ: ಅದೇ ಅವರ ಸಂದೇಶ.”

ಪುರಿಯ ಶಂಕರಾಚಾರ್ಯರಾದ, ಪರಮಪೂಜ್ಯ ಜಗದ್ಗುರು ಶ್ರೀ ಭಾರತೀ ತೀರ್ಥರು, 1958 ರಲ್ಲಿ ಎಸ್‌ಆರ್‌ಎಫ್ ಪ್ರಧಾನ ಕಛೇರಿಯಲ್ಲಿ ಶ್ರೀ ದಯಾ ಮಾತಾರವರನ್ನು ಭೇಟಿಯಾದ ನಂತರ ಅವರ ಹೇಳಿಕೆಗಳು “ನಾನು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನಲ್ಲಿ ಅತ್ಯುನ್ನತ ಆಧ್ಯಾತ್ಮಿಕತೆ, ಸೇವೆ ಮತ್ತು ಪ್ರೀತಿಯನ್ನು ಕಂಡೆನು. ಅದರ ಪ್ರತಿನಿಧಿಗಳು ಈ ತತ್ವಗಳನ್ನು ಬೋಧಿಸುವುದು ಮಾತ್ರವಲ್ಲದೆ, ಅದರಂತೆಯೇ ಬದುಕುತ್ತಾರೆ.”

ಡಾ.ಬಿನಯ್ ಆರ್ ಸೇನ್, ಯುನೈಟೆಡ್ ಸ್ಟೇಟ್ಸ್ ನ ಭಾರತದ ಮಾಜಿ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾ ನಿರ್ದೇಶಕ. “[ಪರಮಹಂಸ ಯೋಗಾನಂದರ] ಪರಂಪರೆಯು ಅವರ ಸಂತ ಶಿಷ್ಯೆ ಶ್ರೀ ದಯಾ ಮಾತಾರವರಿಗಿಂತ ಹೆಚ್ಚು ತೇಜಸ್ಸಿನಿಂದ ಬೇರೆಲ್ಲಿಯೂ ಹೊಳೆಯುವುದಿಲ್ಲ, ತಾವು ಹೋದ ನಂತರ ತಮ್ಮ ಹೆಜ್ಜೆಯಲ್ಲಿ ಮುಂದುವರಿಯಲು ಅವರು ಆಕೆಯನ್ನು ಸಿದ್ಧಪಡಿಸಿದರು….ನನ್ನಂತೆಯೇ, ಪರಮಹಂಸಜಿಯವರನ್ನು ಭೇಟಿಯಾಗುವ ಸೌಭಾಗ್ಯವನ್ನು ಪಡೆದವರು, ದಯಾ ಮಾತಾಜಿಯವರಲ್ಲಿ ಅದೇ ದೈವಿಕ ಪ್ರೀತಿ ಮತ್ತು ಸಹಾನುಭೂತಿಯ ಮನೋಭಾವವು ಪ್ರತಿಬಿಂಬಿಸುವುದನ್ನು ಕಂಡಿದ್ದಾರೆ, ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಾನು ಸೆಲ್ಫ್-ರಿಯಲೈಝೇಷನ್ ಕೇಂದ್ರಕ್ಕೆ ಮೊದಲ ಬಾರಿ ಭೇಟಿಯಿತ್ತಾಗ ನನ್ನನ್ನು ತುಂಬಾ ಪ್ರಭಾವಿಸಿತ್ತು.”

ಶ್ರೀ ನಾನಿ ಎ. ಪಾಲ್ಖಿವಾಲಾ, ಯುನೈಟೆಡ್ ಸ್ಟೇಟ್ಸ್ ಗೆ ಭಾರತದ ಮಾಜಿ ರಾಯಭಾರಿ: “ಶ್ರೀ ದಯಾ ಮಾತಾ ಅವರು ಪ್ರೀತಿ ಮತ್ತು ಸಹಾನುಭೂತಿ ಮತ್ತು ಭಾರತೀಯ ಸಂಸ್ಕೃತಿಯ ಇತರ ಶಾಶ್ವತವಾದ ಮೌಲ್ಯಗಳು ಮೈದಳೆದಂತಿದ್ದಾರೆ….ಆಕೆಯ ಭಾಷಣಗಳು ಅಮೂರ್ತ ದೇವತಾಶಾಸ್ತ್ರದ ತತ್ವಗಳ ಮೇಲಿನ ವಿದ್ವತ್‌ಪೂರ್ಣ ಒಣ ಉಪನ್ಯಾಸಗಳಲ್ಲ, ಆದರೆ ಅವರಿಗಾದ ಸೃಷ್ಟಿಕರ್ತನ ಭಾವಪರವಶ ದರ್ಶನಕ್ಕೆ ಸಾಕ್ಷಿಯಾಗಿರುವ ತೀವ್ರ ವೈಯಕ್ತಿಕ ಸ್ತುತಿಗೀತೆಗಳು.”

ಸಿ. ವಿ. ನರಸಿಂಹನ್, ಅಧೀನ ಮಹಾಕಾರ್ಯದರ್ಶಿ, ಯುನೈಟೆಡ್ ನೇಷನ್ಸ್: “ನನಗೆ ಶ್ರೀ ದಯಾ ಮಾತಾ ಅವರನ್ನು ಹಲವಾರು ಬಾರಿ ಭೇಟಿಯಾಗುವ ಭಾಗ್ಯವಿತ್ತು….ಆಕೆಯ ಉಪಸ್ಥಿತಿಯಲ್ಲಿರುವ ಯಾರೇ ಆದರೂ ಆಕೆ ಹೊರಸೂಸುವ ಆಧ್ಯಾತ್ಮಿಕ ಶಾಂತಿ ಮತ್ತು ಪ್ರಶಾಂತತೆಯ ದಿವ್ಯ ತೇಜಸ್ಸಿನಿಂದ ಪ್ರಭಾವಿತರಾಗಲು ವಿಫಲರಾಗುವುದಿಲ್ಲ….ಸಂಶಯ ಮತ್ತು ಸಿನಿಕತನದ ಈ ಯುಗದಲ್ಲಿ ಶ್ರೀ ದಯಾ ಮಾತೆಯ ಸಂದೇಶವು ಬಹಳ ಮಹತ್ವದ್ದಾಗಿದೆ ಮತ್ತು ಪ್ರಸ್ತುತವಾಗಿದೆ….ಅವು ಮಾನವ ಜನಾಂಗದ ಏಕತೆಯ ಬಗ್ಗೆ ಮಾತ್ರವಲ್ಲ, ದೇವರೊಂದಿಗೆ ಮನುಷ್ಯನ ಏಕತೆಯ ಬಗೆಗಿನ ಘೋಷಣೆಯೂ ಆಗಿದೆ.”

ಸ್ವಾಮಿ ಶ್ಯಾಮಾನಂದ ಗಿರಿ, 1971 ರಲ್ಲಿ ಅವರು ನಿಧನರಾಗುವವರೆಗೂ ಎಸ್ಆರ್ ಎಫ್/ವೈಎಸ್ಎಸ್ ನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದರು: “1958 ರಲ್ಲಿ ನಾನು ಮೊದಲ ಬಾರಿಗೆ ಪೂಜ್ಯ ಮಾತೆ ದಯಾ ಮಾತಾರನ್ನು ಭೇಟಿಯಾದಾಗ, ನಾನು ಅಚ್ಚರಿಪಟ್ಟಿದ್ದೆ. ಒಬ್ಬ ಪಾಶ್ಚಾತ್ಯಳು ಭಾರತದ ಮಹಾನ್ ಸಂತರಲ್ಲಿ ಒಬ್ಬರಂತೆ ಹೇಗೆ ಆಗಲು ಸಾಧ್ಯ? ಆಗ ನನಗೆ ಸೆಲ್ಫ್-ರಿಯಲೈಝೇಷನ್ ಬೋಧನೆಗಳ ಶಕ್ತಿ ಅರ್ಥವಾಯಿತು. ಅವರ ದೈವಸಾಕ್ಷಾತ್ಕಾರವು ಆಕಸ್ಮಿಕವಾಗಿ ಬಂದದ್ದಲ್ಲ. ಗುರುವಿನ ಬೋಧನೆಗಳನ್ನು ಅಳವಡಿಸಿಕೊಳ್ಳಲು ಮಾಡಿದ ಪ್ರಯತ್ನದಿಂದ, ಆಕೆಯು ತನ್ನನ್ನು ತಾನು ದೇವರಿಗೆ ಶ್ರುತಿಗೊಳಿಸಿಕೊಂಡರು, ಆದ್ದರಿಂದ ದೇವರ ಜ್ಞಾನವು ಅವರೊಳಗೆ ಹರಿಯಿತು.”

ಭಾರತದಲ್ಲಿರುವ ಆನಂದಮಯಿ ಮಾ ಅವರ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಧುನಿಕ ಭಾರತದ ಶ್ರೇಷ್ಠ ಸಂತರಲ್ಲಿ ಒಬ್ಬರಾದ ಆನಂದಮಯಿ ಮಾ ಅವರು ಶ್ರೀ ದಯಾ ಮಾತಾರಿಗೆ ಹೇಳಿದ ಮಾತುಗಳು: “ನಾನು ನಿಮ್ಮ ಗುರುಗಳಲ್ಲಿ ಕಂಡ ಅದೇ ಚೇತನ (ಭಾವ)ವನ್ನು, ನಿಮ್ಮಲ್ಲಿ ಕಾಣುತ್ತಿದ್ದೇನೆ.”

ಶ್ರೀಮತಿ ಮುಕ್ತಮಾಲಾ ಮಿತ್ರ ಮತ್ತು ಕುಟುಂಬ, ಕೋಲ್ಕತ್ತಾ, ಗುರುದೇವರ ಮೊಮ್ಮಗಳು: “ನಮ್ಮ ಪ್ರೀತಿಯ ಶ್ರೀ ಶ್ರೀ ದಯಾ ಮಾತಾ ಅವರ ನಿಧನದ ಬಗ್ಗೆ ಕೇಳಿ ನನ್ನ ಕುಟುಂಬ ಮತ್ತು ನನಗೆ ತುಂಬಾ ದುಃಖವಾಯಿತು. ಆಕೆಯ ದೈವಿಕ ಪ್ರೀತಿ ಮತ್ತು ಆಶೀರ್ವಾದವನ್ನು ಆನಂದಿಸಲು, ಅವರ ಮಾರ್ಗದರ್ಶನವನ್ನು ಪಡೆಯಲು ಮತ್ತು ನಿಸ್ವಾರ್ಥ ಪ್ರೀತಿಯ ಬಗ್ಗೆ ಅವರ ದೈವಿಕ ಬರಹಗಳನ್ನು ಓದಲು ನಾವು ಭಾಗ್ಯಶಾಲಿಗಳಾಗಿದ್ದೇವೆ, ಇದು ಈ ಪ್ರಕ್ಷುಬ್ಧ ಸಮಯಗಳಲ್ಲಿ ನಮ್ಮ ಲೌಕಿಕ ಜೀವನದ ಅನೇಕ ಕಷ್ಟಗಳು ಮತ್ತು ಏರಿಳಿತಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡಿತು….ಅವರ ಸಾವಿನೊಂದಿಗೆ, ಯಾವ ದೊಡ್ಡ ಆಲದ ಮರದ ನೆಮ್ಮದಿಯ ನೆರಳಿನಲ್ಲಿ ನಾವು ಇಷ್ಟು ದಿನ ಬದುಕುತ್ತಿದ್ದೆವೋ, ಅದು ಇದ್ದಕ್ಕಿದ್ದಂತೆ ದೂರವಾಗಿದೆ ಎಂಬ ಅನುಭವವಾಗುತ್ತಿದೆ. ನನ್ನ ಮದುವೆಯ ಸಂದರ್ಭದಲ್ಲಿ ಅವರು ನಮಗೆ ಕಳುಹಿಸಿದ ದೈವಿಕವಾಗಿ ಸುಂದರವಾಗಿದ್ದ ಮತ್ತು ಪ್ರೀತಿಯ ಪತ್ರವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಆದರೂ, ಆತ್ಮವು ಅಮರ, ದೈವಿಕ ಪ್ರೀತಿ ಅಮರ ಎಂದು ನಮಗೆ ತಿಳಿದಿದೆ ಮತ್ತು ಆದ್ದರಿಂದ ಅವರು ಕೇವಲ ತಮ್ಮ ಬಟ್ಟೆಗಳನ್ನು ಬದಲಾಯಿಸಿದ್ದಾರೆ ಮತ್ತು ಅವರ ದೈವಿಕ ಉಪಸ್ಥಿತಿ ಮತ್ತು ಪ್ರೀತಿ ಯಾವಾಗಲೂ ನಮ್ಮೊಂದಿಗೆ ಇರುತ್ತದೆ ಎಂದು ನಮಗೆ ತಿಳಿದಿದೆ.”

ಟೈಮ್ ಮ್ಯಾಗಜೀನ್: “ಇತಿಹಾಸವು ಮಿನುಗಿ ಮರೆಯಾದ ಧಾರ್ಮಿಕ ಪಂಥಗಳ ಭಗ್ನಾವಶೇಷಗಳಿಂದ ಚಿಮುಕಿಸಲ್ಪಟ್ಟಿದೆ — ಒಬ್ಬ ವರ್ಚಸ್ವೀ ನಾಯಕನಿಂದ ಬೆಳಗಲ್ಪಟ್ಟ ನಂಬಿಕೆಯೆಂಬ ಅಲ್ಪಾವಧಿಯ ಮೋಂಬತ್ತಿಗಳು ಅವನ ಮರಣದ ನಂತರ ನಂದಿಹೋಗಿವೆ….1952 ರಲ್ಲಿ ಸಂಸ್ಥಾಪಕರಾದ ಪರಮಹಂಸ ಯೋಗಾನಂದರ ಮರಣದ ನಂತರ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ ಕೂಡ ಚಟಚಟಗುಟ್ಟಿ ಹೋಗುತ್ತದೆ ಎಂಬಂತೆ ಕಂಡಿತು, ಆದರೆ ಬದಲಿಗೆ ಅದು ಪ್ರವರ್ಧಮಾನಕ್ಕೆ ಬಂದಿದೆ….1995 ರಿಂದ ಈ ಪಂಥವನ್ನು, ಫೆಲೋಶಿಪ್‌ನಲ್ಲಿ ದಯಾ ಮಾತಾ ಎಂದು ಕರೆಯಲ್ಪಡುವ ಮಿಸ್ ಫೇ ರೈಟ್ ನಿರ್ವಹಿಸುತ್ತಿದ್ದಾರೆ.”

ಡ್ಯಾನ್ ಥ್ರಾಪ್, ಲಾಸ್ ಏಂಜಲೀಸ್ ಟೈಮ್ಸ್ ನ ಮಾಜಿ ಧರ್ಮ ಸಂಪಾದಕ: “ನಾನು [ಶ್ರೀ ದಯಾ ಮಾತಾ] ಅವರನ್ನು ಸಂದರ್ಶಿಸಿದೆ ಮತ್ತು ಅನೇಕ ಕಾರಣಗಳಿಗಾಗಿ ಅವರ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೆ: ಅವರ ಬುದ್ಧಿವಂತಿಕೆ, ಅವರ ಪ್ರಾಮಾಣಿಕತೆ, ಅವರ ಸತ್ಯಸಂಧತೆ — ನಾನು ಯಾವಾಗಲೂ ಜನರನ್ನು ಅವರ ಸತ್ಯಸಂಧತೆಯ ಮೂಲಕ ಅಳೆಯುತ್ತೇನೆ — ಮತ್ತು ಧಾರ್ಮಿಕ ಕ್ಷೇತ್ರದ ಬಗ್ಗೆ ಅವರ ವಿಶಾಲ ದೃಷ್ಟಿಕೋನ….ನನ್ನ ಪ್ರಕಾರ ಪರ್ವತದ ತುದಿ ಯಾವಾಗಲೂ ತನ್ನದೇ ಆದ ಹೊಳಪನ್ನು, ತನ್ನದೇ ಆದ ಪ್ರಕಾಶವನ್ನು ಉಂಟುಮಾಡುತ್ತದೆ. ಮತ್ತು, ನನಗೆ, ಮೌಂಟ್ ವಾಷಿಂಗ್ಟನ್‌ನ ತುದಿಯು ಯಾವಾಗಲೂ ದಯಾ ಮಾತೆಯ ರೂಪದಲ್ಲಿ ಆ ವಿಶೇಷ ಹೊಳಪನ್ನು ಸಾಕಾರಗೊಳಿಸಿದೆ.…ನಾನು ನನ್ನ ಶಾಶ್ವತವಾದ ಗೌರವ, ಮೆಚ್ಚುಗೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಆಕೆಯ ಧ್ಯೇಯವು ಅನನ್ಯವಾಗಿತ್ತು, ಹಾಗೂ ಅವರು ಅದನ್ನು ಅನನ್ಯವಾಗಿ ಪೂರೈಸಲು ಸಮರ್ಥರಾಗಿಯೂ ಇದ್ದರು ಎಂಬುದನ್ನು ಉಲ್ಲೇಖಿಸುತ್ತೇನೆ.”

ಚಾರಿಟಿಯ ಒಬ್ಬ ಕ್ಯಾಥೋಲಿಕ್ ಸಂನ್ಯಾಸಿನಿ: “ನನ್ನ ಮಟ್ಟಿಗೆ, ದಯಾ ಮಾತಾ, ಒಂದು ಧಾರ್ಮಿಕ ಶ್ರೇಣಿಯ ಸದಸ್ಯೆಯಾಗಿ, ದೇವರು ಮತ್ತು ನೆರೆಯವರ ಸೇವೆಗೆ ಬದ್ಧವಾಗಿರುವ ಜೀವನ ಹೇಗಿರಬೇಕು ಎಂಬುದಕ್ಕೆ ಒಂದು ಉಜ್ವಲ ಉದಾಹರಣೆಯಾಗಿದ್ದಾರೆ….ಅವರ ಸಮ್ಮುಖದಲ್ಲಿ ಕ್ಯಾಥೋಲಿಕರು, ಪ್ರೊಟೆಸ್ಟಂಟ್‌ಗಳು ಅಥವಾ ಹಿಂದೂಗಳು ಎಂಬುದಿಲ್ಲ, ಬದಲಿಗೆ ಒಬ್ಬ ತಂದೆಯಾದ ದೇವರ ಮಕ್ಕಳು ಮಾತ್ರ. ಮತ್ತು ಅವರಲ್ಲಿ ಪ್ರತಿಯೊಬ್ಬರನ್ನೂ ಆಕೆ ಸೌಜನ್ಯದಿಂದ ಬರಮಾಡಿಕೊಳ್ಳುತ್ತಾರೆ ಮತ್ತು ಆಕೆಯ ಹೃದಯದಲ್ಲಿ ಅವರಿಗೆ ಸ್ಥಾನವಿದೆ. ಕ್ಯಾಥೊಲಿಕ್ ಸನ್ಯಾಸಿನಿಯಾದ ನಾನು, ಅವರ ದಯೆ ಮತ್ತು ಅವರ ಒಲವು ಮತ್ತು ಪ್ರೋತ್ಸಾಹವನ್ನು ಬಹಳ ಅನುಭವಿಸಿದ್ದೇನೆ. ಅವರು ನನ್ನನ್ನು ತಮ್ಮ ಸ್ವಂತದವಳಂತೆ ನಡೆಸಿಕೊಂಡಿದ್ದಾರೆ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ನನಗೆ ಅವರು ಯಾವಾಗಲೂ ನನ್ನ ಧಾರ್ಮಿಕ ಜೀವನ ಹೇಗಿರಬೇಕೆಂಬುದಕ್ಕೆ ಆದರ್ಶವಾಗಿರುತ್ತಾರೆ….ಅವರು ದೇವರನ್ನು ಬಿಂಬಿಸುತ್ತಾರೆ.”

ಪ್ರಿಸ್ಸಿಲ್ಲಾ ಪ್ರೀಸ್ಲಿ: “[ಶ್ರೀ ದಯಾ ಮಾತಾ] ಮೃದುಭಾಷಿ ಮತ್ತು ಅಕೃತ್ರಿಮ ಸ್ವಭಾವದವರು, ನಿಸ್ಸಂಶಯವಾಗಿ ಸ್ವತಃ ತನ್ನೊಂದಿಗೆ ಶಾಂತಿಯಿಂದಿದ್ದ ಒಬ್ಬ ವ್ಯಕ್ತಿಯಾಗಿದ್ದರು. ಎಲ್ವಿಸ್ ತಕ್ಷಣ ಆಕೆಯ ಪರಿಚಯ ಮಾಡಿಕೊಂಡರು. ಹೀಗೆ ಎಲ್ವಿಸ್ ಮತ್ತು ಶ್ರೀ ದಯಾ ಮಾತಾರ ನಡುವೆ ಸಂಭಾಷಣೆ ಪ್ರಾರಂಭವಾಯಿತು ಮತ್ತು ಅದು ಅವನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿತು….ಅವನು ಈ ಮಹಿಳೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದನು.”

ಸಂಗೀತಗಾರ ಜಾರ್ಜ್ ಹ್ಯಾರಿಸನ್: “ದೇವತೆಯ ವೈಶಿಷ್ಟ್ಯ ಏನು? ದೇವತೆಯಂತಿರುವವರು ಯಾರೆಂದರೆ, ತಮ್ಮೊಳಗೆ ಆ ಪರಿಶುದ್ಧತೆಯನ್ನು ಹೊಂದಿರುವವರು. ದಯಾ ಮಾತಾರಂತಹ ವ್ಯಕ್ತಿಯೊಳಗೇನಿದೆಯೋ ಅದನ್ನು ನಾನು ದೇವತಾ ಗುಣವೆಂದು ಕರೆಯುತ್ತೇನೆ.”

ಡಾ. ಎಸ್.ಡಿ. ಜೋಶಿ, ಲೇಖಕ, ತಂತ್ರಜ್ಞ, ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ, ವಾಲ್‌ಚಂದ್ ಇಂಡಸ್ಟ್ರೀಸ್, ಲಿಮಿಟೆಡ್. “1967 ರಲ್ಲಿ, ಸಂಘಮಾತಾ ದಯಾಮಾತಾಜಿ ಭಾರತಕ್ಕೆ ಭೇಟಿ ನೀಡಿದ್ದರು — ನಾನು ಎದುರು ನೋಡುತ್ತಿದ್ದ ಘಟನೆ….ಅವರ ಉಪಸ್ಥಿತಿಗೆ ನನ್ನನ್ನು ಒಡ್ಡಿಕೊಂಡಾಗ ನಾನು ಅವರಲ್ಲಿ ಜಗನ್ಮಾತೆಯನ್ನು ಕಂಡೆ — ದೈವಿಕ ಶಕ್ತಿ, ತಾಯಿ ಪ್ರೀತಿ ಮತ್ತು ಸಹಾನುಭೂತಿಯ ಸಾಕಾರ ರೂಪ….ದಯಾಮಾತಾಜಿ, ಅವರ ದಿವ್ಯ ತೇಜಸ್ಸು, ದಯಾಪರತೆ ಮತ್ತು ಸಹಾನುಭೂತಿಗಳು ಅವರೆಡೆಗೆ ನನ್ನ ಗೌರವವನ್ನು ಅರ್ಹತೆಯಿಂದ ಗಳಿಸಿಕೊಟ್ಟಿದ್ದವು.”

ಗೌರವಾನ್ವಿತ ಪ್ರೇಮ್ ಅಂಜಲಿ, ಪಿಎಚ್‌ಡಿ, ಕಾರ್ಯನಿರ್ವಾಹಕ ನಿರ್ದೇಶಕ, ಸಚ್ಚಿದಾನಂದ ಆಶ್ರಮ-ಯೋಗವಿಲ್, ವರ್ಜೀನಿಯಾ: “ಪ್ರೀತಿಯ ಮತ್ತು ಪೂಜ್ಯ ಶ್ರೀ ದಯಾ ಮಾತಾಜಿಯವರು ಭೌತ ಶರೀರದಿಂದ ನಿರ್ಗಮಿಸಿರುವ ಬಗ್ಗೆ ನಮಗೆ ತಿಳಿದುಬಂತು. ಸಚ್ಚಿದಾನಂದ ಆಶ್ರಮ-ಯೋಗವಿಲ್‌ನ ಟ್ರಸ್ಟಿಗಳ ಪರವಾಗಿ, ಸಂಪೂರ್ಣ ಸಮಗ್ರ ಯೋಗ ಸಂಸ್ಥೆ ಮತ್ತು ಸಂಘದ ಪರವಾಗಿ, ನಾವು ನಿಮಗೆ ಮತ್ತು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಎಲ್ಲ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ. ಶ್ರೀ ದಯಾ ಮಾತಾಜಿಯವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ನಾವು ಇಲ್ಲಿ ಸಚ್ಚಿದಾನಂದ ಆಶ್ರಮ-ಯೋಗವಿಲ್‌ನಲ್ಲಿ ವಿಶೇಷ ಪ್ರಾರ್ಥನಾ ಸತ್ಸಂಗವನ್ನು ನಡೆಸುತ್ತಿದ್ದೇವೆ.

“ದೇವರಿಗೆ, ಗುರುಗಳಿಗೆ ಮತ್ತು ಆತ್ಮಗಳ ಆಧ್ಯಾತ್ಮಿಕ ಉನ್ನತಿಗೆ ದೇವರ ಹೆಸರಿನಲ್ಲಿ ಸೇವೆ ಸಲ್ಲಿಸಿ ಮಾದರಿಯಾದ ಮಹಾನ್ ಚೇತನಗಳಲ್ಲಿ ಒಬ್ಬರಿಗೆ ನಾವು ಗೌರವ ಸಲ್ಲಿಸುವುದನ್ನು ಮುಂದುವರಿಸುತ್ತೇವೆ. ತಮ್ಮ ಪೂಜ್ಯ ಗುರುಗಳಾದ ಪರಮಹಂಸ ಯೋಗಾನಂದಜಿಯವರ ಅನುಯಾಯಿಗಳನ್ನು ಮತ್ತು ಅವರ ಸಂಸ್ಥೆಯನ್ನು ಪ್ರೀತಿಯಿಂದ ಮುನ್ನಡೆಸಿದ ಶ್ರೀ ದಯಾ ಮಾತಾರವರು ಮಾನವೀಯತೆಗೆ ಸಲ್ಲಿಸಿದ ಸೇವೆ ಅಪಾರವಾದುದು.

“ನಮ್ಮ ಪ್ರಾರ್ಥನೆಗಳು ಮತ್ತು ಹೃದಯಸ್ಪರ್ಶಿ ಭಾವನೆಗಳು ಈ ಸಮಯದಲ್ಲಿ ಮತ್ತು ಸದಾ ನಿಮ್ಮೊಂದಿಗೆ ಇರುತ್ತವೆ ಎಂಬುದನ್ನು ದಯವಿಟ್ಟು ತಿಳಿಯಿರಿ. ನಿಮ್ಮ ಪವಿತ್ರ ಗುರುವಿನ ಮಹಾನ್ ಸಂದೇಶದ ಜ್ಯೋತಿಯನ್ನು ಹೊತ್ತವರಾಗಿ ನೀವೆಲ್ಲರೂ, ಸೆಲ್ಫ್-ರಿಯಲೈಝೇಷನ್‌ಗಾಗಿ ಅವರಿಗಿದ್ದ ಆಳವಾದ ಆಶಯಗಳನ್ನು ಮತ್ತು ದೂರ ದೃಷ್ಟಿಯನ್ನು ಈಡೇರಿಸುವುದನ್ನು ಮುಂದುವರಿಸುವಂತಾಗಲಿ. ನಿಮ್ಮ ಪವಿತ್ರ ಗುರುಗಳಿಗೆ ನಿಮ್ಮ ಜೀವನವನ್ನು ಮುಡಿಪಾಗಿಡುವುದನ್ನು ಮುಂದುವರಿಸುವಂತಾಗಲಿ ಮತ್ತು ಆಜೀವಪರ್ಯಂತ ಭಕ್ತಿ ಮತ್ತು ಸಮರ್ಪಣಾಭಾವಕ್ಕೆ ಮಾದರಿಯಾಗಿದ್ದ ಶ್ರೀ ದಯಾ ಮಾತಾಜಿಯವರಿಂದ ಸ್ಫೂರ್ತಿ ಪಡೆಯುವುದನ್ನು ಮುಂದುವರಿಸುವಂತಾಗಲಿ.”

ವಿಲಾ ಮರಿಯಾನಾ ಮೆಡಿಟೇಶನ್ ಗ್ರೂಪ್, ಬ್ರೆಜಿಲ್: “ಇಲ್ಲಿ ನಮ್ಮ ಪುಟ್ಟ ಗುಂಪಿನಲ್ಲಿ ನಾವು ದಯಾ ಮಾತಾಜಿಯವರನ್ನು ದಿವ್ಯ ಮಾತೆಯೊಂದಿಗಿನ ನಮ್ಮ ಕೊಂಡಿ ಎಂದು ಪ್ರೀತಿಸುತ್ತೇವೆ….ಸುದ್ದಿಯನ್ನು ಒಪ್ಪಿಕೊಳ್ಳಲು ನಮಗೆ ತುಂಬಾ ಕಷ್ಟವಾಯಿತು. ನಾವು ಅವರಿಗಾಗಿ ಧ್ಯಾನದ ಸತ್ಸಂಗವನ್ನು ನಡೆಸಿದೆವು. ನಾವು ಅತ್ತಿದ್ದೇವೆ ಮತ್ತು ಆಘಾತದ ಭಾವನೆಗಳನ್ನು ಅನುಭವಿಸಿದ್ದೇವೆ, ಆದರೆ ನಮಗೆಲ್ಲರಿಗೂ ಒಂದೇ ಅನುಭವವಾಗಿತ್ತು. ಏನೆಂದರೆ ದಯಾ ಮಾತಾಜಿ, ನಾವು ದುಃಖಿಸಲು ಬಿಡುತ್ತಿಲ್ಲವೆಂಬಂತೆ. ಶಾಂತಿ ಮತ್ತು ಸಂತೋಷದ ಭಾವನೆಯು ನಮ್ಮ ಹೃದಯವನ್ನು ಆಕ್ರಮಿಸಲಾರಂಭಿಸಿತು (ಇದ್ದ ಎಲ್ಲರಿಗೂ — ಯಾರನ್ನೂ ಹೊರತುಪಡಿಸದೆ). ಮತ್ತು ನಾವೆಲ್ಲರೂ ಒಂದು ಜವಾಬ್ದಾರಿಯ ಪ್ರಜ್ಞೆಯನ್ನು ಅನುಭವಿಸಿದೆವು. ಅವರು ಪರಿಪೂರ್ಣ ಶಿಷ್ಯೆಯ ಜೀವನವನ್ನು ನಡೆಸಿದರು. ಈಗ ಅದನ್ನೇ ಗುರಿಯಾಗಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ನನಗೆ ದುಃಖವಾಯಿತು, ಆದರೆ ಅವರು ನನ್ನನ್ನು ದುಃಖದಿಂದ ಇರಲು ಬಿಡಲಿಲ್ಲ. ಅವರು ಎಂದಿಗಿಂತಲೂ ಹೆಚ್ಚು ಪ್ರಸಕ್ತರಾಗಿದ್ದಾರೆ.”

ಡಿ. ಝಡ್., ಕ್ಯಾಲಿಫೋರ್ನಿಯಾ: “ನಮ್ಮ ಪ್ರೀತಿಯ ದಯಾ ಮಾತಾರವರ ಅಗಲಿಕೆಯಲ್ಲಿ ನಾವು ಗಾಢವಾದ ಧ್ಯಾನಗಳು ಮತ್ತು ಪ್ರೀತಿಯ ಅಂತರ್ಬೋಧೆಗಳಿಂದ ನಮ್ಮ ಹೃದಯಕ್ಕೆ ನೇರವಾಗಿ ಮಾ ಅವರ ಸೌಮ್ಯ ಧ್ವನಿಯಲ್ಲಿ ಪಿಸುಗುಟ್ಟುವಿಕೆಯಿಂದ ಆಳವಾಗಿ ಆಶಿರ್ವದಿಸಲ್ಪಟ್ಟಿದ್ದೇವೆ ಎಂದು ನಾನು ಕಂಡುಕೊಂಡಿದ್ದೇನೆ, ಅನೇಕ ಭಕ್ತರೂ ಹಾಗೇ ಭಾವಿಸಿರಬೇಕು. ಈ ಆನಂದದಾಯಕ ಸ್ಮರಣಾರ್ಥದ ದಿನಗಳಲ್ಲಿ ಅನುಭವಿಸಿದಂತಹ ಅಪಾರ ಪ್ರೀತಿಯನ್ನು ನಾನು ಹಿಂದೆಂದೂ ಅನುಭವಿಸಿಲ್ಲ. ತಮ್ಮ ಆರೋಹಣದಲ್ಲಿಯೂ ನಮ್ಮ ಪ್ರೀತಿಯ ಮಾ ನಮ್ಮನ್ನು ಆಶೀರ್ವದಿಸುತ್ತಲೇ ಇರುತ್ತಾರೆ ಮತ್ತು ನಾವು ಎಂದಿಗೂ ಮೊದಲಿನಂತಿರುವುದಿಲ್ಲ, ಇದು ನನಗೆ ಖಚಿತವಾಗಿದೆ.”

ಅನಾಮಧೇಯ, ಫಿನ್‌ಲ್ಯಾಂಡ್: “ಅವರ ಅಗಲಿಕೆಯು, ಅವರು ಒದಗಿಸಿದ ಮಹತ್ತರವಾದ ಬೇಡಿಕೆಯ ಮತ್ತು ಗಮನಾರ್ಹ ಸೇವೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ತಂದಿದೆ — ನಮ್ಮೆಲ್ಲರಿಗೂ ಮಾತ್ರವಲ್ಲದೆ, ಇಡೀ ಪ್ರಪಂಚಕ್ಕೆ‌, ಹಲವಾರು ವರ್ಷಗಳವರೆಗೆ.”

ಎಫ್. ಬಿ., ಬ್ರೆಜಿಲ್: “ಇದು ಕೇವಲ ನಾವು ಭಕ್ತರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ದೊಡ್ಡ ನಷ್ಟವಾಗಿದೆ ಏಕೆಂದರೆ ಒಬ್ಬ ಮಹಾನ್ ಸಂತಳು ಹಾಗೂ ಭಗವತ್‌ಪ್ರೇಮಿ ಈಗ ಈ ಭೂಮಿಯ ಮೇಲೆ ನಡೆದಾಡುತ್ತಿಲ್ಲ. ಅವರ ಜೀವನ, ಅವರ ಸಂದೇಶ ಮತ್ತು ಪರಿಪೂರ್ಣ ಶಿಷ್ಯತ್ವದ ಅವರ ಉದಾಹರಣೆಯು ದಶಕಗಳಿಂದ ನಮಗೆಲ್ಲರಿಗೂ ಸ್ಫೂರ್ತಿ ನೀಡಿತು. ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಅವರ ಪುಸ್ತಕಗಳನ್ನು ಎಷ್ಟು ಓದಿದ್ದೇನೆ ಮತ್ತು ಅವರ ಟೇಪ್‌ಗಳನ್ನು ಎಷ್ಟು ಬಾರಿ ಕೇಳಿದ್ದೇನೆ ಎಂದರೆ ಅವರ ಧ್ವನಿ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಮುದ್ರಿತವಾಗಿದೆ ಮತ್ತು ಅವರ ಮಾತುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ಅವರು ನನ್ನ ಸಾಧನೆಯಲ್ಲಿ ಇಂದಿಗೂ ಎಂದೆಂದಿಗೂ ಸ್ಫೂರ್ತಿಯ ಆಳವಾದ ಮೂಲವಾಗಿದ್ದಾರೆ. ಇಷ್ಟು ದೀರ್ಘಕಾಲ ನಮ್ಮೊಂದಿಗೆ ಇರುವಂತೆ ಕೇಳಿಕೊಂಡದ್ದಕ್ಕಾಗಿ ನಾನು ಜಗನ್ಮಾತೆಗೆ ಧನ್ಯವಾದ ಹೇಳುತ್ತೇನೆ. ದಯಾ ಮಾತಾಜಿಯವರನ್ನು ಕಳೆದುಕೊಂಡಿದ್ದಕ್ಕಾಗಿ ದುಃಖಿತನಾಗಿದ್ದರೂ, ನಮ್ಮ ಜಗನ್ಮಾತೆಯ ದಿವ್ಯ ಪರಮಾನಂದದ ಅನಂತ ಸಾಗರದಲ್ಲಿ ಅವರು ಈಗ ಮುಕ್ತರಾಗಿರುವುದರಿಂದ ನನಗೆ ಸಂತೋಷವಾಗಿದೆ. ಅವರು ಈಗ ಎಲ್ಲಿರುವರೋ ಅಲ್ಲಿಂದಲೇ, ಅಂದರೆ ಗುರುಗಳ ಪಕ್ಕದಿಂದಲೇ, ನಮಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಮತ್ತು ನಮಗಾಗಿ ಪ್ರಾರ್ಥಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ.”

ಎ. ಆರ್., ಇಟಲಿ: “ನಾನು ಅವರಿಗೆ ಹಲವಾರು ಬಾರಿ ಬರೆದಿದ್ದೇನೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಅವರ ವೈಯಕ್ತಿಕ ಆಸಕ್ತಿ ಕಂಡು ನನಗೆ ಆಶ್ಚರ್ಯವಾಗಿತ್ತು, ಯಾವಾಗಲೂ ಪ್ರೀತಿ ಮತ್ತು ವಿವೇಚನೆಯ ಪರಾಮರ್ಶೆಗಳೊಂದಿಗೆ ಉತ್ತರಿಸುವುದು, ತಾವು ಮಾಡಿದಂತೆ ಸಾಧನೆಯನ್ನು ತಾಳ್ಮೆ ಮತ್ತು ಪ್ರೀತಿಯಿಂದ ಅನುಸರಿಸಲು ಪ್ರಾಯೋಗಿಕ ಸಲಹೆಗಳನ್ನು ನೀಡುವುದು.

“ಅವರು ಜಗನ್ಮಾತೆಯ ಪ್ರೇಮದ ಮೂರ್ತ ಅಭಿವ್ಯಕ್ತಿಯಾಗಿದ್ದರು — ಪ್ರೇಮ, ನಮ್ಮ ಗುರುಗಳ ಪ್ರೇಮ ಮತ್ತು ದಿವ್ಯ ಪ್ರೇಮದ ಸಾಕಾರ!”

ಎಸ್. ಬಿ., ಜಾರ್ಜಿಯಾ: “ಪರಮಹಂಸ ಯೋಗಾನಂದರು ತಮ್ಮ ದೇಹವನ್ನು ತೊರೆದ ನಂತರ, ‘ಪ್ರೇಮ ಮಾತ್ರ ನನ್ನ ಸ್ಥಾನವನ್ನು ತುಂಬಬಲ್ಲದುʼ ಎಂದು ಹೇಳಿದ್ದಾರೆ. ಪ್ರೀತಿಯೇ ಅತ್ಯಂತ ಪ್ರಬಲವಾದ ವಿಶ್ವಾತ್ಮಕ ಆಕರ್ಷಣೆಯ ಶಕ್ತಿಯಾಗಿದೆ, ಅದು ಸೃಷ್ಟಿಯನ್ನು ನಿರಂತರವಾಗಿ ಸೃಷ್ಟಿಕರ್ತನ ಕಡೆಗೆ ಸೆಳೆಯುತ್ತಿರುತ್ತದೆ, ಎಂದು ನಾವು ‘ದ ಹೋಲಿ ಸೈನ್ಸ್‌ʼನಿಂದ ಕಲಿಯುತ್ತೇವೆ. ಈ ಜಗತ್ತಿನಲ್ಲಿ ಯಾರೂ ‘ಪ್ರೀತಿಯನ್ನು ಕೊಡಲುʼ ಸಾಧ್ಯವಿಲ್ಲ; ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳಬಹುದಷ್ಟೆ, ಆಗ ದಿವ್ಯ ಪ್ರೇಮವು ನಮ್ಮ ಮೂಲಕ ಹರಿದು ಹೊರಹೊಮ್ಮುತ್ತದೆ. ಇದನ್ನೇ ಶ್ರೀ ದಯಾ ಮಾತಾ ಸುಂದರವಾಗಿ ಮತ್ತು ಸಂಪೂರ್ಣವಾಗಿ ಮಾಡಿದ್ದಾರೆ. ಅವರು ಎಲ್ಲಿಗೆ ಹೋದರೂ, ಅವರಿಂದ ದಿವ್ಯ ಪ್ರೇಮವು ಹೊರಹೊಮ್ಮುತ್ತಿತ್ತು. ಎಸ್‌ಆರ್‌ಎಫ್‌ನ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡುವಾಗ, ಅವರ ಪ್ರೀತಿಯ ಸ್ಪಂದನವು ಬೊನಾವೆಂಚರ್ ಹೋಟೆಲ್‌ನ ಇಡೀ ಕ್ಯಾಲಿಫೋರ್ನಿಯಾ ಬಾಲ್ ರೂಂ ಅನ್ನು ತುಂಬುತ್ತಿತ್ತು ಹಾಗೂ ಅದನ್ನು ಎಲ್ಲರೂ, ಎಸ್‌ಆರ್‌ಎಫ್‌ನ ಅನುಯಾಯಿಗಳಲ್ಲದವರೂ ಗ್ರಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಅವರ ಪ್ರೀತಿಯು ಅವರ ನಿಜವಾದ, ಮುಗ್ಧ ನಮ್ರತೆಯಿಂದ ಅಲಂಕರಿಸಲ್ಪಟ್ಟಿತ್ತು ಮತ್ತು ಸುಗಂಧಭರಿತವಾಗಿತ್ತು. ಇಡೀ ಮನುಕುಲದ ಇತಿಹಾಸದಲ್ಲಿ ಅರವತ್ತು ವರ್ಷಗಳಿಂದ ಪ್ರಮುಖ ಸಂಸ್ಥೆಯ ನಾಯಕರೊಬ್ಬರು ಸಂಸ್ಥೆಯ ಯಶಸ್ಸಿಗೆ ತಾನು ಕಾರಣವೆಂದು ಹೇಳಿಕೊಳ್ಳಲು ಒಮ್ಮೆಯಾದರೂ ಪ್ರಯತ್ನಿಸದ ಇನ್ನೊಂದು ಉದಾಹರಣೆ ನನಗೆ ತಿಳಿದಿಲ್ಲ. ಶ್ರೀ ದಯಾ ಮಾತಾ ಎಂದಿಗೂ ಹಾಗೆ ಮಾಡಲಿಲ್ಲ; ಅವರ ಬರಹಗಳು ಮತ್ತು ಉಪನ್ಯಾಸಗಳಲ್ಲಿ ಅವರು ಯಾವಾಗಲೂ ಅದರ ಯಶಸ್ಸು ನಿಜವಾಗಿಯೂ ಯಾರಿಗೆ ಸಲ್ಲಬೇಕೋ ಅವರಿಗೇ ನೀಡುತ್ತಾರೆ — ನಮ್ಮ ಗುರುವಿಗೆ ಮತ್ತು ಭಗವಂತನಿಗೆ. ಎಸ್‌ಆರ್‌ಎಫ್ ಸನ್ಯಾಸಿಗಳ ಮುಂದಿನ ಪೀಳಿಗೆಗಳು ಮತ್ತು ಸಾಮಾನ್ಯ ಶಿಷ್ಯರೆಲ್ಲರೂ ಶ್ರೀ ದಯಾ ಮಾತಾರವರ ಅನುಕರಣೀಯ ಜೀವನದಿಂದ, ತಮ್ಮ ಸ್ವಂತ ಜೀವನವನ್ನು ಸೌಜನ್ಯಶೀಲ ಮತ್ತು ಪ್ರೀತಿಯ ನಮ್ರತೆಯಿಂದ ನಡೆಸಲು ಪ್ರೇರೇಪಿಸಲ್ಪಡುತ್ತಾರೆ.”

ಜೆ. ಸಿ., ಪೋರ್ಚುಗಲ್: “ಮಹಾನ್ ಗುರುಗಳೆಲ್ಲರೂ ಇದ್ದಾರೆ: ಅವರು ನಮ್ಮ ಜಗತ್ತಿನ ಸಂಪೂರ್ಣ ಅವ್ಯವಸ್ಥೆಯ ಸಮಯದಲ್ಲಿ ಅಂಧಕಾರ ಮತ್ತು ಹತಾಶೆಯಲ್ಲಿರುವ ಮನುಕುಲವನ್ನು ಮಾರ್ಗದರ್ಶಿಸುವ ಬೆಳಕಿನ ಕಿರಣಗಳಂತಿದ್ದಾರೆ; ನಂತರ ಅದಕ್ಕಿಂತ ಹೆಚ್ಚಿನ ಮುಖ್ಯವಾದ ಕಾರ್ಯವನ್ನು ಹೊಂದಿರುವ ಶಿಷ್ಯರು ಇದ್ದಾರೆ: ಅವರ ಕೆಲಸವೆಂದರೆ, ಆ ಬೆಳಕಿನ ಕಿರಣವನ್ನು ಕಾಪಾಡಿಕೊಳ್ಳುವುದು ಮತ್ತು ಪೋಷಿಸುವುದು, ಆಗ ಅದು ಎಂದಿಗೂ ನಂದಿಹೋಗುವುದಿಲ್ಲ ಅಥವಾ ಮಂಕಾಗುವುದಿಲ್ಲ, ಇದರಿಂದ ಅದು ಕಷ್ಟದ ಸಮಯಗಳಲ್ಲಿ ನಮಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಇದೇ ನಮ್ಮ ಪೂಜ್ಯ ಶ್ರೀ ದಯಾ ಮಾತಾರವರ ಧ್ಯೇಯವಾಗಿತ್ತು. ಅವರು ನಮ್ಮ ಗುರುಗಳ ಬೋಧನೆಗಳು ಮತ್ತು ಧ್ಯೇಯಗಳ ಬೆಳಕಿನ ರಕ್ಷಕಿಯಂತಿದ್ದರು.”

ಇ. ಆರ್., ನ್ಯೂಯಾರ್ಕ್: “ನಮ್ಮ ಅತ್ಯಂತ ಪ್ರೀತಿಯ ಶ್ರೀ ದಯಾ ಮಾತಾಜಿಯಂತಹ ಆತ್ಮದ ಸ್ಥಿತ್ಯಂತರದ ವಿಷಯದಲ್ಲಿ ಭಾವನೆಗಳ ಮಹಾಪೂರವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಗುರುದೇವರ ಶುದ್ಧತೆ ಮತ್ತು ಆದೇಶಗಳನ್ನು ತುಂಬಾ ಗಾಢವಾಗಿ ಕಾಪಾಡಿದ ಅವರ ತೀವ್ರತೆಗೆ ಸಾಟಿಯಾಗುವಂಥದ್ದು ಈ ದ್ವಾಪರ ಯುಗದಲ್ಲಿ ಎಲ್ಲೂ ಕಂಡುಬರುವುದಿಲ್ಲ.

“ಅವರ ನಿಷ್ಕಳಂಕ ನಿಸ್ವಾರ್ಥತೆ, ಧೃತಿಗೆಡದ ಸಮರ್ಪಣೆ, ಬೆರಗುಗೊಳಿಸುವ ನಿಷ್ಠೆ, ಅತ್ಯಂತ ಕ್ರಿಯಾತ್ಮಕ ಆಧ್ಯಾತ್ಮಿಕತೆ ಮತ್ತು ಅವರ ದಿಗ್ಭ್ರಮೆಗೊಳಿಸುವ ಸರಳತೆಯು ಇಂದಿನ ಜಗತ್ತಿನಲ್ಲಿ ಆಳವಾಗಿ ಲೋಪವಾಗಿರುವ ಮತ್ತು ದಾರುಣವಾಗಿ ಕಾಣೆಯಾಗಿರುವ ಗುಣಗಳಾಗಿವೆ; ಆದರೂ ಅವರು ಆ ಒಬ್ಬನಿಗಾಗಿ (ಭಗವಂತನಿಗಾಗಿ) ಸಂಪೂರ್ಣ ಪ್ರೀತಿ ಮತ್ತು ಭಕ್ತಿಯಿಂದ ನಡೆದುಕೊಂಡರು, ಒಂದಲ್ಲ ಒಂದು ದಿನ ನಾವೆಲ್ಲರೂ ಅವನೊಂದಿಗೆ ಮುಖಾಮುಖಿಯಾಗಬೇಕೆಂದು ಹಾರೈಸಲೇಬೇಕು — ಅವರು ಪರಿಪೂರ್ಣ ಮತ್ತು ಸರಿಸಾಟಿಯಿಲ್ಲದ ಮಾದರಿಯಾಗುವುದಷ್ಟೇ ಅಲ್ಲ, ಆದರೆ ಹತ್ತಿರದ ಭವಿಷ್ಯದಲ್ಲಿ ಯಾರೂ ಪುನರಾವರ್ತಿಸುವ ಸಾಧ್ಯತೆಯಿಲ್ಲದ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.

“ದಯಾ ಮಾತಾಜಿಯವರ ಜೀವನದ ವ್ಯಾಪ್ತಿಯು ಮಾನವನ ಮನಸ್ಥಿತಿಯನ್ನು ಸುಲಭವಾಗಿ ಮೀರಿ ಹೋಗುತ್ತದೆ. ಭಾಷಣಗಳನ್ನು ಮಾಡಬಹುದು, ಪುಸ್ತಕಗಳನ್ನು ಬರೆಯಬಹುದು, ಆದರೆ ಭಗವಂತ ಮತ್ತು ಗುರುದೇವರ ಕಾರ್ಯಕ್ಕೆ ಆಕೆಯ ಅನುಕರಣೀಯ ಶ್ರುತಿಗೂಡುವಿಕೆಯು ಶಾಶ್ವತವಾಗಿ ಉಳಿಯುತ್ತದೆ, ಅದನ್ನು ಒಬ್ಬರೂ ಬಿಡದಂತೆ, ನಾವೆಲ್ಲರೂ ನಮ್ಮ ಜೀವನದಲ್ಲಿ ಅನುಕರಿಸಬೇಕು ಮತ್ತು ಕಾರ್ಯಗತಗೊಳಿಸಬೇಕು.

“ಭಗವಂತ ಮತ್ತು ಗುರುಗಳ ಪ್ರೇಮದ ಜ್ಯೋತಿಯನ್ನು ನಿಜವಾದ ಯೋಧನ ಶೌರ್ಯದೊಂದಿಗೆ ಹೊತ್ತಿದ್ದ ಅವರು ನೈಜ ಮುಖಂಡರಾಗಿದ್ದರು, ಅವರು ಪ್ರಚಾರ ಕಾರ್ಯಕ್ಕಾಗಿ ಮತ್ತು ತನ್ನ ರಾಜನಿಗಾಗಿ (ಭಗವಂತನಿಗಾಗಿ) ತನ್ನೆಲ್ಲವನ್ನೂ ನೀಡಲು ಸಿದ್ಧರಿದ್ದರು.”

ಓ. ಮತ್ತು ಡಿ. ಬಿ., ಬಲ್ಗೇರಿಯಾ: “ನಾನು ಮಾತಾಜಿಯವರಿಗೆ ಗೌರವವನ್ನು ವ್ಯಕ್ತಪಡಿಸುತ್ತೇನೆ, ಅವರ ಪ್ರೀತಿ ಮತ್ತು ಸಹಾನುಭೂತಿಯು ನಮ್ಮ ಹೃದಯಗಳನ್ನು ಮುಟ್ಟಿತು ಮತ್ತು ನಮ್ಮ ಹೃದಯಗಳಲ್ಲಿ ದಿವ್ಯ ಉತ್ಸಾಹವನ್ನು ತುಂಬಿತು.”

ಎಲ್. ಎಮ್., ಕನೆಕ್ಟಿಕಟ್: “ನನಗೆ ದಯಾ ಮಾತಾರವರನ್ನು ಮುಖತಃ ಭೇಟಿಯಾಗುವ ಸುಯೋಗವಿರಲಿಲ್ಲ, ಆದರೆ ಅನೇಕ ವರ್ಷಗಳ ನನ್ನ ಸಾಧನೆಯಲ್ಲಿ ಅವರು ಹಲವಾರು ಬಾರಿ ನನ್ನ ಕನಸಿನಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸಾಯುವ ಮುಂಚಿನ ಕೆಲವು ವಾರಗಳಲ್ಲಿ ಅವನಿಗಾಗಿ ಉತ್ಕಟ ಪ್ರಾರ್ಥನೆ ಮಾಡುತ್ತಿರುವಾಗಲೊಮ್ಮೆ. ಮಾ ಬಂದು ಆಶೀರ್ವದಿಸುವ ಅರ್ಥದಲ್ಲಿ ತಮ್ಮ ಹಣೆಯನ್ನು ನನ್ನ ಹಣೆಯ ಮೇಲೆ ಒತ್ತಿದರು, ಹಾಗೂ ಅದರ ಮೂಲಕ, ನನ್ನ ಸ್ನೇಹಿತನಿಗಾಗಿ ನಾನು ಪ್ರಾರ್ಥನೆ ಮಾಡುವಾಗ ಅದೇ ರೀತಿ ಮಾಡುತ್ತ ದೃಶ್ಯೀಕರಿಸಬೇಕಾದ ಪ್ರಬಲ ಮಾರ್ಗವನ್ನು ಅಂತರ್ಬೋಧೆಯಿಂದ ನನಗೆ ತೋರಿಸಿದರು. ಆದ್ದರಿಂದ ಅವರು ಬದುಕಿದ್ದಾಗ ನಾನು ಅವರನ್ನು ಯಾವತ್ತೂ ಭೇಟಿಯಾಗಿರದಿದ್ದರೂ, ನನ್ನ ಜೀವನದಲ್ಲಿ ಮಾ ಅವರ ಉಪಸ್ಥಿತಿಯು ತುಂಬಾ ನೈಜ ಮತ್ತು ಮೂರ್ತಸ್ವರೂಪದ್ದಾಗಿತ್ತು.”

ಅನಾಮಧೇಯ, ಜರ್ಮನಿ: “ನಾನು ಕಥೆ ಹೇಳಬಯಸುವುದಿಲ್ಲ; ಅವರು ನನ್ನ ಹೃದಯದಲ್ಲಿದ್ದಾರೆ ಎಂದು ಮಾತ್ರ ಹೇಳಬಯಸುತ್ತೇನೆ. ಅವರು ನನ್ನ ಆರಾಧ್ಯ ದೈವ. ಅವರಂತೆ ನಾನಾಗಬಯಸುತ್ತೇನೆ.”

ಅನಾಮಧೇಯ, ಕ್ಯಾಲಿಫೋರ್ನಿಯಾ: “2003 ರಲ್ಲಿ, ನನ್ನ ತಾಯಿ ಹಾಗೂ ನನ್ನ ಪತಿಗೆ ಆರು ತಿಂಗಳ ಅಂತರದಲ್ಲಿ ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಪತ್ತೆಯಾಯಿತು, ಇಬ್ಬರಿಗೂ ಬದುಕಲು ಸ್ವಲ್ಪವೇ ಸಮಯವಿದೆ ಎಂದು ಹೇಳಲಾಯಿತು. ಇಬ್ಬರೂ ಸುಮಾರು ಒಂದೇ ಸಮಯದಲ್ಲಿ ತೀವ್ರ ಅಸ್ವಸ್ಥರಾದರು. ನನಗೆ ಈಸ್ಟ್‌ ಕೋಸ್ಟ್‌ಗೆ ಅಂತಿಮ ಪ್ರವಾಸವನ್ನು ಕೈಗೊಳ್ಳಲು ಸಾಧ್ಯವಾಯಿತು ಮತ್ತು ನನ್ನ ತಾಯಿಯು ನನ್ನ ತೋಳುಗಳಲ್ಲಿ ಶಾಂತಿಯುತವಾಗಿ ಕೊನೆಯುಸಿರೆಳೆಯುವ ಅವಕಾಶ ನನಗೆ ದಕ್ಕಿತು. ಆಕೆಯ ಮರಣದ ಎರಡು ದಿನಗಳ ನಂತರ, ನನ್ನ ಗಂಡನ ಸ್ಥಿತಿಯು ಹದಗೆಟ್ಟಿದ್ದರಿಂದ ಮನೆಗೆ ಮರಳಲು ನನಗೆ ಕರೆ ಬಂದಿತು. ನಾನು ಮನೆಗೆ ಬಂದ ಕೆಲವು ದಿನಗಳ ನಂತರ, ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾದ ಘಟಕದಲ್ಲಿದ್ದರು ಮತ್ತು ಬದುಕುವ ನಿರೀಕ್ಷೆ ಇರಲಿಲ್ಲ. ಆ ರಾತ್ರಿ ನಾನು ಜಗನ್ಮಾತೆಯಲ್ಲಿ, ಅವಳು ಯಾವಾಗಲೂ ನನ್ನೊಂದಿಗೆ ಇದ್ದಾಳೆ ಎಂದು ನನಗೆ ತಿಳಿದಿದ್ದರೂ, ದಯವಿಟ್ಟು ಅದನ್ನು ದೃಢೀಕರಿಸಲು ನನಗೆ ಮಾನುಷ ಸಂಕೇತವನ್ನು ನೀಡು ಎಂದು ಆಳವಾಗಿ ಪ್ರಾರ್ಥಿಸಿದೆ. ನನ್ನ ಸಮಚಿತ್ತತೆಯನ್ನು ಕಾಯ್ದುಕೊಳ್ಳಲು ನಾನು ಹೆಣಗಾಡುತ್ತಿದ್ದೆ ಮತ್ತು ಕೆಲವೊಮ್ಮೆ ದುಃಖವು ಅಗಾಧವಾಗಿತ್ತು.

“ಮರುದಿನವೇ ನನಗೆ ಮದರ್ ಸೆಂಟರ್‌ನಿಂದ ಫೋನ್‌ ಬಂತು. ನಾನು ಮದರ್ ಸೆಂಟರ್‌ಗೆ ಕರೆಯನ್ನೂ ಮಾಡಿರಲಿಲ್ಲ, ಬರೆದೂ ಇರಲಿಲ್ಲ, ಆದ್ದರಿಂದ ನನಗೆ ಬಹಳ ಆಶ್ಚರ್ಯವಾಯಿತು. ಇಂಪಾದ ದನಿ ಹೇಳಿತು, ‘ನಾನು ನಿಮಗೆ ಒಬ್ಬ ಸನ್ಯಾಸಿನಿಯೊಂದಿಗೆ ಮಾತನಾಡಲು ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಬಯಸುತ್ತೇನೆ, ಏಕೆಂದರೆ ನಿಮಗಾಗಿ ದಯಾ ಮಾತಾರ ಸಂದೇಶವೊಂದಿದೆ, ಆದರೆ ನಾನು ಹಾಗೆ ಮಾಡುವ ಮೊದಲು, ಜಗನ್ಮಾತೆ ನಿಮ್ಮೊಂದಿಗಿದ್ದಾಳೆ ಎಂದು ನಿಮಗೆ ನೇರವಾಗಿ ಹೇಳಲು ಅವರು ನನಗೆ ಹೇಳಿದ್ದಾರೆ.’ ಆ ಮಾತುಗಳನ್ನು ಕೇಳಿ, ಅಳತೆ ಅಥವಾ ಪದಗಳಿಗೆ ಮೀರಿದ ಕೃತಜ್ಞತೆಯಿಂದ ಅಳುತ್ತ ನಾನು ಕುಸಿದು ಕುಳಿತೆ. ಕೆಲವು ಕ್ಷಣಗಳ ನಂತರ ಸನ್ಯಾಸಿನಿಯೊಬ್ಬರು ಫೋನ್‌ ತೆಗೆದುಕೊಂಡು, ಪ್ರೀತಿಯ ಮಾತಾಜಿಯ ಸಂದೇಶವನ್ನು ಓದಿ ನನ್ನ ಆತ್ಮಕ್ಕೆ ಸಾಂತ್ವನ ಹೇಳಿದರು. ಇದು ಪ್ರೀತಿಯ ಮಾತಾಜಿಯವರಿಗೆ ಭಗವಂತ ಮತ್ತು ಗುರೂಜಿಯೊಂದಿಗಿದ್ದ ಪರಿಪೂರ್ಣ ಶ್ರುತಿಗೂಡುವಿಕೆ ಮತ್ತು ಎಲ್ಲರ ಬಗ್ಗೆಯೂ ಅವರಿಗಿದ್ದ ಮಹಾನ್ ಸಹಾನುಭೂತಿ ಮತ್ತು ಪ್ರೀತಿಯ ಅಗಾಧವಾದ ಉದಾಹರಣೆಯಾಗಿದೆ. ಪ್ರೀತಿಯ ಮಾತಾಜಿಯನ್ನು ಅವರ ಭೌತಿಕ ರೂಪದಲ್ಲಿ ಭೇಟಿಯಾಗುವ ಸೌಭಾಗ್ಯ ನನಗೆ ಎಂದಿಗೂ ಇರಲಿಲ್ಲ, ಆದರೆ ಅವರ ಪ್ರೀತಿ ಮತ್ತು ಸಹಾನುಭೂತಿಗಳು ನನ್ನ ಹೃದಯ ಮತ್ತು ಆತ್ಮದ ಮೇಲೆ ಕೆತ್ತಲ್ಪಟ್ಟಿವೆ.”

ಡಬ್ಲ್ಯು.ಸಿ., ಆಸ್ಟ್ರೇಲಿಯಾ: “1993 ರ ಘಟಿಕೋತ್ಸವದಲ್ಲಿ ಮಾ ಅವರನ್ನು ನೋಡಲು ಮತ್ತು ಅವರು ಮಾತನಾಡುವುದನ್ನು ಕೇಳಲು ಸಾಧ್ಯವಾಗಿದ್ದಕ್ಕೆ ನಾನು ನನ್ನನ್ನು ತುಂಬಾ ಅದೃಷ್ಟಶಾಲಿ ಅಂದುಕೊಳ್ಳುತ್ತೇನೆ. ಆ ಸಂಜೆಯನ್ನು ನಾನು ಯಾವಾಗಲೂ ನನ್ನ ಜೀವನದ ಅತ್ಯಮೂಲ್ಯ ಅನುಭವಗಳಲ್ಲಿ ಒಂದಾಗಿ ಪರಿಗಣಿಸುತ್ತೇನೆ. ಅವರು ಕೋಣೆಗೆ ಕಾಲಿಟ್ಟ ಕ್ಷಣದಲ್ಲಿ ಇಡೀ ಸ್ಥಳವು ಕೇವಲ ಶುದ್ಧ ಪ್ರೀತಿಯಿಂದ ತುಂಬಿಕೊಂಡಿತು. ನಾನು ಆ ಭಾವನೆಯನ್ನು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳಬಯಸಿದ್ದೆ.”

ಅನಾಮಧೇಯ, ಕೆನಡಾ: “ಅವರ ಉಪಸ್ಥಿತಿ ನಾನೆಂದಿಗೂ ಮರೆಯಲಾಗದ ಅನುಭವ. ಅವರ ಪ್ರೇಮದ ಅಲೆಗಳಲ್ಲಿ ಮಿಂದೆದ್ದೆವು. ಅದು ನಮ್ಮನ್ನು ಆನಂದದ ಭಾಷ್ಪಗಳಲ್ಲಿ ಮುಳುಗಿಸಿತು.”

ಎಸ್. ಡಬ್ಲೂ., ಒರೆಗಾನ್: “ನಮ್ಮ ಪ್ರೀತಿಯ ದಯಾ ಮಾತಾ ಮತ್ತು ಎಸ್‌ಆರ್‌ಎಫ್ ಬೋಧನೆಗಳೊಂದಿಗೆ ಅಕ್ಷರಶಃ ‘ಬೆಳೆದ’ ನಮ್ಮಂತಹವರಿಗೆ, ಅವರು ನಮ್ಮೊಂದಿಗೆ ಇರುವುದು ಮತ್ತು ಅವರ ಪ್ರೀತಿಯನ್ನು ಎಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಅನುಭವಿಸುವುದೇ ಒಂದು ಅದ್ಭುತ. ನಾನು ಇಷ್ಟು ವರ್ಷ ಸೈಕಲ್ ಓಡಿಸುವುದನ್ನು ಕಲಿಯುತ್ತಿದ್ದೆನೆಂಬಂತೆ ಮತ್ತು ನಾನು ತುಂಬಾ ಅಸ್ಥಿರವಾದಾಗ ನನ್ನನ್ನು ಸ್ಥಿರಗೊಳಿಸಲು ಸಿದ್ಧರಾಗಿರಲು ನನ್ನ ಜೊತೆ ಅವರು ಓಡುತ್ತಿದ್ದರೆಂಬಂತೆ ನನಗೆ ಭಾಸವಾಗುತ್ತಿತ್ತು. ನಾನು ಚೆನ್ನಾಗಿರುತ್ತೇನೆ ಎಂದು ನನಗೆ ಹೇಗೋ ತಿಳಿದಿತ್ತು; ನಾನು ಕಲಿಯಬೇಕಾದುದನ್ನು ಅವರು ತಮ್ಮ ಉದಾಹರಣೆಯ ಮೂಲಕ ನನಗೆ ಕಲಿಸಿದರು — ಗುರು-ಶಿಷ್ಯರ ಸಂಬಂಧದೆಡೆಗೆ ಮತ್ತು ಪರಮಹಂಸ ಯೋಗಾನಂದರು ನಮಗೆ ನೀಡಿದ ಬೋಧನೆಗಳೆಡೆಗೆ ಅಚಲವಾದ ಸಮರ್ಪಣೆ ಮತ್ತು ಕೃತಜ್ಞತೆಯನ್ನು ಕಲಿಸಿದರು, ಮತ್ತು ನಾವು ಎಂದೆಂದಿಗೂ ಪ್ರೀತಿಸಲ್ಪಡುತ್ತೇವೆ ಎಂಬುದನ್ನೂ ಕಲಿಸಿದರು. ಈಗ ಆ ಪ್ರೀತಿಯನ್ನು ಎಲ್ಲರೂ ಅನುಭವಿಸುವಂತೆ ಮಾಡುವುದು.”

ಎಂ. ಎಸ್., ಜರ್ಮನಿ: “ನಮ್ಮ ಪ್ರೀತಿಯ ಶ್ರೀ ದಯಾ ಮಾತಾರವರ ನಿಧನದ ಬಗ್ಗೆ ಕೇಳಿ ನನಗೆ ತಂಬಾ ದುಃಖವಾಯಿತು. ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನನ್ನ ಸಂಪೂರ್ಣ ಆಧ್ಯಾತ್ಮಿಕ ಜೀವನವು ನಮ್ಮ ಪ್ರೀತಿಯ ಮಾ ಅವರ ಅಧ್ಯಕ್ಷತೆ ಮತ್ತು ಆಧ್ಯಾತ್ಮಿಕ ಮುಖಂಡತ್ವದಿಂದ ಕೂಡಿದೆ. ನಾನು ಮಾ ಅವರ ಫೈಂಡಿಂಗ್ ದಿ ಜಾಯ್ ವಿದಿನ್ ಯು ಪುಸ್ತಕದಲ್ಲಿ 1948 ರಲ್ಲಿ ಅವರ ಮೃತ್ಯುದವಡೆಯ ಅನುಭವದ ಬಗ್ಗೆ ಓದಿದೆ. ಇದು ನನಗೆ ಸಾಂತ್ವನ ನೀಡಿತು ಮತ್ತು ನಮ್ಮ ಆಧ್ಯಾತ್ಮಿಕ ಕುಟುಂಬ ಮತ್ತು ಎಸ್‌ಆರ್‌ಎಫ್ ಸಂಸ್ಥೆಯ ಮೂಲಾಧಾರವಾಗಲು ಅವರು ಮಾನುಷ ಕಲ್ಪನೆಯನ್ನು ಮೀರಿ 62 ವರ್ಷಗಳಿಗೂ ಹೆಚ್ಚು ಕಾಲ ಈ ಕಾರ್ಯವನ್ನು ಕೈಗೊಂಡಿದ್ದಾರೆ ಎಂಬ ಬಗ್ಗೆ ಕೃತಜ್ಞತೆ ನನ್ನಲ್ಲಿ ತುಂಬಿಬಂತು! ಅವರು ಆಗ ಅನುಭವಿಸಿದ ಅದ್ಭುತ ಪ್ರೀತಿಯಲ್ಲಿ ಈಗ ಸಂಪೂರ್ಣವಾಗಿ ಮುಳುಗಿದ್ದಾರೆ ಎಂದು ನಾನು ನಂಬುತ್ತೇನೆ.”

ಎಲ್. ಡಬ್ಲ್ಯೂ., ಒರೆಗಾನ್: “ನಾನು ಅವರಿಗೆ ಬರೆದಾಗಲೆಲ್ಲ, ಅವರು ನನಗೆ ಉತ್ತರಿಸುತ್ತಿದ್ದರು; ಅವರು ಬರೆಯಬೇಕಾಗಿಲ್ಲ ಎಂದು ನಾನು ಹೇಳಿದಾಗಲೂ, ಅವರು ಬರೆದೇ ಬರೆಯುತ್ತಿದ್ದರು. ಪ್ರಪಂಚದಾದ್ಯಂತ ಎಷ್ಟು ಜನರನ್ನು ಅವರು ಕಷ್ಟಪಟ್ಟು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು, ಅವರಿಗೆ ತಮ್ಮ ಜೀವನದ ಪ್ರತಿ ದಿನವೂ ಬರೆಯುತ್ತಿದ್ದರು, ಸಲಹೆ ನೀಡುತ್ತಿದ್ದರು ಮತ್ತು ಅವರಿಗಾಗಿ ಪ್ರಾರ್ಥಿಸುತ್ತಿದ್ದರು! ದಯಾ ಮಾ ನಿಜವಾದ ಸಂತಳು. ನಾನು ಭೇಟಿಯಾದ ಅತ್ಯಂತ ಸುಂದರವಾದ ಆತ್ಮ. ಅವರ ಉದಾಹರಣೆ ಮತ್ತು ಅವರ ಅನಿರ್ಬಂಧಿತ ಪ್ರೀತಿಯಿಂದಾಗಿ ನನ್ನ ಜೀವನವು ಬಹಳ ಬದಲಾಗಿದೆ.”

ಎನ್. ಎಸ್., ಇಂಡಿಯಾ: “ನಾನು 2001 ರಲ್ಲಿ ನನ್ನ ಸ್ವಂತ ಕಂಪನಿಯನ್ನು ಆರಂಭಿಸಿದೆ. ನಾನು ದಯಾ ಮಾತಾರವರ ಆಶೀರ್ವಾದವನ್ನು ಕೋರಿ ಅವರಿಗೆ ಪತ್ರ ಬರೆದಿದ್ದೆ, ಆದರೆ ಅವರ ಅಗಾಧವಾದ ಜವಾಬ್ದಾರಿಗಳು ಮತ್ತು ಕೆಲಸದ ಬಗ್ಗೆ ತಿಳಿದಿದ್ದ ನಾನು ನಿಜವಾಗಿಯೂ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ನನ್ನ ಮಹದಾಶ್ಚರ್ಯಕ್ಕೆ, ಶೀಘ್ರದಲ್ಲೇ ಉತ್ತರ ಬಂದಿತು, ಅದರಲ್ಲಿ ಉಪಕ್ರಮಕ್ಕೆ ಪ್ರೋತ್ಸಾಹವನ್ನು ಮತ್ತು ವಿವರವಾದ ಸಲಹೆಯನ್ನು ನೀಡಿದ್ದರು. ಅದರ ಮನೋಭಾವವು, ಅವರು ನನ್ನನ್ನು ಬಹಳ ವರ್ಷಗಳಿಂದ ಅರಿತಿದ್ದರೋ ಎಂಬಂತೆ, ಸೌಹಾರ್ದಯುತವಾಗಿತ್ತು ಮತ್ತು ಆತ್ಮೀಯವಾಗಿತ್ತು, ಆದರೆ ವಾಸ್ತವದಲ್ಲಿ ನಾವು ಯಾವತ್ತೂ ಭೇಟಿಯಾಗಿರಲಿಲ್ಲ.

“ಇದು ನಿಜವಾಗಿಯೂ, ನನ್ನ ಅದೃಷ್ಟದ ತಾಯಿತಿಯಾಗಿದೆ — ನಾನು, ಮಾ ಅವರ ಪತ್ರವನ್ನು ಫ್ರೇಮ್ ಮಾಡಿ, ಇಷ್ಟು ವರ್ಷಗಳಿಂದ ನನ್ನ ಆಫೀಸ್‌ ಕೋಣೆಯಲ್ಲಿ ಇರಿಸಿದ್ದೇನೆ. ಅವರ ಪತ್ರ ಬಂದಾಗ ನನಗೆ ಅದು ಶುಭ ಶಕುನವಾಗಿ ಕಂಡಿತು, ಬಹುಶಃ ಏಕೆಂದರೆ, ಅದು ಅನಿರೀಕ್ಷಿತವಾಗಿತ್ತು. ಕಾರ್ಪೊರೇಟ್ ‘ಕಾಡಿನಲ್ಲಿ’ ಇರುವ ನನ್ನಂಥವರಿಗೆ ಮಾ ಅವರ ನಿಷ್ಕಳಂಕ ಗುಣ ಮತ್ತು ಸೇವಾ ಮನೋಭಾವವು ಬೆಳಕಿನ ದಾರಿದೀಪವಾಗಿದೆ. ‘ಪ್ರೀತಿಸಿ, ಸೇವೆ ಮಾಡಿ, ಉಳಿದದ್ದನ್ನು ಭಗವಂತನಿಗೆ ಬಿಟ್ಟು ಬಿಡಿ’ ಎಂಬ ಅವರ ಧ್ಯೇಯವಾಕ್ಯವು ನನ್ನ ಉದ್ಯಮದ ಪಯಣದಲ್ಲಿ ಬಹಳ ಸ್ಫೂರ್ತಿದಾಯಕವಾಗಿದೆ. ಗುರುಗಳ ಆದರ್ಶಗಳನ್ನು ಕಳಂಕರಹಿತವಾಗಿ ಸತತ ಎಂಟು ದಶಕಗಳ ಕಾಲ ಎತ್ತಿ ಹಿಡಿದಿದ್ದಕ್ಕಾಗಿ ಅವರ ಬಗ್ಗೆ ತುಂಬಾ ಹೆಮ್ಮೆಯಿದೆ!”

ಹೆಚ್. ಎಸ್., ಕ್ಯಾಲಿಫೋರ್ನಿಯಾ: “ನಾನು ದಯಾ ಮಾತಾರವರನ್ನು ವೈಯಕ್ತಿಕವಾಗಿ ಎಂದೂ ಭೇಟಿಯಾಗಲಿಲ್ಲ, ಆದರೆ ಅವರು ದೇಹತ್ಯಾಗ ಮಾಡಿದಾಗ, ನನಗೆ ಅವರು ಚಿರಪರಿಚಿತರೇನೋ ಎಂಬಂತೆ ಅದು ನನ್ನ ಮನಸ್ಸನ್ನು ತಟ್ಟಿತು. ನನಗೆ ಅವರು ಶಕ್ತಿ ಮತ್ತು ಭದ್ರತೆಯ ಪರ್ವತವನ್ನು ಪ್ರತಿನಿಧಿಸಿದರು — ಅವರು ಇದ್ದಾರೆಂಬ ವಿಷಯವೇ ನನಗೆ ಸಾಂತ್ವನವನ್ನು ನೀಡುತ್ತಿತ್ತು…. ಅವರು ಜ್ಞಾನ, ಘನತೆ ಮತ್ತು ಪ್ರೀತಿಯ ಸಾಕಾರರೂಪವಾಗಿದ್ದರು — ಎಲ್ಲವೂ ಮಾನುಷ ರೂಪದಲ್ಲಿ.”

ಈ. ಬಿ., ಕ್ಯಾಲಿಫೋರ್ನಿಯಾ: “ನನ್ನ ಜೀವನದ ಮೇಲೆ ಅವರು ಬೀರಿದ ಪರಿಣಾಮವನ್ನು ನಾನು ಸಂಪೂರ್ಣವಾಗಿ ವಿವರಿಸಲಾರೆ: ಅವರು ನನಗೆ ಸ್ತ್ರೀತ್ವದ ದಿವ್ಯ ಸೌಂದರ್ಯ ಮತ್ತು ಪ್ರೇಮದ ಮಾದರಿಯಾಗಿದ್ದರು.”

ಆರ್.ಕೆ., ಜರ್ಮನಿ: “ಪ್ರೀತಿಯ ಶ್ರೀ ದಯಾ ಮಾ….ಅನೇಕ ವರ್ಷಗಳಿಂದ ಬಂದ ನಿಮ್ಮ ಪತ್ರಗಳಿಗೆ ನಾನು ಬಹಳ ಕೃತಜ್ಞನಾಗಿದ್ದೇನೆ. ಗುರೂಜಿ ಮತ್ತು ನೀವು ನನ್ನ ಜೀವನವನ್ನು ಬದಲಿಸಿರುವಿರಿ. ನಿಮ್ಮ ಸಲಹೆ, ಅನಿರ್ಬಂಧಿತ ಪ್ರೇಮ ಮತ್ತು ನಿರಂತರ ಆಶೀರ್ವಾದಗಳು ನನಗೆ ಸದಾ ನೆರವಾಗಿವೆ. ಓ ಮಾ, ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ನಿಮ್ಮ ಆಶೀರ್ವಾದಕ್ಕಾಗಿ ನಾನು ಈಗಲೂ ನನ್ನ ಹೃದಯ, ಮನಸ್ಸು ಮತ್ತು ಆತ್ಮವನ್ನು ತೆರೆದಿಡುತ್ತೇನೆ. ನಿಮ್ಮ ಪವಿತ್ರ ಪುಸ್ತಕ ಎಂಟರ್ ದಿ ಕ್ವಯಟ್‌ ಹಾರ್ಟ್ ನನ್ನ ದೈನಂದಿನ ಬೈಬಲ್ ಆಗಿದೆ!”

ಜಿ. ಟಿ., ಕ್ಯಾಲಿಫೋರ್ನಿಯಾ: “1970 ರ ದಶಕದ ಉತ್ತರಾರ್ಧದಲ್ಲಿ, ಘಟಿಕೋತ್ಸವದ ನಂತರ ಶ್ರೀ ದಯಾ ಮಾತಾ, ಭಕ್ತರಿಗೆ ನೀಡಿದ ಸತ್ಸಂಗದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ದೊರಕಿತು. ಅವರ ಉಪನ್ಯಾಸದ ನಂತರ ಭಕ್ತರು ಪ್ರಾರ್ಥನಾ ಮಂದಿರದಿಂದ ಹೊರಡುವಾಗ ಅವರು ಪ್ರತಿಯೊಬ್ಬ ಭಕ್ತರನ್ನೂ ಆಶೀರ್ವದಿಸಿದರು. ನಾನು ಅವರಿಗೆ ನಮಸ್ಕರಿಸುತ್ತ, ಅವರ ಕಣ್ಣುಗಳಲ್ಲಿ ನೋಡಿದೆ. ಅದು ಅನಂತತೆಯೊಳಗೆ, ಭಗವಂತನ ಕಣ್ಣಿನೊಳಗೆ ನೋಡುವಂತಿತ್ತು. ಅವು ಅಂತ್ಯವಿಲ್ಲದ ಆಳವಾಗಿದ್ದವು. ಇದನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅವರು ಮುಗುಳ್ನಕ್ಕು ನನ್ನನ್ನು ಮದರ್ ಸೆಂಟರ್‌ಗೆ ಸ್ವಾಗತಿಸಿದರು ಮತ್ತು ನಾನು ದಿಗ್ಭ್ರಮೆಯಲ್ಲಿ ಪ್ರಾರ್ಥನಾ ಮಂದಿರವನ್ನು ಬಿಟ್ಟು ಹೊರಟೆ. ಈ ಅನುಭವವನ್ನು ನಾನೆಂದೂ ಮರೆತಿಲ್ಲ….

“ನಮ್ಮಲ್ಲಿ ಯಾರಿಗೆ ಗುರುಗಳ ಪರಿಚಯವಿರಲಿಲ್ಲವೋ ಅವರಿಗೆ, ಆಕೆಯು ಗುರು ಕಲಿಸಿದ ಎಲ್ಲದಕ್ಕೂ ಜೀವಂತ ಉದಾಹರಣೆಯಾಗಿದ್ದರು.”

ಜಿ. ಎಚ್., ಕ್ಯಾಲಿಫೋರ್ನಿಯಾ: “ಅನೇಕ ವರ್ಷಗಳ ಹಿಂದೆ, ಮದರ್ ಸೆಂಟರ್‌ನಲ್ಲಿ ಶ್ರೀ ದಯಾ ಮಾತಾರವರನ್ನು ಭೇಟಿಯಾಗಲು ಭಕ್ತರ ಒಂದು ತಂಡದೊಂದಿಗೆ ಹೋಗಲು ನನಗೆ ಆಹ್ವಾನ ಬಂದಿತ್ತು. ನಮಗೆ ಅವರು ಗ್ರಂಥಾಲಯದಲ್ಲಿ ಅನೌಪಚಾರಿಕ ಸತ್ಸಂಗವನ್ನು ನೀಡಿದರು. ನಾನು ದಯಾ ಮಾತಾರವರ ಕಣ್ಣುಗಳಿಂದ ಸಂಪೂರ್ಣವಾಗಿ ಸ್ತಂಭಿತನಾದೆ. ನಾನು ‘ಸಾಗರದಾಳದ ನೋಟ’ ಎಂಬ ಪದಗುಚ್ಛವನ್ನು ಕೇಳಿದ್ದೆ, ಆದರೆ ನಾನು ಹಿಂದೆಂದೂ ಯಾರ ಕಣ್ಣುಗಳಲ್ಲೂ ಅಂತಹ ಅತ್ಯಮೋಘ ಆಳ, ಶಕ್ತಿ ಮತ್ತು ಸೌಂದರ್ಯವನ್ನು ನೋಡಿರಲಿಲ್ಲ. ನಮ್ಮ ಪ್ರೀತಿಯ ಮಾ ಈ ಭೂಮಿಯ ಮೇಲೆ ನಡೆದಾಡಿದ ಸಮಯದಲ್ಲೇ ನಾನೂ ಇದ್ದುದಕ್ಕಾಗಿ ನನಗೆ ಹೆಮ್ಮೆಯೆನಿಸುತ್ತದೆ.”

ಎಂ. ಪಿ., ನೆವಾಡಾ: “ದಯಾ ಮಾ ನನ್ನ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದನ್ನು ವಿವರಿಸಲು ನನಗೆ ಸಾಧ್ಯವೇ ಇಲ್ಲ. ಸುಮಾರು ಹದಿನೈದು ವರ್ಷಗಳಿಂದ, ಅವರ ಪ್ರವಚನಗಳನ್ನು ಕೇಳುವುದು ಅಥವಾ ಅವರ ಬರಹಗಳನ್ನು ಓದುವುದು ನನ್ನ ದಿನಚರಿಯ ಭಾಗವಾಗಿದೆ ಮತ್ತು ಅವು ನಿಜವಾಗಿಯೂ ನನ್ನ ಜೀವನವನ್ನು ರೂಪಿಸಿವೆ. ಅವರು ತಪ್ಪದೆ ನನ್ನನ್ನು ಉತ್ಸಾಹ ಮತ್ತು ಆಧ್ಯಾತ್ಮಿಕ ಸಂಕಲ್ಪ ಮತ್ತು ಭಗವಂತನ ಹಂಬಲದ ಉತ್ಕಟ ಭಾವದಲ್ಲಿರಿಸಿದ್ದರು. ಆದರೆ ಎಲ್ಲಕ್ಕಿಂತ ಮಿಗಿಲಾಗಿ ದಿವ್ಯ ಪ್ರಿಯತಮೆಯೊಂದಿಗೆ ಬಹಳ ಆತ್ಮೀಯವಾದ, ಮಧುರವಾದ, ಪ್ರೀತಿಯ, ವಿಶ್ವಾಸಾತ್ಮಕ ಮತ್ತು ಭಾವಪರವಶ ಸ್ನೇಹವನ್ನು ಬೆಳೆಸಿಕೊಳ್ಳಲು ಅವರು ನನಗೆ ನೆರವಾಗಿದ್ದಾರೆ.

“ನನ್ನ ಧ್ಯಾನಗಳನ್ನು ಸಂಸರ್ಗದ ನೈಜ ಸಮಯಗಳನ್ನಾಗಿ ಪರಿವರ್ತಿಸಲು ದಯಾ ಮಾ ನನಗೆ ಸಹಾಯ ಮಾಡಿದರು. ಮತ್ತು ನನ್ನ ಕರ್ತವ್ಯಗಳನ್ನು ನನ್ನ ಭಗವಂತನ ಸಾನ್ನಿಧ್ಯದಲ್ಲಿ ಪ್ರೀತಿಯ ಕಾರ್ಯಗಳನ್ನಾಗಿ ಪರಿವರ್ತಿಸಲು ಅವರು ನನಗೆ ನೆರವಾದರು. ಶಿಷ್ಯನಾಗುವುದರ ಅರ್ಥವೇನು, ಸ್ನೇಹಿತನಾಗುವುದರ ಅರ್ಥವೇನು, ವಿನಮ್ರ ಸೇವಕನಾಗಿರುವುದರ ಅರ್ಥವೇನು, ಮುಖ್ಯಸ್ಥನಾಗಿರುವುದರ ಅರ್ಥವೇನೆಂದು ಮಾ ನನಗೆ ತೋರಿಸಿದರು — ಆದರೆ ಎಲ್ಲಕ್ಕಿಂತ ಮಿಗಿಲಾಗಿ ಅವರು ಪ್ರೇಮಿಯಾಗುವುದರ ಅರ್ಥವನ್ನು ನನಗೆ ತೋರಿಸಿದರು. ಭಗವಂತನ ಮೇಲಿನ ಭಕ್ತಿಯ ದ್ರಾಕ್ಷಾರಸವನ್ನು ಕುಡಿದ ಪ್ರೇಮಿ.”

ಅನಾಮಧೇಯ, ಮೇರಿಲ್ಯಾಂಡ್: “ಅವರ ಉಪಸ್ಥಿತಿ, ಸಾಧನೆಗಳು, ಮಾದರಿ, ಅನೇಕ ತಲೆಮಾರುಗಳವರೆಗೆ ನಕ್ಷತ್ರದಂತೆ ಹೊಳೆಯುತ್ತವೆ. ಭಾರತದ ಅತ್ಯಂತ ಶ್ರೇಷ್ಠರು ಶ್ರೀ ಶ್ರೀ ದಯಾ ಮಾತಾರವರ ರೂಪದಲ್ಲಿ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದರು.”

ಎಸ್. ಎಲ್., ಟೆಕ್ಸಾಸ್: “ಅವರ ಜೀವನಗಾಥೆಯು ನನಗೆ ಗ್ರಂಥಗಳಷ್ಟನ್ನು ಹೇಳಿದೆ. ಗುರುವಿನೆಡೆಗೆ ಅವರ ಭಕ್ತಿಯು ದೃಢನಿಷ್ಠೆಯದಾಗಿತ್ತು ಮತ್ತು ಎಸ್‌ಆರ್‌ಎಫ್‌ನ ಅವರ ನಾಯಕತ್ವ ಅದ್ಭುತವಾಗಿತ್ತು. ಭಗವಂತನೊಂದಿಗೆ ಆಳವಾದ ಸಂಸರ್ಗವನ್ನು ಅಭ್ಯಾಸ ಮಾಡುವ ಮೂಲಕ ಆಧ್ಯಾತ್ಮಿಕ ಜೀವನವನ್ನು ಹೇಗೆ ಬದುಕಬೇಕು ಎಂಬುದಕ್ಕೆ ಅವರು ನನಗೆ ನಿರಂತರ ಸ್ಫೂರ್ತಿ ನೀಡಿದರು. ನನ್ನ ಇಡೀ ಜೀವನದಲ್ಲಿ ಅವರು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಮತ್ತು ಬೀರುತ್ತಿರುತ್ತಾರೆ ಎಂಬುದನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ.”

ಅನಾಮಧೇಯ, ಸ್ಪೇನ್: “ಶ್ರೀ ದಯಾ ಮಾತಾರವರು, ಬೆಳಕು, ಸರ್ವ ಪ್ರೀತಿ ಮತ್ತು ಒಳ್ಳೆಯತನದ ವ್ಯಕ್ತಿ ಎಂದು ಅವರನ್ನು ಕೇವಲ ನೋಡುವುದರಿಂದಲೇ ನಿಮಗೆ ಯಾವುದೇ ಸಂದೇಹವಿಲ್ಲದೆ ತಿಳಿಯುತ್ತದೆ. ನಮ್ಮ ಕುಟುಂಬಕ್ಕೆ, ಶ್ರೀ ದಯಾ ಮಾತಾರವರು ಸ್ಫೂರ್ತಿಯ ಅಕ್ಷಯ ಆಕರವಾಗಿದ್ದಾರೆ ಮತ್ತು ಪರಮಹಂಸ ಯೋಗಾನಂದರ ನಿಜವಾದ ಶಿಷ್ಯ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.”

ಪಿ. ಡಿ., ಕ್ಯಾಲಿಫೋರ್ನಿಯಾ: “ನಾನು ಮಾ ಬಗ್ಗೆ ಯೋಚಿಸಿದಾಗಲೆಲ್ಲ ಪ್ರೀತಿಯನ್ನು ಅನುಭವಿಸುತ್ತೇನೆ.”

ಎಚ್. ಡಬ್ಲೂ., ಆಸ್ಟ್ರೇಲಿಯಾ: “ವಿಶಾಲವಾದ ಪೆಸಿಫಿಕ್ ಸಾಗರವು ಶ್ರೀ ದಯಾ ಮಾತಾರವರ ಅತ್ಯಾಕರ್ಷಕ ಉಪಸ್ಥಿತಿಯಿಂದ ನನ್ನನ್ನು ಇನ್ನು ಮುಂದೆ ಪ್ರತ್ಯೇಕಿಸುವುದಿಲ್ಲ. ನಮ್ಮ ಪ್ರೀತಿಯ ಅಧ್ಯಕ್ಷೆ, ಮುಖ್ಯಸ್ಥೆ, ಶಿಕ್ಷಕಿ, ಸ್ನೇಹಿತೆ ತಮ್ಮ ಗುರುವಿನ ಬಳಿಗೆ ಹೋಗಿದ್ದಾರೆ, ಬೆಳಕಿನ ಲೋಕಕ್ಕೆ. ಪರಮಾನಂದದ ಅಲೆಗಳು ಅವರ ಅಪ್ಯಾಯಮಾನವಾದ ಆನಂದದಿಂದ ನಮ್ಮ ಹೃದಯವನ್ನು ಪರಿಶುದ್ಧಗೊಳಿಸುತ್ತವೆ. ನಾವು ದಡದಲ್ಲಿ ಉಳಿದಿದ್ದರೂ, ನಾವು ಅನಾಥರೂ ಅಲ್ಲ, ಅವರು ಗುರುವಿನೊಂದಿಗಿರುವರೆಂದು ದುಃಖಿಸುವ ಅಗತ್ಯವೂ ಇಲ್ಲ. ಗುರು ಮತ್ತು ಶಿಷ್ಯೆ — ಅವರ ಪ್ರೀತಿಯ ಕಿರಣಗಳು ಪ್ರಪಂಚದಾದ್ಯಂತ ತಲುಪುತ್ತವೆ. ಕರುಣಾಮಯಿ ಮಾ, ನಿಮ್ಮ ಘನತೆವೆತ್ತ ಜೀವನಕ್ಕೆ ಧನ್ಯವಾದಗಳು.”

ಎನ್.ಆರ್., ಕೆನಡಾ: “ಭೂಮಿಯಲ್ಲಿರಲಿ ಅಥವಾ ಸ್ವರ್ಗದಲ್ಲಿರಲಿ, ಶ್ರೀ ದಯಾ ಮಾತಾ, ನನ್ನ ಮುಂದಿನ ಹಾದಿಯನ್ನು ಬೆಳಗುತ್ತಾರೆ.”

 

ಇದನ್ನು ಹಂಚಿಕೊಳ್ಳಿ