ಸ್ವಾಮಿ ಚಿದಾನಂದ ಗಿರಿಯವರ 2018ರ ಕ್ರಿಸ್ಮಸ್ ಸಂದೇಶ

20 ಡಿಸೆಂಬರ್, 2018

ನಿಮಗೆ ಹಾಗೂ ಜಗತ್ತಿನಾದ್ಯಂತ ಪರಮಹಂಸ ಯೋಗಾನಂದರ ಆಧ್ಯಾತ್ಮ ಕುಟುಂಬ ಮತ್ತು ಸ್ನೇಹಿತರಿಗೆ, ಪ್ರೀತಿಯ ಕ್ರಿಸ್ಮಸ್‌ ಶುಭಾಶಯಗಳು. ಈ ಒಂದು ಪವಿತ್ರ ಸಮಯದಲ್ಲಿ ಏಸು ಹಾಗೂ ಭಗವಂತನೊಂದಿಗೆ ಒಂದಾದ ಆತ್ಮಗಳಲ್ಲಿ ಹುಟ್ಟಿದ ವಿಶ್ವಾತ್ಮಕ ಕ್ರಿಸ್ತ ಪ್ರಜ್ಞೆಯು, ನಿಮ್ಮದೇ ಸ್ವಯಂ ಭಕ್ತಿಪ್ರೇರಿತ ಪ್ರಜ್ಞೆಯ ಒಳಗೆ ತೆರೆದುಕೊಳ್ಳಲಿ. ಆಧ್ಯಾತ್ಮಿಕ ಕ್ರಿಸ್ಮಸ್‌ ಕೇವಲ ಹೊರಗಿನ ಆಚರಣೆಗಿಂತ ಮಿಗಿಲಾದುದು; ಇದೊಂದು ಭರವಸೆ ಹಾಗೂ ಹೊಸ ಆರಂಭಗಳ ಸಮಯವಾಗಿದ್ದು, ಸ್ವರ್ಗೀಯ ಸಾಮ್ರಾಜ್ಯಗಳಿಂದ ಬೆಳಕು ಹಾಗೂ ಆನಂದಗಳು, ಗ್ರಹಣಶೀಲ ಹೃದಯಗಳಲ್ಲಿ ಪ್ರತ್ಯಕ್ಷವಾಗಿ ಹರಿಯುವುದು. ಅದು ಒಂದು ಅದ್ಭುತ ಅವಕಾಶದ ಭಾವವನ್ನು- ಭಗವಂತನೊಡನೆ ನಾವು ತಾದಾತ್ಮ್ಯ ಗೊಳ್ಳಲು ಆಸಕ್ತಿ ಮತ್ತು ಉತ್ಸಾಹವನ್ನು ತರುತ್ತದೆ. ಅದು ನಮ್ಮಲ್ಲಿರುವ ಮುಗ್ಧ ಕ್ರಿಸ್ತನ ದಿವ್ಯ ದೂತರಾದ, ಹೃದಯ ವೈಶಾಲ್ಯತೆ, ಉದಾರತೆ ಹಾಗೂ ಒಳ್ಳೆಯತನ ಮತ್ತು ಸಹಾಯಕತೆಗಳನ್ನು ಸಚೇತನಗೊಳಿಸುತ್ತದೆ. ಆ ಒಂದು ನಿಜವಾದ ಕ್ರಿಸ್ಮಸ್‌ನ ಚೇತನವು ಮಾನವ ಜನಾಂಗದಲ್ಲೆಲ್ಲಾ, ಈ ಭೂಮಿಯ ಮೇಲೆ ಕೇವಲ ಶಾಂತಿಯ ಭರವಸೆಯನ್ನಷ್ಟೇ ಅಲ್ಲದೆ, ಎಲ್ಲರಲ್ಲೂ ಸದ್ಭಾವನೆಯ ಸಕ್ರಿಯ ಪ್ರಜ್ಞೆಯನ್ನೂ ಪುನಶ್ಚೇತನಗೊಳಿಸಲಿ.

ಪೂಜ್ಯ ಪ್ರಭು ಏಸು ಮತ್ತು ನಮ್ಮೆಲ್ಲ ಗುರಗಳು ಈ ಭೂಮಿಯಲ್ಲಿ ಅವತರಿಸಿರುವುದು, ಒಂದು ತಲುಪಲಾರದ ಗುರಿಯನ್ನು ನಮ್ಮ ಮುಂದೆ ಇಡುವುದಕ್ಕಲ್ಲ, ಬದಲಾಗಿ ನಮ್ಮ ಆತ್ಮದ ಅಪರಿಮಿತ ಸಾಮರ್ಥ್ಯವನ್ನು ಜಾಗೃತಗೊಳಿಸುವುದಕ್ಕಾಗಿ — ವಿಶ್ವವನ್ನೇ ಪೋಷಿಸುವ, ಕ್ರಿಸ್ತಪ್ರಜ್ಞೆ (ಕೂಟಸ್ಥ ಚೈತನ್ಯ) ಯು ನಮ್ಮೊಳಗೆ ಸುಪ್ತವಾಗಿದೆ ಎಂದು ತೋರಿಸುವುದಕ್ಕಾಗಿ. ಈ ಸಮಯವು ಅದರ ಅಂತಸ್ಥ ಶಕ್ತಿ ಮತ್ತು ಪ್ರಕಾಶಗಳು ಭಗವಂತನ ಅನುಗ್ರಹದ ಉಡುಗೊರೆ ಎಂಬುದನ್ನು ಕಂಡುಕೊಳ್ಳುವ ಸಮಯವಾಗಲಿ. ಏಸುವು ಉದಾಹರಣೆಯಾಗಿ ತೋರಿಸಿದ ಕ್ರಿಸ್ತನ ಸರ್ವವ್ಯಾಪಕತೆಯ ಮೇಲೆ ನೆಲೆಸುವ ಮೂಲಕ ನಿಮ್ಮ ತೆರೆಯುತ್ತಿರುವ ಮನಸ್ಸು ಹಾಗೂ ಹೃದಯಗಳ ದಿಗಂತಗಳನ್ನು ವಿಸ್ತರಿಸಿ. ಅವರು ಧಾರ್ಮಿಕ ಮತ್ತು ಸಾಮಾಜಿಕ ಗಡಿಗಳನ್ನು ಲೆಕ್ಕಿಸದೆ ಎಲ್ಲರಲ್ಲೂ ದೈವತ್ವವನ್ನು ಕಂಡರು. ತನ್ನ ಸಹಾನುಭೂತಿಯಿಂದಾಗಿ ತಪ್ಪು ಮಾಡಿದವರಿಗೂ ನೆರವಾಗುತ್ತಿದ್ದನು ಮತ್ತು ತನ್ನ ಶತ್ರುಗಳಾಗಿದ್ದವರನ್ನೂ ಕ್ಷಮಿಸುತ್ತಿದ್ದನು. ಅವನ ಹೃದಯದಲ್ಲಿ ಶತ್ರುತ್ವಕ್ಕೆ ಯಾವುದೇ ಜಾಗವಿರಲಿಲ್ಲ. ಅದು ಭಗವಂತನ ಎಲ್ಲ ಮಕ್ಕಳನ್ನೂ ಆವರಿಸಿತ್ತು. ಮತ್ತು ನೀವು ಸಹ ನಿಮ್ಮ ಕಾಳಜಿಯ ವಲಯವನ್ನು ವಿಸ್ತರಿಸಿಕೊಳ್ಳಬಲ್ಲಿರಿ. ಅದರಿಂದಾಗಿ ದಿನದಿಂದ ದಿನಕ್ಕೆ ಶಾಂತಿ, ಸಾಮರಸ್ಯ ಮತ್ತು ತಿಳಿವಳಿಕೆಯನ್ನು ಒಳಗೂ ಹೊರಗೂ ಸೃಷ್ಟಿಸಬಹುದು. ಈ ಕ್ರಿಸ್ಮಸ್‌ ಅನ್ನು ಪ್ರಾರಂಭಿಸಿ. ಇತರರನ್ನು ತಲುಪಲು ಇದೊಂದು ವಿಶೇಷ ಸಮಯವಾಗಲಿ — ಕೇವಲ ಭೌತಿಕ ವಸ್ತುಗಳ ಉಡುಗೊರೆಗಳಿಂದಲ್ಲ, ಆದರೆ ಉದಾತ್ತ ಹೃದಯದ ಉಡುಗೊರೆಗಳಿಂದ: ನಿಮ್ಮ ಸಮಯ ಮತ್ತು ಲಕ್ಷ್ಯಗಳ ಉಡುಗೊರೆಗಳಿಂದ, ಕ್ಷಮೆ ಮತ್ತು ತಿಳಿವಳಿಕೆಯ ಉಡುಗೊರೆಗಳಿಂದ. ನಮ್ಮ ಗುರುಗಳು ಹೇಳಿರುವಂತೆ, “ಯಾವುದೇ ಸ್ವಾರ್ಥ ಉದ್ದೇಶವಿಲ್ಲದೆ ಬೇರೆ ಯಾರಿಗಾದರೂ ಏನನ್ನಾದರೂ ಮಾಡಿದಾಗ ನೀವು ಕ್ರಿಸ್ತಪ್ರಜ್ಞೆಯ ಗೋಳದೊಳಗೆ ಹೆಜ್ಜೆ ಇಟ್ಟಂತಾಗುತ್ತದೆ.”

ನಮ್ಮ ಸ್ವಂತ ಅಗತ್ಯಗಳು ಮತ್ತು ಬಯಕೆಗಳನ್ನು ಮೀರಿ ನಮ್ಮ ಪ್ರಜ್ಞೆಯನ್ನು ವಿಸ್ತರಿಸಲು ಅತ್ಯಂತ ಆಳವಾದ ಪ್ರೇರಣೆಯು, ಭಗವಂತನ ಅನಂತ ಪ್ರೇಮದಿಂದ ಸಹಜವಾಗಿಯೇ ತುಂಬಿ ಹರಿಯುತ್ತಿರುವ ಹೃದಯದಿಂದ ಬರುತ್ತದೆ. ಏಸುವಿನ ಜೀವನದಲ್ಲಿ ವ್ಯಾಪಿಸಿದ ಕ್ರಿಸ್ತಪ್ರೇಮವು ಆ ಅಕ್ಷಯವಾದ ಮೂಲದಿಂದಲೇ ಬಂದಿತು. ಅದರಿಂದಾಗಿಯೇ ಪರಮಹಂಸಜಿಯವರು ನಮಗೆ, ಈ ಪವಿತ್ರ ಋತುವಿನಲ್ಲಿ ಹೆಚ್ಚು ದೀರ್ಘವಾಗಿ ಹಾಗೂ ಆಳವಾಗಿ ಧ್ಯಾನ ಮಾಡಲು ಸಮಯವನ್ನು ಹೊಂದಿಸಿಕೊಳ್ಳುವಂತೆ ಒತ್ತಾಯಿಸಿರುವರು. ನಿಮ್ಮ ಆತ್ಮದೊಳಗಿನ ಗೋಡೆಗಳಿಲ್ಲದ ಮಂದಿರದ ಪವಿತ್ರ ಮೌನದಲ್ಲಿ ಭಗವಂತನು ಆನಂದ, ಶಾಂತಿ ಮತ್ತು ಅಪರಿಮಿತ ಪ್ರೇಮವಾಗಿ ನಿಮ್ಮಲ್ಲಿಗೆ ಬರುತ್ತಾನೆ; ಮತ್ತು ಎಲ್ಲವನ್ನು ಒಳಗೊಂಡಿರುವ ಅವನ ಪ್ರಜ್ಞೆಯ ಸ್ಪರ್ಶದಿಂದ, ಅಗಲಿಕೆಯ ಅಡೆತಡೆಗಳು ಕರಗಿಹೋಗಿ, ಅವನ ಮತ್ತು ಇತರ ಆತ್ಮಗಳ ಜೊತೆಯಲ್ಲಿರುವ ನಿಮ್ಮ ಶಾಶ್ವತ ಬಂಧವು ಕಾಣಿಸಿಕೊಳ್ಳುವುದನ್ನು ಅನುಭವಿಸುವಿರಿ. ಆ ಆಂತರಿಕ ಜಾಗೃತಿಯಿಂದ ಪ್ರತಿಯೊಂದು ಆತ್ಮವೂ, ಸ್ವಲ್ಪ ಮಾತ್ರವೇ ಜ್ಞಾನೋದಯ ಹೊಂದಿದ್ದರೂ ಸಹ, ಸಹಜವಾಗಿಯೇ ಸಾಮರಸ್ಯ ಜಗತ್ತಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ನಮ್ಮ ಗುರುಗಳ ಸ್ವಂತ ನುಡಿಗಳಿಂದಲೇ ಅವರ ಪ್ರೇಮಪೂರ್ವಕ ಆಶೀರ್ವಾದವನ್ನು ಸ್ವೀಕರಿಸಿ: “ಹರ್ಷೋಲ್ಲಾಸದ ಕ್ರಿಸ್ಮಸ್‌ ನಿಮ್ಮದಾಗಲಿ. ಮತ್ತು ಯಾರೇ ಆದರೂ ನಿಮಗಾಗಿ ಬಯಸುವ ಅತ್ಯಂತ ಶ್ರೇಷ್ಠ ಉಡುಗೊರೆ ನಿಮಗೆ ದೊರೆಯುವಂತಾಗಲಿ — ಆ ಉಡುಗೊರೆಯೆಂದರೆ, ನಿಮ್ಮ ಹೃದಯದಲ್ಲಿ ಕ್ರಿಸ್ತ ಚೈತನ್ಯದ ಗ್ರಹಿಕೆ. ಅವನ ಇರುವಿಕೆಯನ್ನು ನೀವು ಕ್ರಿಸ್ಮಸ್‌ ದಿನ ಹಾಗೂ ಹೊಸವರ್ಷವಿಡೀ ಪ್ರತಿದಿನವೂ ಅನುಭವಿಸುವಂತಾಗಲಿ. ಬೆಳಕಿನ ಅದ್ಭುತ ಉಡುಗೊರೆ ಸ್ವೀಕರಿಸಲು ನಿಮ್ಮ ಹೃದಯವನ್ನು ತೆರೆದಿಡಿ.”

ಆನಂದದಾಯಕ ಕ್ರಿಸ್ಮಸ್‌ ನಿಮಗೆ ಮತ್ತು ನಿಮ್ಮೆಲ್ಲ ಆತ್ಮೀಯರಿಗೆ,

ಸ್ವಾಮಿ ಚಿದಾನಂದ ಗಿರಿ

ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖಂಡರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್

ಇದನ್ನು ಹಂಚಿಕೊಳ್ಳಿ