ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರಿಂದ ಒಂದು ಸಂದೇಶ

10 ನವೆಂಬರ್‌, 2021

ಪ್ರೀತಿಪಾತ್ರರೇ:

ಪರಮಹಂಸ ಯೋಗಾನಂದರ ಅನುಯಾಯಿಗಳು ಮತ್ತು ಸ್ನೇಹಿತರ ನಮ್ಮ ಪ್ರೀತಿಯ ಆಧ್ಯಾತ್ಮಿಕ ಪರಿವಾರಕ್ಕೆ ಪ್ರೇಮಪೂರ್ಣ ಶುಭಾಶಯಗಳು! ನಮ್ಮ ಗುರುಗಳ ಯೋಗಿಯ ಆತ್ಮಕಥೆಯ ಈ 75ನೇ ವಾರ್ಷಿಕೋತ್ಸವದಂದು, ಈ ವಿಸ್ಮಯಕರ ಪುಸ್ತಕವು ನನ್ನ ಜೀವನದಲ್ಲಿ ಮತ್ತು ಜಗತ್ತಿನಾದ್ಯಂತ ಅಸಂಖ್ಯಾತರ ಜೀವನದಲ್ಲಿ ತಂದ ಆಜೀವ ಪರ್ಯಂತದ ಅನುಗ್ರಹಗಳಿಗೆ ನನ್ನ ಹೃದಯವು ಕೃತಜ್ಞಾರ್ಪಣೆಯಿಂದ ಉಕ್ಕಿ ಹರಿಯುತ್ತದೆ. ನಿಮ್ಮಲ್ಲಿ ಅನೇಕರಿಗಾದಂತೆಯೇ, ನನ್ನನ್ನು ಕೂಡ ಆತ್ಮಕಥೆಯು ಪರಮಹಂಸ ಯೋಗಾನಂದರ ಕ್ರಿಯಾ ಯೋಗದ ಬೋಧನೆಗಳಿಗೆ ಮೊದಲು ಪರಿಚಯಿಸಿತು. ಈ ಎಲ್ಲ ವರ್ಷಗಳ ನಂತರ ಹಿಂತಿರುಗಿ ನೋಡುತ್ತ, ಲೇಖಕರ ಮತ್ತು ಅವರ ಗುರು ಪರಂಪರೆಯ ಭಗವತ್‌-ಪೂರಿತ ಪ್ರಜ್ಞೆಯಿಂದ ನೇರವಾಗಿ ನನ್ನ ಹೃದಯ ಮತ್ತು ಮಿದುಳಿಗೆ ಪುಟಗಳಿಂದ ಹರಿದು ಬರುವಂತೆ ಕಂಡ “ಕನಸಿನಲ್ಲೂ ಕಾಣದಂತಹ ಸಾಧ್ಯತೆಗಳ” ಬಗ್ಗೆ ನನ್ನ ಆತ್ಮದ ಜಾಗೃತಿಯ ರೋಮಾಂಚನವನ್ನು ನಾನು ನೆನಪಿಸಿಕೊಳ್ಳುತ್ತೇನೆ.

ಆ ಮೊದಲ ಓದಿನಿಂದ ಆರಂಭವಾದ ಅಸಂಖ್ಯಾತ ಬದುಕು-ಬದಲಾಯಿಸುವ ಪರಿಣಾಮಗಳಲ್ಲಿ, ಖಂಡಿತವಾಗಿಯೂ ಅತ್ಯಂತ ಹೃದಯಸ್ಪರ್ಶಿಯಾದದ್ದೆಂದರೆ, ಇದೇ ರೀತಿಯಲ್ಲಿ ಪರಿವರ್ತನೆಗೊಂಡ ಜಗದಾದ್ಯಂತದ ಸಾವಿರಾರು ಜನರೊಡನೆಯ – ನಿಮ್ಮೆಲ್ಲರೊಡನೆಯ – ಸತ್ಸಂಗದ ಆನಂದ! (ದಿವ್ಯ ಸಹಭಾಗಿತ್ವ) ಈ ಮಾರ್ಗದ ಭಕ್ತಾದಿಗಳನ್ನು ಭೇಟಿ ಮಾಡುವ ಪ್ರತಿಯೊಂದು ಸುವರ್ಣಾವಕಾಶದಲ್ಲೂ, ಈ ಪುಸ್ತಕದ ಮೂಲಕ ಹಾಗೂ ಆ ಪ್ರಥಮ ಪರಿಚಯದ ನಂತರ ನಾವು ಕಂಡುಕೊಳ್ಳುವ ಕೊನೆಯಿಲ್ಲದ ಸ್ಫೂರ್ತಿ ಮತ್ತು ಬೋಧನೆಯ — ದಿವ್ಯ ಮೂಲದಿಂದ ಅವರ ಮೂಲಕ ವರ್ಷಿಸಿದ ಸಾವಿರಾರು ಪುಟಗಳ ಉಪನ್ಯಾಸಗಳು ಮತ್ತು ಬರಹಗಳು ಹಾಗೂ ಅವರ ಎಸ್‌ಆರ್‌ಎಫ್‌/ವೈಎಸ್‌ಎಸ್‌ ಪಾಠಗಳ ಮೂಲಕ ಬೋಧಿಸಿದ ಕ್ರಿಯಾ ಯೋಗ ವಿಜ್ಞಾನದ ಮುಕ್ತಿದಾಯಕ ತಂತ್ರಗಳು — ಇವುಗಳ ಹರಿವಿನ ಮೂಲಕ ಅಸಂಖ್ಯಾತ ಜನರ ಜೀವನದಲ್ಲಿ ಗುರುಗಳು ತಂದು ಕೊಟ್ಟಂತಹ ಶಕ್ತಿಯಿಂದ ನಾನು ಪುನಃ ಪುನಃ ವಿಸ್ಮಯಗೊಳ್ಳುತ್ತೇನೆ. ಇದನ್ನು ಕಾಣಲು, ಒಬ್ಬರು ಕ್ರಿಯಾ ಯೋಗ ಮಾರ್ಗದ ನಿಷ್ಠಾವಂತ ಭಕ್ತಾದಿಗಳ ಕಣ್ಣುಗಳು ಮತ್ತು ಮುಖಗಳತ್ತ ನೋಡಿದರೆ ಸಾಕು — ಯಾರು ಧ್ಯಾನವನ್ನು ಅಭ್ಯಾಸ ಮಾಡುತ್ತಾರೋ ಅವರನ್ನು; ಯಾರು ಬೋಧನೆಗಳ ಸೈದ್ಧಾಂತಿಕ ಅಥವಾ ಸ್ಫೂರ್ತಿದಾಯಕ ಮಾರ್ಗಗಳಿಂದಾಚೆಗೆ ಹೋಗುತ್ತಾರೋ ಮತ್ತು ಭಗವಂತನನ್ನು ಅರಿಯಲು ಗುರುಗಳು ನೀಡಿದ್ದನ್ನು ಒಂದು ದೈನಿಕ ಶಿಸ್ತು ಎಂದು ನಿಜವಾಗಿ ಉಪಯೋಗಿಸುತ್ತಾರೋ ಅವರು, ಅಂದರೆ ಪ್ರತಿದಿನವೂ ಸಾಧನೆಯನ್ನು ಮಾಡುವವರು. ಅದೇ ಕ್ರಿಯಾ ಯೋಗ ವಿಜ್ಞಾನದ ಶಕ್ತಿ. ನಮ್ಮ ಗುರುದೇವರು ನಮಗೆ ಎಂತಹ ನಿಧಿ, ಜೀವನ ಪರ್ಯಂತದ ಆಶೀರ್ವಾದ ಮತ್ತು ಶಕ್ತಿಯ ಮೂಲ, ಉದ್ಧರಣೆ ಮತ್ತು ಭಗವಂತನೊಡನೆಯ ಸಂಪರ್ಕವನ್ನು ನೀಡಿದ್ದಾರೆ!

ಇಲ್ಲಿಯ ಪರಮಹಂಸಜಿಯವರ ಅಮೆರಿಕದ ಆಶ್ರಮಗಳಲ್ಲಿ, ನಾವು ಸದ್ಯದಲ್ಲೇ ಕೃತಜ್ಞತಾ ಸಮರ್ಪಣೆಯ ದಿನಾಚರಣೆಯನ್ನು ಆಚರಿಸಲಿದ್ದೇವೆ. ಈ ಸಂಭ್ರಮಾಚರಣೆಯ ಹಿಂದಿರುವ ಆಧ್ಯಾತ್ಮಿಕ ಉದ್ದೇಶವನ್ನು, ವಿಶೇಷವಾಗಿ ನಮ್ಮ ಜೀವನದಲ್ಲಿ ಅಭಿವ್ಯಕ್ತಿಯಾದ ಎಲ್ಲ ಒಳಿತುಗಳನ್ನು ಪ್ರಜ್ಞಾಪೂರ್ವಕವಾಗಿ ಸ್ಮರಿಸಿಕೊಂಡು ಭಗವಂತನಿಗೆ ವಂದನೆಗಳನ್ನು ಸಲ್ಲಿಸಲು ಸಮಯವನ್ನು ನಿಗದಿಪಡಿಸಿಕೊಳ್ಳುವ ಸಂಪ್ರದಾಯವನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು. ಯಾರು ತಮ್ಮ ಸೃಷ್ಟಿಕರ್ತನೊಂದಿಗೆ ಒಂದು ವೈಯಕ್ತಿಕ ಬಾಂಧವ್ಯವನ್ನು ಬೆಳೆಸಿಕೊಳ್ಳುವುದಿಲ್ಲವೋ ಅವರಿಗೆ ನಿತ್ಯ ಚೇತನವು ಅಜ್ಞಾತ ಹಾಗೂ ನಿಗೂಢವಾಗಿರುತ್ತದೆ; ಆದರೆ ಯಾರು ಭಗವಂತನ ಉಪಸ್ಥಿತಿಯನ್ನು ಆಚರಿಸುತ್ತಾರೋ ಅವರಿಗೆ – ಕೇವಲ ವಿಶೇಷ ರಜಾದಿನಗಳಲ್ಲಿ ಮಾತ್ರವಲ್ಲ, ಅನುದಿನವೂ, ಪ್ರತಿವರ್ಷವೂ ಒಂದು ನಿರಂತರ ಭಕ್ತಿಪೂರ್ಣ ಜಾಗೃತಿಯಲ್ಲಿ – ಪ್ರೀತಿಪಾತ್ರನು ಬೇರೆ ಯಾವುದೂ ನೀಡದಂತಹದ್ದನ್ನು ಅಂದರೆ ನಮ್ಮ ಆತ್ಮಗಳನ್ನು ತಪ್ಪದೆ ಪೋಷಿಸುವಂತಹ ರಕ್ಷಣೆ, ಮಾರ್ಗದರ್ಶನ, ಪ್ರೇಮ ಮತ್ತು ಸ್ಫೂರ್ತಿಯನ್ನು ನೀಡುವ ಮೂರ್ತರೂಪನಾಗುತ್ತಾನೆ.

ವರ್ಷಗಳ ಹಿಂದೆ, ಕೃತಜ್ಞತಾ ಸಮರ್ಪಣೆಯ ಸಮಯದಲ್ಲಿ ನಮ್ಮ ಪೂಜ್ಯ ಸಂಘಮಾತಾ, ದಿವಂಗತ ಶ್ರೀ ದಯಾ ಮಾತಾರವರು, ಪರಮಹಂಸ ಯೋಗಾನಂದರ ಅನುಯಾಯಿಗಳನ್ನುದ್ದೇಶಿಸಿ ಈ ಮಾತುಗಳನ್ನು ಹೇಳಿದರು. ವಿಶೇಷವಾಗಿ ಈ ಸಂದರ್ಭದಲ್ಲಿ ಅವನ್ನು ನೀವು ಬಹಳ ಅರ್ಥಗರ್ಭಿತವಾದದ್ದು ಎಂದು ಭಾವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ:

“ನಮ್ಮನೆಲ್ಲ ಸೃಷ್ಟಿಸಿದವನು ಹಾಗೂ ಪೋಷಿಸುತ್ತಿರುವವನನ್ನು ನೆನಪಿಸಿಕೊಳ್ಳಲು ಮೀಸಲಾದ ಈ ದಿನದಂದು ನೀವೆಲ್ಲರೂ ಜೀವನದ ಪ್ರಕ್ಷುಬ್ಧ ಮೇಲ್ಮೈನಡಿಯಲ್ಲಿ ನಿಮ್ಮ ದಿವ್ಯ ಪರಮಾತ್ಮನ, ಮಾತೆಯ, ಮಿತ್ರನ ಒಂದು ಹೊಸ ಬದಲಾಯಿಸದ, ಸುಭದ್ರವಾದ ಭರವಸೆಯನ್ನು ಕಂಡುಕೊಳ್ಳುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಭಗವಂತನು ಅವನ ಸರ್ವವ್ಯಾಪಿತ್ವವನ್ನು ಮತ್ತು ಸರ್ವಶಕ್ತತೆಯನ್ನು ಸದಾ ಬದಲಾಗುತ್ತಿರುವ ಈ ಭೂಮಿಯ ಮೇಲಿನ ನಾಟಕ ಮತ್ತು ಅವನ ಸೃಷ್ಟಿಯ ವಿಸ್ಮಯಕಾರಿ ವೈವಿಧ್ಯಗಳ ಹಿಂದೆ ಮುಚ್ಚಿಟ್ಟಿದ್ದಾನೆ. ಆದರೂ ಅವನು ಸದಾ ನಮ್ಮ ಪ್ರಜ್ಞೆಯ ಬಾಗಿಲನ್ನು ಬಡಿಯುತ್ತಿರುತ್ತಾನೆ. ಕಷ್ಟ ಮತ್ತು ಅಸುರಕ್ಷತೆಯ ಸಂದರ್ಭಗಳಲ್ಲಿ ಅವಿಚಲಿತರಾಗಿರಲು ನಮ್ಮಲ್ಲಿ ವಿಶ್ವಾಸ ಮತ್ತು ಧೈರ್ಯವನ್ನು ಯಾರು ಬಡಿದೆಬ್ಬಿಸುತ್ತಾರೆ, ನಮ್ಮ ಆತ್ಮಗಳಲ್ಲಿರುವ ಅವನ ಅಲುಗಾಡಿಸಲಾಗದ ಉಪಸ್ಥಿತಿಯಲ್ಲದೆ? ಅವ‍ಶ್ಯಕತೆಯಿರುವ ಇತರರೊಡನೆ ನಮ್ಮಲ್ಲಿರುವುದನ್ನು ಹಂಚಿಕೊಳ್ಳಲು ಯಾರು ನಮ್ಮಲ್ಲಿ ಇಚ್ಛೆಯನ್ನು ಕೆರಳಿಸುತ್ತಾರೆ, ನಮ್ಮೊಳಗೆ ಪಿಸುಗುಡುತ್ತಿರುವ ಅವನ ದಯಾಪೂರ್ಣ ಪ್ರೇಮವಲ್ಲದೆ? ಏಕೆ ನಮ್ಮ ಹೃದಯಗಳು ಒಂದು ಸೂರ್ಯಾಸ್ತದ ಅದ್ಭುತದಿಂದ ಉಲ್ಲಾಸಗೊಳ್ಳುತ್ತವೆ ಅಥವಾ ಒಂದು ಮಾಗಿದ ಎಲೆಯ ಸುಂದರ ಬಣ್ಣ ಮತ್ತು ಸಂಕೀರ್ಣವಾದ ವಿವರದಿಂದ ಕದಲುತ್ತದೆ? ಈ ಭೂಮಿಯ ಮೇಲಿನ ಎಲ್ಲ ಉದ್ಧರಿಸುವ ಮತ್ತು ಪ್ರೇರೇಪಿಸುವ ವಿಷಯಗಳಲ್ಲಿ ನಮ್ಮ ಆತ್ಮಗಳು ಕ್ಷಣ ದರ್ಶನವನ್ನು ಪಡೆಯುವುದು ಅವನ ಸೌಂದರ್ಯವನ್ನೇ. ನಾವು ಪ್ರತಿಯೊಂದು ಶುದ್ಧ ಭಾವನೆ, ಪ್ರತಿಯೊಂದು ಶ್ಲಾಘನೀಯ ಕಾರ್ಯ, ನಾವು ಪಡೆಯುವ ಪ್ರತಿಯೊಂದು ಒಳ್ಳೆಯದರ ಮೂಲಕ್ಕೆ ಹೋದಾಗ, ನಾವು ಅವನು ಅಡಗಿರುವ ತಾಣವನ್ನು ಕಾಣುತ್ತೇವೆ.

“ನೆನಪಿನ ಒಂದು ಸರಳ ಅಭ್ಯಾಸದಿಂದ, ನೀವು ನಿಮ್ಮ ಪ್ರಜ್ಞೆಯನ್ನು ಅವನ ಪೋಷಣೆಯ ಪ್ರೇಮ ಮತ್ತು ಸಂರಕ್ಷಣೆಯ ನಿರಂತರ ಅನುಗ್ರಹದಲ್ಲಿ ನೆಲೆಗೊಳಿಸಬಹುದು.”

ಪ್ರೀತಿಪಾತ್ರರೇ, ಯೋಗಿಯ ಆತ್ಮಕಥೆಯ ಮೂಲಕ ನಮ್ಮಂತಹ ಅಗಣಿತ ಸಾವಿರಾರು ಮಂದಿಗೆ ಹೆಚ್ಚು ದಿಟವಾದ ಭಗವಂತನು — ಆ ಅನುಗ್ರಹೀತ ಪುಟಗಳನ್ನು ನಾವು ಪ್ರತಿಸಲವೂ ಮತ್ತೆ ಓದಿದಾಗ ಮತ್ತು ವಿಶೇಷವಾಗಿ ಯಾವುದಕ್ಕೆ ಆ ಪುಸ್ತಕವು ಜಾಗತಿಕ ದೂತನಾಗಿದೆಯೋ ಆ ಕ್ರಿಯಾ ಯೋಗವನ್ನು ನಾವು ಅಭ್ಯಾಸ ಮಾಡಿದಾಗ ಯಾರ ಪ್ರೇಮ ಮತ್ತು ಪರಿವರ್ತನೆಗೊಳಿಸುವ ಉಪಸ್ಥಿತಿಯು ಹೊಸದಾಗಿ ತಾನೇ ತಾನಾಗಿ ಮತ್ತೆ ಚೈತನ್ಯದಾಯಕವಾಗುವುದೋ ಆ ಭಗವಂತನ ಅಮರ ಸಂತಾನವಾದ ನಿಮಗೆ, ಇಂದು ಮತ್ತು ಸದಾ ಬೆಳಕು, ಆನಂದ ಮತ್ತು ನಿಮ್ಮದೇ ದಿವ್ಯತೆಯ ಭರವಸೆಯನ್ನು ತರಲಿ.

ಭಗವಂತ ಮತ್ತು ಗುರುವಿನ ನಿರಂತರ ಆಶೀರ್ವಾದಗಳೊಂದಿಗೆ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ