“ಪರಮಹಂಸ ಯೋಗಾನಂದರು ಪ್ರಪಂಚಕ್ಕೆ ತಂದಿರುವ 6 ಕ್ರಾಂತಿಕಾರಿ ಆಧ್ಯಾತ್ಮಿಕ ಯೋಜನೆಗಳು” ಸ್ವಾಮಿ ಚಿದಾನಂದ ಗಿರಿಯವರಿಂದ

ಪರಮಹಂಸ ಯೋಗಾನಂದರು ಕ್ರಿಯಾ ಯೋಗವನ್ನು ಪ್ರಪಂಚದಾದ್ಯಂತ ಹರಡುವುದಕ್ಕಾಗಿ ಪಶ್ಚಿಮದಲ್ಲಿ ಅವರು ಆಗಮಿಸಿದ ಶತಮಾನೋತ್ಸವದ ಸಂದರ್ಭದಲ್ಲಿ, 2020ರ ಎಸ್‌ಆರ್‌ಎಫ್‌ನ ಜಾಗತಿಕ ಘಟಿಕೋತ್ಸವದಲ್ಲಿ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖಂಡರ ಉದ್ಘಾಟನಾ ಭಾಷಣದ ಆಯ್ದ ಭಾಗಗಳು ಈ ಕೆಳಗಿನಂತಿವೆ. ಯೋಗದಾ ಸತ್ಸಂಗ ನಿಯತಕಾಲಿಕೆಯ ಚಂದಾದಾರರು, “ಪರಮಹಂಸ ಯೋಗಾನಂದಾಸ್‌ ಇಪೋಕ್‌ ಮೇಕಿಂಗ್‌ ಮಿಷನ್‌ ಅಂಡ್‌ ಹಿಸ್‌ ವಿಷನ್‌ ಫಾರ್‌ ದಿ ಫ್ಯೂಚರ್‌ ಆಫ್‌ ಹ್ಯೂಮಾನಿಟಿ,” ಎಂಬ ಶೀರ್ಷಿಕೆಯಿರುವ ಲೇಖನದ ಸಂಪೂರ್ಣ ಪ್ರಸ್ತುತಿಯನ್ನು ನಿಯತಕಾಲಿಕೆಯ ಹಿಂದಿನ ಲೇಖನಗಳು ಹಾಗೂ ಧ್ವನಿ ಸುರಳಿಗಳಿರುವ ವಿಸ್ತೃತ ಆನ್‌ ಲೈನ್‌ ಲೈಬ್ರರಿಯಲ್ಲಿ ಓದಬಹುದು. ಭಾಷಣದ ಪೂರ್ಣ ವೀಡಿಯೋವನ್ನೂ ಎಸ್‌ಆರ್‌ಎಫ್‌ ವೆಬ್‌ಸೈಟ್‌ ನಲ್ಲಿ ನೋಡಬಹುದು.

ಸಹಸ್ರಾರು ವರ್ಷಗಳಿಂದ ಪವಿತ್ರ ಹಿಮಾಲಯ ಪರ್ವತಗಳು ಯೋಗಿಗಳಿಗೆ ಹಾಗೂ ತಪಸ್ವಿಗಳಿಗೆ, ಸಂತರು ಹಾಗೂ ಋಷಿಗಳಿಗೆ, ಹಾಗೂ ಕೆಲವು ಉನ್ನತ ದಿವ್ಯಾತ್ಮರಿಗೂ — ಅವತಾರಗಳು ಅಥವಾ ದಿವ್ಯ ಅವತಾರಗಳಿಗೆ ಮೌನ ಹಾಗೂ ಏಕಾಂತದ ನೆಲೆವೀಡಾಗಿವೆ.

ಈ ಕ್ಷಣ, ಆ ದೃಶ್ಯವನ್ನು ಚಿತ್ರಿಸಿಕೊಳ್ಳಿ: ಆ ಏಕಾಂತದ, ಸುಂದರವಾದ, ವೈಭವಯುತವಾದ, ಪರ್ವತದ ಕೋಟೆಗಳು, ಸಮಾಜದ ದೊಂಬಿ ಹಾಗೂ ಅದರ ಸಮಸ್ಯೆಗಳು ಮತ್ತು ಕಾಳಜಿಯಿಂದ ಅತಿ ದೂರ. ಆ ಮಹಿಮಾನ್ವಿತರು — ಆ ಸಂತರು ಹಾಗೂ ತಪಸ್ವಿಗಳು ಹಾಗೂ ಯೋಗಿಗಳು — ಸೃಷ್ಟಿಯ ಅತ್ಯುನ್ನತ ಸತ್ಯಗಳ ಸಾಕ್ಷಾತ್ಕಾರಕ್ಕಾಗಿ ಮತ್ತು ತಮ್ಮ ದೈವತ್ವದ ಜಾಗೃತಿಗಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದರು, ಹಾಗೂ ಕೆಲವು ಅದೃಷ್ಟವಂತ ಶಿಷ್ಯರು, ಯಾರು ಒಂದಲ್ಲ ಒಂದು ವಿಧದಿಂದ ತಮ್ಮ ಹಾದಿಯನ್ನು ಭೂಮಿಯ ಮೇಲಿನ ಸ್ವರ್ಗದೆಡೆಗೆ ಕಂಡುಕೊಳ್ಳಲು ಅನುಗ್ರಹಿಸಲ್ಪಟ್ಟಿದ್ದರೋ ಅವರ ಜಾಗೃತಿಗಾಗಿಯೂ ತಮ್ಮನ್ನು ಅರ್ಪಿಸಿಕೊಂಡಿದ್ದರು.

ಈಗ ವ್ಯತಿರಿಕ್ತವಾದ ಆಧುನಿಕ ಸಮಾಜದ ಚಿತ್ರಣವನ್ನು ಚಿತ್ರಿಸಿಕೊಳ್ಳಿ (ನಾವು ದೃಶ್ಯೀಕರಿಸಿಕೊಳ್ಳ ಬೇಕಾಗಿಲ್ಲ, ಕಾರಣ ಎಲ್ಲವೂ ನಮ್ಮ ಮುಂದೆ ಅತ್ಯಂತ ವಾಸ್ತವವಾಗಿದೆ): ಒತ್ತಡಕ್ಕೊಳಗಾಗಿ, ಹೆಚ್ಚು ಹಣ ಸಂಪಾದಿಸಲು ಭಯ ಹಾಗೂ ಹೋರಾಟಗಳಿಂದ ತುಂಬಿರುವುದು, ಸಂಘರ್ಷಕ್ಕೊಳಗಾಗಿರುವುದು, ಗೊಂದಲಕ್ಕೊಳಗಾಗಿರುವುದು, ಪರಿಸರ ಮಾಲಿನ್ಯ, ನಿರಾಶ್ರಿತತೆ ಮತ್ತು ಬಡತನ, ಯುದ್ಧಗಳು, ಜನಾಂಗೀಯ ಅಸಮಾನತೆಗಳು ಹಾಗೂ ಧಾರ್ಮಿಕ ಸಂಘರ್ಷಗಳಿಂದ ತುಂಬಿರುವುದು. ಈ ಪಟ್ಟಿ ದುರಾದೃಷ್ಟವಶಾತ್‌ ಬೆಳೆಯುತ್ತಲೇ ಹೋಗುತ್ತದೆ. ಇದು ಬಹು ದೊಡ್ಡ ವಿಭಾಜಕವಲ್ಲವೆ? ಆ ಸಾಮರಸ್ಯ ಹಾಗೂ ಶಾಂತಿ ಹಾಗೂ ಸಂತರಿಂದ ಅನುಗ್ರಹೀತವಾದ ನಿವಾಸದ ದೈವೀ ಪರಿಸರಕ್ಕಿಂತ ಸಾಕಷ್ಟು ವ್ಯತಿರಿಕ್ತವಾಗಿದೆ.

ಆದ್ದರಿಂದ 100 ವರ್ಷಗಳ ಹಿಂದೆ [ಅದಕ್ಕಿಂತ ಸ್ವಲ್ಪ ಹೆಚ್ಚು] ನಿಜವಾಗಿಯೂ ಯುಗಪ್ರವರ್ತಕ ಘಟನೆ ನಡೆಯಿತು ಎಂಬುದನ್ನು ಅರಿಯೋಣ. ಆ ಅನುಭಾವಿ ಯೋಗಿಗಳು, ಸಂತರು ಮತ್ತು ಗುರುಗಳು ತಮ್ಮ ಆಧ್ಯಾತ್ಮಿಕ ಅನುಗ್ರಹಗಳನ್ನು ಹಾಗೂ ಮಾನವನ ಎಲ್ಲ ದುಃಖಗಳು ಮತ್ತು ಸಮಸ್ಯೆಗಳನ್ನು ಜಯಿಸಲು ಸಾರ್ವತ್ರಿಕ ನಿಯಮಗಳು ಮತ್ತು ವಿಧಾನಗಳ ಬಗ್ಗೆ ತಮ್ಮ ಆಳವಾದ ತಿಳುವಳಿಕೆಯನ್ನು ಪರಮಹಂಸ ಯೋಗಾನಂದರು ಹೇಳಿದಂತೆ ವಿವಿಕ್ತ ಪರ್ವತಗಳಿಂದ ಮತ್ತು ಅರಣ್ಯ ಆಶ್ರಮಗಳಿಂದ “ಮಾನವರ ಮಾರುಕಟ್ಟೆಗಳಿಗೆ” ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ಉನ್ನತ ಭಗವತ್ ಸಾಕ್ಷಾತ್ಕಾರದ ಅತ್ಯುನ್ನತ ಯೋಗ ವಿಜ್ಞಾನವು ವಿಕಾಸವಾಗಿ ಸನಾತನ ಭಾರತದಿಂದ ಆಧುನಿಕ ಐಹಿಕ ಪ್ರಪಂಚಕ್ಕೆ ಹರಡಲಾರಂಭಿಸಿತು — ಅತ್ಯಂತ ಅವಶ್ಯವಿರುವ ಪ್ರಪಂಚಕ್ಕೆ.

ಯೋಗಿಯ ಆತ್ಮಕಥೆಯಲ್ಲಿ ಪರಮಹಂಸ ಯೋಗಾನಂದರು ಹೇಳುತ್ತಾರೆ: “ಬಾಬಾಜಿ ನಿರಂತರವಾಗಿ ಕ್ರಿಸ್ತನೊಡನೆ ಸಂಪರ್ಕ ಹೊಂದಿದ್ದಾರೆ; ಇಬ್ಬರೂ ಒಟ್ಟುಗೂಡಿ ವಿಮೋಚನೆಗೊಳಿಸುವ ಸ್ಪಂದನಗಳನ್ನು ಕಳಿಸಿಕೊಡುತ್ತಾರೆ ಹಾಗೂ ಈ ಯುಗಕ್ಕನುಗುಣವಾಗಿ ಮೋಕ್ಷಕ್ಕೆ ಬೇಕಾದ ಆಧ್ಯಾತ್ಮಿಕ ತಂತ್ರವನ್ನು ಯೋಜಿಸಿದ್ದಾರೆ. ಪೂರ್ಣಜ್ಞಾನವನ್ನು ಪಡೆದ ಈ ಇಬ್ಬರು ಸಿದ್ಧರೂ, ಒಬ್ಬರು ಸಶರೀರವಾಗಿ, ಮತ್ತೊಬ್ಬರು ಅಶರೀರಿಗಳಾಗಿ ಕೆಲಸಮಾಡಿ ಯುದ್ಧಗಳನ್ನು ವರ್ಜಿಸುವಂತೆಯೂ ಜನಾಂಗ ದ್ವೇಷಗಳನ್ನು ತೊರೆಯುವಂತೆಯೂ ಮತೀಯ ದ್ವೇಷಗಳನ್ನು ಬಿಡುವಂತೆಯೂ ಐಹಿಕ ಭೋಗಗಳಿಂದ ಸಂಭವಿಸುವ ತಿರುಗುಬಾಣವಾಗುವ ದುಷ್ಪರಿಣಾಮಗಳನ್ನು ನಿವಾರಿಸುವಂತೆಯೂ ರಾಷ್ಟ್ರ, ರಾಷ್ಟ್ರಗಳನ್ನು ಪ್ರೇರಿಸುತ್ತಿರುತ್ತಾರೆ. ಆಧುನಿಕ ಯುಗದ ಒಲವುಗಳನ್ನು, ಅದರಲ್ಲೂ ಪಾಶ್ಚಾತ್ಯ ನಾಗರಿಕತೆಯ ಪ್ರಭಾವದ ಸಂಕೀರ್ಣತೆ ಎಂಥದೆಂಬುದನ್ನು ಬಾಬಾಜಿ ಚೆನ್ನಾಗಿ ಅರಿತುಕೊಂಡಿದ್ದಾರೆ. ಅಲ್ಲದೆ, ಪಶ್ಚಿಮದಲ್ಲೂ ಪೂರ್ವದಲ್ಲೂ ಯೋಗದ ಮೂಲಕ ಬಂಧವಿಮೋಚನೆಯ ಮಾರ್ಗವನ್ನು ಸಮಾನವಾಗಿ ಪ್ರಚುರಪಡಿಸಬೇಕಾದ ಅಗತ್ಯವನ್ನು ಅರಿತುಕೊಂಡಿದ್ದಾರೆ.”

“ಪಶ್ಚಿಮ ಮತ್ತು ಪೂರ್ವದಲ್ಲಿ ಸಮಾನವಾಗಿ” ಮತ್ತು ಪ್ರಪಂಚದಾದ್ಯಂತ ಯೋಗದ ಪ್ರಸರಣವನ್ನು ಪ್ರಾರಂಭಿಸುವ ಧ್ಯೇಯವನ್ನು ಪರಮಹಂಸ ಯೋಗಾನಂದರಿಗೆ ವಹಿಸಲಾಯಿತು. ಅವರು ತಂದ ಪ್ರಮುಖ ಅಂಶಗಳನ್ನು ನಾನು ಪರ್ಯಾಲೋಚಿಸಬಯಸುತ್ತೇನೆ.

ಪರಮಹಂಸ ಯೋಗಾನಂದರು ನಮಗೆಲ್ಲಾ ಏನನ್ನು ತಂದರು

ಪರಮಹಂಸಜಿಯವರು ಬೋಸ್ಟನ್‌ ನಲ್ಲಿ 1920 ರಲ್ಲಿ ಹಡಗಿನಿಂದ ಇಳಿದಾಗ, ತಾನು ಏನನ್ನು ತರುತ್ತಿದ್ದೇನೆ ಹಾಗೂ ಅದು ಎಂತಹ ಮಹತ್ತರವಾದ ನಿಧಿ ಎಂಬುದನ್ನು ಮಹಾನ್‌ ಗುರುಗಳು ಖಂಡಿತವಾಗಿ ಅರಿತಿದ್ದರು — ಅದು ಅಕ್ಷರಶಃ ಆಧುನಿಕ ನಾಗರೀಕತೆಯ ದಿಶೆಯನ್ನು ಬದಲಾಯಿಸುವಂಥದ್ದಾಗಿತ್ತು.

ಆದರೂ, ಆರಂಭದ ದಿನಗಳಲ್ಲಿ ಅವರನ್ನು ಭೇಟಿಯಾದವರಿಗೆ, ಬಹುಶಃ ಅದರ ಮಹತ್ವವನ್ನು ಪೂರ್ಣವಾಗಿ ಅರಿಯಲು ಸ್ವಲ್ಪ ಸಮಯವೇ ಹಿಡಿಯಿತು. ಶತಮಾನದ ನಂತರ ಹಿಂದಿರುಗಿ ನೋಡಿದಾಗ, ಅವರ ಮೊದಲ ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಆಗಿನ್ನೂ ಕಂಡುಕೊಳ್ಳದಿದ್ದಂತಹ ವಿಷಯಗಳನ್ನು, ಒಂದು ಮಸೂರದ ಮೂಲಕ ಹಾಗೂ ಗಮನವಿಟ್ಟು ನೋಡುವಂತಹ ಲಾಭ ನಮಗಿದೆ. ನಮ್ಮ ಗುರುಗಳಾದ ಪರಮಹಂಸಜಿಯವರು ತಂದಂತಹ ಕೆಲವು ಪ್ರಮುಖ ಕೊಡುಗೆಗಳನ್ನು ಆರು ಅಂಶಗಳಲ್ಲಿ ಸ್ಪಷ್ಟಪಡಿಸುತ್ತೇನೆ:

1. ನೈತಿಕ ಮತ್ತು ಆಧ್ಯಾತ್ಮಿಕ ಅರ್ಥವನ್ನು ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತಿರುವ ಆಧುನಿಕ ನಾಗರಿಕತೆಗೆ ಜೀವನದ ದಿವ್ಯ ಉದ್ದೇಶವನ್ನು ತಿಳಿಸಿ ಹೇಳುವ ವಿಶ್ವ ದೃಷ್ಟಿಕೋನ. ಯೋಗಾನಂದಜಿಯವರು ಭಾರತದ ಪ್ರಾಚೀನ ಸನಾತನ ಧರ್ಮವನ್ನು (“ಸತ್ಯದ ಶಾಶ್ವತ ತತ್ವಗಳು”) ಅರ್ಥವಾಗುವಂತೆ, ನಂಬುವಂತೆ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಆಧುನಿಕ ಯುಗದ ಪುರುಷ ಹಾಗೂ ಸ್ತ್ರೀಯರಿಗೆ ಸುಸಂಗತವಾಗುವಂತೆ ಪುನರಾವರ್ತಿಸಿದರು. ಹಾಗೆ ಮಾಡುವುದರ ಮೂಲಕ, ಅವರು ಹಲವಾರು ವಿಚಾರಗಳು ಮತ್ತು ಅಭ್ಯಾಸಗಳನ್ನು ಜಗತ್ತಿಗೆ ಪರಿಚಯಿಸಿದರು, ಅಂದಿನಿಂದ ಅವು ಸಾರ್ವಜನಿಕರ ಮನಸ್ಸಿನಲ್ಲಿ ಮನೋವಿಜ್ಞಾನ, ಧರ್ಮ, ವೈದ್ಯಕೀಯ, ಶಿಕ್ಷಣ ಮತ್ತು ಸಮಯ ಸರಿದಂತೆ ಇನ್ನೂ ಹೆಚ್ಚು ಹೆಚ್ಚು ವಿಷಯಗಳ ಅತ್ಯಾಧುನಿಕ ವಿಚಾರಗಳೊಂದಿಗೆ ಸೇರಿಹೋಗಿವೆ. ಅವರು ಅಷ್ಟನ್ನೇ ತಂದಿದ್ದರೂ, ಅದು ಮಹತ್ವಪೂರ್ಣದ್ದಾಗಿರುತ್ತಿತ್ತು. ಆದರೆ ಪಟ್ಟಿ ಉದ್ದವಾಗಿದೆ.

2. ಆಧುನಿಕ ಪುರುಷರು ಮತ್ತು ಮಹಿಳೆಯರಿಗೆ ಸ್ನೇಹಪರನೂ, ಪ್ರಸ್ತುತನೂ ಮತ್ತು ಅಪೇಕ್ಷಣೀಯನೂ ಆಗಿರುವಂತಹ ಭಗವಂತನ ಒಂದು ಪರಿಕಲ್ಪನೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅನೇಕರಿಗೆ ಒಗ್ಗಿಹೋಗಿರುವ, ಭಗವಂತನೊಬ್ಬ ಪ್ರತೀಕಾರವುಳ್ಳ ನ್ಯಾಯಾಧಿಪತಿ ಎಂಬ ತಪ್ಪು ಕಲ್ಪನೆಯನ್ನು ಪರಮಹಂಸಜಿ ಸಂಪೂರ್ಣವಾಗಿ ತಳ್ಳಿಹಾಕಿದರು. ಬದಲಾಗಿ, ಭಗವಂತನ ಪ್ರಕೃತಿಯೇ ನಿತ್ಯ ನೂತನ ಆನಂದ; ಹಾಗೂ ಭಗವಂತನ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟ ಮಾನವರು, ಅವನನ್ನು ತಂದೆ, ತಾಯಿ, ಸಖ, ಪ್ರಿಯದೇವ, ಅಥವಾ ಪರಮಾತ್ಮನ ಪ್ರಕಟಿತ ಗುಣಗಳಾದ ಅನಂತ ಆನಂದ, ಜ್ಞಾನ, ಬೆಳಕು, ಶಾಂತಿ ಮತ್ತು ಪ್ರೇಮದ ರೂಪದಲ್ಲಿ ಅರಿಯಬಹುದು ಎಂದು ಬೋಧಿಸಿದರು.

ಇದು ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳೆದು ಬೇರೂರಿದ್ದ ಭಗವಂತನ ಪರಿಕಲ್ಪನೆಗೆ ಕ್ರಾಂತಿಕಾರಕ ಬದಲಾವಣೆಯಾಗಿತ್ತು. ಆದ್ದರಿಂದ, ನಿಮ್ಮ ಈ ಹಿಂದಿನ ಧಾರ್ಮಿಕ ಶಿಕ್ಷಣದಿಂದಾಗಿ “ಭಗವಂತ” ಎಂಬ ಪದದ ಬಗ್ಗೆ ಅಭ್ಯಂತರವಿರುವವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಪರಮಹಂಸಜಿಯವರ ವೈಎಸ್‌ಎಸ್‌ ಪಾಠಗಳಿಗೆ ಪರಿಚಯ ಒದಗಿಸುವ: “ಹೈಯೆಸ್ಟ್‌ ಅಚೀವ್‌ಮೆಂಟ್ಸ್ ತ್ರೂ ಸೆಲ್ಫ್‌ ರಿಯಲೈಝೇಷನ್‌‌” (ಆತ್ಮ-ಸಾಕ್ಷಾತ್ಕಾರದ ಮೂಲಕ ಅತ್ಯುನ್ನತ ಸಾಧನೆಗಳು) ಇದನ್ನು ಓದಿ ನಿಮಗೆ ನೀವೇ ಉಪಕಾರ ಮಾಡಿಕೊಳ್ಳಿ. ಅದರಲ್ಲಿ “ಭಗವಂತ ಎಂದರೆ ಏನು?” ಎಂಬ ಬಗ್ಗೆ ಒಂದು ಸಂಪೂರ್ಣ ವಿಭಾಗವೇ ಇದೆ. ಅದು ನಿಮಗೆ ಭಿನ್ನ ಸ್ವರೂಪದ ಚಿತ್ರಣವನ್ನು ಕೊಡುತ್ತದೆ ಎಂದು ನಾನು ಭಾವಿಸುತ್ತೇನೆ.

3. ಹಂತ ಹಂತವಾದ ಸೂಚನೆಗಳು, ಅವುಗಳ ಅಭ್ಯಾಸದಿಂದ ಯಾವುದೇ ವ್ಯಕ್ತಿ ಭಗವತ್‌ಸಾಕ್ಷಾತ್ಕಾರದ ಸ್ಥಿತಿಯನ್ನು ಸಾಧಿಸಬಹುದು.

4. ಅವಶ್ಯಕವಾಗಿ ಮಾನವಕುಲದ ಹಾಗೂ ಎಲ್ಲಾ ನಿಜ ಧರ್ಮಗಳ ಒಗ್ಗೂಡಿಕೆಯ ದೂರದೃಷ್ಟಿ. ಒಮ್ಮೆ ಪರಮಹಂಸ ಯೋಗಾನಂದರು ಬಹು ಸುಂದರವಾಗಿ ಹೀಗೆ ಹೇಳಿದರು: “ಯೇಸುಕ್ರಿಸ್ತ ಅಥವಾ ಶ್ರೀಕೃಷ್ಣ ಅಥವಾ ಪ್ರಾಚೀನ ಕಾಲದ ಋಷಿಗಳು ಯಾವುದೇ ವ್ಯಕ್ತಿಯನ್ನು ಕ್ರಿಶ್ಚಿಯನ್, ಹಿಂದೂ, ಯಹೂದಿ, ಇತ್ಯಾದಿ ಎಂದು ಕರೆಯುವುದನ್ನು ನಾನು ಊಹಿಸಲು ಸಾಧ್ಯವಿಲ್ಲ. ಅವರು ಪ್ರತಿಯೊಬ್ಬ ಮಾನವನನ್ನೂ ‘ನನ್ನ ಸಹೋದರ’ ಎಂದು ಕರೆಯುವುದನ್ನು ಊಹಿಸಬಲ್ಲೆ.”

ಅದು ಸುಂದರವಲ್ಲವೇ? ಪರಮಹಂಸಜಿಯವರು ಎಲ್ಲಾ ನಿಜವಾದ ಆಧ್ಯಾತ್ಮಿಕ ಮಾರ್ಗಗಳ ಏಕತೆಯನ್ನು ನಮಗೆ ನಾವೇ ಅರಿತುಕೊಳ್ಳುವ — ಹಾಗೂ ನಂತರ ಇಡೀ ಮನುಕುಲಕ್ಕೆ ಆ ಅರಿವನ್ನು ಹರಡುವ ದೃಷ್ಟಿ ಮತ್ತು ಸಾಧ್ಯತೆಯನ್ನು ನಮಗೆ ತಂದರು. ಕ್ರೈಸ್ತ ಧರ್ಮ ಹಾಗೂ ಹಿಂದೂ ಧರ್ಮಗಳ ಮುಖ್ಯ ಗ್ರಂಥಗಳ ಅಭೂತಪೂರ್ವ ವ್ಯಾಖ್ಯಾನಗಳನ್ನು ಬರೆಯುವ ಮೂಲಕ, ಈ ಮಾರ್ಗಗಳು ಸಮಾನವಾದ ವೈಜ್ಞಾನಿಕ ತಳಪಾಯವನ್ನು ಹೊಂದಿವೆ ಎಂದು ತೋರಿಸಿದರು — ಧ್ಯಾನದ ನಿರ್ದಿಷ್ಟ ತಂತ್ರಗಳ ಅಭ್ಯಾಸ, ಅದು ಎಲ್ಲಾ ಧರ್ಮಗಳಲ್ಲಿ, ಎಲ್ಲಾ ಮಾನವರಲ್ಲಿ, ಇಡೀ ಸೃಷ್ಟಿಯಲ್ಲಿ ಅಂತರ್ಗತವಾದ ಏಕೈಕ ಸತ್ಯದ ನೇರ ವೈಯಕ್ತಿಕ ಅನುಭವವನ್ನು ಹೊಂದುವಂತೆ ಮಾಡುತ್ತದೆ.

ಪರಮಹಂಸಜಿಯವರು ತಂದದ್ದರ ಹಿರಿಮೆಯ ಒಂದು ಮಿನುಗು ನೋಟವಾದರೂ ನಿಮಗೆ ಕಾಣಲಾರಂಭಿಸಿತೆ? ನಿಜವಾಗಿಯೂ ಯುಗ-ಪ್ರವರ್ತಕ — ಪ್ರಪಂಚದಾದ್ಯಂತ ಹರಡಲು ತಮಗೆ ವಹಿಸಲಾದ ಬೋಧನೆಗಳನ್ನು ವಿವರಿಸಲು ಅವರು ಬಳಸುತ್ತಿದ್ದುದು ಇದೇ ಶಬ್ದವನ್ನು.

5. “ಬದುಕುವುದು-ಹೇಗೆ” ದೇಹ, ಮನಸ್ಸು ಹಾಗೂ ಆತ್ಮದ ಸಮಾನವಾದ ಅಭಿವೃದ್ಧಿಗೆ ಒಂದು ಸಂಪೂರ್ಣ ಕಾರ್ಯಕ್ರಮ. ಪರಮಹಂಸಜಿಯವರ 70 ವರ್ಷಗಳ ಹಿಂದಿನ ಬರಹಗಳು, ಭಾಷಣಗಳು ಮತ್ತು ಉಪನ್ಯಾಸಗಳಿಂದ ಸಂಕಲಿಸಲಾದ ಯೋಗದಾ ಸತ್ಸಂಗ ಪಾಠಗಳನ್ನು, ಓದುವಾಗ, ಅವರು ಎಷ್ಟು ದೂರದೃಷ್ಟಿಯುಳ್ಳವರಾಗಿದ್ದರು ಎಂಬುದನ್ನು ನೀವು ಕಾಣುತ್ತೀರಿ.

ಅವರು ಏನನ್ನು ತಂದರೋ ಅದು, ಮಾನವನ ಯೋಗಕ್ಷೇಮದ ವೈಜ್ಞಾನಿಕ ಆಧಾರವೆಂದು ಈಗ ಪ್ರತಿಪಾದಿಸಲಾಗುತ್ತಿರುವ ಸಮತೋಲಿತ ಅಥವಾ ಸಮಗ್ರ ಜೀವನಶೈಲಿಯ ಅಗತ್ಯ ಅಂಶಗಳನ್ನು ಜಗತ್ತಿಗೆ ಪರಿಚಯಿಸಲು ನಿಜವಾಗಿಯೂ ಸಹಾಯ ಮಾಡಿತು.

6. ಗುರು-ಶಿಷ್ಯ ಸಂಬಂಧವನ್ನು ನಿಜವಾಗಿ ಅರ್ಥಮಾಡಿಕೊಳ್ಳುವುದು. ಅನಾದಿ ಕಾಲದಿಂದಲೂ, ಭಗವಂತನನ್ನು ಪ್ರಾಮಾಣಿಕವಾಗಿ ಅರಸುವವರು — ಸತ್ಯವನ್ನು ಪ್ರಾಮಾಣಿಕವಾಗಿ ಅರಸುವವರು — ಗುರು-ಶಿಷ್ಯ ಸಂಬಂಧದ ಮೂಲಕವೇ ದೈವ ಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆಯುತ್ತಾರೆ. ಆದರೂ ಆ ಸಂಬಂಧದ ನಿಜವಾದ ಅರ್ಥ ಕಳೆದುಹೋಗಿದೆ ಹಾಗೂ ಇತ್ತೀಚಿನ ಶತಮಾನಗಳಲ್ಲಿ ಅವನತಿ ಹೊಂದಿದೆ. ಆದರೆ ನಮ್ಮ ಗುರು ತಮ್ಮ ಜೀವನದಲ್ಲಿ ತೋರಿಸಿಕೊಟ್ಟ, ಹಾಗೂ ತಮ್ಮ ಸಮೀಪವರ್ತಿಗಳಿಗೆ ಮತ್ತು ಅವರ ಮೂಲಕ ನಮಗೆಲ್ಲರಿಗೂ ಕೊಟ್ಟ ತರಬೇತಿಯಿಂದ, ಆ ಪವಿತ್ರ ಗುರು-ಶಿಷ್ಯ ಸಂಬಂಧದ ನಿಜವಾದ ಅರ್ಥವನ್ನು ಪುನಃ ಪ್ರಪಂಚಕ್ಕೆ ಕೊಟ್ಟಿರುವುದನ್ನು ನಾವು ಕಾಣುತ್ತೇವೆ.

ಹಾಗಾಗಿ, ನಮ್ಮೆಲ್ಲರ ಪ್ರಯೋಜನಕ್ಕಾಗಿ ಅವರು ತಂದ ಪ್ರಮುಖ ಅಂಶಗಳಲ್ಲಿ ಇವು ಕೇವಲ ಕೆಲವಷ್ಟೆ. ಇವುಗಳನ್ನು ನಾನು ಉಲ್ಲೇಖಿಸುವ ಕಾರಣ, ಇವು ಪ್ರಪಂಚಕ್ಕೆ ನಿಖರವಾಗಿ ಏನು ಅಗತ್ಯವಿದೆಯೋ ಅದನ್ನೇ ಚರಿತ್ರೆಯ ಈ ಕ್ಷಣದಲ್ಲಿ ಹೇಳುತ್ತಿವೆ — ಕೇವಲ ಲಕ್ಷಣಗಳನ್ನಲ್ಲ ಆದರೆ ನಾವು ಎದುರಿಸುತ್ತಿರವ ಸಮಸ್ಯೆಗಳ ಮೂಲ ಕಾರಣಗಳನ್ನು….

ಜಗತ್ತಿಗೆ ಅತಿ ದೊಡ್ಡ ಸಹಾಯವನ್ನು ಹೇಗೆ ನೀಡುವುದು

ಪರಮಹಂಸಜಿಯವರು ಹೇಳಿದಂತೆ, “ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ, ಆಗ ಈ ಪ್ರಪಂಚವನ್ನು ಬದಲಿಸುವಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಿದಂತಾಗುತ್ತದೆ.” ಹೌದು, ನಮ್ಮ ಮುಂದೆ ಅನೇಕ ಅಡಚಣೆಗಳಿವೆ — ಇದು ನಮಗೆಲ್ಲರಿಗೂ ತಿಳಿದಿದೆ. ಅವುಗಳ ಬಗ್ಗೆ ನಮಗೆ ಅರಿವಿರಬೇಕಾಗುತ್ತದೆ, ಆಗ ನಮಗೆ ಅವುಗಳನ್ನು ಜಯಶಾಲಿಗಳಾಗಿ ಅತಿಶಯಿಸಲು ಸಾಧ್ಯವಾಗುತ್ತದೆ. ದುಃಖಕರ ಸಂಗತಿ ಏನೆಂದರೆ ಇಂದಿನ ಪ್ರಪಂಚದಲ್ಲಿ ಹೆಚ್ಚು ಅಂಧಕಾರವಿದೆ, ಆಧ್ಯಾತ್ಮಿಕವಾಗಿ ಹಾಗೂ ಮಾನಸಿಕವಾಗಿ ಹೇಳುವುದಾದರೆ. ಭೌತಿಕ ಅಂಧಕಾರವು ನಮ್ಮ ಸುತ್ತಲಿರುವುದನ್ನು ನೋಡುವುದನ್ನು ಅಸಾಧ್ಯವಾಗಿಸುತ್ತದೆ. ಆದರೆ ಆಧ್ಯಾತ್ಮಿಕ ಹಾಗೂ ಮಾನಸಿಕ ಅಂಧಕಾರವು ನಮಗೆ ಲಭ್ಯವಿರುವ ಇನ್ನೂ ಸಿದ್ಧಿಸದ ಸಾಮರ್ಥ್ಯಗಳನ್ನು ಕಾಣುವುದರಿಂದ ನಮ್ಮನ್ನು ತಡೆಯುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ಆಧ್ಯಾತ್ಮಿಕ ಅಂಧಕಾರವು ನಮ್ಮನ್ನು ಅಧೀರರನ್ನಾಗಿಸುತ್ತದೆ. ಅದು ನಮಗೆ ಸೋಲಿನ ಭಾವನೆಯನ್ನು ಅಥವಾ ಬಲಿಪಶುವಾದಂತಹ ಅಥವಾ ಭಯಭೀತರಾದಂತಹ ಅಥವಾ ಶಕ್ತಿಹೀನರಾದಂತಹ ಭಾವನೆ ಬರುವಂತೆ ಮಾಡುತ್ತದೆ. ಯೋಗದ ಪರಿಭಾಷೆಯಲ್ಲಿ ಆ ಅಂಧಕಾರಕ್ಕೆ ಒಂದು ಹೆಸರಿದೆ: ಮಾಯೆ, ಅಂಧಕಾರದ ಬ್ರಹ್ಮಾಂಡ ಶಕ್ತಿ, ಅದು ಸತ್ಯವನ್ನು ಆವರಿಸಿ ಅದನ್ನು ಕಾಣದಾಗಿಸುತ್ತದೆ, ಹಾಗಾಗಿ ಯಾವುದು ನಿಜವೋ ಅದನ್ನು ನಾವು ಕಾಣಲಾರೆವು ಅಥವಾ ನಮ್ಮ ಸುತ್ತಲಿರುವುದರಲ್ಲಿ ಯಾವುದು ಸರಿಯಾದುದೋ ಅದನ್ನೂ ನಿಖರವಾಗಿ ಕಾಣಲಾರೆವು.

ಈಗ ಪ್ರಪಂಚದಲ್ಲಿ ನಡೆಯುತ್ತಿರುವ ಘಟನೆಗಳಿಂದ ನಾವು ನಿರುತ್ಸಾಹಗೊಳ್ಳಬಾರದು. ಬದಲಾಗಿ, ನೆನಪಿಡಿ ನಾವು ಈ ಮೊದಲು ದೃಶ್ಯೀಕರಿಸಿಕೊಳ್ಳುತ್ತಿದ್ದ ಶಾಂತಿ ಮತ್ತು ಸಾಮರಸ್ಯದ ಪರಿಶುದ್ಧ ನೆಲೆಯಲ್ಲಿರುವ ಆ ಯೋಗಿಗಳನ್ನು ನೆನಪಿಸಿಕೊಳ್ಳಿ – ಅವರು ನಮಗೆಲ್ಲರಿಗೂ ಏನನ್ನು ಕಳಿಸಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ. ನಾವು ಈಗ ಎದುರಿಸುತ್ತಿರುವ ಸನ್ನಿವೇಶಗಳು, ಜಗತ್ತು ಎದುರಿಸುತ್ತಿರುವ ಸನ್ನಿವೇಶಗಳನ್ನೇ ಯೇಸು ಮತ್ತು ಬಾಬಾಜಿ ನಿರೀಕ್ಷಿಸಿದ್ದರು ಹಾಗೂ ಅದಕ್ಕಾಗಿಯೇ ಅವರು ಶ್ರೀ ಶ್ರೀ ಪರಮಹಂಸ ಯೋಗಾನಂದ ಮತ್ತು ಕ್ರಿಯಾ ಯೋಗ ಬೋಧನೆಗಳನ್ನು ಜಗತ್ತಿಗೆ ಕಳುಹಿಸಿದರು ಎಂಬುದನ್ನು ನೆನಪಿಡಿ.

ಹೌದು ಅಂಧಕಾರ, ಮಾಯೆಯ ಅಧೋಮುಖ ಸೆಳೆತ, ಈಗ ಹೆಚ್ಚು ಸಕ್ರಿಯವಾಗಿದೆ — ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಇಡೀ ಯೋಗದ ವಿಜ್ಞಾನವಿರುವುದೇ ನಾವು ಮಾಯೆಯ ಮೇಲೆ, ಅಂಧಕಾರದ ಮೇಲೆ, ಹಾಗೂ ಭ್ರಮೆ ಮತ್ತು ಅಜ್ಞಾನದ ಮೇಲೆ ವಿಜಯ ಸಾಧಿಸಲು. ಆಗ ನಮ್ಮಲ್ಲಿ ಪ್ರತಿಯೊಬ್ಬರೂ ಸತ್ಯಕ್ಕೆ ಮುಖಾಮುಖಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ.

ಹಾಗೂ ಸತ್ಯವು — ಪ್ರತಿ ಆತ್ಮಕ್ಕೆ, ಪ್ರತಿಯೊಬ್ಬ ಪುರುಷ, ಮಹಿಳೆ, ಮಗು, ಯಾವುದೇ ಜನಾಂಗ, ಧರ್ಮ ಅಥವಾ ರಾಷ್ಟ್ರೀಯತೆ ಇರಲಿ — ಅದು ಹೀಗಿದೆ: ನಾವು ದಿವ್ಯ ಜೀವಿಗಳು, ನಮ್ಮ ಗುರುಗಳು ಹೇಳಿದಂತೆ, ನಾವು “ನಕ್ಷತ್ರಗಳನ್ನು ಬೆಳಗಿಸುವ ಮತ್ತು ಗಾಳಿ ಮತ್ತು ಬಿರುಗಾಳಿಗಳಿಗೆ ಶಕ್ತಿಯನ್ನು ನೀಡುವ ಮಹಾನ್ ಆನಂದ ಮತ್ತು ಪರಮಾನಂದಕ್ಕೆ” ಅಪರಿಮಿತ ಅವಕಾಶವನ್ನು ಹೊಂದಿರುವ ದಿವ್ಯ ಜೀವಿಗಳು.

ಪ್ರಪಂಚದ ಹೃದಯದಲ್ಲಿ ಒಬ್ಬ ಅನುಭಾವಿಯಾಗುವುದು ಎಂದರೆ ಅದೇ — ಪರಮಾತ್ಮನ ಪ್ರೇಮಿ, ಭಗವಂತನ ಪ್ರೇಮಿ, ಹಾಗೂ ಎಲ್ಲರಲ್ಲೂ ಇರುವ ಭಗವಂತನ ಪ್ರೇಮಿ.

ನೀವೇನಾದರೂ ಪರಮಹಂಸ ಯೋಗಾನಂದರು ಪ್ರಪಂಚಕ್ಕೆ ಕೊಟ್ಟಿರುವ ಆಳವಾದ ತಿಳುವಳಿಕೆ ಹಾಗೂ ಬದುಕು-ಬದಲಿಸುವ ವಿಧಾನಗಳನ್ನು ಅನುಷ್ಠಾನಕ್ಕೆ ತರಲು ಉತ್ಸುಕರಾಗಿದ್ದರೆ, ಅದಕ್ಕೆ ಮೊದಲ ಹೆಜ್ಜೆ ಎಂದರೆ ನಮ್ಮ ವೆಬ್‌ ಸೈಟ್‌ನಲ್ಲಿರುವ ಯೋಗದ ಸತ್ಸಂಗ ಪಾಠಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು, ಅಲ್ಲಿ ನೀವು ಪರಮಹಂಸಜಿಯವರ ಪರಿಚಯಾತ್ಮಕ ಪಾಠವನ್ನು ಓದಬಹುದು ಹಾಗೂ ಭಾರತದ ಯೋಗದ ಸಾರ್ವತ್ರಿಕ ಬೋಧನೆಗಳು ಮತ್ತು ವೈಜ್ಞಾನಿಕ ತಂತ್ರಗಳನ್ನು ಸಮಗ್ರವಾಗಿಯೂ ಮತ್ತು ಗ್ರಹಿಸಬಹುದಾದ ರೀತಿಯಲ್ಲೂ ಪ್ರಸ್ತುತಪಡಿಸುವ ಮತ್ತು ಜೀವನದ ಎಲ್ಲಾ ಅಂಶಗಳಿಗೂ ತಕ್ಷಣ ಅನ್ವಯಿಸಬಹುದಾದ ಈ ಗೃಹ-ಅಧ್ಯಯನ ಸರಣಿಗೆ ಹೇಗೆ ದಾಖಲಾಗುವುದು ಎಂಬುದನ್ನು ಅರಿತುಕೊಳ್ಳಬಹುದು.

ಹಾಗೂ ನೀವು ಪರಮಹಂಸ ಯೋಗಾನಂದರ ಚಿಂತನೆಗಳನ್ನು ಕುರಿತು ಇನ್ನೂ ಹೆಚ್ಚು ಓದಲು ಉತ್ಸುಕರಾಗಿದ್ದರೆ ನೀವು ವೈಎಸ್‌ಎಸ್‌ನ ಪುಸ್ತಕಮಳಿಗೆಯಲ್ಲಿ ಆಧ್ಯಾತ್ಮಿಕ ಶ್ರೇಷ್ಠ ಕೃತಿ ಯೋಗಿಯ ಆತ್ಮಕಥೆ ಹಾಗೂ ಪಶ್ಚಿಮದಲ್ಲಿ ಪರಮಹಂಸಜಿಯವರ ಉದ್ಘಾಟನಾ ಭಾಷಣದ ಮುದ್ರಣ ಆವೃತ್ತಿ, ಧರ್ಮದ ವಿಜ್ಞಾನ (ದಿ ಸೈನ್ಸ್‌ ಆಫ್‌ ರಿಲಿಜನ್‌)ವೂ ಸೇರಿದಂತೆ ಅನೇಕ ಕೊಡುಗೆಗಳನ್ನು ಕಾಣಬಹುದು.  

ಇದನ್ನು ಹಂಚಿಕೊಳ್ಳಿ