
“ರೂಪ ಮತ್ತು ಮುಖಲಕ್ಷಣದಲ್ಲಿ ಸುಂದರ, ಮೋಹಕ-ಗುಣ ಮತ್ತು ನಡವಳಿಕೆಯಲ್ಲಿ ಅಪ್ರತಿರೋಧ್ಯ, ದಿವ್ಯ ಪ್ರೀತಿಯ ಸಾಕಾರ, ಎಲ್ಲರಿಗೂ ಸಂತೋಷವನ್ನು ನೀಡುವ ಬಾಲ ಕೃಷ್ಣನು ಸಮುದಾಯದ ಎಲ್ಲರಿಗೂ ಪ್ರಿಯನಾಗಿದ್ದನು….”
— ಪರಮಹಂಸ ಯೋಗಾನಂದ, “ಗಾಡ್ ಟಾಕ್ಸ್ ವಿತ್ ಅರ್ಜುನ: ದಿ ಭಗವದ್ಗೀತಾ”ದಲ್ಲಿ
ಆತ್ಮಿಯರೇ,
ಭಗವಾನ್ ಶ್ರೀಕೃಷ್ಣನ ಜನ್ಮದಿನವನ್ನು ನಾವು ಸಂತೋಷದಿಂದ ಆಚರಿಸುತ್ತಿರುವಾಗ ನಿಮ್ಮೆಲ್ಲರಿಗೂ ಪ್ರೀತಿಯ ಶುಭಾಶಯಗಳು, ಎಲ್ಲೆಡೆ ಇರುವ ಅಸಂಖ್ಯಾತ ಆತ್ಮಗಳ ಜೊತೆಗೆ ಒಂದುಗೂಡಿ ದಿವ್ಯ ಪ್ರೇಮದ ಭವ್ಯ ಅವತಾರಕ್ಕೆ ನಮ್ಮ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯನ್ನು ಸಮರ್ಪಿಸುತ್ತೇವೆ.
ಈ ಜನ್ಮಾಷ್ಟಮಿಯಂದು, ದಿವ್ಯ ಜ್ಞಾನದಿಂದ ಮಾರ್ಗದರ್ಶಿಸಲ್ಪಟ್ಟ ಶ್ರೀ ಕೃಷ್ಣನ ಸೂಕ್ತ ಚಟುವಟಿಕೆಯಿಂದ ಕೂಡಿದ ಸಮತೋಲಿತ ಜೀವನದ ಉದಾಹರಣೆಯನ್ನು ಸಾಕಾರಗೊಳಿಸಲು ಅವನ ವಿಶೇಷ ಅನುಗ್ರಹ ಮತ್ತು ಆಶೀರ್ವಾದಗಳು ನಮ್ಮನ್ನು ಪ್ರೇರೇಪಿಸಲಿ. ನಾವು ಹಾದುಹೋಗುತ್ತಿರುವ ಈ ಸಮಯದಲ್ಲಿ ನೇರವಾಗಿ ಮತ್ತು ಆಳವಾಗಿ ಭಗವದ್ಗೀತೆಯಲ್ಲಿ ಅಡಕವಾಗಿರುವ ಶ್ರೀ ಕೃಷ್ಣನ ಸಾರ್ವತ್ರಿಕ ಬೋಧನೆಗಳನ್ನು ಹೀರಿಕೊಳ್ಳುವ ಮೂಲಕ, ನಮ್ಮ ಆತ್ಮದ ಅಮರ ಗುಣಗಳಾದ ಸ್ಥೈರ್ಯ, ವಿಶ್ವಾಸ, ನಿರ್ಭಯತೆಯನ್ನು ಎಚ್ಚರಿಸೋಣ. ನಮ್ಮ ಪರೀಕ್ಷೆಗಳ ಉದ್ದೇಶ ನಮ್ಮಲ್ಲಿರುವ ವೀರೋಚಿತ ಮತ್ತು ಅಜೇಯ ಆಧ್ಯಾತ್ಮಿಕ ಸ್ವಭಾವವನ್ನು ಹೊರತರುವುದೇ ಹೊರತು ನಮ್ಮನ್ನು ಮುಳುಗಿಸಲಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ಭಗವಂತ ಮತ್ತು ಆತನ ಅವತಾರಗಳ ಕುರಿತು ದಿನನಿತ್ಯದ ಧ್ಯಾನದಿಂದ ಮತ್ತು ಅವರು ನಮಗೆ ಜಯಿಸಲು ಎಲ್ಲ ರೀತಿಯಲ್ಲೂ ನೆರವಾಗುತ್ತಾರೆ ಎಂದು ಅವರನ್ನು ನಂಬುವುದರಿಂದ, ಅದು ನಮಗೆ ಅತ್ಯಂತ ಕಷ್ಟಕರ ಸಮಯದಲ್ಲೂ ವಿಶ್ವಸನೀಯ ಸಂಪನ್ಮೂಲಗಳಾದ ಧೈರ್ಯ, ಸಮಚಿತ್ತ ಮತ್ತು ಸೃಜನಶೀಲ ಅಂತರ್ಬೋಧೆಗೆ ದಾರಿ ಮಾಡಿಕೊಡುತ್ತದೆ.
ಇದು ಪ್ರತಿಯೊಬ್ಬರೊಳಗಿರುವ ಅರ್ಜುನನೆಂಬ ಭಕ್ತನಿಗೆ ಭಗವಾನ್ ಕೃಷ್ಣನ ಸಂದೇಶವಾಗಿದೆ. ಗೀತೆಯಲ್ಲಿ ಶ್ಲಾಘಿಸಲಾದ ಕ್ರಿಯಾಯೋಗದ ಪವಿತ್ರ ವಿಜ್ಞಾನವನ್ನು ಬಳಸಿಕೊಂಡು ಹೃದಯ, ಮನಸ್ಸು ಮತ್ತು ಆತ್ಮವನ್ನು ಭಗವಂತನೊಂದಿಗೆ ಒಂದುಗೂಡಿಸಿದಾಗ, ಕುರುಕ್ಷೇತ್ರದ ನಮ್ಮದೇ ಆದ ಆಂತರಿಕ ಹೋರಾಟಗಳಲ್ಲಿ ಶಾಂತಿಯುತವಾಗಿ ಮತ್ತು ಬುದ್ಧಿವಂತಿಕೆಯಿಂದ ಮೇಲುಗೈ ಸಾಧಿಸಲು ನಾವು ಉತ್ತಮವಾಗಿ ಸಜ್ಜಾಗುತ್ತೇವೆ. ಪ್ರೇಮ-ನಿರ್ದೇಶಿತ ಮತ್ತು ಶಾಂತ ಸತ್ಕಾರ್ಯದ ಮೂಲಕ, ನಾವು ನಮ್ಮ ಕುಟುಂಬ ಪರಿಸರದಲ್ಲಿ ಮತ್ತು ನಮ್ಮ ಸಮುದಾಯಗಳಲ್ಲಿ ಶಾಂತಿದೂತರಾಗುತ್ತೇವೆ, ದೇವರ ಮಗುವಾಗಿ ಪ್ರತಿ ಆತ್ಮದೆಡೆಗೂ ಉದಾತ್ತ ಗೌರವ ತೋರುತ್ತ ಸಾಮರಸ್ಯದಿಂದ ಸಂವಹನ ನಡೆಸುತ್ತೇವೆ.
ನಮ್ಮ ಸಹಜ ಆತ್ಮದ ಗುಣಗಳನ್ನು ಪ್ರದರ್ಶಿಸುವ ಮೂಲಕ, ಭಗವಾನ್ ಕೃಷ್ಣ ಮತ್ತು ಗುರುಗಳೆಲ್ಲರಂತೆ ನಾವು ದೇವರ ಪ್ರಜ್ಞೆಯಲ್ಲಿ ಬದುಕುವ ಮತ್ತು ಸೇವೆ ಮಾಡುವ ಶಕ್ತಿಯನ್ನು ಹೊಂದಿದ್ದೇವೆ. ನಮ್ಮ ಹಾದಿಯಲ್ಲಿ ಬರುವ ಎಲ್ಲರಿಗೂ ಭಗವಂತನ ಬೆಳಕು ಮತ್ತು ಪ್ರೀತಿಯನ್ನು ಹೊರಸೂಸುತ್ತೇವೆ. ಎಲ್ಲಾ ಮಾನವ ಕುಲಕ್ಕೆ “ದೈವೀ ಪ್ರೀತಿಯ ಸಾಕಾರವಾಗಿರುವ, ಎಲ್ಲರಿಗೂ ಸಂತೋಷವನ್ನು ನೀಡುವ” ಪ್ರೀತಿಯ ಕೃಷ್ಣನ ಹೆಜ್ಜೆಗಳನ್ನು ನಮ್ರತೆಯಿಂದ ಅನುಸರಿಸುತ್ತಾ ನಾವು ಭಗವಂತನ ಒಳಗೊಳ್ಳುವಿಕೆಯಲ್ಲಿ ಒಟ್ಟಿಗೆ ನಡೆಯೋಣ. ದೈವತ್ವಕ್ಕೇರಬೇಕೆಂಬ ನಮ್ಮ ಇಚ್ಛೆಯ ಮೂಲಕ, ಸ್ಥಿರವಾಗಿ ಮತ್ತು ಖಚಿತವಾಗಿ ಉತ್ತಮ ಜಗತ್ತನ್ನು ರೂಪಿಸುತ್ತಿರುವ ಶಕ್ತಿಗಳನ್ನು ನಾವು ಹೆಚ್ಚಿಸುತ್ತೇವೆ.
ಭಗವಾನ್ ಶ್ರೀ ಕೃಷ್ಣನ ಸಂದೇಶ ಮತ್ತು ಆಶೀರ್ವಾಗಳು ನಿಮಗೆ ನಿರಂತರವಾಗಿ ಮಾರ್ಗದರ್ಶನ ನೀಡಲಿ,
ಸ್ವಾಮಿ ಚಿದಾನಂದ ಗಿರಿ