ಸಮಾಧಾನ ಮತ್ತು ಭರವಸೆಯ ಸಂದೇಶ

12 ಸೆಪ್ಟೆಂಬರ್, 2025

ಆತ್ಮೀಯರೇ,

ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದಜಿಯವರ ಹೆಸರಿನಲ್ಲಿ, ನಿಮ್ಮೆಲ್ಲರಿಗೂ ಪ್ರೀತಿಯ ನಮಸ್ಕಾರಗಳು.

ನೇಪಾಳದಲ್ಲಿ ನಡೆಯುತ್ತಿರುವ ನಾಗರಿಕ ಅಶಾಂತಿಯ ಸುದ್ದಿಗಳನ್ನು ಅಲ್ಲಿ ನಡೆಯುತ್ತಿರುವ ಜೀವಹಾನಿಗಳು, ಮನೆಗಳು ಮತ್ತು ಸಂಸ್ಥೆಗಳ ನಾಶ, ಹಾಗೂ ಸಮುದಾಯ ಎದುರಿಸುತ್ತಿರುವ ಅನಿಶ್ಚಿತತೆಯನ್ನು ನಾನು ಆಳವಾದ ಕಳವಳದಿಂದ ಗಮನಿಸುತ್ತಿದ್ದೇನೆ. ಇಡೀ ರಾಷ್ಟ್ರಕ್ಕಾಗಿ, ವಿಶೇಷವಾಗಿ ನೇಪಾಳದಲ್ಲಿರುವ ಗುರುಗಳ ಪ್ರೀತಿಯ ಮತ್ತು ಸಮರ್ಪಿತ ಭಕ್ತರಿಗಾಗಿ ನನ್ನ ಪ್ರಾರ್ಥನೆ —ಈ ವರ್ಷದ ಆರಂಭದಲ್ಲಿ ನನ್ನ ಭೇಟಿಯ ಸಮಯದಲ್ಲಿ ಅವರಲ್ಲಿ ಅನೇಕರನ್ನು ಭೇಟಿಯಾಗಿ ನನಗೆ ಸಂತೋಷ ಮತ್ತು ಪ್ರೇರಣೆ ದೊರೆತಿತ್ತು. ಈ ಸವಾಲಿನ ಸಮಯದಲ್ಲಿ, ನಮ್ಮೊಳಗೆ ಇರುವ ಭಗವಂತನ ಶಾಶ್ವತ ಶಾಂತಿಯಲ್ಲಿ ನಾವು ಆಂತರಿಕವಾಗಿ ನೆಲೆಗೊಳ್ಳೋಣ ಎಂಬುದನ್ನು ನೆನಪಿನಲ್ಲಿ ಇಡೋಣ, ಆತನ ದೈವಿಕ ರಕ್ಷಣೆ ಮತ್ತು ಅಪಾರ ಕರುಣೆಯಲ್ಲಿ ವಿಶ್ವಾಸವಿಡೋಣ. ಪವಿತ್ರ ಹಿಮಾಲಯದ ಮಡಿಲಲ್ಲಿರುವ ಈ ಸುಂದರ ರಾಷ್ಟ್ರವನ್ನು, ಆತನ ಆಶ್ರಯದ ಉಪಸ್ಥಿತಿಯು ಆವರಿಸಲಿ.

ನೀವೆಲ್ಲರೂ ಗುರುದೇವರ ವಿಶ್ವಾದ್ಯಂತ ಇರುವ ಆಧ್ಯಾತ್ಮಿಕ ಕುಟುಂಬದ ಒಂದು ಅಮೂಲ್ಯ ಭಾಗವಾಗಿದ್ದೀರಿ, ಮತ್ತು ಇಡೀ ರಾಷ್ಟ್ರವನ್ನು ದೈವಿಕ ಬೆಳಕಿನಿಂದ ಸುತ್ತುವರೆದಿರುವುದನ್ನು ದೃಶ್ಯೀಕರಿಸುವಲ್ಲಿ ನೀವೆಲ್ಲರೂ ನನ್ನ ಮತ್ತು ಗುರುಗಳ ಆಶ್ರಮಗಳಲ್ಲಿರುವ ಸಂನ್ಯಾಸಿಗಳೊಂದಿಗೆ ಸೇರಿಕೊಂಡಿದ್ದೀರಿ ಎಂದು ನನಗೆ ಖಚಿತವಾಗಿದೆ. ಪ್ರತಿದಿನ ಧ್ಯಾನದ ನಂತರ, ನಾವು ವೈಎಸ್ಎಸ್/ಎಸ್‌ಆರ್‌ಎಫ್‌ ವಿಶ್ವವ್ಯಾಪಿ ಪ್ರಾರ್ಥನಾ ವಲಯದ ಭಾಗವಾಗಿ ಗುರುಗಳ ಯೋಗ ಉಪಶಮನಕಾರಿ ತಂತ್ರವನ್ನು ಅಭ್ಯಾಸ ಮಾಡುವಾಗ, ಪವಿತ್ರವಾದ ‘ಓಂ’ ಕಂಪನವು ಪ್ರೀತಿಯ ಶಕ್ತಿಶಾಲಿ ತರಂಗವಾಗಿ ಹರಡುತ್ತಿದೆ – ಸಮತೋಲನವನ್ನು ಪುನಃಸ್ಥಾಪಿಸಲು, ಸದ್ಭಾವನೆಯನ್ನು ಪ್ರೇರೇಪಿಸಲು ಮತ್ತು ತಿಳುವಳಿಕೆ ಹಾಗೂ ಏಕತೆಗಾಗಿ ಹೃದಯಗಳನ್ನು ತೆರೆಯಲು ಇದು ಸಹಾಯ ಮಾಡುತ್ತದೆ ಎಂದು ನಾವು ಪ್ರಜ್ಞಾಪೂರ್ವಕವಾಗಿ ಭಾವಿಸೋಣ. ನಮ್ಮ ಆಳವಾದ ಹಂಬಲದ ತುರ್ತು ಮತ್ತು ಪ್ರಾಮಾಣಿಕ ನಂಬಿಕೆಯೊಂದಿಗೆ ಪ್ರಾರ್ಥಿಸುವುದರಿಂದ, ನಾವು ಜಗತ್ತಿಗೆ ಶಾಂತಿ ಮತ್ತು ಸಾಮರಸ್ಯದ ಅತೀಂದ್ರಿಯ, ಅಪರಿಮಿತ ಶಕ್ತಿಯೊಂದಿಗೆ ದೈವಿಕ ಸಹಾಯವು ಹರಿಯಲು ಒಂದು ಮಾರ್ಗವನ್ನು ತೆರೆಯುತ್ತೇವೆ.

ನಮ್ಮ ಗುರುದೇವ ಮತ್ತು ಪರಮಗುರುಗಳ ಕೃಪೆ ಮತ್ತು ಆಶೀರ್ವಾದವು ಈ ಸಂಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಿರುವ ನಿಮ್ಮೆಲ್ಲರಿಗೂ ಆಧ್ಯಾತ್ಮಿಕ ಶಕ್ತಿ ಮತ್ತು ಸಮಾಧಾನದ ಜೀವಂತ ಮೂಲವಾಗಲಿ. ನಿಮ್ಮೆಲ್ಲರನ್ನು ನಾನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ, ಮತ್ತು ದೈವಿಕ ಪ್ರೀತಿಯ ಆಲಿಂಗನದಲ್ಲಿ ನೀವು ಸುರಕ್ಷತೆ ಮತ್ತು ಧೈರ್ಯವನ್ನು ಕಂಡುಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.

ಭಗವಂತ ಮತ್ತು ಗುರುಗಳಿಂದ ಅವಿರತ ಆಶೀರ್ವಾದಗಳು,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ