ಪರಮಹಂಸ ಯೋಗಾನಂದರು ಬೋಧಿಸಿದಂತೆ, ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ಪ್ರೀತಿಯ ಮಗುವಾಗಿದ್ದು, ವಾಸ್ತವವಾಗಿ ಸರ್ವಶಕ್ತಿಶಾಲಿ ಮತ್ತು ಸದಾ ಆನಂದಮಯ ಆತ್ಮಗಳಾಗಿದ್ದೇವೆ.
ಆದರೂ, ನಾವು ಜೀವನದಲ್ಲಿ ಮುಂದುವರಿಯುತ್ತಿದ್ದಂತೆ, ನಮ್ಮ ಕಲ್ಪಿತ ದೋಷಗಳು ಮತ್ತು ತಾತ್ಕಾಲಿಕ ಅಭ್ಯಾಸಗಳ ಮೇಲೆ ಗಮನ ಹರಿಸುವುದು ತುಂಬಾ ಸುಲಭವಾಗುತ್ತದೆ ಮತ್ತು ನಾವು ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ — ನಾವು ನಿಜವಾಗಿಯೂ ನಮ್ಮ ಉದಾತ್ತ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಮಹಾನ್ ಸಂತರು ಹಾಗೂ ಋಷಿಗಳು ಬಣ್ಣಿಸುವಂತಹ ಉನ್ನತ ಪ್ರಜ್ಞಾವಸ್ಥೆಗಳನ್ನು ಅನುಭವಿಸಲು ನಾವು ನಿಜವಾಗಿಯೂ ಅರ್ಹರೇ ಎಂದು ಆಶ್ಚರ್ಯಪಡುತ್ತಾ.
ಆದರೆ ಪರಮಹಂಸಜಿಯವರು ತಮ್ಮ ಬೋಧನೆಗಳಲ್ಲಿ, ವಾಸ್ತವದಲ್ಲಿ ನಾವೆಲ್ಲರೂ ದೇವರೊಂದಿಗೆ ಈಗಾಗಲೇ ನಿತ್ಯವಾಗಿ ಒಂದಾಗಿದ್ದೇವೆ ಎಂದು ನಮಗೆ ನಿರಂತರವಾಗಿ ನೆನಪಿಸುತ್ತಾರೆ. ನಮ್ಮಲ್ಲಿ ಪ್ರತಿಯೊಬ್ಬರೂ ಧ್ಯಾನದ ಮೂಲಕ ಈ ಜೀವಿತಾವಧಿಯಲ್ಲಿಯೇ ದೈವ ಪ್ರಜ್ಞೆಯನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದ್ದೇವೆ.
ನಿಮ್ಮ ದೈವಿಕ ಹಕ್ಕಾದ ದೇವರ ಪ್ರೀತಿ ಮತ್ತು ಆನಂದವನ್ನು ಆಳವಾಗಿ ಅನುಭವಿಸಲು ಆತ್ಮವಿಶ್ವಾಸದಿಂದ ಪ್ರತಿಪಾದಿಸಲು ಸಹಾಯವಾಗುವಂತೆ, ಹೆಚ್ಚು ಸಕಾರಾತ್ಮಕ ಮತ್ತು ಆಧ್ಯಾತ್ಮಿಕವಾಗಿ ಚೈತನ್ಯಪೂರ್ಣ ದೃಷ್ಟಿಕೋನವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಪರಮಹಂಸಜಿಯವರ ಪ್ರಬಲ ಮಾರ್ಗದರ್ಶನ ಇಲ್ಲಿದೆ.
ಪರಮಹಂಸ ಯೋಗಾನಂದರ ಭಾಷಣಗಳು ಮತ್ತು ಬರಹಗಳಿಂದ ಆಯ್ದ ಕೆಲವು ಭಾಗಗಳು:
ನೀವು ಪರಮಾತ್ಮನ ಒಂದು ಭಾಗ ಎಂದು ಅರಿತುಕೊಳ್ಳಿ ಮತ್ತು ನಿಮ್ಮ ಜೀವನದ ಕಿಡಿಯ ಹಿಂದೆ ಅನಂತತೆಯ ಜ್ವಾಲೆ ಇದೆ; ನಿಮ್ಮ ಆಲೋಚನೆಗಳ ಮಿನುಗುವಿಕೆಯ ಹಿಂದೆ ದೇವರ ಮಹಾ ಬೆಳಕು ಇದೆ.
ನೀವೇನಾಗಿರುವಿರೋ ಅದು ನೀವೇನಾಗಬೇಕೆಂದು ಅಥವಾ ನೀವು ಯಾರಾಗಬೇಕೆಂದು ಬಯಸಿರುವಿರೋ ಅದಕ್ಕಿಂತ ಹೆಚ್ಚು. ಪರಮಾತ್ಮನು ಬೇರಿನ್ನಾವುದೇ ವ್ಯಕ್ತಿಯಲ್ಲೂ ಪ್ರಕಟಗೊಳ್ಳದ ರೀತಿಯಲ್ಲಿ ನಿಮ್ಮಲ್ಲಿ ಪ್ರಕಟಗೊಂಡಿದ್ದಾನೆ. ನಿಮ್ಮ ಮುಖವು ಬೇರಾವುದೇ ವ್ಯಕ್ತಿಯ ಮುಖಕ್ಕಿಂತ ಭಿನ್ನ, ನಿಮ್ಮ ಆತ್ಮವು ಬೇರಾವುದೇ ವ್ಯಕ್ತಿಯ ಆತ್ಮಕ್ಕಿಂತ ಭಿನ್ನ, ನಿಮಗೆ ನೀವೇ ಸಾಟಿ; ಏಕೆಂದರೆ ನಿಮ್ಮ ಆತ್ಮದಲ್ಲಿ ಎಲ್ಲ ಸಂಪತ್ತಿಗಿಂತ ಮಿಗಿಲಾದ ಪರಮಾತ್ಮ ನೆಲೆಸಿದ್ದಾನೆ.
ನೀವು ಏನನ್ನೂ ಮಾಡಲು ಅಸಮರ್ಥರು ಎಂದು ನಂಬಬೇಡಿ. ಅನೇಕ ಬಾರಿ ನೀವು ಯಾವುದಾದರೂ ಒಂದು ವಿಷಯದಲ್ಲಿ ಯಶಸ್ವಿಯಾಗಲು ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ನೀವು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನಿಮ್ಮ ಮನಸ್ಸಿನಲ್ಲಿ ನಿರ್ಧರಿಸಿದ್ದೀರಿ. ಆದರೆ, ನಿಮ್ಮ ಮನಸ್ಸಿಗೆ ಅದರ ಸಾಧನಾ ಶಕ್ತಿಯ ಬಗ್ಗೆ ಮನವರಿಕೆ ಮಾಡಿಸಿದಾಗ, ನೀವು ಏನನ್ನಾದರೂ ಸಾಧಿಸಬಹುದು!
ದೇವರೊಂದಿಗೆ ಭಾವೈಕ್ಯ ಸಾಧಿಸುವುದರಿಂದ ನೀವು ಮರ್ತ್ಯಭಾವದಿಂದ ಅಮರತ್ವಕ್ಕೆ ಏರುತ್ತೀರಿ. ನೀವು ಹೀಗೆ ಮಾಡಿದಾಗ, ನಿಮ್ಮನ್ನು ಮಿತಿಗೊಳಿಸುವ ಎಲ್ಲಾ ಬಂಧನಗಳು ಛಿದ್ರವಾಗುತ್ತವೆ. ಇದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತಿ ಮಹತ್ತರವಾದ ನಿಯಮವಾಗಿದೆ.
ಹಲವು ವರ್ಷಗಳ ಹಿಂದೆ ನಾನು ಧ್ಯಾನ ಮಾಡುವಾಗ, “ನನಗೆ ಎಂದಾದರೂ ಪರಮಾನಂದ ಸಿಗುತ್ತದೆಯೇ?” ಎಂದು ಯೋಚಿಸುತ್ತಿದ್ದೆ. ಸಮಾಧಿಯು ನನಗೆ ಎಂದಿಗೂ ಬರುವುದಿಲ್ಲ ಎಂದು ನಾನು ಭಯಪಟ್ಟಿದ್ದೆ. ಆದರೆ ನಾನು ಆ ಭಯದ ಆಲೋಚನೆಗಳನ್ನು ಬಿಟ್ಟ ತಕ್ಷಣ, ಅದು ಅಲ್ಲಿತ್ತು. ನಾನು ನನ್ನನ್ನೇ ಕೇಳಿಕೊಂಡೆ: “ಎಷ್ಟು ವಿಚಿತ್ರ! ನನ್ನ ತುಂಬಾ ಚಂಚಲವಾದ ಮನಸ್ಸಿನಿಂದಾಗಿ ದೇವರನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಹೆದರುತ್ತಿದ್ದೆ.” ನನಗೆ ದೇವರು ಎಂದಿಗೂ ಸಿಗುವುದಿಲ್ಲ ಎಂಬ ಭಯವನ್ನು ಕಳೆದುಕೊಂಡಾಗ, ನಾನು ಆತನನ್ನು ಕಂಡುಕೊಂಡೆ.
ನಿಮ್ಮ ಮನಸ್ಸಿನಲ್ಲಿರುವ, ದೇವರು ನೀಡಿರುವ ಸಹಜ ಸಾಮರ್ಥ್ಯಗಳ ಬೀಜಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂದು ತಿಳಿಯಿರಿ…. ನಿಮ್ಮ ಮನಸ್ಸಿನ ಮೇಲೆ ನೀವೇ ಹಾಕಿರುವ ಮಿತಿಗಳನ್ನು ನೀವು ತೆಗೆದುಹಾಕಿದರೆ, ಅದು ಎಷ್ಟೆಲ್ಲಾ ಸಾಧಿಸಬಲ್ಲದು ಎಂದು ನಿಮಗೆ ಆಶ್ಚರ್ಯವಾಗುತ್ತದೆ.
2025 ರ ಎಸ್‌ಆರ್‌ಎಫ್ ವಿಶ್ವ ಮಹಾಸಮಾವೇಶದಲ್ಲಿ ವೈಎಸ್ಎಸ್/ಎಸ್‌ಆರ್‌ಎಫ್ ನ ಅಧ್ಯಕ್ಷರಾದ ಸ್ವಾಮಿ ಚಿದಾನಂದಜಿ ಅವರು ನೀಡಿದ “ನಾವು ಆಧ್ಯಾತ್ಮಿಕ ಪ್ರಜ್ಞೆಯ ಆಶೀರ್ವಾದಕ್ಕೆ ಅರ್ಹರು” ಎಂಬ ಶೀರ್ಷಿಕೆಯ ಸತ್ಸಂಗದಿಂದ ಆಯ್ದ ಭಾಗವನ್ನು ಓದಿ, ಅದರಲ್ಲಿ ಅವರು ಪರಮಹಂಸ ಯೋಗಾನಂದರ ಒಂದು ಸ್ಫೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ ಮತ್ತು ಪರಮಹಂಸಜಿಯವರ “ಕಾಸ್ಮಿಕ್ ಚಾಂಟ್ಸ್” (ಬ್ರಹ್ಮಾಂಡ ಪಠಣಗಳು)ಗಳಲ್ಲಿ ಒಂದರ ನಮ್ಮ ಅಭ್ಯಾಸವನ್ನು ಹೇಗೆ ಆಳಗೊಳಿಸಬಹುದು ಎಂಬುದನ್ನು ವಿವರಿಸಿದ್ದಾರೆ — ನಾವು ದೈವದಿಂದ ಎಷ್ಟು ಪೋಷಿಸಲ್ಪಟ್ಟಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲು.