ಶ್ರೀ ದಯಾ ಮಾತಾ ಅವರಿಂದ “ನಮ್ಮ ಬಗ್ಗೆ ನಾವು ಆರೋಗ್ಯಕರ, ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು”

10 ಸೆಪ್ಟೆಂಬರ್ 2025

ಈ ಕೆಳಗಿನ ಸಂದೇಶವು ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಮೂರನೇ ಅಧ್ಯಕ್ಷರು ಮತ್ತು ಸಂಘಮಾತಾ (“ಸಂಸ್ಥೆಯ ಮಾತೆ”) ಆಗಿ 1955 ರಿಂದ 2010 ರಲ್ಲಿ ಅವರು ನಿಧನರಾಗುವವರೆಗೂ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಶ್ರೀ ದಯಾ ಮಾತಾ ಅವರದ್ದಾಗಿದೆ. ಈ ಸಂದೇಶವು ಮೂಲತಃ 2010 ರಲ್ಲಿ ಯೋಗದ ಸತ್ಸಂಗ ಪತ್ರಿಕೆಯಲ್ಲಿ “ಶ್ರೀ ದಯಾ ಮಾತಾ ಅವರ ಪತ್ರ” ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು; ಇಂತಹ ಸಂದೇಶಗಳು ಹಲವು ದಶಕಗಳಿಂದ ಪತ್ರಿಕೆಯ ಓದುಗರಿಂದ ಪ್ರೋತ್ಸಾಹ ಮತ್ತು ವಿವೇಕಯುಕ್ತ ಸಲಹೆಗಳಿಗಾಗಿ ಬಹಳವಾಗಿ ಪ್ರೀತಿಸಲ್ಪಟ್ಟಿವೆ.

ಕಮಲ-ಕೇಸರಿ-ರೇಖಾಚಿತ್ರ

ಭಗವಂತನ ಕಡೆಗೆ ನಮ್ಮ ಪಯಣ — ಮತ್ತು ನಮ್ಮ ಜೀವನದ ಇತರ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವಾಗ — ನಮ್ಮ ಬಗ್ಗೆ ನಾವು ಆರೋಗ್ಯಕರ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ.

ಇದೇ ವಿಷಯವನ್ನು ಗುರುದೇವ ಪರಮಹಂಸ ಯೋಗಾನಂದರು ಯಾವಾಗಲೂ ಒತ್ತಿಹೇಳುತ್ತಿದ್ದರು: ನಾವು ಏನನ್ನು ಬಲವಾಗಿ ಯೋಚಿಸುತ್ತೇವೋ ಮತ್ತು ನಂಬುತ್ತೇವೋ, ಅದನ್ನು ನಮ್ಮ ಜೀವನಕ್ಕೆ ಆಕರ್ಷಿಸುತ್ತೇವೆ. ನಾವು ನಮ್ಮನ್ನು ಆತ್ಮಗಳೆಂದು ಭಾವಿಸುವ ಆನಂದಮಯ ಮನೋಭಾವವನ್ನು ಬೆಳೆಸಿಕೊಂಡರೆ — ನಮ್ಮ ಆಧ್ಯಾತ್ಮಿಕ ಸಾಮರ್ಥ್ಯ ಮತ್ತು ಸಹಜವಾದ ಒಳ್ಳೆಯತನದಲ್ಲಿ ನಂಬಿಕೆಯಿಟ್ಟು,ಮತ್ತು ಇವುಗಳನ್ನು ಬೆಳೆಸಿಕೊಂಡರೆ — ನಮ್ಮೊಳಗಿರುವ ನಮ್ಮ ನೈಜ ಸ್ವರೂಪವಾದ, ಆತ್ಮ ಅಥವಾ ದೈವೀ ಚೇತನವನ್ನು ಹೆಚ್ಚು ಪ್ರಕಟಗೊಳಿಸುತ್ತೇವೆ.

ದೇವರ ಭವ್ಯ ಗುಣಗಳ ಒಂದು ವಿಶಿಷ್ಟ ಅಭಿವ್ಯಕ್ತಿಯಾಗಿ ಪ್ರತಿಯೊಬ್ಬ ವ್ಯಕ್ತಿಯ ಆತ್ಮವೂ ವಿಶೇಷವಾಗಿ ಸೃಷ್ಟಿಯಾಗಿದೆ. ಈ ಸತ್ಯದ ಮೇಲೆ ಗಮನ ಹರಿಸುವುದು ರೋಮಾಂಚನಕಾರಿ! ಮೂಲತಃ ನಮ್ಮಲ್ಲಿ ಯಾವ ಕೊರತೆಯೂ ಇಲ್ಲ. ಧ್ಯಾನದ ಶಕ್ತಿಯ ಮೂಲಕ ಮತ್ತು ಸರಿಯಾದ ಜೀವನ ನಡೆಸುವ ಮೂಲಕ ಈಗಾಗಲೇ ನಮ್ಮಲ್ಲಿರುವ ಪರಿಪೂರ್ಣತೆಯನ್ನು ನಾವು ಮರುಶೋಧಿಸಬೇಕಾಗಿದೆ ಅಷ್ಟೇ.

ಪರಮಹಂಸ ಯೋಗಾನಂದರು ಹೇಳಿದಂತೆ: “ನೀವು ಯಾರನ್ನಾದರೂ ಅಥವಾ ಯಾವುದನ್ನಾದರೂ ಬಲವಾಗಿ ಹಂಬಲಿಸಿದ್ದಕ್ಕಿಂತ, “ನೀವು ಏನಾಗಿದ್ದೀರಿ” ಎಂಬುದು ಹೆಚ್ಚು ಶ್ರೇಷ್ಠವಾಗಿದೆ. ದೇವರು ಬೇರೆ ಯಾವುದೇ ಮನುಷ್ಯನಲ್ಲಿ ಪ್ರಕಟಗೊಳ್ಳದ ರೀತಿಯಲ್ಲಿ ನಿಮ್ಮಲ್ಲಿ ಪ್ರಕಟನಾಗಿದ್ದಾನೆ. ನಿಮ್ಮ ಮುಖ ಬೇರೆ ಯಾರ ಮುಖದಂತೆಯೂ ಇಲ್ಲ, ನಿಮ್ಮ ಆತ್ಮ ಬೇರೆ ಯಾರ ಆತ್ಮದಂತೆಯೂ ಇಲ್ಲ, ನೀವು ಸ್ವಯಂಪೂರ್ಣರು; ಏಕೆಂದರೆ ನಿಮ್ಮ ಆತ್ಮದೊಳಗೆ ಎಲ್ಲಾ ಸಂಪತ್ತುಗಳಿಗಿಂತ ಶ್ರೇಷ್ಠವಾದ ನಿಧಿ ಇದೆ — ಅದುವೇ ದೇವರು.”

ಇದನ್ನು ಹೆಚ್ಚು ಅನುಭವಿಸಿ ಮತ್ತು ನಂಬಿಕೆಯನ್ನಿಡಿ. ನಾವೇಕೆ ನಮ್ಮ ಮೇಲೆ ಮಿತಿಗಳನ್ನು ಅಥವಾ ಹಿಂದಿನ ತಪ್ಪುಗಳನ್ನು ಆರೋಪಿಸಿಕೊಳ್ಳಬೇಕು? ಪ್ರತಿದಿನವನ್ನೂ ಹೊಸದಾಗಿ ಪ್ರಾರಂಭಿಸೋಣ — ದೇವರ ಬೇಷರತ್ತಾದ ಪ್ರೀತಿಯಲ್ಲಿ ಮತ್ತು ನಮ್ಮ ಪ್ರಾಮಾಣಿಕ ಹಾಗೂ ನಿರಂತರ ಪ್ರಯತ್ನಗಳಲ್ಲಿ ಆತನ ಸಕ್ರಿಯ ಸಹಾಯದಲ್ಲಿ ಪೂರ್ಣ ನಂಬಿಕೆಯಿಡೋಣ. ಸಂದೇಹ ಮತ್ತು ನಿರುತ್ಸಾಹದ ಕತ್ತಲೆಯನ್ನು ಸಂತೋಷವನ್ನು ಸೃಷ್ಟಿಸುವ ಆಲೋಚನೆಗಳು ಮತ್ತು ಕಾರ್ಯಗಳ ಪ್ರಕಾಶಮಾನವಾದ ಬೆಳಕಿನಿಂದ ದೂರ ಓಡಿಸಿ; ಇದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆತ್ಮದ ಸಹಜ ಮಾರ್ಗವಾಗಿದೆ.

ನಿಮ್ಮೊಳಗಿರುವ ದೈವೀ ಗುಣಗಳನ್ನು ಗುರುತಿಸಲು ಮತ್ತು ವ್ಯಕ್ತಪಡಿಸಲು ಕಲಿಯಿರಿ, ಇದು ಅಹಂಕಾರದ ಹೆಮ್ಮೆಯಿಂದಲ್ಲ, ಬದಲಾಗಿ ನಿಮ್ಮನ್ನು ಅನಂತ ಪ್ರೇಮಿಯು ಬಹಳ ಪ್ರೀತಿಯಿಂದ ಪೋಷಿಸುತ್ತಿದ್ದಾನೆ ಮತ್ತು ತನ್ನ ಅಂಶವನ್ನು ನಿಮ್ಮ ಮೂಲಕ ಈ ಜಗತ್ತಿಗೆ ನೀಡಲು ಬಯಸುತ್ತಾನೆ ಎಂಬ ಕಾರಣಕ್ಕೆ.

ಪರಮಹಂಸಜಿಯವರು ಹೇಳಿದರು, “ನೀವು ದೇವರ ಮಗು ಎಂದು ಸದಾ ಹೆಮ್ಮೆಪಡಿ”. “ನಿಮ್ಮ ಮಾತನಾಡುವ, ಚಲಿಸುವ ಮತ್ತು ಅನುಭವಿಸುವ ಸಾಮರ್ಥ್ಯದ ಹಿಂದೆ ಆತನ ಶಕ್ತಿಯೇ ಇದೆ… ನಿಮ್ಮೊಳಗೆ ನೀವು ಆತನೊಂದಿಗೆ ಸಂವಹನ ಮಾಡಬಹುದು… ನಿಯಮಿತವಾಗಿ ಧ್ಯಾನ ಮಾಡಿ… ಆಗ ನಿಮಗೆ ವಿಮೋಚನೆ ಸಿಗುತ್ತದೆ; ಮತ್ತು ನಿಮ್ಮ ಜೀವನದ ಪ್ರಭಾವವು ಇತರರಿಗೆ ತಮ್ಮನ್ನು ವಿಮೋಚನೆಗೊಳಿಸಿಕೊಳ್ಳುವ ಮಾರ್ಗವನ್ನು ತೋರಿಸುತ್ತದೆ.”

ಇದನ್ನು ಹಂಚಿಕೊಳ್ಳಿ