ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಬಡವರು ಮತ್ತು ಪೀಡಿತರಿಗೆ ವೈಎಸ್‌ಎಸ್‌ನಿಂದ ಸಹಾಯಹಸ್ತ
ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಅಂತರಾಷ್ಟ್ರೀಯ ಗಡಿಗಳನ್ನು ಮೀರಿ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ, ಅದನ್ನು ತಡೆಯುವ ಸಲುವಾಗಿ, ಪ್ರಪಂಚದಾದ್ಯಂತ ಅನೇಕ ದೇಶಗಳು ಲಾಕ್‌ಡೌನ್‌ನ್ನು ಹೇರತೊಡಗಿವೆ. ಭಾರತ ಸರ್ಕಾರವೂ ಸಹ 25 ಮಾರ್ಚ್, 2020ರಿಂದ ದೇಶಾದ್ಯಂತ ಲಾಕ್‌ಡೌನ್‌ನ್ನು ಘೋಷಿಸಿದೆ. ಈ ಲಾಕ್‌ಡೌನ್‌ನ ಮಿತಿಯನ್ನು ಇನ್ನೂ ಮೇ 2020ರ ಮೊದಲ ವಾರದವರೆಗೂ ವಿಸ್ತರಿಸಲು ಚಿಂತನೆ ನಡೆಸಿದೆ.
ಈ ಅನಿರೀಕ್ಷಿತ ಪರಿಸ್ಥಿತಿಯು ಎಲ್ಲರ ಮೇಲೂ ಪರಿಣಾಮ ಬೀರಿದ್ದರೂ, ಹೆಚ್ಚಾಗಿ ಬಡತನದ ರೇಖೆಯ ಆಸುಪಾಸಿನಲ್ಲಿರುವವರಿಗೆ — ದಿನಗೂಲಿ ನೌಕರರು, ವ್ಯಾಪಾರಿಗಳು, ಭಿಕ್ಷುಕರು ಮತ್ತು ವೃದ್ಧರು ಹಾಗೂ ಅಸ್ವಸ್ಥರನ್ನು ಹೆಚ್ಚಾಗಿ ಬಾಧಿಸಿದೆ. ಲಾಕ್‌ಡೌನ್‌ನ್ನು ಘೋಷಿಸಿದ ತಕ್ಷಣವೇ, ಭಾರತೀಯ ಯೋಗದಾ ಸತ್ಸಂಗ ಸಂಸ್ಥೆಯು ಆಹಾರ ಮತ್ತು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬೇಕಾದ ಸಾಮಗ್ರಿಗಳನ್ನು ಸಮಾಜದ ಈ ವರ್ಗದವರಿಗೆ ಪೂರೈಸಲು ಪ್ರಾರಂಭಿಸಿತು. ಹಾಗೆಯೇ ನಮ್ಮ ಎಲ್ಲಾ ಭಕ್ತ ವೃಂದದವರಲ್ಲಿ ಈ ಮಾನವೀಯತೆಯ ಕಾರ್ಯಗಳಿಗೆ ನೆರವಾಗಲು ಉದಾರ ಹಸ್ತದಿಂದ ದೇಣಿಗೆ ನೀಡಲು ವಿನಂತಿಸಿಕೊಳ್ಳುತ್ತೇವೆ.

ಭಕ್ತಾದಿಗಳಿಂದ ನಮ್ಮ ವಿನಂತಿಗೆ ಹೃದಯಪೂರ್ವಕ ಸ್ಪಂದನೆ

ದಕ್ಷಿಣೇಶ್ವರ: ಸ್ವಾಮಿ ಅಚ್ಯುತಾನಂದಜಿ ಮತ್ತು ಸ್ವ-ಸಹಾಯಕರು ಕೊಳಗೇರಿಯ 300 ಕುಟುಂಬಗಳಿಗೆ ದವಸ ಧಾನ್ಯಗಳನ್ನು ವಿತರಿಸುತ್ತಿರುವುದು
ನಾವು ವಿನಂತಿಸಿಕೊಂಡ ಕೂಡಲೇ, ದೇಣಿಗೆಯು ಹರಿದು ಬರಲು ಪ್ರಾರಂಭವಾಯಿತು. ಭಕ್ತರು ನಿರ್ಗತಿಕರಾದ ತಮ್ಮ ಸಹೋದರ-ಸಹೋದರಿಯರಿಗೆ ನೆರವಾಗಲು ಹೃದಯಪೂರ್ವಕವಾಗಿ ಉದಾರಹಸ್ತದಿಂದ ದಾನ ನೀಡಿ ತಮ್ಮ ಸಹಾನುಭೂತಿ ಮತ್ತು ಪ್ರೀತಿಯ ಧಾರೆ ಹರಿಸಿದರು.
ಅವರ ಈ ಉದಾರ ಕಾಣಿಕೆಗಳಿಂದ ವೈಎಸ್‌ಎಸ್ ಆಶ್ರಮವು, ಆಶ್ರಮದ ಬಳಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡಲು ಸಾಧ್ಯವಾಯಿತು. ವೈಎಸ್‌ಎಸ್ ಸಂಸ್ಥೆಯು, ಸಂತ್ರಸ್ತರನ್ನು ಗುರುತಿಸಲು ಸಹಾಯ ಮಾಡುವಂತೆ ಸ್ಥಳೀಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದುದಲ್ಲದೇ, ಇತರ ಸರ್ಕಾರೇತರ ಸಹಾಯ ಸಂಸ್ಥೆಗಳನ್ನೂ – ಉದಾಹರಣೆಗೆ – ಝೊಮ್ಯಾಟೋರವರ ‘ಫೀಡಿಂಗ್ ಇಂಡಿಯಾ’ ಮತ್ತು ಸ್ಥಳೀಯ ಸಂಘಗಳಿಗೆ – ಪೀಡಿತರಿಗೆ ಈ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಸಂಪರ್ಕಿಸಲಾಗಿದೆ.
ವೈಎಸ್‌ಎಸ್ ಕೇಂದ್ರಗಳು ಮತ್ತು ಮಂಡಳಿಗಳು ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿವೆ

ನೋಯ್ಡಾ: ನೋಯ್ಡಾ ಆಶ್ರಮದ ಸಮೀಪದ ಕೊಳಗೇರಿಗಳಿಗೆ ಪಡಿತರ ವಿತರಣೆ
ಲಾಕ್‌ಡೌನ್‌ನ ಈ ಸಮಯದಲ್ಲಿ ಸ್ವ-ಸಹಾಯಕರ ಲಭ್ಯತೆಯು ವಿರಳವಾಗಬಹುದೆಂಬ ಕಾರಣದಿಂದ ವೈಎಸ್‌ಎಸ್, ಕೋವಿಡ್-19ರ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ತನ್ನ ಕೇಂದ್ರ ಹಾಗೂ ಮಂಡಳಿಗಳಿಗೆ ಆದೇಶ ನೀಡಲು ಹಿಂದೇಟು ಹಾಕುವಂತಾಯಿತು. ಆದರೆ, ಅನೇಕ ವೈಎಸ್‌ಎಸ್ ಕೇಂದ್ರ ಹಾಗೂ ಮಂಡಳಿಗಳು ಸ್ವ-ಪ್ರೇರಣೆಯಿಂದ ಹಾಗೂ ಉತ್ಸಾಹದಿಂದ ತಮ್ಮ ನೆರೆಹೊರೆಯ ವ್ಯಾಪ್ತಿಯಲ್ಲಿ ಬರುವ ಪೀಡಿತರಿಗೆ ನೆರವಾಗಲು ಮುಂದೆ ಬಂದವು. ಈ ರೀತಿ ತಮ್ಮ ನೆರೆಹೊರೆಯಲ್ಲಿರುವ ಬಡವರ ಬಗ್ಗೆ ತಮಗಿರುವ ಕಾಳಜಿ ಹಾಗೂ ಪ್ರೀತಿಯನ್ನು ಕಾರ್ಯ ರೂಪಕ್ಕೆ ತಂದರು!

ನೋಯ್ಡಾ: ನೋಯ್ಡಾ ಆಶ್ರಮದಿಂದ ಸರಬರಾಜಾದ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಪೋಲೀಸರು ಸಹಾಯ ಮಾಡುತ್ತಿರುವುದು
ಬಡವರಿಗೆ ಸಹಾಯ ಮಾಡುವುದರ ಜೊತೆ ಜೊತೆಗೆ ವೈಎಸ್‌ಎಸ್, ಪೋಲೀಸ್ ಮತ್ತು ವೈದ್ಯರುಗಳಿಗೂ ಸಹ ತನ್ನ ಕೈಲಾದ ಸಹಾಯವನ್ನು ಮಾಡುವುದರ ಮೂಲಕ ಅವರ ಕಾರ್ಯಗಳಿಗೆ ಬೆಂಬಲ ಸೂಚಿಸಿದೆ. ವೈಎಸ್‌ಎಸ್ ಆಶ್ರಮವು ಪೋಲೀಸ್ ನೌಕರರಿಗೆ ಕುಡಿಯುವ ನೀರಿನ ಬಾಟಲ್‌ಗಳು, ಮಾಸ್ಕ್‌ಗಳು ಮತ್ತು ಹಣ್ಣಿನ ಜ್ಯೂಸ್‌ಗಳನ್ನು ಪೂರೈಸುತ್ತಿದೆ. ವೈಎಸ್‌ಎಸ್ ಧ್ಯಾನ ಕೇಂದ್ರ, ಕೊಯಮತ್ತೂರು ಶಾಖೆಯು ಅವರ ಪ್ರದೇಶದ ವೈದ್ಯರುಗಳಿಗಾಗಿ ನೂರಾರು ರಕ್ಷಣಾತ್ಮಕ ಉಡುಪುಗಳನ್ನು ನೀಡಿದೆ. ರಾಂಚಿ ಬಳಿಯ ಹಳ್ಳಿಗಳ ಸುಮಾರು 2,700 ಕುಟುಂಬಗಳಿಗೆ ಸ್ನಾನದ ಸಾಬೂನು ಮತ್ತು ಬಟ್ಟೆ ತೊಳೆಯುವ ಸಾಬೂನುಗಳನ್ನು ನೀಡಿದೆ.
ಇದರಲ್ಲಿ, ದೇಶದಾದ್ಯಂತ ನಾವು ಕೈಗೊಂಡ “ಸೇವಾ ಕಾರ್ಯಗಳ” ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನೂರಾರು ಭಕ್ತರು ಕೈಗೊಂಡ ಈ ಸೇವಾ ಕಾರ್ಯಗಳು ದಿನ ಪತ್ರಿಕೆಗಳು, ಬ್ಲಾಗರ್‌ಗಳ ಗಮನವನ್ನು ಸೆಳೆದಿದ್ದು, ಅವರು ತಮ್ಮ ಮಾಧ್ಯಮಗಳಲ್ಲಿ – ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳೆರಡರಲ್ಲೂ – ಇದರ ವರದಿ ಮಾಡಿದ್ದಾರೆ. ಈ ವರದಿಗಳನ್ನೂ ಸಹ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ವೈಎಸ್‌ಎಸ್ ಭಕ್ತವೃಂದ ಹಾಗೂ ನಮ್ಮೊಂದಿಗೆ ಕೈಜೋಡಿಸಿದ ಅನೇಕ ಸರ್ಕಾರೇತರ ಸಂಸ್ಥೆಗಳು ನೀಡಿದ – ಅವರ ಸಮಯ, ಸಂಪನ್ಮೂಲಗಳು, ಆರ್ಥಿಕ ಸಹಾಯಕ್ಕಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತುಂಬು ಹೃದಯದ ಪ್ರೀತಿಯಿಂದ, ಈ ವಿಷಮ ಪರಿಸ್ಥಿತಿಯಿಂದ ಬಾಧಿತರಾದವರ ಹೃದಯಗಳಲ್ಲಿ ಭರವಸೆಯ ಹೊಸ ಜ್ಯೋತಿಯೊಂದನ್ನು ಬೆಳಗಿಸಿದುದ್ದಕ್ಕಾಗಿ ನಾವು ಅವರೆಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತಿದ್ದೇವೆ.
ದೇವರು ಮತ್ತು ಗುರುಗಳು ನಿಮ್ಮೆಲ್ಲರನ್ನೂ ಅವರ ರಕ್ಷಣೆ ಮತ್ತು ಪ್ರೀತಿಯ ಸರ್ವಾವೃತ ಕವಚದಲ್ಲಿ ಇರಿಸಬೇಕೆಂದು ನಮ್ಮ ಹೃತ್ಪೂರ್ವಕ ಪ್ರಾರ್ಥನೆ.





ಮಾಧ್ಯಮ ವರದಿ
ಮೇ 11
ಮೇ 4
ಏಪ್ರಿಲ್ 30
ಏಪ್ರಿಲ್ 29
ಏಪ್ರಿಲ್ 21
ಏಪ್ರಿಲ್ 19
ಏಪ್ರಿಲ್ 18
ಏಪ್ರಿಲ್ 12
ಏಪ್ರಿಲ್ 11
ಏಪ್ರಿಲ್ 10
ಏಪ್ರಿಲ್ 9