ಸ್ವಾಮಿ ಚಿದಾನಂದ ಗಿರಿಯವರಿಂದ ಕ್ರಿಸ್‌ಮಸ್‌ ಸಂದೇಶ 2019

7 ನೇ ಡಿಸೆಂಬರ್‌, 2019

ಆತ್ಮೀಯರೇ,

ನಿಮಗೆ ಮತ್ತು ವಿಶ್ವದಾದ್ಯಂತ ನೆಲೆಸಿರುವ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಕುಟುಂಬದ ಸದಸ್ಯರು ಹಾಗೂ ಸ್ನೇಹಿತ ವೃಂದಕ್ಕೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು. ಈ ಸಂತೋಷದ ಋತುವಿನಲ್ಲಿ, ಸ್ವರ್ಗಿಯ ಪ್ರಾಂತ್ಯಗಳಿಂದ ಬರುವ ವಿಶೇಷ ಕಾಂತಿಯನ್ನು ಸ್ವೀಕರಿಸಲು ಸಿದ್ಧವಿರುವ ಪಾರದರ್ಶಕ ಹೃದಯಗಳಿಗೆ, ಕ್ರಿಸ್ತನ ಪ್ರೀತಿಯ ಸಾಮರಸ್ಯದ ಬೆಳಕಿನ ಶಾಂತಿಯ ಅನುಭವವಾಗಲಿ ಎಂದು ಪ್ರಾರ್ಥಿಸುತ್ತೇನೆ.

ಅನಂತ ಕ್ರಿಸ್ತ ಪಜ್ಞೆಯು ( ಕೂಟಸ್ಥ ಚೈತನ್ಯ) ಸಮಸ್ತ ಸೃಷ್ಟಿಯಲ್ಲಿ ವ್ಯಕ್ತವಾಗುವ ಸರ್ವ ಐಕ್ಯತೆಯ ದೈವೀ ಪ್ರಜ್ಞೆಯು ಎಲ್ಲಾ ಜೀವಿಗಳನ್ನೂ, ರಾಷ್ಟ್ರ, ಜನಾಂಗ ಮತ್ತು ನಂಬಿಕೆಗಳನ್ನು ಒಂದೇ ಕುಟುಂಬವಾಗಿ ಸಮಾನ ಪ್ರೀತಿಯಿಂದ ಸ್ವೀಕರಿಸುತ್ತದೆ. ಈ ಮಾಯೆಯ ವಿಶ್ವದಲ್ಲಿ ವಿಭಿನ್ನತೆಗಳು ನಮ್ಮನ್ನು ವಿಭಜಿಸುವಂತೆ ತೋರಿದರೂ, ಅವು ಕೇವಲ ಮೇಲ್ನೋಟಕ್ಕಷ್ಟೇ ಎಂದು ಸಮಯೋಚಿತವಾಗಿ ಅರಿಯೋಣ. ಭಗವಂತನ ಮಕ್ಕಳಾಗಿ ನಾವು ಪರಸ್ಪರ ಹಂಚಿಕೊಳ್ಳುವ ಬಾಂಧವ್ಯವು ಇನ್ನು ಆಳವಾದ ಅನುಬಂಧವಾಗಿದೆ. “ಭೂಮಿಯ ಮೇಲಿನ ಶಾಂತಿ ಹಾಗೂ ಸದ್ಭಾವನೆಯ” ಸಾರ್ವತ್ರಿಕ ಕ್ರಿಸ್ಮಸ್ ಸಂದೇಶದೊಂದಿಗೆ ನಮ್ಮ ಹೃದಯಗಳು ನವ ಉತ್ಕೃಷ್ಟತೆಗೇರಲಿ. ಏಸುವು ವ್ಯಕ್ತಪಡಿಸಿದ ಈ ಸಮಗ್ರವಾದ ಹಾಗೂ ನಿಸ್ವಾರ್ಥ ಪ್ರೀತಿಯು ನಮ್ಮ ಪ್ರತಿಯೊಬ್ಬರಲ್ಲಿಯೂ ಮತ್ತೆ ಜನಿಸಲು ಸಾಧ್ಯ.

ಏಸು ಕ್ರಿಸ್ತನು ಅತೀವ ಸಂಕಷ್ಟದ ಸಮಯದಲ್ಲಿ ಅವತರಿಸಿದನು ಮತ್ತು ಕ್ಷಮೆ, ಸಹಾನುಭೂತಿ ಹಾಗೂ ಪ್ರೇಮದ ಶಕ್ತಿಯು ದ್ವೇಷದ ನಾಶಕ್ಕಿಂತ ಹೆಚ್ಚು ಮಹತ್ತರವಾದದ್ದು ಮತ್ತು ದೀರ್ಘಕಾಲ ಬಾಳುವಂತಹದ್ದು ಎಂದು ಜಗತ್ತಿಗೆ ಸಾಬೀತುಪಡಿಸಿದನು. ಆತನ ಮಾದರಿಯಿಂದ ಧೈರ್ಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಪ್ರತಿಯೊಂದು ಒಳ್ಳೆಯ ಆಲೋಚನೆ ಮತ್ತು ಕ್ರಿಯೆಯಿಂದ ನೀವೂ ಸಹ ಭಗವಂತನ ಪ್ರೀತಿಯನ್ನು ಈ ಜಗತ್ತಿಗೆ ಹೆಚ್ಚಾಗಿ ತರುತ್ತಿದ್ದೀರಿ ಎಂದು ಅರಿಯಿರಿ. ಆತ ಒತ್ತಿ ಹೇಳಿದ ಅತ್ಯುನ್ನತವಾದ ಸಂದೇಶಗಳನ್ನು ನಾವು ಪಾಲಿಸಲು ಶ್ರಮಿಸಿದಾಗ, ನಮ್ಮ ಇಡೀ ಅಸ್ತಿತ್ವದಲ್ಲಿ ಅದ್ಭುತವಾದ, ವಿಮೋಚನೆಯ ಪ್ರಜ್ಞೆಯನ್ನು ವಿಸ್ತರಿಸುವ ರೂಪಾಂತರವು ನಡೆಯುತ್ತದೆ: “ಭಗವಂತನನ್ನು ನಿನ್ನ ಸಂಪೂರ್ಣ ಹೃದಯದಿಂದ, ನಿನ್ನ ಪೂರ್ಣ ಆತ್ಮದಿಂದ, ಪೂರ್ಣ ಮನಸ್ಸಿನಿಂದ ಮತ್ತು ನಿನ್ನ ಸಂಪೂರ್ಣ ಶಕ್ತಿಯಿಂದ ಪ್ರೀತಿಸು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಭಾವಿಸು.”

ಆಧ್ಯಾತ್ಮಿಕ ಪ್ರಜ್ಞೆಯ ಪ್ರೀತಿ ಮತ್ತು ಬೆಳಕಿನಿಂದ ನಮ್ಮ ಹೃದಯಗಳು ಮತ್ತು ಕ್ರಿಯೆಗಳನ್ನು ಹೇಗೆ ಸಂಯೋಜಿಸುವುದು? ಇದಕ್ಕೆ ಒಂದು ದಾರಿಯೆಂದರೆ, ವಿಶೇಷವಾಗಿ ಕ್ರಿಸ್ಮಸ್ ಸಮಯದಲ್ಲಿ ಆಳವಾದ ಮತ್ತು ದೀರ್ಘಾವಧಿಯ ದೈವೀ ಸಂವಹನೆಗಾಗಿ ಸಮಯವನ್ನು ನಿಗದಿ ಪಡಿಸುವುದು. ಹಾಗಾಗಿ, ಯೋಗದ ಸತ್ಸಂಗ ಸಂಸ್ಥೆಯ ಆಶ್ರಮ/ಕೇಂದ್ರ/ಮಂಡಳಿಗಳು ನಡೆಸುವ ಯಾವುದೇ ಒಂದು ಇಡೀ ದಿನದ ಕ್ರಿಸ್ಮಸ್ ಧ್ಯಾನದಲ್ಲಿ ಭಾಗವಹಿಸಿರೆಂದು ಅಥವಾ ನಿಮ್ಮ ಮನೆಯಲ್ಲಿ ಧ್ಯಾನ ಮಾಡಿ ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಅಂತರಂಗದ ಮೌನದ ಆಶ್ರಯದಲ್ಲಿ ನಾವು ಆ ಪ್ರೇಮದ ಮೂಲವನ್ನು ಸ್ಪರ್ಶಿಸಿದಾಗ, ನಮ್ಮ ಗುರುವಿನ ಮಾತುಗಳ ಸತ್ಯವನ್ನು ನಾವು ಅನುಭವಿಸುತ್ತೇವೆ: “ಪರಿಶುದ್ಧತೆ ಶಾಂತಿ ಮತ್ತು ಕನಸಿಗೂ ಮೀರಿದ ಆನಂದವು ನಮ್ಮ ಆತ್ಮದೊಂದಿಗೆ ಮಿಂಚಿ ನೃತ್ಯವಾಡುತ್ತದೆ. ಅಂತರಂಗದ ಆ ಶಾಂತಿಯು ಅನಂತವಾದ ಬಾಹ್ಯ ಶಾಂತತೆಯೊಡನೆ ಸಮ್ಮಿಲನಗೊಳ್ಳಲಿ. ನೀವು ಆ ಶಾಶ್ವತವಾದ ಬೆಳಕಿನಲ್ಲಿ ಮುಳುಗಿದ್ದೀರಿ. ನಿಮ್ಮ ಸಂಪೂರ್ಣ ಅಸ್ತಿತ್ವವು ಕ್ರಿಸ್ತನ ಆ ಸರ್ವವ್ಯಾಪಿ ಆಶೀರ್ವಾದದ ಪ್ರಕಾಶದಿಂದ ತುಂಬಿದೆ. ದೇಹ ಮತ್ತು ಉಸಿರಾಟದ ಆಚೆಗೆ ಕ್ರಿಸ್ತನ ಶಾಂತಿ ಮತ್ತು ಆನಂದದ ನಿತ್ಯ ಜೀವಂತ ಬೆಳಕು ನೀವಾಗಿದ್ದೀರಿ.”

ರ್ವತ್ರವಾದ ಕ್ರಿಸ್ತನ ಪ್ರೀತಿ ಮತ್ತು ಶಾಂತಿಯು ನಿಮ್ಮ ಜೀವನವನ್ನು ತುಂಬಲಿ. ಈ ಕ್ರಿಸ್ಮಸ್ ಮತ್ತು ಸದಾ ಕಾಲಕ್ಕೂ ನಿಮಗೂ ನಿಮ್ಮ ಪ್ರೀತಿಪಾತ್ರರಿಗೂ ಹಾಗು ನೀವು ಪ್ರಾರ್ಥಿಸುವ ಪ್ರತಿಯೊಬ್ಬರಿಗೂ ಆಶೀರ್ವಾದಗಳು.

ದೈವೀ ಸ್ನೇಹದೊಂದಿಗೆ

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ