ಸಂದಿಗ್ಧತೆಯೇ ಅಥವಾ ಆಧ್ಯಾತ್ಮಿಕ ಅವಕಾಶವೇ?

25 ಮಾರ್ಚ್‌, 2020

ಸ್ವಾಮಿ ಚಿದಾನಂದಗಿರಿಯವರಿಂದ ಒಂದು ಸಂದೇಶ

ಪ್ರಿಯ ಬಾಂಧವರೇ,

ಪ್ರಪಂಚದಾದ್ಯಂತ ಹರಡುತ್ತಿರುವ ಕೊರೋನಾ ವೈರಸ್‌ನ ಸಾಂಕ್ರಾಮಿಕ ರೋಗದಿಂದ, ದಿನಗಳು ಮತ್ತು ವಾರಗಳುರುಳಿದಂತೆ, ಹೆಚ್ಚು ಹೆಚ್ಚು ಜನರು ತಮ್ಮ ಜೀವನದಲ್ಲಿ ಪ್ರಮುಖ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇ ಬೇಕಾದಂಥ ಪರಿಸ್ಥಿತಿ ಉಧ್ಬವಿಸಿದೆ. ನಿಮಗಾಗಿ ಪುನಃ ಪುನಃ ನಮ್ಮ ಪ್ರೀತಿ, ಪ್ರಾರ್ಥನೆ ಹಾಗೂ ಸದಾಶಯಗಳನ್ನು ನಮ್ಮ ಶಕ್ತಿಶಾಲಿ ಸಕಾರಾತ್ಮಕ ವಚನಗಳ ಮೂಲಕ ಆಧ್ಯಾತ್ಮಿಕ ಅನುಬಂಧದಲ್ಲಿ ಬೆಸೆದಿರುವ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತೇವೆ. ವಿಶ್ವದಾದ್ಯಂತ ಹರಡಿರುವ ಪರಮಹಂಸಜಿಯವರ ಆಧ್ಯಾತ್ಮಿಕ ಕುಟುಂಬವನ್ನು ನೀವು ಕಳಿಸಿರುವ ಪ್ರಾರ್ಥನೆ ಹಾಗೂ ದಿವ್ಯ ಸ್ನೇಹದ ಅಭಿವ್ಯಕ್ತಿಯು ಅತ್ಯಂತ ಅಪ್ಯಾಯಮಾನವಾಗಿ ಆವರಿಸಿದೆ. ಆಧ್ಯಾತ್ಮಿಕ ಶಕ್ತಿ ಮತ್ತು ಪರಸ್ಪರರ ಸಹಕಾರದ ಕಂಪನಗಳು ಗ್ರಾಹ್ಯವೂ ಆಗಿದ್ದು, ಧೈರ್ಯ ಹಾಗೂ ಭರವಸೆಯನ್ನು ತುಂಬುತ್ತಿವೆ. ಈ ಹೃದಯಸ್ಪರ್ಶಿ ಪ್ರಾರ್ಥನೆಗಳಿಗಾಗಿ ನಿಮಗೆ ಧನ್ಯವಾದಗಳನ್ನರ್ಪಿಸುತ್ತಿದ್ದೇವೆ.

ಅತ್ಯಂತ ವಿಷಮ ಪರಿಸ್ಥಿತಿಗಳು ಅಸಾಮಾನ್ಯ ರೀತಿಯಲ್ಲಿ ನಮ್ಮಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ ಎಂದು ಹೇಳಲಾಗುತ್ತದೆ — ಅದೂ ನಾವು ಅವಕಾಶ ನೀಡಿದಲ್ಲಿ ಮಾತ್ರ. ನಾವು ಚರಿತ್ರೆಯನ್ನು ಗಮನಿಸಿದಾಗ, ಯಾವುದೇ ವಿಷಮ ಪರಿಸ್ಥಿತಿ, ದುರಂತ ಅಥವಾ ಭಯಭೀತ ಸನ್ನಿವೇಷಗಳಲ್ಲಿ, ಜನರು ಎರಡು ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ನೋಡಬಹುದು. ಒಂದು, ಅವರು ತಮ್ಮನ್ನು ತಾವು ಭಯ, ಬಂಧನ ಹಾಗೂ ಅಜ್ಞಾನದಿಂದ ಆವರಿಸಿದ ಸ್ವಾರ್ಥ, ನಿಯಂತ್ರಣ ತಪ್ಪಿದ ಬುದ್ಧಿ ಮತ್ತು ಮನಸ್ಸುಗಳಿಗೆ ಶರಣಾಗುವುದು ಅಥವಾ ವಿಷಮ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಹೊಸ ಅವಿಷ್ಕಾರಗಳಿಗೆ ಸ್ಪೂರ್ತಿ ಪಡೆದು ತಮ್ಮ ಸುಂದರ ದೈವಿಕ ಗುಣಗಳನ್ನು ಮತ್ತು ಅಜೇಯ ಆತ್ಮದ ಅವ್ಯಕ್ತ ಶಕ್ತಿಯನ್ನು ಪ್ರದರ್ಶಿಸುವುದು.

ಪ್ರತಿಯೊಬ್ಬರೂ, ಜಾಗತಿಕ ಸಂದಿಗ್ಧತೆಯ ಈ ಸಮಯವನ್ನು (ಅಥವಾ ಯಾವುದೇ ಸಮಯವನ್ನು) ಭಗವಂತ ಹಾಗೂ ಗುರುವಿನ ಶಿಷ್ಯರಾಗಿ ತಮ್ಮ ವೈಯಕ್ತಿಕ ಬೆಳವಣಿಗೆಯ ಕೇಂದ್ರಬಿಂದುವನ್ನಾಗಿಸಿಕೊಳ್ಳಬಹುದು. ಕೆಲವು ವರ್ಷಗಳ ನಂತರ ನಾವು ಹಿಂತಿರುಗಿ ಈ ಕಷ್ಟದ ಸಮಯಗಳನ್ನು ನೆನಪಿಸಿಕೊಂಡಾಗ ಹೀಗೆ ಹೇಳಿಕೊಳ್ಳಬಹುದು, “ಹೌದು, ಇದೇ ಸಮಯದಲ್ಲೇ ಅಲ್ಲವೇ, ನಾನು ಆಧ್ಯಾತ್ಮಿಕ ಅಧ್ಯಯನ ಮತ್ತು ವೈಯಕ್ತಿಕ ಬೆಳವಣಿಗೆಗಳ ಪ್ರಯತ್ನಗಳನ್ನು ಪ್ರಾರಂಭಿಸುವ ಅವಕಾಶವನ್ನು ಉಪಯೋಗಿಸಿಕೊಂಡಿದ್ದು ಹಾಗೂ ಈ ಅನೇಕ ವರ್ಷಗಳ ಸಾಧನೆಯ ಫಲಿತಾಂಶವನ್ನು ಈಗ ಪಡೆಯಲು ಸಾಧ್ಯವಾಗಿರುವುದು. ಈ ಸಂದರ್ಭದಲ್ಲೇ ಅಲ್ಲವೇ, ನಾನು ಯಾವ ಆಧ್ಯಾತ್ಮಿಕ ಗುಣಗಳನ್ನು ಸಿದ್ದಿಸಿಕೊಂಡಿದ್ದೇನೆಯೋ ಅವುಗಳನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದು ಆಲೋಚಿಸಿ ನನ್ನ ಆಂತರಿಕ ಪಯಣವನ್ನು ಪ್ರಾರಂಭಿಸಿದ್ದು”.

ವಿಶ್ವಾಸಾರ್ಹತೆ ಮತ್ತು ಆಧ್ಯಾತ್ಮಿಕ ಒಳನೋಟದಿಂದ ನೋಡಿದಾಗ, ಮನುಕುಲವನ್ನು ಬಾಧಿಸುವ ಎಲ್ಲ ವಿಷಮ ಪರಿಸ್ಥಿತಿಗಳು ನಮ್ಮ ಗ್ರಹದ ಆಧ್ಯಾತ್ಮಿಕ ವಿಕಸನವನ್ನು ತೀವ್ರಗೊಳಿಸಲು ಬೇಕಾದ ಪಾಠಗಳಿಗೆ ಬೆರಳು ಮಾಡಿ ತೋರಿಸುತ್ತವೆ. ಇತರ ಸಂದರ್ಭಗಳಲ್ಲಿ ನಾನು ಹೇಳಿದ ಹಾಗೆ, ಇತಿಹಾಸದ ಈ ಹೊತ್ತಿನಲ್ಲಿ ಮನುಕುಲಕ್ಕೆ ಏನು ಬೇಕಾಗಿದೆ ಎಂಬ ಸಾರವನ್ನು ಪರಮಹಂಸ ಯೋಗಾನಂದರು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಜಾತ್ಯಾತೀತ ಹಾಗೂ ಸಾರ್ವತ್ರಿಕವಾಗಿ ಪ್ರಯೋಜನಕಾರಿಯಾದ ಧ್ಯೇಯಗಳು ಮತ್ತು ಆದರ್ಶಗಳಲ್ಲಿ ನಿರ್ದಿಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ಗೊತ್ತುಪಡಿಸಿದ್ದಾರೆ. ಈ ಅವಕಾಶವನ್ನು ನಾವು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿದಲ್ಲಿ, ಈ ಅವಧಿಯು ಮೂಲಭೂತವಾಗಿ ಬೇಗುದಿ ಮತ್ತು ಎದೆಗುಂದಿಸುವುದಾಗಿರುವುದಿಲ್ಲ. ಬದಲಾಗಿ, ಇದು ನಮಗೆ ಸವಾಲೊಡ್ಡಿದ ಮತ್ತು ಆ ಸವಾಲಿಗೆ ಎದ್ದು ನಿಂತ ಸಮಯವಾಗಿರಲಿ — ಗುರುಗಳ ವಿಮೋಚನೆ ನೀಡುವ ಆದರ್ಶಗಳನ್ನು ನಮ್ಮದು ಎಂದೇ ನಾವು ಅನುಷ್ಠಾನಗೊಳಿಸುತ್ತಾ ನಮ್ಮ ಕೈಲಾದದ್ದೆಲ್ಲವನ್ನೂ, ಕ್ಷಣ ಕ್ಷಣವೂ, ದಿನವೂ ದಿನವೂ ಮಾಡುತ್ತಾ ನಮ್ಮ ಗುರುಗಳು ಹೆಮ್ಮೆಪಡುವಂತೆ ಮಾಡಬಹುದು.

ಜೀವನದ ಸಂಗ್ರಾಮದಲ್ಲಿ ಒಬ್ಬ ಸಂಪೂರ್ಣ ಸನ್ನದ್ಧನಾದ ದಿವ್ಯ ಯೋಧನಂತೆ ಕಾಣಿಸಿಕೊಳ್ಳಲು ನಮಗೆ ಆವಶ್ಯಕವಾದ ಆಧ್ಯಾತ್ಮಿಕ ಸಾಧನಗಳನ್ನು ಅವರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಬೋಧನೆಗಳಲ್ಲಿ ನಾವು ಪಡೆದಿರುವುದು ಎಂತಹ ಪುಣ್ಯದ ಫಲ — ದೈನಂದಿನ ಜೀವನದ ಸಮಸ್ಯೆಗಳ ಮೇಲೆ ಆಕ್ರಮಣ ಮಾಡಲು ಶಕ್ತಿಶಾಲಿ ಸಕಾರಾತ್ಮಕ ಚಿಂತನೆಗಳು ಮತ್ತು ಸಂಕಲ್ಪದಿಂದ ಶಸ್ತ್ರ ಸಜ್ಜಿತರಾಗಿ, ಶರೀರದ ಆರೋಗ್ಯದ ಮೇಲೆ ಮನಸ್ಸು ಆತ್ಮಗಳ ಪ್ರಭಾವಪೂರ್ಣವಾದ ಶಕ್ತಿಯ ಜ್ಞಾನದಿಂದ, “ಕೆಡುಕನ್ನು ಒಳ್ಳೆಯತನದಿಂದ, ದುಃಖವನ್ನು ಸಂತೋಷದಿಂದ, ಕ್ರೌರ್ಯವನ್ನು ಅನುಕಂಪದಿಂದ, ಅಜ್ಞಾನವನ್ನು ಜ್ಞಾನದಿಂದ ಜಯಿಸುವ” ಸಾಮರ್ಥ್ಯವುಳ್ಳವರಾಗಿ ಮತ್ತು ಒಬ್ಬ ಜಯಶಾಲಿಯ ಧೈರ್ಯ ಮತ್ತು ವಿಶ್ವಾಸದಿಂದ ಜೀವನದ ಸಂಗ್ರಾಮವನ್ನು ಎದುರಿಸುವುದೇ ಆಗಿದೆ. ಆಧ್ಯಾತ್ಮಿಕ ಮಾರ್ಗದಲ್ಲಿ ನಾವು ಕಲಿತದ್ದನ್ನು ಕಷ್ಟಕರ ಸನ್ನಿವೇಶಗಳು ಪರೀಕ್ಷೆಗೊಡ್ಡಿದಾಗ, ನಾವು ಹೀರಿಕೊಂಡಿದ್ದೆಲ್ಲವೂ ಕಲಿತದ್ದರಿಂದ ಕ್ರಿಯೆಯಾಗಿ ಮಾರ್ಪಾಡಾಗಲಿ. ಆ ಪ್ರಕ್ರಿಯೆಯಲ್ಲಿ ನಾವು ನಮ್ಮಲ್ಲಿದೆ ಎಂದು ನಾವು ತಿಳಿಯದ ಶಕ್ತಿಯನ್ನು, ಯುಕ್ತ ಕ್ರಿಯೆಗಳನ್ನು ಕೈಗೆತ್ತಿಕೊಳ್ಳುವ ಅಂತರ್ಬೋಧೆ-ಮಾರ್ಗದರ್ಶಿತ ಅರಿವನ್ನು ಮತ್ತು (ಬಹಳ ಮುಖ್ಯವಾದದ್ದು) ಪ್ರೇಮಿಸುವ ಒಂದು ವಿಶಾಲವಾದ ಕ್ಷಮತೆಯನ್ನು ಕಂಡುಕೊಳ್ಳುತ್ತೇವೆ. ಜೀವನದಲ್ಲಿ ನಮ್ಮ ಬಾಹ್ಯ ಸಂಪನ್ಮೂಲಗಳ ಸಾಮರ್ಥ್ಯಕ್ಕೆ ಸವಾಲೊಡ್ಡುವ ಸನ್ನಿವೇಶಗಳಲ್ಲಿ, ಅವು ನಮ್ಮ ಸುತ್ತಮುತ್ತಲಿನವರ ಮೇಲೆ ನಮ್ಮನ್ನು ಕೋಪಗೊಳ್ಳುವಂತೆ ಅಥವಾ ಅಸಹನೆಗೊಳ್ಳುವಂತೆ ಮಾಡುವುದರ ಬದಲು, ನಾವು ನಮ್ಮ ಆತಂಕಗಳು ಮತ್ತು ಅಸುರಕ್ಷತೆಗಳನ್ನು ಎದುರಿಸುವುದನ್ನು ಕಲಿತು ಅವನ್ನು ಭಗವಂತನಿಗೆ ಅರ್ಪಿಸೋಣ. ದಯಾಪರ, ಉತ್ಸಾಹಪೂರ್ಣ, ಶಾಂತ ಹಾಗೂ ಆಂತರ್ಯದಲ್ಲಿ ಸ್ಥಿರವಾಗಿರುವ ಧ್ಯಾನಿಗಳ ಉದಾಹರಣೆ, ಇತರರು ಕೂಡ ಹಾಗೇ ಇರಬೇಕೆಂದು ಉತ್ತೇಜಿಸುತ್ತದೆ. ಆ ರೀತಿಯಲ್ಲಿ, ನಾವು ಹಾದು ಹೋಗುತ್ತಿರುವ ಅಂತಹ ಸವಾಲುಗಳು, ಕೇವಲ ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನಲ್ಲ, ನಮ್ಮ ಸುತ್ತಲಿನವರಿಗೆ ಮತ್ತು ಇಡೀ ಮನುಕುಲಕ್ಕೆ ಕೂಡ ಲಾಭದಾಯಕವಾಗುತ್ತದೆ.

ನೀವು ಪ್ರತಿಯೊಬ್ಬರೂ ಎದುರಿಸುತ್ತಿರುವ ಈ ಕಷ್ಟದ ಪರಿಸ್ಥಿತಿಯ ಸಮಯದಲ್ಲೂ ನಿಮ್ಮ ಹೃದಯಗಳು, ವಿಶ್ವದಾದ್ಯಂತ ಕೊರೋನಾ ಪಿಡುಗಿಗೆ ಸಿಲುಕಿ ನರಳುತ್ತಿರುವ ಅನೇಕರ ಜೀವನ ಹಾಗೂ ಸುರಕ್ಷತೆಗಾಗಿ ಮಿಡಿಯುತ್ತಿರುವುದನ್ನು ನಾನು ಬಲ್ಲೆ. ಈ ಸಂದರ್ಭದಲ್ಲಿ, ಪೀಡಿತರಾದವರ ಆರೋಗ್ಯಕ್ಕಾಗಷ್ಟೇ ಅಲ್ಲದೇ, ಅವರನ್ನು ಆರೈಕೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ತಮ್ಮ ಕೌಶಲ್ಯ, ದಯೆ ಹಾಗೂ ಧೈರ್ಯದಿಂದ ಇತರ ಅವಶ್ಯಕತೆಗಳ ಪೂರೈಕೆಯನ್ನು ನಿರ್ವಹಿಸಲು ಸಹಾಯ ಹಸ್ತ ನೀಡಿರುವ ವಿವಿಧ ಸ್ತರಗಳ ವ್ಯಕ್ತಿಗಳ ಒಳಿತಿಗಾಗಿ, ನೀವು, ಭಾರತೀಯ ಯೋಗದಾ ಸತ್ಸಂಗ ಸಂಸ್ಥೆಯ ಆಶ್ರಮಗಳು ಮತ್ತು ಸೆಲ್ಫ್‌ ರಿಯಲೈಝೇಷನ್‌ ಫೆಲೋಶಿಪ್‌ನವರ ದೈನಂದಿನ ಪ್ರಾರ್ಥನೆಯಲ್ಲಿ ಭಾಗಿಯಾಗಿ ನಮಗೆ ಸ್ಪೂರ್ತಿಯನ್ನು ತುಂಬುತ್ತಿರುವುದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಾನು ನಿಮ್ಮ ಈ ಪ್ರಾರ್ಥನೆಯನ್ನು ಮತ್ತು ಗುರುಗಳು ನೀಡಿರುವ ಉಪಶಮನಕಾರಿ ತಂತ್ರಗಳನ್ನು, ನಿಮ್ಮ ಮನೆಗಳಲ್ಲಿ ಅಥವಾ ಎಸ್‌ಆರ್‌ಎಫ್‌ನ ಧ್ಯಾನ ಕೇಂದ್ರದಲ್ಲಿ ಆಯೋಜಿಸಿರುವ ಹಲವಾರು ಸಮೂಹ ಧ್ಯಾನಗಳೊಂದರಲ್ಲಿ ಮುಂದುವರೆಸಲು ಒತ್ತಾಯಿಸುತ್ತೇನೆ.

ನಿಮ್ಮ ಸ್ಥಳೀಯ ಸಂಸ್ಥೆಗಳು ನೀಡಿರುವ ಆರೋಗ್ಯ ಮತ್ತು ಶುಚಿತ್ವದ ಸೂಚನೆ-ಸಲಹೆಗಳನ್ನು ಪಾಲಿಸಿ ನಿಮ್ಮ ಮತ್ತು ಇತರರ ಆರೋಗ್ಯವನ್ನು ಕಾಪಾಡಿಕೊಳ್ಳಿ ಮತ್ತು “ಸಾಮಾಜಿಕ ಅಂತರ”ವು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯವನ್ನು ನೀಡುತ್ತಿದ್ದಲ್ಲಿ, ಅದನ್ನು ನಿಮ್ಮ ಹಾಗೂ ಇತರರ ಸೇವೆಗಾಗಿ ಸರಿಯಾದ ಕಾರ್ಯಗಳಿಗಾಗಿ ಕೃತಜ್ಞತಾಪೂರ್ವಕವಾಗಿ ಉಪಯೋಗಿಸಿಕೊಳ್ಳಿ. ಬಾಹ್ಯದಲ್ಲಿ ದೂರವಿರುವಂತೆ ಕಾಣುವ ಆದರೆ ಅಂತರಂಗದಲ್ಲಿ ಒಂದಾಗಿರುವ ಅನೇಕ ಆತ್ಮಗಳಾಗಿ, ಆ ಅಪರಿಮಿತ ಮೂಲದಿಂದ ಬರುವ ಶಕ್ತಿ ಹಾಗೂ ಸ್ಪೂರ್ತಿಯ ಸೆಲೆಯಿಂದ ನಮ್ಮನ್ನು ಪುನಃಶ್ಚೇತನಗೊಳಿಸಿಕೊಳ್ಳೋಣ. ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಗುರುವಿನ ಅರಿವಿನಲ್ಲಿ ಶ್ರುತಿಗೂಡಿಸಿಕೊಂಡು, ಆ ಭಗವಂತನನ್ನು ನಮ್ಮ ಪ್ರಜ್ಞೆಯ ಕೇಂದ್ರಬಿಂದುವನ್ನಾಗಿರಿಸಿದಾಗ, ನಾವು ಈ ಕತ್ತಲೆಯು ತುಂಬಿರುವ ಕಷ್ಟದ ಸಮಯದಲ್ಲಿ ಸುರಕ್ಷತೆಯ ಹಾಗೂ ವಿಜಯದ ಹಾದಿಯನ್ನು ಕಂಡುಕೊಳ್ಳಬಹುದು. ಈ ಮೂಲಕ ನಾವು ಇಡೀ ಮನುಕುಲದ ಆಧ್ಯಾತ್ಮಿಕ ವಿಕಾಸಕ್ಕಾಗಿ ನಮ್ಮ ಅಲ್ಪ ಕಾಣಿಕೆಯನ್ನು ಸಲ್ಲಿಸಬಹುದು.

ಭಗವಂತ ಮತ್ತು ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನವು ಸದಾ ನಿಮಗೆ ಲಭಿಸಲಿ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ