ಈ ವರ್ಷ ಜುಲೈ 13ರಂದು ಬರಲಿರುವ ಗುರು ಪೂರ್ಣಿಮೆಗೆ ನಮ್ಮ ಪೂಜ್ಯ ಅಧ್ಯಕ್ಷರಿಂದ ಒಂದು ವಿಶೇಷ ಸಂದೇಶ
ಗುರು ಮತ್ತು ಶಿಷ್ಯರ ನಡುವಿನ ಸಂಬಂಧವು ಮಿತ್ರತ್ವದಲ್ಲಿನ ಒಂದು ಮಹಾನ್ ಅಭಿವ್ಯಕ್ತಿ; ಇದು ಪರಸ್ಪರರಲ್ಲಿ ಇರುವಂತಹ ಏಕೈಕ ಗುರಿಯ ಮೇಲೆ ನಿರ್ಭರಿತವಾದ ನಿರುಪಾಧಿಕ ದಿವ್ಯ ಮಿತ್ರತ್ವ: ಎಲ್ಲಕ್ಕಿಂತ ಮಿಗಿಲಾಗಿ ಭಗವಂತನನ್ನು ಪ್ರೇಮಿಸುವ ಬಯಕೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಪ್ರೀತಿಪಾತ್ರರೇ,
ಈ ಪವಿತ್ರ ದಿನದಂದು, ನಮ್ಮ ಪೂಜ್ಯ ಗುರುದೇವರೊಡನೆ, ನಮ್ಮ ಆಧ್ಯಾತ್ಮಿಕ ಬದುಕಿನ ಪವಿತ್ರ ಬುನಾದಿಯಾದ ಹೃದಯ, ಮನಸ್ಸು ಮತ್ತು ಆತ್ಮದ ಆಂತರಿಕ ಶ್ರುತಿಗೂಡುವಿಕೆಯನ್ನು ಗೌರವಿಸಲು ನಾನು ನಿಮ್ಮೊಡನೆ ಭಾಗಿಯಾಗುತ್ತೇನೆ. ಈ ಸಂದರ್ಭದಲ್ಲಿ ಮತ್ತು ಸದಾ ನಿಮ್ಮ ಹೃದಯಗಳಲ್ಲಿ ಅವರ ದಿವ್ಯ ವಾಗ್ದಾನವನ್ನು ಹಿಡಿದಿಟ್ಟುಕೊಳ್ಳಿ: “ಅಜ್ಞಾತವಾಗಿ ನಾನು ನಿಮ್ಮ ಪಕ್ಕದಲ್ಲೇ ನಡೆಯುತ್ತೇನೆ ಮತ್ತು ನಿಮ್ಮನ್ನು ಅದೃಶ್ಯ ಕೈಗಳಿಂದ ರಕ್ಷಿಸುತ್ತೇನೆ.” ಅವರಲ್ಲಿರುವ ನಿಮ್ಮ ವಿಶ್ವಾಸದ ಮೂಲಕ ಮತ್ತು ಅವರು ನೀಡಿರುವ ಸಾಧನೆಯ ನಿಮ್ಮ ನಿಷ್ಠಾವಂತ ಅಭ್ಯಾಸದ ಮೂಲಕ, ನೀವು ಸ್ಥಿರವಾಗಿ ಮತ್ತು ಖಚಿತವಾಗಿ ದಿವ್ಯ ಗುರಿಯುತ್ತ ಮುಂದುವರೆಯುತ್ತೀರಿ.
ಪರಿಪೂರ್ಣರಾದ, ಭಗವಂತನೊಂದಿಗೆ ಜೊತೆಗೂಡಿದ ಗುರುವು ಭಗವಂತನಲ್ಲಿರುವ ಎಲ್ಲ ಗುಣಗಳನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ – ಸರ್ವಜ್ಞತ್ವ, ಸರ್ವಶಕ್ತಿ ಮತ್ತು ಸರ್ವವ್ಯಾಪಿತ್ವ — ಆದ್ದರಿಂದ, ನಾವು ಗುರುಗಳ ಸಹಾಯ, ರಕ್ಷಣೆ, ಮಾರ್ಗದರ್ಶನ ಮತ್ತು ಪ್ರೇಮಕ್ಕಾಗಿ ಅವರನ್ನು ಕೋರಿದಾಗಲೆಲ್ಲ, ನಮ್ಮ ಆತ್ಮಗಳ ಆಳವಾದ ಕರೆಗೆ ಪ್ರತಿಸ್ಪಂದಿಸಲು ಅವರು ಸಿದ್ಧರಾಗಿದ್ದಾರೆ ಎಂಬುದನ್ನು ನಾವು ತಿಳಿಯುತ್ತೇವೆ.
ನಿರಂತರ ಪ್ರೇಮ ಮತ್ತು ಆಶೀರ್ವಾದಗಳೊಂದಿಗೆ,
ಸ್ವಾಮಿ ಚಿದಾನಂದ ಗಿರಿ