
ಗುರು-ಶಿಷ್ಯ ಸಂಬಂಧದ ಮೂಲಕ ಮಾತ್ರ ಮಾನವ ಆತ್ಮವು ಭಗವಂತನೆಡೆಗೆ ಹಿಂದಿರುಗಲು ಸಾಧ್ಯ, ಏಕೆಂದರೆ ಅಂತಿಮ ವಿಮೋಚನೆಯು ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ: ಭಕ್ತನ ಪ್ರಯತ್ನ, ಗುರುವಿನ ನೆರವು ಮತ್ತು ಭಗವಂತನ ಅನುಗ್ರಹ….ಗುರುವಿನ ನೆರವು ಅತ್ಯಗತ್ಯ, ಏಕೆಂದರೆ ಭಕ್ತನಿಗೆ ಸಂದೇಹವಿದ್ದಾಗ ಅಥವಾ ಅವನ ಆಧ್ಯಾತ್ಮಿಕ ಸಂಕಲ್ಪ ದುರ್ಬಲವಾಗಿದ್ದಾಗ, ಅವನು ಗುರುವನ್ನು ತೀವ್ರವಾಗಿ ಪ್ರಾರ್ಥಿಸಿದರೆ, ಭಗವಂತನ ಆ ಮಾಧ್ಯಮವು (ಗುರುವು) ಅವನನ್ನು ಆಶೀರ್ವದಿಸುತ್ತದೆ ಮತ್ತು ಅವನಿಗೆ ದಾರಿ ತೋರಿಸುತ್ತದೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಆತ್ಮೀಯರೆ,
ಗುರು ಪೂರ್ಣಿಮೆಯು ಒಬ್ಬರ ಪೂಜ್ಯ ಸದ್ಗುರುವಿಗೆ ಆಳವಾದ ಕೃತಜ್ಞತೆ, ಪ್ರೀತಿ ಮತ್ತು ನಿಷ್ಠೆಯನ್ನು ಅರ್ಪಿಸಲು ಒಂದು ಪವಿತ್ರ ಸಂದರ್ಭವಾಗಿದೆ—ಸದ್ಗುರುವು, ಶಿಷ್ಯನನ್ನು ಸಂಪೂರ್ಣ ಆತ್ಮ-ಸ್ವಾತಂತ್ರ್ಯಕ್ಕೆ ಕರೆದೊಯ್ಯಲು ಭಗವಂತ ಆಯ್ಕೆ ಮಾಡಿದ ಶುದ್ಧ ಮಾಧ್ಯಮ. ನಮ್ಮ ಪ್ರೀತಿಯ ಗುರುದೇವ ಪರಮಹಂಸ ಯೋಗಾನಂದರನ್ನು ಮತ್ತು ಅವರಲ್ಲಿ ಭಗವಂತನ ಸರ್ವಾಲಿಂಗನದ ಮತ್ತು ಸದಾ ಪ್ರೋತ್ಸಾಹಿಸುವ ಪ್ರೀತಿಯ ಪರಿಪೂರ್ಣ ಮೂರ್ತರೂಪವನ್ನು ಹೊಂದಿರುವ ನಾವೆಷ್ಟು ಅದೃಷ್ಟವಂತರು.
ಜೀವನದಲ್ಲಿ ಯಾವುದೇ ಅಡೆತಡೆಗಳಿಗಿಂತ ಹೆಚ್ಚು ಶಕ್ತಿಯುತವಾದದ್ದೆಂದರೆ, ಎಂದೂ ತಪ್ಪದ ಗುರುವಿನ ನೆರವು ಮತ್ತು ಅನುಗ್ರಹಗಳು, ಅವು ಅವರ ಜ್ಞಾನ-ನಿರ್ದೇಶಿತ ಬೋಧನೆಗಳು ಮತ್ತು ನಿತ್ಯ ಸ್ನೇಹಗಳಿಗೆ ಗ್ರಹಣಶೀಲರಾಗಿರುವವರಿಗೆ ದೊರೆಯುತ್ತವೆ ಎಂದು ಗುರುಗಳೆಲ್ಲರು ನಮಗೆ ಭರವಸೆಯಿತ್ತಿದ್ದಾರೆ. ಕಷ್ಟಗಳು ಮತ್ತು ಗೊಂದಲಗಳಿಂದ ತುಂಬಿರುವ ಈ ಜಗತ್ತಿನಲ್ಲಿ ನಾವು ಹಾದುಹೋಗುತ್ತಿರುವಾಗ, ಮತ್ತೆ ಮತ್ತೆ ಗುರುದೇವರಲ್ಲಿ ಕೋರಿಕೊಳ್ಳಲು ನಾವು ನೆನಪಿಸಿಕೊಂಡರೆ— ಪ್ರೀತಿಪೂರ್ವಕ ಶರಣಾಗತಿ ಮತ್ತು ನಮ್ರತೆಯಿಂದ ಅವರ ಉಪಸ್ಥಿತಿಗೆ ನಮ್ಮ ಹೃದಯ ಮತ್ತು ಮನಸ್ಸುಗಳನ್ನು ತೆರೆದಿಟ್ಟರೆ—ನಾವು ನಿಸ್ಸಂದೇಹವಾಗಿ ನಮಗೆ ಅಗತ್ಯವಿರುವ ದಿವ್ಯ ನೆರವು ಮತ್ತು ಪರಿಜ್ಞಾನವನ್ನು ಪಡೆಯುತ್ತೇವೆ. ಅವರ ಚಿರಂತನ ರಕ್ಷಣೆಯಲ್ಲಿ ಆಶ್ರಯ ಪಡೆದರೆ, ನಾವು ಎದುರಿಸಲಾಗದ ಮತ್ತು ಜಯಿಸಲಾಗದ ಯಾವುದೇ ಸವಾಲು ಇರುವುದಿಲ್ಲ.
ಗುರುದೇವರಿಗೆ ಪ್ರಿಯರಾದವರೇ, ನಿಮಗಾಗಿ ನನ್ನ ಪ್ರಾರ್ಥನೆಯೇನೆಂದರೆ, ಅವರ ದಿವ್ಯ ಪ್ರಜ್ಞೆಯೊಂದಿಗೆ ನಿಮ್ಮ ಶ್ರುತಿಗೂಡುವಿಕೆಯನ್ನು ಗಾಢವಾಗಿಸಲು ನಿಮ್ಮ ಆಂತರಿಕ ಸಂಕಲ್ಪವನ್ನು ನೀವು ನವೀಕರಿಸುವಂತಾಗಲಿ. ಅವರ ಪವಿತ್ರ ಕ್ರಿಯಾ ಯೋಗದ ಬೋಧನೆಗಳನ್ನು ಅನುಸರಿಸಲು ನೀವು ನಿಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಾಗ, ನಿಮ್ಮ ಪ್ರಜ್ಞೆಯು ಶುದ್ಧೀಕರಿಸಲ್ಪಡುತ್ತಿದೆ ಮತ್ತು ಪರಿವರ್ತನೆಗೊಳ್ಳುತ್ತಿದೆ ಎಂದು ತಿಳಿಯಿರಿ; ಮತ್ತು ಅವರು ನಿಮ್ಮನ್ನು ನಿಮ್ಮ ಕೈವಲ್ಯದ — ಅಂದರೆ, ಪರಮಾತ್ಮನೊಂದಿಗಿನ ಏಕತೆಯ ಹತ್ತಿರ ಹತ್ತಿರಕ್ಕೆ ಸೆಳೆಯುತ್ತಿದ್ದಾರೆ ಎಂದು ತಿಳಿಯಿರಿ. ಜೈ ಗುರು!
ಭಗವಂತ ಮತ್ತು ಗುರುದೇವರ ಪ್ರೀತಿ ಹಾಗೂ ನಿರಂತರ ಆಶೀರ್ವಾದಗಳೊಂದಿಗೆ,
ಸ್ವಾಮಿ ಚಿದಾನಂದ ಗಿರಿ