ಇದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೇಲೋಷಿಪ್‌ನ ನಾಲ್ಕನೇ ಅಧ್ಯಕ್ಷರು ಹಾಗೂ ಸಂಘಮಾತಾ ಶ್ರೀ ಶ್ರೀ ಮೃಣಾಲಿನಿ ಮಾತಾರವರು ವೈಎಸ್‌ಎಸ್/ಎಸ್‌ಆರ್‌ಎಫ್ ಸದಸ್ಯರು ಮತ್ತು ಸ್ನೇಹಿತರಿಗೆ 2016ರಲ್ಲಿ ಬರೆದ ಪತ್ರದ ಆಯ್ದ ಭಾಗ. 2011 ರಿಂದ 2017 ರಲ್ಲಿ ನಿಧನರಾಗುವವರೆಗೂ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೃಣಾಲಿನಿ ಮಾತಾಜಿಯವರು, ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಹಾಗೂ ಭಗವಂತನಲ್ಲಿ ಮತ್ತು ನಮ್ಮಲ್ಲಿ ವಿಶ್ವಾಸವನ್ನು ಹೊಂದಲು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಈ ಕಾಲಾತೀತ ಸಲಹೆ, ಪ್ರತಿಬಾರಿ ನಾವು ನಮ್ಮ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಲು ನೋಡುವಾಗ ಯಥೋಚಿತವಾದಂತಹದ್ದಾಗಿದೆ.
ಜಗತ್ತು ಹಿಂದಿನ ಕಾಲದ ಆಧ್ಯಾತ್ಮಿಕ ಮತ್ತು ಲೌಕಿಕ ಅಜ್ಞಾನವನ್ನು ತೊಡೆದು ಹಾಕಲು ಶ್ರಮಪಡುತ್ತಿರುವಾಗ, ಪ್ರತಿದಿನದ ಘಟನೆಗಳು ಬಹಳಷ್ಟು ಸಲ ಜಗತ್ತು ಹಾದು ಹೋಗುತ್ತಿರುವ ಪ್ರಕ್ಷುಬ್ಧತೆಯನ್ನು ನಮಗೆ ನೆನಪಿಸುತ್ತವೆ. ಆದರೆ ಪರಮಹಂಸ ಯೋಗಾನಂದರು ನಾವು ಊರ್ಧ್ವ ವಿಕಸನದ ಕಾಲದಲ್ಲಿದ್ದೇವೆ ಎಂದು ನಮಗೆ ಆಶ್ವಾಸನೆ ನೀಡಿದ್ದಾರೆ ಮತ್ತು ನಮ್ಮ ಮುಂದೆ ತಾತ್ಕಾಲಿಕ ಏಳುಬೀಳುಗಳ ಮಧ್ಯದಲ್ಲಿ ಅಂತಿಮ ವಿಶ್ವಾಸ ಮತ್ತು ಆಶಾಕಿರಣದ ನೋಟವನ್ನು ಇರಿಸಿದರು.
ನೀವು ಅಧೀರರಾಗಲು ಅಥವಾ ಎದೆಗುಂದಲು ನಿರಾಕರಿಸುತ್ತ ನಿಮ್ಮ ಜೀವನದಲ್ಲಿ ಆ ಸಕಾರಾತ್ಮಕ ಮನೋಭಾವವನ್ನು ಬೇರೂರಿಸಿಕೊಳ್ಳಬಹುದು — ಪ್ರತಿದಿನ, ಭಗವಂತನು ಎಲ್ಲ ಆತ್ಮಗಳಿಗೆ ನೀಡಿರುವ ಸ್ವಾತಂತ್ರ್ಯ ಮತ್ತು ದಿವ್ಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ.
ನಾವು ಅವನ ಪ್ರತಿಬಿಂಬದಿಂದ ಮಾಡಲ್ಪಟ್ಟಿದ್ದೇವೆ ಮತ್ತು ದ್ವಂದ್ವತೆಯ ಉಪದ್ರವದ ನಾಟಕಕ್ಕಿಂತ ಹೆಚ್ಚಿನ ವಾಸ್ತವತೆಯಲ್ಲಿ ನಮ್ಮನ್ನು ನಾವು ಬೇರೂರಿಸಿಕೊಳ್ಳುವ ಸಾಮರ್ಥ್ಯ ನಮ್ಮ ಆಂತರ್ಯದಲ್ಲಿದೆ — ಭಗವಂತನು ಹೇಗೆ ಸ್ವತಂತ್ರನಾಗಿದ್ದಾನೋ ಹಾಗೆ ಸ್ವತಂತ್ರವಾಗಿರುವುದಕ್ಕೆ; ಅವನ ಅನುಭವಾತೀತ ಪ್ರಜ್ಞೆ, ಪ್ರೇಮ ಮತ್ತು ಆನಂದದಲ್ಲಿ ಒಂದುಗೂಡುವುದಕ್ಕೆ. ಆ ಸತ್ಯವನ್ನು ಕಂಡುಕೊಳ್ಳುವುದೇ ನಮ್ಮ ಜೀವನದ ಉದ್ದೇಶ ಮತ್ತು ಈ ಜಗತ್ತಿನ ಕಡುಸಂಕಟ ಮತ್ತು ಅಸಾಂಗತ್ಯಗಳಿಗೆ ಆತ್ಯಂತಿಕ ಪರಿಹಾರ.
ಬಾಹ್ಯ ಪರಿಸ್ಥಿತಿಗಳನ್ನೆದುರಿಸಲು ನಾವು ಬಹಳ ಸಣ್ಣವರು ಮತ್ತು ದುರ್ಬಲರು ಎಂಬ ಭಾವನೆ ಬರುವಂತೆ ಮಾಡುತ್ತ, ಮಾಯೆಯು ನಮ್ಮನ್ನು ಈ ಲೌಕಿಕ ಪ್ರಪಂಚಕ್ಕೆ ಬಂಧಿಸುತ್ತದೆ. ಅದು, ಒಬ್ಬರ ದೃಷ್ಟಿಯನ್ನು ಕಿರಿದಾಗಿಸುವ ಮತ್ತು ಸಂಕಲ್ಪವನ್ನು ದುರ್ಬಲಗೊಳಿಸುವ ಭಯ, ಆತಂಕ ಮತ್ತು ಇತರ ನಕಾರಾತ್ಮಕ ಉದ್ವೇಗಗಳಿಗೆ, ಅಹಂಕಾರವು ಅತಿಯಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಆದರೆ ಅಸಹಾಯಕತೆಯ ಆ ಭ್ರಮೆಯನ್ನು ಒಪ್ಪಿಕೊಳ್ಳಬೇಡಿರೆಂದು ಪರಮಹಂಸಜಿ ನಮಗೆ ಪ್ರಚೋದಿಸುತ್ತಾರೆ; ಬದಲಾಗಿ ನಮ್ಮ ಮನಸ್ಸು ಮತ್ತು ಸಂಕಲ್ಪ ಶಕ್ತಿಗಳು ಭಗವಂತನ ಸರ್ವಜ್ಞ ಮನಸ್ಸು ಮತ್ತು ಅವನ ಸರ್ವಶಕ್ತ ಸಂಕಲ್ಪಗಳ ಪ್ರವೇಶದ್ವಾರಗಳು ಎಂದು ದೃಢೀಕರಿಸುವುದಕ್ಕೆ ಒತ್ತಾಯಿಸುತ್ತಾರೆ. ನಮ್ಮ ಮನಸ್ಸು ಮತ್ತು ಸಂಕಲ್ಪ ಶಕ್ತಿಯನ್ನು ಯುಕ್ತವಾಗಿ ಉಪಯೋಗಿಸಿಕೊಳ್ಳುವ ಮೂಲಕ, ಆ ಆಂತರಿಕ ಪ್ರವೇಶದ್ವಾರಗಳನ್ನು ತೆರೆದಿಟ್ಟರೆ, ಸವಾಲೊಡ್ಡುವ ಬಾಹ್ಯ ಪರಿಸ್ಥಿಗಳು ಕೂಡ ಅವಕಾಶಗಳಾಗಿ ಪರಿಣಮಿಸಿ ನಮ್ಮ ಆತ್ಮದ ಅಂತಸ್ಥ ಸ್ಥೈರ್ಯ ಸಾಮರ್ಥ್ಯಗಳನ್ನು ಹೊರತರುತ್ತವೆ. ಹೀಗೆ ನಾವು ಅದಕ್ಕೆ ಅಸಹಾಯಕರಂತೆ ಪ್ರತಿಕ್ರಿಯಿಸುವ ಬದಲು ನಮ್ಮ ದೈನಂದಿನ ವಾತಾವರಣಕ್ಕೆ ಒಂದು ಸಕಾರಾತ್ಮಕ ಪ್ರಭಾವವಾಗುತ್ತೇವೆ.
“ವ್ಯಕ್ತಿಗಳ ಹೃದಯಗಳು ಪರಿವರ್ತನೆಗೊಂಡಾಗ ಜಗತ್ತೂ ಬದಲಾಗುತ್ತದೆ.” ಎಂದು ಪರಮಹಂಸಜಿ ನಮಗೆ ಹೇಳಿದರು. ಆ ಪರಿವರ್ತನೆ ನಮ್ಮ ಸ್ವ-ಪ್ರಜ್ಞೆಯ ನಿಯಂತ್ರಣದಿಂದ ಆರಂಭವಾಗುತ್ತದೆ. ಪ್ರತಿ ದಿನ ಧ್ಯಾನ ಮಾಡಿ; ಮತ್ತು ಪ್ರತಿದಿನ ಅವರ ಬೋಧನೆಗಳಲ್ಲಿರುವ ಕೆಲವು ಸ್ಫೂರ್ತಿದಾಯಕ, ಪುನಶ್ಚೇತಕ ಸತ್ಯಗಳನ್ನು ಹೀರಿಕೊಳ್ಳಿ. ಅದರಿಂದಾಗಿ ನೀವು ಭಗವಂತನಲ್ಲಿ ಮತ್ತು ನಿಮ್ಮಲ್ಲಿ ನಂಬಿಕೆಯನ್ನು ಸದೃಢಗೊಳಿಸುತ್ತೀರಿ ಮತ್ತು ನಿಮ್ಮ ಬದುಕನ್ನು ಅವನ ನಿತ್ಯ ನಿಯಮಗಳ ಜೊತೆ ಶ್ರುತಿಗೂಡಿಸುವ ನಿಮ್ಮ ಪ್ರೇರಣೆಯನ್ನು ಸುಭದ್ರಗೊಳಿಸುತ್ತೀರಿ.
ನಿಮ್ಮ ಹೃದಯದಲ್ಲಿ ದಿವ್ಯ ಸಾಮರಸ್ಯಕ್ಕೆ ನೀವು ಪ್ರಥಮ ಆದ್ಯತೆಯನ್ನು ನೀಡಲು ನಿರ್ಧರಿಸಿದಾಗ — ಪ್ರಾಮಾಣಿಕ ಜೀವನವನ್ನು ನಡೆಸುವುದು ಮತ್ತು ಇತರರನ್ನು ಸಹೃದಯತೆ, ವಿವೇಚನೆ ಮತ್ತು ಚಿಂತನಾಶೀಲತೆಯಿಂದ ಕಾಣುವುದು — ನೀವು ಈ ಪ್ರಪಂಚದಲ್ಲಿ ಕಡುಸಂಕಟ ಮತ್ತು ಅಸಾಂಗತ್ಯದ — ಸ್ವಾರ್ಥಪರತೆ ಮತ್ತು ಅದು ಪೋಷಿಸುವ ಪ್ರತ್ಯೇಕಿಸುವಿಕೆ ಮತ್ತು ಸಂಘರ್ಷ — ಬಹು ದೊಡ್ಡ ಕಾರಣವನ್ನು ನಿರ್ಮೂಲನೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ.