ಪರಮಹಂಸ ಯೋಗಾನಂದರ ನೇರ ಶಿಷ್ಯರು ಮತ್ತು 65 ವರ್ಷಗಳಿಗೂ ಹೆಚ್ಚು ಕಾಲ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಸನ್ಯಾಸಿಗಳಾದ ನಮ್ಮ ಪೂಜ್ಯ ಸ್ವಾಮಿ ಆನಂದಮೊಯಿ ಅವರು ಸೆಪ್ಟೆಂಬರ್ 6, 2016 ರ ಮಂಗಳವಾರ ಸಂಜೆ ಲಾಸ್ ಏಂಜಲೀಸ್‌ನ ಮೌಂಟ್ ವಾಷಿಂಗ್ಟನ್‌ನಲ್ಲಿರುವ ಎಸ್‌ಆರ್‌ಎಫ್‌ನ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿ ಶಾಂತಿಯುತವಾಗಿ ನಿಧನರಾದರು.
ಎಸ್‌ಆರ್‌ಎಫ್‌ನ ಹೆಚ್ಚು-ಪ್ರೀತಿಸಲ್ಪಟ್ಟ ಮತ್ತು ಆಳವಾಗಿ ಗೌರವಿಸಲ್ಪಟ್ಟ ಸ್ವಾಮಿಯಾಗಿ (ಮಿನಿಸ್ಟರ್), ಸ್ವಾಮಿ ಆನಂದಮೊಯಿ ಅವರು ತಮ್ಮ ನಿಸ್ವಾರ್ಥ ಜೀವನದ ಮೂಲಕ ಹಾಗೂ ಆಧ್ಯಾತ್ಮಿಕ ಜೀವನದ ಮತ್ತು ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳ ಆಳವಾದ ತಿಳುವಳಿಕೆಯ ಮೂಲಕ ಸಾವಿರಾರು ಜನರನ್ನು ಪ್ರೇರೇಪಿಸಿದರು ಮತ್ತು ಉನ್ನತೀಕರಿಸಿದರು. ಅವರು ಪ್ರಪಂಚದಾದ್ಯಂತ ಅಸಂಖ್ಯಾತ ಆತ್ಮಗಳಿಗೆ ಅನೇಕ ವರ್ಷಗಳ ಕಾಲ ಭಗವಂತನೆಡೆಗಿನ ಮಾರ್ಗದಲ್ಲಿ ನೆರವಾಗುತ್ತ ಪ್ರೋತ್ಸಾಹಿಸುವ ಮೂಲಕ ಅವರ ಆಧ್ಯಾತ್ಮಿಕ ಜೀವನದಲ್ಲಿ ಶಾಶ್ವತವಾದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ.
ಸ್ಮರಣೆಯ ಸೇವಾ ಯೋಜನೆಗಳು
ವೈಎಸ್ಎಸ್ ಆಶ್ರಮ ಮತ್ತು ಕೇಂದ್ರಗಳಲ್ಲಿ ಸಾರ್ವಜನಿಕ ಸ್ಮರಣಾ ಕಾರ್ಯಕ್ರಮವನ್ನು ನಡೆಸಲಾಯಿತು:
ಭಾನುವಾರ ಸೆಪ್ಟೆಂಬರ್ 25, 2016
ಯೋಗದಾ ಸತ್ಸಂಗ ಮಠ, ದಕ್ಷಿಣೇಶ್ವರ: ಬೆಳಿಗ್ಗೆ 10.30 ರಿಂದ ಅಪರಾಹ್ನ 12 ರವರೆಗೆ
ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿ: ಬೆಳಿಗ್ಗೆ 10.00 ರಿಂದ 11.30 ರವರೆಗೆ
ಯೋಗದಾ ಸತ್ಸಂಗ ಶಾಖಾ ಮಠ, ನೋಯ್ಡಾ: ಬೆಳಿಗ್ಗೆ 10.00 ರಿಂದ ಅಪರಾಹ್ನ 12 ರವರೆಗೆ
ವೈಎಸ್ಎಸ್ ಕೇಂದ್ರಗಳು
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಬೆಂಗಳೂರು: ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 12.15 ರವರೆಗೆ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಚಂಡೀಗಡ: ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 12.00 ರವರೆಗೆ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ದೆಹಲಿ: ಬೆಳಿಗ್ಗೆ 10 ಗಂಟೆಯಿಂದ 11.30 ರವರೆಗೆ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಲಕ್ನೋ: ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.00 ರವರೆಗೆ, ನಂತರ ವೀಡಿಯೋ ಪ್ರದರ್ಶನ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಮುಂಬಯಿ: ಮಧ್ಯಾಹ್ನ 12.30 ಗಂಟೆಯಿಂದ ಮಧ್ಯಾಹ್ನ 2.00 ರವರೆಗೆ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ರಾಜಮಂಡ್ರಿ: ಬೆಳಿಗ್ಗೆ 11 ಗಂಟೆಯಿಂದ ಅಪರಾಹ್ನ 12.00 ರವರೆಗೆ
ಸಂಕ್ಷಿಪ್ತ ಜೀವನ ಚರಿತ್ರೆ
ನವೆಂಬರ್ 1, 1922 ರಂದು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ಜನಿಸಿದ ಸ್ವಾಮಿ ಆನಂದಮೊಯಿ ಅವರ ಪೂರ್ವಾಶ್ರಮದ ಹೆಸರು ಹೆನ್ರಿ ಶಾಫೆಲ್‌ಬರ್ಗರ್, ಅವರು ಹದಿಹರೆಯದಲ್ಲಿಯೇ ಪೂರ್ವದ ತತ್ತ್ವಶಾಸ್ತ್ರಕ್ಕೆ ಪರಿಚಯಿಸಲ್ಪಟ್ಟರು ಮತ್ತು ಶೀಘ್ರದಲ್ಲೇ ಆಧ್ಯಾತ್ಮಿಕ ಜ್ಞಾನೋದಯಕ್ಕಾಗಿ ತಮ್ಮದೇ ಆದ ಹುಡುಕಾಟವನ್ನು ಪ್ರಾರಂಭಿಸಿದರು. ಆದರೆ ತನ್ನನ್ನು ಮಾರ್ಗದರ್ಶಿಸಲು ಒಬ್ಬ ಜ್ಞಾನೋದಯ ಹೊಂದಿದ ಗುರುವನ್ನು ಹೇಗೆ ಕಂಡುಕೊಳ್ಳುವುದು ಎಂದು ಅಚ್ಚರಿಪಟ್ಟರು. “ನಾನು ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ನನ್ನ ತಂದೆಯ ವ್ಯಾಪಾರದಲ್ಲಿ ಎರಡು ನಿರಾಶಾದಾಯಕ ವರ್ಷಗಳ ಕಾಲ ಕೆಲಸ ಮಾಡಿದೆ,” ಎಂದು ಅವರು ನೆನಪಿಸಿಕೊಂಡರು. “ಅಷ್ಟು ಹೊತ್ತಿಗಾಗಲೆ, ನಾನು ಹಿಂದೂ ತತ್ತ್ವಶಾಸ್ತ್ರದಲ್ಲಿ ನನ್ನ ಆಸಕ್ತಿಯನ್ನು ಕಳೆದುಕೊಂಡಿದ್ದೆ, ಏಕೆಂದರೆ ಗುರುವನ್ನು ಕಂಡುಕೊಳ್ಳುವುದು ಅಸಾಧ್ಯ ಎಂಬಂತೆ ಕಾಣಿಸಿತು. ನಾನು ಕಲೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ಮೂರು ವರ್ಷಗಳ ನಂತರ ಪ್ರಸಿದ್ಧ ವಾಸ್ತುಶಿಲ್ಪಿ ಫ್ರಾಂಕ್ ಲಾಯ್ಡ್ ರೈಟ್ ಅವರೊಂದಿಗೆ ಅಧ್ಯಯನ ಮಾಡಲು ಅಮೆರಿಕಾಕ್ಕೆ ಹೋಗಲು ನನಗೆ ಕರೆ ಬಂದಿತು.” ಅವರು 1948 ರಲ್ಲಿ ಅಮೆರಿಕಾಕ್ಕೆ ಆಗಮಿಸಿದರು ಮತ್ತು ಆ ಕೂಡಲೇ ಅವರಿಗೆ ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ ಪುಸ್ತಕ ದೊರಕಿತು. “ನಾನು ಆ ಪುಸ್ತಕವನ್ನು ಆತುರದಿಂದ ಓದಿ ಮುಗಿಸಿದೆ,” ಎಂದು ಅವರು ಹೇಳಿದರು. “ನಾನು ಬಯಸಿದ್ದನ್ನು ಕಂಡುಕೊಂಡಿದ್ದೇನೆ ಎಂದು ನನ್ನ ಹೃದಯದಲ್ಲಿ ನನಗೆ ತಿಳಿದಿತ್ತು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಅಧ್ಯಯನ ಮಾಡಲು ಮತ್ತು ಭಗವಂತನನ್ನು ಕಂಡುಕೊಳ್ಳಲು ನಿರ್ಧರಿಸಿದೆ.”
ಕೆಲವು ತಿಂಗಳುಗಳ ನಂತರ, ಸ್ವಾಮಿ ಆನಂದಮೊಯಿ ಮಹಾನ್ ಗುರುಗಳನ್ನು ನೋಡಲು ಆಶಿಸುತ್ತಾ ಲಾಸ್ ಏಂಜಲೀಸ್‌ಗೆ ಪ್ರಯಾಣ ಬೆಳೆಸಿದರು. ಅವರಿಬ್ಬರ ಮೊದಲ ಭೇಟಿ ಆದುದು, ಎಸ್‌ಆರ್‌ಎಫ್ ಹಾಲಿವುಡ್ ಟೆಂಪಲ್‌ನಲ್ಲಿ ಪರಮಹಂಸಜಿ ನೀಡಿದ ಭಾನುವಾರದ ಸತ್ಸಂಗದ ಕೊನೆಯಲ್ಲಿ. “ಅದು ಮರೆಯಲಾಗದ ಅನುಭವವಾಗಿತ್ತು,” ಎಂದು ಅವರು ಹೇಳಿದರು. “ಸತ್ಸಂಗದ ನಂತರ, ಗುರುಗಳು ಒಂದು ಕುರ್ಚಿಯಲ್ಲಿ ಕುಳಿತುಕೊಂಡರು ಮತ್ತು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರು ಅವರಿಗೆ ನಮಸ್ಕರಿಸಲು ಹೋದರು. ಅಂತಿಮವಾಗಿ ನಾನು ಅವರ ಮುಂದೆ ನಿಂತಾಗ, ಅವರು ನನ್ನ ಕೈಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು ಮತ್ತು ನಾನು ಆ ಆಳವಾದ ಹೊಳೆಯುವ ಕೋಮಲ ಕಣ್ಣುಗಳಲ್ಲಿ ನೋಡಿದೆ. ಯಾವ ಮಾತೂ ಆಡಲಿಲ್ಲ. ಆದರೆ ಅವರ ಕೈ ಮತ್ತು ಕಣ್ಣುಗಳಿಂದ ನನ್ನೊಳಗೆ ಹರಿಯುತ್ತಿರುವ ಅವರ್ಣನೀಯ ಆನಂದವನ್ನು ನಾನು ಅನುಭವಿಸಿದೆ.”
ಸ್ವಾಮಿ ಆನಂದಮೊಯಿ ಅವರು 1949 ರಲ್ಲಿ ಸನ್ಯಾಸಿಯಾಗಿ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಆಶ್ರಮವನ್ನು ಪ್ರವೇಶಿಸಿದರು ಮತ್ತು 1952 ರ ಆರಂಭದಲ್ಲಿ ಮಹಾನ್ ಗುರುಗಳ ಮಹಾ ಸಮಾಧಿಯಾಗುವವರೆಗೂ ಪರಮಹಂಸಜಿಯವರ ವೈಯಕ್ತಿಕ ತರಬೇತಿಯನ್ನು ಪಡೆಯುವ ಸೌಭಾಗ್ಯವನ್ನು ಹೊಂದಿದ್ದರು. ಅವರು ನವೆಂಬರ್ 1957 ರಲ್ಲಿ ಅಂತಿಮ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡರು — ಆನಂದಮೊಯಿ (“ದಿವ್ಯಾನಂದದಿಂದ ತುಂಬಿರುವ”) ಎಂಬ ಹೆಸರನ್ನು ಪಡೆದರು — ಮತ್ತು ಏಪ್ರಿಲ್ 1958 ರಲ್ಲಿ ಎಸ್‌ಆರ್‌ಎಫ್‌ನ ಪಾದ್ರಿಯಾಗಿ ನೇಮಕಗೊಂಡರು. ಈ ಎರಡೂ ಸಮಾರಂಭಗಳನ್ನು ಶ್ರೀ ಶ್ರೀ ದಯಾ ಮಾತಾ ನಡೆಸಿಕೊಟ್ಟರು.
ಅವರ ದೀರ್ಘ ಜೀವಿತಾವಧಿಯಲ್ಲಿ ಕಿರಿಯ ಸನ್ಯಾಸಿಯಾಗಿದ್ದಾಗ ಅವರು ತಮ್ಮ ಗುರುಗಳ ಕಾರ್ಯದಲ್ಲಿ ಅನೇಕ ತರಹದ ಮತ್ತು ವಿವಿಧ ರೀತಿಯ ಸೇವೆ ಸಲ್ಲಿದರು. ಅವರ ಮೊದಮೊದಲಿನ ಕಾರ್ಯಭಾರಗಳಲ್ಲಿ ಈ ಕೆಳಗಿನವು ಒಳಗೊಂಡಿದ್ದವು: ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಲೇಕ್ ಶ್ರೈನ್ 1950 ರಲ್ಲಿ ಉದ್ಘಾಟನೆಯಾಗುವ ಮೊದಲು ಅದರ ಭೂಭಾಗದ ವಿನ್ಯಾಸದ ಕೆಲಸ, ಹಾಲಿವುಡ್ ಟೆಂಪಲ್ ಮತ್ತು ಆಶ್ರಮ ಕೇಂದ್ರದ ಆವರಣದಲ್ಲಿ ಇಂಡಿಯಾ ಹಾಲ್ ಮತ್ತು ಕಮಲದ ಗೋಪುರದ ನಿರ್ಮಾಣದಲ್ಲಿ ಸಹಾಯ ಹಸ್ತ ಮತ್ತು ಹಾಲಿವುಡ್‌ನಲ್ಲಿನ ಎಸ್‌ಆರ್‌ಎಫ್ ಕೆಫೆಯಲ್ಲಿ ಅಡುಗೆಯವರಾಗಿ ಸೇವೆ ಸಲ್ಲಿಸಿದುದು. ಅವರು 1950 ರ ದಶಕದಲ್ಲಿ ಸ್ವಾಮಿಯಾಗಿ ತಮ್ಮ ಕರ್ತವ್ಯಗಳನ್ನು ಪ್ರಾರಂಭಿಸಿದರು, ಮತ್ತು ಅನೇಕ ವರ್ಷಗಳ ಕಾಲ ಎಸ್‌ಆರ್‌ಎಫ್‌ನ ಹಾಲಿವುಡ್, ಎನ್ಸಿನಿಟಾಸ್, ಫೀನಿಕ್ಸ್, ಲೇಕ್ ಶ್ರೈನ್, ಪಸಾಡೆನಾ ಮತ್ತು ಫುಲ್ಲರ್ಟನ್ ಮಂದಿರಗಳಲ್ಲಿ ಅವರು ಉಸ್ತುವಾರಿ ಸ್ವಾಮಿಗಳಾಗಿದ್ದರು. ಜೊತೆಗೆ, ಅವರು ಪರಮಹಂಸಜಿಯವರ ಯೋಗದಾ ಸತ್ಸಂಗ ಸೊಸೈಟಿಗೆ ಸೇವೆ ಸಲ್ಲಿಸಲು ಭಾರತಕ್ಕೆ ಹಲವಾರು ಪ್ರವಾಸಗಳನ್ನು ಮಾಡಿದರು, ಅಲ್ಲಿ ಕ್ರಿಯಾ ಯೋಗದ ದೀಕ್ಷಾ ಸಮಾರಂಭಗಳನ್ನು ನಡೆಸಿದರು ಮತ್ತು ದೇಶದಾದ್ಯಂತ ದೊಡ್ಡ ಭಕ್ತ ಸಮೂಹಗಳನ್ನು ಉದ್ದೇಶಿಸಿ ಮಾತನಾಡಿದರು. ಅನೇಕ ವರ್ಷಗಳ ಕಾಲ ಅವರು ವಿವಿಧ ಎಸ್‌ಆರ್‌ಎಫ್ ಆಶ್ರಮ ಕೇಂದ್ರಗಳ ಉಸ್ತುವಾರಿ ವಹಿಸಿದ್ದರು.
ಸ್ವಾಮಿ ಆನಂದಮೊಯಿ ಅವರು ಅನೇಕ ವರ್ಷಗಳ ಕಾಲ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದರು. ಶ್ರೀ ದಯಾ ಮಾತಾರವರು ಆನಂದಮೊಯಿ ಅವರಿಗೆ ಎಸ್‌ಆರ್‌ಎಫ್ ಸನ್ಯಾಸಿಗಳ ಆಧ್ಯಾತ್ಮಿಕ ನಿರ್ದೇಶನದ ಉಸ್ತುವಾರಿಯನ್ನೂ ವಹಿಸಿದರು ಹಾಗೂ ಅವರು ಈ ಸ್ಥಾನದಲ್ಲಿ ದಶಕಗಳ ಕಾಲ ಪ್ರೀತಿಯ ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದರು.
ಸ್ವಾಮಿ ಆನಂದಮೊಯಿಯವರು ಒಬ್ಬ ಶಿಕ್ಷಕರೂ ಮತ್ತು ಸಾರ್ವಜನಿಕ ಭಾಷಣಕಾರರೂ ಆಗುವುದು ದೈವ ನಿಯಾಮಕವೆಂದು ಪರಮಹಂಸಜಿಯವರು ಅವರಿಗೆ ತಿಳಿಸಿದ್ದರು ಹಾಗೂ ಅವರ ಈ ಸಲಹೆಗಾರನ ಪಾತ್ರಕ್ಕಾಗಿ ಅವರನ್ನು ಬಹುಕಾಲ ಮತ್ತು ವ್ಯಾಪಕವಾಗಿ ನೆನಪಿಸಿಕೊಳ್ಳಲಾಗುತ್ತದೆ. ನಾಲ್ಕು ದಶಕಗಳ ಕಾಲ ಅಮೆರಿಕಾ, ಯುರೋಪ್ ಮತ್ತು ಭಾರತದಲ್ಲಿ ಮಾಡಿದ ವ್ಯಾಪಕ ಪ್ರಯಾಣದ ಸಮಯದಲ್ಲಿ, ಸ್ವಾಮಿ ಆನಂದಮೊಯಿಯವರು, ಪರಮಹಂಸ ಯೋಗಾನಂದರ ಬೋಧನೆಗಳ ತೀಕ್ಷ್ಣ ನಿರೂಪಣೆಯಿಂದ, ಗುರುಗಳ ಜೊತೆಗಿನ ತಮ್ಮ ಅನುಭವಗಳ ವೈಯಕ್ತಿಕ ನೆನಪುಗಳಿಂದ ಮತ್ತು ತಮ್ಮ ಸೂಕ್ಷ್ಮ ವಿವೇಚನೆಯ ಹಾಗೂ ಸಹಾನುಭೂತಿಯ ವೈಯಕ್ತಿಕ ಸಲಹೆಗಳಿಂದ ಎಸ್‌ಆರ್‌ಎಫ್ ಸದಸ್ಯರು ಮತ್ತು ಸದಸ್ಯರಲ್ಲದವರನ್ನು ಸಮಾನವಾಗಿ ಪ್ರೇರೇಪಿಸುತ್ತ ಎಸ್‌ಆರ್‌ಎಫ್‌ನ ಅತ್ಯಂತ ಪ್ರೀತಿಯ ಮತ್ತು ಗೌರವಾನ್ವಿತ ಸ್ವಾಮಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟರು.
ಪ್ರೀತಿಯ ಸನ್ಯಾಸಿಗೆ ನಲ್ಮೆಯ ಪ್ರಣಾಮಗಳು
ಸ್ವಾಮಿ ಆನಂದಮೊಯಿ ಅವರಿಗೆ ನಮ್ಮ ಪ್ರೀತಿಯ ಪ್ರಣಾಮಗಳನ್ನು ಸಲ್ಲಿಸುವಾಗ, ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ, ಭಗವಂತ ಮತ್ತು ಗುರುಗಳೊಂದಿಗೆ ಈಗ ಐಕ್ಯವಾಗಿದ್ದಾರೆ ಎಂಬ ಆಲೋಚನೆಯಲ್ಲಿ ನಾವು ಸಾಂತ್ವನ ಪಡೆಯಬಹುದು. ಅವರ ಉತ್ತೇಜಕ, ಒಳನೋಟವುಳ್ಳ ಮಾರ್ಗದರ್ಶನ ಮತ್ತು ಅವರ ಪ್ರೀತಿಯ ಮೋಡಿಯನ್ನು ಅನೇಕ ಆಡಿಯೊ ಮತ್ತು ವೀಡಿಯೊ ರೆಕಾರ್ಡಿಂಗ್‌ಗಳಲ್ಲಿ ಸಂರಕ್ಷಣೆಯಾಗಿರುವುದಕ್ಕೂ ನಾವು ಕೃತಜ್ಞರಾಗಿರುತ್ತೇವೆ. ಸ್ವಾಮಿ ಆನಂದಮೋಯಿಜಿ ಅವರೊಂದಿಗಿನ ಈ ಕೆಲವು ವಿಶೇಷ ಕ್ಷಣಗಳನ್ನು ನೀವೂ ಅನುಭವಿಸಲು ಆಹ್ವಾನಿಸುತ್ತೇವೆ, ಅದಕ್ಕಾಗಿ, ಕೆಳಗಿನ ಕೊಂಡಿಯನ್ನು ಒತ್ತಿ:
- ಆಡಿಯೋ-ವೀಡಿಯೋ ಸತ್ಸಂಗ
- ಡಿಸೈಪಲ್ಸ್ ರೆಮಿನಿಸ್ (ಶಿಷ್ಯರು ನೆನಪಿಸಿಕೊಳ್ಳುತ್ತಾರೆ)
- “ಓಪನಿಂಗ್ ಟು ಗಾಡ್ಸ್ ಲವ್ ಇನ್ ಮೆಡಿಟೇಷನ್” (ಧ್ಯಾನದಲ್ಲಿ ದೇವರ ಪ್ರೀತಿಗೆ ತೆರೆದುಕೊಳ್ಳುವುದು) – 2006 ರ SRF ವಿಶ್ವ ಘಟಿಕೋತ್ಸವದಲ್ಲಿ ನೀಡಿದ ಭಾಷಣದ ಆಯ್ದ ಭಾಗಗಳು: ಭಾಗ 1, ಭಾಗ 2
ವೈಎಸ್ಎಸ್ ಆನ್‌ಲೈನ್ ಪುಸ್ತಕ ಮಳಿಗೆಯಲ್ಲಿ ಸ್ವಾಮಿ ಆನಂದಮೋಯಿ ಗಿರಿ ಅವರ ಪ್ರವಚನಗಳ ಧ್ವನಿಮುದ್ರಿಕೆ ಗಳನ್ನೂ ಸಹ ಪಡೆಯಬಹುದು.


















