ಗುರುದೇವರ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಹಿರಿಯ ಸನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ನಮ್ಮ ಗೌರವಾನ್ವಿತ ಸ್ವಾಮಿ ಹಿತೇಶಾನಂದರು 2021ರ ಮೇ 11 ರಂದು ಪ್ರಶಾಂತವಾಗಿ ದೇಹತ್ಯಾಗ ಮಾಡಿದರೆಂಬುದನ್ನು ನೀವು ತಿಳಿದಿರಲೆಂದು ನಾವು ಇಚ್ಛಿಸುತ್ತೇವೆ. ಕೋವಿಡ್‌ನ ಮೊದಲ ಲಕ್ಷಣಗಳು ಕಂಡ ಕೂಡಲೇ, ಸ್ಥಳೀಯ ರಾಂಚಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರು ವೈರಸ್‌ನಿಂದ ಸೋಂಕಿತರಾಗಿರುವುದು ಪರೀಕ್ಷೆಯಲ್ಲಿ ಖಚಿತವಾಯಿತು. ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಆರೈಕೆಯಲ್ಲಿ ಅವರು ಅನೇಕ ದಿನಗಳ ಚಿಕಿತ್ಸೆ ಪಡೆದರೂ ಸಹ, ಸ್ವಾಮಿ ಹಿತೇಶಾನಂದರ ಸ್ಥಿತಿಯು ಕ್ರಮೇಣ ಕ್ಷೀಣಿಸಿ, ಅವರ ಅಂತ್ಯಕ್ಕೆ ಕಾರಣವಾಯಿತು.
ಗೋವರ್ಧನ ಪ್ರಸಾದ್ ಎಂಬ ಪೂರ್ವಾಶ್ರಮದ ಹೆಸರಿನ, ಸ್ವಾಮಿ ಹಿತೇಶಾನಂದರು ಮೂಲತಃ ಬಿಹಾರ್ ರಾಜ್ಯದ ಛಾಪ್ರಾ ಜಿಲ್ಲೆಯವರು. ಯುವಕರಾಗಿದ್ದಾಗ ಉದ್ಯೋಗ ಪಡೆಯಲು ಮತ್ತು ಉನ್ನತ ಶಿಕ್ಷಣಕ್ಕಾಗಿ ಹೊಸ ದೆಹಲಿಗೆ ಸ್ಥಳಾಂತರಗೊಂಡರು. ತಮ್ಮ ಕಠಿಣ ಪರಿಶ್ರಮ ಮತ್ತು ಏಕನಿಷ್ಠ ಸಾಧನೆಯಿಂದ – ಹಗಲಿನಲ್ಲಿ ಅನೇಕ ವೃತ್ತಿಗಳಲ್ಲಿ ತೊಡಗಿಕೊಂಡು, ರಾತ್ರಿ ವೇಳೆ ತರಗತಿಗಳಿಗೆ ಹಾಜರಾಗುತ್ತ, ಗೋವರ್ಧನ ಪ್ರಸಾದ್ ಕಾಲೇಜಿನ ವಿದ್ಯಾಭ್ಯಾಸವನ್ನು ಮುಗಿಸಿ ಇಂಗ್ಲಿಷ್ ಸಾಹಿತ್ಯದಲ್ಲಿ ಮಾಸ್ಟರ್ ಪದವಿ ಪಡೆದುಕೊಂಡರು. ನಂತರ, ಅವರು ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ (ಡಿಡಿಎ) ಯಲ್ಲಿ ಒಂದು ಸರ್ಕಾರಿ ಹುದ್ದೆಯನ್ನು ಸ್ವೀಕರಿಸಿದರು. ಅದರ ಆರ್ಥಿಕ ಭದ್ರತೆಯು, ಅವರು ತಮ್ಮ ಇಬ್ಬರು ಸೋದರರನ್ನು ದೆಹಲಿಗೆ ಕರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಮತ್ತು ಅವರ ವಿದ್ಯಾಭ್ಯಾಸವನ್ನು ಮುಂದುವರಿಸುವಲ್ಲಿ ನೆರವಾಯಿತು.
ಅವರ ಅವಿಶ್ರಾಂತ ದುಡಿಮೆಯ ಉತ್ಸಾಹ ಮತ್ತು ಅಚಲ ಬದ್ಧತೆಯ ಜೊತೆಗೆ, ಅವಶ್ಯಕತೆ ಇರುವವರಿಗೆ ಸದಾ ನೆರವಾಗುವ ಅಪರಂಜಿಯಂತಹ ಗುಣವೂ ಸೇರಿಕೊಂಡು, ಅವರನ್ನು ಅವರ ಜೀವನದಲ್ಲಿ ಭೇಟಿಯಾದ ಪ್ರತಿಯೊಬ್ಬರ ಹೃದಯಗಳನ್ನು ಸ್ಪರ್ಶಿಸಿ, ಅತ್ಯುತ್ತಮ ಉದಾಹರಣೆಯನ್ನಾಗಿ ಮಾಡಿತು.
ಡಿಡಿಎನ ಉದ್ಯೋಗಿಯಾಗಿ,ಗೋವರ್ಧನ ಪ್ರಸಾದ್ ರವರು ಅದಾಗಲೇ ಪರಮಹಂಸ ಯೋಗಾನಂದರ, ವೈಎಸ್ಎಸ್ ಬೋಧನೆಗಳಲ್ಲಿನ ಆಧ್ಯಾತ್ಮಿಕ ಸಾಧನೆಗೆ ಬದ್ಧರಾಗಿದ್ದರು. ಆ ತತ್ವಗಳ ನಿಷ್ಠಾವಂತ ಅನುಸರಣೆಯಿಂದಾಗಿ ಅವರು, ಕಠಿಣ ಪರಿಶ್ರಮಗಾರರು, ಅತ್ಯಂತ ಪ್ರಾಮಾಣಿಕರು, ಹಾಗೂ ಭ್ರಷ್ಟಗೊಳಿಸಲಾಗದವರು ಎಂಬ ಖ್ಯಾತಿ ಗಳಿಸಿದ್ದರು. ಅವರ ಹೊಳೆಯುವ ಈ ನಡತೆ ಮತ್ತು ಉನ್ನತ ಧ್ಯೇಯಗಳು,ಅವರ ಅನೇಕ ಸಹೋದ್ಯೋಗಿಗಳಲ್ಲಿ ಅಳಿಸಲಾಗದ ಮುದ್ರೆಯನ್ನು ಒತ್ತಿತು. ಅವರಲ್ಲಿ ಕೆಲವರು, ಅವರ ಹೆಜ್ಜೆಯನ್ನು ಅನುಸರಿಸಿ, ಅಂತಿಮವಾಗಿ ತಾವೇ ಉತ್ಕಟ ಮತ್ತು ಶ್ರದ್ಧಾವಂತ ಭಕ್ತರಾದರು.
ಸ್ವಾಮಿ ಹಿತೇಶಾನಂದಗಿರಿಯವರು ಯೋಗದಾ ಸತ್ಸಂಗ ಸನ್ಯಾಸಿ ಪಂಥವನ್ನು 1986ರಲ್ಲಿ ಪ್ರವೇಶಾರ್ಥಿಯಾಗಿ ಸೇರಿದರು. ಅವರು ರಾಂಚಿ ಆಶ್ರಮದಲ್ಲಿ, 1995ರಲ್ಲಿ ತಮ್ಮ ಬ್ರಹ್ಮಚರ್ಯ ದೀಕ್ಷೆ ಪಡೆದರು.ಮತ್ತು ತಮ್ಮ ಸನ್ಯಾಸಿ ದೀಕ್ಷೆಯನ್ನು 2004ರಲ್ಲಿ ಎಸ್‌ಆರ್‌ಎಫ್ ಅಂತಾರಾಷ್ಟ್ರೀಯ ಪ್ರಧಾನ ಕಛೇರಿ, ಲಾಸ್ ಏಂಜಲೀಸ್ ನಲ್ಲಿ ಪಡೆದರು.
ವೈಎಸ್ಎಸ್ ಸನ್ಯಾಸಿ ಶಿಷ್ಯರಾಗಿ, ಅನೇಕ ದಶಕಗಳ ಸೇವೆಯಲ್ಲಿ, ಸ್ವಾಮಿ ಹಿತೇಶಾನಂದರವರು, ಗುರೂಜಿಯವರ ರಾಂಚಿ, ದಕ್ಷಿಣೇಶ್ವರ, ದ್ವಾರಾಹಟ್, ನೊಯ್ಡಾ ಆಶ್ರಮಗಳಲ್ಲಿ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಅದರಲ್ಲಿ ವಿಶೇಷವಾಗಿ ಗಮನ ಸೆಳೆಯುವುದು, ರಾಂಚಿಯಲ್ಲಿ ಸುಂದರವಾದ ಸ್ಮೃತಿ ಮಂದಿರ ಹಾಗೂ ಧ್ಯಾನ ಮಂದಿರ ಕಟ್ಟಡಗಳ ನಿರ್ಮಾಣದಲ್ಲಿ ಅವರ ನೆರವು. ಅವರ ಜೀವನದ ಅಂತಿಮ ಭಾಗದಲ್ಲಿ, ಸ್ವಾಮೀಜಿಯವರು ನಮ್ಮ ಪತ್ರ ವ್ಯವಹಾರದ ವಿಭಾಗದಲ್ಲಿ ಸೇವೆ ಸಲ್ಲಿಸಿದರು, ಗುರುದೇವರ ಬೋಧನೆಗಳ ಬಗ್ಗೆ ಅವರಿಗಿದ್ದ ಆಳವಾದ ಅರಿವು, ಆಧ್ಯಾತ್ಮಿಕ ಸಮಾಲೋಚನೆ ಬಯಸಿ ಬಂದ ಅಗಣಿತ ಭಕ್ತರಿಗೆ ಅತ್ಯಂತ ಲಾಭಕರವಾದುದಾಗಿತ್ತು. ಭಕ್ತರ ಲಿಖಿತ ಪ್ರಾರ್ಥನೆಗಳು ಹಾಗೂ ಅವಶ್ಯಕತೆಗಳು, ಟೆಲಿಫೋನ್ ಸಮಾಲೋಚನೆಗೆ ಬದಲಾದಾಗ, ಸ್ವಾಮಿ ಹಿತೇಶಾನಂದರು, ಯಾವ ಸಮಯದಲ್ಲಿಯಾದರೂ ಟೆಲಿಫೋನ್ ಕರೆಗಳನ್ನು ಸ್ವೀಕರಿಸಲು ಸಿದ್ದರಾಗಿರುತ್ತಿದ್ದರು. ಪ್ರಾಯೋಗಿಕತೆಯಿಂದ ಕೂಡಿರುತ್ತಿದ್ದ ಅವರ ಸಮಾಲೋಚನೆಯು ಯಾವಾಗಲೂ ತಮ್ಮ ಗುರುಗಳ ಬೋಧನೆಗಳಲ್ಲಿ ಶ್ರುತಿಗೂಡಿಕೊಂಡಿರುತ್ತಿದ್ದವು.
ಭಗವಂತ ಹಾಗೂ ಗುರುಗಳೆಡೆಗೆ ಸ್ವಾಮಿ ಹಿತೇಶಾನಂದರ ಸಮರ್ಪಣಾ ಭಾವ ಮತ್ತು ಶ್ರದ್ಧಾಪೂರ್ವಕ ಸೇವೆಯಿಂದ ಕೂಡಿದ ಜೀವನದಿಂದ ನಾವು ಸ್ಫೂರ್ತಿ ಪಡೆಯುತ್ತಲೇ ಇರುತ್ತೇವೆ. ಎಲ್ಲಾ ವೈಎಸ್ಎಸ್ ಸನ್ಯಾಸಿಗಳು, ಸೇವಕರು ಮತ್ತು ಭಕ್ತರು ಅವರ ಭೌತಿಕ ಉಪಸ್ಥಿತಿಯನ್ನು ಕಳೆದುಕೊಂಡಿದ್ದರೂ, ಸ್ವಾಮಿ ಹಿತೇಶಾನಂದರ ಆತ್ಮವು, ಈಗ ಎಲ್ಲಾ ಶಾರೀರಿಕ ಬಂಧನಗಳ ಮಿತಿಯಿಂದ ಬಿಡುಗಡೆ ಹೊಂದಿ, ದಿವ್ಯ ಜಗನ್ಮಾತೆ ಮತ್ತು ನಮ್ಮ ಮಹಾನ್ ಗುರುಗಳೆಲ್ಲರ ಪ್ರಕಾಶ ಮತ್ತು ಪ್ರೇಮದಲ್ಲಿ ಹಾಯಾಗಿ ಇರುವರು ಎಂಬುದನ್ನು ತಿಳಿದು ಸಮಾಧಾನ ಹೊಂದೋಣ.
ಸ್ವಾಮಿ ಹಿತೇಶಾನಂದರು ಸರ್ವವ್ಯಾಪಿ ಧಾಮದೆಡೆಗೆ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರಿಸುತ್ತಿರುವಾಗ ನಾವು ನಮ್ಮ ಧ್ಯಾನಗಳಲ್ಲಿ, ನಮ್ಮ ಹೃದಯಗಳನ್ನು ತೆರೆದು, ಪ್ರೇಮ ಮತ್ತು ಪ್ರಾರ್ಥನೆಗಳನ್ನು ಕಳುಹಿಸೋಣ.