“ಪರಮಹಂಸ ಯೋಗಾನಂದರಿಂದ ಜ್ಞಾನವನ್ನು ಹೇಗೆ ಅಧ್ಯಯನ ಮಾಡಬೇಕೆಂದು ಕಲಿಯುವುದು” — ಶ್ರೀ ಮೃಣಾಲಿನಿ ಮಾತಾರಿಂದ ಒಂದು ಕಥೆ

09 ನವೆಂಬರ್‌, 2023

2011 ರಿಂದ 2017 ರಲ್ಲಿ ಸ್ವರ್ಗಸ್ಥರಾಗುವವರೆಗೆ ಸಂಘಮಾತಾ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ನಾಲ್ಕನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಮೃಣಾಲಿನಿ ಮಾತಾ ಅವರ ಈ ಬ್ಲಾಗ್ ಪೋಸ್ಟ್ 2017 ರ ಜನವರಿ – ಮಾರ್ಚ್ ಸಂಚಿಕೆಗಳಲ್ಲಿ ಯೋಗದಾ ಸತ್ಸಂಗ ನಿಯತಕಾಲಿಕೆಯಲ್ಲಿ ಪ್ರಕಟವಾದ “ದ ಸೈನ್ಸ್‌ ಆಫ್‌ ಸ್ಪಿರಿಚುವಲ್‌ ಸ್ಟಡಿ ಅಂಡ್‌ ದ ಆರ್ಟ್‌ ಆಫ್‌ ಇಂಟ್ರಾಸ್ಪೆಕ್ಷನ್” ಎಂಬ ಅವರ ಲೇಖನದಿಂದ ಆಯ್ದುಕೊಳ್ಳಲಾಗಿದೆ.

ಕಿರಿಯ ಶಿಷ್ಯರಾದ ನಮ್ಮ ಒಂದು ಗುಂಪು ಇಲ್ಲಿ ಎನ್‌ಸಿನಿಟಾಸ್‌ನಲ್ಲಿ (ಆಶ್ರಮದಲ್ಲಿ) ವಾಸಿಸುತಿತ್ತು; ಹಾಗೂ ಭಾನುವಾರ ಬೆಳಗ್ಗೆ ಸ್ಯಾನ್‌ ಡಿಯಾಗೋ ಮಂದಿರದಲ್ಲಿ ವಾರ ಬಿಟ್ಟು ವಾರ (ಉಳಿದ ಭಾನುವಾರ ಲಾಸ್‌ ಏಂಜಲೀಸ್‌ನಲ್ಲಿರುವ ಹಾಲಿವುಡ್‌ ಮಂದಿರದಲ್ಲಿ) ಗುರುಗಳು [ಪರಮಹಂಸ ಯೋಗಾನಂದರು] ಉಪನ್ಯಾಸಗಳನ್ನು ಕೊಡುವಾಗ ನಾವು ಹೋಗುತ್ತಿದ್ದೆವು.

ಅವರು ಉಪನ್ಯಾಸಗಳನ್ನು ಕೊಡುವಾಗ ಅಥವಾ ತರಗತಿಗಳನ್ನು ನಡೆಸುವಾಗ ನಮಗೆ ಟಿಪ್ಪಣಿಗಳನ್ನು ಮಾಡಿಕೊಳ್ಳಲು ಹೇಳುತ್ತಿದ್ದರು. ಮತ್ತು ನಂತರ ವಾರದಲ್ಲಿ ಪ್ರತಿ ಸಂಜೆ, ಆಶ್ರಮದ ಡ್ರಾಯಿಂಗ್‌ ರೂಮಿನಲ್ಲಿ ಅಥವಾ ಡೈನಿಂಗ್‌ ರೂಮಿನ ಟೇಬಲ್‌ ಸುತ್ತ ಸೇರಿ ನಮ್ಮ ಟಿಪ್ಪಣಿಗಳನ್ನು ಹೋಲಿಸಿಕೊಳ್ಳುತ್ತಿದ್ದೆವು.

ನಮ್ಮಲ್ಲಿ ಪ್ರತಿಯೊಬ್ಬರೂ ಗುರುಗಳ ಸತ್ಸಂಗದಿಂದ ಗ್ರಹಿಸಲು ಸಾಧ್ಯವಾದಷ್ಟನ್ನು ನಮ್ಮ ನೆನಪಿನಿಂದ ಪುನರಾವರ್ತಿಸುತ್ತ ಚರ್ಚಿಸುತ್ತಿದ್ದೆವು. ನಂತರ ನಮ್ಮಲ್ಲಿ ಪ್ರತಿಯೊಬ್ಬರೂ ಗುರುಗಳು ನೀಡಿದ ಬೋಧನೆಯನ್ನು ನಮ್ಮದೇ ಬರಹದಲ್ಲಿ, ನಮ್ಮ ಸ್ವಂತ ಆಲೋಚನೆಗಳಲ್ಲಿ ಪುನರುತ್ಪಾದಿಸುತ್ತಿದ್ದೆವು. ಹಾಗೂ ಆ ಬೋಧನೆಯನ್ನು ನಾವು ನಮ್ಮ ಸ್ವಂತ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆವು.

ಹೀಗೆ ನಾವು ಗುರುವಿನ ಒಂದು ತರಗತಿಯ, ಒಂದು ಸತ್ಸಂಗದ, ಮೇಲೆ ಒಂದು ಇಡೀ ವಾರ ಅಥವಾ ಎರಡು ವಾರಗಳನ್ನು ಕಳೆಯುತ್ತಿದ್ದೆವು. ಅದು ನಮಗೆ ಗುರುವಿನ ಜ್ಞಾನ ಮತ್ತು ಮಾರ್ಗದರ್ಶನವನ್ನು ಅರಗಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿದುದಲ್ಲದೆ, ಅದನ್ನು ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನೂ ಕಲಿಸಿತು.

ಕೆಲವೊಮ್ಮೆ ಗುರುದೇವರು ಅದರ ಮುಂದಿನ ವಾರ ಎನ್‌ಸಿನಿಟಾಸ್‌ಗೆ ಹಿಂದಿರುಗಿದಾಗ, ನಾವು ನಮ್ಮ ಅಧ್ಯಯನದ ಚರ್ಚೆಯಲ್ಲಿದ್ದಾಗ, ಅವರು ಕೋಣೆಯೊಳಗೆ ಬರುತ್ತಿದ್ದರು. ಸಹಜವಾಗಿ ನಾವು ನಮ್ಮ “ಜ್ಞಾನ”ವನ್ನು ಗುರುವಿನ ಮುಂದೆ ಪ್ರದರ್ಶಿಸಲು ನಾಚಿಕೊಳ್ಳುತ್ತಿದ್ದೆವು!

ಆದರೆ ಅವರು ಕುಳಿತುಕೊಂಡು, “ಇಲ್ಲ, ಇಲ್ಲ, ಮುಂದುವರಿಸಿ; ಸುಮ್ಮನೆ ಮುಂದುವರಿಸಿ,” ಎನ್ನುತ್ತಿದ್ದರು. ಹಾಗೂ ನಾವು ಕಲಿತಿದ್ದನ್ನು ನಾವು ಹೇಳಲು ಪ್ರಯತ್ನಿಸಿದಾಗ, ಅವರು ಬಹಳ ಖುಷಿ ಪಡುತ್ತಿದ್ದರು. ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆಂದು ನೋಡಲು, ಶಾಲೆಯಲ್ಲಿ ಪ್ರಾಧ್ಯಾಪಕರು ಪ್ರಶ್ನೆ ಕೇಳುವಂತೆಯೇ ಅವರು ನಮಗೆ ಕೇಳುತ್ತಿದ್ದರು, “ನಾನು ಇದರ ಬಗ್ಗೆ ಏನು ಹೇಳಿದೆ? ನಾನು ಬಳಸಿದ ಆ ಶಬ್ದದ ಅರ್ಥವೇನು?”

ನಾವು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲಿಲ್ಲವೆಂದು ನಾನು ನಿಮಗೆ ಹೇಳಬಲ್ಲೆ! ಆದ್ದರಿಂದ ನಾವು ಸತ್ಸಂಗಕ್ಕೆ ಹೋದಾಗ, ಕಿರಿಯ ಆಶ್ರಮವಾಸಿಗಳಾದ ನಮ್ಮನ್ನು ಮಂದಿರದ ಮುಂದಿನ ಸಾಲಿನಲ್ಲಿ ಕುಳ್ಳಿರಿಸುತ್ತಿದ್ದರು. ಹಾಗೂ ಅವರು ಮಾತನಾಡುತ್ತಿರುವಾಗ, ಬಹುಶಃ ಕೆಲವು ಆಳವಾದ ಅಥವಾ ಸಂಕೀರ್ಣವಾದ ತಾತ್ತ್ವಿಕ ವಿಷಯವನ್ನು ಹೇಳಿದ ಮೇಲೆ, ತಮ್ಮ ಮಾತನ್ನು ನಿಲ್ಲಿಸಿ, ಭಾಷಣಕಾರರ ವೇದಿಕೆಯಿಂದ ಕೆಳಗೆ ನಮ್ಮತ್ತ ನೋಡುತ್ತ, “ನಿಮಗೆ ಅರ್ಥವಾಯಿತೆ?” ಎಂದು ಕೇಳುತ್ತಿದ್ದರು.

ಉಳಿದ ಶ್ರೋತೃಗಳು, “ಇವರು ಯಾರೊಂದಿಗೆ ಮಾತನಾಡುತ್ತಿದ್ದಾರೆ?” ಅಥವಾ “ಆ ಪುಟ್ಟ ಮಕ್ಕಳಿಗೂ ಅವರು ಹೇಳುತ್ತಿರುವುದಕ್ಕೂ ಏನು ಸಂಬಂಧ?” ಎಂದು ಅಚ್ಚರಿ ಪಡುತ್ತಿದ್ದಿರಬೇಕು.

ಅವರು ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದರು: ಅವರು ತಮ್ಮ ಪದತಲದಲ್ಲಿ ಕಲಿಯುತ್ತಿರುವ ಪುಟ್ಟ ಶಿಷ್ಯರಿಗೆ ಗುರುವಾಗಿದ್ದರು ಹಾಗೂ ಜನಸಾಮಾನ್ಯರಿಗೆ, ಈ ಸತ್ಯಗಳನ್ನು ಬಿತ್ತರಿಸುತ್ತಿದ್ದ ಜಗದ್ಗುರುವಾಗಿದ್ದರು.

ಗುರುಗಳು ನಮ್ಮೊಂದಿಗಿದ್ದಾಗ ನಮ್ಮನ್ನು ಮಾರ್ಗದರ್ಶಿಸುತ್ತಿದ್ದರು. ನಾವು ತಪ್ಪುಮಾಡಿದಾಗ, ಅವರು ಕೆಲವೇ ಶಬ್ದಗಳಿಂದ ಅಥವಾ ಒಂದು ಮೌನವಾದ ಆದರೂ ಅರ್ಥಪೂರ್ಣವಾದ ನೋಟದಿಂದ ನಮಗೆ ಹೇಳುತ್ತಿದ್ದರು. ಯೋಗ್ಯ ರೀತಿಯಲ್ಲಿ ವರ್ತಿಸಲು ನಾವು ಏನು ಮಾಡಬೇಕೆಂದು ಅವರು ಹೇಳುತ್ತಿದ್ದರು.

ಇವುಗಳನ್ನು ನಮಗೆ ಹೇಳಲು ಅವರು ಇಲ್ಲಿ ಭೌತಶರೀರದಲ್ಲಿಲ್ಲ. ಆದರೆ ಅವರು, “ನಾನು ಹೋದಮೇಲೆ ಬೋಧನೆಗಳೇ ನಿಮ್ಮ ಗುರು. ಎಸ್‌ಆರ್‌ಎಫ್‌ [ವೈಎಸ್‌ಎಸ್‌] ಬೋಧನೆಗಳ ಮೂಲಕ ನನ್ನೊಂದಿಗೆ ಹಾಗೂ ನನ್ನನ್ನು ಕಳಿಸಿರುವ ಮಹಾನ್‌ ಗುರುಗಳೊಂದಿಗೆ ನೀವು ಶ್ರುತಿಗೂಡಿಕೊಂಡಿರುತ್ತೀರಿ,” ಎಂದು ನಮಗೆ ಹೇಳಿದ್ದಾರೆ.

ಆ ಮಾತುಗಳು ನಿಜವಾಗಿಯೂ ಎಷ್ಟು ಸುವ್ಯಕ್ತ ಎಂದು ನನಗೀಗ ಅರ್ಥವಾಗುತ್ತಿದೆ, ಏಕೆಂದರೆ ಗುರುಗಳ ಪುಸ್ತಕಗಳಲ್ಲಿರುವ ಮತ್ತು ಎಸ್‌ಆರ್‌ಎಫ್‌/ವೈಎಸ್‌ಎಸ್‌ ಪಾಠಗಳಲ್ಲಿರುವ ಅವರ ಬೋಧನೆಗಳನ್ನು ನಾವು ಸಂಪೂರ್ಣವಾಗಿ ಅರಗಿಸಿಕೊಂಡಾಗ, ಅವು ನಮಗೆ ನಿರಂತರ ಸ್ಫೂರ್ತಿಯ ಆಕರವಾಗಿರುವುದಷ್ಟೇ ಅಲ್ಲದೆ, ವೈಯಕ್ತಿಕ ಮಾರ್ಗದರ್ಶನದ ಹಾಗೂ ಸಲಹೆಯ ಮೂಲವೂ ಆಗಿವೆ ಎಂದು ನಾವು ಮನಗಾಣುತ್ತೇವೆ.

ನಮಗೆ ನಿಜವಾಗಿಯೂ ಮಾರ್ಗದರ್ಶನದ ಅವಶ್ಯಕತೆಯಿದ್ದಾಗ, ನಮ್ಮನ್ನು ಭ್ರಮೆಗೀಡಾಗಿಸುವ ಅಥವಾ ಪ್ರಲೋಭನೆಗೊಳಿಸುವ ಮಾಯೆಯ ಯಾವುದೋ ಒಂದು ಶಕ್ತಿಯಿಂದ ನಮಗೆ ನಿಜವಾಗಿಯೂ ರಕ್ಷಣೆಯ ಅವಶ್ಯಕತೆಯಿದ್ದಾಗ, ಗುರುಗಳ ಬೋಧನೆಗಳಲ್ಲಿರುವ ಅವರ ಮಾತುಗಳನ್ನು ನಮ್ಮ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದರೆ, ಅವು ನಮ್ಮ ನೆರವಿಗೆ ಬರುತ್ತವೆ ಎಂದು ನಾವು ಮನಗಾಣುತ್ತೇವೆ.

ಕೆಳಗಿನ ಲಿಂಕ್‌ನಲ್ಲಿ ನೀವು ಯೋಗದಾ ಸತ್ಸಂಗ ಪಾಠಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು, ಇವು ಪರಮಹಂಸ ಯೋಗಾನಂದರ ಧ್ಯಾನ ವಿಜ್ಞಾನ ಮತ್ತು ಸಮತೋಲಿತ ಆಧ್ಯಾತ್ಮಿಕ ಜೀವನ ಕಲೆಯ ಸಮಗ್ರ ಗೃಹ-ಅಧ್ಯಯನ ಸರಣಿ. ಪರಮಹಂಸಜಿಯವರು ಪಾಠಗಳನ್ನು ಕ್ರಿಯಾ ಯೋಗ ಧ್ಯಾನದ ತಂತ್ರಗಳು ಮತ್ತು ಸಂಪೂರ್ಣ ಜೀವನ ವಿಧಾನವನ್ನು ಪ್ರಸ್ತುತಪಡಿಸುವ ತಮ್ಮ ಬೋಧನೆಗಳ ಜೀವಾಳವೆಂದು ಭಾವಿಸಿದ್ದರು — ಇದರಿಂದಾಗಿ ತಮ್ಮ ಬೋಧನೆಗಳಿಂದ ಸಾಧಕರು ನೇರವಾಗಿ ತಮ್ಮ ಜ್ಞಾನವನ್ನು ಹೀರಿಕೊಳ್ಳಬಹುದು ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ತಮ್ಮ ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯಬಹುದು ಎಂದು.

ಇದನ್ನು ಹಂಚಿಕೊಳ್ಳಿ