ಶ್ರೀ ಸ್ವಾಮಿ ಚಿದಾನಂದ ಗಿರಿಯವರಿಂದ ಜನ್ಮಾಷ್ಟಮಿ ಸಂದೇಶ – 2018

20 ಆಗಸ್ಟ್, 2018

ಪ್ರಿಯರೇ,

ಜನ್ಮಾಷ್ಟಮಿಯು, ಪ್ರೀತಿಯ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವ, ಇಂದು ಪ್ರಪಂಚದಾದ್ಯಂತ ಭಗವಾನ್ ಶ್ರೀಕೃಷ್ಣನ ಪವಿತ್ರ ಜೀವನದ ಬೆಳಕು ಮತ್ತು ವೈಭವದಿಂದ ಪುಳಕಿತರಾದ ನಮ್ಮೆಲ್ಲರ ಬಹಳ ಸಂತೋಷದ ಸಮಯವಾಗಿದೆ. ಧರ್ಮವನ್ನು ಪುನಃಸ್ಥಾಪಿಸಲು ದೈವೀ ಶಕ್ತಿಯಿಂದ ಕಳುಹಿಸಲ್ಪಟ್ಟ ಶ್ರೀಕೃಷ್ಣನು, ದೇವರ ಪ್ರೀತಿ ಮತ್ತು ಆನಂದದ ಪ್ರತೀಕವಾಗಿ ನಮ್ಮ ಹೃದಯಗಳಲ್ಲಿ ನೆಲೆಸಿದ್ದಾನೆ. ಬೃಂದಾವನದ ಗೋಪಿಯರು ಮತ್ತು ಗೋಪರು ಕೃಷ್ಣನ ಮುರಳಿಯ ಮಧುರ ನಾದದಿಂದ ಸಮ್ಮೋಹಿತರಾದಂತೆ, ಅವನ ಶಾಶ್ವತ ಉಪಸ್ಥಿತಿಯ ಸ್ವರ್ಗೀಯ ಸೌಂದರ್ಯವು ನಮ್ಮ ಆತ್ಮವನ್ನು ದೇವರ ಹತ್ತಿರ ಕರೆದೊಯ್ಯಲಿ – ಕೃಷ್ಣನು ಅರ್ಜುನನಿಗೆ ನೀಡಿದ ಸಮಯಾತೀತ ಸತ್ಯಗಳಿಂದ ನಮ್ಮ ಆತ್ಮವು ಮಾರ್ಗದರ್ಶಿಸಲ್ಪಡಲಿ, ಈ ಸತ್ಯಗಳು ಪವಿತ್ರ ಭಗವದ್ಗೀತೆಯ ಮೂಲಕ ಇಂದಿಗೂ ನಮ್ಮೊಡನೆ ಮಾತನಾಡುತ್ತಿವೆ.

ಜನ್ಮಜನ್ಮಾಂತರಗಳಿಂದ, ಸದಾ ಬದಲಾಗುತ್ತಿರುವ ದ್ವಂದ್ವ ಪ್ರಪಂಚದಲ್ಲಿ ಸಿಗಲಾರದ ಸಂತೋಷ ಮತ್ತು ತೃಪ್ತಿಗಾಗಿ ಹಾತೊರೆಯುತ್ತಿದ್ದೇವೆ; ಆದರೆ ನಾವು, ಒಂದಾದ ಮೇಲೆ ಒಂದರಂತೆ ಬರುವ ಸುಖ-ದುಃಖ, ಲಾಭ-ನಷ್ಟಗಳ ಮಾಯೆಯ ಅಲೆಗಳಿಂದ ಹೊಯ್ದಾಡಲ್ಪಡುತ್ತ, ಜೀವನದ ಮೇಲ್ಪದರದ ಮೇಲೆ ಬದುಕಬೇಕೆನ್ನುವುದು ದೇವರ ಉದ್ದೇಶವಲ್ಲ. ನಾವು ನಮ್ಮ ಅಸ್ತಿತ್ವದ ಆಂತರಾಳದಲ್ಲಿ ಆಳವಾಗಿ ಮುಳುಗಿ, ಆತ್ಮದ ಅನುದ್ವಿಗ್ನ ಶಾಂತಿ ಮತ್ತು ದೈವತ್ವವನ್ನು ಅನುಭವಿಸಬೇಕೆಂದು ಅವನು ಬಯಸುತ್ತಾನೆ. ಅವನು ಕೃಷ್ಣನ ಮೂಲಕ ಅರ್ಜುನನನ್ನು ಮಾರ್ಗದರ್ಶಿಸಿದಂತೆಯೇ, ನಿಮ್ಮ ನಿಜವಾದ ಸ್ವರೂಪವನ್ನು ಅರಿಯಲು ಅವನು ನಿಮಗೆ ಸಹಾಯ ಮಾಡುತ್ತಾನೆ.

ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಈ ಪಯಣವು ಪ್ರಾರಂಭವಾಗುತ್ತದೆ. ನೀವು ನಿಮ್ಮನ್ನು ಕೇಳಿಕೊಳ್ಳಿ: “ನಾನು ನನ್ನ ಅಭ್ಯಾಸಗಳನ್ನು, ಇಂದ್ರಿಯ ಆಸೆಗಳನ್ನು ಮತ್ತು ಅಹಂನ ಇಷ್ಟ-ಅನಿಷ್ಟಗಳನ್ನು ಅನುಸರಿಸುತ್ತಿರುವೆನೇ? ಅಥವಾ ನಾನು ಆತ್ಮಜ್ಞಾನದ ಮಾರ್ಗದರ್ಶನ ಪಡೆಯಲು ಪ್ರಜ್ಞಾಪೂರ್ವಕವಾಗಿ ಶ್ರಮಿಸುತ್ತಿರುವೆನೆ?” ನಿಮ್ಮ ಜೀವನ ಮತ್ತು ಇಚ್ಛೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚು ಶಕ್ತಿ ನಿಮ್ಮಲ್ಲಿದೆ. ಅರ್ಜುನನಿಗೆ ದೌರ್ಬಲ್ಯದ ಕ್ಷಣಗಳು ಎದುರಾದಾಗ, ಕೃಷ್ಣನು ಅವನಿಗೆ ಅವನ ಶೌರ್ಯದ ನೆನಪು ಮಾಡಿದ ಮತ್ತು ದೈವಿಕ ಯೋಧನಾಗಿ ಮಾಯೆಯ ವಿರುದ್ಧದ ಹೋರಾಟದಲ್ಲಿ ಹಿಂತೆಗೆಯಬಾರದೆಂದು ಅವನ ಕರ್ತವ್ಯವನ್ನು ನೆನಪಿಸಿದ. ಹಾಗೆಯೇ, ನೀವೂ ನಿಮ್ಮ ಗುರು ಮತ್ತು ನಿಮ್ಮ ಆತ್ಮದ ವಿವೇಕಯುತ ಜ್ಞಾನವನ್ನು ಅನುಸರಿಸಿದರೆ, ಶಾಂತಿಯನ್ನೂ, ಆನಂದಕರ ಸ್ವಾತಂತ್ರ್ಯದ ಭಾವವನ್ನೂ ಅನುಭವಿಸುವಿರಿ. ಅಶಾಂತಿಯನ್ನು ಉಂಟುಮಾಡುವ ಆಲೋಚನೆಗಳು ಮತ್ತು ಕಾರ್ಯಗಳು ನಮ್ಮನ್ನು ಬಂಧಿಸಿಡುತ್ತವೆ; ಶಾಂತಿಯನ್ನು ತರಬಹುದಾದ ಆಲೋಚನೆಗಳು ಮತ್ತು ಕಾರ್ಯಗಳು ವಿಮೋಚನಾತ್ಮಕವಾಗಿರುತ್ತವೆ. “ಶಾಂತಿಯು ಆತ್ಮದಿಂದ ಹೊರಹೊಮ್ಮುತ್ತದೆ, ಮತ್ತು ಇದು ನಿಜವಾದ ಸಂತೋಷ ಅರಳುವ ಪವಿತ್ರ ಆಂತರಿಕ ಪರಿಸರವಾಗಿದೆ,” ಎಂದು ನಮ್ಮ ಗುರು, ಶ್ರೀ ಶ್ರೀ ಪರಮಹಂಸ ಯೋಗಾನಂದರು ಹೇಳಿದ್ದಾರೆ.

ದೇವರ ಸಾನಿಧ್ಯದ ಪೂರ್ಣ ಅನುಭವವು ಗುರುವು ನೀಡಿದ ಧ್ಯಾನ ವಿಧಾನಗಳನ್ನು ನಿಷ್ಠೆಯಿಂದ ಮತ್ತು ಭಕ್ತಿಯಿಂದ ಅಭ್ಯಾಸ ಮಾಡುವುದರಿಂದ ಬರುತ್ತದೆ ಎಂದು ಕೃಷ್ಣನು ಅರ್ಜುನನಿಗೆ ಬೋಧಿಸಿದ್ದಾನೆ. ಶರೀರ ಮತ್ತು ಮನಸ್ಸಿನ ಅಶಾಂತಿ ಶಮನಗೊಳ್ಳುತ್ತಿದ್ದಂತೆ, ನೀವು ನಿಮ್ಮ ಹೃದಯ ಮತ್ತು ಆತ್ಮದಲ್ಲಿ ಸರ್ವಾನಂದ, ಸರ್ವಪ್ರೇಮ ಮತ್ತು ಸಾಧಿಸಲು ಬೇಕಾಗಿರುವ ಸರ್ವಶಕ್ತಿಯ ಮೂಲಸ್ಥಾನವಾದ ದೇವರನ್ನು ಕಾಣುತ್ತೀರಿ. ನೀವು ದೇವರಲ್ಲಿ ಸ್ಥಾಪಿತವಾಗಿರುವಾಗ, ಅಲ್ಪ ಸುಖಕ್ಕಾಗಿ ಅನಿರೀಕ್ಷಿತ ಬದಲಾವಣೆಗಳ ಜಗತ್ತನ್ನು ಬೇಡುವ ಅಗತ್ಯವಿಲ್ಲ. ನಿಮ್ಮ ಆನಂದವು ಇತರರಿಗೆ ಉತ್ತೇಜನವನ್ನು ನೀಡುವಂತಹ ಉನ್ನತೀಕರಣದ ಪ್ರಭಾವವನ್ನು ಹೊರಸೂಸುತ್ತದೆ. ಮಾನುಷ ಪ್ರಜ್ಞೆಯನ್ನು ದೈವೀ ಪ್ರಜ್ಞೆಯಾಗಿ ಪರಿವರ್ತಿಸಲು ಸಮಯ ಮತ್ತು ಪ್ರಯತ್ನದ ಅಗತ್ಯವಿದೆ, ಆದರೆ ಗುರುಗಳು ನಮಗೆ ಆಶ್ವಾಸನೆ ನೀಡಿರುತ್ತಾರೆ: “ದೇವರೊಂದಿಗೆ ಏಕತೆಯನ್ನು ಹುಡುಕುವಲ್ಲಿ ಕಳೆದ ಆಳವಾದ ಧ್ಯಾನದ ಪ್ರತಿ ಕ್ಷಣವು ಹಾಗೂ ಸಮಚಿತ್ತತೆಯನ್ನು ಅಭ್ಯಾಸ ಮಾಡುವ ಮತ್ತು ಫಲಾಪೇಕ್ಷೆಯನ್ನು ತ್ಯಜಿಸುವ ಪ್ರತಿ ಪ್ರಯತ್ನವು ಪ್ರತಿಫಲವನ್ನು ತರುತ್ತದೆ – ಅಂದರೆ, ಅದು ದು:ಖವನ್ನು ದೂರಮಾಡುತ್ತದೆ, ಶಾಂತಿ ಮತ್ತು ಆನಂದವನ್ನು ಸ್ಥಾಪಿಸುತ್ತದೆ, ಮತ್ತು ದೇವರ ಮಾರ್ಗದರ್ಶಕ ಜ್ಞಾನದ ಹೆಚ್ಚಿನ ಶ್ರುತಿಗೂಡುವಿಕೆಯಿಂದಾಗಿ ಕರ್ಮವನ್ನು ನಿವಾರಿಸುತ್ತದೆ ಹಾಗೂ ನಿರ್ಣಾಯಕ ಕ್ರಿಯೆಗಳಲ್ಲಿ ತಪ್ಪುಗಳನ್ನು ಕಡಿಮೆಮಾಡುತ್ತದೆ.”

ಕೃಷ್ಣನು ಅರ್ಜುನನಿಗೆ ವಿಜಯಿಯಾಗಲು ಮಾರ್ಗದರ್ಶನ ನೀಡಿದಂತೆಯೇ, ಅವನು ನಿಮ್ಮ ಆತ್ಮ-ವಿಮೋಚನೆಯತ್ತ ನಿಮ್ಮ ಪಯಣವನ್ನು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಜೈ ಶ್ರೀಕೃಷ್ಣ! ಜೈ ಗುರು!

ಸ್ವಾಮಿ ಚಿದಾನಂದ ಗಿರಿ

ಕಾಪಿರೈಟ್ © 2018 ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ಇದನ್ನು ಹಂಚಿಕೊಳ್ಳಿ