ಭಗವಾನ್‌ ಕೃಷ್ಣ ಮತ್ತು ಯೋಗದ ಸುವರ್ಣ ಮಧ್ಯಮ ಮಾರ್ಗವನ್ನು ಕುರಿತು ಪರಮಹಂಸ ಯೋಗಾನಂದರು

23 ಆಗಸ್ಟ್‌, 2024

ತಮ್ಮ ಯೋಗಿಯ ಆತ್ಮಕಥೆಯಲ್ಲಿ ಪರಮಹಂಸ ಯೋಗಾನಂದರು, “ಎಲ್ಲ ರಾಷ್ಟ್ರಗಳ ಹಿರಿಯಣ್ಣನಾಗಿರುವ ಭಾರತವು ಸಂಚಯಿಸಿರುವ ಜ್ಞಾನವು ಇಡೀ ಮಾನವಕೋಟಿಯ ಪಾರಂಪರಿಕ ಆಸ್ತಿಯಾಗಿದೆ,” ಎಂದು ಹೇಳಿದ್ದಾರೆ.

ನಿಶ್ಚಿತವಾಗಿ ಆ ಜ್ಞಾನ-ಸಂಪತ್ತಿನ ಪ್ರಧಾನ ರೂಪ, ಧರ್ಮಪ್ರವರ್ತಕ ಮತ್ತು ಅವತಾರವಾದ ಭಗವಾನ್‌ ಕೃಷ್ಣ, ಯಾರ ಯೋಗ ವಿಜ್ಞಾನ ಮತ್ತು ಆತ್ಮ-ವಿಮೋಚನೆಯ ಅಮರ ಬೋಧನೆಗಳು ಎಲ್ಲ ಕಾಲಕ್ಕೂ ಉತ್ಕೃಷ್ಟ ಭಗವದ್ಗೀತೆಯಲ್ಲಿ ಅಡಕವಾಗಿದೆಯೋ ಅವನು.

ಪರಮಹಂಸಜಿ ತೋರಿಸಿದರು, “ಕೃಷ್ಣ ಕೇವಲ ಒಬ್ಬ ಪ್ರವರ್ತನಾಗಿರಲಿಲ್ಲ, ಬದಲಾಗಿ ಅವನ ಪವಿತ್ರಮಯ ಜೀವನವನ್ನು ಪರೀಕ್ಷಿಸಲು ಅವನಿಗೆ ರಾಜೋಚಿತ ಜವಾಬ್ದಾರಿಗಳಿದ್ದವು. ಅವನು ಒಬ್ಬ ರಾಜನಾಗಿದ್ದರೂ, ವೈರಾಗ್ಯವುಳ್ಳ ವ್ಯಕ್ತಿಯಾಗಿ ಮಹಾನ್‌ ಯಶಸ್ವಿ ಮಾನವರಲ್ಲಿ ಒಬ್ಬನಾಗಿದ್ದ.”

ಶ್ರೀ ಕೃಷ್ಣನ ಜನ್ಮಾಚರಣೆಯ (ಹಿಂದು ಚಾಂದ್ರಮಾನ ಪಂಚಾಂಗದಂತೆ ಇದು ಈ ವರ್ಷದ ಆಗಸ್ಟ್‌ 26ರಂದು ಬೀಳಲಿದೆ) ಗೌರವಸೂಚಕವಾಗಿ, ಶ್ರೀ ಕೃಷ್ಣನು ಮಾನವ ಕೋಟಿಗೆ ನೀಡಿದ ಸ್ಫೂರ್ತಿದಾಯಕ ಸಂದೇಶ ಮತ್ತು ಸಮತೋಲಿತ ಜೀವನದ ನಿತ್ಯ ಉದಾಹರಣೆಯೊಂದಿಗೆ ಸಂಪರ್ಕ ಸಾಧಿಸಲು — ಮತ್ತು ನಿಮ್ಮ ಆಂತರ್ಯದಲ್ಲಿರುವ ದಿವ್ಯತೆಯನ್ನು ನೀವು ಅನುಭವಿಸುವ ಸಲುವಾಗಿ ನಿಮ್ಮ ಹುಮ್ಮಸ್ಸನ್ನು ಬೆಂಬಲಿಸಲು – ಈ ತಿಂಗಳ ವಾರ್ತಾಪತ್ರವನ್ನು ಉಪಯೋಗಿಸುತ್ತೀರಿ ಎಂದು ನಾವು ನಂಬುತ್ತೇವೆ.

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

ಭಗವದ್ಗೀತೆಯಲ್ಲಿರುವ ಕೃಷ್ಣನ ಸಂದೇಶ ನಮ್ಮ ಪ್ರಸ್ತುತ ಬಿಡುವಿಲ್ಲದ ಜೀವನದ ಅನೇಕ ತಾಪತ್ರಯಗಳಿಗೆ ಅತ್ಯಂತ ಯಥೋಚಿತವಾಗಿರುವ ಬೋಧನೆಯಾಗಿದೆ. 

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಸಲಹೆ ಮಾಡಿರುವ ಮಾರ್ಗವು, ಭೂಮಿಯ ಮೇಲೆ ಬಿಡುವಿಲ್ಲದಿರುವ ಮನುಷ್ಯನಿಗೂ ಮತ್ತು ಮಹತ್ತರ ಆಧ್ಯಾತ್ಮಿಕ ಆಕಾಂಕ್ಷಿ ಇಬ್ಬರಿಗೂ ಮಿತವಾದ, ಮಧ್ಯಮ, ಸುವರ್ಣ ಮಾರ್ಗವಾಗಿದೆ. 

ಗೀತೆಯ ಜ್ಞಾನವು ಅದರ ನುಡಿಗಳನ್ನು ಶಾಸ್ತ್ರಾಂಧರ ಮನರಂಜನೆಗಾಗಿ ಒಣ ವಿಚಾರವಾದಿಗಳು ಮಾಡುವ ಮಾನಸಿಕ ಕಸರತ್ತಿಗಲ್ಲ; ಬದಲಾಗಿ ಭೂಮಿಯ ಮೇಲೆ ಜೀವಿಸುತ್ತಿರುವ ಪುರುಷ, ಮಹಿಳೆ, ಗೃಹಸ್ಥ ಅಥವಾ ವಿರಾಗಿಗೆ ಯೋಗದ ಹಂತ ಹಂತದ ವಿಧಾನಗಳನ್ನು ಅನುಸರಿಸುತ್ತ ಪ್ರತ್ಯಕ್ಷ ಭಗವದ್‌-ಸಂಪರ್ಕವೂ ಸೇರಿದಂತೆ ಒಂದು ಸಮತೋಲಿತ ಜೀವನವನ್ನು ಹೇಗೆ ಬದುಕುವುದು ಎಂಬುದನ್ನು ತೋರಿಸುವುದಕ್ಕಾಗಿದೆ. 

ಕೃಷ್ಣನು ಅರ್ಜುನನಿಗೆ ಬೋಧಿಸಿದ ಮತ್ತು ಗೀತೆಯ IV:29 ಮತ್ತು V:27-28ನೇ ಅಧ್ಯಾಯಗಳಲ್ಲಿ ಉಲ್ಲೇಖಿಸಿರುವ ಕ್ರಿಯಾ ಯೋಗದ ತಂತ್ರವು, ಯೋಗ ಧ್ಯಾನದ ಅತ್ಯುಚ್ಚ ಆಧ್ಯಾತ್ಮಿಕ ವಿಜ್ಞಾನವಾಗಿದೆ. ಭೌತಿಕ ಯುಗದಲ್ಲಿ ಮರೆಯಾಗಿದ್ದ ಈ ಅವಿನಾಶಿ ಯೋಗವನ್ನು ಇಂದಿನ ಮಾನವನಿಗಾಗಿ ಮಹಾವತಾರ ಬಾಬಾಜಿ ಮತ್ತೆ ಆಚರಣೆಗೆ ತಂದರು ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಗುರುಗಳು ಬೋಧಿಸುತ್ತಿದ್ದಾರೆ. 

ಭಗವದ್ಗೀತೆಯಲ್ಲಿ ನಮ್ಮ ಗಮನವು ಅರ್ಜುನನ ಗುರು ಮತ್ತು ಸಲಹೆಗಾರನಾಗಿರುವ ಶ್ರೀ ಕೃಷ್ಣನ ಪಾತ್ರದ ಮೇಲೆ ಮತ್ತು ಅವನು ಜಗದ್ಗುರುವಾಗಿ ಬೋಧಿಸಿದ ಭವ್ಯವಾದ ಯೋಗ ಸಂದೇಶದ ಮೇಲೆ ಕೇಂದ್ರಿತವಾಗುತ್ತದೆ — ಭಗವಂತನ ಸಂಸರ್ಗ ಮತ್ತು ವಿಮೋಚನೆಗಾಗಿ ಋಜು ಚಟುವಟಿಕೆ ಮತ್ತು ಧ್ಯಾನದ ಮಾರ್ಗ — ಅದರ ಜ್ಞಾನವು ಯುಗ ಯುಗಗಳಿಂದ ಭಕ್ತಾದಿಗಳ ಹೃದಯ ಮತ್ತು ಮನಸ್ಸಿನಲ್ಲಿ ಅವನನ್ನು ಸಿಂಹಾಸನಾರೂಢನಾಗಿಸಿದೆ. 

ಕೃಷ್ಣನ ಬದುಕು ಭೌತಿಕ ಜೀವನದ ಜವಾಬ್ದಾರಿಗಳಿಂದ ಓಡಿಹೋಗುವ ಅವಶ್ಯಕತೆಯಿಲ್ಲ ಎಂಬ ಅವನ ಸಿದ್ಧಾಂತವನ್ನು ನಿರೂಪಿಸುತ್ತದೆ. ಭಗವಂತನನ್ನು ಅವನು ನಮ್ಮನ್ನು ಎಲ್ಲಿರಿಸಿದ್ದಾನೋ ಅಲ್ಲಿಗೇ ಕರೆತರುವುದರಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ನಮ್ಮ ಪರಿಸ್ಥಿತಿ ಏನೇ ಇರಲಿ, ಯಾವ ಮನಸ್ಸಿನಲ್ಲಿ ಭಗವತ್‌-ಸಂಸರ್ಗವು ಆಧಿಪತ್ಯ ನಡೆಸುತ್ತದೋ, ಅಲ್ಲಿಗೆ ಸ್ವರ್ಗವು ಇಳಿದು ಬರಲೇಬೇಕು. 

ಐಹಿಕದ ತ್ಯಾಗ ಅಥವಾ ಐಹಿಕ ಬದುಕಿನಲ್ಲಿ ಮುಳುಗಿರುವುದು, ಈ ಎರಡು ಅತಿ ವಿರುದ್ಧಗಳ ಅಪಾಯಗಳಿಂದ ಪಾರಾಗಲು, ಮನುಷ್ಯನು ನಿರಂತರ ಧ್ಯಾನದ ಮೂಲಕ ತನ್ನ ಮನಸ್ಸನ್ನು ಹೇಗೆ ತರಬೇತುಗೊಳಿಸಬೇಕೆಂದರೆ ಅವನು ತನ್ನ ನಿತ್ಯ ಬದುಕಿನ ಅಗತ್ಯ ಕರ್ತವ್ಯಗಳನ್ನು ನಿರ್ವಹಿಸುತ್ತಲೇ, ಭಗವಂತನ ಅರಿವನ್ನು ಆಂತರ್ಯದಲ್ಲಿ ಕಾಪಾಡಿಕೊಳ್ಳುವಂತಿರಬೇಕು. ಕೃಷ್ಣನ ಜೀವನವೇ ಅದಕ್ಕೆ ಉದಾಹರಣೆ. 

ಇಂದಿನ ಯುಗಕ್ಕಾಗಲೀ ಮತ್ತು ಯಾವುದೇ ಯುಗಕ್ಕಾಗಲೀ ಭಗವದ್ಗೀತೆಯಲ್ಲಿರುವ ಶ್ರೀ ಕೃಷ್ಣನ ಸಂದೇಶವು ಪರಿಪೂರ್ಣ ಉತ್ತರವಾಗಿದೆ: ಕರ್ತವ್ಯಪ್ರಜ್ಞೆಯುಳ್ಳ, ಫಲಾಪೇಕ್ಷೆಯಿಲ್ಲದ ಮತ್ತು ಭಗವದ್‌-ಸಾಕ್ಷಾತ್ಕಾರಕ್ಕಾಗಿ ಧ್ಯಾನದ ಯೋಗ. ಭಗವಂತನ ಆಂತರಿಕ ಶಾಂತಿಯಿಲ್ಲದೆ ಕೆಲಸ ಮಾಡುವುದು ನರಕ ಸದೃಶವಾದದ್ದು; ಮತ್ತು ಆತ್ಮದ ಮೂಲಕ ಸದಾ ಬುದ್ಬುದಿಸುತ್ತಿರುವ ಅವನ ಆನಂದದಿಂದ ಕೆಲಸ ಮಾಡುವುದು ಯಾರು ಎಲ್ಲಿ ಹೋದರೂ ತಮ್ಮೊಡನೆ ತೆಗೆದುಕೊಂಡು ಹೋಗಬಲ್ಲ, ಒಯ್ಯಲು ಅನುಕೂಲವಾದ ಸ್ವರ್ಗ. 

ಪರಮಹಂಸ ಯೋಗಾನಂದರ ಭಗವದ್ಗೀತ, ಗಾಡ್‌ ಟಾಕ್ಸ್‌ ವಿತ್‌ ಅರ್ಜುನದ ಅಸಾಧಾರಣ ಅನುವಾದ ಮತ್ತು ಭಾಷ್ಯದ ಆಯ್ದ ಭಾಗಗಳನ್ನು ಓದಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಪರಮಹಂಸಜಿ ಹೇಳಿರುವ ಹಾಗೆ, “ಇಡೀ ಬ್ರಹ್ಮಾಂಡದ ಜ್ಞಾನವನ್ನು ಗೀತೆಯೊಳಗೆ ಸಂಗ್ರಹಿಸಲಾಗಿದೆ. ಅತ್ಯಂತ ಪ್ರಬುದ್ಧವಾದದ್ದು, ಅದರೂ ದಿವ್ಯ ಜ್ಞಾನವನ್ನೀಯುವ ಭಾಷೆಯಲ್ಲಿ ಸುವ್ಯಕ್ತಪಡಿಸಿರುವ…ಗೀತೆಯನ್ನು ಮಾನವನ ಪ್ರಯತ್ನ ಮತ್ತು ಆಧ್ಯಾತ್ಮಿಕ ಶ್ರಮದ ಎಲ್ಲ ಸ್ತರಗಳಲ್ಲೂ ಅರಿಯಲಾಗಿದೆ ಮತ್ತು ಅನುಷ್ಠಾನಗೊಳಿಸಲಾಗಿದೆ.” 

ಇದನ್ನು ಹಂಚಿಕೊಳ್ಳಿ