ಸ್ನೇಹ: ಎಲ್ಲಾ ಸಂಬಂಧಗಳ ಅಡಿಪಾಯ
ಪರಮಹಂಸ ಯೋಗಾನಂದರ ದ ಸ್ಪಿರಿಟ್ಯುಯಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ ಕೃತಿಯಲ್ಲಿ ನೀಡಿರುವ ಮಾರ್ಗದರ್ಶನದಂತೆ, ನಿಮ್ಮ ಆತ್ಮದ ಶ್ರೇಷ್ಠ ಗುಣಗಳನ್ನು ಸಾಕಾರಗೊಳಿಸುವ ಯಾನದಲಿ ನೀವು ಪ್ರತಿಯೊಬ್ಬರೊಂದಿಗೆ ಸ್ನೇಹ ಬೆಳೆಸುವುದರಿಂದ ದೊರೆಯುವ ಆನಂದವನ್ನು ಅನ್ವೇಷಿಸಿ.
ಅಂದವಾಗಿ ಚಿತ್ರಿಸಲಾದ ದಪ್ಪ ಹೊದಿಕೆಯ ಉಡುಗೊರೆ ಆವೃತ್ತಿ ಜನವರಿಯಲ್ಲಿ ಲಭ್ಯವಾಗಲಿದೆ
ನಿಮ್ಮ ಸಂಬಂಧಗಳನ್ನು ಪರಿವರ್ತಿಸಿ
ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾದ ಪರಮಹಂಸ ಯೋಗಾನಂದರು, ನಿಜವಾದ ಸ್ನೇಹದ ಚೈತನ್ಯವು ಪ್ರತಿಯೊಂದು ಸಂಬಂಧವನ್ನೂ ಪ್ರೀತಿ, ಆತ್ಮವಿಕಾಸ ಮತ್ತು ದೈವಿಕ ಏಕತೆಯ ಅನುಭವವಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಬಿಂಬಿಸುತ್ತಾರೆ.
ಲೇಖಕರ ಬಗ್ಗೆ
ಒಬ್ಬ ಪ್ರತಿಭಾನ್ವಿತ ಬರಹಗಾರ ಮತ್ತು ಉಪನ್ಯಾಸಕರಾಗಿದ್ದ ಯೋಗಾನಂದಜಿಯವರು ಧ್ಯಾನ ಮತ್ತು ಸಮತೋಲಿತ ಜೀವನದ ಕುರಿತು ವಿಶಾಲವಾದ ಕೃತಿಗಳನ್ನು ರಚಿಸಿದ್ದರು. ಅವರ ಜನಪ್ರಿಯ ಆಧ್ಯಾತ್ಮಿಕ ಶ್ರೇಷ್ಠ ಕೃತಿ ಯೋಗಿಯ ಆತ್ಮಕಥೆ ಸೇರಿದಂತೆ ಇತರ ಪ್ರಭಾವಶಾಲಿ ಕೃತಿಗಳ ಮೂಲಕ, ಯೋಗಾನಂದಜಿಯವರ ಜೀವನ ಮತ್ತು ಬೋಧನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ಅನ್ವೇಷಕರಿಗೆ ಸ್ಫೂರ್ತಿಯ ಮೂಲವಾಗಿವೆ. ದ ಸ್ಪಿರಿಟ್ಯುಯಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ ನಲ್ಲಿ ಯೋಗಾನಂದಜಿಯವರು ಆಧ್ಯಾತ್ಮಿಕ ಜ್ಞಾನವನ್ನು ಪ್ರಾಯೋಗಿಕ ಮಾರ್ಗದರ್ಶನದೊಂದಿಗೆ ಹೇಗೆ ಸಮರ್ಥವಾಗಿ ಸಂಯೋಜಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಅನಾವರಣಗೊಳ್ಳುತ್ತದೆ.
ಪುಸ್ತಕದ ಬಗ್ಗೆ
ದ ಸ್ಪಿರಿಟ್ಯುಯಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ ತಮ್ಮ ಬಾಂಧವ್ಯಗಳಲ್ಲಿ ಹೃದಯಕೇಂದ್ರೀತ ಸಂಬಂಧಗಳನ್ನು ಹುಡುಕುವವರಿಗೆ ದಾರಿದೀಪವಾದ ಕೃತಿಯಾಗಿದೆ. 1930ರ ದಶಕದಲ್ಲಿ ಯೋಗಾನಂದಜಿಯವರು ರಚಿಸಿದ ಈ ಪುಸ್ತಕವು ಸಾಮಾನ್ಯವಾಗಿ ಗ್ರಹಿಸಲಾಗದ ಸ್ನೇಹದ ಆಧ್ಯಾತ್ಮಿಕ ಆಯಾಮಗಳನ್ನು ಅನಾವರಣಗೊಳಿಸುತ್ತದೆ. ಸ್ನೇಹವನ್ನು ಅದರ ಶ್ರೇಷ್ಠ ಹಾಗೂ ಪರಿಶುದ್ಧ ಸ್ವರೂಪದಲ್ಲಿ ಬೆಳೆಸಿದಾಗ, ಅದು ನಮ್ಮ ಪ್ರಜ್ಞೆಯನ್ನು ಉನ್ನತ ಸ್ಥರಕ್ಕೆ ಏರಿಸಿ, ಎಲ್ಲ ಜೀವಿಗಳೊಂದಿಗೆ ನಮ್ಮನ್ನು ಒಂದಾಗಿಸುವ ದೈವಿಕ ಬಂಧವನ್ನು ಅನುಭವಿಸಲು ಸಾಧ್ಯತೆ ಹೊಂದಿದೆ ಎಂದು ಯೋಗಾನಂದಜಿ ಬೆಳಕು ಚೆಲ್ಲುತ್ತಾರೆ.
ಏಕತೆಯ ಸಕಾಲಿಕ ಸಂದೇಶ
ಯೋಗಾನಂದಜಿಯವರು ಸಮಸ್ತ ಮಾನವ ಪ್ರಜ್ಞೆಯನ್ನು ಒಂದಾಗಿಸುವ ಆಂತರಿಕ ಸೂತ್ರವನ್ನು ಹುಡುಕಲು ಹಾಗೂ ಎಲ್ಲರೊಂದಿಗೆ ದೈವಿಕ ಬಾಂಧವ್ಯವನ್ನು ಅನುಭವಿಸಲು ನಮ್ಮನ್ನು ಆಹ್ವಾನಿಸುತ್ತಾರೆ. ನಿಸ್ವಾರ್ಥ ಸೇವೆ, ದಯೆ, ಕರುಣೆಯಂತಹ ದೈವಿಕ ಸ್ನೇಹದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ದೇಶ, ಜನಾಂಗ ಮತ್ತು ಧರ್ಮದ ಭೇದಗಳನ್ನು ಮೀರಿ, ಅಂತಿಮವಾಗಿ ನಮ್ಮ ನಿಜಸ್ವರೂಪವಾದ ಆತ್ಮತತ್ವವನ್ನು ಅರಿತುಕೊಳ್ಳಬಹುದು. ನಿಜವಾದ ಸ್ನೇಹವು ಆತ್ಮಸಾಕ್ಷಾತ್ಕಾರದ ಸಾಮಾನ್ಯ ಮಾರ್ಗದ ಅವಿಭಾಜ್ಯ ಅಂಗವಾಗಿದ್ದು, ಎಲ್ಲಾ ಆತ್ಮಗಳನ್ನು ಪ್ರೀತಿಯಲ್ಲಿ ಒಂದಾಗಿಸುವ ದೈವಿಕ ಯೋಜನೆಯ ಅಂಗವಾಗಿದೆ.
ಹೃದಯ ಮತ್ತು ಆತ್ಮದ ಪರಸ್ಪರ ಸಂವಹನ
ಕಾವ್ಯ, ಗದ್ಯ, ದೃಢೀಕರಣಗಳು ಮತ್ತು ಆಳವಾದ ಆಧ್ಯಾತ್ಮಿಕ ಪರಿಶೋಧನೆಯ ಸಮನ್ವಯವಾದ ದ ಸ್ಪಿರಿಟ್ಯುಯಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ ಪುಸ್ತಕವು ನಿಶ್ಚಲ ಚಿಂತನೆಗಳ ಕ್ಷಣಗಳಿಗೆ ಒಂದು ಮೌನ ಸಹಚರ. ಪ್ರತಿಯೊಂದು ಪುಟವೂ ನಿಮ್ಮನ್ನು ಉದ್ಧರಿಸುತ್ತದೆ, ಪ್ರೇರೇಪಿಸುತ್ತದೆ ಮತ್ತು ನಿಧಾನವಾಗಿ ನಿಮ್ಮ ಅಂತರಂಗದತ್ತ ಕರೆದೊಯ್ಯುತ್ತದೆ — ನಿಮ್ಮೊಳಗಿನ ಆತ್ಮದ ಜೊತೆ, ಇತರರ ಜೊತೆ, ಮತ್ತು ದೈವದೊಂದಿಗೆ ಹೊಸದಾಗಿ ಸಂಪರ್ಕ ಸಾಧಿಸುವ ಬಾಗಿಲನ್ನು ತೆರೆಯುತ್ತದೆ. ಯೋಗಾನಂದಜಿ “ಎಲ್ಲಾ ಸ್ನೇಹಿತರ ಹಿಂದೆ ಅಡಗಿರುವ ಏಕೈಕ ಸ್ನೇಹಿತ” ಎಂದು ಉಲ್ಲೇಖಿಸುವ ಆ ದೈವಿಕ ಸಾನ್ನಿಧ್ಯವೇ ಈ ಸಂಬಂಧದ ಮೂಲಪ್ರೇರಣೆ.
ಪುಸ್ತಕದಿಂದ ಆಯ್ದ ವಿಷಯಗಳು
ಸಮಸ್ತ ಮಾನವಕುಲದೊಂದಿಗೆ ಇರುವ ನಿಮ್ಮ ನಂಟನ್ನು ಮನಗಾಣಿರಿ
ಪರಸ್ಪರ ಸೇವೆ — ನಿಜವಾದ ಸ್ನೇಹದ ಮುಖ್ಯ ಲಕ್ಷಣ
ನಿಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಸತ್ಯವಾಗಿರಿ
ಪುಸ್ತಕದಿಂದ ಸ್ಫೂರ್ತಿ
“ಸ್ನೇಹಿತರ ನಡುವಿನ ಸಂಬಂಧವು ಮಾನವ ಪ್ರೀತಿಗಳಲ್ಲೇ ಅತ್ಯಂತ ಶ್ರೇಷ್ಠವಾದುದು….ಪ್ರೀತಿಪಾತ್ರರ ಪರಿಪೂರ್ಣತೆಯನ್ನು ಹಾರೈಸುವುದು, ಅವರ ಬಗ್ಗೆ ಯೋಚಿಸುವುದರಲ್ಲೇ ಶುದ್ಧ ಆನಂದವನ್ನು ಅನುಭವಿಸುವುದು — ಇದೇ ದೈವಿಕ ಪ್ರೇಮ; ಮತ್ತು ಇದೇ ಸ್ನೇಹದ ಪ್ರೀತಿ.”
“ಸ್ನೇಹದಿಂದ ಶುದ್ಧಗೊಂಡ ಹೃದಯವು ಏಕತೆಯತ್ತ ಕರೆದೊಯ್ಯುವ ತೆರೆದ ಬಾಗಿಲಾಗಿದೆ. ಅದರ ಮೂಲಕ ನೀವು ಇತರ ಆತ್ಮಗಳನ್ನು — ನಿಮ್ಮನ್ನು ಪ್ರೀತಿಸುವವರನ್ನೂ, ಪ್ರೀತಿಸದವರನ್ನೂ — ಸಹೋದರತ್ವದ ದೇವಾಲಯಕ್ಕೆ ಆಹ್ವಾನಿಸಬೇಕು.”
“ಪ್ರೀತಿಯನ್ನು ಹುಡುಕುವವರು ಅನೇಕರಾದರೂ, ಪ್ರೀತಿ ಎಂದರೇನು, ಅದನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ಅರಿತವರು ತುಂಬಾ ವಿರಳ. ಪ್ರೀತಿಯು ಅನಂತನ ಹೃದಯದಿಂದ ಹೊಮ್ಮಿ, ಮಾನವ ಆತ್ಮಗಳಲ್ಲಿಗೂ ಎಲ್ಲ ಸತ್ವಗಳಲ್ಲಿಗೂ ಹರಿಯುವ ಆನಂದದ ಅದೃಶ್ಯ ಜಲಾಶಯವಾಗಿದೆ. ಇತರರ ನಿಜವಾದ ಸಂತೋಷದಲ್ಲಿ ನಾವು ಅನುಭವಿಸುವ ಆನಂದವೇ ಪ್ರೀತಿ.”
“ನೀವು ನಿಮ್ಮೊಳಗೂ ಇತರರೊಡಗೂ ನಿಜನಿಷ್ಠರಾಗಿರಿ; ಆಗ ನೀವು ಭಗವಂತನ ಸ್ನೇಹವನ್ನು ಗಳಿಸುತ್ತೀರಿ. ನಿಮ್ಮ ಪ್ರೀತಿ ಇತರರ ಹೃದಯಗಳಿಗೆ ತಲುಪಿದ ಕ್ಷಣದಿಂದ ಅದು ವಿಸ್ತರಿಸತೊಡಗಿ — ಎಲ್ಲಾ ಹೃದಯಗಳಲ್ಲಿ ಹರಿಯುವ ಏಕೈಕ ಬ್ರಹ್ಮಾಂಡ ಪ್ರೀತಿಯಾಗಿ ಪರಿವರ್ತಿತವಾಗುತ್ತದೆ.”
“ಎರಡು ಆತ್ಮಗಳ ನಡುವೆ ನಿಜವಾದ ಸ್ನೇಹವಿದ್ದು, ಅವರು ಒಟ್ಟಿಗೆ ಆಧ್ಯಾತ್ಮಿಕ ಪ್ರೀತಿ ಮತ್ತು ದೇವರ ಪ್ರೀತಿಯನ್ನು ಹುಡುಕುತ್ತಿರುವಾಗ, ಪರಸ್ಪರ ಸೇವೆ ಮಾಡುವುದೇ ಅವರ ಏಕೈಕ ಆಶಯವಾಗಿರುವಾಗ — ಅಂತಹ ಸ್ನೇಹದಿಂದ ಆತ್ಮದ ಜ್ವಾಲೆ ಪ್ರಜ್ವಲಿಸುತ್ತದೆ.”
ಹೃದಯ ಸ್ಪರ್ಶಿಸುವ ಓದು
“ದ ಸ್ಪಿರಿಟ್ಯುಯಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್” ಎಲ್ಲರೊಂದಿಗೆ ಆರೋಗ್ಯಕರ ಹಾಗೂ ಆನಂದಕರ ಬಾಂಧವ್ಯಗಳನ್ನು ಬೆಳೆಸುವ ಸ್ಪಷ್ಟ ಮತ್ತು ಪ್ರಾಯೋಗಿಕ ವಿಧಾನವನ್ನು ಪರಿಚಯಿಸುತ್ತದೆ. ಸ್ಫೂರ್ತಿ, ಆಳವಾದ ಸಂಪರ್ಕ ಅಥವಾ ಅರ್ಥಪೂರ್ಣ ಉಡುಗೊರೆಯನ್ನು ಹುಡುಕುತ್ತಿರುವ ಓದುಗರಿಗೆ ಇದು ಅತ್ಯುತ್ತಮ ಕೃತಿ. ಈ ಕಾಲಾತೀತ ಮಾರ್ಗದರ್ಶಿ, ಮನೋಲ್ಲಾಸಕಾರಿ ಚಿಂತನೆಗಳನ್ನು ನೀಡುವುದರ ಜೊತೆಗೆ ನಮ್ಮ ಸ್ನೇಹದ ಅರಿವನ್ನು ವಿಸ್ತರಿಸಿ — ಪ್ರತಿ ಅನುಭವದಲ್ಲಿಯೂ ನಮ್ಮೊಂದಿಗಿರುವ “ಏಕೈಕ ಸ್ನೇಹಿತ”ನಾದ ಭಗವಂತನ ದೈವಿಕ ಸಾನ್ನಿಧ್ಯವನ್ನು ಮನಗಾಣಿಸುತ್ತದೆ.



















