“ಜಗತ್ತಿನೊಳಗೆ ಹೆಚ್ಚು ದಿವ್ಯ ಪ್ರಕಾಶವನ್ನು ತರುವುದರ” ಬಗ್ಗೆ ಪರಮಹಂಸ ಯೋಗಾನಂದರು

21 ಡಿಸೆಂಬರ್‌, 2023

ಒಂದು ಪರಿಚಯ:

ವರ್ಷದ ಈ ಸಮಯದಲ್ಲಿ ವಿವಿಧ ಧರ್ಮಗಳು ಹಾಗೂ ಸಂಸ್ಕೃತಿಗಳಿಗೆ ಸೇರಿದ ಬಹಳಷ್ಟು ಜನರು ಏಕಾಗ್ರತೆ ಮತ್ತು ಶಾಂತಿಯಿಂದ ಈ ಜಗತ್ತಿನ ಅವಿಭಾಜ್ಯ ಅಂಗವಾದ ದಿವ್ಯ ಪ್ರಕಾಶವನ್ನು ಎದ್ದು ಕಾಣುವಂತೆ ಮಾಡುವ ಮತ್ತು ಆ ಪ್ರಕಾಶದ ಶಕ್ತಿಯು ನಮ್ಮನ್ನು ಉದ್ಧರಿಸಿ ಪೋಷಿಸುವಂಥ ಹಬ್ಬಹರಿದಿನಗಳು ಮತ್ತು ನೆನಪುಗಳಲ್ಲಿ ತೊಡಗಿಕೊಂಡಿರುತ್ತಾರೆ.

ಈ ಭೂಮಿಯ ಮೇಲೆ, ಆ ಶಕ್ತಿಶಾಲಿ ಅಸ್ತಿತ್ವವು ಬೇರೆಲ್ಲದಕ್ಕಿಂತಲೂ ಹೆಚ್ಚಾಗಿ ಕೃಷ್ಣ ಮತ್ತು ಕ್ರಿಸ್ತನಂತಹ ಮಹಾನ್‌ ಆತ್ಮಗಳ ಅವತಾರಗಳಲ್ಲಿ ಅಭಿವ್ಯಕ್ತಿಯಾಗಿದೆ, ಅವರು ನಮ್ಮ ಬಳಿಗೆ ದಿವ್ಯ ಪ್ರಕಾಶ ಮತ್ತು ಗಾಢವಾದ ಸ್ಫೂರ್ತಿಯ ಮೂರ್ತರೂಪವಾಗಿ ಬರುತ್ತಾರೆ – ಮತ್ತು ಈ ಯುಗದಲ್ಲಿ ಅವರು ಸ್ವತಃ ಸಿದ್ಧಿಸಿಕೊಂಡ ಜ್ಞಾನೋದಯವನ್ನು ತಲುಪುವ ಮಾರ್ಗಗಳನ್ನು ನಮಗೆ ತಂದಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಮಹಾನ್‌ ಪುರುಷರು, ನಾವು ಕೂಡ ಅವರ ಹಾಗೆಯೇ ಆಗಲೇ ಬೇಕೆಂದು ನಮ್ಮನ್ನು ನೆನಪಿಸಲು ಬರುತ್ತಾರೆ – ನಾವು ನಮಗಾಗಿ ಮಹತ್ತರ ಸಂತೋಷವನ್ನು ಕಂಡುಕೊಳ್ಳಲು ಮತ್ತು ಜಗತ್ತು ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು!

ಭಗವಂತನ ಮಕ್ಕಳಾಗಿ ನಾವು ಕೂಡ “ಜಗತ್ತಿನ ಸುತ್ತ ದಿವ್ಯ ಪ್ರೇಮ ಮತ್ತು ಭ್ರಾತೃತ್ವವನ್ನು ಪಸರಿಸುತ್ತಾ ಬೆಳಕಿನ ಹರಿಕಾರರಾಗಲು” ಪ್ರಯತ್ನಿಸಬೇಕು ಎಂದು ಪರಮಹಂಸಜಿ ಹೇಳುತ್ತಿದ್ದರು ಎಂದು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಸಂಘಮಾತಾ ಹಾಗೂ ನಾಲ್ಕನೆಯ ಅಧ್ಯಕ್ಷರಾಗಿದ್ದ ಶ್ರೀ ಮೃಣಾಲಿನಿ ಮಾತಾ ಹಂಚಿಕೊಂಡರು. ಬೇರೆಲ್ಲದರ ಹಾಗೇ ಇದಕ್ಕೆ ಸಮಯ ಮತ್ತು ಅಭ್ಯಾಸ ಬೇಕಾಗುತ್ತದೆ.

ಈ ರಜಾದಿನಗಳ ಸಮಯದಲ್ಲಿನ ವಿವಿಧ ಚಟುವಟಿಕೆಗಳ ನಡುವೆ, ಆಂತರ್ಯದೊಳಗೆ ದಿವ್ಯ ಪ್ರಕಾಶದೊಡನೆ ಕೂಡಿಕೊಂಡು, ಜಗತ್ತಿಗೆ ಅವಶ್ಯಕತೆಯಿರುವ “ಬೆಳಕಿನ ಹರಿಕಾರ”ರಲ್ಲೊಬ್ಬರಾಗುವುದರ ನೈಜ ಅರ್ಥವೇನು ಎಂದು ತಿಳಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದಕ್ಕೆ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ.

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

ಹೇಗೆ ಚಲಿಸುವ ಚಿತ್ರಗಳು ಚಿತ್ರಮಂದಿರದ ಪ್ರಕ್ಷೇಪಣಾ ಬೂತಿನಿಂದ ಬರುವ ಬೆಳಕಿನ ಕಿರಣಗಳಿಂದ ನಿರ್ವಹಿಸಲ್ಪಡುತ್ತವೆಯೋ ಹಾಗೆಯೇ ಅನಂತದ ಪ್ರಕ್ಷೇಪಣಾ ಬೂತಿನಿಂದ ಪ್ರವಹಿಸುವ ದಿವ್ಯ ಪ್ರಕಾಶದ ಬ್ರಹ್ಮಾಂಡ ಕಿರಣಗಳಿಂದ ನಾವೆಲ್ಲರೂ ಪೋಷಿಸಲ್ಪಡುತ್ತೇವೆ.

ಅಂಧಕಾರವು ಗುಹೆಯಲ್ಲಿ ಸಾವಿರಾರು ವರ್ಷಗಳಿಂದ ಆಧಿಪತ್ಯ ನಡೆಸಿರಬಹುದು, ಆದರೆ ಬೆಳಕನ್ನು ಒಳಗೆ ತನ್ನಿ, ಅದು ಎಂದೂ ಅಲ್ಲಿರಲಿಲ್ಲವೇನೋ ಎಂಬಂತೆ ಅಂಧಕಾರವು ಕಣ್ಮರೆಯಾಗುತ್ತದೆ….ಗಾಢವಾದ ಧ್ಯಾನದಲ್ಲಿ ನಿಮ್ಮ ಆಧ್ಯಾತ್ಮಿಕ ಚಕ್ಷುವನ್ನು ತೆರೆದು ನಿಮ್ಮ ಪ್ರಜ್ಞೆಯನ್ನು ಅದರ ಸರ್ವಗೋಚರ ದಿವ್ಯ ಪ್ರಕಾಶದಿಂದ ತುಂಬಿ ಅದನ್ನು ನೀವು ಹೊಡೆದೋಡಿಸಬಹುದು.

ಪ್ರತಿ ವರ್ಷ ಕ್ರಿಸ್ಮಸ್‌ ಸಮಯದಲ್ಲಿ ಸ್ವರ್ಗ ಸಾಮ್ರಾಜ್ಯದಿಂದ ಭೂಮಿಯ ಮೇಲೆ ಹೊರಹೊಮ್ಮುವ ಸಾಮಾನ್ಯಕ್ಕಿಂತ ಶಕ್ತಿಯುತವಾದ ಕ್ರಿಸ್ತ-ಪ್ರೇಮ ಮತ್ತು ಆನಂದದ ಸ್ಪಂದನಗಳಿರುತ್ತವೆ. ಯೇಸು ಜನಿಸಿದಾಗ ಭೂಮಿಯ ಮೇಲೆ ಕಂಡುಬಂದ ಅನಂತ ಬೆಳಕಿನಿಂದ ಆಕಾಶವು ತುಂಬಿ ತುಳುಕುತ್ತದೆ. ಭಕ್ತಿ ಮತ್ತು ಗಾಢವಾದ ಧ್ಯಾನದಿಂದ ಶ್ರುತಿಗೂಡಿದಂತಹ ವ್ಯಕ್ತಿಗಳು ಯೇಸು ಕ್ರಿಸ್ತನಲ್ಲಿದ್ದ ಸರ್ವವ್ಯಾಪಿ ಪ್ರಜ್ಞೆಯ ಪರಿವರ್ತಿಸುವ ಸ್ಪಂದನಗಳನ್ನು ಅದ್ಭುತವಾದ ರೀತಿಯಲ್ಲಿ ಸ್ಪಷ್ಟವಾಗಿ ಮನಗಾಣುತ್ತಾರೆ.

ಅಂಧಕಾರವೆಂದರೆ ಬೆಳಕಿನ ಅಭಾವ. ಭ್ರಮೆಯೆಂದರೆ ಅಂಧಕಾರ; ಸತ್ಯವೇ ಬೆಳಕು. ನಿಮ್ಮ ಜ್ಞಾನದ ಕಣ್ಣುಗಳು ಮುಚ್ಚಿವೆ, ಆದ್ದರಿಂದ ನೀವು ಕೇವಲ ಅಂಧಕಾರವನ್ನು ಮಾತ್ರ ನೋಡುತ್ತೀರಿ; ಮತ್ತು ನೀವು ಆ ಭ್ರಮೆಯಲ್ಲಿ ದುಃಖಿಸುತ್ತಿದ್ದೀರಿ. ನಿಮ್ಮ ಸ್ವಪ್ರಜ್ಞೆಯನ್ನು ಬದಲಾಯಿಸಿ; ನಿಮ್ಮ ಕಣ್ಣುಗಳನ್ನು ತೆರೆಯಿರಿ, ಆಗ ನೀವು ಆ ದಿವ್ಯ ಪ್ರಕಾಶದ ಕಾಂತಿಯನ್ನು ನಕ್ಷತ್ರಗಳಲ್ಲಿ ಕಾಣುತ್ತೀರಿ. ಆಕಾಶದ ಪ್ರತಿಯೊಂದು ಅಣುವಿನಲ್ಲೂ ನೀವು ಭಗವಂತನ ನಗುವಿನ ಬೆಳಕಿನ ಮಿನುಗನ್ನು ಕಾಣುತ್ತೀರಿ. ಪ್ರತಿಯೊಂದು ಆಲೋಚನೆಯ ಹಿಂದೆ ಅವನ ಪರಿಜ್ಞಾನದ ಸಾಗರವನ್ನು ನೀವು ಮನಗಾಣುತ್ತೀರಿ.

[ದೃಢೀಕರಿಸಿ:] “ನಿನ್ನ ಸದ್ಗುಣದ ಬೆಳಕಿನೊಡನೆ ನಾನು ಒಂದಾಗಿದ್ದೇನೆ ಎಂದು ನನಗೆ ತಿಳಿದಿದೆ. ದುಃಖದ ಸಾಗರದಲ್ಲಿ ಎಸೆಯಲ್ಪಟ್ಟವರಿಗೆ ನಾನು ಲೈಟ್‌ಹೌಸಿನಂತಾಗಲಿ (ಸಮುದ್ರದ ದಡದಲ್ಲಿ ದಾರಿ ತೋರುವ ಬೆಳಕಿನ ಮನೆ).”

ಭಗವಂತನ ಸ್ವರ್ಗೀಯ ಶಕ್ತಿ ನನ್ನ ಮೂಲಕ ಪ್ರವಹಿಸುತ್ತದೆ: ನನ್ನ ಮಾತು, ಮಿದುಳು, ಜೀವಕೋಶಗಳು ಮತ್ತು ನನ್ನ ಪ್ರಜ್ಞೆಯ ಪ್ರತಿಯೊಂದು ಸಣ್ಣ ಸುರುಳಿಯ ಮೂಲಕ — ಪ್ರತಿಯೊಂದು ಆಲೋಚನೆಯೂ ಅವನು ದಿವ್ಯ ಪ್ರಕಾಶವು ಹೊಮ್ಮುತ್ತಿರುವ ಮಾರ್ಗವಾಗಿದೆ. ನಿಮ್ಮ ಹೃದಯಗಳನ್ನು ತೆರೆಯಿರಿ ಮತ್ತು ಆ ದಿವ್ಯ ಪ್ರಕಾಶವು ನಿಮ್ಮ ಮೂಲಕ ಕೂಡ ಹರಿಯುತ್ತಿದೆ ಎಂಬುದನ್ನು ಮನಗಾಣಿರಿ. ನಾನು ಗ್ರಹಿಸಿದಂತೆಯೇ, ನೀವೂ ಗ್ರಹಿಸುವಂತಾಗಲಿ; ನಾನು ಅವಲೋಕಿಸುವಂತೆಯೇ ನೀವೂ ಅವಲೋಕಿಸುವಂತಾಗಲಿ.

ಎದ್ದೇಳಿ! ನಿಮ್ಮ ಕಣ್ಣುಗಳನ್ನು ತೆರೆಯಿರಿ, ಆಗ ಭಗವಂತನ ವೈಭವವನ್ನು ನೀವು ಅವಲೋಕಿಸುತ್ತೀರಿ — ಎಲ್ಲ ವಸ್ತುಗಳ ಮೇಲೆ ಭಗವಂತನ ಬೆಳಕಿನ ವಿಸ್ತೃತ ನೀಳನೋಟ ಪಸರಿಸುತ್ತಿರುವುದು. ನಾನು ನಿಮಗೆ ದೈವಿಕ ಯಥಾರ್ಥವಾದಿಗಳಾಗಿ ಎಂದು ಹೇಳುತ್ತಿದ್ದೇನೆ, ಆಗ ಎಲ್ಲ ಪ್ರಶ್ನೆಗಳಿಗೂ ಭಗವಂತನಿಂದ ಉತ್ತರವನ್ನು ಕಂಡುಕೊಳ್ಳುತ್ತೀರಿ. ಧ್ಯಾನವೊಂದೇ ಮಾರ್ಗ.

ವೈಎಸ್‌ಎಸ್‌ ವೆಬ್‌ಸೈಟಿನಲ್ಲಿ ನೀವು ಕ್ರಿಸ್ಮಸ್ಸಿನ ಆಳವಾದ ಆಚರಣೆಯ ಬಗ್ಗೆ ಪರಮಹಂಸ ಯೋಗಾನಂದರ ಜ್ಞಾನ ನೀಡುವ ಬಗ್ಗೆ ಇರುವ ಬ್ಲಾಗ್‌ ಪೋಸ್ಟಿನಿಂದ ಹೆಚ್ಚಿನದನ್ನು ಓದಬಹುದು — ಸೃಷ್ಟಿಯ ಪ್ರತಿಯೊಂದು ಕಣದಲ್ಲಿ ಮತ್ತು ನಮ್ಮ ಪ್ರತಿಯೊಬ್ಬರ ಆಂತರ್ಯದಲ್ಲಿರುವ ಭಗವಂತನ ಸರ್ವವ್ಯಾಪಿ ಪ್ರಜ್ಞೆಯ ಅನಂತ ಬೆಳಕಿನೊಂದಿಗೆ ನಮ್ಮನ್ನು ನಾವು ಶ್ರುತಿಗೂಡಿಸಿಕೊಳ್ಳುವುದು.

ಇದನ್ನು ಹಂಚಿಕೊಳ್ಳಿ