ದಿವ್ಯ ಪ್ರೇಮದ ಬಗ್ಗೆ ಪರಮಹಂಸ ಯೋಗಾನಂದರು

27 ಫೆಬ್ರವರಿ, 2024

ಪರಮಹಂಸ ಯೋಗಾನಂದ-ಬಗ್ಗೆ-ದಿವ್ಯ-ಪ್ರೇಮ

ಆ ದಿವ್ಯಪ್ರೇಮದ ಒಂದು ಕಣಮಾತ್ರವನ್ನಾದರೂ ನೀವು ಅನುಭವಿಸಲು ಸಾಧ್ಯವಾದರೆ, ನಿಮ್ಮ ಆನಂದ ಎಷ್ಟು ಮಹತ್ತಾದುದೆಂದರೆ — ಎಷ್ಟು ಪರವಶಗೊಳಿಸುವುದೆಂದರೆ — ನಿಮಗೆ ಅದನ್ನು ತಡೆದುಕೊಳ್ಳಲು ಆಗದಷ್ಟು.

ಧ್ಯಾನದಲ್ಲಿ ಭಗವಂತನೊಂದಿಗೆ ಆಗುವ ಆಧ್ಯಾತ್ಮಿಕ ಸಂಸರ್ಗದಲ್ಲಿ ನೀವು ಅನುಭವಿಸುವ ಪ್ರೇಮವೇ ಅತ್ಯಂತ ಶ್ರೇಷ್ಠವಾದುದು. ಆತ್ಮ ಮತ್ತು ಪರಮಾತ್ಮನ ನಡುವಿನ ಪ್ರೇಮವು, ನೀವೆಲ್ಲರೂ ಅರಸುತ್ತಿರುವ ಪರಿಪೂರ್ಣ ಪ್ರೇಮ. ನೀವು ಧ್ಯಾನ ಮಾಡಿದಾಗ, ನಿಮ್ಮ ಪ್ರೇಮವು ವರ್ಧಿಸುತ್ತದೆ. ಕೋಟ್ಯಂತರ ಪುಳಕಗಳು ನಿಮ್ಮ ಹೃದಯದ ಮೂಲಕ ಹಾದುಹೋಗುತ್ತವೆ….ನೀವು ಆಳವಾಗಿ ಧ್ಯಾನ ಮಾಡಿದಾಗ, ನಿಮ್ಮನ್ನು ಆವರಿಸುವ ಪ್ರೇಮವನ್ನು ಯಾವ ಮಾನವ ನಾಲಿಗೆಯೂ ವರ್ಣಿಸಲಾರದು; ನಿಮಗೆ ಅವನ ದಿವ್ಯ ಪ್ರೇಮದ ಅರಿವಾಗುತ್ತದೆ, ಹಾಗೂ ಆ ಪರಿಶುದ್ಧ ಪ್ರೇಮವನ್ನು ನೀವು ಇತರರಿಗೆ ನೀಡಬಲ್ಲವರಾಗುವಿರಿ.

ನನ್ನ ಗುರುಗಳು [ಸ್ವಾಮಿ ಶ್ರೀ ಯುಕ್ತೇಶ್ವರ್]‌ ನನ್ನನ್ನು ಕೇಳಿದ್ದು ನನಗೆ ನೆನಪಿದೆ, ‘ನೀನು ಎಲ್ಲರನ್ನೂ ಸಮನಾಗಿ ಪ್ರೀತಿಸುತ್ತೀಯೇನು?‘ ನಾನು ಹೇಳಿದೆ, ‘ಹೌದು‘. ಆದರೆ ಅವರು ಹೇಳಿದರು, ‘ಇನ್ನೂ ಇಲ್ಲ, ಇನ್ನೂ ಇಲ್ಲ.‘ ನಂತರ ನನ್ನ ರಾಂಚಿಯ ಶಾಲೆಯಲ್ಲಿ ಓದಲು ನನ್ನ ಕಿರಿಯ ಸಹೋದರ ಬಂದ. ಆಗ ನನಗೆ ಅವನು ನನ್ನವನು ಎಂಬ ಪ್ರಜ್ಞೆಯಿತ್ತು. ಆಗ ಗುರುಗಳು ‘ಇನ್ನೂ ಇಲ್ಲ,ʼ ಎಂದು ಏಕೆ ಹೇಳಿದ್ದರು ಎಂಬುದರ ಅರಿವಾಯಿತು. ಕ್ರಮೇಣವಾಗಿ ಆ ಪ್ರಜ್ಞೆಯು ಅಳಿದು ಹೋಯಿತು. ನನ್ನ ಸಹೋದರನು ನಾನು ಪ್ರೀತಿಸುವ ಎಲ್ಲ ಮಾನವಸಂಕುಲದ ಒಂದು ಭಾಗವಷ್ಟೇ ಎಂಬುದನ್ನು ನಾನು ಅರಿತೆ…ಮುಂದೊಂದು ದಿನ, ಮತ್ತೆ ಗುರುಗಳು ನನ್ನನ್ನು ಕೇಳಿದರು, ‘ನೀನು ಇಡೀ ಪ್ರಪಂಚವನ್ನು ಪ್ರೀತಿಸುತ್ತೀಯೇನು?‘. ‘ನಾನು ಪ್ರೀತಿಸುತ್ತೇನೆ‘ ಎಂದಷ್ಟೇ ಹೇಳಿದೆ. ಅವರು ಮುಗಳ್ನಕ್ಕು ಹೇಳಿದರು,‘ನಿನ್ನ ಕೆಲಸವು ಮುಗಿಯಿತು.’

ದೇವರ ಪ್ರೇಮವು, ಅಮೂರ್ತ ಚೇತನದ ಪ್ರೇಮವು ಎಲ್ಲವನ್ನೂ ಆವರಿಸುವಂತಹ ಪ್ರೇಮ. ಅದನ್ನು ನೀವು ಒಂದು ಭಾರಿ ಅನುಭವಿಸಿದಲ್ಲಿ, ಅದು ನಿಮ್ಮನ್ನು ಚಿರಂತನ ಸಾಮ್ರಾಜ್ಯದಲ್ಲಿ ನಡೆಸಿಕೊಂಡು ಹೋಗುತ್ತಲೇ ಇರುತ್ತದೆ. ಆ ಪ್ರೇಮವನ್ನು ನಿಮ್ಮ ಹೃದಯದಿಂದ ಎಂದಿಗೂ ದೂರ ಮಾಡಲಾಗುವುದಿಲ್ಲ. ಅದು ಅಲ್ಲಿಯೇ ಉರಿಯುತ್ತಿರುತ್ತದೆ, ಅದರ ಅಗ್ನಿಯಲ್ಲಿ ಇತರರನ್ನು ನಿಮ್ಮೆಡೆಗೆ ಸೆಳೆಯುವಂತಹ, ಮತ್ತು ನಿಮಗೆ ನಿಜವಾಗಿಯೂ ಅವಶ್ಯವಿರುವ ಅಥವಾ ನೀವು ಬಯಸುವ ಸಕಲವನ್ನೂ ಆಕರ್ಷಿಸುವಂತಹ ಶುದ್ಧ ಚೇತನದ ವಿಶೇಷ ಕಾಂತತ್ವವನ್ನು ಕಾಣುವಿರಿ.

ಇದನ್ನು ನೆನಪಿನಲ್ಲಿಡಿ: ನಾನು ಈ ಭೂಮಿಯನ್ನು ತೊರೆದ ಮೇಲೆ, ಕೇವಲ ಪ್ರೇಮ ಮಾತ್ರ ನನ್ನ ಜಾಗವನ್ನು ತೆಗೆದುಕೊಳ್ಳಬಲ್ಲದು. ಭಗವದ್ಪ್ರೇಮದಿಂದ ರಾತ್ರಿ ಹಗಲೂ ಎಷ್ಟು ಮತ್ತರಾಗಿರಬೇಕೆಂದರೆ, ಭಗವಂತನಲ್ಲದೆ ಬೇರೇನೂ ನಿಮಗೆ ತಿಳಿದಿರಬಾರದು ಮತ್ತು ಆ ಪ್ರೇಮವನ್ನು ಎಲ್ಲರಿಗೂ ನೀಡಿ.

– ಪರಮಹಂಸ ಯೋಗಾನಂದರು ಸ್ವರ್ಗಸ್ಥರಾಗುವ ಸ್ವಲ್ಪ ಮುನ್ನ ಶ್ರೀ ದಯಾ ಮಾತಾ (ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರು)ರವರಿಗೆ

ಈ ವಿಷಯದ ಮೇಲಿನ ಪರಮಹಂಸ ಯೋಗಾನಂದರ ಇನ್ನೂ ಹೆಚ್ಚಿನ ಸ್ಫೂರ್ತಿಯನ್ನು ನಮ್ಮ ವೆಬ್‌ಸೈಟಿನಲ್ಲಿರುವ “ಲವ್‌: ಹ್ಯೂಮನ್‌ ಅಂಡ್‌ ಡಿವೈನ್‌” ಪುಟದ “ಹೌ-ಟು-ಲೀವ್‌-ವಿಸ್ಡಂ” ಭಾಗದಲ್ಲಿ ನೋಡಬಹುದು.

ಇದನ್ನು ಹಂಚಿಕೊಳ್ಳಿ