ನಿಮ್ಮ ಜೀವನವನ್ನು ಮಾರ್ಗದರ್ಶಿಸಲು ಅಂತರ್ಬೋಧೆಯನ್ನು ಅವಲಂಬಿಸುವುದು, ಪರಮಹಂಸ ಯೋಗಾನಂದರಿಂದ

20 ಮಾರ್ಚ್‌, 2023

ನಮ್ಮ ಯೋಗ್ಯ ಗುರಿಗಳನ್ನು ಅರಸಿಕೊಂಡು ಹೋಗುವಾಗ, ನಾವು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಜೀವನದಲ್ಲಿ ಮುಂದುವರಿಯುತ್ತಿರುವಾಗ ಒಳ್ಳೆಯ ಆಯ್ಕೆಗಳನ್ನು ಮಾಡಲು ನಾವು ಅವಲಂಬಿಸಬಹುದಾದ ಅತ್ಯುತ್ತಮ ಸಂಪನ್ಮೂಲ ಯಾವುದು?

ಪ್ರತಿದಿನ ನಾವು ನಮ್ಮ ಗಮನವನ್ನು ಸೆಳೆಯುವ ಸಂವೇದನಾ ತುಮುಲಗಳ ಸೇನೆಯನ್ನೇ ಎದುರಿಸಬೇಕಾಗುತ್ತದೆ — ಅವು ನಮ್ಮ ಮುಂದಿರುವ ಹಾದಿಯನ್ನು ಸ್ಪಷ್ಟವಾಗಿ ನೋಡುವ ನಮ್ಮ ಸಾಮರ್ಥ್ಯವನ್ನು ಸವಾಲಿಗೊಡ್ಡುತ್ತವೆ — ಮತ್ತು “ಮನಶ್ಶಾಂತಿಯನ್ನು ಕಂಡುಕೊಳ್ಳುವುದಿರಲಿ, ಸರಿಯಾದ ಮಾರ್ಗವನ್ನಾದರೂ ನಾನು ತಿಳಿಯುವುದು ಹೇಗೆ?” ಎಂದು ಕೇಳುವುದು ಸಹಜ.

ಪರಮಹಂಸ ಯೋಗಾನಂದರು ನಮ್ಮಲ್ಲಿ ಪ್ರತಿಯೊಬ್ಬರೊಳಗೆ ಸುಪ್ತವಾಗಿರುವ “ಆರನೇ ಇಂದ್ರಿಯ” ಅಂದರೆ ಅಂತರ್ಬೋಧೆಯ ಶಕ್ತಿಯುತ ಬೆಳಕಿದೆ ಎಂದು ಕಲಿಸಿದರು,. “ಅಂತರ್ಬೋಧೆಯು ಆತ್ಮಕ್ಕೆ ಅದರ ಜ್ಞಾನವನ್ನು ನೀಡುತ್ತದೆ (ಆತ್ಮ-ಸಾಕ್ಷಾತ್ಕಾರ)” ಎಂದು ಅವರು ಹೇಳಿದರು. “ಅಂತರ್ಬೋಧೆಯು ಪ್ರಪಂಚದ ಗೊಂದಲಗಳ ನಡುವೆ ಸತ್ಯ ಮತ್ತು ಕರ್ತವ್ಯದ ಸ್ಪಷ್ಟ ತಿಳುವಳಿಕೆಯನ್ನೂ ನೀಡುತ್ತದೆ.”

ನಿಖರವಾದ ಅಂತರ್ಬೋಧೆಯನ್ನು ಅಭಿವೃದ್ಧಿಪಡಿಸಲು ಸಮಯ ತೆಗೆದುಕೊಳ್ಳುತ್ತದೆಯಾದರೂ, ವೈಎಸ್‌ಎಸ್/ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರಾದ ಶ್ರೀ ದಯಾ ಮಾತಾ ಅವರು ನಮಗೆ ಭರವಸೆ ನೀಡಿದರು, “ನೀವು ಧ್ಯಾನವನ್ನು ಅಭ್ಯಾಸ ಮಾಡುತ್ತಾ ಹೋದಂತೆ ಮತ್ತು ಈ ಅಭ್ಯಾಸದಿಂದ ಉಂಟಾಗುವ ಆಂತರಿಕ ಶಾಂತತೆಯ ಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಬದುಕುತ್ತ ಹೋದಂತೆ ಅಂತರ್ಬೋಧಿತ ಶಕ್ತಿಯ ಬೆಳವಣಿಗೆಯಲ್ಲಿ ಸುಧಾರಣೆಯಾಗುವುದನ್ನು ಕಂಡುಕೊಳ್ಳುವಿರಿ.”

ಆದ್ದರಿಂದ, ನೀವು ಹೆಚ್ಚಿನದನ್ನು ತಿಳಿದುಕೊಳ್ಳಲು ಸಿದ್ಧರಿದ್ದರೆ, ಆಳವಾದ, ಶಾಂತಗೊಳಿಸುವ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಜೀವನವನ್ನು ಮಾರ್ಗದರ್ಶಿಸಲು ಮತ್ತು ಮುಖ್ಯವಾಗಿ ನಿಮ್ಮೊಳಗಿನ ಪರಮಾತ್ಮನ ಉಪಸ್ಥಿತಿಯನ್ನು ಅನುಭವಿಸಲು ನೀವು ಆತ್ಮದ-ಒಳನೋಟಗಳನ್ನು ಹೇಗೆ ಅಂತರ್ಬೋಧೆಯಿಂದ ಪಡೆಯಬಹುದು ಎಂಬುದರ ಕುರಿತು ಪರಮಹಂಸಜಿಯವರ ಜ್ಞಾನವನ್ನು ಹೀರಿಕೊಳ್ಳಿ.

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

ನೀವು ಹೆಚ್ಚು ಧ್ಯಾನ ಮಾಡಿ ಮತ್ತು ನಿಮ್ಮ ಮನಸ್ಸನ್ನು ದಿವ್ಯ ಪ್ರಜ್ಞೆಯೊಂದಿಗೆ ಶ್ರುತಿಗೂಡಿಸಿಕೊಂಡಷ್ಟೂ, ನಿಮ್ಮ ಅಂತರ್ಬೋಧೆಯು ಹೆಚ್ಚು ಬಲಿಷ್ಠವಾಗುತ್ತದೆ. ಅಷ್ಟೇ ಅಲ್ಲದೆ, ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಆಂತರಿಕವಾಗಿ ಶಾಂತವಾಗಿರುವ ವ್ಯಕ್ತಿಗಳು ಹೆಚ್ಚು ತೀಕ್ಷ್ಣವಾದ ಅಂತರ್ಬೋಧೆಯ ಶಕ್ತಿಯನ್ನು ಹೊಂದಿರುತ್ತಾರೆ.

ಯಾವಾಗಲೂ ನೆನಪಿಡಿ: ನೀವು ಜೀವನದ ಕರಾಳ ಹಾದಿಯಲ್ಲಿ ಸಾಗುತ್ತಿರುವಾಗ, ಅತ್ಯಂತ ಮಹತ್ವವಾದುದೆಂದರೆ ಅಂತರ್ಬೋಧೆಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಅದು ಧ್ಯಾನದ ಮೂಲಕ ಮಾತ್ರ ಬರಲು ಸಾಧ್ಯ; ಬೇರೆ ದಾರಿಯಿಲ್ಲ. ನಾನು ಅಂತರ್ಬೋಧೆಯನ್ನು ಬಳಸಿದಾಗ ಅದು ನನಗೆ ಯಾವಾಗಲೂ ಸರಿಯಾದ ನಿರ್ಧಾರವನ್ನು ತೋರಿಸುತ್ತದೆ. ಅದು ಎಂದಿಗೂ ವಿಫಲವಾಗುವುದಿಲ್ಲ.

ಈ ಅಂತರ್ಬೋಧೆಯು ನಿಮಗೆ ಅಂತರ್ವಾಣಿಯಾಗಿ ಅಥವಾ ಪಿಸುಗುಟ್ಟಿದಂತೆ ಬರುತ್ತದೆ. ಆ ಆಂತರಿಕ ಮಾರ್ಗದರ್ಶನವನ್ನು ಸುಪ್ತಪ್ರಜ್ಞಾ ಮನಸ್ಸಿನ ಭ್ರಮಾತ್ಮಕ ಕಾಲ್ಪನಿಕ ಧ್ವನಿಗಳಿಂದ ಬೇರೆ ಮಾಡುವಲ್ಲಿ ನೀವು ಜಾಗರೂಕರಾಗಿರಬೇಕು.

ಅಂತರ್ಬೋಧೆಯು, ಒಬ್ಬನ ಮನಸ್ಸು ಶಾಂತವಾಗಿರುವಾಗ ಆ ಕ್ಷಣಗಳಲ್ಲಿ ಆ ವ್ಯಕ್ತಿಗೆ ಸಹಜವಾಗಿ ಪ್ರಕಟವಾಗುವ ಆತ್ಮದ ಮಾರ್ಗದರ್ಶನವಾಗಿದೆ….. ಮನಸ್ಸು ಯಾವುದೇ ವಿರೂಪವಿಲ್ಲದೆ ಆಂತರಿಕ ದನಿಯ ದೋಷಾತೀತ ಸಲಹೆಯನ್ನು ಕೇಳಿಸಿಕೊಳ್ಳಲು ಸಾಧ್ಯವಾಗುವಂತೆ ಅದನ್ನು ಶಾಂತಗೊಳಿಸುವುದೇ ಯೋಗ ವಿಜ್ಞಾನದ ಉದ್ದೇಶವಾಗಿದೆ.

ನಾವು ಭಗವಂತನನ್ನು ಅರಿತಾಗ, ನಮ್ಮ ಸಮಸ್ಯೆಗಳಿಗೆ ಮಾತ್ರವಲ್ಲದೆ, ಪ್ರಪಂಚವನ್ನು ಕಾಡುವ ಸಮಸ್ಯೆಗಳಿಗೂ ನಮಗೆ ಉತ್ತರ ಸಿಗುತ್ತದೆ. ನಾವು ಏಕೆ ಜೀವಿಸಿರುತ್ತೇವೆ ಮತ್ತು ಏಕೆ ಸಾಯುತ್ತೇವೆ? ಪ್ರಸ್ತುತ ಘಟನೆಗಳು ಏಕಾಗಿ, ಮತ್ತು ಹಿಂದಿನವು ಏಕೆ? ಎಲ್ಲ ಜನಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಯಾವುದೇ ಸಂತರು ಭೂಮಿಯ ಮೇಲೆ ಎಂದಾದರೂ ಬರುತ್ತಾರೆಯೇ ಎಂದು ನನಗೆ ಅನುಮಾನವಿದೆ. ಆದರೆ ಧ್ಯಾನ ಮಂದಿರದಲ್ಲಿ ನಮ್ಮ ಹೃದಯವನ್ನು ಕಾಡುವ ಜೀವನದ ಪ್ರತಿಯೊಂದು ಒಗಟನ್ನೂ ಬಿಡಿಸಲಾಗುವುದು. ನಾವು ಜೀವನದ ಒಗಟುಗಳಿಗೆ ಉತ್ತರಗಳನ್ನು ಕಲಿಯುತ್ತೇವೆ ಮತ್ತು ನಾವು ಭಗವಂತನ ಸಂಪರ್ಕಕ್ಕೆ ಬಂದಾಗ ನಮ್ಮ ಎಲ್ಲ ಕಷ್ಟಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ.

[ಯೋಗದಾ ಸತ್ಸಂಗ ಪಾಠಗಳಲ್ಲಿನ ಪ್ರಾರ್ಥನೆ-ದೃಢೀಕರಣದಿಂದ:] “ಪ್ರೀತಿಯ ಭಗವಂತನೇ, ನನ್ನ ಮನಸ್ಸಿನ ಏಕಾಂತದಲ್ಲಿ ನಾನು ನಿನ್ನ ವಾಣಿಯನ್ನು ಕೇಳಲು ಹಂಬಲಿಸುತ್ತೇನೆ. ನಿನ್ನ ಮೌನದ ತುಟಿಗಳನ್ನು ತೆರೆದು ನನ್ನ ಆತ್ಮಕ್ಕೆ ನಿರಂತರ ಮಾರ್ಗದರ್ಶಿ ಆಲೋಚನೆಗಳನ್ನು ಪಿಸುನುಡಿಯಲ್ಲಿ ಹೇಳು.”

ನಮ್ಮ ವೆಬ್‌ಸೈಟ್‌ನಲ್ಲಿ ಅಂತರ್ಬೋಧೆಯನ್ನು ಕುರಿತ ಪರಮಹಂಸ ಯೋಗಾನಂದರ ಸುಲಭಲಭ್ಯ ಮತ್ತು ಉನ್ನತಿಗೇರಿಸುವ “ಬದುಕುವುದು-ಹೇಗೆ” ಮಾರ್ಗದರ್ಶನವನ್ನು ಕಾಣಬಹುದು. ಅವರ ಶಾಶ್ವತ ತಿಳುವಳಿಕೆಯ ಬಾವಿಯಿಂದ ಸೆಳೆಯಲು ಮತ್ತು ಆ ಸ್ಫೂರ್ತಿಯನ್ನು ನಿಮ್ಮ ಧ್ಯಾನದ ಅನುಷ್ಠಾನದೊಂದಿಗೆ ಸಂಯೋಜಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಇದನ್ನು ಹಂಚಿಕೊಳ್ಳಿ